ಇದು ಅಳಿಯ ಅಲ್ಲ ; ಮಗಳ ಗಂಡ ಸ್ಕೀಮ್!

‘ಪ್ಲಾನಿಂಗ್ ಕಮಿಷನ್’ ಎಂಬ ಸರಕಾರಿ ಮುದಿಯಾನೆಯೊಂದು 2014 ರಲ್ಲಿ ಅಸುನೀಗಿ ‘ನೀತಿ ಆಯೋಗ’ ಎಂಬ ಎಳೆಯ ‘ನರಿ’ ಬಂದಮೇಲೆ, ದೇಶದ ಒಳಗೆ ನಡೆದಿರುವ ‘ಪ್ಲಾನಿಂಗ್’ ಭಯಾನಕ ವೇಗ ಪಡೆದಿದೆ. ಅದಕ್ಕೆ ಒಂದು ಕ್ಲಾಸಿಕಲ್ ಉದಾಹರಣೆ ನಾನೀಗ ವಿವರಿಸುತ್ತಿರುವ ಈ ವೈಟ್ ಕಾಲರ್ ಹಗರಣ.

ಒಂದಿಷ್ಟು ಕ್ರೋನಿ ಕ್ಯಾಪಿಟಲಿಸ್ಟ್‌ಗಳು, ಅವರ ತಾಳಕ್ಕೆ ಕುಣಿಯುವ ಸರಕಾರ ಒಟ್ಟು ಸೇರಿ ದೇಶಕ್ಕೆ ಎಲ್ಲಿ ಚಿವುಟುತ್ತಾರೆ, ಎಲ್ಲಿ ಮೈದಡವುತ್ತಾರೆ ಎಂಬುದನ್ನು ಊಹಿಸುವುದಕ್ಕೂ ಕಷ್ಟ ಆಗುವ ವೇಗದಲ್ಲಿ ಈ ಸುಯೋಜಿತ ನಾಟಕ ನಡೆದಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಬಿಂದುಗಳನ್ನು ಜೋಡಿಸಿ ಓದಲು ಗೊತ್ತಿದ್ದರೆ ಸಾಕು – ಈ ನಾಟಕದ ಎಳೆಗಳನ್ನು ತಿಳಿಯಲು.

ಅಂಕ 1: 2030ಕ್ಕೆ ಇಲೆಕ್ಟ್ರಿಕ್ ಕಾರು ಯುಗ!

ಕಳೆದ ವಾರ ನೀತಿ ಆಯೋಗದ ಸಿ.ಇ.ಒ ಅಮಿತಾಬ್ ಕಾಂತ್ ಅವರು ಒಂದು ಹೊಸ ಯೋಚನೆ ಬಿತ್ತಿದ್ದಾರೆ. EV Mission- 2030! ಅಂದರೆ, ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ದೇಶದ ಒಳಗೆ 2030ರ ವೇಳೆಗೆ ಎಲ್ಲ ವಾಹನಗಳೂ ವಿದ್ಯುತ್ ಚಾಲಿತ (Electronic Vehicle) ಆದರೆ, ಅದು Li-Ion ಬ್ಯಾಟರಿಗಳ ತಯಾರಿಕೆಗೆ (ಈ ಬ್ಯಾಟರಿ ಈಗಾಗಲೇ ಮೊಬೈಲ್ ಫೋನ್, ಕ್ಯಾಲ್ ಕ್ಯುಲೇಟರ್ ಸೇರಿದಂತೆ ಎಲ್ಲೆಡೆ ವ್ಯಾಪಕ ಬಳಕೆಯಲ್ಲಿದೆ) 300 ಬಿಲಿಯ ಡಾಲರ್ ಗಳ ದೊಡ್ಡ ಮಾರುಕಟ್ಟೆ ತಯಾರಾಗಲಿದೆ.

ಈ ನಿಟ್ಟಿನಲ್ಲಿ “Feebate” ನೀತಿ ಬರಲಿದೆ. ಈ ಸರ್ಜಿಕಲ್ ಸ್ಟ್ರೈಕ್ ಪ್ರಕಟವಾದಾಗ, ಡೀಸೆಲ್, ಪೆಟ್ರೋಲ್- ಸಿ ಎನ್ ಜಿ ಚಾಲಿತ ವಾಹನಗಳಿಗೆ “Fee” ಮತ್ತು ವಿದ್ಯುತ್ ಚಾಲಿತ ವಾಹನಗಳಿಗೆ “Rebate” ಸಿಗಲಿದೆ! ಜೊತೆಗೆ ಈ ರೀತಿಯ ಉತ್ಪಾದನೆಗಳಲ್ಲಿ ತೊಡಗುವ ಉದ್ಯಮಗಳಿಗೂ ಭಾರೀ ರಿಯಾಯಿತಿಗಳು ದೊರೆಯಲಿವೆ.

ಈ ಇಡಿಯ ನೀತಿ ಟಿಪ್ಪಣಿಗಳನ್ನು ಮೊನ್ನೆ ಬಿಡುಗಡೆ ಮಾಡಿದ ಅಮಿತಾಬ್ ಕಾಂತ್, “ಈ ಬದಲಾವಣೆ ದೊಡ್ಡ ಆರ್ಥಿಕ ಅವಕಾಶವೊಂದನ್ನು ಒದಗಿಸಲಿದೆ. ಹೊಸ ವ್ಯವಹಾರ ಮಾದರಿಗಳು ಮತ್ತು ಅವಕ್ಕೆ ಸೂಕ್ತ ನೀತ್ಯಾತ್ಮಕ ಬೆಂಬಲ ಸಿಕ್ಕಿದರೆ ಭಾರತ ವಿದ್ಯುತ್ ಚಾಲಿತ ವಾಹನಗಳ ಜಾಗತಿಕ ಹಬ್ ಆಗಲಿದ್ದು, ಹೊಸ ಉದ್ಯೋಗ ಸೃಷ್ಟಿ ಆಗಲಿದೆ. ಭಾರತೀಯ ಕೈಗಾರಿಕೆಗಳು ಬಲಗೊಳ್ಳಲಿವೆ ಮತ್ತು ಶುದ್ಧ ಗಾಳಿ ಸಿಗಲಿದೆ.

ಅಂಕ: 2 – ಬ್ಯಾಟರಿ ಮಾರುಕಟ್ಟೆಗೆ ರಿಲಯನ್ಸ್, ಅದಾನಿ, ಮಹೀಂದ್ರ

ರಿಲಯನ್ಸ್ ಇಂಡಸ್ಟ್ರೀಸ್ ಈಗಾಗಲೇ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, Li-Ion ಬ್ಯಾಟರಿಗಳನ್ನು ತಯಾರಿಸುವ ಕಾರ್ಖಾನೆಯನ್ನು ಗುಜರಾತ್ ಅಥವಾ ಮಹಾರಾಷ್ಟ್ರದಲ್ಲಿ ತೆರೆಯಲಿದೆ. ಈ ಕಾರ್ಖಾನೆ 25 ಗಿಗಾವಾಟ್-ಗಂಟೆಗಳ ಸಾಮರ್ಥ್ಯ ಹೊಂದಲಿದೆ ಎಂದು ಬಲ್ಲ ಮೂಲಗಳನ್ನಾಧರಿಸಿ ಫ್ಯಾಕ್ಟರ್ ಡೈಲಿ ವರದಿ ಮಾಡಿದೆ.

ರಿಲಯನ್ಸ್ ಮಾತ್ರವಲ್ಲದೆ ಅದಾನಿ, JSW, ಮಹೀಂದ್ರಾ ಮತ್ತು ಹೀರೋ ಗ್ರೂಪ್ ಗಳು; ಜೊತೆಗೆ, ಸುಜುಕಿ, ತೋಷಿಬಾದಂತಹ ಅಂತಾರಾಷ್ಟ್ರೀಯ ಸಂಸ್ಥೆಗಳೂ ಭಾರತದಲ್ಲಿ ಬ್ಯಾಟರಿ ಉತ್ಪಾದಿಸುವ ರಂಗಕ್ಕಿಳಿಯಲು ಸಜ್ಜಾಗಿವೆ ಎಂಬ ವರದಿಗಳಿವೆ. ಇದು ಜಾಗತಿಕವಾಗಿ100 ಗಿಗಾವಾಟ್ – ಗಂಟೆಗಳಷ್ಟು Li-Ion ಬ್ಯಾಟರಿಗಳನ್ನು ಉತ್ಪಾದನೆ ಮಾಡುತ್ತಿದ್ದು, 2021ರ ವೇಳೆಗೆ ಇದು 273 ಗಿಗಾವಾಟ್ – ಗಂಟೆಗಳಿಗೆ ಏರುವ ನಿರೀಕ್ಷೆ ಮಾರುಕಟ್ಟೆಯಲ್ಲಿದೆ.

ಅಂಕ: 3 – ಕೊಟ್ಟದ್ದೇನು? ತಗೊಂಡದ್ದೇನು?

ಈ ಇಡಿಯ ಪ್ರಹಸನದ ಹಿಂದಿರುವ “ಪರಿಸರ ಕಾಳಜಿಯ” ಮುಖವಾಡ ಬಹಳ ಅಪಾಯಕಾರಿಯಾದ ಪೂರ್ವೋದಾಹರಣೆ ಆಗಲಿದೆ. ಅಮಿತಾಬ್ ಕಾಂತ್ ಅವರು “ಜನರಿಗೆ ಶುದ್ಧ ಗಾಳಿ ಒದಗಿಸಲು” ವಿದ್ಯುತ್ ಚಾಲಿತ ಕಾರುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮಾನ್ಯರೇ, ಈ ವಿದ್ಯುತ್ ಚಾಲಿತ ಕಾರುಗಳ ಬ್ಯಾಟರಿಯನ್ನು ಚಾರ್ಜ್ ಮಾಡಲು ಬಳಸಲಾಗುವ ವಿದ್ಯುತ್ತನ್ನು ತಾವು ಹೇಗೆ ತಯಾರಿಸುತ್ತಿದ್ದೀರಿ? ಕಲ್ಲಿದ್ದಲು ಬಳಸಿ ಅಲ್ಲವೇ?  ಈ ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳು ಪ್ರೆಟ್ರೋಲ್-ಡೀಸೆಲ್ ಗಳಿಗಿಂತಲೂ ಪರಿಸರಕ್ಕೆ  ಹೆಚ್ಚು ಹಾನಿಕರ ಎಂಬುದು ತಮಗೆ ತಿಳಿದಿಲ್ಲವೇ ಅಥವಾ ಜಾಣ ಕುರುಡೆ?

ಮೊತ್ತಮೊದಲನೆಯದಾಗಿ, Li-Ion ಬ್ಯಾಟರಿಗಳು ಕೂಡ ಅದರಲ್ಲಿರುವ ಭಾರಲೋಹದ ಅಂಶಗಳ ಕಾರಣದಿಂದಾಗಿ ಪರಿಸರಕ್ಕೆ ಹಾನಿಕಾರಕ ಮತ್ತು ಈಗಾಗಲೇ ಇಲೆಕ್ಟ್ರಾನಿಕ್ ಕಸವಾಗಿ ಜಗತ್ತನ್ನು ಕಾಡುತ್ತಿವೆ. ಈಗ ಅವನ್ನು ವ್ಯಾಪಕವಾಗಿ ಬಳಸಲು ಭಾರತವನ್ನೇ “ಹಬ್” ಮಾಡಿಕೊಂಡರೆ, ಆ ಕಸವನ್ನು ವಿಲೇವಾರಿ ಮಾಡಲು “ನೀತಿ” ಏನು ತಯಾರಿದೆ?

ಭಾರತದಲ್ಲಿ ಇಂದು 193426.5 ಮೆಗಾವಾಟ್ ವಿದ್ಯುತ್ (ಅಂದರೆ 58.4% ವಿದ್ಯುತ್) ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆ ಆಗುತ್ತಿದೆ. ವಿದ್ಯುತ್ ಕಾರುಗಳಿಗೆಂದು ಇನ್ನಷ್ಟು ಉಷ್ಣವಿದ್ಯುತ್ ಸ್ಥಾವರಗಳನ್ನು ತೆರೆಯಲು ಅದೇ ಕ್ರೋನಿಗಳಿಗೆ ಅವಕಾಶ ಮಾಡಿಕೊಡುವ, ಇನ್ನೊಂದೆಡೆಯಲ್ಲಿ ಆ ವಿದ್ಯುತ್ ಖರ್ಚು ಮಾಡಲು ಇಲೆಕ್ಟ್ರಿಕ್ ಕಾರು ಉತ್ಪಾದನೆ, ಅದಕ್ಕೆ ಬ್ಯಾಟರಿ ಉತ್ಪಾದನೆಗೆ ವ್ಯವಸ್ಥೆ ಮಾಡಿಕೊಡುವ ಈ ಆಟದಲ್ಲಿ ಅಂತಿಮ ಫಲಾನುಭವಿ ಪರಿಸರವೇ ತಾನೆ?

ಇಷ್ಟೊಂದು ಹಠವಾದಿ “ಡೇಬಲಪ್ಮೇಂಟ್” ನಿಜಕ್ಕೂ ಅಗತ್ಯವಿದೆಯೇ?

‍ಲೇಖಕರು avadhi

November 28, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Suma

    Sir, even I have been thinking about the same thing. Electricity dependent electronic goods usage must be reduced as much as possible.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: