ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಿನ ಚಂದಿರ

ಅಜಯ್ ನೀನಾಸಂ

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಕತ್ತಲಾವರಿಸಿರುವ ಈ ಘಳಿಗೆ

ಯಾರ ಮೋಹ ಕೆರಳಿಸಬಲ್ಲೆ
ಯಾರ ಪ್ರೇಮ ಅರಳಿಸಬಲ್ಲೆ.

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಮನುಕುಲವೇ ನರಳಿ ಉಸಿರ ಚೆಲ್ಲುವ ಈ ಘಳಿಗೆ

ಬೆಳಗಿಸಬಲ್ಲೆಯೇನು ಸತ್ತವರ ಮನೆಯ ದೀಪವನ್ನು
ತೊಳೆಯಬಲ್ಲೆಯೇನು ಕೊಂದವರ ಕೈಯ ಪಾಪವನ್ನು

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಊರಿಗೂರೇ ಸ್ಮಶಾನವಾದ ಈ ಘಳಿಗೆ

ಅಮ್ಮನಿಲ್ಲದಂತಾದ ಮಕ್ಕಳ ಎತ್ತಾಡಿಸ ಬಲ್ಲೆಯೇನು
ಅಪ್ಪನಿಲ್ಲದೆ ಕುಸಿದ ಮನೆಯ ಎತ್ತಿ ನಿಲ್ಲಿಸಬಲ್ಲೆಯೇನು.
ಬಂಧುಗಳಿಲ್ಲದ ಬಡಪಾಯಿಗಳ ಪಾಲಿಸಬಲ್ಲೆಯೇನು.

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಪ್ರಾಣಪಕ್ಷಿಗಳು ಹಾರಿ ಕಾಂಚಾಣ ಝಣ ಝಣಿಸುವ ಈ ಘಳಿಗೆ

ಪ್ರೇಮ ಪಕ್ಷಿಗಳ ಕಲರವ ಕೇಳಿಸಬಲ್ಲೆಯೇನು
ಅಮ್ಮಾ… ಎಂದರಚುವ ಹಸುಗೂಸುಗಳಿಗೆ
ಎದೆಹಾಲುಣಿಸ ಬಲ್ಲೆಯೇನು.
ಎಲ್ಲ ಕಳೆದುಕೊಂಡವರ ಬಾಳ ಬೆಳಗಿಸಬಲ್ಲೆಯೇನು.

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಮೌನ ಆವರಿಸಿರುವ ಈ ಘಳಿಗೆ

ಮಾತನಾಡಬಲ್ಲೆಯೇನು
ಹಾಡಬಲ್ಲೆಯೇನು
ಕುಣಿಯ ಬಲ್ಲೆಯೇನು

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಮಾನ ಪ್ರಾಣಕ್ಕೆ ಹಂಬಲಿಸುತ್ತಿರುವ ಈ ಘಳಿಗೆ

ಸ್ವಾಭಿಮಾನವ ಉಳಿಸಬಲ್ಲೆಯೇನು
ಅಪಮಾನಗಳ ಅಳಿಸಬಲ್ಲೆಯೇನು
ಹಸಿದ ಹೊಟ್ಟೆಗಳ ತುಂಬಿಸಬಲ್ಲೆಯೇನು

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಹೆಣಗಳ ರಾಶಿ ತೇಲಿಬರುವ ಈ ಘಳಿಗೆ

‍ಲೇಖಕರು Avadhi

8 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading