ಪ್ರತಿಭಾ ನಂದಕುಮಾರ್ ಅಂಕಣ- ಕ್ಷೌರಿಕ ಒಂಟಿ ಕುದ್ರಿ

ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ದಳವಾಯಿ ನಂಜರಾಜ ಮತ್ತು ಆತನ ಸೋದರ ದೇವರಾಜನ ನಡುವೆ ವಿರಸ ಹುಟ್ಟಿ ಅರಮನೆ, ಸೈನ್ಯ ಎಲ್ಲ ದುಃಸ್ಥಿತಿಯಲ್ಲಿತ್ತು. ಸೈನಿಕರಿಗೆ  ಸಂಬಳ ನೀಡದ ಕಾರಣ ಅವರು ಮಂತ್ರಿಯ ಮನೆ ಎದುರು ಧರಣಿ ಹೂಡಿದ್ದರು. ನಂಜರಾಜ ತನ್ನ ಅಳಿಯನಾಗಿದ್ದ ಅರಸರನ್ನು ಅರಮನೆಯೊಳಗೇ ಖೈದು ಮಾಡಿ ಇಟ್ಟಿದ್ದ. ಹೈದರ್ ಸೈನಿಕರೊಂದಿಗೆ ಸಂಧಾನ ಮಾಡಿ, ಅವರಿಗೆ ಕೊಡಬೇಕಾಗಿದ್ದ ಸಂಬಳಕ್ಕಾಗಿ ಅರಮನೆಯಲ್ಲಿದ್ದ ದವಸವನ್ನು ಮಾರಾಟ ಮಾಡಿಸಿ ಅವರ ಲೆಕ್ಕಾ ಚುಕ್ತಾ ಮಾಡಿದ. 

ಈ ನಡುವೆ ಮರಾಠರ ಸೈನ್ಯ ಬೇರೆ ಮುತ್ತಿಗೆ ಹಾಕಿ ಚನ್ನಪಟ್ಟಣವನ್ನು ವಶಪಡಿಸಿಕೊಂಡಿತ್ತು. ವಾಸ್ತವವಾಗಿ ಆ ಪ್ರದೇಶಗಳನ್ನು ನಂಜರಾಜ ಮರಾಠರಿಗೆ ಒತ್ತೆ ಇಟ್ಟಿದ್ದ. ಹೈದರ್ ತನ್ನ ಸೈನಿಕರನ್ನು ಹುರಿದುಂಬಿಸಿ ಮರಾಠರನ್ನು ಅಲ್ಲಿಂದ ಓಡಿಸಿದ. ಮರಾಠರ ಸೇನಾಧಿಕಾರಿ ಗೋಪಾಲ್ ಹರಿ ಇಪ್ಪತ್ತೆರಡು ಲಕ್ಷ ರೂಪಾಯಿಗಳನ್ನು ಸಂದಾಯ ಮಾಡಿದರೆ ಒತ್ತೆ ಇಟ್ಟ ಪ್ರದೇಶಗಳನ್ನು ಬಿಡುವುದಾಗಿ ಹೇಳಿದ. ಹೈದರ್ ಅರ್ಧ ಹಣವನ್ನು ಸುಂಕದ ರೀತಿಯಲ್ಲಿ ಸಂಗ್ರಹಿಸಿ ಮತ್ತರ್ಧಕ್ಕೆ ಸ್ವಂತ ಖಾತರಿ ನೀಡಿ ಒಪ್ಪಿಸಿದ.

ಮರಾಠರ ಸೈನ್ಯ ಹಿಂದಿರುಗಿದ ಮೇಲೆ ಚಿಕ್ಕ ಕೃಷ್ಣರಾಜ ಒಡೆಯರು ಹೈದರನಿಗೆ ಬಹಾದೂರ್ ಎನ್ನುವ ಬಿರುದು ನೋಡಿ ಸನ್ಮಾನಿಸಿದರು.  ಇಲ್ಲಿಂದ ಮುಂದೆ ಹೈದರನ ಪ್ರಾಬಲ್ಯ ಹೆಚ್ಚಾಗುತ್ತಾ ಬಂದು ನಂಜರಾಜ ಪಕ್ಕಕ್ಕೆ ಸರಿಯಲೇ ಬೇಕಾಯಿತು. ಮುಂದೆ ಹೈದರ್ ಆತನನ್ನು ಹೇಗೆ  ದಾಳವಾಗಿ ಬಳಸಿಕೊಂಡ ಎನ್ನುವುದು ಸಖತ್ ರೋಮಾಂಚಕಾರಿ. ಅದನ್ನು ಮುಂದೆ ನೋಡೋಣ .

ಹೈದರ್ ಅಲಿ ಐದಡಿ ಆರಂಗುಲ ಎತ್ತರ. ಸಿಕ್ಕಾಪಟ್ಟೆ ಫಿಟ್. ಕುದುರೆ ಸವಾರಿಯಲ್ಲಾಗಲೀ ನೆಲದ ಮೇಲಾಗಲೀ ಅವನಿಗೆ ದಣಿವು ಎನ್ನುವುದೇ ಇರುತ್ತಿರಲಿಲ್ಲ. ಕಂದು ಬಣ್ಣ. ಒರಟು ಮುಖ ಲಕ್ಷಣ. ಚಿಕ್ಕ ಮೂಗು ತುದಿಯಲ್ಲಿ ಎತ್ತಿಕೊಂಡಿತ್ತು. ಕೆಳತುಟಿ ಸ್ವಲ್ಪ ದಪ್ಪ. ಮುಸಲ್ಮಾನರ ಪದ್ಧತಿಗೆ ತದ್ವಿರುದ್ಧವಾಗಿ ಗಡ್ಡ ಮೀಸೆ ಇರುತ್ತಿರಲಿಲ್ಲ. ಹುಬ್ಬನ್ನು ಕೂಡಾ ತೆಗೆಯುತ್ತಿದ್ದ. ಕೂದಲನ್ನು ಚೌರ ಮಾಡಿ ತೆಗೆಯುತ್ತಿರಲಿಲ್ಲ, ಒಂದೊಂದೇ ಕೂದಲನ್ನು ಕಿತ್ತು ತೆಗೆಯಲಾಗುತ್ತಿತ್ತು! ಬೆಳಿಗ್ಗೆ ಎದ್ದು ಮುಖ ತೊಳೆದು ಕೂತರೆ ಆತನ ಪ್ರಾತಃವಿಧಿ ಪೂರೈಸಲು ಕನಿಷ್ಠ ಎರಡು ಗಂಟೆ ಹಿಡಿಯುತ್ತಿತ್ತು. ಆದರೆ ಯುದ್ಧಭೂಮಿಯಲ್ಲಿದ್ದಾಗ ಮಾತ್ರ ಇದನ್ನು ಕೈ ಬಿಡುತ್ತಿದ್ದ. ಹಾಗಾಗಿ ಯುದ್ಧ ಚಿತ್ರಗಳಲ್ಲಿ ಹೈದರನಿಗೆ ದಾಡಿ ಮೀಸೆ ಇದೆ. 

ಹೈದರನ ನೆಚ್ಚಿನ ಕ್ಷೌರಿಕ ಒಂಟಿ ಕುದ್ರಿ. ಅವನ ಹೆಸರು ಯಾಸಿನ್ ಖಾನ್ ಆದರೆ ಅವನಿಗೆ ಒಂದೇ ಕಣ್ಣು ಇದ್ದುದರಿಂದ ಒಂಟಿ ಕುದ್ರಿ ಎಂದು ಕರೆಯುತ್ತಿದ್ದರು. ಹೈದರ್ ನ ಮುಖದ ಕೂದಲನ್ನು ಕಿತ್ತು ತೆಗೆಯಲು ಬಹಳ ಸಮಯ ಬೇಕಾಗುತ್ತಿದ್ದುದರಿಂದ, ಆ ಸಮಯದಲ್ಲಿ ಈ ಒಂಟಿ ಕುದ್ರಿ ಮತ್ತು ಹೈದರ್ ತಮಾಷೆಯಾಗಿ, ಅಶ್ಲೀಲವಾಗಿ ಮಾತಾಡಿಕೊಂಡು ನಗಾಡುತ್ತಿದ್ದರು. ಒಂಟಿ ಕುದ್ರಿಯ ಕೆಲವು ವಿಚಿತ್ರ ಪ್ರಸಂಗಗಳಿವೆ.

ಹೈದರನ ನಾಲಿಗೆ ಬಹಳ ಅಶ್ಲೀಲ ಎನ್ನುವುದನ್ನು ಆತನನ್ನು ಬಲ್ಲವರು ಮಾಡಿದ ಎಲ್ಲ ದಾಖಲೆಗಳಲ್ಲಿ ಇದೆ. ತುಂಬಾ ಕೆಟ್ಟ ಮಾತುಗಳಲ್ಲಿ ಬೈಯುತ್ತಿದ್ದ. ಅವನ ಶಿಕ್ಷೆಗಿಂತ ಮೊದಲು ಅವನ ಕೆಟ್ಟ ಮಾತಿನ ಬೈಗುಳಕ್ಕೆ ಅಧಿಕಾರಿಗಳು ಹೆದರುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಗೆಳೆಯರ ಜೊತೆ ಹಾಗೆ ಮಾತನಾಡಿ ಅಭ್ಯಾಸವಾಗಿದ್ದರಿಂದ ಸರ್ವಾಧಿಕಾರಿಯಾದ ಮೇಲೂ ಅದೇ ಮುಂದುವರಿಯಿತು. ಅಧಿಕಾರಿಗಳು, ಗೆಳೆಯರು, ಹೆಂಗಸರು, ಕೆಲಸದವರು, ಸಾರ್ವಜನಿಕರು ಎನ್ನುವುದನ್ನು ಗಣಿಸದೇ ತನ್ನದೇ ರೀತಿಯಲ್ಲಿ ಮಾತನಾಡುತ್ತಿದ್ದ.

ಒಂದು ಸಂದರ್ಭದಲ್ಲಿ ಒಬ್ಬ ಪಡೆಯ ಮುಖ್ಯಸ್ಥ ಕೋಪದಲ್ಲಿ ಪಕ್ಕದವರಿಗೆ ಹೇಳುವಂತೆ ಹೈದರನನ್ನೇ ಟೀಕಿಸಿದಾಗ ಅದನ್ನು ‘ಅದನ್ನು ದೊಡ್ಡ ಮನುಷ್ಯರು ಕಡೆಗಣಿಸುವಂತೆ ತನಗೆ ಕೇಳಿಸಲಿಲ್ಲ ಎನ್ನುವಂತೆ ಸುಮ್ಮನಾದ’ ಎಂದು ಒಬ್ಬ ಫ್ರೆಂಚ್ ಅಧಿಕಾರಿ ಬರೆದಿದ್ದಾನೆ. ಹೈದರನ ಬಗ್ಗೆ ದಾಖಲೆಯಾಗಿರುವ ಮತ್ತೊಂದು ವಿಶೇಷ ಅಂಶವೆಂದರೆ ಆತ ಮೊದಲಿನಿಂದಲೂ ಬಡಬಡನೆ ಅನ್ನಿಸಿದ್ದನ್ನು ಹೇಳಿಬಿಡುವ ಸ್ವಭಾವ.

ಒಬ್ಬ ಫೆಂಚ್ ಅಧಿಕಾರಿ ದಾಖಲಿಸಿದಂತೆ ‘ಅಪರಿಚಿತರ ಎದುರು ಗಂಭೀರವಾಗಿ ನಡೆದುಕೊಳ್ಳಲು ಪ್ರಾರಂಭದಲ್ಲಿ ಸ್ವಲ್ಪ ಬಿಗಿಯಾಗಿ ಮಾತನಾಡಿದರೂ ಸ್ವಲ್ಪ ಹೊತ್ತಿನಲ್ಲೇ ಅದನ್ನು ಮರೆತು ಮತ್ತೆ ಜೋರಾಗಿ ಲಘುವಾಗಿ ತನ್ನ ಎಂದಿನ ಶೈಲಿಯಲ್ಲಿ ಮಾತನಾಡಿಬಿಡುತ್ತಿದ್ದ’ (ಇಂಗ್ಲಿಷ್, ಪ್ರೆಂಚ್, ಪೋರ್ಚುಗೀಸ್, ಪರ್ಷಿಯನ್, ಮರಾಠಿ ಎಲ್ಲಾ ಭಾಷೆಗಳಲ್ಲಿ ಆತನಿಗೆ ಹತ್ತಿರದವರು ಬರೆದ ಹೈದರನ ಚರಿತ್ರೆಗಳಲ್ಲಿ ಅನೇಕ ಕಡೆ ‘ತನ್ನ ಗೆಳೆಯರೊಡನೆ ಸೇರಿಕೊಂಡು’ ‘ತನ್ನ ಗೆಳೆಯರ ಸಲಹೆಯಂತೆ’ ‘ಗೆಳೆಯರ ಮಾತಿಗೆ ಕಟ್ಟುಬಿದ್ದು’ ‘ತನ್ನ ಗೆಳೆಯರನ್ನೂ ಬಿಡದಂತೆ ಶಿಕ್ಷಿಸಿ’ ಇತ್ಯಾದಿ ಮಾತುಗಳು ಬರುತ್ತವೆ. ಈ ಥರದ ಸ್ವಭಾವ ವರ್ಣನೆ ಬೇರೆ ರಾಜ/ಸರ್ವಾಧಿಕಾರಿಗಳ ಬಗ್ಗೆ ಬರುವುದಿಲ್ಲ. ಕನ್ನಡದ ದಾಖಲೆಗಳಲ್ಲಿ ಈ ರೀತಿಯ ವಾಕ್ಯಗಳು ಸಿಗುವುದಿಲ್ಲ. ಹಾಗಾಗಿ ಚಿಕ್ಕಂದಿನಿಂದ ಇದ್ದ ಗೆಳೆಯರ ಜೊತೆ ಸಂಪರ್ಕವನ್ನು ಹೈದರ್ ಸರ್ವಾಧಿಕಾರಿ ಆಗುವವರೆಗೆ ಇಟ್ಟುಕೊಂಡಿದ್ದ. ಅಧಿಕಾರದ ಮದ ಅವನ ತಲೆಗೇರಿದ್ದು ಕೊನೆಕೊನೆಯಲ್ಲಿ.)

ಹೈದರ್ ಹತ್ತಿರದ ಸೇವಕರ ಜೊತೆ ಗೆಳೆಯರಂತೆ ಮಾತನಾಡುವ ಸ್ವಭಾವದ ಸದರ ಇದ್ದುದರಿಂದ ಒಂಟಿ ಕುದ್ರಿ ಕೆಲವೊಮ್ಮೆ ಅತಿರೇಕಕ್ಕೂ ಹೋಗುತ್ತಿದ್ದ. ಸಮಯ ನೋಡಿಕೊಂಡು ಆತ ತನಗೂ ಒಂದು ಸೈನಿಕ ಸ್ಥಾನ ಕೊಡಲು ಬೇಡಿಕೊಂಡ. ಅವನಿಗೆ ಒಂದು ಕತ್ತಿ ಮತ್ತು ಭರ್ಜಿಯನ್ನು ಕೊಡಲಾಗಿತ್ತು. 

ಒಂದು ಸಲ ಚಿನಕುರಳಿ ಯುದ್ಧದಲ್ಲಿ ಸೈನ್ಯ ಹೀನಾಯ ಸೋಲು ಕಂಡಿದ್ದರಿಂದ ಹೈದರ್ ಸೈನ್ಯದ ಮುಖ್ಯಸ್ಥರಿಗೆ ಬೈಯುತ್ತಿದ್ದ. ಎಲ್ಲರೂ ತನ್ನ ಎದುರೇ ಹೇಡಿಗಳಂತೆ ಓಡಿದಿರಿ, ಒಬ್ಬನಾದರೂ ತನ್ನ ಖಡ್ಗಕ್ಕೆ ಮರ್ಯಾದೆ ಸಲ್ಲಿಸಲಿಲ್ಲ, ತಮ್ಮ ಪ್ರಾಣ ಉಳಿಸಿಕೊಳ್ಳಲು ತಮ್ಮ ಸೈನಿಕರನ್ನು ಬಲಿ ಕೊಟ್ಟಿರಿ ಎಂದು ಹೀನಾಯ ಮಾಡುತ್ತಿದ್ದ. ಅದಕ್ಕೆ ಈ ಒಂಟಿ ಕುದ್ರಿ ‘ಹೌದು ಬುಲ್ಲೆ ಹಜರತ್, ತಾವು ಹೇಳಿದ್ದು ಸರಿ, ಆದರೆ ಇದೆಲ್ಲಾ ವಿಧಿಯ ಆಟ, ಮನುಷ್ಯರ ಕೈಯಲಿಲ್ಲ, ಆದರೂ ನನ್ನ ಒಂದು ಕಣ್ಣು ಹೋಗಿದ್ದು ಹೇಗೆ? ಈ (ಅಶ್ಲೀಲ ಶಬ್ದ ಬಳಸಿ) … ಮಗ ಈ ಜಗತ್ತಿನ ಸೌಂದರ್ಯ ನೋಡುವ ಸೌಭಾಗ್ಯ ಕಳೆದುಕೊಂಡಿದ್ದು ಹೇಗೆ?’ ಎಂದುಬಿಟ್ಟ. ಹೈದರ್ ಅದನ್ನು ಕೇಳಿ ಮುಗುಳ್ನಕ್ಕು ‘ನಾನು ಹೇಳಿದ್ದು ನಿನಗಲ್ಲ’ ಎಂದ. 

ಈ ಒಂಟಿ ಕುದ್ರಿಗೆ ಒಂದು ಸಲ ಸ್ವಲ್ಪ ಅಹಂಕಾರ ಬಂದು ತಾನೂ ಹೈದರನಂತೆ ಕಾಣಿಸಬೇಕು ಎನ್ನಿಸಿ ತನ್ನ ತಲೆಕೂದಲು ಗಡ್ಡ ಮೀಸೆ ಹುಬ್ಬು ಎಲ್ಲಾ ಬೋಳಿಸಿಕೊಂಡ. ಒಂದು ಸಂಭಾಷಣೆಯಲ್ಲಿ ತಮಾಷೆ ಸ್ವಲ್ಪ ಮಿತಿ ಮೀರಿ ‘ಷಂಡರು ಮಾತ್ರ ಕೂದಲು ತೆಗೆಯುತ್ತಾರೆ’ ಅಂದುಬಿಟ್ಟ. ಹೈದರನಿಗೆ ಕೋಪ ಬಂತು. ಆದರೂ ತಡೆದುಕೊಂಡ.  ಮುಳಬಾಗಲ್ ಯುದ್ಧದಲ್ಲಿ ಹೈದರ್ ಹಿಮ್ಮೆಟ್ಟಬೇಕಾಗಿ ಬಂದಾಗ ಒಂಟಿ ಕುದ್ರಿ ಹೈದರನ ಥರವೇ ವೇಷ ಹಾಕಿಕೊಂಡು ಪಲಾಯನ ಮಾಡುವಾಗ ಶತ್ರುಗಳು ಅವನನ್ನು ಹಿಡಿದರು. ಹೈದರ್ ತಪ್ಪಿಸಿಕೊಂಡ. ಶತ್ರುಗಳ ಕಣ್ಣಿಗೆ ಮಣ್ಣೆರಚಲು ಅದು ಒಂಟಿಕುದ್ರಿ ಸ್ವತಃ ಮಾಡಿದ ಉಪಾಯವೋ ಅಥವಾ ಹೈದರನ ಕುತಂತ್ರವೋ ಗೊತ್ತಿಲ್ಲ.

ಹೈದರನ ಕೋಪ ಮತ್ತು ಅಶ್ಲೀಲ ಮಾತಿನ ಬಳಕೆಯ ಒಂದು ಉದಾಹರಣೆ – ಹೈದರನಿಗೆ ಅತ್ಯಂತ ಪ್ರಿಯವಾದ ಒಂದು ಆನೆ ಇತ್ತು. ಪೂನ್ ಗುಂಜ್ ಅದರ ಹೆಸರು. ಹೈದರ್ ಟಂಕಿಸಿದ ತಾಮ್ರದ ನಾಣ್ಯದ ಮೇಲೆ ಆತನ ಸಹಿ – ತಿರುಗಾ ಮುರುಗಾ ಬರೆದ ಹಕಾರ – ಹಾಗೂ ಚುಕ್ಕಿಗಳು. ಮತ್ತೊಂದು ಬದಿ ಆನೆಯ ಚಿತ್ರವಿತ್ತು. ಇದ್ದಕ್ಕಿದ್ದಂತೆ ಪೂನ್ ಗುಂಜ್ ಆನೆ ಸತ್ತು ಹೋಯಿತು. ಹೈದರನಿಗೆ ಬಹಳ ದುಃಖವಾಗಿ ನಾಣ್ಯದ ಮೇಲೆ ಆನೆಯ ಚಿತ್ರ ಹಾಕಿಸಲು ನಿರ್ಧರಿಸಿದ.

ಒಂದು ದಿನ ಹೈದರಿಗೆ ವಿಪರೀತ ಕೋಪ ಬಂದಿತ್ತು. ಆತ ಹೇಳಿದ್ದ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ಮಾಡಿರಲಿಲ್ಲ. ಅದೇ ಸಮಯಕ್ಕೆ ಟಂಕಸಾಲೆಯ ಅಧಿಕಾರಿ ಬಂದು ಹೊಸಾ ತಾಮ್ರದ ನಾಣ್ಯದ ಮೇಲೆ ಒಂದು ಬದಿ ಆನೆಯ ಚಿತ್ರ ಇನ್ನೊಂದು ಬದಿ ಯಾವ ಚಿತ್ರ ಮಾಡಿಸಬೇಕೆಂದು ಕೇಳಿದ. ಕೋಪದಲ್ಲಿದ್ದ ಹೈದರ್ ಅಶ್ಲೀಲ ಪದ ಹೇಳಿ ‘ಅದನ್ನು ಮಾಡಿಸು’ ಎಂದುಬಿಟ್ಟ. ಗಾಬರಿಯಾದ ಅಧಿಕಾರಿ ಮತ್ತೆ ಕೇಳಲು ಹೋದರೆ ಕಪಾಳಕ್ಕೆ ಬಡಿಯಲು ಹೋದ. ನವಾಬನ ಆದೇಶದಂತೆ ಅಧಿಕಾರಿ ಅಂದು ಐದು ಸಾವಿರ ನಾಣ್ಯಗಳನ್ನು ಅಶ್ಲೀಲ ಚಿತ್ರ ಹಾಕಿ ಟಂಕಿಸಿಬಿಟ್ಟ. ಅದು ಚಲಾವಣೆಗೂ ಬಂದುಬಿಟ್ಟಿತು. ಸ್ವಲ್ಪ ಕಾಲದಲ್ಲಿ ಕೆಲವು ಪ್ರಮುಖ ಪ್ರಜೆಗಳು ಈ ಬಗ್ಗೆ ಒಂದು ಅಹವಾಲು ಕೊಟ್ಟರು. ಹೈದರ್ ನಕ್ಕು ಆ ನಾಣ್ಯಗಳನ್ನು ಹಿಂದಕ್ಕೆ ತರಿಸಿ ಕರಗಿಸಲು ಹೇಳಿದ. ಆನೆಯ ನಾಣ್ಯ ಮಾತ್ರ ಮುಂದುವರಿಯಿತು.)

ಪ್ರಾರಂಭದಲ್ಲಿ ಹೈದರ್ ಅತ್ಯಂತ ನಿಷ್ಠ ಮತ್ತು ವಿನೀತನಾಗಿದ್ದ. ಆತನ ನಡತೆಯೇ ಜನರನ್ನು ಆತನೆಡೆಗೆ ಆಕರ್ಷಿಸುತ್ತಿತ್ತು. ಹೈದರ್ ಸೈನ್ಯದಲ್ಲಿ ಮೇಲುಮೇಲಿನ ಸ್ಥಾನಕ್ಕೆ ಏರಿದಂತೆಲ್ಲಾ ಆತ ತನ್ನ ಮತ್ತು ಇತರ ಸೈನಿಕರ ನಡುವೆ ಭೇದ ಭಾವ ಮಾಡುತ್ತಿರಲಿಲ್ಲ ಎನ್ನುವ ಸಂಗತಿಯೇ ಆತನ ಬಗ್ಗೆ ಅವರ ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತು. ವಾಸ್ತವವಾಗಿ ತನ್ನ ಪಡೆಗೆ ಶತ್ರುಗಳಿಂದ ಲೂಟಿ ಮಾಡಲು ಪ್ರಚೋದಿಸಿ ಅದರಲ್ಲಿ ಅರ್ಧ ಅವರಿಗೆ ಅರ್ಧ ತನಗೆ ಎನ್ನುವ ಒಪ್ಪಂದದಲ್ಲಿ ಹೈದರ್ ಸೈನ್ಯಕ್ಕೆ ಬಲಿಷ್ಠ ಯುವಕರನ್ನು ಸೇರಿಸಿಕೊಂಡಿದ್ದ. ಅವರಿಗೆ ಫ್ರೆಂಚರ ಸೈನ್ಯದಂತೆ ಶಿಸ್ತಿನಿಂದ ತಯಾರು ಮಾಡಿದ್ದ.

ಜೊತೆಗೆ ಸೈನಿಕರ ಸಂಬಳ ಎಂದಿಗೂ ಕಡಿತ ಮಾಡದೇ ಸರಿಯಾಗಿ ಸಂದಾಯ ಮಾಡುತ್ತಿದ್ದ. ಅದೃಷ್ಟ ಖುಲಾಯಿಸಿದಂತೆಲ್ಲ ಮೈಸೂರಿನ ಅರಸರನ್ನು ಮೂಲೆಗುಂಪು ಮಾಡಿ ಇಡೀ ಆಳ್ವಿಕೆಯನ್ನು ತನ್ನ ಕೈಗೆ ತೆಗೆದುಕೊಂಡಾಗ ಕ್ರಮೇಣ ಹೈದರನ ನಡವಳಿಕೆಯಲ್ಲಿ ವ್ಯತ್ಯಾಸ ಕಾಣತೊಡಗಿತು. ಗೆಳೆಯರನ್ನು ಎಂದಿಗೂ ನೋಯಿಸದ, ಜ್ಞಾಪಕ ಶಕ್ತಿಗೆ ಹೆಸರಾದ  ಹೈದರ್ ಬರಬರುತ್ತಾ ಅವರ ಹೆಸರುಗಳನ್ನೇ ಮರೆಯತೊಡಗಿದ. ಹಳೆಯ ಗೆಳೆಯರಿಂದಲೂ ಮರ್ಯಾದೆ ಅಪೇಕ್ಷಿಸಿದ. 

ರಾಜ್ಯ ವಿಸ್ತಾರವಾಗುತ್ತ ಬಂದು ಸೈನ್ಯ ಹೆಚ್ಚಾದಂತೆಲ್ಲಾ ಸೈನಿಕರ ಸಂಬಳ ನೀಡುವಲ್ಲಿ ಏರುಪೇರಾಗತೊಡಗಿತು. ಸಂಬಳ ಅರ್ಧ ಮಾತ್ರ ಸಂದಾಯವಾಗತೊಡಗಿತು. ಅದಕ್ಕೆ ಎದುರಾಡಿದವರಿಗೆ ಮುಲಾಜಿಲ್ಲದೆ ಕೊರಡೆ ಏಟು ಬೀಳತೊಡಗಿತು. ಕೊನೆಕೊನೆಗೆ ಕಠೋರ ಬೈಗುಳಗಳು, ಸಣ್ಣ ತಪ್ಪಿಗೂ ಮರಣದಂಡನೆ ಸಾಮಾನ್ಯವಾಗತೊಡಗಿತು. ಬರಬರುತ್ತಾ ಇದು ಎಷ್ಟರಮಟ್ಟಿಗೆ ವಿಕೋಪಕ್ಕೆ ಹೋಯಿತು ಎಂದರೆ ಒಂದು ಕಾಲದಲ್ಲಿ ಸಲಿಗೆಯಲ್ಲಿ ಮಾತನಾಡಬಹುದಾಗಿದ್ದವರೂ ಪಿಸುದನಿಯಲ್ಲಿ ಕೂಡಾ ಮಾತಾಡಲು ಹೆದರುವಂತಾಯಿತು.  

ಯಾರದಾದರೂ ಮನೆಯಲ್ಲಿ ಮದುವೆಯಿದ್ದರೆ ತನ್ನಿಷ್ಟ ಬಂದವರನ್ನು ಆಹ್ವಾನಿಸಲೂ ಸ್ವಾತಂತ್ರ್ಯವಿರಲಿಲ್ಲ, ನವಾಬನ ಮೂಲಕ ಆತನ ಸೇವಕರ ಮೂಲಕವೇ ಆಹ್ವಾನ ಹೋಗಬೇಕಿತ್ತು. ಆಗಲೂ ಹೈದರ್ ಹರಿಕಾರರಿಗೆ ಅಪ್ಪಣೆ ಕೊಡುತ್ತಿದ್ದ ಅಲ್ಲಿ ಯಾರು ಯಾರು ಬಂದಿದ್ದಾರೆ, ಏನೇನು ಮಾತಾಡುತ್ತಿದ್ದಾರೆ ಎಂದು ತಿಳಿದು ಬಂದು ವರದಿ ಒಪ್ಪಿಸಲು. ನವಾಬರಿಗೆ ವಿಷಯ ತಿಳಿಯದಿರಬೇಕಾದರೆ ತಮ್ಮ ಬಾಯಿ ಮುಚ್ಚಿಸಲು ಕೈ ಬೆಚ್ಚಗೆ ಮಾಡಿ ಎಂದು ಅವರೂ ಸನ್ನಿವೇಶದ ಲಾಭ ಮಾಡಿಕೊಳ್ಳುತ್ತಿದ್ದರು.

ಸೇವೆಯಲ್ಲಿರುವವರು ಅಗತ್ಯಕ್ಕಾಗಿ ಸಂಬಳದಿಂದ ಮುಂಗಡ ಪಡೆದಿದ್ದರೆ ಅದು ತೀರುವವರೆಗೂ ಸಂಬಳದಿಂದ ಕಡಿದುಕೊಳ್ಳಲಾಗುತ್ತಿತ್ತು. ಅದಕ್ಕೆ ಬಡ್ಡಿಯನ್ನೂ ಕಟ್ಟಬೇಕಾಗಿತ್ತು. ಸಾಲ ಪಡೆದ ವ್ಯಕ್ತಿ ಬಡ್ಡಿಯನ್ನು ಕಟ್ಟಿದರೆ ‘ಒಹೋ ಈತನ ಬಳಿ ಹಣವಿದೆ, ಮತ್ಯಾಕೆ ಸಾಲ ತೆಗೆದುಕೊಂಡ? ಈತನ ಸಾಮಗ್ರಿಗಳನ್ನು ಮಟ್ಟ ಹಾಕಿ ಕೊಳ್ಳಿ’ ಎಂದು ಆದೇಶ ಹೊರಡುತ್ತಿತ್ತು. ಅಥವಾ ಹೈದರನೇ  ಕಳಿಸಿದ ಕಳ್ಳರು ಆತನ ಮನೆಯನ್ನು ದರೋಡೆ ಮಾಡುತ್ತಿದ್ದರು.

ಯುದ್ಧಭೂಮಿಯಲ್ಲಿ, ಪ್ರಾರಂಭದಲ್ಲಿ ತನ್ನ ಬುದ್ಧಿವಾದ ಮತ್ತು ಗೆಳೆತನದಿಂದ ಸೈನ್ಯವನ್ನು ಪ್ರಚೋದಿಸುತ್ತಿದ್ದ ಹೈದರ್ ಬರಬರುತ್ತಾ ಕಟ್ಟಪ್ಪಣೆ ಮಾಡಲಾರಂಭಿಸಿದ. ‘ಅಲ್ಲಿ ನೋಡಿ ಶತ್ರು, ಕಾಣಿಸುತ್ತಿರುವನಾ? ಅವನು ನಿಮ್ಮಪ್ಪನಾ… ಅವನನ್ನು ಸಾಯಿಸಿ ಅಥವಾ ನೀವೇ ಸಾಯಿರಿ. ಅವನನ್ನು ಕೊಲ್ಲದೆ ಹಿಂದಿರುಗಿದರೆ ನಾನೇ ನಿಮ್ಮನ್ನು ಇಲ್ಲೇ ಕೊಂದುಹಾಕುತ್ತೇನೆ’ ಎಂದು ಹೇಳಿ ತಾನು ಆಡಿದುದನ್ನು ಮಾಡುತ್ತೇನೆ ಎಂದು ತೋರಿಸಲು, ತಾನೇ ಸೈನ್ಯದ ಹಿಂದೆ ನಿಂತು ಹಿಂದಿರುಗಿದವರನ್ನು ನಿರ್ಧಾಕ್ಷಿಣ್ಯವಾಗಿ ಕೊಂದುಹಾಕಿದ. ಅಂತಹವರನ್ನು ಹೂಳುವ ಶ್ರಮವನ್ನೂ ತೆಗೆದುಕೊಳ್ಳಲಿಲ್ಲ. 

ಒಂದು ಸಲ ಬ್ರಿಟಿಷ್ ಜನರಲ್ ಕೂಟೆ ಹೈದರನಿಗೊಂದು ಸಂದೇಶ ಕಳಿಸಿದ. ಕರಾರಿನ ಪ್ರಕಾರ ಸೈನಿಕರು ಅವನ ಸೇವೆಯಲ್ಲಿ ಪ್ರಾಣ ತೆತ್ತಿದ್ದರು. ಅವರ ನಾಯಕನಾಗಿ ಹೈದರ್ ಅವರ ಹೆಣಗಳನ್ನು ಮಣ್ಣು ಮಾಡಬೇಕು, ತನ್ನ ಕರ್ತವ್ಯ ನಿಭಾಯಿಸಬೇಕು ಎಂದು ಖಡಕ್ಕಾಗಿ ಬರೆದಿದ್ದ. 

ಪತ್ರದ ಚುಚ್ಚು ಮಾತಿನಿಂದ ಕೆರಳಿ  ಹೈದರ್ ತನ್ನ ದಿವಾನ್ ಮೀರ್ ಮುಹಮ್ಮದ್ ಸಾದಿಕ್ ಖಾನ್ ಗೆ ಬರಹೇಳಿ ಹೆಣಗಳನ್ನು ಹೂಳಲು ಆದೇಶ ನೀಡಿದ. ಆದರೆ ಜನರಲ್ ಕೂಟೆಗೆ ಚುಟುಕಾದ ಉತ್ತರ ಬರೆದು ತನಗೆ ಆತನ ಉಪದೇಶ ಬೇಕಾಗಿಲ್ಲ ಎಂದು ಬಾಯಿ ಮುಚ್ಚಿಸಿದ.

* *

ಒಂದು ಸಲ ಶ್ರೀರಂಗಪಟ್ಟಣದಲ್ಲಿ ಶಿಯಾಗಳಿಗೂ ಸುನ್ನಿಗಳಿಗೂ ಜಗಳ ಹತ್ತಿಕೊಂಡಿತು. ಮಾತುಮಾತಿನ ಜಗಳ ಕೈಕೈಗೆ ಮಿಲಾಯಿಸಿ ಕೊನೆಗೆ ಕತ್ತಿ ಹಿರಿಯುವವರೆಗೆ ಹೋಯಿತು. ಬೇಹುಗಾರ ಜಾಸೂಸುಗಳು ಇದನ್ನು ಹೈದರನಿಗೆ ತಿಳಿಸಿದರು. ನವಾಬ ಎರಡೂ ಪಾರ್ಟಿಗಳನ್ನು ತನ್ನ ಸಮ್ಮುಖಕ್ಕೆ ಕರೆಸಿದ.

‘ಇದೇನಿದು ವಾಗ್ವಾದ? ನಾಯಿಗಳ ಥರ ಯಾಕೆ ಕಚ್ಚಾಡುತ್ತಿದ್ದೀರಾ?’ 

ಸುನ್ನಿಗಳು ಹೇಳಿದರು ‘ಝಿಲ್ಲೆ ಹುಜೂರ್, ಈ ವ್ಯಕ್ತಿ ಪ್ರವಾದಿ ಮುಹಮ್ಮದನ ಉತ್ತರಾಧಿಕಾರಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ, ಅವರ ಕುರಿತು ಅಶ್ಲೀಲವಾಗಿ ಮಾತಾಡುವ ಕೆಳಮಟ್ಟಕ್ಕೆ ಹೋದ, ಅದನ್ನು ಕೇಳಿ ನನ್ನ ಎದೆಯೊಳಗೆ ಮುಳ್ಳು ಚುಚ್ಚಿದಂತಾಯಿತು’ 

ಮತ್ತು ಶಿಯಾಗಳನ್ನು ಕೇಳಲಾಯಿತು. ಅದರ ಮುಖ್ಯಸ್ಥ ಹೇಳಿದ ‘ಮೊದಲ ಖಲೀಫ್ ಅಬೂಬಕ್ಕರ್ ಸಿದ್ದಿಕ್  ಮುರ್ತುಜಾ ಅಲಿಗೆ ಹೀಗೆ ಹೀಗೆ ಮಾಡಿದ, ಎರಡನೆಯ ಖಲೀಫ್ ಓಮರ್ ಹೀಗೆ ಹೀಗೆ ಮಾಡಿದ, ಫಾತಿಮಾಳನ್ನು ಕೆಟ್ಟದಾಗಿ ನಡೆಸಿಕೊಂಡ. ಇದನ್ನೆಲ್ಲಾ ತಿಳಿದೂ ಹುಸೇನನ ವಂಶಸ್ಥರು ಆತನ ಬಗ್ಗೆ ಗೌರವದಿಂದ ಹೇಗೆ ಮಾತಾಡಲು ಸಾಧ್ಯ?’ 

ಇಬ್ಬರನ್ನೂ ನೋಯಿಸಲು ಇಷ್ಟಪಡದ ಹೈದರ್ ಶಿಯಾಗಳನ್ನು ಕೇಳಿದ ‘ನೀವು ಬೈಯುತ್ತಿರುವ ಆ ವ್ಯಕ್ತಿಗಳು ಬದುಕಿದ್ದಾರೆಯೇ?’ (ಇವರ ಕಾಲ 6 ನೇ ಶತಮಾನ!) 

ಶಿಯಾ ಉತ್ತರಿಸಿದರು ‘ಇಲ್ಲ’

ಆಗ ನವಾಬ ಕೋಪದಲ್ಲಿ ಕೇಳಿದ ‘ನಿಜವಾದ ಗಂಡಸಾದರೆ ಬದುಕಿರುವವನ ಮುಖಕ್ಕೆ ಹೇಳಬೇಕೇ ಹೊರತು ಅವರ ಬೆನ್ನ ಹಿಂದೆ ಅಲ್ಲ. ಯಾವುದೋ ಕಾಲದಲ್ಲಿ ಇದ್ದು ಸತ್ತವರ ಬಗ್ಗೆ ಈಗ ಕೆಟ್ಟದಾಗಿ ಮಾತನಾಡುವುದು ಅಪರಾಧ. ಹೀಗೆ ಮಾಡುವವರು ಹೀನ ಕುಲದಲ್ಲಿ ಹುಟ್ಟಿದವರು ಎಂದರ್ಥ. ಇನ್ನೊಂದು ಸಲ ಇಂತಹ ವ್ಯರ್ಥ ಜಗಳದಲ್ಲಿ ಸಮಯ ಹಾಳು ಮಾಡಿದರೆ ಒಂಟೆಗೆ ಕಟ್ಟಿ ಎಳೆಸುತ್ತೇನೆ’.

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: