ಆ ಶ್ರೇಯಸ್ಸು ಅರುಣ ಅಸಫ್ ಅಲಿಯವರದ್ದು..

ಮಹಿಳಾ ಚಳವಳಿ ಮತ್ತು ಅರುಣಾ ಅಸಫ್ ಅಲಿ

ಅರುಣಾ ಅಸಫ್ ಅಲಿಯವರನ್ನು ನಾವು ಸಾಮಾನ್ಯವಾಗಿ ಗುರುತಿಸುವುದು ಅವರ ಕ್ರಾಂತಿಕಾರಿಯಾದ ರಾಷ್ಟ್ರೀಯ ಹೋರಾಟಗಳ ಜೊತೆಗೆ. ಆದರೆ ಅಂದಿನ ಬ್ರಿಟಿಷ್ ಮಹಿಳಾಪರ ಚಳವಳಿಗಳಿಗೆ ಬಹುಶಃ ನೇರವಾಗಿ ಪ್ರತಿಕ್ರಿಯಿಸಿದ ಕೆಲವೇ ಭಾರತೀಯ ಮಹಿಳೆಯರಲ್ಲಿ ಅವರೂ ಒಬ್ಬರು ಎನ್ನುವುದು, ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಖ್ಯಾತಿಯ ಪತ್ರಿಕೆಗಳಾದ “Link Patriot, National Herald, Times of India, Socialist India, Roshani, Indian journal of Political science” ಮುಂತದವುಗಳಲ್ಲಿ ಪ್ರಕಟಿಸಿದ ಅವರ ವೈಚಾರಿಕ ಬರಹಗಳಿಂದ ವ್ಯಕ್ತವಾಗುತ್ತದೆ.

ಭಾರತೀಯ ಆಂಗ್ಲ ಬರಹಗಾರ್ತಿಯರ ಮೇಲೆ ಬ್ರಿಟಿಷ್ ಚಳವಳಿಗಳ ಪ್ರಭಾವವಿದ್ದರೂ, ಅದರ ಸೈದ್ಧಾಂತಿಕ ನೆಲೆಯೊಂದು ಪ್ರಾಪ್ತವಾದದ್ದು ಬಹುಶಃ ಅರುಣಾ ಅಸಫ್ ಅಲಿಯವರಿಗೆ ಮಾತ್ರವೆನಿಸುತ್ತದೆ. ತೊರು ದತ್ತ್, ಸರೋಜಿನಿ ನಾಯ್ಡು, ಕೃಪಾಬಾಯಿ ಸತ್ಯನಾಥನ್ ಮುಂತಾದ ಮೊದಲ ಘಟ್ಟದ ಭಾರತೀಯ ಆಂಗ್ಲ ಬರಹಗಳಲ್ಲಿ ಕಾಣದ ತಾತ್ವಿಕ ಒಳನೋಟಗಳು ಆನಂತರ ಬಂದ ಬರಹಗಾರ್ತಿಯರಲ್ಲಿ (ಶಶಿ ದೇಶಪಾಂಡೆ, ಅನಿತಾ ದೇಸಾಯಿ, ಅರುಂಧತಿ ರಾಯ್ ಮುಂತಾದವರು) ಬರುವುದರ ಹಿಂದೆ ಇವರ ವೈಚಾರಿಕ ಬರಹಗಳ ಪ್ರಭಾವವನ್ನು ಗುರುತಿಸಬಹುದಾಗಿದೆ. ಭಾರತೀಯ ಸ್ತ್ರೀವಾದದ ಬೇರುಗಳನ್ನು ಇಲ್ಲಿ ಕಾಣಬಹುದಾಗಿದೆ. ಇವರ ಬರಹಗಳು ಹಾಗೂ ಕ್ರಾಂತಿಕಾರಕ ಚಟುವಟಿಕೆಗಳು ಸ್ವಾತಂತ್ರ್ಯಾನಂತರದ ಭಾರತೀಯ ಚಳವಳಿಗಳನ್ನು ಪ್ರಭಾವಿಸಿರಬಹುದಾದ ಸಾಧ್ಯತೆಗಳಿವೆ.. ಅಂತಹ ಚಳವಳಿಗಳಿಗೆ ಸೈದ್ಧಾಂತಿಕ ನೆಲೆಯನ್ನು ಇವು ಒದಗಿಸಿರಲೂಬಹುದು ಎಂಬ ಪೂರ್ವ ಕಲ್ಪನೆಯನ್ನು ಇಲ್ಲಿ ಮಂಡಿಸಬಹುದಾಗಿದೆ. ಇದನ್ನು ಮೇಲಿನ ಪತ್ರಿಕೆಗಳಲ್ಲಿನ ಅವರ ಬರಹಗಳಲ್ಲಿ ಕಂಡು ಬರುವ ತೀವ್ರವಾದ ಮಹಿಳಾಪರ ಕಾಳಜಿಗಳಲ್ಲಿ ಕಂಡುಕೊಳ್ಳಬಹುದಾಗಿದೆ.

ಅರುಣಾ ಅಸಫ್ ಅಲಿ ಬಂಗಾಳದ ಬ್ರಹ್ಮ ಸಮಾಜಕ್ಕೆ ಸೇರಿದ ಮನೆಯೊಂದರಲ್ಲಿ ೧೯೦೬ನೆಯ ಇಸವಿ ಜುಲೈ ೧೬ರಂದು ಪಂಜಾಬಿನಲ್ಲಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸವು ‘ಸೇಕ್ರೆಡ್ ಹಾರ್ಟ್ ಕಾನ್ವೆಂಟ್’ (ಲಾಹೋರ್) ಹಾಗೂ ಪ್ರಾಟೆಸ್ಟೆಂಟ್ ಶಾಲೆಗಳಲ್ಲಿ ನಡೆಯಿತು. ಅವರ ವಿದ್ಯಾಭ್ಯಾಸದನಂತರ ಕಲ್ಕತ್ತೆಯ ಗೋಖಲೆ ಸ್ಮಾರಕ ಶಾಲೆಯಲ್ಲಿ ಅಧ್ಯಾಪಕಿಯಾದರು. ಆನಂತರ ಅಲಹಾಬಾದಿನಲ್ಲಿ ಅಸಫ್ ಅಲಿಯವರನ್ನು ಸಂಧಿಸಿದುದು ಪ್ರೇಮಕ್ಕೆ ಎಡೆಮಾಡಿಕೊಟ್ಟಿತು.  ಅವರ ನಡುವೆ ೧೯ ವರುಷಗಳ ಅಂತರವಿದ್ದರೂ, ತಾಯಿ ತಂದೆಯರ ವಿರೋಧದ ನಡುವೆಯೂ ಅವರಿಬ್ಬರು ವಿವಾಹವಾದರು (೧೯೨೮). ಅಲಿಯವರನ್ನು ಮದುವೆಯಾದನಂತರ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ಪತಿಯ ಜೊತೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು.

೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಾರ್ವಜನಿಕವಾಗಿ ಅವರು ನೀಡಿದ ಕ್ರಾಂತಿಕಾರಿಯಾದ ಭಾಷಣದಿಂದಾಗಿ ಅವರು ಲಾಹೋರಿನ ಜೈಲನ್ನು ಸೇರಬೇಕಾಯಿತು. ಇದರೊಂದಿಗೆ ಅವರ ರಾಷ್ಟ್ರೀಯ ಸ್ವಾತಂತ್ರ್ಯದ  ಚಟುವಟಿಕೆಗಳು ಪ್ರಾರಂಭವಾದವು.  ಆನಂತರ ಅವರು ತೀವ್ರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡರು. ಉಪ್ಪಿನ ಸತ್ಯಾಗ್ರಹ ಹಾಗೂ ಆಗಸ್ಟ್ ಕ್ರಾಂತಿಗಳಲ್ಲಿ ಪ್ರಮುಖಪಾತ್ರವನ್ನು ವಹಿಸಿದರು. ಇದರ ಪರಿಣಾಮವಾಗಿ ಸೆರೆಮನೆವಾಸವನ್ನು ಅನುಭವಿಸಬೇಕಾಯಿತು.  ೪೨ ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದನಂತರ ಭೂಗತರಾದರು. ಅಲ್ಲಿ ಅವರು ರೋಗಕ್ಕೆ ತುತ್ತಾಗಿ, ಕೃಶವಾಗಿ ಕಡ್ಡಿಯಂತಾದಾಗ “ಭೂಗತ ಪ್ರಪಂಚದಿಂದ ಹೊರಬಂದು ತಮ್ಮನ್ನು ತಾವು ಪೋಲೀಸರಿಗೆ ಒಪ್ಪಿಸಿಕೊಂಡು, ತಮ್ಮ ಸೆರೆಗಾಗಿ ಘೋಷಿಸಲಾಗಿದ್ದ ೫,೦೦೦ ರೂಗಳನ್ನು ಪಡೆದುಕೊಂದು ಅದನ್ನು ಹರಿಜನರೋದ್ಧಾರಕ್ಕಾಗಿ ಬಳಸಬೇಕೆಂದು” ಹೇಳಿದ ಗಾಂಧೀಜಿಯವರ ಮಾತಿಗೂ ಮಣಿಯದೇ, ತಮ್ಮ ತಲೆಯ ಮೇಲೆ ತೂಗುತ್ತಿದ್ದ ವಾರೆಂಟ್ ನ್ನು ತೆಗೆದ ಮೇಲೆಯೇ ಸೆರೆಯಿಂದ ಹೊರಬಂದರು.

ಅವರು ಭೂಗತರಾಗಿದ್ದ ಕಾಲದಲ್ಲಿಯೇ ಕಾಂಗ್ರೆಸ್ ಮುಖವಾಣಿಯಾದ “ಇಂಕ್ವಿಲಾಬ್” ಪತ್ರಿಕೆಯನ್ನು ಸಂಪಾದಿಸಿದರು. ಅದರಲ್ಲಿ ಕ್ರಾಂತಿಯಲ್ಲಿ ಧುಮ್ಮಿಕ್ಕುವಂತೆ ಯುವಕರಿಗೆ ಕರೆಕೊಟ್ಟರು. ೧೯೪೭ ರಲ್ಲಿ ಭೂಗತವಾಸದಿಂದ ಹೊರಬಂದ ಅವರನ್ನು “ಭಾರತ ಸ್ವಾತಂತ್ರ್ಯದ ಹಿರಿಯ ಮಹಿಳೆ”, “೪೨ರ ಕ್ರಾಂತಿಯ ನಾಯಕಿ” ಎಂದೂ ಪರಿಗಣಿಸಲಾಗಿದೆ. ೧೯೫೪ ರಲ್ಲಿ ರಾಷ್ಟ್ರೀಯ ಮಹಿಳಾ ವೇದಿಕೆಯನ್ನು ನಿರ್ಮಿಸುವುದರಲ್ಲಿ ಅವರು ಎಡಪಂಥೀಯ ಪಕ್ಷಕ್ಕೆ ನೆರವಾದರು. ೧೯೯೨ರಲ್ಲಿ “ಅಂತರಾಷ್ಟ್ರೀಯ ನೆಹರು” ಪ್ರಶಸ್ತಿಗೆ ಭಾಜನರಾದರು.

‘ಸ್ತ್ರೀಪುರುಷರ ನಡುವೆ ಪ್ರತಿಸ್ಪರ್ಧೆ’ ಎಂಬ ಲೇಖನದಲ್ಲಿ, ಅರುಣಾ ಅವರು ರಾಷ್ಟ್ರೀಯ ಚಳವಳಿಯ ದಿನಗಳಲ್ಲಿ ೩೦ನೇ ದಶಕದಿಂದಾಚೆಗೆ ಎಂತಹ ಮಹತ್ವದ ಪಾತ್ರವನ್ನು ಮಹಿಳೆಯರು ವಹಿಸಿದರು ಎಂಬುದರ ಬಗ್ಗೆ ಅಪೂರ್ವವದ ಮಾಹಿತಿಯನ್ನು ಕೊಡುತ್ತಾರೆ. ಜೈಲುವಾಸಿಗಳಾದ ಅನೇಕ ಯುವತಿಯರು ಅಲ್ಲಿನ ಸಮಯವನ್ನು ಹರಟೆಗಳಲ್ಲಿ ಕಳೆಯದೆ ತಮ್ಮ ಸಹಜೈಲುವಾಸಿಗಳಲ್ಲಿ  ರಾಷ್ಟ್ರೀಯ ಹುಮ್ಮಸ್ಸನ್ನು ಮೂಡಿಸಲು ಹೇಗೆ ದುಡಿದರು ಎನ್ನುವುದನ್ನು ಹೇಳುತ್ತಾರೆ. ಜೈಲು ಅಧಿಕಾರಿಗಳ ದಯೆಯಿಂದ ಜೈಲಿನೊಳಕ್ಕೆ ಕಳ್ಳತನದಿಂದ ಬರುತ್ತಿದ್ದ ಪತ್ರಿಕೆಗಳು ಮತ್ತಿತರ ರಾಷ್ಟ್ರೀಯ ಸಾಹಿತ್ಯಗಳನ್ನು ಓದುವುದರ ಮೂಲಕ ಮಹಿಳೆಯರು ಪರಸ್ಪರರನ್ನು  ಶಿಕ್ಷಿತರನ್ನಾಗಿ ಮಾಡುತ್ತಿದ್ದರು ಎಂಬ ವಿವರಗಳು ಈ ಲೇಖನದಲ್ಲಿ ದೊರೆಯುತ್ತವೆ.

೧೯೪೨ರ ಹೊತ್ತಿಗೆ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಪಾಲುಗೊಂಡ ಮಹಿಳೆಯರ ಸಂಖ್ಯೆಯು ಅಪಾರವಾಗಿ ಬೆಳೆದುದರಿಂದಲೇ ಶಕ್ತಿಯುತವಾದ ಬ್ರಿಟಿಷರನ್ನು ಹೊಡೆದೋಡಿಸುವುದರ ಮೂಲಕ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಮಹಿಳೆಯರು ಪುರುಷರೊಡನೆ ತಮ್ಮ ಸಮಾನತೆಯನ್ನು ಸಾರಲು ಸಾಧ್ಯವಾಯಿತು. ಆದುದರಿಂದ ಭಾರತದಲ್ಲಿ ಮಹಿಳಾಪರ ಚಳವಳಿಯೆಂಬುದು ಪುರುಷರ ಮೇಲಿನ ದ್ವೇಷದಿಂದ, ಅವರಿಬ್ಬರ ನಡುವಿನ ಪೈಪೋಟಿಯಿಂದ ಹುಟ್ಟಿಕೊಂಡಿರದೆ, ಅದರ ಬದಲಾಗಿ ಪುರುಷರ ಸಹಕಾರ ಸೌಹಾರ್ದಗಳಿಂದಲೇ ಅವರ ಪ್ರೋತ್ಸಾಹದಿಂದಲೇ ಜನ್ಮತಾಳಿತೆಂದು ಅವರು ಅಭಿಪ್ರಾಯ ಪಡುತ್ತಾರೆ. ಆದರೆ ಅಂತಹ ಚಳವಳಿಯೊಂದು ಕೇವಲ ಒಂದು ವರ್ಗದ ಮಹಿಳೆಯರನ್ನೇ ಕೇಂದ್ರೀಕರಿಸಿಕೊಂಡಿದ್ದರ ದೌರ್ಬಲ್ಯದ ಬಗ್ಗೆ ಕೂಡ ಅವರಿಗೆ ಅರಿವಿದ್ದಿತು. ಆದುದರಿಂದಲೇ ಅವರು ಮಹಿಳಾಪರ ಚಳವಳಿಗಳು ಕೇವಲ ಬೂರ್ಜ್ವಾಮಹಿಳೆಯರಿಗೆ ಮಾತ್ರ ಸೀಮಿತವಾಗಿರಬಾರದು ಎಂದು Bourgeois Feminism is not enough ಎನ್ನುವ ತಮ್ಮ ಲೇಖನದಲ್ಲಿ ಚರ್ಚಿಸುತ್ತಾರೆ.

‘ಮಹಿಳಾ ಚಳವಳಿಯ ಮೂರು ದೃಶ್ಯಗಳು’ (women’s Movement three scenarios”)

ಅವರ ಈ ಲೇಖನವಂತೂ ಬ್ರಿಟಿಷ್ ನೆಲದಲ್ಲಿನ ಮಹಿಳಾ ಹೋರಾಟದ ಇತಿಹಾಸವನ್ನು ವಿವರವಾಗಿ ತಿಳಿಸುತ್ತದೆ. ಮೇರಿ ಇವಾನ್ಸ್ ಳು ಇತ್ತೀಚೆಗೆ ಸಂಗ್ರಹಿಸಿದ ವಿಕ್ಟೋರಿಯನ್ ಕಾಲದ ಮಹಿಳಾಪರವಾದದ ಸೈದ್ಧಾಂತಿಕ ನೆಲೆಯನ್ನು, ಅದು ರೂಪಿಸಿದ ಅಲ್ಲಿನ ಚಳವಳಿಗಳ ಇತಿಹಾಸವನ್ನು ಆ ಕಾಲದಲ್ಲಿಯೇ ಅರುಣಾ ಅವರು ಗಮನಿಸಿದ್ದರು ಎಂಬುದು ಬಹಳ ಮಹತ್ವದ ಸಂಗತಿಯಾಗುತ್ತದೆ. ಲೇಖನದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಕ್ಕುಗಳ ಪರವಾದ ಹೋರಾಟದಲ್ಲಿ ಪಾಶ್ಚಾತ್ಯ ಮಹಿಳೆಯರಿಗೆ ದೊರಕದ ಪುರುಷರ ಒತ್ತಾಸೆಯು ಭಾರತೀಯ ಮಹಿಳೆಯರಿಗೆ ದೊರಕಿದುದುನ್ನು ಅವರು ಗಮನಿಸುತ್ತಾರೆ.

೧೯೧೮ರಷ್ಟು ಮುಂಚೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಹಿಳೆಯರ ರಾಜಕೀಯ ಸಮಾನ ಹಕ್ಕುಗಳನ್ನು ಅನುಮೋದಿಸಿದ್ದಿತು. ಆದರೆ ಅಂತಹ ಸ್ಥಿತಿಯೊಂದನ್ನು ತಲಪುವುದರ ಹಿಂದೆ ಪಂಡಿತಾ ರಮಾಬಾಯಿ, ಸರೋಜಿನಿ ನಾಯ್ಡು ಮುಂತಾದವರ ಪರಿಶ್ರಮಗಳಿದ್ದವು ಎಂಬುದನ್ನು ಒಪ್ಪಿಕೊಂಡರೂ, ಭಾರತದ ಸಂದರ್ಭವು ಅರುಣಾ ಹೇಳುವಂತೆ, ಪಾಶ್ಚಾತ್ಯರಷ್ಟು ಕಷ್ಟಕರವಾದುದಾಗಿರಲಿಲ್ಲ ಎಂಬುದು ನಿಜ. ಬ್ರಿಟಿಷ್ ಇತಿಹಾಸದಲ್ಲಿ ಕೂಡ ಇಂತಹ ಸ್ವಾತಂತ್ರ್ಯದ ಗಾಳಿಯನ್ನು ಮೊದಲು ಉಸಿರಾಡಿದವರು ಮಧ್ಯಮವರ್ಗದ ಮಹಿಳೆಯರೇ ಎಂಬುದನ್ನು ಗಮನಿಸಿದಾಗ ಭಾರತೀಯ ಮಹಿಳಾಪರ ಹೋರಾಟವು (ಭಾರತೀಯ ಚಳವಳಿಗಳ ಕೊರತೆಗಳನ್ನು  ಗಮನದಲ್ಲಿತ್ತುಕೊಂಡೇ ಹೇಳುವುದಾದರೂ) ಪಾಶ್ಚಾತ್ಯರಷ್ಟ್ಟು ತಬ್ಬಲಿಯಾಗಿರಲಿಲ್ಲ. ಅನೇಕ ಭಿನ್ನಾಭಿಪ್ರಾಯಗಳ ನಡುವೆಯೂ  ಪಾಶ್ಚಾತ್ಯರ ಭೋಗಪ್ರದವಾದ ನೆಲೆಗಿಂತ ವಿರುದ್ಧವಾದ ಸ್ತ್ರೀಶಕ್ತಿಯ ನೆಲೆಯೊಂದು ಇಲ್ಲಿ ಜಾಗೃತವಾಗಿದ್ದಿತು. ಅರುಣಾ ಅಸಫ್ ಅಲಿಯವರು ಇದನ್ನೇ ತಮ್ಮ ಲೇಖನದ ಪ್ರಾರಂಭದಲ್ಲಿ ಸೂಕ್ಷ್ಮವಾಗಿ ಸೂಚಿಸುತ್ತಾರೆ.

ಅವರು ಭಾರತದಿಂದ ಪ್ರಾರಂಭಿಸಿ, ಇಡೀ ಜಗತ್ತಿನ ಮಹಿಳಾಪರ ಹೋರಾಟಗಳ ಇತಿಹಾಸವನ್ನು ಗಮನಿಸುತ್ತಾರೆ. “ಎಲ್ಲ ಮಾನವರಿಗೆ ಸಮಾನ ಹಕ್ಕು ಹಾಗೂ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಭಾವಿಸುತ್ತಲೇ ಹೆಣ್ಣಿನ ಬಗೆಗೆ ಮಾತ್ರ ಅವಳು ಪ್ರಾಕೃತಿಕವಾಗಿ ದುರ್ಬಲಳು, ಕೇವಲ ಸಂತಾನೋತ್ಪತ್ತಿ ಮಾತ್ರ ಅವಳ ಕ್ಷೇತ್ರ………ವೈಚಾರಿಕ ಅರಿವನ್ನು ಹೊಂದದ, ಅಮೂರ್ತದ ಪರಿಕಲ್ಪನೆ ಇಲ್ಲದ ಮಹಿಳೆಯರು ಸ್ವಾತಂತ್ರ್ಯಕ್ಕಾಗಲೀ, ಸಮಾನತೆಗಾಗಲೀ ಅರ್ಹರಲ್ಲ” ಎಂದು ಘೋಷಿಸಿದ ರೂಸೋನ ವಿಚಾರಗಳಿಗೆ ಒಲಂಪ್ ದ ಗೌಜಸ್ (Olympe de Gouges) ಎನ್ನುವ ಫ್ರೆಂಚ್ ವಿಚಾರವಾದಿಯೊಬ್ಬಳು ೧೭೯೧ರಲ್ಲಿ ವ್ಯಕ್ತಪಡಿಸಿದ ಪ್ರತಿಭಟನೆಯ ರೂಪವೇ ಮಹಿಳಾವಾದಕ್ಕೆ ನಾಂದಿಯಾಯಿತು ಎನ್ನುತ್ತಾರೆ. ಇದು ಮುಂದೆ ಉತ್ತಮ ಶಿಕ್ಷಣಕ್ಕಾಗಿ, ಉದ್ಯೋಗ ಹಕ್ಕುಗಳ ಹೋರಾಟಗಳಿಗೆ ಕಾರಣವಾಯಿತೆಂಬುದನ್ನು  ಅವರು ಗಮನಿಸುತ್ತಾರೆ.

ಈ ದಿಸೆಯಲ್ಲಿ ಅವರು ಪಾದ್ರಿಯಾದ ರಿಚರ್ಡ್ ಪ್ರೈಸ್,ರಾಜಕೀಯ ಚಿಂತಕ ವಿಲಿಯಮ್ ಗಾಡ್ವಿನ್, ಲೇಖಕ ಥಾಮಸ್ ಪೇಯ್ನ್ ಮತ್ತು ಕವಿ ವಿಲಿಯಮ್ ಬ್ಲೇಕ್ ಮುಂತಾದ ಚಿಂತಕರ ಸಹವರ್ತಿಯಾದ ವುಲ್ ಸ್ಟೋನ್ ಕ್ರಾಫ್ಟಳು ರೂಸೋನ ವಿಚಾರಗಳನ್ನು ಪ್ರತಿಭಟಿಸಿದ ರೀತಿಯನ್ನು ವಿವರಿಸುತ್ತಾರೆ. ವುಲ್ ಸ್ಟೋನ್ ಕ್ರಾಫ್ಟಳ ವಿಚಾರಗಳು ಬೂರ್ಜ್ವಾಪ್ರಜಾಪ್ರಭುತ್ವದ ನೇತಾರನಾದ, ಹೆಚ್ಚು ಹೆಚ್ಚು ಸುಖವೆಂಬುದು ಹೆಚ್ಚು ಜನರಿಗೆ ದೊರಕಬೇಕೆಂದು ಸಾರಿದ ಇಂಗ್ಲೆಂಡಿನ ಜೆರೆಮಿ ಬೆಂಥ್ಯಾಂ ಎಂಬುವವನ ಮೇಲೆ ಯಾವ ಪರಿಣಾಮವೂ ಬೀರದೆ ಹೋದುದನ್ನು ಅವರು ಗಮನಿಸುತ್ತಾರೆ. ಕಾರಣ, ಈ ಹೆಚ್ಚು ಜನರ ಪೈಕಿ ಅವನು ಮಹಿಳೆಯರನ್ನು ಹೊರತಾಗಿಸಿದ್ದನು. ಮಹಿಳಾಪರ ಕಾಳಜಿಯೊಂದು ಜಾಗೃತವವಾಗಲು ಈ ಎಲ್ಲಾ ವೈರುಧ್ಯಗಳು ಹೇಗೆ ಕಾರಣಾವಾದವು ಎಂಬುದನ್ನು ಅರುಣಾ ಗುರುತಿಸುತ್ತಾರೆ.

ಬೆಂಥ್ಯಾಂನ ಸಮಕಾಲೀನನಾದ ಫ್ರಾನ್ಸಿನ ಪ್ರೌಧಾನ್ (೧೮೦೯-೬೫) ಎಂಬುವವನು ತನ್ನ ವೈಚಾರಿಕತೆಗೆ ಹೆಸರುವಾಸಿಯಾಗಿದ್ದು, ಸ್ತ್ರೀಯ ಬುದ್ಧಿ ಸಾಮರ್ಥ್ಯವು ಪುರುಷರ ಮೂರನೇ ಒಂದು ಭಾಗವೆಂದೂ, ಗೃಹಿಣಿ ಇಲ್ಲವೇ ಸೂಳೆ ಈ ಎರಡೇ ಅವಳ ಪಾತ್ರಗಳೆಂದೂ ವ್ಯಕ್ತಪಡಿಸಿದ್ದನ್ನು ಅರುಣಾ ಅಸಫ್ ಅಲಿ ಭಾರತದ ಮಧ್ಯಯುಗೀನ ಪುರಾಣ ಕಾಲದ ಸ್ತ್ರೀಯರ ಪರಿಕಲ್ಪನೆಗೆ ಹೋಲಿಸುತ್ತಾರೆ. ೧೮೬೪ರಲ್ಲಿ ಸಾಂಕ್ರಾಮಿಕ ಕಾಯಿಲೆ ಕಾಯಿದೆಯು(courageous diseases Act) (ವಿಕ್ಟೋರಿಯನ್ ಯುಗದಲ್ಲಿ ಸಾಂಕ್ರಾಮಿಕ ಲೈಂಗಿಕ ಕಾಯಿಲೆಗಳು ಹೆಚ್ಚುತ್ತಿರುವುದರ ವಿರುದ್ಧವಾಗಿ ಬ್ರಿಟನ್ನಿನಲ್ಲಿ ಸರ್ಕಾರ ಜಾರಿಗೆ ತಂದ ಕಾಯಿದೆ. ಇದರಿಂದಾಗಿ ಅದುವರೆಗೆ ಉಪಪತ್ನಿಯರ ಸ್ಥಾನದಲ್ಲಿದ್ದ ಭಾರತೀಯ ಮಹಿಳೆಯರು ‘ವೇಶ್ಯೆ’ ಪಟ್ಟ ಹೊತ್ತು ಸ್ಥಾನಪಲ್ಲಟ ಹೊಂದುವಂತಾಯ್ತು) ಜಾರಿಯಾದದ್ದೇ, ಚಾರಿತ್ರಿಕವಾದ ಮಹಿಳಾಪರ ಹೋರಾಟಕ್ಕೆ ಹೇಗೆ ಚಾಲನೆಯನ್ನು ನೀಡಿತು ಎಂಬುದನ್ನು ಅವರು ವಿವರಿಸುತ್ತಾರೆ. ಅಲ್ಲದೆ, ಬ್ರಿಟಿಷ್ ಮಹಿಳೆಯರು ಹಮ್ಮಿಕೊಂಡ ವ್ಯಾಪಕವಾದ ಹೋರಾಟಗಳಲ್ಲೇ ಪ್ರಮುಖವಾದುದು ಮಹಿಳಾ ಮತದಾನವಾಗಿದ್ದಿತು ಎಂದೂ ಅಸಫ್ ಅಲಿಯವರು ಅಭಿಪ್ರಾಯಪಡುತ್ತಾರೆ. ಈ ದಿಸೆಯಲ್ಲಿ ಜಾನ್ ಸ್ಟೂವರ್ಟ್ ಮಿಲ್ಲನು ತನ್ನ ಹೆಂಡತಿಯಾದ ಹ್ಯಾರಿಯೇಟ್ ಟೇಲರ್ ಳೊಂದಿಗೆ ತೊಡಗಿಸಿಕೊಂಡ  ಮಹಿಳಾ ಮತದಾನದ ಹೋರಾಟಾದ ಸಂದರ್ಭವನ್ನು ಪ್ರಭಾವಿಸಿದ “The enfranchisement of Women”, “The Subjugation of Women” ಎನ್ನುವ ಅವರಿಬ್ಬರೂ ಕೂಡಿ ಬರೆದ ಲೇಖನಗಳ ಮಹತ್ವವನ್ನು ಬಿಂಬಿಸುತ್ತಾರೆ.

ಇದರ ಜೊತೆಗೆ ಅಟ್ಲಾಂಟಿಕ್ ನ ಇನ್ನೊಂದು ಬದಿಗೆ ನಡೆಯುತ್ತಿದ್ದ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮವನ್ನೂ ಅವರು ಮಹಿಳಾಪರ ಚಳವಳಿಯೊಂದಿಗೆ ಸಮೀಕರಿಸುತ್ತಾರೆ. ಒಂದು ನೆಲೆಯಿಲ್ಲದ ರಾಜಕೀಯ ಗುಲಾಮತನವು, ಎಲ್ಲ ರೀತಿಯ  ಗುಲಾಮತನದ ಅರಿವನ್ನು ಮೂಡಿಸಲು ಹೇಗೆ ಕಾರಣವಾಯಿತು ಎಂಬ ಸತ್ಯದ ಹಿಂದೆ ಅಸಫ್ ಅಲಿಯವರ ಆಲೋಚನೆಗಳು ಕೇಂದ್ರೀಕರಿಸಿರುವುದನ್ನು ಇಲ್ಲಿ ಗಮನಿಸಬಹುದು. ಅಮೇರಿಕಾದ ವಸಾಹತುಗಳ ಮಧ್ಯಮವರ್ಗದ ಪ್ರಜಾಸತ್ತಾತ್ಮಕ ಚಳವಳಿಗಳ ಸಂದರ್ಭದಲ್ಲಿ, ಮಹಿಳೆಯರನ್ನು ಹಾಗೂ ನೀಗ್ರೋಗಳನ್ನು ಗಣನೆಗೆ ತಂದುಕೊಳ್ಳದ ಪಕ್ಷಪಾತ ಧೋರಣೆಯನ್ನು ಅವರು ಬಯಲಿಗೆಳೆಯುತ್ತಾರೆ. ೧೮೪೦ರಲ್ಲಿ ‘ಗುಲಾಮಗಿರಿಯ ವಿರುದ್ಧ’ ನಡೆದ ಜಾಗತಿಕ ಸಮ್ಮೇಳನದಲ್ಲಿ ಅಮೇರಿಕೆಯ ಕೆಲವು ಪ್ರಮುಖ ಮಹಿಳಾವಾದಿಗಳು ಪ್ರತಿನಿಧಿಗಳಾಗಿ ಹೋಗಲು ಇದು ಕಾರಣವಾದುದನ್ನು ಇಲ್ಲಿ ದಾಖಲಿಸುತ್ತಾರೆ. ಇಂತಹ ಅನೇಕ ಹೋರಾಟಗಳಿಂದಲೂ, ಅಮೇರಿಕೆಯಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಪಡೆದುಕೊಳ್ಳಲು ೧೯೨೦ ನೇ ಇಸವಿಗೆ ಮುಂಚೆ ಸಾಧ್ಯವಾಗಲಿಲ್ಲ ಎನ್ನುವುದರ ಹಿಂದಿನ ವಿಷಾದವು ಇಂತಹ ಚಳವಳಿಗಳ ಸಹನೆ ಹಾಗೂ ಶಕ್ತಿಯ ಮೆಲೆ ಬೆಳಕು ಚೆಲ್ಲುತ್ತದೆ.

ರಾಷ್ಟ್ರೀಯ ಚಳವಳಿಯ ನೆಲೆಯಲ್ಲಿ ಉಗ್ರ ಹೋರಾಟಗಾರ್ತಿಯೆಂದು ಬಹುತೇಕ ಗುರುತಿಸಲ್ಪಟ್ಟಿರುವ ಅರುಣಾ ಅಸಫ್ ಅಲಿಯವರ ವ್ಯಕ್ತಿತ್ವಕ್ಕೆ ಹೊಸ ಆಯಾಮವೊಂದನ್ನು  ಮೇಲಿನವರ ಕಾರ್ಯ ಚಟುವಟಿಕೆಗಳು ಒದಗಿಸುತ್ತವೆ. ಅವರನ್ನು ಕುರಿತ ಈಚಿನ ಬರಹಗಳು ಅವರ ಮಹಿಳಾಪರ ಚಿಂತನೆಯನ್ನು ಕ್ರೋಢೀಕರಿಸುತ್ತದೆ. ಪ್ರಧಾನವಾಗಿ ಇಂಗ್ಲೆಂಡ್ ಮತ್ತು ಅಮೇರಿಕೆಗಳಲ್ಲಿ ಬೆಳೆದು ಬಂದ ಮಹಿಳಾ ಹೋರಾಟದ ಸಾಧನೆ ಮತ್ತು ಮಿತಿಗಳನ್ನು ಗಮನಿಸಿದ್ದ ಅರುಣಾ, ಅದನ್ನು ಭಾರತೀಯ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬಹುದೆಂಬ  ಚಿಂತನೆಗೆ ಚಾಲನೆಯನ್ನು ಒದಗಿಸಿಕೊಟ್ಟರು. ಸ್ವಾತಂತ್ರ್ಯ ಚಳವಳಿಯು, ಮಹಿಳೆಯರು ತಮ್ಮ ಕೌಟುಂಬಿಕ ಪರಿಸರದಾಚೆಗೆ ಹೊರಬರಲು ಅವಕಾಶವನ್ನು ಒದಗಿಸಿದುದಲ್ಲದೇ ಪರಸ್ಪರ ಶಿಕ್ಷಿತರಾಗಲೂ ಕೂಡ ಒಂದು ಭೂಮಿಕೆಯನ್ನು ಸಿದ್ಧಪಡಿಸಿದುದನ್ನು ಅವರು ದಾಖಲಿಸಿದ್ದಾರೆ. ಅದು ಕ್ರಮೇಣ ಮುಂದಿನ ಮಹಿಳಾಪರ ಚಿಂತನೆಗೆ ಪ್ರೇರಣೆಯನ್ನು ಒದಗಿಸಿ, ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳಿಗೆ ಹೇಗೆ ನಾಂದಿಯಾಯಿತು ಎಂಬುದು ಇದರಿಂದ ತಿಳಿಯುತ್ತದೆ. ಆದುದರಿಂದ ಭಾರತದ ಸಂದರ್ಭದಲ್ಲಿ ಸೈದ್ಧಾಂತಿಕ ಹಾಗೂ ಸಂಘಟನೆಗಳ ಎರಡೂ ನೆಲೆಗಳಲ್ಲಿ ಪ್ರಥಮ ಉಗ್ರ ಮಹಿಳಾಪರ ಹೋರಾಟಗಾರ್ತಿ ಎಂಬ ಶ್ರೇಯಸ್ಸು ಅರುಣ ಅಸಫ್ ಅಲಿಯವರಿಗೆ ಸಲ್ಲುತ್ತದೆ.

ಆಧಾರ :

(Great women of Modern India & Their Contributions: Verinder Grover)

‍ಲೇಖಕರು avadhi

April 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: