ಉಮಾ ಮುಕುಂದ್ ಬರೆದ ದುರಿತ ಕಾಲದ ಕವಿತೆಗಳು

ಉಮಾ ಮುಕುಂದ್

ರೇಖೆ: ಸತೀಶ್ ಆಚಾರ್ಯ

ಕನಸುಗಳ ಪಟ್ಟಣ ಕಟ್ಟಿ ನಡೆನಡೆದು ಊರು ಸೇರಿ
ಅಲ್ಲಿಯೂ ಸಲ್ಲದೆ ಇಬ್ಬಂದಿಯಾದವರ ನೆನೆದು
ಹಣತೆ ಹಚ್ಚುತ್ತೇನೆ

ಬೆಳೆದ ಬೆಳೆಗೆ ಬೆಲೆಯಿಲ್ಲದೆ
ಬಿಸುಟು ನಡೆದ ಜನರ ನೆನೆದು
ಹಣತೆ ಹಚ್ಚುತ್ತೇನೆ

ಕರೆದ ಕೊಪ್ಪರಿಗೆ ಹಾಲ ಕೇಳುವರಿಲ್ಲದೆ
ನಾಲೆಗೆ ಸುರಿದು ಕೈ ಚೆಲ್ಲಿ ಕೂತವರ ನೆನೆದು
ಹಣತೆ ಹಚ್ಚುತ್ತೇನೆ

ಕೈಗವಸು, ಮಾಸ್ಕು,ಮೇಲಂಗಿ ಇಲ್ಲದೆ
ಕಾಯಕ ಕೈಲಾಸದಿ ದಣಿವ ದೇವರ ನೆನೆದು
ಹಣತೆ ಹಚ್ಚುತ್ತೇನೆ

ಮನೆ ಹತ್ತಿ ಉರಿವಾಗ ಹಿರಿಹಿರಿದು ಗಳ
ಧರ್ಮದ ಕೂಳು ಬೇಸುವರ ನಡುವೆ
ಹಣತೆ ಹಚ್ಚುತ್ತೇನೆ

ಕಣ್ಣಿಗೆರಡುಕಣ್ಣು ಕುರುಡಾದರೂ ಸೈ
ಎನ್ನುವವರು ನಾಳೆ ಬದಲಾಗಲೆಂದು
ಹಣತೆ ಹಚ್ಚುತ್ತೇನೆ

ಒಂದು ಬಿಗಿಯಪ್ಪುಗೆ, ಒಂದು ಹೂಮುತ್ತು,
ಸ್ಪರ್ಷ ಸುಖವೆಷ್ಟೆಂದು ಕಲಿಸಿದ ಕಾಲಕ್ಕೆ ನಮಿಸಿ
ಹಣತೆ ಹಚ್ಚುತ್ತೇನೆ

ಮುಟ್ಟದೆಯೂ ಮುಟ್ಟುವ, ದೂರವಿದ್ದೂ
ಸನಿಹವಾಗುವ, ವಿವೇಕದ ಜಾಗೃತಿಗೆ
ಹಣತೆ ಹಚ್ಚುತ್ತೇನೆ.

ಎಷ್ಟು ಚೆಂದವಿತ್ತು ಕಾಲ, ಕೆಲವೇ ದಿನಗಳ ಕೆಳಗೆ
ಬೆಳಗಾಗ ಮಕ್ಕಳು, ತಾಯಂದಿರ ನಗು
ತರಕಾರಿ, ಹೂವಿನವರ ತರತರದ ಕೂಗು
ಹಾಲು, ಪೇಪರ್, ಕಸದ ಗಾಡಿಯವರ ಬೆಲ್ಲು
ಅಕ್ಕಪಕ್ಕದ ಮನೆಯವರ ಮಾತು, ಗುಲ್ಲು
ಸಂಜೆಯಾದರೆ ಬೇಕಷ್ಟು ದೂರ ನಡೆದು, ಒಟ್ಟಾಗಿ
ಬೇಕೆನಿಸಿದಲ್ಲಿಗೆ ಹೋಗಿ, ಹೊಡೆದು ಪಟ್ಟಾಂಗ,
ಗಾಸಿಪ್ಪಿನೊಂದಿಗೆ ಕಾಫೀ.. ಗೀಫೀ..
ಜೊತೆಯಾಗಿಯೇ ಇರುತಿದ್ದ ಕಾಲ!!
ಥಟ್ಟಂತ ಬದಲಾಗಿದೆ ಎಲ್ಲ, ಎಲ್ಲಾ..
ಮಕ್ಕಳು, ಜನವಿಲ್ಲದೆ ಸತ್ತ ಬೀದಿಯಲ್ಲಿ
ಸುತ್ತಿ ಮಲಗಿದೆ ಕೆಲಸವಿಲ್ಲದೆ ನಾಯಿ
ದುಃಖಿಸುವರ ತಬ್ಬಿ ಸಂತೈಸುವಂತಿಲ್ಲ
ಖುಷಿಯಾಗಿ ಕೈತಟ್ಟಿ ನಗುವಂತಿಲ್ಲ
ಬಂದವರ ಕರೆದು ಉಣಲಿಕ್ಕುವಂತಿಲ್ಲ
ಬೆಂಗಾವಲಾಗಿದ್ದ ನಮ್ಮನಮ್ಮಲ್ಲೇ
ಸೀನಿದರೆ ಭಯ, ಸೋಕಿದರೆ ಭಯ
ಕಳೆದೇ ಹೋಗಿದೆ ಸ್ಪರ್ಷ ಸುಖ
ಬೆದರಿದ ಕಣ್ಣು ಮುಸುಕು ಮುಖ
ಜೊತೆಗೆ ಹಂಬಲಿಸುವ ನಾನು, ನೀನು, ಅವರು
ಕಾಯ್ದುಕೊಳ್ಳಲೇಬೇಕು ಅನಿವಾರ್ಯ ಅಂತರ.
ಇಂದೂ ಎಂದಿನಂತೆಯೇ ಚಿಲಿಪಿಲಿಸುತಿವೆ ಹಕ್ಕಿ
ಸರಭರ ಮರ ಹತ್ತಿಳಿಯುತಿದೆ ಚೀವ್ ಗುಡುವ ಇಣಚಿ
ಚಿಗಿಚಿಗಿಸುತಿದೆ ಗಿಡ ಮರ
ಸುಳಿಯುತಿದೆ ಹೂಗಂಧ
ಮುಚ್ಚಿದ್ದರೂ ಬಾಗಿಲು, ತೆರೆದೇ ಇದೆ ಎದೆ ಕದ
ಮುದ್ದಿಸಬೇಕು ಮೊದಲಿನಂತೆ
ಬಿಗಿದಪ್ಪಬೇಕು ಎಂದಿನಂತೆ
ಮತ್ತೆ ಬಂದಿದೆ ವಸಂತ
ಬರುವುದೇ ಮತ್ತೆ ಆ ಸಂತಸ?
ಸಿಗುವುದೇ ಮತ್ತೆ ಸಂಗಾತ?

‍ಲೇಖಕರು avadhi

April 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. KOTRESH T A M

    ಕಟ್ಟಿ ಕಡೆಯ ಮನುಷ್ಯನ ನೋವು,ಈಗಿನ ತಲ್ಲಣವನ್ನು ಕವಿತೆ ಕಟ್ಟಿಕೊಟ್ಟಿದೆ

    ಪ್ರತಿಕ್ರಿಯೆ
  2. Raj Malur

    ತುಂಬ ಚನ್ನು. ಭರವಸೆಯ ಕಾಲ ಬಂದೇ ಬರುತಾದ.

    ಪ್ರತಿಕ್ರಿಯೆ
  3. SANDHYA NIRANJAN

    ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಈಗಿನ ಪರಿಸ್ಥಿತಿಯನ್ನು ಸರಿಯಾಗೆ ಚಿತ್ರಿಸಿದ್ದಾರೆ ಎಂದರೆ ತಪ್ಪಾಗಲಾರದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: