
ಕರ್ಣ ಕುಮಾರ್
ಮೊನ್ನೆ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ನಮ್ಮ ಗೋಡೌನ್ ಕ್ಲೀನ್ ಮಾಡಿ, ಲೇಟಾಗಿ ಮನೆಗೆ ಹೋಗ್ತಾ ಇದ್ದೆ
ನಾನು ಬರುವ ರೋಡ್ ನಲ್ಲಿ ಯಾರೋ ಬೈಕ್ ನಿಂದ ಬಿದ್ದು ನರಳಾಡುತ್ತಿದ್ದರು. ಹತ್ತಿರ ಹೋಗಿ ನೋಡಿದೆ. ಆತ ಸಿಕ್ಕಾಪಟ್ಟೆ ಕುಡಿದು ಅಲ್ಲಿರುವ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು, ಕೈ-ಕಾಲಿಗೆಲ್ಲಾ ತುಂಬಾ ಏಟು ಬಿದ್ದಿತ್ತು.
ಯಾವುದಕ್ಕೂ ಇರಲಿ ಅಂತ ನನ್ನ ಮೊಬೈಲ್ ಟಾರ್ಚ್ ನಿಂದ ಅವರ ಮುಖಕ್ಕೆ ತುಂಬಾ ಹತ್ತಿರದಿಂದ ಹಿಡಿದು ನೋಡಿದೆ. ಈ ಮನುಷ್ಯನನ್ನು ಎಲ್ಲೋ ನೋಡಿದ ನೆನಪು. ಎಷ್ಟು ಯೋಚಿಸಿದರೂ ಯಾರು ಎಂದು ಆದರೂ ನೆನಪಿಗೆ ಬರ್ತಿಲ್ಲ. ಇವನಿಗೆ ಬಿದ್ದಿರುವ ಏಟಿಗಿಂತ, ಇದು ದೊಡ್ಡ ವಿಷಯ ಅಲ್ಲ. ಆಮೇಲೆ ಇವನನ್ನೇ ಕೇಳಿದರಾಯಿತು ಅಂತ ಅವಸರವಾಗಿ ಅಲ್ಲೇ ಇದ್ದ ಆಸ್ಪತ್ರೆಗೆ ಸೇರಿಸಿದೆ.
ಚಿಕಿತ್ಸೆ ಕೊಟ್ಟ ಡಾಕ್ಟರ್ ಇವರು ಇನ್ನೂ ಒಂದು ವಾರ ಇಲ್ಲೇ ಅಡ್ಮಿಟ್ ಆಗಬೇಕು x-ray ಮತ್ತೆ ಇನ್ನೂ ಏನೇನೋ ಟೆಸ್ಟ್ ಎಲ್ಲಾ ಮಾಡಬೇಕು ಅಂದ್ರು. ನಾನು ಅಷ್ಟರಲ್ಲಾಗಲೇ ಅವರ ಮೊಬೈಲ್ ನಲ್ಲಿ ಇದ್ದ ಅವರ ಮನೆಯವರ ನಂಬರ್ ಗೆ ಕಾಲ್ ಮಾಡಿದ್ದೆ. ಅವರೂ ಬಂದರು.
ಅಷ್ಟರಲ್ಲಾಗಲೇ ನನ್ನ ಗಡಿಯಾರ 12-30 ತೋರಿಸ್ತಾ ಇತ್ತು. ನಾನು ಆಸ್ಪತ್ರೆಯಿಂದ ಹೊರಡುವ ಮುಂಚೆ ಅವರಿಗೆ ಸ್ವಲ್ಪ ಧೈರ್ಯ ಹೇಳೋಣ ಅಂತ ಆ ಮನುಷ್ಯನ ಹತ್ತಿರ ಹೋದೆ ನನ್ನ ನೋಡಿದ ತಕ್ಷಣ ಆತ ”ಸಾರ್ ನೀವಾ.? ಆವತ್ತು ನಾನು ನಿಮ್ಮ ಮಾತು ಕೇಳಲಿಲ್ಲ. ಮಾನವೀಯತೆಗೆ ಬೆಲೆ ಕೊಡಲಿಲ್ಲ..ಅದಿಕ್ಕೆ ಆ ದೇವರು ನನಗೆ ಈವತ್ತು ಈತರ ಶಿಕ್ಷೆ ಕೊಟ್ಟ” ಅಂತ ಕುಡಿದ ಮತ್ತಿನಲ್ಲೇ ಏನೇನೋ ಒದರುತ್ತಿದ್ದ.
ಏನೇನೋ ಹೇಳ್ತಾನಲ್ಲಾ ಇವನು.? ಅಂತ ನನಗೆ ಅನುಮಾನ ಬಂದು, ಅವನ ಮುಖವನ್ನು ತುಂಬಾ ಹತ್ತಿರದಿಂದ ನೋಡಿದೆ.. ನೋಡಿದೆ.. ನೋಡೇ ನೋಡಿದೆ.. ಸಿಕ್ತು.. ಸಿಕ್ತು.. ಈ ಗೋಮುಖವ್ಯಾಘ್ರನ ಗುರುತು ಕೊನೆಗೂ ಸಿಕ್ಕೇಬಿಡ್ತು..
ನಾನು ಸುಮಾರು 2 ತಿಂಗಳ ಹಿಂದೆ.. ಊರಿನಿಂದ ಬೆಂಗಳೂರಿಗೆ ಬರಬೇಕಾದ್ರೆ, ಅದೇ ದಾರಿಯಲ್ಲಿ ನೆಲಮಂಗಲದ ವೃದ್ದರೊಬ್ಬರು tvs ಸ್ಕೂಟರ್ ನಿಂದ ಬಿದ್ದು ಜಾಸ್ತಿ ಏಟು ಆಗಿತ್ತು. ಈ ಪರಿಸ್ಥಿತಿಯಲ್ಲಿ ನನ್ನ ಬೈಕ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರ್ಕೋಂಡು ಹೋಗೋಕೆ ಆಗೋಲ್ಲ ಅಂತ ನನಗೆ ಮನವರಿಕೆ ಆಯಿತು. ಆಗ ಆ ರೋಡ್ ನಲ್ಲಿ ಬರುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಪಟ್ಟೆ.
ಅದೇ ಸಮಯಕ್ಕೆ ಇದೇ ದೊಡ್ಡ ಮನುಷ್ಯ ಕಾರ್ ನಲ್ಲಿ ಬರ್ತಿದ್ದ. ನಾನು ರಸ್ತೆಯ ಮಧ್ಯೆ ನಿಂತು ಈತನ ಕಾರನ್ನು ಅಡ್ಡ ಹಾಕಿದೆ. ನಾನು ರಸ್ತೆಯ ಮಧ್ಯದಲ್ಲಿ ನಿಂತಿದ್ದ ಒಂದೇ-ಒಂದು ಕಾರಣಕ್ಕೆ ಕಾರ್ ನಿಲ್ಲಿಸಿದ ಈತ.. ಆ ವೃದ್ದರ ಮೈಮೇಲಿದ್ದ ರಕ್ತವನ್ನು ನೋಡಿ.. ನಾನು ಇವರನ್ನು ನನ್ನ ಕಾರ್ ನಲ್ಲಿ ಬಿಲ್-ಕುಲ್ ಹತ್ತಿಸೋಲ್ಲ.. ನನ್ನ ಕಾರೆಲ್ಲ ರಕ್ತ ಆಗುತ್ತೆ ಅಂತ, ಆತನ ಕಾರನ್ನು ಮುಟ್ಟೋಕೇ ಬಿಡಲಿಲ್ಲ..
ಕೊನೆಗೆ ನಾನು ನನ್ನ ಸ್ವಾಭಿಮಾನ ಬಿಟ್ಟು, ಆ ನಡುರಾತ್ರಿಯಲ್ಲಿ ಆತನ ಕಾಲಿಗೆ ಬಿದ್ದು ಕೇಳಿದ್ರೂ ಆತ ಒಪ್ಪಲೇ ಇಲ್ಲ. ನಿಮಗೇಕೆ ಬೇಕು ಈ ಉಸಾಬರಿ.? ಈ ತಾತ ಏನ್ ನಿಮಗೇನ್ ಸಂಬಂಧಿಕನಾ.? ಇಲ್ಲೇ ಬಿಟ್ಟು ಹೋಗ್ರಿ ಸತ್ತರೆ ಸಾಯ್ತನೆ.. ಅಂತ ‘ಬುದ್ದಿಮಾತು’ ಹೇಳಿ ಹೊರಟೇಬಿಟ್ಟ.
ಆ ರಾತ್ರಿಯಲ್ಲಿ ನಾನು ಆ ವೃದ್ಧರನ್ನು, ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ನನ್ನ ಹೆಗಲ ಮೇಲೆಯೇ ಹೊತ್ತು ಆಸ್ಪತ್ರೆಗೆ ಸೇರಿಸಿದೆ. ಅದನ್ನು ನಾನು ಯಾವತ್ತೂ ಮರೆಯೋಲ್ಲ. ಆ ವೃದ್ದರನ್ನು ನಾನು ಹೊತ್ತೊಯ್ಯುವಾಗ, ಮೊದಲೇ ಡ್ಯಾಮೇಜ್ ಆಗಿದ್ದ ಅವರ HMT ಸ್ಟೀಲ್ ಗಡಿಯಾರ ನನ್ನ ಬೆನ್ನನ್ನು ಕುಯ್ದಾಗ, ನಾನು ನೋವಿನಿಂದಾ ಅವ್ವಾ ಅಂತ ಕಿರುಚಿ-ಕಣ್ಣೀರ್ ಹಾಕಿದ್ದನ್ನೂ ಮರೆತಿಲ್ಲ.
ಕೊನೆಗೆ ಆ ವೃದ್ದರು ಬದುಕುಳಿದರು. ನನ್ನ ಬೆನ್ನಿಗೆ ನೋವಾದಾಗಲೆಲ್ಲಾ ಅವರ HMT ಸ್ಟೀಲ್ ಕೈಗಡಿಯಾರವನ್ನೇ ನೆನೆಯುವ ನಾನು….ಈತನನ್ನು ಮರೆತುಬಿಟ್ಟಿದ್ದೆ.
ಆವತ್ತು ನಡು-ರಾತ್ರಿಯಲ್ಲಿ.. ನನ್ನ ಕಾರ್ ನಲ್ಲಿ ಈ ಮುದುಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ, ನನ್ನ ಕಾರ್ ರಕ್ತ ಆಗುತ್ತೆ ಅಂತ ಅಹಂಕಾರದಲ್ಲಿ ಹೇಳಿದ್ದ ಈತನಿಗೆ.. ಮೊನ್ನೆಯ ನಡುರಾತ್ರಿಯಲ್ಲಿ ನನ್ನ ಬಿಳಿಯ ಟೀ-ಶರ್ಟ್ ನ ಮೇಲೆ ಬಿದ್ದಿದ್ದ ಅವನ ಹತ್ತಾರು ರಕ್ತದ ಹನಿಗಳು, ಅವನನ್ನೇ ಅಣಕಿಸಿ..ಗಹ-ಗಹಿಸಿ ನಗುತ್ತಿತ್ತು. ಹೌದು ಇದನ್ನೂ ನಾನು ಯಾವತ್ತೂ, ಯಾವುದೇ ಕಾರಣಕ್ಕೂ ಮರೆಯೋಲ್ಲ..





Nimma paropakara kalagige, manava preethige dodda Salam, Nimmage Olledagali…..
Nimma paropakara kalagige, manava preethige dodda Salam, Nimmage Olledagali…..
ಇದಕ್ಕಿಂತ ಪುಣ್ಯದ ಕೆಲಸ ಇನ್ನಾವುದಿದೆ.
Thank you
ಇದಕ್ಕಿಂತ ಪುಣ್ಯದ ಕೆಲಸ ಇನ್ನಾವುದಿದೆ.
Thank you