ಜಗಳದೊಂದು ಘಳಿಗೆ
ಪಾರ್ವತಿ
ಈ ಅಗ್ನಿದಿವ್ಯಕ್ಕೆ
ಸಮಯ ಸಂದರ್ಭವೆಲ್ಲಿಯದು?
ಕ್ಷಣಮಾತ್ರದಲ್ಲಿ ಕಿಡಿಸಿಡಿದು
ಭಗ್ ಎಂದು ಹೊತ್ತುರಿದ ಹೊತ್ತಿನಲ್ಲಿ
ನಿನ್ನಿಂದ ಬೇರೆಯಾಗಿ ನಿಂತು ಪರಿಪೂರ್ಣಳಾಗಿದ್ದೆ
ಮಹಾಶಕ್ತಿಯನ್ನು ಆವಾಹಿಸಿಕೊಂಡಿದ್ದೆ.
ಅಸ್ತಿತ್ವವೇ ಇಲ್ಲವೆನಿಸಿತ್ತು ಆ ಘಳಿಗೆಯಲ್ಲಿ
ತರಗುಟ್ಟಿದ್ದೆ ಕ್ಷಣಕಾಲ;
ತರಗೆಲೆಯಂತಾಗಿದ್ದ ನನ್ನನ್ನು
“ಎಲ್ಲವನ್ನೂ ಕ್ಷಮಿಸಿದ್ದೇನೆ ಬಾರೆ”
ಎಂದ ನಿನ್ನ ನೋಟ ಬಲವಾಗಿ ಸೆಳೆದುಬಿಟ್ಟಿತ್ತು.
ಬೆಂಕಿಯಿಂದ ಬೇರೆಯಾಗಿ
ಮತ್ತೆ ಹೆಣ್ಣಾಗಿ ಹೊಮ್ಮಿದೆ
ಬಂಧನಕ್ಕೆ ಕಾತರಿಸಿ ನಿನ್ನೆಡೆಗೆ ಧಾವಿಸಿದ್ದೆ
ಆವರಿಸಿದ ಆಯಾಸ, ಪರಿತಾಪದಲ್ಲಿ ಬೆಂದು
ನನ್ನನ್ನೇ ನಾನು ಹಳಿದು, ತಿರಸ್ಕರಿಸಿ
ಪಾಪಪ್ರಜ್ಞೆಯಿಂದ ಮತ್ತೆ ಮಡದಿಯಾಗಿಬಿಟ್ಟೆ!
ಪರಿಪೂರ್ಣತೆಯ ಘಳಿಗೆಗಳು ಮತ್ತೆ
ಸೆಳೆಯದೇ ಬಿಡಲಿಲ್ಲ
ಒಮ್ಮಿಂದೊಮ್ಮೆಲೇ ನನ್ನೊಳಹೊರಗನ್ನೆಲ್ಲಾ
ಬೆಳಗಿಬಿಡುತ್ತಿದ್ದವು
ಮತ್ತೆ ನಿನ್ನ ಕಣ್ಣಕಿಡಿಯಲ್ಲಿ
ದಹಿಸಿ ಪರಿಪೂರ್ಣಳಗುವ
ಘಳಿಗೆಗಾಗಿ ಕಾತರಿಸತೊಡಗಿದೆ!
ಈ ಬಾರಿಯೂ ಬೆಂಕಿ ನನ್ನನ್ನು ದಹಿಸಲಿಲ್ಲ!
ಆ ಕ್ಷಣದಲ್ಲಿ
ನನ್ನನ್ನು ಸುತ್ತುವರಿದಿತ್ತು!!
ನನ್ನನ್ನು ಸೋಕಿರಲಿಲ್ಲ!!!
ಬೆಂದು, ಬೆವರೊಡೆದು, ಬೆಳಕಾಗಿ
ಮತ್ತೆ ಹೊರಚಿಮ್ಮಿದ್ದೆ
ಬೆಂಕಿಯು ಬೆಂಕಿಯನ್ನೇ ಸುಡಬಲ್ಲದೇ?
ಹೆಣ್ಣು ಕೆಂಡವಾಗಿ
ಮತ್ತೆ ಹೆಣ್ಣಾಗುವಾಟ
ಅನಾದಿ ಕಾಲದ ಪರಿಪಾಠ
ಮತ್ತೊಮ್ಮೆ ಹೊತ್ತುರಿಯುವ ಹೊತ್ತಿಗಾಗಿ
ಹಂಬಲಿಸುತ್ತಿದ್ದೇನೆ
ನನಗೆ ನಾ ದಕ್ಕುವವರೆಗೂ
ಅಗ್ನಿದಿವ್ಯಕ್ಕೆ ಈ ದಿವ್ಯಾಹ್ವಾನ!





0 Comments