ಆ ಬುದ್ಧಿ ಬರಲೇ ಇಲ್ಲ!

ಗುಡಿಹಳ್ಳಿ ನಾಗರಾಜ

ಸ್ನೇಹಜೀವಿ ಭೂಪತಿಯವರ ಪರಿಚಯ ನನಗೆ ಆದದ್ದು ಸೈದ್ಧಾಂತಿಕ ಕಾರಣಕ್ಕೆ!

1980 ರಿಂದ 83 ರ ವರೆಗೆ ನಾನು ಹರಪನಹಳ್ಳಿಯಲ್ಲಿ ಉಪನ್ಯಾಸಕನಾಗಿದ್ದೆ. ಎಸ್‍ಎಫ್‍ಐ, ಸಮುದಾಯ ಸಂಘಟನೆಗಳನ್ನು ನಾನು ಅಲ್ಲಿ ಹುಟ್ಟುಹಾಕಿ, ಅವುಗಳ ಚಟುವಟಿಕೆಯಲ್ಲಿ ನಿರತನಾಗಿದ್ದೆ. ಪಾಠ ಮಾಡುವುದಕ್ಕಿಂತ ಅದೇ ಹೆಚ್ಚಾಗಿತ್ತು!

ಭೂಪತಿಯವರು ತೋರಣಗಲ್ಲು, ಸಂಡೂರು, ಬಳ್ಳಾರಿ ಭಾಗದಲ್ಲಿ ವಿದ್ಯಾರ್ಥಿ-ಕಾರ್ಮಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಅವರದು ಎಐಎಸ್‍ಎಫ್ ಹಾಗೂ ಐಟಕ್. ನಮ್ಮದು ಎಸ್‍ಎಫ್‍ಐ ಮತ್ತು ಸಮುದಾಯ. ಒಂದೇ ಕಮ್ಯುನಿಸ್ಟ್ ಚಳವಳಿಯಲ್ಲಿ ಟಿಸಿಲೊಡೆದ ಎಐಎಸ್‍ಎಫ್ ಮತ್ತು ಎಸ್‍ಎಫ್‍ಐ ದಾಯಾದಿಗಳಂತೆ ಕಚ್ಚಾಡುತ್ತಿದ್ದ ಕಾಲ ಅದು!

ತಮ್ಮ ತಮ್ಮ ಕಡೆಗೆ ಯುವಕರನ್ನು ಸೆಳೆಯಲು ಭಾರಿ ಪೈಪೋಟಿಯೇ ಇತ್ತು. ಕೆಲವು ಬಾರಿ ಅದು ಒಬ್ಬರ ಮುಖವನ್ನು ಒಬ್ಬರು ನೋಡದ ಮಟ್ಟಕ್ಕೆ ಬೆಳೆಯುತ್ತಿತ್ತು! ಈ ವಿಷಯವನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ ಇಂತಹ ನಿಲುವುಗಳಿಗೆ ಭೂಪತಿ ಭಿನ್ನವಾಗಿದ್ದರು. ಸಿದ್ಧಾಂತವನ್ನು ಬದಿಗಿಡು, ಸ್ನೇಹವಷ್ಟೇ ಮುಖ್ಯ ಎಂಬಂತೆ ಸದಾ ನಗುನಗುತ್ತ ಲವಲವಿಕೆಯಿಂದ ಇದ್ದರು. ಮುಂದಿನ ದಿನಗಳಲ್ಲಿ ನಮ್ಮ ಸ್ನೇಹ ಗಾಢವಾಗಿ ಬೆಳೆಯದಿದ್ದರೂ, ಅವರ ಚುಂಬಕ ವ್ಯಕ್ತಿತ್ವ ಮಾತ್ರ ನನ್ನಲ್ಲಿ ಶಾಶ್ವತವಾಗಿ ನೆಲೆನಿಂತಿತು. ಅಪರೂಪಕ್ಕೆ ಭೇಟಿಯಾಗುತ್ತಿದ್ದರೂ ನೂರುವರ್ಷದ ಸ್ನೇಹದಂತಿರುತ್ತಿತ್ತು.

ಕರಾವಳಿಯ ಪ್ರಭಾಕರ ಹಾಗೂ ಶ್ಯಾಂ ಎಂಬುವರು ತೋರಣಗಲ್ಲು ಬ್ಯಾಂಕಿನಲ್ಲಿ ನೌಕರಿಯಲ್ಲಿದ್ದರು. ಬಳ್ಳಾರಿ ಭಾಗದಲ್ಲಿ ಸಮುದಾಯದ ನಾಟಕ ಪ್ರದರ್ಶನಗಳಿಗೆ ನಿರಂತರವಾಗಿ ಅವರು ಶ್ರಮಿಸುತ್ತಿದ್ದರು. ಒಮ್ಮೆ ತೋರಣಗಲ್ಲಿನಲ್ಲಿ ‘ಮಾರೀಚನ ಬಂಧುಗಳು’ ನಾಟಕದ ತಾಲೀಮು ನಡೆದಿತ್ತು. ಹರಪನಹಳ್ಳಿಯಲ್ಲಿ ಸಮುದಾಯದಿಂದ ‘ಬೆಲ್ಚಿ’, ‘ಬೆಳೆದವರು’ ಬೀದಿ ನಾಟಕ ಹಾಗೂ ‘ಪಂಚಮ’ ನಾಟಕವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಕಲಿಸಿದ್ದ ನಾನು ತೋರಣಗಲ್ಲು ಸಮುದಾಯದವರ ನಾಟಕ ಪ್ರಾಕ್ಟೀಸ್ ನೋಡಲೆಂದೇ ಕುತೂಹಲದಿಂದ ಹೋಗುತ್ತಿದ್ದೆ.

ತೋರಣಗಲ್ಲಿನವರೇ ಆದ ಭೂಪತಿ ನಾಟಕದ ಪ್ರಾಕ್ಟೀಸ್ ಸ್ಥಳಕ್ಕೆ ಬರುತ್ತಿದ್ದರು. ಐಟಕ್‍ನಲ್ಲಿ ಸಕ್ರಿಯವಾಗಿದ್ದ ಭೂಪತಿಯವರ ‘ಇಪ್ಟಾ’ ನಾಟಕ ತಂಡ ಆಗಿನ್ನೂ ಚಟುವಟಿಕಗಳನ್ನು ತೀವ್ರಗೊಳಿಸಿರಲಿಲ್ಲ. ನಮ್ಮಲ್ಲಿ ಕೆಲವರಿಗೆ ಈ ದಾಯಾದಿಗಳದೇನು ಕೆಲಸ ಇಲ್ಲಿ, ನಮ್ಮವರನ್ನು ಯಾರನ್ನಾದರೂ ಸೆಳೆಯಲು ಬಂದರೆ ಎಂಬ ಭಾವನೆ! ಆದರೆ ಭೂಪತಿಗೆ ಅಂತಹ ಭಾವನೆ ಅನ್ಯಥಾ ಇರಲಿಲ್ಲ. ದಾಯಾದಿ ಆಗಿರಬಹುದು ಸಮುದಾಯವೂ ನಮ್ಮದೇ ಎಂಬ ಭಾವನೆ ಅವರಲ್ಲಿತ್ತು. ಅಂತಹ ಉದಾರ ಮನೋಭಾವ ಅವರನ್ನು ಒಬ್ಬ ಸಜ್ಜನನನ್ನಾಗಿ ರೂಪಿಸಿತ್ತು.

ಹೊಸಪೇಟೆಯಲ್ಲಿ ಗಂಗಾಧರಸ್ವಾಮಿ ನಿರ್ದೇಶನದಲ್ಲಿ ‘ಕತ್ತಲೆ ದಾರಿ ದೂರ’ ನಾಟಕ ನಡೆದಿತ್ತು. ನಾನು ಹರಪನಹಳ್ಳಿಯಿಂದ ಅಲ್ಲಿಗೆ ಹೋಗಿ ವಾಸು ಪಾತ್ರದಲ್ಲಿ ಅಭಿನಯಿಸಿದ್ದೆ. ಭೂಪತಿ ನನ್ನ ಅಭಿನಯ ನೋಡಿ ಅಪಾರವಾಗಿ ಮೆಚ್ಚುಗೆ ವ್ಯಕ್ತಪಡಿಸಿ ಅಪ್ಪಿಕೊಂಡ ನೆನಪು ನನಗಿನ್ನೂ ಹಸಿರಾಗಿದೆ. ನಾವು ಇಪ್ಟಾದವರು, ಇವರು ಸಮುದಾಯದ ದಾಯಾದಿಗಳು ಎಂಬ ಅಂಶ ಭೂಪತಿಯಲ್ಲಿ ಲವಲೇಶವೂ ಇರಲಿಲ್ಲ. ಅದೇ ಭೂಪತಿ ವಿಶೇಷತೆ.

ಬಳ್ಳಾರಿಯಲ್ಲಿ ಭೂಪತಿಯವರಿಗೆ ಅರವಿಂದ ಮಲೆಬೆನ್ನೂರು ಅವರು ಸೈದ್ಧಾಂತಿಕ ಗುರುಗಳು. ಬಂಡಾಯ ಸಾಹಿತ್ಯ ಸಂಘಟನೆಯೂ ಅದಾಗಲೇ ಕ್ರಿಯಾಶೀಲವಾಗಿತ್ತು. ಸಮಾಜವಾದಿ, ಸಿಪಿಐ, ಸಿಪಿಎಂ ಅಥವಾ ಯಾವುದೇ ರಾಜಕೀಯ ಪಕ್ಷದ ನಂಟಿಲ್ಲದ ಪ್ರಗತಿಪರರು ಒಟ್ಟಿಗೇ ನಡೆಸುತ್ತಿದ್ದ ಸಾಹಿತ್ಯಕ ಚಳವಳಿ ಅದಾಗಿತ್ತು. ಬಂಡಾಯವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸಮಾಜವಾದಿಗಳು ಮತ್ತು ಕಮ್ಯುನಿಸ್ಟರ ಮಧ್ಯೆ ಸಣ್ಣದೊಂದು ಘರ್ಷಣೆ ಆಗಾಗ ಸ್ಫೋಟಿಸುತ್ತಿತ್ತು.

1982-83 ರಲ್ಲಿರಬೇಕು. ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಅದನ್ನು ಮಹಾಬಲೇಶ್ವರ ಕಾಟ್ರಹಳ್ಳಿ, ಹೊ.ಮ.ಪಂಡಿತಾರಾಧ್ಯ, ಕುಂವೀ ಮುಂತಾದವರು ಸಂಘಟಿಸಿದ್ದರು ಎಂಬ ನೆನಪು. ಮಾಜಿ ಮಂತ್ರಿ ಎಂ.ಪಿ.ಪ್ರಕಾಶ ಅವರಿಗೆ ಅವರೆಲ್ಲ ಆಗ ಆಪ್ತರಾಗಿದ್ದರು. ಎಲ್ಲರೂ ಸಮಾಜವಾದಿಗಳು. ಸಹಜವಾಗಿ ಅವರು ತಮ್ಮ ನಿಲುವಿಗೆ ಒಲವಿರುವ ಹೆಚ್ಚು ಜನರಿಗೆ ಸಮ್ಮೇಳನದಲ್ಲಿ ಅವಕಾಶ ಮಾಡಿಕೊಟ್ಟು ಕಮ್ಯುನಿಸ್ಟರನ್ನು ಕಡೆಗಣಿಸಿದ್ದರು. ಸಿಪಿಐ, ಸಿಪಿಎಂ (ಕಮ್ಯುನಿಸ್ಟ್ ಒಂದೇ ಸಿದ್ಧಾಂತದ ಎರಡು ಟೊಂಗೆಗಳು), ನಕ್ಸಲೈಟರ ಮಧ್ಯೆ ಏಕಾಏಕಿಯಾಗಿ ಒಗ್ಗಟ್ಟು ಮೂಡಿಬಿಟ್ಟಿತು! ಸಮಾಜವಾದಿಗಳ ತಂತ್ರವನ್ನು ಕಮ್ಯುನಿಸ್ಟರೆಲ್ಲ ಸೇರಿ ಪ್ರತಿಭಟಿಸಿದೆವು! ಬಂಡಾಯದ ವಿರುದ್ಧ ಬಂಡಾಯ!

1983 ರಲ್ಲಿ ನಾನು ಪ್ರಜಾವಾಣಿ ಉಪಸಂಪಾದಕ ಹುದ್ದೆ ಸೇರಿ ಬೆಂಗಳೂರಿಗೆ ಬಂದೆ. ಅದೇ ವರ್ಷ ಭೂಪತಿ ಸಂಡೂರು ಶಾಸಕರಾಗಿ ಆಯ್ಕೆಯಾದರು. ಕೆಲವರಿಗೆ ಇದು ಅಚ್ಚರಿಯ ಆಯ್ಕೆ. ಕಾಂಗ್ರೆಸ್‍ನವರೇ ಒಳಗೊಳಗೆ ಭೂಪತಿಯವರನ್ನು ಬೆಂಬಲಿಸಿದರು ಎಂಬ ಗುಸುಗುಸು ಕೂಡ ಕೇಳಿಬಂತು. ಅದೆಲ್ಲ ಏನೇ ಇರಲಿ. ಕಮ್ಯುನಿಸ್ಟ್ ಪಾರ್ಟಿಗೆ ಹಾಗೂ ಭೂಪತಿಯಂತಹ ಸರಳ ಸಜ್ಜನನಿಗೆ ಒಲಿದ ಅರ್ಹ ಗೆಲುವೇ ಅದಾಗಿತ್ತು. ಯಾಕೆಂದರೆ ಕಮ್ಯುನಿಸ್ಟ್ ಪಕ್ಷ ಆ ಭಾಗದಲ್ಲಿ ದಶಕಗಳಿಂದ ಕಾರ್ಮಿಕರು, ರೈತರನ್ನು ಸಂಘಟಿಸಿತ್ತು.

1983 ರಿಂದ ಅವರು ಶಾಸಕ, ನಾನು ಪತ್ರಕರ್ತ. ಒಂದರ್ಥದಲ್ಲಿ ನಮ್ಮ ಸ್ನೇಹ ಇನ್ನೂ ಗಾಢವಾಗಬೇಕಿತ್ತು. ಯಾವುದೇ ಆಮಿಷಗಳಿಗೆ ಒಗ್ಗದ ಭೂಪತಿ ಪಕ್ಷದ ಸಂಘಟನೆ, ಜನಪರ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ; ನಾನು ಸಾಹಿತ್ಯ, ನಾಟಕ ಚಳವಳಿಯಲ್ಲಿ ಮತ್ತಷ್ಟು ಸಕ್ರಿಯನಾದೆ. ಆಗಿನ ಪತ್ರಕರ್ತರಿಗೆ ಅಧ್ಯಯನಶೀಲರಾಗಲು, ಸಂಶೋಧನೆ ನಡೆಸಲು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹೆಚ್ಚು ಸಮಯ ಸಿಗುತ್ತಿತ್ತು (ಈಗ ಅದೆಲ್ಲ ಸಾಧ್ಯವಿಲ್ಲ. ಆಮಿಷಗಳಲ್ಲಿ ಕಳೆದುಹೋದ ಪತ್ರಕರ್ತರಿಗಂತೂ ಸಾಂಸ್ಕøತಿಕ ಲೋಕ ಬಹುದೂರವೇ). ಪ್ರಜಾವಾಣಿ ಆಡಳಿತ ವರ್ಗವಂತೂ ಇನ್ನೂ ಉದಾರವಾಗಿತ್ತು. ಪ್ರಜಾವಾಣಿಯ ನನ್ನ ನೌಕರಿಯ ಮೊದಲ ಬಹುಭಾಗ ಸರ್ಕಾರಿ ಸೇವೆಯಂತಿತ್ತು. ಆ ಮಾತುಗಳನ್ನು ಭೂಪತಿಯೇ ನನ್ನ ಎದುರಿಗೆ ಸಾಕಷ್ಟು ಸಲ ಆಡಿದ್ದರು.

ಶಾಸಕತ್ವದ ಅವಧಿ ಮುಗಿದ ನಂತರ ಭೂಪತಿ ಉದ್ಯಮಿಯಾಗಲು ಹೊರಟರು. ಅದರ ವಿವರಗಳು ನನಗೆ ಹೆಚ್ಚು ತಿಳಿದಿಲ್ಲ. ವ್ಯಾವಹಾರಿಕ ಲೋಕವೇ ಗೊತ್ತಿಲ್ಲದ ಭೂಪತಿ ಅದನ್ನೆಂತು ಯಶಸ್ವಿಯಾಗಿ ನಿಭಾಯಿಸಿಯಾರು? ಅದೆಲ್ಲ ವಿಫಲವಾಯಿತು. ಅಪಾರ ಹಾನಿಯಾಯಿತು ಎಂದು ಕೇಳಿದೆ. ಆದರೆ ಅದನ್ನೆಂದೂ ಬಹಿರಂಗವಾಗಿ ತೋರಿಸಿಕೊಂಡವರಲ್ಲ ಭೂಪತಿ. ವೈದ್ಯೆಯಾಗಿ, ಲೇಖಕಿಯಾಗಿ, ಸಂಘಟಕಿಯಾಗಿ ಹತ್ತು ಹಲವು ಚಟುವಟಿಕೆಯಲ್ಲಿ ತೊಡಗಿಕೊಂಡ ಭೂಮಿ ತೂಕದ ಹೆಣ್ಣು ವಸುಂಧರಾ ಅವರು ಭೂಪತಿಯ ಇಚ್ಛೆಯನ್ನರಿತೇ ನಡೆದರು. ಅಂತೆಯೇ ವಸುಂಧರೆಪತಿ (ಭೂಪತಿ) ಜೀವನೋತ್ಸಾಹವನ್ನೆಂದೂ ಕಳೆದುಕೊಳ್ಳಲಿಲ್ಲ.

ಒಮ್ಮೆ ಶಾಸಕರಾದರೆ ಸಾಕು. ಕೋಟಿಗಟ್ಟಲೆ ಹಣ ಗಳಿಸುವ ಕಾಲ ಇದು. ಆದರೆ ಇದಕ್ಕೆ ತದ್ವಿರುದ್ಧ ಈ ಆದರ್ಶ ದಂಪತಿ. ಜಾತೀಯತೆ, ಸ್ವಜನಪಕ್ಷಪಾತ ಭೂಪತಿ ಬಳಿ ಸುಳಿಯಲೇ ಇಲ್ಲ.

ಉಪ್ಪಾರ ಜಾತಿಗೆ ಸೇರಿದ ಭೂಪತಿ ಒಟ್ಟಾರೆ ಹಿಂದುಳಿದ ವರ್ಗದ ಏಳಿಗೆ ಬಯಸಿದ್ದರೇ ಹೊರತು, ತನ್ನವರು ತನ್ನ ಜಾತಿ ಮಾತ್ರ ಎಂಬುದು ಅವರಲ್ಲಿರಲಿಲ್ಲ. ಹಾಗೆ ನೋಡಿದರೆ ಅವಕಾಶಗಳಿಂದ ತೀರಾ ವಂಚಿತವಾಗಿರುವ ಉಪ್ಪಾರರಿಗೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಿದ್ದರೆ ತಪ್ಪೇನು ಇರಲಿಲ್ಲ. ಹರಪನಹಳ್ಳಿಯಲ್ಲಿ ರಂಗಶಾಲೆ ನಡೆಸುತ್ತ ನಿರಂತರವಾಗಿ ರಂಗ ಚಟುವಟಿಕೆ ನಡೆಸುತ್ತಿರುವ ನನ್ನ ಹಾಗೂ ಭೂಪತಿಯ ಖಾಸಾ ಗೆಳೆಯ ಬಿ.ಪರಶುರಾಮ ಉಪ್ಪಾರ ಜಾತಿಗೇ ಸೇರಿದವನು. (ಪರಶುರಾಮನ ಪತ್ನಿ ಮತ್ತು ಮಕ್ಕಳು ನಾಯಕ ಜಾತಿಗೆ ಸೇರಿದವರು).

ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ವಕ್ತಾರ ಭೂಪತಿಯ ಶಿಫಾರಸಿನಿಂದ ಪರಶುರಾಮ ಬಿಡಿಗಾಸನ್ನೂ ಸಂಸ್ಕøತಿ ಇಲಾಖೆಯಿಂದ ಪಡೆಯಲು ಸಾಧ್ಯವಾಗಲಿಲ್ಲ. ಹಣ ಮಂಜೂರಾಗುವ ಸಾಕಷ್ಟು ಮುಂಚೆಯೇ ಸರಿಯಾದ ಶಿಫಾರಸು ಮಾಡಿಸುವ ಚಾಕಚಕ್ಯತೆ ಪರಶುರಾಮನಲ್ಲಿ ಇರಲಿಲ್ಲ. ಹಾಗೆಯೇ ತನ್ನವರನ್ನು ಮಾತ್ರ ನೋಡಿಕೊಳ್ಳಬೇಕು ಎಂಬುದು ಭೂಪತಿಯವರಲ್ಲೂ ಇರಲಿಲ್ಲ.

ಒಟ್ಟಾರೆ ಅಸಹಾಯಕರ ನೆರವಿಗೆ ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಛಾತಿ ಭೂಪತಿಯದಾದರೆ; ರಂಗಭೂಮಿಯಲ್ಲೇ ಕಳೆದು ಹೋಗುವ ಜಾಯಮಾನ ಪರಶುರಾಮನದು. ವ್ಯಾವಹಾರಿಕ ಗುಣ ಇಬ್ಬರಲ್ಲೂ ಇರಲಿಲ್ಲ. ಸಾಯುವವರಿಗೂ ಆ ಬುದ್ಧಿ ಭೂಪತಿಗೆ ಬರಲೇ ಇಲ್ಲ.

ಆ ಭಾರವನ್ನೆಲ್ಲ ಈಗ ವಸುಂಧರೆಯೇ (ಭೂಮಿ) ಹೊರಬೇಕು. ನಿಮಗೆ ನಮೋ ತಾಯಿ. ಆ ದೇವರು ನಿಮ್ಮನ್ನು ಹಾಗೂ ಅಭಿಮನ್ಯು, ಸಿದ್ಧಾರ್ಥ ಅವರನ್ನು ಅನವರತ ಕಾಪಾಡಲಿ.

‍ಲೇಖಕರು Avadhi GK

March 20, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. PRABHAKAR KAPIKAD

    ಗುಡಿಹಳ್ಳಿ ನಾಗರಾಜ್… ನಿಮ್ಮ ಲೇಖನ ಓದಿ ಖುಷಿಯಾಯಿತು… ಈಗ ಎಲ್ಲಿದ್ದೀರಿ? ಮಂಗಳೂರು ಕಡೆ ಬನ್ನಿ… ನಾನು, ಶ್ಯಾಮ್ ಇಲ್ಲಿದ್ದೇವೆ.. (ಪ್ರಭಾಕರ್ ಕಾಪಿಕಾಡ್)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: