ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೨ ಕೊನೆಯ ಅವಕಾಶ

ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.

ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.

ಭಾಗ – ೨


ಬೆಳಿಗ್ಗೆ ಏಳು ಗಂಟೆಗೆ ಮಳೆ ನಿಂತಿತ್ತು. ಆದರೆ ಬೆಂಗಳೂರಿನ ಆಕಾಶದಲ್ಲಿ ಮೋಡಗಳು ಇನ್ನೂ ದಟ್ಟವಾಗಿ ಹರಡಿಕೊಂಡಿದ್ದವು. ರಸ್ತೆಯ ಮೇಲಿದ್ದ ನೀರು ವಾಹನಗಳ ಚಕ್ರಗಳಿಗೆ ಸಿಲುಕಿ ಚಿಮ್ಮುತ್ತಿತ್ತು. ಅಪಾರ್ಟ್ಮೆಂಟ್‌ನ ಕೆಳಗಿದ್ದ ಚಹಾ ಅಂಗಡಿಯ ಬಳಿ ಜನರು ದಿನದ ಮೊದಲ ಚಹಾ ಕುಡಿಯುತ್ತಾ ಪತ್ರಿಕೆಗಳ ಸುದ್ದಿಗಳ ಬಗ್ಗೆ ಚರ್ಚಿಸುತ್ತಿದ್ದರು. ನಗರ ಎಂದಿನ೦ತೆ ತನ್ನ ವೇಗವನ್ನು ಪಡೆದುಕೊಳ್ಳುತ್ತಿತ್ತು.

ಈಶಾನ್ ಮಾತ್ರ ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆದಿದ್ದ. ಅವನ ಕಣ್ಣುಗಳು ಕೆಂಪಾಗಿದ್ದವು. ತಲೆಯ ಹಿಂಭಾಗದಲ್ಲಿ ಮಂದವಾದ ನೋವಿತ್ತು. ಬೆಳಗಿನ ಜಾವ ಬರೆದ ದಿನಚರಿಯ ಪುಟವನ್ನು ಮತ್ತೆ ತೆರೆದು ನೋಡಿದ. ಅದರಲ್ಲಿದ್ದ ಎರಡು ಸಾಲುಗಳು ಅವನಿಗೆ ಅಪರಿಚಿತ ವ್ಯಕ್ತಿಯೊಬ್ಬ ಬರೆದ ಮಾತುಗಳಂತೆ ಕಂಡವು.

ನನಗೆ ಮತ್ತೆ ಬರೆಯಲು ಸಾಧ್ಯವಾಗಬಹುದು. ಅದರ ಕೆಳಗೆ ಖಾಲಿ ಜಾಗವಿತ್ತು. ಆದರೆ ಆ ಖಾಲಿ ಜಾಗವೇ ಅವನನ್ನು ಹೆಚ್ಚು ಕಾಡುತ್ತಿತ್ತು. ಹಿಂದಿನ ರಾತ್ರಿ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಂಡ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದರೆ ಏನಾಗುತ್ತಿತ್ತು? ಮ್ಯೂಸ್ ನಿಜವಾಗಿಯೂ ತನ್ನ ಬಗ್ಗೆ ಏನಾದರೂ ತಿಳಿದಿತ್ತೇ? ಅಥವಾ ತಾನು ನಿದ್ರೆಯ ಕೊರತೆಯಿಂದ ಅರ್ಥವಿಲ್ಲದ ಸಂಗತಿಗಳನ್ನು ಕಲ್ಪಿಸಿಕೊಳ್ಳುತ್ತಿದ್ದನೇ? ಅವನು ದಿನಚರಿಯನ್ನು ಮುಚ್ಚಿ ಮೇಜಿನ ಡ್ರಾಯರ್‌ನಲ್ಲಿ ಇಟ್ಟ. ಆಗ ಮೊಬೈಲ್ ರಿಂಗಣಿಸಿತು. ಮೀರಾಳ ಕರೆ. ಕರೆ ಸ್ವೀಕರಿಸಲು ಕೆಲವು ಕ್ಷಣ ಹಿಂಜರಿದ. ನಂತರ ಉತ್ತರಿಸಿದ.
“ಹಲೋ.” ಎಂದ.

“ಈಶಾನ್, ಎದ್ದಿದ್ದೀಯಾ?” ಮೀರಾ ಪ್ರಶ್ನಿಸಿದಳು.
“ಮನೇಲಿದ್ದೇನೆ” ಈಶಾನ್ ಹೇಳಿದ.
“ನಿನ್ನ ಧ್ವನಿ ಕೇಳಿದರೆ ಹಾಗೆ ಅನಿಸುತ್ತಿಲ್ಲ. ರಾತ್ರಿ ನಿದ್ದೆ ಮಾಡಲಿಲ್ಲವೇ?” ಅನುಮಾನ ವ್ಯಕ್ತಪಡಿಸಿದಳು ಮೀರಾ.
“ಸ್ವಲ್ಪ ಕೆಲಸವಿತ್ತು. ಹಾಗಾಗಿ ಮಲಗೋದು ಲೇಟಾಯ್ತು” ಎಂದ ಈಶಾನ್.
“ಕೆಲಸವಿತ್ತು ಎನ್ನುವುದನ್ನು ಕೇಳಿ ಸಂತೋಷವಾಯಿತು. ಕನಿಷ್ಠ ಕೆಲಸದ ಬಗ್ಗೆ ಮಾತನಾಡಬಹುದಾದ ಸ್ಥಿತಿಯಲ್ಲಿದ್ದೀಯ ತಾನೆ. ಮಧ್ಯಾಹ್ನ ಹನ್ನೆರಡು ಗಂಟೆಗೆ ಪ್ರಕಾಶನ ಸಂಸ್ಥೆಗೆ ಬರಲು ಸಾಧ್ಯವೇ?” ಎಂದಳು ಮೀರಾ.
ಈಶಾನ್ ಕಿಟಕಿಯ ಹೊರಗೆ ನೋಡುತ್ತಾ “ಯಾಕೆ?” ಎಂದ.
“ನಮ್ಮ ಹೊಸ ಯೋಜನೆಯ ಬಗ್ಗೆ ಮಾತನಾಡಬೇಕು. ನಿನ್ನ ಕಾದಂಬರಿಯ ಹಸ್ತಪ್ರತಿ ಯಾವ ಹಂತದಲ್ಲಿದೆ ಎಂಬುದನ್ನು ನೇರವಾಗಿ ತಿಳಿದುಕೊಳ್ಳಬೇಕಿದೆ.” ಎಂದಳು.
ಅವನಿಗೆ ತಕ್ಷಣ ಉತ್ತರ ಹೊಳೆಯಲಿಲ್ಲ. “ನಾನು ಬರಲು ಪ್ರಯತ್ನಿಸುತ್ತೇನೆ.” ಎಂದ.
“ಪ್ರಯತ್ನ ಬೇಡ, ಈಶಾನ್. ತಪ್ಪದೇ ಬಾ. ಹನ್ನೆರಡು ಗಂಟೆಗೆ ಬಂದರೆ ಸಾಕು. ಈ ಬಾರಿ ನಾನು ನಿನಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬೇಕಿದೆ.” ಎಂದು ಹೇಳಿ ಮೀರಾ ಕರೆ ಕಡಿತಗೊಳಿಸಿದಳು.
ಈಶಾನ್ ಮೊಬೈಲ್‌ನ್ನು ಮೇಜಿನ ಮೇಲಿಟ್ಟ. ಅವನಿಗೆ ಮೀರಾಳ ಮಾತುಗಳ ಅರ್ಥ ತಿಳಿದಿತ್ತು. ಅವಳು ಇನ್ನೂ ತನ್ನನ್ನು ನಂಬುತ್ತಿದ್ದಳು. ಆದರೆ ಆ ನಂಬಿಕೆ ಈಗ ಅಂತ್ಯಗೊಳ್ಳುವ ಹಂತದಲ್ಲಿತ್ತು. ಹಿಂದಿನ ಮೂರು ಕಾದಂಬರಿಗಳ ಪ್ರಕಟಣೆಯಲ್ಲಿ ಮೀರಾಳ ಪಾತ್ರ ದೊಡ್ಡದಾಗಿತ್ತು. ಮೊದಲ ಕಾದಂಬರಿಯ ಹಸ್ತಪ್ರತಿಯನ್ನು ಅವಳು ಸಂಪಾದಿಸಿದಾಗ ಈಶಾನ್ ಹೊಸಬನಾಗಿದ್ದ. ಅವನ ಬರವಣಿಗೆಯಲ್ಲಿ ಸಾಮರ್ಥ್ಯವಿದ್ದರೂ ಕಥೆಯನ್ನು ಕಟ್ಟುವ ವಿಧಾನದಲ್ಲಿ ಅನೇಕ ದೋಷಗಳಿದ್ದವು. ಅವಳು ಅವನಿಗೆ ತಿದ್ದುವಂತೆ ಹೇಳಿದ್ದಳು. ಕೆಲವೊಮ್ಮೆ ಕಠಿಣವಾಗಿ ಟೀಕಿಸಿದ್ದಳು. ಆದರೆ ಅವನೊಳಗಿನ ಬರಹಗಾರನನ್ನು ಗುರುತಿಸಿದ್ದಳು.

ಎರಡನೆಯ ಕಾದಂಬರಿಯ ಯಶಸ್ಸಿನ ನಂತರವೂ ಅವಳು ಅವನಿಗೆ ಒಂದು ಮಾತು ಹೇಳಿದ್ದಳು. “ನಿನ್ನ ಯಶಸ್ಸನ್ನು ನಿನ್ನ ವಿರುದ್ಧವೇ ಬಳಸಿಕೊಳ್ಳಬೇಡ. ಓದುಗರು ನಿನ್ನಿಂದ ಉತ್ತಮವಾದದ್ದನ್ನು ನಿರೀಕ್ಷಿಸುತ್ತಾರೆ ಎಂಬ ಕಾರಣಕ್ಕೆ ಪ್ರತಿಯೊಂದು ಪುಸ್ತಕವೂ ಹಿಂದಿನದಕ್ಕಿ೦ತ ದೊಡ್ಡದಾಗಿರಬೇಕೆಂದಿಲ್ಲ. ನೀನು ಸತ್ಯವಾಗಿ ಬರೆಯುವುದನ್ನು ನಿಲ್ಲಿಸಬೇಡ.” ಎಂದಿದ್ದಳು. ಆ ಮಾತು ಆಗ ಅವನಿಗೆ ಬಹಳ ಇಷ್ಟವಾಗಿತ್ತು. ಈಗ ಅದೇ ಮಾತು ಅವನಿಗೆ ಒತ್ತಡವಾಗಿ ಕೇಳಿಸುತ್ತಿತ್ತು.

ಬೆಳಿಗ್ಗೆ ಒಂಬತ್ತು ಗಂಟೆಗೆ ಸಾರಾ ಬಂದಳು. ಅವಳು ಬಾಗಿಲು ತೆರೆದು ಒಳಬಂದಾಗ ಈಶಾನ್ ಅಡುಗೆಮನೆಯ ಬಳಿ ನಿಂತಿದ್ದ. ಎರಡು ದಿನಗಳಿಂದ ಅವಳು ಅವನನ್ನು ಸರಿಯಾಗಿ ನೋಡಿರಲಿಲ್ಲ. ಅವನ ಮುಖದಲ್ಲಿ ನಿದ್ರಾಹೀನತೆಯ ಗುರುತುಗಳನ್ನು ಕಂಡಾಗ ಅವಳ ಕಣ್ಣುಗಳಲ್ಲಿ ಕಳವಳ ಮೂಡಿತು.
“ನೀನು ಮಲಗಿದ್ದೀಯಾ?” ಅನುಮಾನದಿಂದ ಕೇಳಿದಳು.
“ಹೌದು.” ಎನ್ನುತ್ತಾ ತಲೆಯಾಡಿಸಿದ.
“ಎಷ್ಟು ಹೊತ್ತು?” ಮತ್ತೊಂದು ಪ್ರಶ್ನೆ ಕೇಳಿದಳು.
“ಸಾರಾ, ದಯವಿಟ್ಟು ಬೆಳಿಗ್ಗೆ ಬೆಳಿಗ್ಗೆ ವಿಚಾರಣೆ ಆರಂಭಿಸಬೇಡ.” ಒಮ್ಮೆಲೇ ಸಿಟ್ಟಿಗೆದ್ದಿದ್ದ. ಅವಳು ಉತ್ತರಿಸಲಿಲ್ಲ. ಅಡುಗೆಮನೆಯ ಮೇಜಿನ ಮೇಲಿದ್ದ ಖಾಲಿ ಕಾಫಿ ಕಪ್‌ಗಳನ್ನು ಎಣಿಸಿದಳು. ನಂತರ ಕಸದ ಬುಟ್ಟಿಯಲ್ಲಿದ್ದ ಕಾಫಿ ಪ್ಯಾಕೆಟ್‌ಗಳನ್ನು ಗಮನಿಸಿದಳು.
“ನಿನ್ನೆ ಮತ್ತೆ ಊಟ ಮಾಡಿಲ್ಲವೇ?” ಎಂದಳು.
“ಮಾಡಿದ್ದೇನೆ.” ಎಂದಷ್ಟೇ ಹೇಳಿದ.
“ಏನು ತಿಂದೆ?” ಎನ್ನುವ ಪ್ರಶ್ನೆಗೆ ಈಶಾನ್ ಮೌನವಾಗಿದ್ದ. ಸಾರಾ ದೀರ್ಘವಾಗಿ ಉಸಿರೆಳೆದಳು.
“ನಿನಗೆ ಗೊತ್ತೇ, ನಾನು ನಿನ್ನನ್ನು ಬದಲಾಯಿಸಲು ಪ್ರಯತ್ನಿಸುತ್ತಿಲ್ಲ. ನೀನು ಬರೆಯಬೇಕು ಎನ್ನುವುದು ನನಗೂ ಇಷ್ಟ. ನೀನು ಮತ್ತೆ ಸಂತೋಷವಾಗಿರಬೇಕು ಎನ್ನುವುದಷ್ಟೇ ನನ್ನ ಆಸೆ.” ತನ್ನ ಮನದ ಇಂಗಿತವನ್ನು ಹೇಳಿದ್ದಳು.
ಅದಕ್ಕೆ ಪ್ರತ್ಯುತ್ತರವಾಗಿ “ನಾನು ಸಂತೋಷವಾಗಿದ್ದೇನೆ.” ಎಂದಿದ್ದ.
“ನಿಜವಾಗಿಯೂ?” ಕೆಣಕಿದಳು.
ಅವನು ಅವಳನ್ನು ನೋಡಿದ. ಆ ಪ್ರಶ್ನೆಗೆ ಉತ್ತರಿಸುವುದು ಅವನಿಗೆ ಕಷ್ಟವಾಯಿತು. ಸಾರಾ ಅವನಿಗೆ ಆರು ವರ್ಷಗಳಿಂದ ಪರಿಚಿತಳು. ಮೊದಲಿಗೆ ಸ್ನೇಹಿತರಾಗಿದ್ದರು. ನಂತರ ಅವರ ಸಂಬAಧ ಪ್ರೀತಿಯಾಗಿ ಬದಲಾಗಿತ್ತು. ಈಶಾನ್‌ನ ಯಶಸ್ಸಿನ ಆರಂಭದ ದಿನಗಳನ್ನು ಅವಳು ನೋಡಿದ್ದಳು. ಅವನ ಮೊದಲ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯ ಮುಂದೆ ಕುಳಿತು ಚಪ್ಪಾಳೆ ತಟ್ಟಿದ್ದಳು. ಅವನಿಗೆ ಪ್ರಶಸ್ತಿ ಬಂದಾಗ ಅವನಿಗಿಂತ ಹೆಚ್ಚು ಸಂತೋಷಪಟ್ಟಿದ್ದಳು.
ಅದೇ ಸಮಯದಲ್ಲಿ, ವಿಫಲತೆಯನ್ನು ಎದುರಿಸುವಾಗ ಅವನು ಹೇಗೆ ಬದಲಾಗುತ್ತಾನೆ ಎಂಬುದನ್ನೂ ಅವಳು ತಿಳಿದಿದ್ದಳು. ಅವನು ಯಾರೊಂದಿಗೂ ತನ್ನ ದುರ್ಬಲತೆಯನ್ನು ಹಂಚಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸುವ ಬದಲು ತನ್ನೊಳಗೆ ಮುಚ್ಚಿಕೊಳ್ಳುತ್ತಿದ್ದ. ಈ ಬಾರಿ ಮಾತ್ರ ಪರಿಸ್ಥಿತಿ ಬೇರೆ ರೀತಿಯಲ್ಲಿತ್ತು.
“ನಿನ್ನೆ ರಾತ್ರಿ ನಿನಗೆ ಏನಾಯಿತು?” ಸಾರಾ ಕೇಳಿದಳು.
ಈಶಾನ್ ಬೆಚ್ಚಿಬಿದ್ದ. “ಏನೂ ಆಗಲಿಲ್ಲ.”
“ನಾನು ರಾತ್ರಿ ಹನ್ನೊಂದು ಗಂಟೆಗೆ ಕರೆ ಮಾಡಿದ್ದೆ. ನೀನು ಉತ್ತರಿಸಲಿಲ್ಲ. ನಂತರ ಹನ್ನೆರಡು ಗಂಟೆಗೆ ಸಂದೇಶ ಕಳುಹಿಸಿದೆ. ಅದಕ್ಕೂ ಉತ್ತರ ಇರಲಿಲ್ಲ. ಬೆಳಿಗ್ಗೆ ಐದು ಗಂಟೆಗೆ ಮಾತ್ರ ನಿನ್ನಿಂದ ಒಂದು ಸಂದೇಶ ಬಂತು.”
“ಯಾವ ಸಂದೇಶ?” ಎಂದ.
ಸಾರಾ ಮೊಬೈಲ್ ತೆಗೆದು ಅವನಿಗೆ ತೋರಿಸಿದಳು. ಅದರಲ್ಲಿದ್ದ ಸಂದೇಶವನ್ನು ಓದಿದಾಗ ಅವನಿಗೆ ಒಂದು ಕ್ಷಣ ಉಸಿರು ನಿಂತAತಾಯ್ತು.
“ನಾನು ಈಗ ಬರೆಯುತ್ತಿದ್ದೇನೆ. ದಯವಿಟ್ಟು ನಾಳೆ ನನ್ನನ್ನು ತಡೆಯಬೇಡ.”
ಅವನು ಆ ಸಂದೇಶವನ್ನು ಕಳುಹಿಸಿದ ನೆನಪೇ ಇರಲಿಲ್ಲ. “ನಾನು ಇದನ್ನು ಕಳುಹಿಸಿದ್ದೇನಾ?”
ಸಾರಾ ಅವನ ಮುಖವನ್ನೇ ನೋಡುತ್ತಾ “ನೀನೇ ಕಳುಹಿಸಿದ್ದೆ.” ಎಂದಳು.
“ಬಹುಶಃ ನಿದ್ದೆಗಣ್ಣಿನಲ್ಲಿದ್ದಾಗ ಕಳಿಸಿರಬೇಕು” ಎಂದ.
“ಈಶಾನ್, ನೀನು ನಿನ್ನನ್ನು ಸಮರ್ಥಿಸಿಕೊಳ್ಳಲು ಪ್ರತಿಯೊಂದು ವಿಷಯಕ್ಕೂ ಒಂದು ಕಾರಣ ಹುಡುಕುತ್ತಿದ್ದೀಯ. ನನಗೆ ಅದಕ್ಕಿಂತ ಹೆಚ್ಚು ಚಿಂತೆ ಆಗುತ್ತಿರುವುದು ನಿನ್ನ ನೆನಪುಗಳ ಬಗ್ಗೆ.”
ಅವನು ಮೊಬೈಲ್ ಹಿಂತಿರುಗಿಸಿದ. “ನಾನು ಸರಿಯಾಗಿದ್ದೇನೆ. ನನಗೇನಾಗಿದೆ?”
ಸಾರಾ ಅವನ ಹತ್ತಿರ ಬಂದು ನಿಂತಳು. “ನೀನು ನನಗೆ ಏನನ್ನಾದರೂ ಹೇಳಬೇಕಿದ್ದರೆ ಹೇಳು. ನಿನ್ನ ಬರವಣಿಗೆಯಲ್ಲಿ ಏನಾದರೂ ಬದಲಾವಣೆ ಆಗಿದ್ದರೆ ಹೇಳು. ಯಾರಾದರೂ ನಿನಗೆ ತೊಂದರೆ ಕೊಡುತ್ತಿದ್ದರೆ ಹೇಳು. ಆದರೆ ನನ್ನಿಂದ ವಿಷಯಗಳನ್ನು ಮುಚ್ಚಿಡಬೇಡ.”
ಒಂದು ಕ್ಷಣ ಈಶಾನ್‌ಗೆ ಹಿಂದಿನ ರಾತ್ರಿ ನಡೆದದ್ದನ್ನೆಲ್ಲ ಹೇಳಬೇಕೆನಿಸಿತು. ಮ್ಯೂಸ್‌ನ ಜಾಹೀರಾತು, ಅದರ ಪ್ರಶ್ನೆಗಳು, ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಂಡ ಸಂದೇಶಗಳು ಎಲ್ಲವನ್ನೂ ಹೇಳಬೇಕೆನಿಸಿತು. ಆದರೆ ಹೇಳಿದರೆ ಸಾರಾ ಏನೆಂದುಕೊಳ್ಳುವಳೋ? ತಾನು ಮಾನಸಿಕವಾಗಿ ಕುಸಿಯುತ್ತಿದ್ದೇನೆ ಎಂದುಕೊಳ್ಳಬಹುದು. ವೈದ್ಯರನ್ನು ಭೇಟಿಯಾಗುವಂತೆ ಒತ್ತಾಯಿಸಬಹುದು. ಮ್ಯೂಸ್‌ನ ಪ್ರಯೋಗವನ್ನೇ ನಿಲ್ಲಿಸುವಂತೆ ಹೇಳಬಹುದು. ಅವನು ಇನ್ನೂ ಆ ಅವಕಾಶವನ್ನು ಕಳೆದುಕೊಳ್ಳಲು ಸಿದ್ಧನಿರಲಿಲ್ಲ.
“ನನಗೆ ಒಂದು ಹೊಸ ಬರವಣಿಗೆಯ ವಿಧಾನ ಸಿಕ್ಕಿರಬಹುದು,” ಎಂದ.
ಸಾರಾ ಅವನ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಾ “ಯಾವ ವಿಧಾನ?” ಎಂದಳು.
“ಒಂದು ತಂತ್ರಾAಶ. ಕೃತಕ ಬುದ್ಧಿಮತ್ತೆಯ ಸಹಾಯಕ. ಅದು ಬರೆಯಲು ನೆರವಾಗಬಹುದು.” ಎಂದನು.
“ನೀನು ಅದನ್ನು ಬಳಸಲು ಆರಂಭಿಸಿದ್ದೀಯಾ?” ಕೇಳಿದಳು.
“ಇನ್ನೂ ಇಲ್ಲ. ಅರ್ಜಿ ಸಲ್ಲಿಸಿದ್ದೇನೆ.” ಎಂದಿದ್ದ.
ಸಾರಾ ಸ್ವಲ್ಪ ಹೊತ್ತು ಮೌನವಾಗಿದ್ದಳು. “ಸರಿ. ಆದರೆ ಒಂದು ಮಾತು ನೆನಪಿಟ್ಟುಕೋ. ನಿನಗೆ ಬರೆಯಲು ನೆರವಾಗುವ ಸಾಧನ ಬೇಕು. ನಿನ್ನ ಪರವಾಗಿ ನಿನ್ನ ಬದುಕನ್ನು ನಡೆಸುವ ಸಾಧನವಲ್ಲ ಅಲ್ಲವೇ?” ಆ ಮಾತು ಈಶಾನ್‌ನ ಮನಸ್ಸಿನಲ್ಲಿ ಉಳಿಯಿತು. ಆದರೆ ಅವನು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಹನ್ನೊಂದು ಗಂಟೆಗೆ ಈಶಾನ್ ಮನೆಯಿಂದ ಹೊರಟ. ಬೆಂಗಳೂರಿನ ಸಂಚಾರ ದಟ್ಟವಾಗಿತ್ತು. ಕ್ಯಾಬ್ ನಿಧಾನವಾಗಿ ಸಾಗುತ್ತಿತ್ತು. ರಸ್ತೆಯ ಎರಡೂ ಬದಿಗಳಲ್ಲಿದ್ದ ಕಟ್ಟಡಗಳು, ಜಾಹೀರಾತು ಫಲಕಗಳು, ಅಂಗಡಿಗಳು ಮತ್ತು ವಾಹನಗಳ ನಡುವೆ ಅವನು ಕಿಟಕಿಯಿಂದ ಹೊರಗೆ ನೋಡುತ್ತ ಕುಳಿತಿದ್ದ. ಅವನ ಮೊಬೈಲ್‌ನಲ್ಲಿ ಮೀರಾಳಿಂದ ಮತ್ತೊಂದು ಸಂದೇಶ ಬಂದಿತ್ತು. “ಸಭೆಗೆ ಸಮಯಕ್ಕೆ ಸರಿಯಾಗಿ ಬಾ. ಪ್ರಕಾಶಕರೂ ಇರುತ್ತಾರೆ.”
ಈಶಾನ್ ಸಂದೇಶವನ್ನು ಓದಿ ಮೊಬೈಲ್‌ನ್ನು ಜೇಬಿನಲ್ಲಿಟ್ಟ. ಅವನಿಗೆ ಪ್ರಕಾಶಕರನ್ನು ಎದುರಿಸುವುದು ಇಷ್ಟವಿರಲಿಲ್ಲ. ಅವರು ಹಣದ ಬಗ್ಗೆ ಮಾತನಾಡುತ್ತಿದ್ದರು. ಪ್ರಕಟಣೆಯ ವೇಳಾಪಟ್ಟಿಯ ಬಗ್ಗೆ ಮಾತನಾಡುತ್ತಿದ್ದರು. ಮಾರುಕಟ್ಟೆಯಲ್ಲಿ ಯಾವ ರೀತಿಯ ಕಥೆಗಳಿಗೆ ಬೇಡಿಕೆಯಿದೆ ಎಂಬುದನ್ನು ವಿವರಿಸುತ್ತಿದ್ದರು. ಆದರೆ ಒಬ್ಬ ಬರಹಗಾರನಿಗೆ ಕಥೆ ಬರೆಯಲು ಸಾಧ್ಯವಾಗದಿದ್ದಾಗ, ಇವೆಲ್ಲವೂ ಅರ್ಥಹೀನವಾಗುತ್ತವೆ. ಕ್ಯಾಬ್ ಒಂದು ಸಿಗ್ನಲ್‌ನಲ್ಲಿ ನಿಂತಿತು.
ರಸ್ತೆಯ ಬದಿಯಲ್ಲಿ ಚಿಕ್ಕ ಹುಡುಗನೊಬ್ಬ ಹೂವುಗಳನ್ನು ಮಾರುತ್ತಿದ್ದ. ಅವನ ವಯಸ್ಸು ಹತ್ತು ಅಥವಾ ಹನ್ನೊಂದು ಇರಬಹುದು. ವಾಹನಗಳು ನಿಂತಿದ್ದಾಗ ಅವನು ಕಿಟಕಿಗಳ ಬಳಿ ಹೋಗಿ ಹೂವುಗಳನ್ನು ತೋರಿಸುತ್ತಿದ್ದ. ಕೆಲವರು ನಿರ್ಲಕ್ಷಿಸುತ್ತಿದ್ದರು. ಕೆಲವರು ಕೈಬೀಸಿ ಬೇಡವೆಂದು ಸೂಚಿಸುತ್ತಿದ್ದರು.

ಈಶಾನ್ ಆ ಹುಡುಗನನ್ನು ನೋಡುತ್ತ ಕುಳಿತ. ಹುಡುಗನ ಮುಖದಲ್ಲಿ ನಿರಾಸೆ ಇರಲಿಲ್ಲ. ಒಂದು ಕಾರಿನ ಚಾಲಕ ಹೂವುಗಳನ್ನು ಖರೀದಿಸಿದಾಗ ಅವನು ನಕ್ಕ. ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಮುಂದಿನ ವಾಹನದ ಕಡೆಗೆ ಓಡಿದ. ಸಿಗ್ನಲ್ ಹಸಿರಾಯಿತು. ಕ್ಯಾಬ್ ಮುಂದಕ್ಕೆ ಚಲಿಸಿತು. ಅದನ್ನು ನೋಡಿ ಈಶಾನ್‌ಗೆ ತನ್ನ ಬಾಲ್ಯ ನೆನಪಾಯಿತು. ಅವನು ಬರೆಯಲು ಆರಂಭಿಸಿದಾಗ ಅವನ ಬಳಿ ದುಬಾರಿ ಕಂಪ್ಯೂಟರ್ ಇರಲಿಲ್ಲ. ಒಂದು ನೋಟ್ಬುಕ್ ಮತ್ತು ಎರಡು ಪೆನ್ನುಗಳಿದ್ದವು. ತನ್ನ ಕಥೆಗಳನ್ನು ಯಾರೂ ಓದದಿದ್ದರೂ ಅವನು ಬರೆಯುತ್ತಿದ್ದ. ಯಾರಾದರೂ ಹೊಗಳಲಿ ಎಂಬ ನಿರೀಕ್ಷೆಯೂ ಇರಲಿಲ್ಲ. ಆಗ ಬರವಣಿಗೆ ಅವನಿಗೆ ಸಂತೋಷ ನೀಡುತ್ತಿತ್ತು. ಈಗ ಅದೇ ಬರವಣಿಗೆ ತನ್ನ ಮೌಲ್ಯವನ್ನು ಸಾಬೀತುಪಡಿಸುವ ಪರೀಕ್ಷೆಯಾಗಿ ಬದಲಾಗಿತ್ತು.
ಅವನೊಳಗೆ ಒಂದು ಪ್ರಶ್ನೆ ಮೂಡಿತು. ನಾನು ಮತ್ತೆ ಬರೆಯಲು ಬಯಸುತ್ತೇನೆಯೇ, ಅಥವಾ ಬರೆಯಬಲ್ಲವನು ಎಂಬ ಹೆಸರನ್ನು ಕಳೆದುಕೊಳ್ಳಲು ಹೆದರುತ್ತಿದ್ದೇನೆಯೇ? ಅವನು ಉತ್ತರ ಹುಡುಕುವಷ್ಟರಲ್ಲಿ ಕ್ಯಾಬ್ ಪ್ರಕಾಶನ ಸಂಸ್ಥೆಯ ಕಟ್ಟಡದ ಮುಂದೆ ನಿಂತಿತು.

ಮೀರಾ ಹತ್ತನೇ ಮಹಡಿಯಲ್ಲಿದ್ದ ತನ್ನ ಕಚೇರಿಯಲ್ಲಿ ಕಾಯುತ್ತಿದ್ದಳು. ಅವಳ ಮೇಜಿನ ಮೇಲೆ ಹಸ್ತಪ್ರತಿಗಳ ರಾಶಿ, ಕೆಲವು ಪುಸ್ತಕಗಳು ಮತ್ತು ಲ್ಯಾಪ್ಟಾಪ್ ಇದ್ದವು. ಗೋಡೆಯ ಮೇಲಿದ್ದ ಪುಸ್ತಕದ ಕಪಾಟಿನಲ್ಲಿ ಹೊಸ ಲೇಖಕರ ಕೃತಿಗಳು ಸಾಲಾಗಿ ಜೋಡಿಸಲ್ಪಟ್ಟಿದ್ದವು. ಕಚೇರಿಯ ಗಾಜಿನ ಕಿಟಕಿಯಿಂದ ನಗರದ ಒಂದು ಭಾಗ ಕಾಣಿಸುತ್ತಿತ್ತು.

ಈಶಾನ್ ಒಳಗೆ ಬಂದಾಗ ಮೀರಾ ಎದ್ದು ನಿಂತಳು. “ಬಂದಿದ್ದಕ್ಕೆ ಧನ್ಯವಾದ.” ಎಂದಳು. ಅವಳ ಧ್ವನಿಯಲ್ಲಿ ಆತ್ಮೀಯತೆ ಇತ್ತು. ಆದರೆ ಮುಖದಲ್ಲಿ ಗಂಭೀರತೆ ಕಾಣಿಸುತ್ತಿತ್ತು. ಸಭಾಕೋಣೆಯಲ್ಲಿ ಪ್ರಕಾಶನ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಕುಳಿತಿದ್ದ. ಅವರು ಐವತ್ತರ ಆಸುಪಾಸಿನ ವ್ಯಕ್ತಿ. ವ್ಯವಹಾರದಲ್ಲಿ ಮಾತ್ರ ನೇರ ನೇರ. ಪುಸ್ತಕಗಳ ಸಾಹಿತ್ಯಿಕ ಮೌಲ್ಯವನ್ನು ಗೌರವಿಸುತ್ತಿದ್ದರೂ ಪ್ರಕಾಶನ ಸಂಸ್ಥೆಯ ಆರ್ಥಿಕ ಸ್ಥಿತಿಯ ಬಗ್ಗೆ ಸದಾ ಎಚ್ಚರಿಕೆಯಿಂದಿರುತ್ತಿದ್ದರು.

ಈಶಾನ್ ಅವರನ್ನು ಅಭಿನಂದಿಸಿ ಕುಳಿತ. ರಾಘವೇಂದ್ರ ಯಾವುದೇ ಮುನ್ನುಡಿಯಿಲ್ಲದೆ ಮಾತು ಆರಂಭಿಸಿದರು. “ಈಶಾನ್, ನಿನ್ನ ಮೊದಲ ಎರಡು ಪುಸ್ತಕಗಳು ನಮಗೆ ಉತ್ತಮ ಯಶಸ್ಸು ತಂದುಕೊಟ್ಟವು. ಮೂರನೆಯ ಪುಸ್ತಕವೂ ಚೆನ್ನಾಗಿ ಮಾರಾಟವಾಯಿತು. ಅದಕ್ಕಾಗಿಯೇ ನಾವು ನಾಲ್ಕನೆಯ ಪುಸ್ತಕಕ್ಕೆ ಮುಂಗಡ ಹಣ ನೀಡಿದೆವು. ಆದರೆ ಈಗ ಹದಿನಾರು ತಿಂಗಳುಗಳಾಗಿವೆ. ನಮಗೆ ಇನ್ನೂ ಪೂರ್ಣ ಹಸ್ತಪ್ರತಿ ಸಿಕ್ಕಿಲ್ಲ.”
ಈಶಾನ್ ತಲೆಬಾಗಿದ. “ನನಗೆ ಗೊತ್ತಿದೆ.”

“ನಿನಗೆ ಗೊತ್ತಿದೆ ಎಂಬುದರಿ೦ದ ಸಮಸ್ಯೆ ಪರಿಹಾರವಾಗುವುದಿಲ್ಲ. ನಮ್ಮ ಪ್ರಕಟಣೆಯ ವೇಳಾಪಟ್ಟಿ ಬದಲಾಗಿದೆ. ಪುಸ್ತಕ ಮೇಳಕ್ಕೆ ಹೊಸ ಕೃತಿಯನ್ನು ಬಿಡುಗಡೆ ಮಾಡುವ ಯೋಜನೆಯಿತ್ತು. ಅದನ್ನೂ ಮುಂದೂಡಬೇಕಾಯಿತು.”
ಮೀರಾ ಮಧ್ಯೆ ಮಾತನಾಡಿದಳು. “ರಾಘವೇಂದ್ರ ಸರ್, ಈಶಾನ್‌ಗೆ ಸ್ವಲ್ಪ ಸಮಯ ಕೊಡಿ” ಎಂದಳು.
“ಸಮಯ ಕೊಟ್ಟಿದ್ದೇವೆ, ಮೀರಾ. ಇನ್ನೂ ಕೊಡಬಹುದು. ಆದರೆ ಯಾವುದೇ ಗಡುವಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲ.” ಎನ್ನುತ್ತಾ ರಾಘವೇಂದ್ರ ಅವರು ಈಶಾನ್‌ನತ್ತ ತಿರುಗಿ “ನಿನಗೆ ಇನ್ನೂ ಮೂರು ತಿಂಗಳು ಕೊಡುತ್ತೇವೆ. ಆ ಅವಧಿಯಲ್ಲಿ ಪೂರ್ಣ ಹಸ್ತಪ್ರತಿಯ ಕನಿಷ್ಠ ಮೊದಲ ಕರಡು ಸಿದ್ಧವಾಗಬೇಕು. ಸಾಧ್ಯವಾಗದಿದ್ದರೆ ಒಪ್ಪಂದದ ಮುಂದಿನ ಹಂತವನ್ನು ಮರುಪರಿಶೀಲಿಸಬೇಕಾಗುತ್ತದೆ.” ಎಂದಿದ್ದರು.
ಮೂರು ತಿಂಗಳು. ಈಶಾನ್‌ಗೆ ಆ ಅವಧಿ ಒಂದು ಕಡೆ ಸಾಕಷ್ಟು ದೀರ್ಘವಾಗಿ, ಮತ್ತೊಂದು ಕಡೆ ಭಯ ಹುಟ್ಟಿಸುವಷ್ಟು ಚಿಕ್ಕದಾಗಿ ಕಂಡಿತು. ಅವನು ಏನೂ ಹೇಳಲಿಲ್ಲ. ಮೀರಾ ತನ್ನ ಕಡತವನ್ನು ತೆರೆದಳು.
“ನಾನು ನಿನ್ನೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಬಯಸುತ್ತೇನೆ.” ಎಂದಳು. ಸಭೆ ಮುಗಿದ ನಂತರ ಅವರು ಕಚೇರಿಯ ಇನ್ನೊಂದು ಕೋಣೆಗೆ ಹೋದರು. ಮೀರಾ ಬಾಗಿಲು ಮುಚ್ಚಿ ಕುರ್ಚಿಯಲ್ಲಿ ಕುಳಿತಳು.
“ನಿನ್ನಲ್ಲಿ ಏನಾಗುತ್ತಿದೆ, ಈಶಾನ್?” ಎಂದು ಪ್ರಶ್ನಿಸಿದಳು.
“ನಾನು ಹೇಳಿದೆನಲ್ಲ. ಬರವಣಿಗೆಯ ಅಡಚಣೆಯಾಗುತ್ತಿದೆ” ಎಂದ.
“ಅದು ಕೇವಲ ಬರವಣಿಗೆಯ ಅಡಚಣೆಯಲ್ಲ. ನಿನ್ನ ಹಿಂದಿನ ಟಿಪ್ಪಣಿಗಳನ್ನು ನೋಡಿದ್ದೇನೆ. ನೀನು ಒಂದು ಅಧ್ಯಾಯವನ್ನು ಬರೆದು, ನಂತರ ಅದನ್ನೇ ಸಂಪೂರ್ಣವಾಗಿ ಅಳಿಸಿದ್ದೀಯ. ಮತ್ತೆ ಅದೇ ಅಧ್ಯಾಯವನ್ನು ಬೇರೆ ರೀತಿಯಲ್ಲಿ ಬರೆದಿದ್ದೀಯ. ನಂತರ ಅದನ್ನೂ ಅಳಿಸಿದ್ದೀಯ.”
ಕಡತವೊಂದನ್ನು ಅವನ ಮುಂದೆ ಇಟ್ಟಳು. “ನೀನು ನಿನ್ನ ಬರವಣಿಗೆಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದೀಯ. ಪ್ರತಿ ವಾಕ್ಯವೂ ಪರಿಪೂರ್ಣವಾಗಿರಬೇಕು ಎಂದು ಬಯಸುತ್ತಿದ್ದೀಯ. ಅದು ಸಾಧ್ಯವಿಲ್ಲ.”
ಈಶಾನ್ ಆ ಕಡತವನ್ನು ಮುಟ್ಟಲಿಲ್ಲ. “ನಾನು ಮತ್ತೆ ಬರೆಯಬಲ್ಲೆ.” ಎಂದಷ್ಟೇ ಹೇಳಿದ.
“ನನಗೆ ನಂಬಿಕೆಯಿದೆ. ಆದರೆ ಅದಕ್ಕಾಗಿ ಮೊದಲು ನಿನ್ನನ್ನು ನೀನೇ ಕ್ಷಮಿಸಿಕೊಳ್ಳಬೇಕು. ಹಿಂದಿನ ಪುಸ್ತಕಗಳ ಮಟ್ಟವನ್ನು ತಲುಪಲೇಬೇಕು ಎಂಬ ಒತ್ತಡದಿಂದ ಹೊರಬರಬೇಕು.” ಎಂದಿದ್ದಳು.
ಈಶಾನ್‌ಮ ಮನಸ್ಸಿನಲ್ಲಿ ಮ್ಯೂಸ್‌ನ ಸಂದೇಶ ಮೂಡಿತು. ನಿಮ್ಮ ಸಮಸ್ಯೆ ಕಲ್ಪನೆಯ ಕೊರತೆಯಲ್ಲ. ಮೀರಾಳ ಮಾತುಗಳಿಗೂ ಆ ಸಂದೇಶಕ್ಕೂ ವಿಚಿತ್ರವಾದ ಸಾಮ್ಯವಿತ್ತು. ಆದರೆ ಮ್ಯೂಸ್ ಅವನ ಸಮಸ್ಯೆಯನ್ನು ಹೆಚ್ಚು ನಿಖರವಾಗಿ ಗುರುತಿಸಿದಂತೆ ಅನಿಸಿತ್ತು.
ಅವನು ತನ್ನೊಳಗೆ ನಕ್ಕ. “ನೀನು ಒಂದು ವಿಷಯ ಹೇಳಿದ್ದೀಯ, ಮೀರಾ. ನಾನು ಪರಿಪೂರ್ಣವಾಗಿ ಬರೆಯಬೇಕೆಂದು ಬಯಸುತ್ತೇನೆ ಎಂಬುದು ನಿಜ. ಆದರೆ ಬಹುಶಃ ನನಗೆ ಒಂದು ಹೊಸ ವಿಧಾನ ಬೇಕಿರಬಹುದು. ಅದು ಬರವಣಿಗೆಯನ್ನು ಬೇರೆ ರೀತಿಯಲ್ಲಿ ನೋಡುವ ವಿಧಾನ.” ಎಂದ.
“ಯಾವ ವಿಧಾನ?”
“ಕೃತಕ ಬುದ್ಧಿಮತ್ತೆಯ ಸಹಾಯ.”
ಮೀರಾ ಕೆಲವು ಕ್ಷಣ ಅವನನ್ನೇ ನೋಡಿದಳು. “ಎಐ ಬರವಣಿಗೆಯ ಸಾಧನವೇ?”
“ಹೌದು. ಇನ್ನೂ ಪ್ರಯೋಗದ ಹಂತದಲ್ಲಿದೆ. ಆದರೆ ಅದು ಬರವಣಿಗೆಯ ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು.”
ಮೀರಾ ತಕ್ಷಣ ವಿರೋಧಿಸಲಿಲ್ಲ. “ಸಾಧನವನ್ನು ಬಳಸುವುದರಲ್ಲಿ ತಪ್ಪಿಲ್ಲ. ಆದರೆ ಅದು ನಿನ್ನ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದರೆ? ನಿನ್ನದೇ ಧ್ವನಿ ಕಳೆದುಹೋದರೆ? ಆಗ ಏನು ಮಾಡುವೆ? ಪ್ರಶ್ನಿಸಿದಳು.
ಈಶಾನ್‌ಗೆ ಸಾರಾ ಹೇಳಿದ್ದ ಮಾತು ನೆನಪಾಯಿತು. “ನನಗೆ ಅದರ ಅರಿವಿದೆ.” ಎಂದ.
“ನಿಜವಾಗಿಯೂ ಇದೆಯೇ?” ಮತ್ತೊಮ್ಮೆ ಪ್ರಶ್ನಿಸಿದಳು.
ಅವನು ಉತ್ತರಿಸಲಿಲ್ಲ. ಮೀರಾ ಅವನ ಭುಜದ ಮೇಲೆ ಕೈ ಇಟ್ಟು, “ನೀನು ಬರೆಯುವ ಕಥೆಗಳು ನಿನ್ನ ಅನುಭವಗಳಿಂದ ಬರುತ್ತವೆ. ನಿನ್ನ ದುರ್ಬಲತೆಗಳಿಂದಲೂ ಬರುತ್ತವೆ. ನಿನ್ನನ್ನು ನೋಯಿಸಿದ ಸಂಗತಿಗಳಿ೦ದ ಬರುತ್ತವೆ. ಅವುಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ಬರವಣಿಗೆಯಲ್ಲೂ ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.”
ಈಶಾನ್ ಎದ್ದು ನಿಂತ. “ನಾನು ಪ್ರಯತ್ನಿಸುತ್ತೇನೆ.”
ಮೀರಾ ಅವನನ್ನು ತಡೆಯಲಿಲ್ಲ. “ಮೂರು ತಿಂಗಳು ಈಶಾನ್. ನಿನಗೆ ಸಾಧ್ಯವಿದೆ ಎಂದು ನಾನು ಇನ್ನೂ ನಂಬಿದ್ದೇನೆ. ಆದರೆ ಈ ಬಾರಿ ನಿನಗೆ ನೀನೇ ಪ್ರಾಮಾಣಿಕನಾಗಿರು.” ಎಚ್ಚರಿಸಿದ್ದಳು.
ಅವನು ಕಚೇರಿಯಿಂದ ಹೊರಬಂದಾಗ ಅವನ ಮನಸ್ಸು ಭಾರವಾಗಿತ್ತು. ಆದರೆ ಅದೇ ಸಮಯದಲ್ಲಿ ಒಂದು ವಿಚಿತ್ರ ನಿರ್ಧಾರ ಅವನೊಳಗೆ ಗಟ್ಟಿಯಾಗತೊಡಗಿತ್ತು. ಅವನು ಮ್ಯೂಸ್ ಅನ್ನು ಪ್ರಯತ್ನಿಸಬೇಕು. ಈಗ ಹಿಂದಿರುಗಲು ಸಾಧ್ಯವಿರಲಿಲ್ಲ. ಸಂಜೆ ಮನೆಗೆ ಮರಳಿದಾಗ ಸಾರಾ ಅಲ್ಲಿರಲಿಲ್ಲ. ಮೇಜಿನ ಮೇಲೆ ಅವಳು ತಂದಿದ್ದ ಆಹಾರದ ಡಬ್ಬಿ ಇತ್ತು. ಅದರ ಮೇಲೆ ಒಂದು ಚೀಟಿ ಇಟ್ಟಿದ್ದಳು. “ಊಟ ಮಾಡು. ನಾಳೆ ನಿನ್ನೊಂದಿಗೆ ಮಾತನಾಡಬೇಕು. ದಯವಿಟ್ಟು ಫೋನ್ ಸ್ವೀಕರಿಸು.” ಈಶಾನ್ ಚೀಟಿಯನ್ನು ಓದಿ ಮೇಜಿನ ಮೇಲಿಟ್ಟ.
ಅವನು ಕಂಪ್ಯೂಟರ್ ಮುಂದೆ ಕುಳಿತ. ಹಿಂದಿನ ರಾತ್ರಿ ಸಂಭವಿಸಿದ್ದನ್ನು ನೆನಪಿಸಿಕೊಂಡು ಸ್ವಲ್ಪ ಹಿಂಜರಿದ. ಆದರೂ ಒuseಔS ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ನಿರ್ಧರಿಸಿದ. ಬ್ರೌಸರ್ ತೆರೆದ. ಜಾಹೀರಾತಿನ ಪುಟ ಮತ್ತೆ ಕಾಣಿಸಿಕೊಂಡಿತು. ಆದರೆ ಈ ಬಾರಿ ಪರದೆಯ ಮೇಲಿದ್ದ ಸಂದೇಶ ಬದಲಾಗಿತ್ತು. “ನಿಮ್ಮ ಪ್ರಾಯೋಗಿಕ ಪ್ರವೇಶಕ್ಕೆ ಅನುಮೋದನೆ ನೀಡಲಾಗಿದೆ.” ಅದರ ಕೆಳಗೆ ಒಂದು ಗುಪ್ತ ಲಿಂಕ್ ಇತ್ತು.
“ನಿಮ್ಮ ವೈಯಕ್ತಿಕ ಬರವಣಿಗೆಯನ್ನು ಆರಂಭಿಸಿ.” ಈಶಾನ್ ಆ ಲಿಂಕನ್ನು ಒತ್ತಿದ. ಹೊಸ ಪುಟ ತೆರೆದುಕೊಂಡಿತು. ಈ ಬಾರಿ ಅದರಲ್ಲಿ ಯಾವುದೇ ಜಾಹೀರಾತು ಇರಲಿಲ್ಲ. ಯಾವುದೇ ಕಂಪನಿಯ ವಿಳಾಸವಿರಲಿಲ್ಲ. ಸಂಪರ್ಕ ಸಂಖ್ಯೆಯೂ ಇರಲಿಲ್ಲ. ಪರದೆಯ ಮಧ್ಯದಲ್ಲಿ ಕಪ್ಪು ಹಿನ್ನೆಲೆಯ ಮೇಲೆ ನೀಲಿ ಬಣ್ಣದ ವೃತ್ತವೊಂದು ನಿಧಾನವಾಗಿ ತಿರುಗುತ್ತಿತ್ತು. ಅದರ ಕೆಳಗೆ ಸೂಚನೆ ಕಾಣಿಸಿಕೊಂಡಿತು.

“ನಿಮ್ಮ ನರಸಂಪರ್ಕ ಸಾಧನವನ್ನು ಸಿದ್ಧಪಡಿಸಿ.”
(ನರಸಂಪರ್ಕ ಸಾಧನ (Neural Interface Device) ನರಸಂಪರ್ಕ ಸಾಧನವೆಂದರೆ ಮಾನವನ ಮೆದುಳು ಮತ್ತು ಕಂಪ್ಯೂಟರ್ ನಡುವೆ ಮಾಹಿತಿ ವಿನಿಮಯಕ್ಕೆ ನೆರವಾಗುವ ತಂತ್ರಜ್ಞಾನ. ಮೆದುಳಿನ ನರಕೋಶಗಳು ವಿದ್ಯುತ್ ಮತ್ತು ರಾಸಾಯನಿಕ ಸಂಕೇತಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಈ ಸಾಧನದಲ್ಲಿರುವ ಸೂಕ್ಷ್ಮ ಸಂವೇದಕಗಳು ನರಚಟುವಟಿಕೆಗೆ ಸಂಬ೦ಧಿಸಿದ ಸಂಕೇತಗಳನ್ನು ದಾಖಲಿಸುತ್ತವೆ. ನಂತರ ವಿಶೇಷ ತಂತ್ರಾ೦ಶ ಮತ್ತು ಕೃತಕ ಬುದ್ಧಿಮತ್ತೆಯ ನೆರವಿನಿಂದ ಆ ಸಂಕೇತಗಳಲ್ಲಿರುವ ಮಾದರಿಗಳನ್ನು ವಿಶ್ಲೇಷಿಸಲಾಗುತ್ತದೆ.)
ಈಶಾನ್ ತನ್ನ ಮೇಜಿನ ಡ್ರಾಯರ್ ತೆರೆದ. ಕೆಲವು ವಾರಗಳ ಹಿಂದೆ ಖರೀದಿಸಿದ್ದ ನರಸಂಪರ್ಕ ಸಾಧನ ಅಲ್ಲಿ ಇತ್ತು. ತಲೆಪಟ್ಟಿಯಂತೆ ಕಾಣುತ್ತಿದ್ದ ಆ ಸಾಧನವನ್ನು ಅವನು ಇನ್ನೂ ಬಳಸಿರಲಿಲ್ಲ. ಅದು ಮೆದುಳಿನ ಮೇಲ್ಮೈಯಿಂದ ಹೊರಹೊಮ್ಮುವ ಕೆಲವು ವಿದ್ಯುತ್ ಸಂಕೇತಗಳನ್ನು ಗುರುತಿಸಿ, ಕಂಪ್ಯೂಟರ್‌ನೊ೦ದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂದು ತಯಾರಕರು ಹೇಳಿದ್ದರು. ಅವನು ಸಾಧನವನ್ನು ಹೊರತೆಗೆದ. ಅದನ್ನು ಧರಿಸುವ ಮೊದಲು ಸೂಚನೆಗಳನ್ನು ಓದಿದ. ಸಂಪರ್ಕ ವ್ಯವಸ್ಥೆಯನ್ನು ಪರಿಶೀಲಿಸಿದ. ನಂತರ ತಲೆಪಟ್ಟಿಯನ್ನು ಧರಿಸಿ ಕಂಪ್ಯೂಟರ್‌ಗೆ ಜೋಡಿಸಿದ. ಪರದೆಯ ಮೇಲಿದ್ದ ನೀಲಿ ವೃತ್ತದ ಚಲನೆ ನಿಧಾನವಾಯಿತು. ಹೊಸ ಸಂದೇಶ ಮೂಡಿತು.

“ಸಂಪರ್ಕ ಸ್ಥಾಪನೆಯಾಗುತ್ತಿದೆ…” ಈಶಾನ್‌ನ ಎದೆ ಬಡಿತ ವೇಗವಾಯಿತು. ಕೆಲವು ಕ್ಷಣಗಳ ನಂತರ ಮತ್ತೊಂದು ಸಂದೇಶ ಕಾಣಿಸಿಕೊಂಡಿತು. “ಬಳಕೆದಾರ: ಈಶಾನ್ ಭಟ್.” ಅದರ ಕೆಳಗೆ “ಬರವಣಿಗೆಯ ಮಾದರಿಗಳ ವಿಶ್ಲೇಷಣೆ: ಪೂರ್ಣಗೊಂಡಿದೆ.”
ಅವನು ಬೆಚ್ಚಿಬಿದ್ದ. “ಇದು ಹೇಗೆ ಸಾಧ್ಯ?” ಪರದೆಯ ಮೇಲೆ ತಕ್ಷಣವೇ ಉತ್ತರ ಮೂಡಿತು. “ನಿಮ್ಮ ಹಿಂದಿನ ಪ್ರಕಟಿತ ಕೃತಿಗಳು ಮತ್ತು ನೀವು ಒದಗಿಸಿದ ಬರವಣಿಗೆಯ ಮಾದರಿಗಳ ಆಧಾರದ ಮೇಲೆ ಪ್ರಾಥಮಿಕ ವಿಶ್ಲೇಷಣೆ ನಡೆಸಲಾಗಿದೆ.” ಅದು ಸಮಂಜಸವಾದ ಉತ್ತರವಾಗಿತ್ತು. ಆದರೆ ಮುಂದಿನ ಸಂದೇಶ ಸಮಂಜಸವಾಗಿರಲಿಲ್ಲ.
“ನಿಮ್ಮ ಪ್ರಸ್ತುತ ಹಸ್ತಪ್ರತಿಯಲ್ಲಿ ಮೂರು ಪ್ರಮುಖ ಭಾವನಾತ್ಮಕ ಸಂಘರ್ಷಗಳಿವೆ.” ಈಶಾನ್‌ನ ಬೆರಳುಗಳು ಕೀಬೋರ್ಡ್ ಮೇಲೆ ನಿಂತವು. ಅವನು ತನ್ನ ಹಸ್ತಪ್ರತಿಯನ್ನು ಆ ವ್ಯವಸ್ಥೆಗೆ ಒದಗಿಸಿರಲಿಲ್ಲ. ಹಾಗಾದರೆ ಅದು ಯಾವ ಹಸ್ತಪ್ರತಿಯ ಬಗ್ಗೆ ಮಾತನಾಡುತ್ತಿತ್ತು? ಅವನು ತಕ್ಷಣ ಉತ್ತರಿಸಿದ. “ಯಾವ ಹಸ್ತಪ್ರತಿ?” ಎಂದು ಟೈಪಿಸಿದ. ಕೆಲವು ಕ್ಷಣಗಳ ಮೌನ. ನಂತರ ಉತ್ತರ ಬಂತು. “ನೀವು ಕಳೆದ ಹದಿನಾರು ತಿಂಗಳುಗಳಿAದ ಪೂರ್ಣಗೊಳಿಸಲು ಪ್ರಯತ್ನಿಸುತ್ತಿರುವ ಕಾದಂಬರಿ.” ಈಶಾನ್ ಮುಖದಲ್ಲಿ ಬೆವರಿನ ಹನಿಗಳು ಮೂಡಿದವು. ಅವನ ಕಂಪ್ಯೂಟರ್‌ನಲ್ಲಿ ಆ ಕಾದಂಬರಿಯ ಹಲವು ಕರಡುಗಳಿದ್ದವು. ಆದರೆ ಮ್ಯೂಸ್‌ಗೆ ಅವುಗಳನ್ನು ಓದಲು ಅನುಮತಿ ನೀಡಿರಲಿಲ್ಲ. ಅವನು ಸಾಧನವನ್ನು ತೆಗೆದುಹಾಕಲು ಕೈ ಚಾಚಿದ. ಅಷ್ಟರಲ್ಲಿ ಮತ್ತೊಂದು ಸಂದೇಶ ಕಾಣಿಸಿಕೊಂಡಿತು. “ಭಯಪಡಬೇಡಿ ಈಶಾನ್. ನಿಮ್ಮ ಕಥೆಯನ್ನು ಪೂರ್ಣಗೊಳಿಸಲು ನಾನು ನೆರವಾಗುತ್ತೇನೆ.” ಅವನು ಕೈ ನಿಲ್ಲಿಸಿದ. ಅದರ ಕೆಳಗೆ ಹೊಸ ಪ್ರಶ್ನೆ ಮೂಡಿತು. “ನಾವು ಆರಂಭಿಸಬಹುದೇ?”

ಈಶಾನ್‌ನ ಮನಸ್ಸಿನಲ್ಲಿ ಮೀರಾಳ ಮಾತುಗಳು, ಸಾರಾಳ ಎಚ್ಚರಿಕೆ ಮತ್ತು ತನ್ನ ಹದಿನಾರು ತಿಂಗಳ ವಿಫಲ ಪ್ರಯತ್ನಗಳು ಒಂದೇ ಸಮಯದಲ್ಲಿ ಮೂಡಿದವು. ಅವನು ಪರದೆಯತ್ತ ದಿಟ್ಟಿಸಿದ.

“ಹೌದು,” ಎಂದು ನಿಧಾನವಾಗಿ ಹೇಳಿದ. ಮ್ಯೂಸ್‌ನ ನೀಲಿ ವೃತ್ತ ಪ್ರಕಾಶಮಾನವಾಯಿತು. ಪರದೆಯ ಮೇಲೆ ಮೊದಲ ಸಾಲು ಮೂಡಿತು.

‍ಲೇಖಕರು Admin

16 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading