ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶುಭಾರಂಭ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

8

೧೯೪೦ ನೆಯ ಇಸವಿಯ ಮಧ್ಯಭಾಗದಲ್ಲಿ ಶ್ರೀಕಂಠನ್ ರವರ ಜೀವನದಲ್ಲಿ ವಿಧಿ ಮುದ ಮೂಡುವಂತೆ ಹಸ್ತಕ್ಷೇಪ ಮಾಡಿ, ಅವರು ಕರ್ನಾಟಕದಲ್ಲಿ ವಾಸಿಸುತ್ತಲೇ ಸಂಗೀತ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ನೆರವಾಯಿತು. ಆ ವರ್ಷ ಮೈಸೂರಿನ ಆಕಾಶವಾಣಿ ತಾನು ನೇರ ಪ್ರಸಾರ ಮಾಡಲಿದ್ದ ‘ಸಂಗೀತ ಶಿಕ್ಷಣ ಕಾರ್ಯಕ್ರಮ’ಕ್ಕಾಗಿ ಶಿಕ್ಷಕರಿಂದ ಅರ್ಜಿಯನ್ನು ಆಹ್ವಾನಿಸಿತು.

ಶ್ರೀಕಂಠನ್ ರವರು ತಮ್ಮ ಸ್ನೇಹಿತರಾದ ಶ್ರೀ ಎಸ್ ಕೃಷ್ಣಮೂರ್ತಿ ರವರ ಮಾರ್ಗದರ್ಶನದಲ್ಲಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಗೊಂಡರು. ಈ ಘಟನೆ ಅವರ ಜೀವನಕ್ಕೊಂದು ಹೊಸ ತಿರುವು ನೀಡಿತು. ಮಹಾರಾಜರ ಆಳ್ವಿಕೆಯಲ್ಲಿದ್ದ ಮೈಸೂರು ರಾಜ್ಯ ಶ್ರೀಕಂಠನ್ ಆಕಾಶವಾಣಿ ಪ್ರಸಾರ ಕ್ಷೇತ್ರದಲ್ಲಿ ಉದ್ಯೋಗವನ್ನು ಗಳಿಸಿದ ನಂತರ ಭಾರತ ಒಕ್ಕೂಟದ ಭಾಗವಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯದ ರೇಡಿಯೋ ಅಖಿಲ ಭಾರತ ರೇಡಿಯೋದ ಸುಪರ್ದಿಗೆ ಸೇರಿತು.

ಶ್ರೀಕಂಠನ್ ರವರು ತಮ್ಮ ತಾಯ್ನೆಲದೊಂದಿಗೆ ನಿರಂತರ ಸಂಪರ್ಕದಲ್ಲಿರಲು ಈ ಬೆಳವಣಿಗೆಗಳು ಸಹಕಾರಿಯಾದರೆ ಮುಂದೆ ೧೯೫೭ರಲ್ಲಿ ಅವರನ್ನು ಬೆಂಗಳೂರಿನ ಆಕಾಶವಾಣಿ ವರ್ಗಾಯಿಸಿದ ಘಟನೆ, ಅವರ ಸಂಗೀತಪರ ಚಟುವಟಿಕೆಗಳನ್ನು ಶತಗುಣ ವರ್ಧಿಸಿ, ಸಂಗೀತ ವಲಯದ ದಿಗ್ಗಜರೊಡನೆ ಸಂವಹನ ನಡೆಸಲು ಅವಕಾಶ ಕಲ್ಪಿಸಿತು.

ಇದಕ್ಕೂ ಬಹಳ ಮುಂಚಿತವಾಗಿ ಮದ್ರಾಸಿನಲ್ಲಿ ನೆಲಸುವ ಸಂದರ್ಭ ಒದಗಿ ಬಂದಿದ್ದರೆ, ಅವರು ಇನ್ನಷ್ಟು ಶೀಘ್ರವಾಗಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಬಹುದಾಗಿದ್ದುದರಿಂದ, ಅದು ಅವರಿಗೆ ಹೆಚ್ಚು ಮೌಲಿಕವೆನಿಸುತ್ತಿತ್ತೇನೋ? ಆದರೆ ಶ್ರೀಕಂಠನ್ ಇದನ್ನು ಒಪ್ಪುವುದಿಲ್ಲ. “ಅಕಾರಣವಾಗಿ ಬೇರಿನಿಂದ ಬೇರ್ಪಡುವುದು ಅರ್ಥಹೀನವಾಗುತ್ತಿತ್ತು. ಉದ್ಯೋಗ ನನ್ನ ಸೋದರನನ್ನು ಮದ್ರಾಸಿಗೆ ಕರೆದೊಯ್ಯಿತು. ಆಕಾಶವಾಣಿಗೆ ಸೇರಿದ ಮೇಲೆ ನನ್ನ ಗಮನವೆಲ್ಲ ಸಂಗೀತಗಾರರಿ೦ದ ಮತ್ತು ಸಂಗೀತಶಾಸ್ತ್ರಜ್ಞರಿ೦ದ ಹೆಚ್ಚಿನ ಜ್ಞಾನಾರ್ಜನೆಯನ್ನು ಮುಂದುವರಿಸುವತ್ತ ಕೇಂದ್ರೀಕೃತವಾಗಿತ್ತು. ನನ್ನ ಈ ಅನ್ವೇಷಣೆ ಕೇವಲ ಗಾಯನಕ್ಕೆ ಸೀಮಿತಗೊಳ್ಳದೆ ನಾನು ಸಂಗೀತ ಕಾರ್ಯಕ್ರಮಗಳನ್ನೂ ನಿರ್ಮಾಣ ಮಾಡತೊಡಗಿದ್ದೆ. ವಿದ್ವಾಂಸರೊಡನೆ ಸಮಾಲೋಚನೆ ಮತ್ತಷ್ಟು ಹೆಚ್ಚಿತು. ನಂತರ ಆಕಾಶವಾಣಿಯ ‘ಗಾನವಿಹಾರ’ ಕಾರ್ಯಕ್ರಮದಲ್ಲಿ ನನ್ನ ಸಂಗೀತ ಪಾಠಗಳು ಮೂಡಿಬಂದವು. ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಸಾರಗೊಂಡ ಈ ಕಾರ್ಯಕ್ರಮ ಕೆಲವೇ ವರ್ಷಗಳಲ್ಲಿ ದಕ್ಷಿಣ ರಾಜ್ಯಗಳಿಂದ ನನಗೆ ಅನೇಕ ಶಿಷ್ಯರನ್ನು ಪರೋಕ್ಷವಾಗಿ ಸಂಪಾದಿಸಿಕೊಟ್ಟಿತು. ಈ ಕಾರ್ಯಕ್ರಮ ಒಂದು ಬಗೆಯ ದಾಖಲೆಯನ್ನೇ ಸೃಷ್ಟಿಸಿತು ಎನ್ನಬೇಕು. ಸ್ವಾರಸ್ಯದ ಸಂಗತಿ ಎಂದರೆ, ಈ ಕಾರ್ಯಕ್ರಮದ ಪ್ರಭಾವ ಈಗ್ಗೆ ಕೆಲವು ವರ್ಷಗಳ ಹಿಂದೆಯೂ ಗಾಢವಾಗಿತ್ತು.”

ಹೀಗೆ ಯುವಕ ಶ್ರೀಕಂಠನ್ ರವರಿಗೆ ಒಳ್ಳೆಯ ಸಂಗೀತವನ್ನು ಕಲಿಯುವುದು ಬಹಳ ಮುಖ್ಯವಾಗಿತ್ತು ಮತ್ತು ಇತರರ ಮೆಚ್ಚುಗೆ ಗಳಿಸುವುದು ಈ ಗಂಭೀರ ಚಿತ್ತವೃತ್ತಿಯ ರಸೋಪಾಸಕನಿಗೆ ದ್ವಿತೀಯ ಆದ್ಯತೆಯಾಗಿತ್ತು.
ಸಂಗೀತದ ಕಾಶಿ ಮದ್ರಾಸಿನಲ್ಲಿದ್ದ ಸಂಗೀತಸಮೃದ್ಧ ಪರಿಸರ, ವಿಶ್ವದಾದ್ಯಂತದ ವೇದಿಕೆಗಳನ್ನೇರಲು ಪ್ರಥಮ ಸೋಪಾನವನ್ನು ಒದಗಿಸುತ್ತದೆ ಎನ್ನುವುದು ಸಂಗೀತಗಾರರ ಬಹುಕಾಲದ ವಿಶ್ವಾಸ. ಈ ನಂಬಿಕೆ ಇಂದಿಗೂ ಹಸಿರಾಗಿದ್ದು, ಚೆನ್ನೈನಲ್ಲಿ ಚಿಗುರುತ್ತಿರುವ (ಮದ್ರಾಸು ೧೯೯೬ರಲ್ಲಿ ಚೆನ್ನೈ ಎಂದು ಮರುನಾಮಕರಣಗೊಂಡಿತು) ಸಂಗೀತ ಸಭೆಗಳು ಜಾಗತಿಕ ವೇದಿಕೆಗಳನ್ನು ಬಯಸುವವರಿಗೆ ಚಿಮ್ಮುಹಲಗೆಗಳಾಗಿವೆ. ಇಲ್ಲಿಂದ ಲಭಿಸುವ ಮೌಲ್ಯಾಂಕಗಳು ಜಾಗತಿಕ ಮಟ್ಟದ ಸ್ವೀಕೃತಿ ಹಾಗೂ ಅವಕಾಶಗಳಿಗೆ ಪರವಾನಗಿ ಎನಿಸಿವೆ.

ಕ್ರಮೇಣ ಈ ಆಲೋಚನೆ, ಅನೇಕರು ಒಂದು ಬಗೆಯ ಅಸಹಾಯಕತೆಯಿಂದ ಒಪ್ಪಿಕೊಳ್ಳುವ ರೂಢಿಗತ ನಂಬಿಕೆಯಾಗಿ ಪರಿಣಮಿಸಿತು. ಸಂಗೀತ ಪ್ರಪಂಚದಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ, ಆದರೆ ಚೆನ್ನೈನ ನಿವಾಸಿಗಳಲ್ಲದ ಹಲವರಲ್ಲಿ ಇದೊಂದು ಅತೃಪ್ತಿ ಉಳಿದುಬಿಟ್ಟಿರುವುದು ವಿಡಂಬನೆಯೇ ಸರಿ. ಚೆನ್ನೈನ ಸಂಗೀತ ಸಮುದಾಯದ ದೊಡ್ಡಣ್ಣನ ಧೋರಣೆ, ದೊಡ್ಡದೊಡ್ಡ ಆಯ್ಕೆ ಪ್ರಕ್ರಿಯೆಗಳಲ್ಲಿ ಕಂಡುಬರುವ ತಮಿಳುನಾಡಿನ ಆಧಿಪತ್ಯ ಮತ್ತು ಕೇವಲ ‘ಅಹಂ’ಪೀಡಿತರಾಗಿ ಇತರ ರಾಜ್ಯಗಳ ಸಂಗೀತಗಾರರನ್ನು ಕೀಳಾಗಿ ಕಾಣುವ ಪ್ರವೃತ್ತಿ, ಇವೆಲ್ಲ ಇಂದಿಗೂ ವಿವಿಧ ಸಂಗೀತ ಸಭೆಗಳ ಕಾರ್ಯದರ್ಶಿಗಳು ಮತ್ತು ಆಂಧ್ರಪ್ರದೇಶ, ಕೇರಳ, ಕರ್ನಾಟಕ ರಾಜ್ಯಗಳ ಹಲವು ಸಂಗೀತ ವಿದ್ವಾಂಸರು ಇಂದಿಗೂ ಸ್ಪಷ್ಟಮಾತುಗಳಲ್ಲಿ ನೇರವಾಗಿ ಆಡದ, ಆದರೆ ಪಿಸು ಮಾತಿನಲ್ಲಿ ಹೇಳುವ ಕತೆಗಳ ಒಂದು ಭಾಗ.

ಸಂಗೀತಗಾರರನ್ನು ಶ್ರೇಣೀಕರಿಸುವಲ್ಲಿ ಚೆನ್ನೈನ ಸಂಗೀತ ಸಭೆಗಳದು ಸರ್ವೋಚ್ಚ ಮಾನದಂಡ ಎನ್ನುವ ಅಥವಾ ‘ಸಂಗೀತ ಪ್ರಪಂಚದಲ್ಲಿ ಸುಗಮವಾಗಿ ಮೇಲೇರಲು ಅಗತ್ಯವಾದ ಸಮ್ಮಾನ ಕೇವಲ ಚೆನ್ನೈನಲ್ಲಿ ತರಬೇತುಗೊಂಡ ಸಂಗೀತಗಾರರಿಗೆ ಮಾತ್ರ ಲಭಿಸುತ್ತದೆ’ ಎನ್ನುವ ನಂಬಿಕೆ ಇತರ ರಾಜ್ಯಗಳ ಸಂಗೀತಗಾರರ ಮನದಲ್ಲಿ ನೆಲೆನಿಂತುಬಿಟ್ಟಿದೆ. ಆದರೆ ನಿಜಕ್ಕೂ ಇವೆಲ್ಲ ಎಷ್ಟರ ಮಟ್ಟಿಗೆ ಸತ್ಯ? ವಾಸ್ತವದಲ್ಲಿ ಇವೆಲ್ಲ ಎಷ್ಟರ ಮಟ್ಟಿಗೆ ಕಾಣಸಿಗುತ್ತವೆ?
ಆದರೆ ದಕ್ಷಿಣಭಾರತದ ಇತರ ಮೂರು ರಾಜ್ಯಗಳ ಅಗ್ರಪಂಕ್ತಿಯ ಸಂಗೀತಗಾರರ ತಂಡ ‘ಇಂದಿಗೂ ಮಿನುಗುತ್ತಿರುವ ತಾರೆಗಳ’ ಪಟ್ಟಿಯಲ್ಲಿರುವುದು ಪಾರದರ್ಶಕವಾಗಿ ಕಂಡುಬರುವ ಸತ್ಯ. ಹಾಗಾದರೆ, ಸಂಗೀತ ಕ್ಷೇತ್ರದಲ್ಲಿ ಯಶಸ್ಸಿಗೆ ಕಾರಣವೇನು? ‘ಒಳ್ಳೆಯ ಸಂಗೀತಗಾರ’ರಾಗಿರುವುದೆ, ‘ಜಯಗರ್ವಿತ ಸಂಗೀತಗಾರ’ರಾಗಿರುವುದೆ, ಅಥವಾ ‘ಗುಂಪಿನಲ್ಲಿ ಎದ್ದುಕಾಣುವ ಸಂಗೀತಗಾರ’ರಾಗಿರುವುದೆ? ಇದು ಅವರವರ ಆಲೋಚನೆಗೆ ಬಿಟ್ಟ ವಿಷಯ! ಆದರೆ ಮದ್ರಾಸು ನಗರ ‘ಸಂಗೀತಗಾರರ ಪರೀಕ್ಷಾಭೂಮಿ’ ಎಂದು ಹೆಸರು ಪಡೆದದ್ದಾದರೂ ಯಾವಾಗ, ಹೇಗೆ? ಸಂಗೀತಕ್ಷೇತ್ರದಲ್ಲಿ ಈ ನಗರದ ಮೇಲುಗೈಯನ್ನು ಸಮರ್ಥಿಸಲು ಯಾವುದೇ ಸಿದ್ಧಾಂತಗಳಿಲ್ಲ, ಆದರೆ ಈ ನಗರ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಖ್ಯಾತನಾಮವಾಗಿ ರೂಪುಗೊಳ್ಳಲು ಅನಿವಾರ್ಯವಾದ ಕೆಲವು ಪೂರ್ವಾಗತ್ಯಗಳನ್ನು ಗಮನಕೊಟ್ಟು ಕ್ರಮೇಣ ಪೋಷಿಸಿರುವ ಕುರಿತು ಕೆಲವು ವಿವರಣೆಗಳು ಮತ್ತು ಅನಿಸಿಕೆಗಳಿವೆ.

ಲೇಖಕ, ಸಂಗೀತಗಾರ, ಕ್ಯುರೇಟರ್ ಮತ್ತು ಇತಿಹಾಸಜ್ಞ ವಿಕ್ರಂ ಸಂಪತ್ ಸುಮಾರು ಒಂದು ಶತಮಾನದ ಹಿಂದೆ ಈ ನಗರವನ್ನು ವ್ಯಾಪಿಸಿದ ಸ್ಥಿರ ಮತ್ತು ಮಾಪನೀಯ ಬದಲಾವಣೆಗಳ ಹಿನ್ನೆಲೆಯಲ್ಲಿರುವ ಇತಿಹಾಸವನ್ನು ವಿವರಿಸುತ್ತಾರೆ. ಅವರ ‘’Voice of Veena-S.Balachander” ಎನ್ನುವ ಶಿರೋನಾಮೆಯ ಪುಸ್ತಕದಲ್ಲಿ ಕಳೆದ ಶತಮಾನದಲ್ಲಿ ಈ ನಗರದ ಸಾಂಸ್ಕೃತಿಕ ಪರಿಸರ ನಿರ್ಮಾಣಗೊಂಡ ಕುರಿತ ವಿವರಗಳಿವೆ.

ವಿಕ್ರಂ ಬರೆಯುತ್ತಾರೆ- “ಬ್ರಿಟಿಷ್ ಸಾಮ್ರಾಜ್ಯ ಮೈಸೂರನ್ನು ಜಯಿಸಿ ತನ್ನ ಅಧಿಕಾರವನ್ನು ಕ್ರೋಢೀಕರಿಸಿತು. ಟಿಪ್ಪೂಸುಲ್ತಾನನ ನಿಧನದ ನಂತರ ಕ್ರಿ.ಶ.೧೮೮ರಲ್ಲಿ ನಾಡಿನ ಮೂಲೆಮೂಲೆಗಳಿಂದ ವಿದ್ವಾಂಸರು, ಕಲಾವಿದರು ಮತ್ತು ಸಂಗೀತಗಾರರನ್ನು ಮದರಾಸು ನಗರ ತನ್ನ ತೆಕ್ಕೆಗೆ ತೆಗೆದುಕೊಂಡಿತು….. ೧೯ನೆಯ ಶತಮಾನದ ಮಧ್ಯಭಾಗದಲ್ಲಿ ‘ಕಲೆಗಳ ಮತ್ತು ಸಂಗೀತದ ನೆಲೆಮನೆ’ ಎನ್ನುವ ಪ್ರಸಿದ್ಧಿಯನ್ನು ತಂಜಾವೂರು ಕಳೆದುಕೊಂಡಿತು.

ಅಸಹಾಯಕರಾದ ಸ್ಥಾನೀಯ ಕಲಾವಿದರು ಉತ್ತಮ ಜೀವನೋಪಾಯವನ್ನು ಅರಸುತ್ತ ಅಲ್ಲಿಗಿಲ್ಲಿಗೆ ಚದುರಿದರು ಮತ್ತು ಮದರಾಸಿನಲ್ಲೂ ವಸಾಹತು ಶಿಕ್ಷಣದ ಅವಕಾಶಗಳಿವೆ ಎನ್ನುವುದನ್ನು ಕಂಡುಕೊ೦ಡರು. ಮೇಲುಜಾತಿಯ ಬ್ರಾಹ್ಮಣರು, ಕಾನೂನು ಅಥವಾ ಶಿಕ್ಷಣಕ್ಷೇತ್ರದ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದು ಇಲ್ಲಿಯೇ. ಬಹುಕಾಲದ ಮೇಲೆ ಅವರನ್ನು ಸರ್ಕಾರಿ ಉದ್ಯೋಗಗಳಿಗೆ ನಿಯೋಜಿಸಿದ್ದರಿಂದ ಸಮಾಜದಲ್ಲಿ ರೂಪುಗೊಂಡ ಸಂಭಾವಿತರ ಹೊಸ ವರ್ಗಕ್ಕೆ, ತಾವು ತೊರೆದುಬಂದಿದ್ದ ರಾಜರ ಸಂಸ್ಥಾನಗಳತ್ತ ಪುನಃ ಆಕರ್ಷಣೆ ಮೂಡತೊಡಗಿತು.

“ಹಲವು ತಲೆಮಾರುಗಳಿಂದ ದಕ್ಷಿಣ ಭಾರತದಲ್ಲಿ ಸಂಗೀತ ಮತ್ತು ನೃತ್ಯಗಳು ದೇವಾಲಯಗಳ ಅವಿಭಾಜ್ಯ ಅಂಗಗಳಾಗಿದ್ದುದರಿ೦ದ, ದೇವಸ್ಥಾನಗಳ ನಿರ್ಮಾಣ ಮತ್ತು ಇತರ ದಾನಕಾರ್ಯಗಳಿಗೆ ಮುಕ್ತಹಸ್ತದಿಂದ ದೇಣಿಗೆ ನೀಡುತ್ತಿದ್ದ ಶ್ರೀಮಂತ ವ್ಯಾಪಾರಿಗಳು ಕಲೆ ಮತ್ತು ಸಂಸ್ಕೃತಿಗಳ ನಿರಂತರ ಸಂಪರ್ಕದಲ್ಲಿರುತ್ತಿದ್ದುದು ಸಹಜವೇ ಆಗಿತ್ತು. ಮದ್ರಾಸಿಗೆ ವಲಸೆ ಬಂದ ಸಂಗೀತಗಾರರಲ್ಲಿ ತಾವು ಸಂಗೀತ ತ್ರಿಮೂರ್ತಿಗಳ ವಂಶಸ್ಥರು ಎಂದು ಹೇಳಿಕೊಳ್ಳುತ್ತಿದ್ದವರಿಗೂ ಕೂಡ, ತಾಂತ್ರಿಕ ಪ್ರಗತಿಯನ್ನು ಸ್ವಾಗತಿಸಿದ್ದ ಮದ್ರಾಸು ನಗರದಲ್ಲಿ ಸಂಗೀತ ಶಿಕ್ಷಣ ಮತ್ತು ಸಂಗೀತ ಪ್ರಸಾರದ ಪದ್ಧತಿಗಳಲ್ಲಿ ಜರುಗುತ್ತಿದ್ದ ತಂತ್ರಜ್ಞಾನಾಧಾರಿತ ಕ್ರಾಂತಿ ಗೋಚರಿಸಿತು.

ಕೃತಿಗಳ ಸಾಹಿತ್ಯವನ್ನು ಸ್ವರಸಹಿತ ಮುದ್ರಿಸಲಾಗುತ್ತಿತ್ತು. ಸಂಗೀತ ತ್ರಿಮೂರ್ತಿಗಳ ಮತ್ತು ಸಂಗೀತಕ್ಷೇತ್ರಕ್ಕೆ ಆಗತಾನೇ ಪದಾರ್ಪಣೆ ಮಾಡುತ್ತಿದ್ದ ಇತರ ವಿದ್ವಾಂಸರ ಜೀವನದ ವಿವರಗಳನ್ನು ಮುದ್ರಿಸಿ ಪ್ರಕಟಿಸಲಾಗುತ್ತಿತ್ತು”
“ಈ ಶ್ರೀಮಂತ ವ್ಯಾಪಾರಿಗಳಂತೆಯೇ ಮೈಸೂರು, ಎಟ್ಟಾಯಪುರಂ ಇವೇ ಮೊದಲಾದ ಅಳಿದುಳಿದ ಸಂಸ್ಥಾನಗಳ ರಾಜರೂ ಕೂಡ ಸಂಗೀತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಗಳನ್ನು ನೀಡತೊಡಗಿದರು ಮತ್ತು ಸಂಗೀತವನ್ನು ದಾಖಲಿಸುವ ಪ್ರಯತ್ನಗಳನ್ನು ಪ್ರಾಯೋಜಿಸಿದರು.

ಮದ್ರಾಸಿನ ಸುಶಿಕ್ಷಿತ ಬ್ರಾಹಣ ವರ್ಗಕ್ಕೆ, ಕಛೇರಿ ನೀಡಲು ವೇದಿಕೆಗಳ ಅಗತ್ಯ ಮಾತ್ರವಲ್ಲ, ಕಛೇರಿಯ ರೂಪುರೇಷೆ ಮತ್ತು ಕಛೇರಿಯಲ್ಲಿ ಪ್ರಸ್ತುತಗೊಳ್ಳುವ ಸಂಗೀತದ ಅಂಶಗಳಿಗೂ ಕ್ರಮಬದ್ಧ ಸ್ವರೂಪವನ್ನು ನೀಡುವ ಆವಶ್ಯಕತೆಯೂ ಕಂಡುಬ೦ತು. ಪಾಶ್ಚಾತ್ಯ ಚಿಂತನೆ ಮತ್ತು ಸಂಸ್ಕೃತಿಯ ಪರಿಚಯವಿದ್ದ ಇವರಿಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಸೂಕ್ಷ್ಮ ಅಭಿರುಚಿಯನ್ನು ಸೃಜಿಸುವುದು ಮತ್ತು ಕರ್ನಾಟಕ ಸಂಗೀತದ ಸ್ವರೂಪದ ಕುರಿತು ಕೆಲವು ಕಟ್ಟಳೆಗಳನ್ನು ವಿಧಿಸುವುದು ತಮ್ಮ ಕರ್ತವ್ಯ ಎನಿಸಿತು. ಯೂರೋಪಿಯನ್ನರ ಗೌರವ ಗಳಿಸುವ ಸಲುವಾಗಿ, ಈ ವಿದ್ಯಾವಂತ ವರ್ಗ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಸಂಯೋಜನೆ ಮತ್ತು ಸೂತ್ರಗಳನ್ನು ಅನುಸರಿಸಿ, ಅದರಂತೆಯೇ ಕರ್ನಾಟಕ ಸಂಗೀತವನ್ನು ಮರುರೂಪಿಸಲು ಬಯಸಿತು.

ಈ ದಿಸೆಯಲ್ಲಿ ಸಂಪ್ರದಾಯಗಳನ್ನು ಪರಿಷ್ಕರಿಸಬೇಕಾಯಿತು, ಸಂಗೀತದ ಚರಿತ್ರೆಯನ್ನು ಮತ್ತು ಪ್ರಮುಖ ವಾಗ್ಗೇಯಕಾರರ ವಂಶಾವಳಿಯ ವಿವರವನ್ನು ನಿರ್ಮಿಸಬೇಕಾಗಿತ್ತು, ಕಾಲದ ಬೀಸಿನಲ್ಲಿ ಮರೆಯಾಗಿದ್ದ ಕೃತಿಗಳನ್ನು ಹುಡುಕಬೇಕಾಗಿತ್ತು, ಸ್ವರಮಟ್ಟುಗಳಿಲ್ಲದ ಕೃತಿಗಳಿಗೆ ಸ್ವರಮಟ್ಟುಗಳನ್ನು ರಚಿಸಿ ಪ್ರಕಾಶಪಡಿಸಬೇಕಾಗಿತ್ತು ಮತ್ತು ಸಂಗೀತವನ್ನು ಜನಪ್ರಿಯಗೊಳಿಸಬೇಕಾಗಿತ್ತು. ಇಷ್ಟೇ ಅಲ್ಲದೆ, ಕಛೇರಿಗಳಿಗೆ ಉತ್ತಮ ಮಾನದಂಡವನ್ನು ಸೃಜಿಸಬೇಕಾಗಿತ್ತು! ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಆವಿಷ್ಕೃತ ಮತ್ತು ಕಲ್ಪನಾಪ್ರಸೂತ ಅಂಶಗಳನ್ನು ತಂದಿತ್ತ ಸಂಗೀತಗಾರರ ವೈಯಕ್ತಿಕ ಸೃಜನಶೀಲತೆಯನ್ನು ಈ ಸಂಗೀತ ಪದ್ಧತಿ ಮುಖ್ಯವಾಗಿ ಅವಲಂಬಿಸಿತು. ವಿದ್ಯಾವಂತ ವರ್ಗ ಮದ್ರಾಸು ನಗರದ ಸಂಗೀತ ಇತಿಹಾಸವನ್ನು ಸೃಜಿಸುವ ಹೊಣೆಗಾರಿಕೆಯನ್ನು ತನ್ನ ಮೇಲೆ ತೆಗೆದುಕೊಂಡಿದ್ದು, ಮೈಸೂರು ಮತ್ತು ತಂಜಾವೂರಿನ ರಾಜಸಂಸ್ಥಾನಗಳ೦ತೆಯೇ ಮದ್ರಾಸು ನಗರವೂ ತನ್ನ ಪರಂಪರೆಯನ್ನು ಪ್ರದರ್ಶಿಸಲು ಶ್ರಮಪಟ್ಟಿದೆ ಎನ್ನುವುದನ್ನು ಸಾಬೀತುಪಡಿಸುವ ಸಲುವಾಗಿ” ಎಂದು ಬರೆಯುತ್ತಾರೆ ವಿಕ್ರಂ.

“ಆದ್ದರಿ೦ದ ೧೯೩೦ ಮತ್ತು ೧೯೪೦ರ ದಶಕಗಳ ವಿದ್ವಾಂಸರ ಬರಹಗಳಲ್ಲಿ “ಸಂಗೀತ ಪೀಠವಾಗಿ ಮದ್ರಾಸು” ಎನ್ನುವ ವಿಷಯ ಪ್ರಸ್ತಾಪಿತವಾಗಿದೆ. ಪ್ರೊ.ವಿ.ಸಾಂಬಮೂರ್ತಿಯವರು ೧೯೩೯ರಲ್ಲಿ “ಸಂಗೀತ ಶಿಕ್ಷಣದ ಪೀಠವಾಗಿ ಮದರಾಸು” ಎನ್ನುವ ತಮ್ಮ ವಿದ್ವತ್ಪೂರ್ಣ ಲೇಖನದಲ್ಲಿ ೧೯ನೆಯ ಶತಮಾನದಲ್ಲಿ ಮದ್ರಾಸಿನಲ್ಲಿ ನೆಲಸಿದ ಹಲವು ಸಂಗೀತಗಾರರ ಮತ್ತು ವಾಗ್ಗೇಯಕಾರರ ಜೀವನದ ಸ್ಥೂಲಪರಿಚಯ ಮಾಡಿಕೊಟ್ಟಿದ್ದಾರೆ……”
“ವಾಗ್ಗೇಯಕಾರರ ಮತ್ತು ಅವರ ಕೃತಿಗಳ ಗುಣಮಟ್ಟದ ಮಾಪನಕ್ಕೆ ಸಂಬ೦ಧಪಟ್ಟ೦ತೆ, ಸಂಗೀತ ತ್ರಿಮೂರ್ತಿಗಳ ಜೀವನ ಹಾಗೂ ಕೃತಿಗಳು ನೈತಿಕತೆಯ ಅತ್ಯುಚ್ಚ ನಿದರ್ಶನಗಳಾಗಿ ಇತರ ಕಲಾವಿದರಿಗೆ ಮತ್ತು ವಾಗ್ಗೇಯಕಾರರಿಗೆ ಅನುಸರಣೀಯವಾದವು. ಅವರ ಸಾಹಿತ್ಯ-ಸಂಗೀತಗಳ ಉಜ್ವಲತೆ ಮತ್ತು ಅವರು ಪ್ರತಿಪಾದಿಸಿದ ತಾತ್ವಿಕ ಸಂದೇಶ ಅನುಸರಣಯೋಗ್ಯವಾದ ಸುವರ್ಣ ಮಧ್ಯಮವಾಯಿತು ಮತ್ತು ಅವು ಹೊಸದಾಗಿ ಪಲ್ಲವಿಸುತ್ತಿದ್ದ ಸಂಗೀತ ಸಂಪ್ರದಾಯಕ್ಕೆ ಹೊಸ ರೂಪ ನೀಡಿದವು.”

ವಿಕ್ರಂ ಸಂಪತ್ ಮುಂದುವರಿದು ಹೇಳುತ್ತಾರೆ, ಮದ್ರಾಸಿನ ಸಂಭಾವಿತವರ್ಗಕ್ಕೆ ಸಮಾನಮನಸ್ಕ ರಸಿಕರು ಒಟ್ಟಾಗಿ ಸಂಗೀತವನ್ನು ಸವಿಯಲು ಅನುಕೂಲವಾಗುವಂತೆ ಸಂಸ್ಥೆಗಳನ್ನು ಸೃಜಿಸುವ ಅಗತ್ಯವಿದೆ ಎನಿಸಿತು. ೧೯ನೆಯ ಶತಮಾನದಲ್ಲಿ ಬಹುಮಟ್ಟಿಗೆ ಪ್ರಚಲಿತವಾಗಿದ್ದ ಹರಿಕಥೆಯ (ಪುರಾಣಗಳ ಕುರಿತ ಧಾರ್ಮಿಕ ಉಪನ್ಯಾಸಗಳು) ಕಾರ್ಯಕ್ರಮಗಳು ೨೦ನೆಯ ಶತಮಾನದ ಆದಿಭಾಗದಲ್ಲೂ ಮುಂದುವರಿದವು.

೧೮೦೦ನೇ ಸಾಲಿನ ಮಧ್ಯಭಾಗದಲ್ಲಿ, ಕೃಷ್ಣಶಾಸ್ತ್ರೀಗಳ ಕಾಲದಲ್ಲಿ ಕರ್ನಾಟಕದ ಭಕ್ತಿಪಂಥವನ್ನು ಬಿಂಬಿಸಲು ಮೈಸೂರು ಮತ್ತು ಹಾಸನಪ್ರದೇಶಗಳಲ್ಲಿ ಹಲವು ಹರಿಕಥಾ ವಿದ್ವಾಂಸರು ಹುಟ್ಟಿಕೊಂಡರು. ಅನೇಕ ವಿದ್ವಾಂಸರು ವೇದಪಂಡಿತರೂ ಆಗಿದ್ದ ಕಾರಣ ರುದ್ರಪಟ್ಣದ ಸುತ್ತಮುತ್ತಲ ಸ್ಥಳಗಳು ತಮ್ಮೊಡಲಲ್ಲಿ ವಿಕಸನಗೊಳ್ಳುತ್ತಿದ್ದ ಭಕ್ತಿಪಂಥಕ್ಕಾಗಿ ಹೆಸರುವಾಸಿಯಾದವು.

ವಿಕ್ರಂ ಸಂಪತ್ ಮತ್ತೂ ಬರೆಯುತ್ತಾರೆ- “ಮದ್ರಾಸಿನಲ್ಲಿ ಮೊದಲು ಅಸ್ತಿತ್ವಕ್ಕೆ ಬಂದ ಕೆಲವೇ ಕೆಲವು ಸಭೆಗಳು ಕೇವಲ ಈ ಬಗೆಯ ಕಾರ್ಯಕ್ರಮಗಳಿಗೆ ಮಾತ್ರ ವೇದಿಕೆಯೊದಗಿಸುತ್ತಿದ್ದವು. ಆದರೆ ಬಿಡಾರಂ ಕೃಷ್ಣಪ್ಪನವರು ಮತ್ತು ಸದಾಶಿವರಾಯರು ಅದಾಗಲೇ ರಾಮನವಮಿ ಉತ್ಸವವನ್ನು ಧಾರ್ಮಿಕ ಸಂಗೀತದೊ೦ದಿಗೆ ಪ್ರಾರಂಭಿಸಿದ್ದು, ಈ ಪದ್ಧತಿ ಮದ್ರಾಸಿನಲ್ಲೂ ಮುಂದುವರಿಯಿತು. ೧೮೮೦ರಲ್ಲಿ ಮದ್ರಾಸಿನ ತೋಂಡೈಮ೦ಡಲ೦ ಸಭಾ, ಉತ್ಸವದ ಸಂಭ್ರಮವನ್ನು ನಾದಮಾಧುರ್ಯದೊಂದಿಗೆ ಪ್ರಾರಂಭಿಸಿದ ಮೊತ್ತಮೊದಲ ಸಭೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಗ್ರಾಮಾಫೋನುಗಳ ಆವಿಷ್ಕಾರ ಮತ್ತು ಸಂಗೀತದ ಜನಪ್ರಿಯತೆಗಳಿಂದ ಕಛೇರಿಗಳಿಗೆ ಸಾರ್ವಜನಿಕ ವೇದಿಕೆಗಳು ಬೇಕು ಎನ್ನುವ ಬೇಡಿಕೆ ಹೆಚ್ಚಿತು ಮತ್ತು ಆಗಿನಿಂದ ಹಲವು ಸಭೆಗಳ ಸ್ಥಾಪನೆಗೆ ಇದು ಕಾರಣವಾಯಿತು”.

ಮುಂದಿನ ಎರಡು ದಶಕಗಳು ಮದ್ರಾಸಿನಲ್ಲಿ ಅನೇಕ ಸಭೆಗಳು ಸ್ಥಾಪನೆಗೊಂಡದ್ದಕ್ಕೆ ಸಾಕ್ಷಿಯಾದವು. ವಿಕ್ರಂ ಸಂಪತ್ ರವರು ಹೇಳುವಂತೆ, ೧೯೨೪ರಲ್ಲಿ ಹರಿಕೇಶ ನೆಲ್ಲೂರು ಮುತ್ತಯ್ಯ ಭಾಗವತರ ನೇತೃತ್ವದಲ್ಲಿ ಮದ್ರಾಸು ವಿಶ್ವವಿದ್ಯಾಲಯ ತನ್ನ ಪಠ್ಯದಲ್ಲಿ ಸೇರಿಸಿದ್ದ ಇತರ ವಿಷಯಗಳೊಂದಿಗೆ ಸಂಗೀತವನ್ನೂ ಸೇರ್ಪಡೆಗೊಳಿಸುವಂತೆ ಬೇಡಿಕೆಯನ್ನು ಮಂಡಿಸಲಾಯಿತು.

೧೯೧೬ರಲ್ಲಿ ಬರೋಡಾದಲ್ಲಿ ಬರೋಡಾ ಮಹಾರಾಜ ಮೂರನೇ ಸಯ್ಯಾಜಿರಾವ್ ಗಾಯಕವಾಡ ಅವರ ಆಶ್ರಯದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ವಿಷ್ಣು ನಾರಾಯಣ ಭಾತ್ಕಂಡೆ ಮತ್ತು ವಿಷ್ಣು ದಿಗಂಬರ್ ಪಲೂಸ್ಕರ್ ರವರಂಥ ಹಿಂದೂಸ್ಥಾನೀ ಸಂಗೀತದ ಸುಧಾರಕರು, ಸಂಗೀತ ಶಿಕ್ಷಣ ಮತ್ತು ಕಛೇರಿಗಳನ್ನು ಸಂರಕ್ಷಿಸುವ, ಪೋಷಿಸುವ ಮತ್ತು ಗುಣಮಟ್ಟದ ಮಾನದಂಡವನ್ನು ನಿಗದಿಗೊಳಿಸುವ ಬೇಡಿಕೆಯನ್ನು ಬಲವಾಗಿ ಪ್ರತಿಪಾದಿಸಿದರು. ಸಂಗೀತ ಭಾರತದ ಆತ್ಮದ ಮೂರ್ತರೂಪವಾದುದರಿಂದ ಈ ಎಲ್ಲ ಕೆಲಸಗಳನ್ನು ಬೇಗ ಪೂರೈಸಬೇಕು ಎನ್ನುವ ವಿಷಯವನ್ನು ಅವರು ಒತ್ತಿ ಹೇಳಿದರು.

ಮುಂದೆ ತನ್ನ ಘನತೆಯಲ್ಲಿ ವರ್ಧಿಸಿ, ಕರ್ನಾಟಕ ಸಂಗೀತಕ್ಕೆ ಸಂಬ೦ಧಪಟ್ಟ ಎಲ್ಲ ವಿಷಯಗಳ ಕುರಿತು ಅತ್ಯುಚ್ಚ ಆಧಿಕಾರಿಕ ಸಂಸ್ಥೆ ಎಂದು ಸುಪ್ರತಿಷ್ಠಿತವಾದ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸ್ಥಾಪನೆಯಾಗಲು ಈ ಎಲ್ಲ ಸಾಮಾಜಿಕ-ಆರ್ಥಿಕ, ರಾಜಕೀಯ ಶಕ್ತಿಗಳು ಸಹಕಾರಿಯಾದವು. ಶೀಘ್ರದಲ್ಲೇ ಮೈಸೂರು, ತಿರುವಾಂಕೂರು ಮತ್ತು ರಾಮನಾಥಪುರದ ರಾಜಸಂಸ್ಥಾನಗಳು ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಮತ್ತು ಅದು ಕೈಗೆತ್ತಿಕೊಂಡಿದ್ದ ಅಪೂರ್ವ ಚಟುವಟಿಕೆಗಳಲ್ಲಿ ಭಾಗಿಯಾದವು.

ಆದ್ದರಿಂದ ರಾಗಗಳ ಸ್ವರೂಪ ನಿಷ್ಕರ್ಷೆ, ಅವುಗಳ ನಾಮಕರಣ, ಜನ್ಯರಾಗಗಳೊಂದಿಗೆ ಅವುಗಳ ಸಂಬ೦ಧ, ಸಂಗೀತಶಾಸ್ತ್ರಗಳಲ್ಲಿ ವರ್ಣಿತವಾದಂತೆ ರಾಗಗಳ ಭಿನ್ನತೆ ಮತ್ತು ಪ್ರಾಯೋಗಿಕವಾಗಿ ಕೃತಿಗಳಲ್ಲಿ ಆ ರಾಗಗಳ ಉಪಯೋಗ – ಸಂಗೀತದ ಇಂಥ ಆಯಾಮಗಳನ್ನು ಚರ್ಚೆಗೆ ಆರಿಸಿಕೊಂಡು, ಸರ್ವಾನುಮೋದಿತವಾದ ಸಿದ್ಧಾಂತವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿತ್ತು.

ಉದಾಹರಣೆಗೆ, ಕಛೇರಿಗಳಲ್ಲಿ ಪಲ್ಲವಿಯ ಮಹತ್ವ ಗಣನೀಯವಾಗಿ ಕಡಿಮೆ ಇರುವಂತೆ ನೊಡಿಕೊಳ್ಳಲಾಗುತ್ತಿತ್ತು. ಏಕೆಂದರೆ ಪೂರ್ವಪದ್ಧತಿಯಲ್ಲಿ (ಆಸ್ಥಾನಗಳಲ್ಲಿ ಪ್ರಸ್ತುತಪಡಿಸುತ್ತಿದ್ದಂತೆ) ಪಲ್ಲವಿಯನ್ನು ಪ್ರಸ್ತುತಪಡಿಸಬೇಕೆಂದರೆ ಕಲಾವಿದ ಲಯವಿನ್ಯಾಸಗಳನ್ನು ನಿಬಿಡವಾಗಿ ಅಳವಡಿಸಿಕೊಳ್ಳಬೇಕಾಗಿತ್ತು ಮತ್ತು ಲೆಕ್ಕಾಚಾರದಲ್ಲಿ ಪ್ರಚಂಡ ಸಾಮರ್ಥ್ಯ ಹೊಂದಿರುವುದು ಅಗತ್ಯವಾಗಿತ್ತು. ಪಲ್ಲವಿ ಎಂಬ ಕಲಾನಿರ್ಮಿತಿಯಲ್ಲಿ ಅಪೇಕ್ಷಿತವಾಗಿದ್ದ ಈ ತಂತ್ರವೈಶಿಷ್ಟ್ಯಗಳು ಪೌರುಷಪೂರ್ಣವಾಗಿದ್ದು, ಸ್ತ್ರೀಯರು ಪಲ್ಲವಿಯನ್ನು ಪ್ರಸ್ತುತಪಡಿಸುವುದನ್ನು ನಿಷೇಧಿಸುವಂತೆ ಮಾಡಿತ್ತು. ಹಾಗೆಯೇ, ತಾಳವಾದ್ಯಗಳ ಮೇಲಿನ ಅತ್ಯವಲಂಬನೆಯೂ ಟೀಕೆಗೆ ಗುರಿಯಾಗಿತ್ತು. ಹಲವಾರು ವರ್ಷಗಳ ಕಾಲ ಸಂಗೀತಜ್ಞರ ಅಭಿಪ್ರಾಯ ಸಂಗ್ರಹಣೆ, ವಿಶ್ಲೇಷಣೆ ಮತ್ತು ಚರ್ಚೆಗಳನ್ನು ನಡೆಸಿದ ನಂತರ ಕರ್ನಾಟಕ ಸಂಗೀತದ ಮತ್ತು ಕಛೇರಿಗಳ ಧ್ಯೇಯಗಳು ಭಕ್ತಿಯ ಅಧೀನವಾಗಿರುತ್ತವೆ ಎಂಬ ಠರಾವನ್ನು ಮದ್ರಾಸಿನ ಮ್ಯೂಸಿಕ್ ಅಕಾಡೆಮಿ ಹೊರಡಿಸಿತು.

ನೂತನ ಭರತನಾಟ್ಯ ಹಾಗೂ ಆಧುನಿಕ ಸಂವೇದನೆಗಳಿಗೆ ಸೂಕ್ತವೆನಿಸುವಂತೆ ಕಛೇರಿಗಳಲ್ಲಿ ಮತ್ತಷ್ಟು ಸಭ್ಯ ಪ್ರಸ್ತುತಿಗಳನ್ನು ಸ್ವಾಗತಿಸಲು, ಪದ ಮತ್ತು ಜಾವಳಿಗಳೆಂಬ ಪ್ರೇಮ ಗೀತೆಗಳ ಬೃಹತ್ ಭಂಡಾರವನ್ನೂ ನಿರ್ಮಲಗೊಳಿಸಬೇಕಾಗಿತ್ತು. ಮೂರು ಗಂಟೆಗಳ ಕಛೇರಿಗಳಲ್ಲಿ ಸಂಗೀತದ ವಿವಿಧ ಪ್ರಕಾರಗಳು ಮೇಳೈಸಿ ರಸಾನುಭವ ಮಡುಗಟ್ಟುವಂತೆ ಮತ್ತು ಎಲ್ಲ ವಿದ್ವಾಂಸರಿಗೂ ಒಪ್ಪಿಗೆಯಾಗುವಂತೆ ಕಛೇರಿಗಳಿಗೆ ನೂತನ ಸ್ವರೂಪವನ್ನು ನೀಡಲು ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರರು ಗೈಯ್ಯುತ್ತಿದ್ದ ಒಮ್ಮನದ ಪರಿಶ್ರಮಕ್ಕೆ ಈ ಕಾಲಘಟ್ಟ ಸಾಕ್ಷಿಯಾಯಿತು.

ವಿಮರ್ಶಕ ರಾಘವೇಂದ್ರ ರಾವ್ ಹೇಳುತ್ತಾರೆ- “ಶ್ರೀಕಂಠನ್ ರವರಿಗೆ ಮನ್ನಣೆಗಳು ಸಂದದ್ದು ಅವರ ಜೀವನದ ಉತ್ತರಾರ್ಧದಲ್ಲಿ. ಇದರರ್ಥ ಅವರು ಇದಕ್ಕೆ ಮೊದಲು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರಲಿಲ್ಲ ಎಂದಲ್ಲ. ಆದರೆ ಅವರನ್ನು ‘ಕಾಣಲು’ ಸಂಗೀತ ಪ್ರಪಂಚಕ್ಕೆ ಅಷ್ಟು ಸಮಯ ಬೇಕಾಯಿತು. ಕನ್ನಡಿಗರಂತೆ ಸಂಕೇತಿಗಳೂ ಕೂಡ (ಇಬ್ಬರೂ ಒಂದೇ ರಾಜ್ಯಕ್ಕೆ ಸೇರಿದವರು) ತಮ್ಮ ದನಿಯನ್ನು ಇತರರ ಕಿವಿಯ ಮೇಲೆ ಹಾಕುವುದಕ್ಕಾಗಿ ತಮ್ಮ ಡಂಗೂರವನ್ನು ತಾವೇ ಬಾರಿಸುವವರಲ್ಲ. ಶ್ರೀಕಂಠನ್ ರವರು ತಮ್ಮ ಕಂಠದಲ್ಲಿ ಹೊರಡಿಸುವ ವಿವಿಧ ಅನುಸ್ವರಗಳು ಅದ್ವಿತೀಯವಾದವು. ಅವರ ಸಾಹಸವನ್ನು ಗಮನಿಸಿ. ಈ ತೊಂಬತ್ತು ವಯೋಮಾನದ ಕಲಾವಿದ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಮತ್ತು ಕ್ಲೀವ್‌ಲ್ಯಾಂಡ್ ತ್ಯಾಗರಾಜ ಉತ್ಸವದಲ್ಲಿ ಭಾಗವಹಿಸಿ ಮರಳಿ ಬಂದು ಮನೆಯಲ್ಲಿ ಎಂದಿನ೦ತೆ ಸಂಗೀತಪಾಠಗಳನ್ನು ಹೇಳಿಕೊಡಲು ಉತ್ಸುಕರಾಗಿರುತ್ತಾರೆ!” ಎಂದು.

‍ಲೇಖಕರು Admin

May 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: