ಆರತಿ ತ್ರಿಪುರ ಸುತ್ತಿಯೇ ಸುತ್ತಿದರು..

ಪ್ರವಾಸೋದ್ಯಮ ಇಲಾಖೆ ಇರುವುದು, ಅಗರ್‍ತಲಾ ನಗರದ ಮುಕುಟಮಣಿ ಎಂದು ಯಾವ ಹಿಂಜರಿಕೆಯೂ ಇಲ್ಲದೇ ಹೇಳಬಹುದಾದ ಉಜ್ಜಯಂತ ಅರಮನೆಯ ಒಂದು ಪಾಶ್ರ್ವದಲ್ಲಿ. ನಗರದ ಜನಸಾಂದ್ರಿತ ವಲಯದಲ್ಲಿ ಚಂದ್ರನೇ ಭೂಮಿಗೆ ಇಳಿದು ಬಂದು ವಿರಾಜಮಾನನಾಗಿದ್ದಾನೆಯೋ ಎಂಬ ವಿಸ್ಮಯ ಮೂಡಿಸುವ ಈ ಉಜ್ಜಯಂತ ಅರಮನೆ ಒಂದು ಶತಮಾನಕ್ಕೂ ಹಳೆಯದು.

1901ರಲ್ಲಿ ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪದಲ್ಲಿ ಕಟ್ಟಿರುವ ಈ ಅರಮನೆಯ ಮುಂದೆ ಮೊಗಲ್ ಶೈಲಿಯಲ್ಲಿ ವಿನ್ಯಾಸ ಮಾಡಿರುವ ಒಳ್ಳೆಯ ಹೂದೋಟ ಹಾಗೂ ಹಸಿರಿನ ಜೀವಸೆಲೆಗಳಿವೆ. ಸದಾ ಹಕ್ಕಿಗಳ ಕಲರವದಿಂದ ಕಂಗೊಳಿಸುವ ಈ ಅರಮನೆಯನ್ನು, ಮಹಾರಾಜ ರಾಧಾ ಕಿಶೋರ್ ಮಾಣಿಕ್ಯ ಕಟ್ಟಿಸಿದರು. ಈಗ ಈ ಅರಮನೆಯನ್ನು ಸರ್ಕಾರವು ತನ್ನ ಸ್ವಾಧೀನಕ್ಕೆ ಪಡೆದಿದ್ದು, ತ್ರಿಪುರದ ಇಡೀ ಸಂಸ್ಕøತಿಯನ್ನು ಬಿಂಬಿಸುವ ಒಂದು ವಸ್ತಸಂಗ್ರಹಾಲಯವನ್ನಾಗಿ ಪರಿವರ್ತಿಸಿರುವುದು ಸ್ವಾಗತಾರ್ಹ.

ಎರಡು ಅಂತಸ್ತುಗಳಿರುವ ಈ ಸುಂದರ ಅರಮನೆಗೆ ಕನಿಷ್ಠ ಪ್ರವೇಶ ಶುಲ್ಕವನ್ನು ವಿಧಿಸಲಾಗಿದೆ. 1899-1901ರಲ್ಲಿ ನಿರ್ಮಾಣಗೊಂಡು ಕಂಗೊಳಿಸುವ ಉಜ್ಯಂತಾ ಅರಮನೆಗೆ ಮೂರು ಗುಮ್ಮಟಗಳಿದ್ದು, 86 ಅಡಿ ಎತ್ತರದಲ್ಲಿ ಅವು ರಾರಾಜಿಸುತ್ತಿವೆ. ಈ ಅರಮನೆಯ ಪ್ರವೇಶ ದ್ವಾರದಿಂದ ಒಳಗೆ ಕಣ್ಣುಹಾಯಿಸಿದಾಗ ಮಧ್ಯ ಉದ್ದಕ್ಕೂ ಇರುವ ನೀರಿನ ಸೆಲೆಗಳು, ನೀರು ಚಿಮ್ಮುವ ಕಾರಂಜಿಗಳು ತಾಜ್‍ಮಹಲ್‍ನನ್ನು ನೆನಪಿಸುವಂತಿದೆ.

ಅರಮನೆಯ ನೇರ ಪ್ರವೇಶವೇ ಸೊಗಸು. ರಾಜ ಗಾಂಭೀರ್ಯವನ್ನು ಸೂಚಿಸುವ ದೊಡ್ಡ ದೊಡ್ಡ ಮೆಟ್ಟಿಲುಗಳು, ಕಮಾನಿನಾಕೃತಿಯ ವಿಶಾಲ ದ್ವಾರಗಳಿಗೆ ನಮ್ಮನ್ನು ಕರೆದೊಯ್ಯುತ್ತವೆ. ಒಳಗಿನ ನೆಲಹಾಸಿಗೆ ಬಳಸಿರುವ ಅಮೃತಶಿಲೆಯ ಕುಸರಿಯನ್ನು ಉಳಿಸಲು, ಈಗ ಕಾರ್ಪೆಟ್ ಬಳಸಿರುವುದನ್ನು ಇಲ್ಲಿ ಕಾಣಬಹುದು. ಬೃಹದಾಕಾರದ ಕಿಟಕಿಗಳು, ಅವಕ್ಕೆ ಅಲಂಕೃತ ಮರದ ಚೌಕಟ್ಟು, ಆಕರ್ಷಣೀಯವಾಗಿದೆ. ಮರದ ಮೇಲ್ಛಾವಣಿಯೂ ಸಹ ಅಷ್ಟೇ ಸೊಗಸು.

ತ್ರಿಪುರಾದ ಸರ್ಕಾರಿ ವಸ್ತುಸಂಗ್ರಹಾಲಯವೂ ಮೂರು ವಿಭಾಗಗಳಲ್ಲಿ ನಮಗೆ ತೆರೆದುಕೊಳ್ಳುತ್ತದೆ. ಮೊದಲನೆಯದು ಪುರಾತತ್ವ ವಿಭಾಗ, ಎರಡನೆಯದು ಕಲಾ ವಿಭಾಗ ಹಾಗೂ ಕೊನೆಯದು ಬುಡಕಟ್ಟು ಸಂಸ್ಕøತಿ ವಿಭಾಗ. ಮೂರು ವಿಭಾಗಗಳನ್ನು ನೋಡಲು ಇಡೀ ದಿವಸ ಬೇಕು. ಎಲ್ಲಾ ವಸ್ತು ವಿಷಯಗಳಿಗೂ ಒಂದು ಚಿಕ್ಕ ಮಾಹಿತಿ ಪಟ್ಟಿ ನೀಡಲಾಗಿದೆ. ತ್ರಿಭಾಷಾ ಸೂತ್ರವನ್ನು ಚೆನ್ನಾಗಿ ಅಳವಡಿಸಿಕೊಳ್ಳಲಾಗಿದ್ದು, ಹಿಂದಿ, ಇಂಗ್ಲಿಷ್‍ಗಳಲ್ಲದೆ ಇಲ್ಲಿನ ಸ್ಥಳೀಯ ಭಾಷೆಯಾದ ಕೊಕ್‍ಬೊರಾಕ್‍ಗೆ ಕೂಡ ಸ್ಥಾನ ನೀಡಿರುವ ಈ ಭಾಷಾಭಿಮಾನಕ್ಕೆ ಹೆಮ್ಮೆ ಎನಿಸಿತು. ಆದರೂ ಜನಬಳಕೆಯಲ್ಲಿ ಬಂಗಾಳಿ ಭಾಷೆಗೆ ಇಲ್ಲಿ ಸಾರ್ವಭೌಮತೆಯಿದೆಯೆಂಬುದು ನಿಜ.

ವಸ್ತುಸಂಗ್ರಹಾಲಯಲ್ಲಿ ಪುರಾತನ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳ ವಿಶಿಷ್ಟ ಸಂಗ್ರಹವಿದೆ. ತ್ರಿಪುರಾದಲ್ಲಿ ಬಹಳಷ್ಟು ರೀತಿಯ ಬುಡಕಟ್ಟಿನವರು ವಾಸಿಸುತ್ತಿರುವುದರಿಂದ ಇಲ್ಲಿ ಅನೇಕ ಮುಖ್ಯವಾದ ಬುಡಕಟ್ಟುಗಳ ಸಂಸ್ಕøತಿ ಹಾಗೂ ಉಪಸಂಸ್ಕøತಿಗಳನ್ನು ಬಿಂಬಿಸಲು ಯತ್ನಿಸಿದ್ದಾರೆ. ಈ ಬುಡಕಟ್ಟುಗಳು ಧರಿಸುವ ಆಭರಣಗಳು, ಬಳಸುವ ವಸ್ತ್ರ ಹಾಗೂ ಜನಪದ ವಾದ್ಯಗಳ ವಿಶೇಷ ಸಂಗ್ರಹ ಮನ ಸೆಳೆಯುವಂತಿದೆ.

ಈ ವಸ್ತುಸಂಗ್ರಹಾಲಯವು ಇನ್ನೂ ಸುಂದರವಾಗಿ ಕಾಣಲು ವಿಶೇಷ ಕಾರಣವೊಂದಿದೆ. ಅದೇ ಈ ಅರಮನೆಗೆ ಅಂಟಿಕೊಂಡಿರುವ ಪುಟ್ಟ ಕೊಳ. ರಾತ್ರಿಯ ಹೊತ್ತಿನಲ್ಲಂತೂ, ಬಣ್ಣ ಬಣ್ಣದ ದೀಪಾಲಂಕಾರದಿಂದ, ಅರಮನೆ ಹೊಳೆಯುತ್ತಿದ್ದರೆ, ಅದರ ಪ್ರತಿಬಿಂಬ ಈ ಕೊಳದಲ್ಲಿ ಬಿದ್ದು, ಛಾಯಾಗ್ರಾಹಕರ ಕಣ್ಣಿಗಂತೂ ಹಬ್ಬವಾಗಿ ಕಾಣುತ್ತದೆ. ಆದರೆ ಈ ಕೊಳವನ್ನು ಇನ್ನೂ ಶುಭ್ರ ಹಾಗೂ ಸ್ವಚ್ಛವಾಗಿಟ್ಟು ಕೊಳ್ಳಬಹುದಿತ್ತು. ಸಾರ್ವಜನಿಕರಿಗೆ ಈ ಕೊಳಕ್ಕೆ ಮುಕ್ತ ಪ್ರವೇಶ ವಿರುವುದರಿಂದ, ಅಲ್ಲಿನ ತಳ್ಳುಗಾಡಿಯ ವ್ಯಾಪಾರಿಗಳು, ಅವರ ಕುಟುಂಬಗಳು ಶೌಚ, ಸ್ನಾನಾದಿಗಳಿಗೆ ಈ ಕೊಳವನ್ನೇ ಉಪಯೋಗಿಸುತ್ತಿದ್ದುದ್ದನ್ನು ಹಲವು ಬಾರಿ ಕಂಡೆ.

ಉಜ್ಯಂತ ಅರಮನೆಯನ್ನು ನಾವು ಕೇಂದ್ರ ಬಿಂದುವಾಗಿಟ್ಟುಕೊಂಡರೆ, ಅದರ ಸುತ್ತಲೂ, ಎರಡು ಬದಿಯಲ್ಲಿ ಎರಡು ಮುಖ್ಯ ರಸ್ತೆಗಳ ಹಾದು ಹೋಗುತ್ತವೆ. ಆ ರಸ್ತೆಗಳೂ ಇಡೀ ನಗರದ ಧಾರ್ಮಿಕ ಕೇಂದ್ರವೆಂದು ಕರೆದರೆ ಅಡ್ಡಿಯಿಲ್ಲ. ಹಿಂದು ಪರಂಪರೆಯ ಪ್ರಕಾರ ಮುಕ್ಕೋಟಿ ದೇವತೆಗಳಿದ್ದಾರೆಂಬ ಕಲ್ಪನೆಗೆ ಇಲ್ಲಿ ಇಂಬು ಕೊಟ್ಟಂತಿದೆ. ಪ್ರಸಿದ್ಧ ಜಗನ್ನಾಥನ ದೇವಸ್ಥಾನದಿಂದ ಹಿಡಿದು, ಮಾ ಕಾಳಿ, ಶ್ರೀಕೃಷ್ಣ, ಶಾರದೆ ಹೀಗೆ ಒಂದರ ಪಕ್ಕ ಒಂದರಂತೆ ದೇವಾಲಯಗಳ ಜಾತ್ರೆಯೇ ಇಲ್ಲಿದೆ. ಸಂಜೆ ದೇವಸ್ಥಾನಗಳಿಂದ ಶಂಖ, ಜಾಗಟೆಗಳಿಂದ ಕೂಡಿದ ಘಂಟಾನಾದದೊಂದಿಗೆ ಕರ್ಪೂರ, ಊದುಬತ್ತಿ, ಸಾಂಬ್ರಾಣಿಗಳ ವಿಶಿಷ್ಟ ಪರಿಮಳವು ಎಡಬಿಡದೇ ಓಡಾಡುವ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಗಳಲ್ಲಿ, ಆ ವಾಹನದ ಹೊಗೆ ಮಿಶ್ರಿತ ಗಾಳಿಯಲ್ಲಿ ತನ್ನ ಇರುವನ್ನು ಸಾರಲು ಶಕ್ತಿಮೀರಿ ಯತ್ನಿಸುತ್ತಿದ್ದೆಯೇನೋ ಎಂದು ಭಾಸವಾಗುತ್ತದೆ.

ಬಂಗಾಳ, ಒರಿಸ್ಸಾ ಈ ರಾಜ್ಯಗಳಿಗಿರುವ ಸಾಂಸ್ಕøತಿಕ, ಸಾಮಾಜಿಕ ಸಾಮ್ಯತೆಗಳು, ತ್ರಿಪುರದ ಮಣ್ಣಿನ ಕಣಕಣದಲ್ಲೂ ಬೆಸೆದು ಹೋಗಿದೆ ಎಂದು, ಹೊರರಾಜ್ಯದಿಂದ ಬಂದ ನಮ್ಮಂತವರಿಗೆ ಒಂದೇ ಏಟಿಗೆ ಗೋಚರವಾಗುತ್ತದೆ. ಆದರೆ, ಇಲ್ಲಿನ ಜನ ಈ ಮಾತನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ!

ಉಜ್ಯಂತಾ ಅರಮನೆಯ ಆಸುಪಾಸಿನ ದೇವಾಲಯಗಳಲ್ಲಿ ಪ್ರಮುಖವಾದದ್ದು, ಜಗನ್ನಾಥನ ದೇವಾಲಯ, ಪುರಿಯ ಜಗನ್ನಾಥನನ್ನು ನೆನಪಿಸುವ ಅಂಥದ್ದೇ ಮುಖಚಹರೆಗಳನ್ನು ಹೊಂದಿದ ಈ ದೇವಸ್ಥಾನದ ತುಂಬಾ ಶ್ರೀಕೃಷ್ಣನ ಭಕ್ತಾದಿಗಳು ತುಂಬಿರುತ್ತಾರೆ. ನಾನು ಆ ದೇವಾಲಯಕ್ಕೆ ಹೋದ ದಿನ ಏಕಾದಶಿಯಾದ್ದರಿಂದ, ಕಾಲಿಡಲೂ ಜಾಗವಿಲ್ಲದಷ್ಟು ಎಲ್ಲ ವಯೋಮಾನದ ಭಕ್ತರಿಂದ ಜಗನ್ನಾಥನ ದೇವಸ್ಥಾನ ಕಳೆಕಳೆಯಾಗಿತ್ತು. ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೂಡ, ಕಾಲೇಜಿಗೆ ಹೋಗುವ ಆಧುನಿಕ ವೇಷಭೂಷಣಗಳ ಹುಡುಗ-ಹುಡುಗಿಯೂ ಇದ್ದರು ಎಂಬುದು ನನಗೆ ಕೊಂಚ ಅಚ್ಚರಿ ಮೂಡಿಸಿತು.

ಯಾವುದೇ ಪಂಥವಾಗಲೀ, ಆಚರಣೆಯಾಗಲೀ ಮುಂದುವರಿಯಬೇಕಾದರೆ, ಚಿರಾಯುವಾಗಬೇಕಾದರೆ, ಯುವಜನಾಂಗದಲ್ಲಿ ಅದರ ಬಗ್ಗೆ ಆಸಕ್ತಿ ಮೂಡಿದರೆ ಸಾಕು ! ನೀವು ಇನ್ನೇನೂ ಮಾಡುವುದು ಬೇಡ ಎಂಬ ಅನುಭವಿಗಳ ಮಾತನ್ನು ನೆನಪಿಸಿಕೊಂಡೆ. ಜಗನ್ನಾಥನ ಮಂದಿರದಲ್ಲಿ ಅಂದು ನಡೆದ ಆಚರಣೆಗಳ ಬಗ್ಗೆ ಹೇಳಲೇಬೇಕು. ನಾನು, ನನ್ನ ಸಿದ್ಧಾಂತ ಹಾಗೂ ನಂಬಿಕೆಗಳನ್ನು ಹೇರುತ್ತಿಲ್ಲವೆಂಬ ಕನಿಷ್ಠ ಜ್ಞಾನದೊಂದಿಗೆ ಈ ಮಾತುಗಳನ್ನು ಹೇಳಬಯಸುತ್ತೇನೆ. ನಾನು ಒಬ್ಬ ಕಟ್ಟಾ ವಿಶ್ವಮಾನವಗಳು. ನನ್ನನ್ನು ಈ ರೀತಿ ಮುಕ್ತ ಮನಸ್ಸಿನಿಂದ, ಎಲ್ಲಾ ವಿಚಾರಗಳಿಗೆ ತೆರೆದುಕೊಳ್ಳುವ ವಿಶಾಲ ಮನೋಭಾವಗಳನ್ನು ಬಿತ್ತಿ ಬೆಳೆಸಿದ ನನ್ನ ತಂದೆ ತಾಯಿಗಳಿಗೆ ನಾನು ಚಿರಋಣಿ.

ಯಾವುದೇ ಜಾತಿಯ, ಧರ್ಮದ ದೇವಸ್ಥಾನ, ಗುಡಿ, ಮಸೀದಿ, ಚರ್ಚು, ಗುರುದ್ವಾರ, ಸ್ತೂಪಗಳಿಗೆ ನಾನು ಒಂದೇ ಬಗೆಯ ಭಾವದೊಂದಿಗೆ ಪ್ರವೇಶಿಸುತ್ತೇನೆ. ದೇವರಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಈ ಆಚರಣೆಗಳು, ಸಂಭ್ರಮ-ಸಡಗರಗಳನ್ನು ಒಂದು ಜೀವಿಸುವ ಸಂಸ್ಕತಿಯ ಭಾಗವೆಂದು ನಂಬುತ್ತೇನೆ. ಹಾಗಾಗಿ ಇವುಗಳ ಬಗ್ಗೆ ನನಗೆ ಅಸಡ್ಡೆಯಿಲ್ಲ, ಬದಲಿಗೆ ಗೌರವವಿದೆ. ಮೂಢನಂಬಿಕೆ – ಕಂದಾಚಾರಗಳನ್ನು ಸಂಪೂರ್ಣವಾಗಿ ವಿರೋಧಿಸುವ ನಾನು, ದೇವಾಲಯಗಳು ಎಲ್ಲರನ್ನೂ ಸಮಾನವಾಗಿ ಕಂಡು ಭಾತೃತ್ವವನ್ನು ಬೆಳೆಸುವ ಕೇಂದ್ರಗಳಾಗಬೇಕೆಂದು ನಂಬುತ್ತೇನೆ.

ಜಗನ್ನಾಥ ದೇವಾಲಯದಲ್ಲಿ, ಅಂದೂ ಅಷ್ಟೂ ಜನರು, ಒಟ್ಟಿಗೆ ಜಗನ್ನಾಥನಿಗೆ, ಶ್ರೀಕೃಷ್ಣನಿಗೆ ಆರತಿ ಮಾಡುತ್ತಾ, ನಂತರ ಹರೆರಾಮ, ಹರೆ ಕೃಷ್ಣಾ… ಎನ್ನುತ್ತಾ ಒಟ್ಟಿಗೇ ನೃತ್ಯ ಮಾಡಿದ್ದು, ಚೇತೋಹಾರಿಯಾಗಿತ್ತು. ವಯಸ್ಸಿನ ಹಂಗಿಲ್ಲದೇ, ತಾವು ತೊಟ್ಟ ವೇಷಭೂಷಣಗಳ ಪರಿವಿಲ್ಲದೇ, ಕೇವಲ ಭಕ್ತಿಯೊಂದೇ ಅವರ ಕೈಹಿಡಿದು, ಎಲ್ಲಾ ನಾಚಿಕೆ, ಸಂಕೋಚಗಳನ್ನು ಆಚೆಗೆ ಸರಿಸಿದಂತಿತ್ತು. 70, 80 ವರ್ಷದ ಮುದುಕಿಯರು ಬಿಡುಬೀಸಾಗಿ ನೃತ್ಯ ಮಾಡುತ್ತಿದ್ದುದು ನೋಡಿ ಆನಂದತುಂದಿಲಳಾದೆ, ಆ ದೇವಾಲಯ ಸಮುಚ್ಚಯ ಸಾಕಷ್ಟು ವಿಶಾಲವಾಗಿದ್ದು, ಬಣ್ಣ ಬಣ್ಣದ ಮೀನುಗಳಿಂದ ತುಂಬಿದ ಕೊಳವೊಂದನ್ನು ಸಹಾ ಹೊಂದಿದೆ. ಕೊಳದ ಮಧ್ಯದಲ್ಲೂ ಒಂದು ಪುಟ್ಟ ಗುಡಿಯಿದ್ದು, ನೋಡಲು ಆಕರ್ಷಕವಾಗಿದೆ. ಇಡೀ ಆವರಣದಲ್ಲಿ ಬೇರೆ ಊರುಗಳಿಂದ ಬಂದ ಜನ ಉಳಿದುಕೊಳ್ಳಲೆಂದು ಅತಿ ಕಡಿಮೆ ದರದಲ್ಲಿ ಬಾಡಿಗೆಗೆ ಕೊಠಡಿಗಳು ದೊರೆಯುತ್ತವೆ.

ಕೆಲವು ವಿಧವೆಯರು, ದೇವಸ್ಥಾನಕ್ಕೆ ಸಂಬಂಧಿಸಿದವರು ಖಾಯಂ ಆಗಿ ಇಲ್ಲಿನ ಅನೇಕ ಕೊಠಡಿಗಳಲ್ಲಿದ್ದಾರೆ. ಏಕಾದಶಿಯಂದು, ಮಸಾಲೆಯುಕ್ತ ಆಹಾರ, ಅನ್ನ ಇತ್ಯಾದಿ ತ್ಯಜಿಸುವುದರಿಂದ ಕೇವಲ ಕರಿಮೆಣಸು ಹಾಕಿ ಬೇಯಿಸಿದ ತರಕಾರಿ, ಬೇಯಿಸಿದ ಕಡಲೆಕಾಯಿಬೀಜ(ಇವರು ಅದನ್ನು ಬಾದಾಮಿ ಎನ್ನುತ್ತಾರೆ) ಬಡವರ ಬಾದಾಮಿ ಎನ್ನುವುದನ್ನು ಇಲ್ಲಿ ನಿಜವಾಗಿ ಅದಕ್ಕೆ ಬಾದಾಮಿ ಎಂದು ಕರೆದಾಗ ನನಗೆ ಒಳಗೊಳಗೆ ಖುಷಿಯಾಯಿತು. ನಂತರ ಕುಡಿಯಲು ಒಂದು ಲೋಟದ ತುಂಬಾ ಗಟ್ಟಿ ಕೆನೆಭರಿತ ಹಾಲು ನೀಡುತ್ತಾರೆ. ಇಲ್ಲಿನ ಅನೇಕ ಮನೆಗಳಲ್ಲೂ ಏಕಾದಶಿ ಆಚರಣೆ ಮಾಡುವ ಅನೇಕ ಗೃಹಿಣಿಯರಿದ್ದು, ಅಂದು ಈರುಳ್ಳಿ, ಬೆಳ್ಳುಳ್ಳಿ ಬಳಸದೆ ಅಡುಗೆ ಮಾಡುವ ರೂಢಿ ಆಚರಣೆಯಲ್ಲಿದೆಯಂತೆ. ಅಷ್ಟೇ ಅಲ್ಲ ಒಂದು ಜಾತಿಗೆ ಮಾತ್ರ ಸೀಮಿತವಾಗದೆ ಹಲವು ಜಾತಿಗಳವರು ಈ ಪದ್ಧತಿಯನ್ನು ಅನುಸರಿಸುವುದುಂಟು!

ಜಗನ್ನಾಥ ಮಂದಿರವಲ್ಲದೆ, ಕೊಲ್ಕತ್ತಾದ ಬೇಲೂರು ಮಠದ ಶಾಖೆಯಂತೆ ಕಾಣುವ ರಾಮಕೃಷ್ಣ ಪರಮಹಂಸ ಹಾಗೂ ಶಾರದಾ ಮಾತೆಯ ಮೂರ್ತಿಗಳಿರುವ ಶಾರದಾ ಮಂದಿರವು ಪ್ರಶಾಂತವಾಗಿದ್ದು, ಹಲವಾರು ಗಿಡಮರಗಳಿಂದ ತುಂಬಿ ಹಸಿರಾಗಿದೆ. ಅದರಿಂದ ಸ್ವಲ್ಪ ಮುಂದೆ ಬಂದರೆ, ಕಾಳಿ ಮಾತೆಯ ಪ್ರಸಿದ್ಧ ದೇವಾಲಯವಿದ್ದು, ಮಂಗಳವಾರ ಹಾಗೂ ಶುಕ್ರವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಒಟ್ಟಾರೆ ಸರ್ಕಾರದ ರಾಜ್ಯಸಭೆಯ ಭವನದ ಸುತ್ತಮುತ್ತ ಈ ರೀತಿ ದೇವಾನು ದೇವತೆಗಳು ತುಂಬಿಕೊಂಡು, ಅವರ ಆಶೀರ್ವಾದದ ಮಳೆಗರೆಯುತ್ತಿರುವುದರಿಂದ, ಅಗರ್‍ತಲಾಕ್ಕೆ ಇನ್ನೂ ಉತ್ತಮ ಭವಿಷ್ಯವಿದೆಯೇನೋ? ಯಾರಿಗೆ ಗೊತ್ತು!
ಈ ದೇವಾಲಯಗಳನ್ನು ದಾಟಿದ ತಕ್ಷಣ ಅನೇಕ ಸಿಹಿ ತಿನಿಸು ಹಾಗೂ ಉತ್ತರ ಭಾರತದ ಬಹು ಜನಪ್ರಿಯ ‘ಚಾಟ್’ ಅಂಗಡಿಗಳಿವೆ. ಆಧ್ಯಾತ್ಮ ಜಗತ್ತಿಗೆ ಹೋದವರು, ಹೊರಗೆ ಬಂದ ಕೂಡಲೇ ಪಾರಮಾರ್ಥಿಕ ಜೀವನದ ರಸಾಸ್ವಾದನೆ ಮಾಡಲು ಈ ಜಾಗಗಳಿವೆಯೇನೋ ಎಂಬಂತೆ ಎರಡು ವೈರುಧ್ಯಗಳ ನಡುವಿನ ಸಂಘರ್ಷವೇ ಜೀವನ ಎನ್ನಬಹುದು. “ಶೇರೋವಾಲಿ ಸ್ವೀಟ್ಸ್” ಎನ್ನುವ ಜನಪ್ರಿಯ ಅಂಗಡಿಯಂತೂ ಜನಜಂಗುಳಿಯಿಂದ ತುಂಬಿಕೊಂಡು, ಸದಾ ಚಟುವಟಿಕೆಯ ಕೇಂದ್ರವಾಗಿದೆ. ಕಾಲೇಜಿನ ಯುವಕ-ಯುವತಿಯರಿಂದ ಹಿಡಿದು, ಇಡೀ ಕುಟುಂಬಗಳೇ ಬಂದು, ಇಲ್ಲಿನ ರುಚಿಕರ ತಿನಿಸುಗಳನ್ನು ಸವಿದು ಹೋಗುವುದನ್ನು ನೋಡಬಹುದು.

ತ್ರಿಪುರದ ಪ್ರಮುಖ ಪ್ರವಾಸೀ ಆಕರ್ಷಣೆಯ ಸ್ಥಳಗಳು ಹಾಗೆ ನೋಡಿದರೆ, ಅಗರ್‍ತಲಾದಿಂದ ಹೆಚ್ಚೇನು ದೂರವಿಲ್ಲ. 100-200 ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿ ಎಲ್ಲಾ ಸ್ಥಳಗಳು ಇವೆ. ಆದರೆ ಬೇರೆ ಬೇರೆ ದಿಕ್ಕುಗಳಲ್ಲಿ ಇವು ಹರಡಿಕೊಂಡಿವೆ. ಹಾಗಾಗಿ ಒಂದೇ ದಿಕ್ಕಿನಲ್ಲಿ ಹೋದರೆ, ನಾವು ಒಂದು ಅಥವಾ ಎರಡು ಪ್ರೇಕ್ಷಣೀಯ ಸ್ಥಳಗಳನ್ನು ಒಂದೇ ದಿನದಲ್ಲಿ ಮುಗಿಸಬಹುದು. ಮತ್ತೊಂದಕ್ಕೆ ನಾವು ಅಗರ್‍ತಲಾಕ್ಕೆ ವಾಪಸು ಬರಬೇಕು ಅಥವಾ ಎಲ್ಲಿಯಾದರೂ ಉಳಿದು ಮತ್ತೊಂದು ಜಾಗಕ್ಕೆ ಪ್ರಯಾಣ ಮಾಡಬೇಕು.

ಕೆಲವು ಸ್ಥಳಗಳಂತೂ ಬೆಟ್ಟಗುಡ್ಡಗಳ ಮೂಲಕ ತಿರುವು ರಸ್ತೆಗಳಲ್ಲಿ ಪಯಣಿಸುವ ಜಾಗಗಳಾದ್ದರಿಂದ ಅವನ್ನು ಇಷ್ಟು ಕಿಲೋಮೀಟರ್ ದೂರ ಅನ್ನುವುದಕ್ಕಿಂತಾ, ಇಷ್ಟು ಗಂಟೆಗಳ ಪ್ರಯಾಣ ಎಂದು ಹೇಳಬೇಕಾಗುತ್ತದೆ. ಏಕೆಂದರೆ, ಕಾರಿನಲ್ಲಿ ಪಯಣಿಸುವಾಗ, ಸರಿಸುಮಾರಾಗಿ, ಒಂದು ಗಂಟೆಗೆ 50 ರಿಂದ 60 ಕಿಮೀಗಳಷ್ಟು ಕ್ರಮಿಸಬಹುದು. ಆದರೆ ಇಲ್ಲಿ, ಗುಡ್ಡಗಾಡು, ಬೆಟ್ಟ ಸುತ್ತಿ ಬಳಸಿ ತಬ್ಬುವ ಸುರಳಿ ರಸ್ತೆಗಳ ತಿರುವುಗಳಿಂದ 50 ಕಿಮೀ ಕ್ರಮಿಸಲು, 4 ರಿಂದ 5 ಗಂಟೆ ಪಯಣಿಸಬೇಕಾಗುತ್ತದೆ. ಹಾಗಾಗಿ ಕಿಮೀ ಲೆಕ್ಕಕ್ಕಿಂತಾ ಇಲ್ಲಿ, ಒಂದು ಜಾಗದಿಂದ ಮತ್ತೊಂದಕ್ಕೆ ಎಷ್ಟು ಗಂಟೆಗಳ ಪ್ರಯಾಣ ಎಂದು ಲೆಕ್ಕ ಹಾಕಬೇಕಾಗುತ್ತದೆ.

ಹಾಗಾಗಿ, ಮೊದಲು ನಾನು ಅಗರ್‍ತಲಾ ನಗರದಲ್ಲಿರುವ ಕೆಲವು ನೋಡಲೇಬೇಕಾದ ಸ್ಥಳಗಳ ಪರಿಚಯ ಮಾಡಿಕೊಡುತ್ತೇನೆ. ನಂತರ ಒಂದೊಂದೇ ಹೆಜ್ಜೆಯಿಟ್ಟು ಮುಂದಿನ ಜಿಲ್ಲೆಗಳಿಗೆ ಪ್ರವೇಶಿಸಬಹುದು.

ಅಗರ್‍ತಲಾ ರಾಜಧಾನಿಯಾಗಿರುವುದರಿಂದ, ತ್ರಿಪುರದ ಬಹುಪಾಲು ಬಾಂಗ್ಲಾದೇಶದ ಗಡಿಯೊಡನೆ ಹಂಚಿಕೊಂಡಿದೆಯೆಂದು ಓದಿಕೊಂಡಿದ್ದ ನನಗೆ, ಅಲ್ಲಿಗೆ ಹೋದ ಮಾರನೆಯ ದಿನವೆ ಒಂದು ಅಚ್ಚರಿ ಕಾದಿತ್ತು. ಹಾಗೆ ಹಣ್ಣಿನ ಮಾರುಕಟ್ಟೆ ಸುತ್ತಲು ಹೋದವಳಿಗೆ, ಯಾರೋ ಬಾರ್ಡರ್ ಅಂತ ತಳ್ಳುಗಾಡಿಯ ಆಟೋರಿಕ್ಷಾದವನ ಜೊತೆ ಚೌಕಾಸಿ ಮಾತನಾಡುತ್ತಿದ್ದರು. ನನಗೆ ಬರುವ ಹರಕುಮುರುಕು ಹಿಂದಿಯಲ್ಲೇ ನಾನು ಬಾರ್ಡರ್ ಅಂದರೆಲ್ಲಾ ? ಅದೇನು ಬಾಂಗ್ಲಾ ಬಾರ್ಡರ್ ಆ? ಅಂದಾಗ ಆಕೆ ಹೌದು ಎಂದರು.

ನನಗೆ ಒಂದೇ ಏಟಿಗೆ ಎದೆ ಝಲ್ಲೆಂದ ಹಾಗಾಗಿ ಅಲ್ಲಿಗೆ ನೀವು ಸೈಕಲ್ ರಿಕ್ಷಾದಲ್ಲಿ ಹೋಗುತ್ತಿದ್ದಾರಾ? ಅದು ಹೇಗೆ ? ಇಲ್ಲಿಂದ ಬಾಂಗ್ಲಾದೇಶದ ಗಡಿ ಎಷ್ಟು ದೂರ ? ಎಂದೆಲ್ಲಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಹೋದೆ. ಅಷ್ಟರಲ್ಲಿ ಸ್ವಲ್ಪ ಹಿಂದಿ ಬಲ್ಲ ಎನ್ನೊಬ್ಬ ಸೈಕಲ್ ರಿಕ್ಷಾದವನು ತಾನಾಗಿಯೇ ಮುಂದೆ ಬಂದು, ಬಾಂಗ್ಲಾ ಗಡಿ ಇಲ್ಲಿಂದ ಕೇವಲ ಎರಡು ಕಿಮೀ ದೂರದಲ್ಲಿದೆ ಎಂದೂ, ಸಂಜೆ 5 ಗಂಟೆಗೆ ಎರಡೂ ಕಡೆಯ ಪಹರೆಯವರು ಧ್ವಜ ಹಾರಿಸಿ, ವಂದನೆಗಳನ್ನು ಸ್ವೀಕರಿಸುವ ರಿವಾಜು ಇದೆಯೆಂದೂ, ಅದನ್ನು ನೋಡಲು, ನಮ್ಮ ಭಾರತೀಯರು ಗಡಿಯ ಈ ಕಡೆ, ಬಾಂಗ್ಲಾದೇಶದವರು ಗಡಿಯ ಆ ಕಡೆ ಇರುತ್ತಾರೆಂದೂ, ನನಗೆ ಆಸಕ್ತಿಯಿದ್ದರೆ, ಅವನು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಕವಾಯತು, ಧ್ವಜವಂದನೆ ಆಗುವವರೆಗೂ ಕಾದಿದ್ದು, ನಂತರ ಇಲ್ಲಿಗೇ ವಾಪಸು ಕರೆದುಕೊಂಡು ಬಿಡುತ್ತಾನೆಂದೂ, ಅದಕ್ಕೊಂದು ದರ ನಿಗದಿ ಮಾಡಿ ತಿಳಿಸಿದ.

ನನಗಂತೂ ಆ ಕ್ಷಣ ಇದು ನಿಜವೋ, ಸುಳ್ಳೋ ಎಂದು ಅರ್ಥವಾಗದ ಸ್ಥಿತಿ. ನನ್ನ ಇನ್ನೊಂದು ಸಮಸ್ಯೆಯೆಂದರೆ, ಸೈಕಲ್ ರಿಕ್ಷಾದಲ್ಲಿ ನನಗೆ ಕುಳಿತುಕೊಳ್ಳಲು ಯಾಕೋ ಏನೋ ಮನಸ್ಸೇ ಬರುವುದಿಲ್ಲ, ಮಾನವರು ನಮ್ಮನ್ನು ಕೂರಿಸಿಕೊಂಡು ಉರಿಬಿಸಿಲಿನಲ್ಲಿ ಸೈಕಲ್ ತುಳಿಯುತ್ತಿದ್ದರೆ, ನೆರಳಿನಲ್ಲಿ ಆರಾಮವಾಗಿ ಕುಳಿತುಕೊಳ್ಳುವುದು ನನಗೆ ಭಯಂಕರ ಹಿಂಸೆ! ಹಾಗಾಗಿ, ಅವನಿಗೆ ಮಾಹಿತಿ ನೀಡಿದ್ದಕ್ಕಾಗಿ ಭಕ್ಷೀಸು ಎಂದು ಅವನ ಮುಖ ಅರಳುವಷ್ಟು ಹಣ ನೀಡಿದೆ. ನಂತರ ಬೇರೆ ನಮ್ಮ ಯಂತ್ರಚಾಲಿತ ಆಟೋರಿಕ್ಷಾ ಗೊತ್ತು ಮಾಡಿಕೊಂಡು, ಬಾಂಗ್ಲಾಗಡಿಯನ್ನು ನೋಡಲು ಹೋದೆ!
ಇಲ್ಲಿ ಬಾಂಗ್ಲಾ ಗಡಿಯ ಜೊತೆಗಿನ ನನ್ನ ಸಂಬಂಧವನ್ನು ಬಿಚ್ಚಿಡಲೇ ಬೇಕು.

ಎರಡು ವರ್ಷಗಳ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಏರ್ಪಡಿಸಿದ್ದ ಬಹುಭಾಷಾ ಕವಿಗೋಷ್ಠಿಗೆಂದು ಕವಿತೆ ಓದಲು ಅಸ್ಸಾಂನ ಗೌಹಾತಿ ನಗರಕ್ಕೆ ಬಂದಿದ್ದೆ. ನಾನು ಈ ರೀತಿ ಬೆಂಗಳೂರಿನಿಂದ ಬಹುದೂರ ಹೊಸ ಜಾಗಕ್ಕೆ ಹೋಗುವಾಗ, ನನ್ನ ಭೇಟಿಯ ಸದುಪಯೋಗ ಪಡೆಯಲು ನಾನು ಹೋದ ಕಾರ್ಯಕ್ರಮದ ನಂತರವೂ ಎರಡು-ಮೂರು ದಿನ ಉಳಿಯುವಂತೆ ತಯಾರಿ ಮಾಡಿಕೊಳ್ಳುತ್ತೇನೆ. ಅಲ್ಲಿ ಕಾರ್ಯಕ್ರಮ ನಡೆಯುವ ವೇಳೆ ನಾನು ಎಲ್ಲಿಗೂ ಸುತ್ತಾಡಲು ಹೋಗುವುದಿಲ್ಲ. ಕಾರ್ಯಕ್ರಮಕ್ಕೆಂದು ಸಂಯೋಜಕರು ಕರೆಸಿಕೊಂಡ ಮೇಲೆ ಕಾರ್ಯಕ್ರಮ ನಡೆಯುವ ಸಮಯದಲ್ಲಿ ಅಲ್ಲಿರಬೇಕಾದ್ದು ನಮ್ಮ ಕರ್ತವ್ಯ. ಗೋಷ್ಠಿಗಳು ಮುಗಿದ ಮೇಲೆ ಸಂಜೆಗಳು ಹೇಗೂ ಬಿಡುವಿರುತ್ತದೆ. ಅಲ್ಲೇ ಸ್ಥಳೀಯ ಸುತ್ತಾಟ ಮಾಡಬಹುದು.

ಆದರೆ, ನಮ್ಮ ಕರ್ತವ್ಯವಾದ ಮೇಲೆ ನಾನು ಮೇಘಾಲಯವನ್ನು ನೋಡಲು ಹೊರಟೆ, ಮೇಘಗಳ ಈ ಊರು ನನಗಂತೂ ಬಹಳ ಇಷ್ಟವಾಯಿತು. ನಾನು ಉಳಿದ ಹೋಟೆಲ್ ಒಂದು ಪುಟ್ಟ ಗುಡ್ಡದ ಮೇಲಿತ್ತು. ನನ್ನ ಕಾಟೇಜಿನ ಮುಂಬಾಗಿಲು ಹಾಗೂ ಹಿಂಬಾಗಿಲನ್ನು ತೆರೆದಿಟ್ಟಿದ್ದೆ. ಬೆಳಗಿನ ಝಾವ! ಆಗ ತಾನೇ ಸೂರ್ಯನ ಪ್ರವೇಶವಾಗುತ್ತಿತ್ತು. ನೋಡ ನೋಡುತ್ತಿದ್ದಂತೇ, ಮೋಡಗಳು ನನ್ನ ಕಾಟೇಜಿನ ಮುಂಬಾಗಿಲ ಮೂಲಕ ಹಾದು ಬಂದು, ಹಿಂಬಾಗಿಲ ಮೂಲಕ ಹೋಗುತ್ತಿದ್ದವು! ನಾನು ಹಾಗೇ ಯಾರೋ ನನಗೆ ಸ್ಟ್ಯಾಚು – ವಿಗ್ರಹವಾಗು ಎಂಬ ಆಣತಿ ಕೊಟ್ಟಿದ್ದಾರೇನೋ ಎಂಬಂತೇ ಎಷ್ಟೋ ಹೊತ್ತು ಮಂತ್ರ ಮುಗ್ಧಳಾಗಿ ಹಾಗೇ ಕೂತಿದ್ದೆ! ಮಡಿಕೇರಿಲೀ ಮಂಜು ಎಂಬ ಹಾಡು ಕೂಡಾ ನನ್ನ ಕಿವಿಯಲ್ಲಿ ಗೆಳೆಯ ರಾಜು ಅನಂತಸ್ವಾಮಿ ಗುನುಗುನಿಸಿದ ಹಾಗೆಯೇ ಅನಿಸಿತ್ತು… ಅಂಥಾ ಶಿಲ್ಲಾಂಗಿನಲ್ಲಿ ಅತಿ ಹೆಚ್ಚು ಮಳೆ ಬೀಳುವ, ಯಾವಾಗಲೂ ‘ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ’… ಹಾಡು ಇಲ್ಲಿನ ರಾಷ್ಟ್ರಗೀತೆಯೇನೋ ಎನಿಸುವಂತಿರುವ ಜಾಗ.

ಅಲ್ಲಿಂದ ಮುಂದೆ ಸಾಗಿದರೆ, ಅಲ್ಲೊಂದು ಬೃಹತ್ ಉದ್ಯಾನವಿದ್ದು, ಸುಂದರ ‘ಜೇಡ್ ಫಾಲ್ಸ್’ ಎಂಬ ಅತ್ಯಂತ ಮನೋಹರ ಜಲಪಾತ ಕಾಣುವ ಸ್ಥಳವಿದೆ. ಆ ಸ್ಥಳ ಅತಿ ಎತ್ತರದ ಪ್ರದೇಶ. ಅಲ್ಲಿಂದ ಕೆಳಗೆ ನೋಡಿದರೆ ಟಿಪ್ಪು ಡ್ರಾಪ್‍ಗಿಂತಾ ನಾಲ್ಕುಪಟ್ಟು ಆಳದ ಕಮರಿ, ಮರ-ಗಿಡಗಳು ಹಸಿರು ಹರಡಿ ಕೊಂಡಿರುವುದು ಕಾಣುತ್ತದೆ. ಆಗ, ಅಲ್ಲಿದ್ದ ಗೈಡ್ ಹೇಳಿದ್ದು, “ಮೇಡಂ ಆ ಕಣಿವೆ ದಾಟಿದ ತಕ್ಷಣವೇ ಅದು ಬಾಂಗ್ಲಾದೇಶ” ಎಂದು. ನನಗೆ ಮತ್ತೆ ಕುತೂಹಲ – ಅಲ್ಲಿಂದ ಬಗ್ಗಿ ಬಗ್ಗಿ, ಇಣುಕಿ ಕುಣಿದು ನೋಡಿದ್ದೇ ನೋಡಿದ್ದು! ಜೊತೆಯಲ್ಲಿದ್ದವರು ನನ್ನ ನೋಡಿ ನಕ್ಕು ನಕ್ಕು ಸುಸ್ತಾಗಿದ್ದರು.

ಯಾಕೋ ಮೊದಲಿಂದಲೂ ನನಗೆ ಈ ಗಡಿ, ಸರಹದ್ದು, ಸೀಮಾರೇಖೆಗಳ ಬಗ್ಗೆ ಇನ್ನಿಲ್ಲದ ಕುತೂಹಲ. ಪ್ರಾಣಿ, ಪಕ್ಷಿ, ಗಾಳಿ, ನೀರು, ಇವಕ್ಕೆಲ್ಲ ಇಲ್ಲದ ಗಡಿ ಸೀಮಾರೇಖೆಗಳನ್ನು ಹಾಕಿಕೊಂಡಿರುವ ಈ ಮಾನವ ಪ್ರಾಣಿಯ ಈ ವಿಚಿತ್ರ ಮನಸ್ಥಿತಿಯ ಬಗ್ಗೆ ನನಗೆ ಕನಿಕರ ಹಾಗೂ ಕೆಲವೊಮ್ಮೆ ಜಿಗುಪ್ಸೆ.

ಹೀಗೆ ಚಿರಾಪುಂಜಿಯ ಬೆಟ್ಟದ ಮೇಲಿಂದ ಇಣುಕಿ ನೋಡಿದ್ದ ಬಾಂಗ್ಲಾದೇಶದ ಗಡಿಯ “ನೋ ಮಾನ್ಸ್ ಲ್ಯಾಂಡ್”ನಲ್ಲಿ ಈಗ ನಿಲ್ಲುವ ಘಳಿಗೆಯೇ ಮತ್ತೆ ಮತ್ತೆ ಪುಳಕ ಹುಟ್ಟಿಸುತ್ತಿತ್ತು! ಸ್ವಲ್ಪ ಗದಗುಟ್ಟಿಸುವ ಚಳಿಗಾಳಿಯಲ್ಲಿ ಆಟೋ ಹತ್ತಿದ ನಾನು, ಜರ್ಮನಿಯ ಬರ್ಲಿನ್ ಗೋಡೆಯ ಚೆಕ್‍ಪೋಸ್ಟ್‍ನಲ್ಲಿ ನಿಂತು ಧ್ವಜ ವಂದನೆ ಸ್ವೀಕರಿಸಿದ್ದು ನೆನಪಾಯ್ತು.

ಊರಿನ ಮಾರುಕಟ್ಟೆ, ಸರಬರ ಓಡಾಡುವ ಜನಜಂಗುಳಿ, ಅಲ್ಲಿ ಇಲ್ಲಿ ಆಟವಾಡುತ್ತಾ, ಕಿರುಚುತ್ತಾ ಓಡಾಡುತ್ತಿರುವ ಮಕ್ಕಳು, ಮನೆವಾರ್ತೆ ಮಾತನಾಡುತ್ತಾ ತರಕಾರಿ, ಸೊಪ್ಪು ಬಿಡಿಸುತ್ತಾ ಕುಳಿತ ಹೆಂಗಸರು, ವೀಳ್ಯದೆಲೆ ಹಾಕಿಕೊಂಡು ತಂಬಾಕು ಮೆಲ್ಲುವ ಗಂಡಸರು – ಒಟ್ಟಾರೆ ಸದ್ದಿನ ಪ್ರಪಂಚ. ನೋಡು ನೋಡುತ್ತಿದ್ದಂತೆಯೇ ಈ ಗಡಿಬಿಡಿಯ, ಇದೇ ಭೂಮಿಗೆ ಸಂಬಂಧಿಸಿದ ನೆಲದಲ್ಲೇ ಒಂದೊಂದೇ ಮಿಲಿಟರಿ ಟ್ರಕ್‍ಗಳು, ಅಲ್ಲಿ ಇಲ್ಲಿ ಒಬ್ಬರೋ ಇಬ್ಬರೋ ಸಮವಸ್ತ್ರಧಾರಿಗಳು, ಬಂಧೂಕುದಾರಿಗಳು ಕಾಣತೊಡಗಿದರು. ಅರೆ ಅರೆರೆ ಅನ್ನುವಷ್ಟರಲ್ಲೇ ಒಂದು ದೊಡ್ಡ ಗೋಡೆ, ಗೋಡೆಯ ಮೇಲೆ ಸುತ್ತಿಟ್ಟಿದ್ದ ಮುಳ್ಳುತಂತಿಗಳು ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಾಣತೊಡಗಿತು. ಎಡಗಡೆಗೇ ಒಂದು ರಕ್ಷಣಾ ಚೌಕ. ಒಂದು ಬೀಡಿ ಅಂಗಡಿಯೇನೋ ಎನ್ನುವಷ್ಟು ಸಹಜವಾಗಿ ನಿಂತಿತ್ತು.

ಆಟೋದವನು, ಅಲ್ಲಿದ್ದ ಅನೇಕ ಕಾರು, ಟ್ರಕ್ಕುಗಳ ಮಧ್ಯೆ ತನ್ನ ಗಾಡಿ ನಿಲ್ಲಿಸಿದ. “ಮೇಡಂ, ನೀವು ಆ ಸೆಕ್ಯುರಿಟಿಗೆ ನಿಮ್ಮ ಪರಿಚಯ ಮಾಡಿಕೊಂಡು ಒಳಗೆ ಹೋಗಿ” ಅಂದ, ನನ್ನ ಮಾಧ್ಯಮದ ಕೆಲಸದ ಐಡಿ ತೋರಿಸಿದ ಕೂಡಲೇ ದೊಡ್ಡ ಕಬ್ಬಿಣದ ಗೇಟು ‘ಖುಲ್ ಜಾ ಸಿಂಸಿಂ’ ಎಂದು ಉಸುರಿದ ಹಾಗೆ, ತೆರೆದುಕೊಂಡಿತು. ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೇ… ಎಂಬ ರಾಷ್ಟ್ರಕವಿಯ ಗೀತೆ ಬೇರೆ ರಾಗ, ತಾಳಗಳಲ್ಲಿ ಮಿಲಿಟರಿ ಬೀಟ್‍ನಲ್ಲಿ ಜಾಜ್ ಮ್ಯೂಸಿಕ್‍ನ ಥರ ಹಿನ್ನೆಲೆಯಲ್ಲಿ ಹಾಡಿದಂತಾಯಿತು. ನನ್ನ ಹುಡುಕಾಟದಲ್ಲಿ ಈ ಹುಡುಕಾಟಿಕೆಯ ಮನ ಮುಖ್ಯಪಾತ್ರ ವಹಿಸುತ್ತದೆ. ಯಾವ ಯಾವುದೋ ಜಾಗದಲ್ಲಿ, ಏನೇನನ್ನೋ ನೆನಪಿಸುತ್ತಾ, ನನ್ನೊಳಗಿನ ಜೀವ ಚೈತನ್ಯವನ್ನು ಪ್ರೇರೇಪಿಸುತ್ತಾ ಇರುತ್ತದೆ. ಹೀಗಾಗಿಯೇ ಏನೋ, ಓಡಾಟವೆಂದರೆ, ನನಗೆ ಎಲ್ಲಿಲ್ಲದ ಉತ್ಸಾಹ!

ಒಳಗೆ ಪ್ರವೇಶಿಸಿದರೆ, ಅದು ಮತ್ತೆ ಬೇರೆಯದೇ ಲೋಕ. ಹೊರಗಿನ ಜನಜಂಗುಳಿ ಇರುವ ಪ್ರದೇಶಕ್ಕೂ ಇಲ್ಲಿಗೂ ಯಾವ ರೀತಿಯ ಸಂಬಂಧವೂ ಇಲ್ಲ! ಬದುಕು ಮಾಯೆಯ ಮಾಟ, ಮಾತು ನೆರೆತೊರೆಯಾಟ… ಎಂಬಂತೆ ಕಡುಮೌನದಲ್ಲಿ ಇಲ್ಲಿ ಕೇಳುವುದು ಕೇವಲ ಮಿಲಿಟರಿ ಬೂಟುಗಳ ಶಬ್ದ! ಬಂದೂಕು ನಳಿಕೆಗಳ ಶಬ್ದ! ಮಿಲಿಟರಿ ಭಾಷೆಯ ಏರುದನಿಯ ಕಮಾಂಡ್ ಮಾಡುವ ಶಬ್ದ! ಪಿಸುಮಾತಿನ ಮಗುಮನಸ್ಸಿನ ನನ್ನೊಳಗಿನ ಕವಿತೆಗಳಿಗಿಲ್ಲಿ ಜಾಗವಿಲ್ಲ! ಅನೇಕ ಕುರ್ಚಿಗಳನ್ನು ಹಾಕಿದ ಜಾಗದಲ್ಲಿ ನನಗೆ ಸಂಜ್ಞೆಮಾಡಿ ಕೂರಿಸಲಾಯ್ತು. ಅನೇಕ ಉತ್ತರ ಭಾರತದ ಮಿಲಿಟರಿ ಸಂಬಂಧಿತ ಕುಟುಂಬಗಳು ಕೆಲವರು ಆಗಲೇ ಬಂದು ಕುಳಿತಿದ್ದರು. ಇಲ್ಲೂ ಕೂಡ ಸೈನಿಕ ಪಡೆಗೆ ವಿಶೇಷ ಗೌರವ. ಅವರಿಗೆ ಮತ್ತು ಅವರ ಕುಟುಂಬಗಳಿಗೆಂದೇ ಕಾಯ್ದಿರಿಸಲಾದ ವಿಶೇಷ ಸೀಟುಗಳಿದ್ದವು. ಅಲ್ಲಿ ಕುಳಿತು ಸಿನಿಮಾ ವೀಕ್ಷಣೆಯ ಥರ, ಎದುರಿಗೆ ಕುಳಿತವರ ತಲೆ ಅಡ್ಡಬಾರದಂತೆ ಆ ಕಡೆ, ಈ ಕಡೆ ಅಡ್ಜೆಸ್ಟ್ ಮಾಡುವುದೇ ಆಯ್ತು.

ಎದುರಿಗೆ, ಕಡುಹಸಿರು ಛಾಯೆಯ, ತಲೆಗೆ ಕೇಸರಿ, ಕೆಂಪು, ಬಂಗಾರಬಣ್ಣದ ಅಂಚಿನ ಪೇಟ ತೊಟ್ಟ ಮಿಲಿಟರಿಯವರು. ಪಕ್ಕದಲ್ಲಿರುವ ದೊಡ್ಡ ರಸ್ತೆಯಲ್ಲಿ ಬಾಂಗ್ಲಾಕ್ಕೆ ತೆರಳುವ ವಾಹನಗಳ ತಪಾಸಣೆ. ಆ ದೇಶಕ್ಕೆ ಹೋಗಲು ಇರುವ ಪರ್ಮಿಟ್ ಮುಂತಾದ ಪತ್ರಗಳ ಮೇಲೆ ಕಣ್ಣುಹಾಯಿಸಿ, ನಂತರ ವಾಹನದ ಢಿಕ್ಕಿ ತೆರೆಸಿ, ಇಡೀ ದಿನ ಇದೇ ಕಥೆಯಂತೆ! ಸರಕು ಸಾಕಣೆ ಮಾಡುವ ಲಾರಿಗಳನ್ನು ಕೂಲಂಕಷವಾಗಿ ತಪಾಸಣೆ ಮಾಡುತ್ತಾರೆ. ಇವೆಲ್ಲಾ ನೋಡುತ್ತಾ, ಸಮಯ ಜಾರುವುದೇ ಗೊತ್ತಾಗುವುದಿಲ್ಲ. ಆದರೆ, ಮಿಲಿಟರಿಯವರು ವಾಸವಿರುವ ಈ ಜಾಗದಲ್ಲಿ ರಸ್ತೆ ಪಕ್ಕದಲ್ಲೇ ತೆರೆದ ಚರಂಡಿಯಿದ್ದು, ಆಗಾಗ ಬೀಸಿ ಬರುವ ಅದರ ವಾಸನೆಗೆ ಹೊಟ್ಟೆ ತೊಳಸಿದಂತಾಗುತ್ತಿತ್ತು. ಇಷ್ಟು ಜನ, ಸೌಕರ್ಯಗಳಿದ್ದೂ ಕೂಡ, ಆ ಚರಂಡಿಯ ನೀರು ಹರಿದು, ಎಲ್ಲಾದರೂ ಗುಂಡಿ ಸೇರಲು ಇವರು ವ್ಯವಸ್ಥೆ ಮಾಡಿಕೊಂಡಿಲ್ಲವಲ್ಲ ಎಂಬ ಖೇದವೂ ಮೂಡಿತು!
ಇರಲಿ, ಎದುರು ಧ್ವಜವನ್ನು ಹಾರಿಸುವ, ಅದನ್ನು ಇಳಿಸಿ ಧ್ವಜವಂದನೆ ಸೂಚಿಸಿ, ಮಡಚಿ ಇಡುವ ಕವಾಯತು ಆರಂಭವಾಯಿತು. ವಾಘಾ ಗಡಿಯಲ್ಲಿ ಮಾಡುವಂತೆಯೇ ಇಲ್ಲೂ, 15-20 ಜನರ ಚಿಕ್ಕ ತುಕಡಿಯೊಂದು ಮಿಲಿಟರಿ ಸಿಪಾಯಿ ನಡೆಯಲ್ಲಿ ಕವಾಯತು ಮಾಡುತ್ತಾ, ಕಾಲನ್ನು ರಪರಪನೆಂದು ಬೀಸಿ ಎಸೆಯುತ್ತಾ, ಆ ಕಡೆಯಿಂದ ಬಂದ ಬಾಂಗ್ಲಾ ಸೈನಿಕರ ಮುಖಕ್ಕೆ ತಾಗುವಂತೆ ಕಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿ ಹಿಡಿಯುತ್ತಿದ್ದ ನಮ್ಮ ಸೈನಿಕರ ಹಾವಭಾವ, ಧ್ವನಿ ಸಾಂದ್ರತೆ, ಮುಖಭಾವಗಳು, ನೀವು ನಿಕೃಷ್ಟ ನಾವು, ನಮ್ಮ ದೇಶ ಶ್ರೇಷ್ಠ ಎಂದು ಡಂಗೂರ ಬಾರಿಸಿ ಹೇಳಿದಂತಿತ್ತು.

ನಿಜಕ್ಕೂ ಬಾಂಗ್ಲಾದೇಶ ತುಕುಡಿ, ಅವರ ಮುಖಭಾವ, ದೇಹಭಾಷೆ ಹಾಗೂ ಅವರ ಒಟ್ಟು ನೋಟ ಅಯ್ಯೋ ಪಾಪ ಎನಿಸುವಂತಿತ್ತು. ಕಡಲ ಭರಾಟೆ, ಚಂಡಮಾರುತ, ಬೆಳೆಯುತ್ತಿರುವ ಜನಸಂಖ್ಯೆ, ಕಡುಬಡತನಗಳಲ್ಲಿ ಸೊರಗಿರುವ ರಾಷ್ಟ್ರವಿದು. ಅವರ ಮಿಲಿಟರಿ ಪಡೆಯ ಸ್ಥಿತಿಯೂ ಕೂಡ ಅದನ್ನೇ ಪ್ರತಿಬಿಂಬಿಸುವಂತಿತ್ತು. ಧ್ವಜ ವಂದನೆಯಾದ ಮೇಲೆ, ನನಗೆ ಆ ಕಡೆ ನಮ್ಮ ರೀತಿಯೇ ಬಂದು, ನಮ್ಮನ್ನು ನೋಡುತ್ತಿದ್ದ ಬಾಂಗ್ಲಾದೇಶದವರ ಬಗ್ಗೆ ಕುತೂಹಲ!
ಅಲ್ಲ ನೋಡಿ, ನಮ್ಮ ಮನಸ್ಸೆಂಬ ಮರ್ಕಟ ಅದೆಂಥ ವಿಚಿತ್ರವೆಂದರೆ, ಒಂದು 20 ದೇಶಗಳನ್ನಾದರೂ ಸುತ್ತಿ ಬಂದಿದ್ದೇನೆ, ಅದೂ ಕೆಲವೊಮ್ಮೆ ಒಬ್ಬಳೇ ಪ್ರಯಾಣ ಮಾಡಿ ಹಲವು ದೇಶಗಳನ್ನು ನೋಡಿ ಬಂದಿದ್ದೇನೆ. ಆದರೂ ಇಲ್ಲಿ ಪಕ್ಕದ ಬಾಂಗ್ಲಾದೇಶದವರ ಮೇಲೆ ನನಗೆ ಕುತೂಹಲ. ವಿಶ್ವದ ಹಲವು ಭಾಷೆಯ, ಹಲವು ಬಣ್ಣದ, ಹಲವು ಧರ್ಮದವರ ಭೇಟಿಯಾದ ಮೇಲೂ ನಮಗೆ ಉಳಿಯುವ ಈ ಕುತೂಹಲವೇ ನಮ್ಮೊಳಗಿನ ಜೀವಂತಿಕೆಗೆ ಸಾಕ್ಷಿ ಎನಿಸಿತು. ಮನಸ್ಸು ಮತ್ತೆ ಮಗುವಿನ ಥರ ಹೂವಂತೆ ಅರಳಿತು.

ನಾನೊಂದು ತೀರ, ನೀನೊಂದು ತೀರ … ಎಂಬಂತೆ, ನಾವು ಕುಳಿತ ಜಾಗಕ್ಕೂ, ಅವರಿರುವ ಸ್ಥಳಕ್ಕೂ ಒಂದರ್ಧ ಫಲ್ಲಾಂಗ್ ಅಂತರ, ಛೇ! ಇದೇಕೋ ಸರಿಯಿಲ್ಲ ಅಂದುಕೊಳ್ಳುವುದರಲ್ಲಿ, ಒಬ್ಬ ಸೈನಿಕ ಬಂದು, ಬನ್ನಿ, ನೀವು ಆ ಗೇಟಿನಲ್ಲಿ ನಿಂತು, ಬಾಂಗ್ಲಾದೇಶಿಯರನ್ನು ನೋಡಬಹುದು ಎಂದು ಘೋಷಿಸಿದ. “ಜಿಂಕೆ ಮರೀನಾ, ನೀ ಜಿಂಕೆ ಮರೀನಾ?” ಎಂಬಂತೆ ನಾನು, ಎಲ್ಲರಿಗಿಂತಾ ಮೊದಲು ಓಡಿ, ಆ ಗೇಟಿಗೆ ಅಂಟಿ ನಿಂತೆ, ಆ ಕಡೆಯಿಂದ ಅನೇಕ ಬಾಂಗ್ಲಾದೇಶೀಯರು ಕೂಡ ಬಂದು ನಿಂತರು. ಈಗ ನಮ್ಮ ಮತ್ತು ಅವರ ನಡುವೆ ಎರಡು ಗೇಟುಗಳಿದ್ದವು. ನಮ್ಮ ಗೇಟಿಗೂ ಅವರ ಗೇಟಿಗೂ ನಡುವೆ ಒಂದು ಹತ್ತು ಅಡಿ ಅಂತರ.

ಮಾತಿಲ್ಲ, ಕತೆಯಿಲ್ಲ, ಬರೀ ರೋಮಾಂಚನ… ಎನ್ನುವ ಹಾಗಿತ್ತು. ಆಗಿನ ನಮ್ಮ ಸ್ಥಿತಿ. ಎಳೆಯ ಪ್ರಾಯದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಲ್ಲೊಂದು, ಇಲ್ಲೊಂದು ಹೆಂಗಸರು, ಚಿಕ್ಕ ಮಕ್ಕಳನ್ನು ಕಂಕುಳಲ್ಲಿರಿಸಿಕೊಂಡವರು. ಬಿಳಿ ಪೈಜಾಮ, ಜುಬ್ಬದೊಡನೆ, ಕಸೂತಿ ಟೊಪ್ಪಿಯೊಡನೆ ಬಂದಿದ್ದ ಹುಡುಗರೇ ಜಾಸ್ತಿ. ಕುತೂಹಲವೇ ಮನೆ ಮಾಡಿದ್ದ ಅವರ ಮುಖದಲ್ಲಿ ಮುಗುಳುನಗೆಗಾಗಿ ತಡಕಾಡುತ್ತಾ, ನಾನೇ ಮೊದಲಿಗಳಾಗಿ, ನಗುತ್ತಾ, ಇಂಗ್ಲಿಷಿನಲ್ಲಿ, “ನಮಸ್ತೆ, ನಾನು ಭಾರತದ ದಕ್ಷಿಣ ಭಾಗದ ಮುಕುಟವಾದ ಕರ್ನಾಟಕದಿಂದ ಬಂದವಳು, ಬೆಂಗಳೂರಿನವಳು, ಕವಿ, ವಿದ್ಯುನ್ಮಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮನ್ನೆಲ್ಲಾ ನೋಡಿ ನನಗೆ ತುಂಬಾ ಸಂತೋಷವಾಗಿದೆ’’ ಎಂದೆಲ್ಲ ಹೇಳಿದೆ. ಅವರು ಸಂಕೋಚದಿಂದ ಕಿರುನಕ್ಕಿದ್ದು ಕಂಡಿತು.
ಅವರಿನ್ನೂ ಮಾತನಾಡುವ ಮೊದಲೇ, ಆ ಕಡೆಯ ಸೈನಿಕರು ಮತ್ತು ಈ ಕಡೆಯ ಸೈನಿಕರು, ಚಲೋ ಚಲೋ, ಸಮಯ್ ಕತಂಹುವಾ ಎನ್ನುತ್ತಾ, ಬಂದವರನ್ನು ಹೊರಡಿಸಲು ಆರಂಭಿಸಿದರು.

ನನಗಂತೂ ಸಿನಿಮಾಗಳಲ್ಲಿ ನೋಡಿದಂತೆ, ಜೈಲಿನ ಖೈದಿಗಳನ್ನು ನೋಡಲು ಸಮಯ ನಿಗದಿ ಮಾಡಿ, ನಂತರ, ನಡೆಯಿರಿ ಎಂದು ಓಡಿಸುತ್ತಾರಲ್ಲಾ, ಅದೇ ದೃಶ್ಯ ಕಣ್ಣ ಮುಂದೆ ಬಂದು ಪಿಚ್ಚೆನಿಸಿತು. ಒಂದು ಚಾಕೋಲೇಟ್ ಕೂಡ, ಅಲ್ಲಿದ್ದ ಮುದ್ದು ಕಂದಮ್ಮಗಳಿಗೆ ಕೊಡಲಾಗಲಿಲ್ಲವಲ್ಲಾ ಎಂದು ಬೇಸರವಾಗಿ, ಹೊತ್ತು ತಂದ ವ್ಯಾನಿಟಿ ಬ್ಯಾಗ್ ತುಂಬಾ ಭಾರವೆನಿಸಿತು.
ಇದು ನಮ್ಮ ಗಡಿಯಲ್ಲಿ ದೇಶ ರಕ್ಷಣೆ ಮಾಡುವ ಎಲ್ಲ ಯೋಧರ ದಿನಚರಿಯಿರಬಹುದು. ಆದರೂ ಒಂದು ಚಿಕ್ಕ ಬಾಂಧವ್ಯಕ್ಕೆ, ಒಂದು ನಗೆ ಅರಳುವುದಕ್ಕಾದರೂ ಅವರು ಅವಕಾಶ ನೀಡಬೇಕು ಅನಿಸಿದ್ದು ಸುಳ್ಳಲ್ಲ, ದಿನಾ ಸಾಯೋರಿಗೆ ಅಳೋರ್ಯಾರು? ಎಂಬ ಧೋರಣೆ ಇಲ್ಲಿ ಅನುಸರಿಸಿದ್ದು ಕೊಂಚ ಅಮಾನವೀಯ.

ನಂತರ ಬಂದು, ಆಟೋದಲ್ಲಿ ಕೂತವಳಿಗೆ ಆಟೋ ಚಾಲಕ ಹೇಳಿದ್ದು, ಇನ್ನಷ್ಟು ಮಾಹಿತಿ. ನಮಗೆಲ್ಲಾ ತಿಳಿದ ಹಾಗೆ ಬಾಂಗ್ಲಾದೇಶ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ರಾಷ್ಟ್ರ. ಪ್ರಕೃತಿ ವಿಕೋಪಗಳಿಗೆ ಪದೇ ಪದೇ ಈಡಾಗುವ, ರಸ್ತೆ ರಸ್ತೆಯಲ್ಲೂ ದುರಂತ ಕಥೆಗಳನ್ನು ತುಂಬಿಕೊಂಡಿರುವ ದೇಶ. ಆದರೆ ಇವನ ಪ್ರಕಾರ, ಆ ದೇಶದ ಜನ ಹೃದಯವಂತರು. ಬಾಂಗ್ಲಾದ ಗಡಿಯೊಂದರಲ್ಲಂತೂ, ಭಾರತದಲ್ಲಿ ಗುರುವಾರದಂದು ನಡೆಯುವ ತೆರೆದ ಮಾರುಕಟ್ಟೆಗೆ, ಅವರು ಬರುತ್ತಾರೆ, ಇಲ್ಲಿಂದ ಅನೇಕ ತರಕಾರಿ, ಅಡಿಗೆ ಮಂಗಟ್ಟುಗಳಿಗೆ ಬೇಕಾದ ಸಾಮಾನುಗಳನ್ನು ಕೊಂಡು ಹೋಗುತ್ತಾರೆ. ಶಾಲಾ ಮಕ್ಕಳೂ ಕೂಡ ಅಲ್ಲಿಗೆ ಬರುತ್ತಾರೆ. ತುಂಬಾ ಚೆನ್ನಾಗಿರುತ್ತದೆ. ಆದರೆ, ನಮ್ಮ ಸುಂದರ ಹೆಣ್ಣುಮಕ್ಕಳನ್ನು ಅವರು ಪ್ರೀತಿ-ಪ್ರೇಮದ ನೆಪದಲ್ಲಿ ಹಾರಿಸಿಕೊಂಡು ಹೋಗುತ್ತಾರೆ. ಅದಕ್ಕೇ ನಾವು ತುಂಬಾ ಹುಷಾರಾಗಿರುತ್ತೇವೆ ಅಂದ.

ನಾನು ಮನಸ್ಸಿನಲ್ಲೇ, ಎಲ್ಲಿ ನೀವು ಹೆಚ್ಚಿನ ನಿರ್ಬಂಧ ಹಾಕುತ್ತೀರೋ ಅಲ್ಲಿ ಹೆಚ್ಚಿನ ಪ್ರತಿರೋಧವಿರುತ್ತದೆ, ಯಾವುದನ್ನು ನೀವು ಪದೇ ಪದೇ ಮಾಡಬೇಡಿ ಅಂತ ಹೇಳುತ್ತೀರೋ ಆ ಕಡೆಗೆ ಯುವ ಮನಸ್ಸುಗಳು ವಿಪರೀತ ಕುತೂಹಲ ಬೆಳೆಸಿಕೊಳ್ಳುತ್ತವೆ ಎಂದೆಲ್ಲಾ ಅಂದುಕೊಂಡು, “ಪ್ರೀತಿಪ್ರೇಮಕ್ಕೆ ಯಾವ ಎಲ್ಲೆ ಗಡಿ, ಜಾತಿ-ಅಂತಸ್ತುಗಳು ಮುಖ್ಯವಾಗೋಲ್ಲ. ಪ್ರೀತಿ ಎಲ್ಲಕ್ಕಿಂತಾ ದೊಡ್ಡದು” ಎಂದಿದ್ದು, ಅವನಿಗೆ ಜೀರ್ಣಿಸಿಕೊಳ್ಳಲಾಗದೇ, ಇವರ ಹತ್ತಿರ ಇನ್ನೇನು ಮಾತು? ಎಂಬಂತೆ ಮೌನಕ್ಕೆ ಶರಣಾದ.
ಅಂತೂ ಇಂತೂ, ಎಡವಿದ ಬಳ್ಳಿಯೇ, ಹುಡುಕುತ್ತಿರುವ ಬಳ್ಳಿಗೂ ಆದ ಅದೃಷ್ಟದ ದಿನ ಇಂದು ಎಂದುಕೊಳ್ಳುತ್ತಾ ಸಾರ್ಥಕ್ಯದಲ್ಲಿ ವಾಪಸು ಕೋಣೆಗೆ ಬಂದೆ.

ಹೊಟೇಲಿನ ಊಟ ಬೇಡವೆಂದುಕೊಂಡು, ರಾತ್ರಿ ಊಟಕ್ಕೆ ಹೊರಗಡೆ ಏನು ಸಿಗಬಹುದುದೆಂದು ನೋಡಲು ಸವಾರಿ ಹೊರಟೆ. ನಾನು ಸಂಪೂರ್ಣ ಸಸ್ಯಾಹಾರಿಯಾಗಿರುವುದು, ಎಲ್ಲಿ ಹೋದರೂ ಸಮಸ್ಯೆಯೇ! ಯೂರೋಪ್ ಮತ್ತು ರಷ್ಯಾಗಳಲ್ಲಂತೂ ತಾನು ಅನುಭವಿಸಿರುವ ಆಹಾರ ಸಮಸ್ಯೆಯ ಬಗ್ಗೆ ಒಂದು ಮಹಾಪ್ರಬಂಧವನ್ನೇ ಬರೆಯಬಹುದು. ಮೀನು ಮತ್ತು ಮೊಟ್ಟೆಯನ್ನು ಸಹಾ ಸಸ್ಯಾಹಾರವೆಂದು ತುಂಬಾ ಕಡೆ ನಂಬಿರುವುದರಿಂದ ಆಗುವ ಮುಜುಗರಗಳು ವಿಪರೀತ. ಆದರೆ, ಭಾರತದಲ್ಲೂ ಸಧ್ಯ ಹೇಳಿಕೊಳ್ಳುವಷ್ಟು ಸಮಸ್ಯೆಯಿಲ್ಲ! ಹಸಿರು ಮತ್ತು ಕೆಂಪು ಚೌಕದ ಮಧ್ಯೆಯಿರುವ ಚುಕ್ಕೆಯಿಂದಲೇ ಎಷ್ಟೋ ಪ್ಯಾಕೇಟ್‍ನಲ್ಲಿರುವ ಆಹಾರವನ್ನು ಸಸ್ಯಾಹಾರ, ಮಾಂಸಾಹಾರವೆಂದು ವಿಂಗಡಿಸುವುದು ಬಲು ಸುಲಭ.

‍ಲೇಖಕರು Avadhi Admin

September 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: