ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ..

ಅಶ್ಫಾಕ್ ಪೀರಜಾದೆ

ಹಿರಿಯ ಕವಿ ಎ. ಎಸ್. ಮಕಾನದಾರ ಅವರ ಸಮಗ್ರ ಕವಿತೆಗಳ  ‘ಅಕ್ಕಡಿ ಸಾಲು’ ಸಂಕಲನದ  ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ…?’  ಕವಿತೆ ಸಹೃದಯ ಕಾವ್ಯಾಸಕ್ತರ ಗಮನ ಸೆಳೆಯಲು ಹಲವಾರು ಕಾರಣಗಳಿವೆ. ಕಾವ್ಯ ನಿಜಕ್ಕೂ ಹೆತ್ತವರ ನೋವ ರೋಧನ ಬಿಕ್ಕಳಿಕೆಗಳನ್ನೇ ಪ್ರತಿಧ್ವನಿಸುವಂಥದ್ದು, ಮುಸ್ಲಿಂ ಸಮುದಾಯದ ಕೃಷಿಕ ಮಹಿಳೆಯೊಬ್ಬಳ ಬದುಕಿನ ಕಥನವನ್ನು A S M ಅವರು ತುಂಬಾ ಆರ್ದ್ರವಾಗಿ, ಆಪ್ತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

“ಮೊಗ್ಗಿದ್ದಾಗಲೇ ಉಡಕೆ ಗಂಡನನ್ನು ಕಟ್ಟಿಕೊಂಡು

ಡಜನ್ ಮಕ್ಕಳನ್ನು ಹೆತ್ತರೂ ಲಂಬಾಣಿಯರ ಹಚಡಾ ಕಳ್ಳಭಟ್ಟಿ

ಘಾಟಿನಲ್ಲಿ ಅಪ್ಪ ಮಲಗಿದರೂ ಅಮ್ಮ ಬಿಕ್ಕಳಿಸಿರಲಿಲ್ಲ”

ಎಂದು ಸಣ್ಣ ವಯಸ್ಸಿನ ಹೆಣ್ಣು ಕುಡುಕ ಗಂಡನನ್ನು ಕಟ್ಟಿಕೊಂಡು ಒದ್ದಾಡುವ ಪರಿಸ್ಥಿತಿ ಕರುಳು ಮಿಡಿಯುವಂಥದ್ದು. ಪಾಲಿಗೆ ಬಂದದ್ದು ಪಂಚಾಮೃತವೆಂದು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಡಜ್ಜನ್ ಗಟ್ಟಲೇ ಮಕ್ಕಳನ್ನು ಹೆತ್ತು ಏನೆಲ್ಲ ನರಕಯಾತನೆ ಅನುಭವಿಸಿದರು ಬಿಕ್ಕಳಿಸದಿರುವ ಛಲ ಅವಳ ಆತ್ಮಸ್ಥೈರ್ಯಕ್ಕೆ, ಜೀವನ ಪ್ರೀತಿಗೆ ಸಾಕ್ಷಿಯಾಗುವಂಥದ್ದು.

ಮುಂದವರೆದು ಮಕ್ಕಳಿಗೆ ಓದಿಸಬೇಕಾದ ಕಾಲದಲ್ಲಿ ಅವರ ಕೈಯಲ್ಲಿ ನವಿಲಗರಿ ಗುಚ್ಚ (ಮೊಹರಚಲ್) ಕೊಟ್ಟು, ಜೋಳಿಗೆ ಹಾಕಿ ಭಿಕ್ಷಾಟನೆಗೆ ಕಳಿಸುವ ಸಂದರ್ಭದಲ್ಲು ಅವ್ವ ಬಿಕ್ಕಳಿಸುವದಿಲ್ಲವೆಂದರೆ ಅವಳ ಹೃದಯ ಕಲ್ಲಾಗಿದೆ ಅಂತಲೇ ಅರ್ಥ. ಹೊಟ್ಟೆಯಿಂದ ಹುಟ್ಟಿದ ಕರುಳು ಕುಡಿಗಳು ಭಿಕ್ಷೆ ಬೇಡಬೇಕಾದ  ಸ್ಥಿತಿಯಾದರೆ ಇನ್ನೂ ಸ್ವತಃ ತಾಯಿಯಾದವಳ ಗತಿ ಹೇಗಿರಬೇಡ ಊಹಿಸಿ-

“ಬುರ್ಕಾದ ನಕಾಬು ಬಿಸಾಕಿ
ಕುಂಟ ಎತ್ತಿನ ಜತೆ ನೊಗ ಹೊತ್ತು
ಹೊಲವ ಬಿತ್ತಿದ್ದಾಗಲೂ ಅಮ್ಮ ಬಿಕ್ಕಳಿಸಿರಲಿಲ್ಲ”

ಎಂದು ಕವಿ ಹೇಳುತಿರಬೇಕಾದರೆ ಓದುಗನ ಹೃದಯ ಒಂದಕ್ಷಣ ಅಲ್ಲಾಡಿ ಬಿಡುತ್ತದೆ. ಬುರ್ಕಾ ಮುಸ್ಲಿಂ ಹೆಣ್ಣಿನ ಮಾನ ಮರ್ಯಾದೆ, ಅದನ್ನೆ ಕಿತ್ತು ಬಿಸಾಕಿ ದನದ ಜೊತೆ ದನ ಅಗಿ ದುಡಿಯಬೇಕಾದದ್ದು, ಕೊಂಟ ಎತ್ತಿನ ಉಮೇಯ ಕೆಲಸಕ್ಕೆ ಬಾರದ ಗಂಡನ ಪ್ರತಿಮೆ ಹಾಗೂ ಅವಳ ಬದುಕಿನ ಇಡೀ ದುರಂತವನ್ನು ಧ್ವನಿಸುವಂಥದ್ದು.

ಹರೆಯದ ಮಗಳು ತನ್ನ ಆಸೆಬಯಕೆಗಳನ್ನು , ಹರೆಯದ ಸುಂದರ ಸ್ವಪ್ನಗಳನ್ನು ನುಚ್ಚಿನ ಗಡಿಗೆಗೆ ಹಾಕಿ ನುಚ್ಚುನೂರಾಗಿಸುವಂಥ, ಪ್ರೀತಿಯ ಮಗ ಜೀತಕ್ಕೆ ನಿಂತು ದಾಸ್ಯದ ಸಂಕೋಲೆಗೆ ಕೊಂಡಿಯಾಗುವಂಥ ಸನ್ನಿವೇಶಗಳು, ಇಡೀ ಕುಟುಂಬ ಹಸಿವಿನಿಂದ ಕಂಗಾಲಾಗಿ ಪರದಾಡುವ ಕಾವ್ಯ ಚಿತ್ರಣ ತಲ್ಲನಿಸುವಂಥದ್ದು. ಇಷ್ಟಾದರು ಬಿಕ್ಕದಿರುವ, ಅಳದಿರುವ ಅವ್ವ ತಾಳ್ಮೆಯ, ಧೈರ್ಯದ ಸಂಕೇತವಾಗುತ್ತಾಳೆ.

ಹಳಚಿದ ಸಂಗ್ಟಿ, ಹತ್ತರಕಿ ತಿಂದು ರೂಜಾ ಮಾಡಿದರೂ, ಉರಿಯುವ ಬೇಗೆಯಲ್ಲಿ ಕೆರೆಯ ದಂಡೆಯಲ್ಲಿ ನಿಂತ ಕೊಳಕ ನೀರು ಕುಡಿದು ದಾಹ ಕಳೆದುಕೊಂಡರೂ ಪ್ರಾರ್ಥಿಸಿದ ದೇವರಿಗೆ ಕರುಣೆ ಬಾರದಿರುವುದು ದೇವರ ಅಸ್ತಿತ್ವನ್ನೇ ಪ್ರಶ್ನಿಸುವಂಥದ್ದು. ಇಷ್ಟೆಲ್ಲ ಆದರೂ ಧೃತಿಗೆಡದ ಅವ್ವ ಒಂದು ದಿನ ಮಗ ರಸಗೊಬ್ಬರಕ್ಕಾಗಿ ಗುಂಡೇಟು ತಿಂದು ಹೆಣವಾಗಿ ತನ್ನ ಮಡಿಲಲ್ಲಿ ಮಲಗಿದಾಗ ತಾಯ್ಗರುಳು ಯಾವ ರೀತಿ ಒದ್ದಾಡಿರಬೇಕು? ಆ ಆಕ್ರಂದನ ಧಗಧಗನೆ ಉರಿಯುವ ಜ್ವಾಲೆಯಾಗಿ ಮುಗಿಲು ಮುಟ್ಟುತ್ತದೆ. ಇಂಥ ಕರುಣಾಜನಕ ಪರಿಸ್ಥಿತಿಯಲ್ಲೂ ಒಬ್ಬ ಅಬಲೆಯ ನೋವಿಗೆ ಸ್ಪಂದಿಸದ ಸಮಾಜ ತನ್ನ ರೀತಿ ರಿವಾಜುಗಳನ್ನು, ಪ್ರತಿಷ್ಠೆಯನ್ನು ಕಾಯ್ದುಕೊಳ್ಳಲು ಮುಂದಾಗುವುದು ಸಭ್ಯ ಸಮಾಜದ ಇನ್ನೊಂದು ಮುಖ ಅನಾವರಣಗೊಳಿಸುತ್ತದೆ. ಹೆಣದ ಪೋಸ್ಟ್ ಮಾರ್ಟಮ್, ಜಮಾತ ವಿಧಿಸುವ ದಂಡದಂಥ ಕಾರ್ಯಗಳಲ್ಲಿ ಕೂಡಿಟ್ಟ ಕುಡಿಕೆ ಹಣವನ್ನೆಲ್ಲ ಕಳೆದುಕೊಂಡು ನಿಂತಾಗ ಸತ್ತ ಮಗನ ಮೈಗೆ ಕಫನ (ಹಣದ ಬಟ್ಟೆ) ತರಲು ಹಣ ಹೊಂದಿಸಲಾರದ ಅಸಹಾಯಕತೆ-

ಏಕಲವ್ಯ ಬಿಟ್ಟ ಬಾಣದಂತೆ ಅಕ್ಷಿಗಳನ್ನು ಆಕಾಶದತ್ತ ತಿರುಗಿಸಿ

ಅಮ್ಮ ಬಿಕ್ಕಳಿಸುತ್ತಿದ್ದಾಳೆ

ಕುಂಟ ಎತ್ತು, ಮುದ್ದಿನ ಟಾಮಿ

ಚುಂವ್ ಗುಡುವ ಕೋಳಿ ಮರಿ

ತೊದಲು ನುಡಿಯ ಮೊಮ್ಮಗಳು

ಅಜ್ಜಿಯ ಬಿಕ್ಕಳಿಕೆ ನಿಲ್ಲಿಸಲು ವಿಫಲರಾಗಿದ್ದಾರೆ

ಮಾನವೀಯತೆ ಮರೆಯಬೇಕಾದ ಸಮಾಜ (ಜಮಾತ) ಮಗನ ಶವ ಯಾತ್ರೆಗೆ ಜನಾಜ ಕೊಡದೇ ಸೇಡು ಹಠ ಸಾಧನೆಗೆ ನಿಲ್ಲುವದು ದಲ್ಲಾಳಿಗಳಿಂದ ಧರ್ಮವಿಂದು ಬದನಾಮವಾಗಿರುವದು ಸಾಬೀತು ಪಡಿಸುತ್ತದೆ.

ಅಣ್ಣನ ಅಂತ್ಯ ಸಂಸ್ಕಾರಕ್ಕೆ ಜನಾಜ ಕೊಡಿಸಿ

ನಮ್ಮ ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ?

ಎಂದು ಎಂದೂ ಬಿಕ್ಕಳಿಸದಿರುವ ತಾಯಿಯ ಬಿಕ್ಕಳಿಕೆ ಇಂದು ನಿಲ್ಲುತ್ತಿಲ್ಲ ದಯವಿಟ್ಟು ಇದನ್ನು ನಿಲ್ಲಿಸಲು ಸಹಕರಿಸಿ ಎಂದು ದಯನೀಯವಾಗಿ ಬೇಡಿಕೊಳ್ಳುವ ಮಗಳ ವಿನಂತಿ ಅರಣ್ಯರೋಧನವಾಗಿಯೇ ಉಳಿಯುವುದು ನಮ್ಮ ನಾಗರಿಕ ಸಮಾಜದ ಅವನತಿಗೆ ಹಿಡಿದ ಕೈಗನ್ನಡಿಯಾಗುತ್ತದೆ.

ಕೊನೆಗೆ ಕಾವ್ಯ ಓದುಗನನ್ನು ಬಿಕ್ಕಳಿಸುವಂತೆ ಮಾಡುತ್ತದೆ. ಕವಿ ಒಂದು ದಾರುಣ ಕಾಥನಕಕ್ಕೆ ಸಾಕ್ಷಿಯಾಗುವದಷ್ಟೆಯಲ್ಲದೆ ಅದನ್ನು ತಮ್ಮ ಅನುಭವದ ಮೂಸೆಯಲ್ಲಿ ಜೀವಭಾವ ತುಂಬಿ ಒಂದು ಅಸಹಾಯಕ ಹೆಣ್ಣಿನ ಬಿಕ್ಕಳಿಕೆ ಎಲ್ಲರ ಹೃದಯಗಳಲ್ಲಿ ಮಾರ್ದನಿಸುವಂತೆ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಥ ಅನೇಕ ಸಾಮಾಜಿಕ ಕಳಕಳಿಯ  ಕವಿತೆಗಳು ಮಾನವೀಯತೆಯ  ಬರದ ಅಕ್ಕಡಿ ಸಾಲುಗಳಲ್ಲಿ ಅನುಕಂಪ ಅನುರಾಗದ ಮಳೆಯ  ನಿರೀಕ್ಷೆಯಲ್ಲಿ ಬಾಯ್ದೆರೆದು ನಿಂತ ಪೈರುಗಳಾಗಿ ನಮಗೆ ಕಾಣಿಸುತ್ತವೆ.  ಒಟ್ಟು 240 ಪುಟಗಳ ಸಂಕಲನದಲ್ಲಿ 211 ಕವಿತೆಗಳು ಇವೆ. ಈ ಎಲ್ಲ ಕವಿತೆಗಳು ಸಾಮಾಜಿಕ ಸಾಮರಸ್ಯ ಮತ್ತು ಪರಿವರ್ತನೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ.

ಆಸಕ್ತರು

ನಿರಂತರ ಪ್ರಕಾಶನ, ಗದಗ ಮೊ ;9916480291ಗೆ ಸಂಪರ್ಕಿಸಬಹುದು.

‍ಲೇಖಕರು avadhi

September 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. prathibha nandakumar

    ಬರಹಕ್ಕೆ ಮತ್ತು ಸಂಪರ್ಕ ಸಂಖ್ಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಪುಸ್ತಕ ತರಿಸಿಕೊಳ್ಳುತ್ತೇನೆ

    ಪ್ರತಿಕ್ರಿಯೆ
  2. prathibha nandakumar

    ಬರಹಕ್ಕೆ ಮತ್ತು ಪ್ರಕಾಶಕರ ಸಂಪರ್ಕ ನಂಬರ್ ಕೊಟ್ಟಿದ್ದಕ್ಕೆ ವಂದನೆಗಳು, ಪುಸ್ತಕ ತರಿಸಿಕೊಳ್ಳುತ್ತೇನೆ – ಪ್ರತಿಭಾ ನಂದಕುಮಾರ್

    ಪ್ರತಿಕ್ರಿಯೆ
  3. ಜಯಶ್ರೀ. ಜೆ.ಅಬ್ಬಿಗೇರಿ

    ಅತ್ಯದ್ಭುತ ಕಾವ್ಯ ಶಕ್ತಿಯ ಕವಿ ಎ ಎಸ್ ಮಕಾನದರವರ ಕೃತಿಯ ಪರಿಚಯ ಪರಿಣಾಮಕಾರಿಯಾಗಿ ಮೂಡಿ ಬಂದಿದೆ
    ಧನ್ಯವಾದಗಳು ಅಶ್ಪಾಕ ಸರ್

    ಪ್ರತಿಕ್ರಿಯೆ
  4. Hajaresab B. Nadaf

    ಅಂತ:ಕರಣ ಬರಿದಾದ ಜಗದಲಿ ಅಂತ:ಕರಣದ ಸೆಲೆಯಾಗಿದ್ದಾರೆ ಕವಿ ಎ.ಎಸ್. ಮಕಾನದಾರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: