-ಕೆ ಎನ್ ಲಾವಣ್ಯಪ್ರಭಾ
ಊರ ಗದ್ದಲಗಳಿಂದ ಬಹುದೂರ
ದೂರದಲ್ಲಿರುವ ನಿಶಬ್ದ ಪ್ರಕೃತಿಯ
ಮಡಿಲಲ್ಲಿ ಮಲಗಿದ್ದೆಡೆಯೇ
ಬಲು ಎತ್ತರಕ್ಕೆ ಶಬ್ದಗಳ ಮೆಟ್ಟಿ ಮಣಿಸಿ
ಆಕಾಶಕ್ಕೆ ಚಾಚಿಕೊಂಡ
ಬಂಡೆಯನ್ನೇರಲು ಈಗಾಗಲೇ
ಯಾರೋ ಕೊರೆದ ಒಂದೊಂದೇ
ಮೆಟ್ಟಿಲು ಹತ್ತಿ ಮೇಲ್ಛಾವಣಿ ಮುಟ್ಟಿ
ದೀರ್ಘ ಉಸಿರಾಡಿ ಆಯಾಸ ಹೊರಚೆಲ್ಲಿ
ಕಣ್ಣು ಹಾಯಿಸಿದಷ್ಟೂ ಆಳ…
ಏರಿಬಂದ ಬಂಡೆಯ ಪ್ರಪಾತ
ಪ್ರಶಾಂತವಾಗಿಸುವ ಕೋಮಲ ಕಲೆಯ
ಹಸಿರು ಗಿಡಮರದೆಲೆಗಳ ತೂಗಾಟಕ್ಕೆ
ತಣ್ಣನೆಯ ಗಾಳಿ ಸುಳಿದಾಡುತ್ತಾ

ಅಲ್ಲಲ್ಲೇ ಹರಡಿರುವ
ಕಲ್ಲಹಾಸಿನ ಆಸನವ ನೇವರಿಸಿ
ಕಾರುಣ್ಯದ ಬೆರಳುಗಳಲ್ಲಿ ನೆರಳನ್ನೇ
ಹಾಸಿ ಹೊದಿಸಿ
ಬಂಡೆಯ ಕಾವು ಬಂದವರಿಗೆ ತಾಗದಂತೆ
ತಂಪನ್ನೇ ಉಣಿಸಿ ತಿನಿಸಿ
ದಾಹ ತಣಿಸುವಂತೆ
ಗಡಿಬಿಡಿ ಆತಂಕ ಧಾವಂತಗಳನ್ನು ಮರೆಸಿ
ನೆನಪು ಕನಸುಗಳ ನಡುವಿನ
ಉಯ್ಯಾಲೆ ಜೀಕಿ
ನಮ್ಮೊಳಗೆ ನಮ್ಮನ್ನು ನಾವೇ ಕಂಡು
ಸಂತೈಸಿಕೊಂಡು
ಹೊಸ ಉಸಿರು ತುಂಬಿಕೊಂಡು
ಇರುವುದೆಲ್ಲವ ಬಿಟ್ಟು ಕ್ಷಣಕಾಲ ಅಲ್ಲೇ
ನಿರಾಳ ನಿರುಮ್ಮಳವಾಗಿ
ನೆಮ್ಮದಿಯ ನೆಲೆಯಲ್ಲಿ ತೇಲಾಡಿಸಿ
ಹೊಸ ಚೈತನ್ಯ ತುಂಬಿ ಹೊಸ ಕನಸಿಗೆ
ಅಣಿ ಮಾಡಿ ಕಳಿಸುವಾಗ
ಹಣೆಯ ಸುಕ್ಕುಗಳನ್ನು ಬಿಡಿಸಿ
ಭುಜವೊತ್ತಿ ಮನ ಹಗುರಾಗಿಸಿ
ಮುಂಗುರುಳ ತೀಡಿ ನವಿರಾಗಿ
ಪ್ರೀತಿಯಪ್ಪುಗೆಯಿಟ್ಟು
ವಿಶ್ವಾಸದ ಶೇಕ್ ಹ್ಯಾಂಡ್ ಕೊಟ್ಟು
ಮತ್ತೆ ಮತ್ತೆ ಬಾ
ನನ್ನೆದೆ ಸದಾ ತೆರೆದ ಬಾಗಿಲೇ
ಎಂದು ಜಪಿಸುವ
ಏಕಾಂತವೂ ಸಹಾ ಅಲ್ಲಿ
ತನ್ನ ಸಂಗಾತಿಗಾಗಿ ಕಾಯುತ್ತಿರುವುದು
ಗೊತ್ತೇ ನಿಮಗೆ?






0 Comments