ಅಹವಿ ಹಾಡು: ಹರಿದ ಸಂಬಂಧಗಳು ಮರುಬಳಕೆಗೆ ಬರಲಿ

ನಾವು ಸಣ್ಣವರಿದ್ದಾಗಿನ ಕಾಲದ ಮಧ್ಯಮ ವರ್ಗದ ಕುಟುಂಬಗಳನ್ನು ನೆನಪಿಸಿಕೊಳ್ಳಿ. ಎಲ್ಲ ಮನೆಯಲ್ಲಿಯೂ ಸಂಪಾದಿಸಿದ್ದು ಅಲ್ಲಲ್ಲಿಗೆ ಸರಿ ಹೋಗುವ ಕಾಲ. ಹೆಚ್ಚುವರಿ ಉಳಿಯಿತು ಅಂತನ್ನುವ ಸೌಭಾಗ್ಯ ಮಧ್ಯಮ ವರ್ಗಕ್ಕಂತೂ ಖಂಡಿತ ಇರಲಿಲ್ಲ. ಎಲ್ಲ ಖರ್ಚುಗಳನ್ನೂ ಅಳೆದು, ತೂಗಿಯೇ ಮಾಡಬೇಕು. ಒಂದು ಪೆನ್ನು ಬೇಕು ಅಂತಿದ್ದರೆ ಮೊದಲು ಹೈ ಕಮಾಂಡಿಗೆ ಅರ್ಜಿ ಹಾಕಬೇಕು. ಹೈ ಕಮಾಂಡು ಮತ್ತು ಗೃಹ ಖಾತೆ ಎರಡೂ ದೀರ್ಘ ಸಮಾಲೋಚನೆ ನಡೆಸಿ ನಮ್ಮ ಹಳೆಯ ಪೆನ್ನನ್ನು ಪೂರಾ ಪರಿಶೀಲಿಸಿ, ಇನ್ನು ಅದು ಉಪಯೋಗಕ್ಕೆ ನಾಲಾಯಖ್ ಅಂತ ತೀರ್ಮಾನಕ್ಕೆ ಬಂದರೆ (ಅದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ!) ಆ ನಂತರ ಮತ್ತೊಂದನ್ನು ಕೊಡಿಸಲು ಒಪ್ಪುತ್ತಿದ್ದರು.

ಆದರೆ, ಈ ರೀತಿಯ ಅರ್ಜಿ ಸಲ್ಲಿಸುವ ಮುಂಚಿನ ನಮ್ಮ ಕಸರತ್ತು ನೆನಪಿಸಿಕೊಳ್ಳಿ. ಕೈ ಜಾರಿ ಕೆಳಕ್ಕೆ ಬಿದ್ದಾಗ ಮುರಿದು ಹೋದ ನಿಬ್ಬನ್ನು ಸಾಕಷ್ಟು ಸಲ ಬದಲಾಯಿಸಿರುತ್ತಿದ್ದೆವು. ವಾರ ವಾರ ಪೆನ್ನಿನೊಳಕ್ಕೆ ಕೊಳೆಯ ರಾಶಿಯೇ ತುಂಬಿಕೊಂಡಿರುತ್ತದೋ ಅನ್ನುವ ಹಾಗೆ ಅದರ ಭಾಗಗಳನ್ನೆಲ್ಲ ಬಿಡಿ ಬಿಡಿ ಮಾಡಿ ಅದನ್ನು ತೊಳೆಯುವ ಸಂಭ್ರಮವಿರುತ್ತಿತ್ತು. ಆ ರೀತಿ maintenance ಎಲ್ಲ ಆದ ನಂತರವೂ, ಮತ್ತು ಮುರಿದು ಬಿದ್ದ ನಿಬ್ಬುಗಳನ್ನು ಬದಲಾಯಿಸಿದ ನಂತರವೂ, ಇನ್ನೂ ಕೆಲವು ಭಾಗಗಳು ವಯಸ್ಸಿಗೆ ತಕ್ಕ ಹಾಗೆ ಮುಪ್ಪಾಗುತ್ತಿದ್ದವು. ಕ್ಯಾಪು ಮುಚ್ಚಿ ಮುಚ್ಚಿ ಅದರಲ್ಲಿ ಒಂದು ಸೀಳು ಕಾಣಿಸಿಕೊಳ್ಳುತ್ತಿತ್ತು.

ಆಗ ಮನೆಯಲ್ಲಿರುವ ಮುರಿದ ಪೆನ್ನುಗಳ ಸ್ಪೇರ್ ಪಾರ್ಟಿನ ಚೀಲ ತೆಗೆದು, ಯಾವುದೋ ಹಳೆಯ ಮುರಿದ ಪೆನ್ನಿನ ಕ್ಯಾಪನ್ನು (ಇದ್ದಿದ್ದರಲ್ಲಿ ಮ್ಯಾಚ್ ಆಗುವಂಥ ಹತ್ತಿರದ ಬಣ್ಣದ್ದನ್ನು) ಜೋಡಿ ಮಾಡುತ್ತಿದ್ದೆವು. ಇಷ್ಟೆಲ್ಲ ಪೂಷಣಿಕೆ ಮಾಡಿದ ನಂತರವೂ ಮತ್ತಿಷ್ಟು ಮುದಿಯಾದ ಪೆನ್ನಿಗೆ ಯಾವತ್ತೋ ಒಂದು ದಿನ ಪೈಲ್ಸ್ ಶುರುವಾಗುತ್ತಿತ್ತು! ಪೆನ್ನಿನ ಲೆಕ್ಕದಲ್ಲಿ ಪೈಲ್ಸ್ ಅನ್ನುವುದು ಕೊನೆಯ ಕಾಲ ಸಮೀಪಿಸಿದ ಲೆಕ್ಕ. ಸೀಳು ಬಿಟ್ಟ, ಇಂಕು ಲೀಕ್ ಆದ ಪೆನ್ನು ಉಪಯೋಗಿಸಲು ಅಸಾಧ್ಯ ಅನ್ನುವ ಸ್ಥಿತಿಯಲ್ಲಿ ಅಪ್ಪ-ಅಮ್ಮ ಎನ್ನುವ ಹೈ ಕಮಾಂಡಿನ ಹತ್ತಿರ ನಮ್ಮ ಬೇಡಿಕೆ ಇಡುತ್ತಿದ್ದೆವು.  ಆ ನಂತರ ಬಂದ ರೀಫಿಲ್ ಪೆನ್ನುಗಳ ಕಥೆಯೂ ಅಷ್ಟೇ. ರೀಫಿಲ್ ಹಾಕಿ ಪೆನ್ನುಗಳನ್ನು ಅದೆಷ್ಟೊಂದು ವರ್ಷ ಉಪಯೋಗಿಸುತ್ತಾ ಇರುತ್ತಿದ್ದೆವು, ಹಾಳಾಗುತ್ತಿದ್ದ ಸ್ಪ್ರಿಂಗನ್ನು ಬದಲಾಯಿಸುತ್ತಿದ್ದೆವು. ಕೊನೆಗೊಂದು ಸಲ ಪೆನ್ನು ಸೀಳು ಬಿಟ್ಟು, ಮೇಲ್ಭಾಗ ಮತ್ತು ಕೆಳಭಾಗ ಒಂದನ್ನೊಂದು ಕಚ್ಚಿ ಹಿಡಿಯಲು ಸಾಧ್ಯವಿಲ್ಲ ಅನ್ನಿಸಿದಾಗ ಮತ್ತೊಂದು ಪೆನ್ನಿನ ಅರ್ಜಿ ರೆಡಿಯಾಗುತ್ತಿತ್ತು.

ಬಟ್ಟೆಗಳು ಹೊಲಿಗೆ ಬಿಟ್ಟರೆ, ಗುಂಡಿ ಕಿತ್ತು ಹೋದರೆ, ಕಾಜಾದ ಹತ್ತಿರ ಹಾಕಿದ್ದ ಹೊಲಿಗೆ ಅಳಕ ಬಳಕವಾದರೆ, ಹುಕ್ ಕಿತ್ತು ಹೋದರೆ, ಹೆಮ್ ಮಾಡಿದ್ದು ಬಿಚ್ಚಿ ಹೋದರೆ ಮನೆಯಲ್ಲಿ ಅಷ್ಟು ಸಣ್ಣ ಪುಟ್ಟ ರಿಪೇರಿ ಮಾಡುವುದು ಎಲ್ಲರಿಗೂ ಸಾಧಾರಣವಾಗಿ ಬರುತ್ತಿರುತ್ತಿತ್ತು. ಸ್ವಲ್ಪ ಬಣ್ಣ ಹೋಗಿ ಮಾಸಲಾಗಿದ್ದರೂ ಅದನ್ನು ಎಸೆಯುವ ಯೋಚನೆ ಮನಸ್ಸಿನಲ್ಲಿ ಮೂಡುತ್ತಲೇ ಇರಲಿಲ್ಲ.

ಮಾಸಲಾಗಿದ್ದರೂ ಕೂಡಾ, ಅದು ಹರಿದ ನಂತರವೇ ಅದಕ್ಕೆ ಒರೆಸುವ ಬಟ್ಟೆಯಾಗುವ eligibility ಸಿಗುತ್ತಿದ್ದುದು. ಮಾಸಲಾಗುವುದು ಅದು ನಿರುಪಯೋಗಿ ವಸ್ತು ಅಂತ ಡಿಕ್ಲೇರ್ ಆಗುವುದಕ್ಕೆ criteria ಆಗಿರುತ್ತಲೇ ಇರಲಿಲ್ಲ. ಆದರೆ, ಬೆನ್ನಿನ ಭಾಗದಲ್ಲಿ ಹರಿದ ಬಟ್ಟೆಗಳಿಗೆ ಮಾತ್ರ ಬೇಗ ಮುಕ್ತಿ ಸಿಗುತ್ತಿತ್ತು. ಆ ಭಾಗದಲ್ಲಿ ಹರಿದ ಬಟ್ಟೆಗಳನ್ನು ಹಾಕಿಕೊಂಡರೆ ಮನೆಗೆ ದರಿದ್ರ ಸುತ್ತಿಕೊಳ್ಳುತ್ತದೆ ಅನ್ನುವುದು ಆ ಕಾಲದ ಮೂಢನಂಬಿಕೆ. ಆಗೆಲ್ಲ ಸುಮಾರು ಹೆಣ್ಣುಗಳು ಜಡೆ ಹಾಕುತ್ತಿದ್ದರಿಂದ ಮತ್ತು ಆ ಜಡೆಗೆ ಎಣ್ಣೆ ಹಾಕುವುದು ಕಡ್ಡಾಯವಾಗಿದ್ದರಿಂದ ಬೆನ್ನಿನ ಭಾಗ ಬೇಗ ಜಾಳಾಗುತ್ತಿತ್ತು. ಅಂಥ ಬೆನ್ನು ಹರಿದ ಬಟ್ಟೆಗಳನ್ನು ಹೊಲಿದು ಉಪಯೋಗಿಸುವಂತಿರಲಿಲ್ಲವಾದ್ದರಿಂದ ಹೊಸ ಬಟ್ಟೆ ಮನೆಗೆ ಬರುತ್ತಿತ್ತು.

ಇನ್ನು ಚಪ್ಪಲಿಗಳ ಕಥೆಗೆ ನೆನಪಿಸಿಕೊಳ್ಳಿ. ಕಾಲಿಗೆ ಚಪ್ಪಲಿಯನ್ನೇ ಕಾಣದೆ ಬೆಳೆದ ನಮ್ಮ ಅಪ್ಪ-ಅಮ್ಮಂದಿರಿಗೆ, ನಮಗೆ ಒಂದು ಚಪ್ಪಲಿ ಕೊಡಿಸುವುದೇ ಜನ್ಮ ಜನ್ಮಾಂತರದ ಪುಣ್ಯ ಅಂದುಕೊಳ್ಳುತ್ತಿದ್ದರು. ನಾವೂ ಹಾಗೆಯೇ ಅಂದುಕೊಳ್ಳುತ್ತಿದ್ದೆವು. ಸುಮಾರು ಮಿಡಲ್ ಸ್ಕೂಲಿನವರೆಗೆ ನೀಲಿ ಸ್ಟ್ರ್ಯಾಪಿನ ಹವಾಯ್ ಚಪ್ಪಲಿಯೇ ಎಲ್ಲರ ಕಾಲಿಗೂ. ರೋಡು ರೋಡಿನಲ್ಲಿ ನಡೆಯುವಾಗ ಸ್ಟ್ರ್ಯಾಪ್ ಕಿತ್ತು ಬಂದರೆ, ಕಾಲಲ್ಲಿರುತ್ತಿದ್ದುದನ್ನು ಕೈಗೆತ್ತಿಕೊಂಡು ಅದನ್ನು ಮತ್ತೆ ತೂರಿಸಿ ಮುಂದುವರೆಯುತ್ತಿದ್ದೆವು. ಅದಾದ ಮೇಲೆ ವೃದ್ಧಾಪ್ಯ ಬಂದು ಕೊನೆಗೊಂದು ದಿನ ಸ್ಟ್ರ್ಯಾಪ್ ಮಧ್ಯ ರೋಡಿನಲ್ಲೆಲ್ಲೋ ಕಿತ್ತು ಹೋಗಿ, ಅವರಿವರಿಗೆ ಅಂಗಲಾಚಿ ಬೇಡಿ ಒಂದು ಪಿನ್ನು ಸಂಪಾದಿಸಿ ಟೆಂಪೊರರಿ ರಿಪೇರಿ ಮಾಡಿ ಕಾಲೆಳೆದುಕೊಂಡು ಮನೆ ಸೇರಿದ ಮೇಲೆ ಹೊಸ ಚಪ್ಪಲಿಯನ್ನು ಕೊಳ್ಳುವ ಮಾತು.

ಆಮೇಲೆ ಹೈಸ್ಕೂಲ್ ದಾಟಿ ಕಾಲೇಜು ಮೆಟ್ಟಿಲು ಹತ್ತುವಾಗ ಸ್ವಲ್ಪ ಸ್ಟೈಲಾಗಿರುವ ಚಪ್ಪಲಿಯೊಂದನ್ನು ಅತ್ತೂ, ಕರೆದೂ sanction ಮಾಡಿಸಿಕೊಳ್ಳುತ್ತಿದ್ದೆವು. ಆಗ ದಿಗ್ವಿಜಯ ಸಾಧಿಸಿದ ಖುಷಿ. ಇನ್ನು ಒಂದು ಜೊತೆ ಚಪ್ಪಲಿ ಬಿಟ್ಟು, ಎರಡನೆಯ ಜೊತೆ ಚಪ್ಪಲಿ ಯಾವತ್ತೂ ಕಂಡವರೇ ಅಲ್ಲ. ಸ್ಕೂಲ್ ಯೂನಿಫಾರ್ಮ್‌ನ ಕರಿ ಮತ್ತು ಬಿಳಿಯ ಶೂ, ಜೊತೆಗೊಂದು ಚಪ್ಪಲಿ. ಅಲ್ಲಿಗೆ ಮುಗಿಯಿತು. ಮನೆಯಲ್ಲೊಂದು ಸಣ್ಣ ಚಪ್ಪಲಿ ಗೂಡಿರುತ್ತಿತ್ತು. ಅದರಲ್ಲಿ ಮನೆಯ ಎಲ್ಲರ ಚಪ್ಪಲಿಯೂ ಇಡಲು ಸಾಧ್ಯವಾಗುತ್ತಿತ್ತು. ಆರೆಂಟು ಜೊತೆ ಚಪ್ಪಲಿ-ಶೂಗಳು ಹಿಡಿಸುವಂಥ ಚಪ್ಪಲಿ ಗೂಡು ಸಾಕೋ ಸಾಕು ಬದುಕಿಗೆ. ಚಪ್ಪಲಿಗಳ ಬೆಲೆಯೂ ಅಷ್ಟೇ … ಅಬ್ಬಬ್ಬಾ ಅಂದರೆ ಐವತ್ತು ರೂಪಾಯಿನದ್ದು. ಅಂಗಡಿಗೆ ಹೋಗಿ ಕೂತ ತಕ್ಷಣ ಅಮ್ಮ ಹೇಳುತ್ತಿದ್ದಳು ‘ಗಟ್ಟಿಯಾಗಿರೋದು ತೋರ್ಸಿ. ನಾಜೂಕಿನದ್ದು ಬೇಡ. ನಾಕ್ ದಿನ ಕೂಡಾ ಬಾಳಿಕೆ ಬರಲ್ಲ. ತುಂಬ ದಿನ ಬಾಳಿಕೆ ಬರೋ ಅಂಥದ್ದನ್ನ ತೋರಿಸಿ’ ಅಂತ. ನಾಜೂಕಾಗಿರುವ, ತುಂಬ ಫ಼್ಯಾಷನಬಲ್ ಚಪ್ಪಲಿಗಳನ್ನು ಹಾಕಬೇಕೆನ್ನುವ ನಮ್ಮ ಕನಸು ಅಲ್ಲೇ ಮುರುಟಿ ಹೋಗುತ್ತಿತ್ತು. ಆಸೆ ಬುರುಕ ಕಣ್ಣಿನಿಂದ ಅಲ್ಲಿ ಕಂಡ ಯಾವುದೋ ಸ್ಟೈಲಿಷ್ ಚಪ್ಪಲಿ ತೋರಿಸಿ ಕಣ್ಣಿನಲ್ಲೇ ಅಮ್ಮನ ಕಡೆ ದೈನ್ಯದ ಬೇಡಿಕೆ ಕಳಿಸಿದರೆ, ಅವಳು ಕೆಂಗಣ್ಣು ಬಿಟ್ಟು ಅದನ್ನು ಅಲ್ಲೇ ತುಂಡರಿಸಿ ಹಾಕಿಬಿಡುತ್ತಿದ್ದಳು.

ಅಂಥದ್ದೆಲ್ಲಾ ಚಪ್ಪಲಿ ಶ್ರೀಮಂತರು ಮತ್ತು ಸಿನೆಮಾ ತಾರೆಯರು ಮಾತ್ರ ಹಾಕುತ್ತಾರೆ ಅನ್ನುವ ನಂಬಿಕೆಯಿತ್ತು ನಮಗೆ! ಇಷ್ಟೆಲ್ಲ ಆರಿಸಿ, ಜಾಲಿಸಿ ತಂದ ಚಪ್ಪಲಿ ಒಂದೂವರೆ ವರ್ಷದಲ್ಲಿ ಕಿತ್ತು ಹೋಗುತ್ತಿತ್ತು. ಇರುತ್ತಿದ್ದುದೇ ಒಂದು ಚಪ್ಪಲಿಯಾದ್ದರಿಂದ, ದಿನವೂ ಅದನ್ನೇ ಬಳಸಿ ಬಳಸಿ ಕಿತ್ತುಹೋಗುವುದು ಸ್ವಾಭಾವಿಕವೇ ಆಗಿತ್ತು. ಆಗ ಅಮ್ಮನ ಹತ್ತಿರ ಚಪ್ಪಲಿ ಕಿತ್ತು ಹೋಯ್ತು ಅಂತ ಹೇಳಿದರೆ ‘ಅವನು ಗಟ್ಟಿಮುಟ್ಟಾಗಿದೆ ಅಂತ ಸುಳ್ಳು ಹೇಳಿ ಟೋಪಿ ಹಾಕ್ದ ನೋಡು. ನೆಟ್ಟಗೆ ಒಂದೂವರೆ ವರ್ಷ ಬಾಳಿಕೆ ಬರಲಿಲ್ಲ’ ಅಂತ ಅಂಗಡಿಯಾತನಿಗೆ ಬಯ್ಯುತ್ತಿದ್ದಳು! ಅಪ್ಪ ಯಾವಾಗಲೂ ಹೇಳುತ್ತಿದ್ದರು ಚಪ್ಪಲಿ ನೇರವಾಗಿ ಪಕ್ಕ ಪಕ್ಕ ಬಿಡಬೇಕು ಅಂತ. ಜೋರಾಗಿ ಎಸೆದಂತೆ ಬಿಟ್ಟು, ಅದೇನಾದರೂ ಉಲ್ಟಾ ಬಿದ್ದರೆ ಅದರ ಬಾಳಿಕೆ ಕಡಿಮೆಯಾಗುವುದು ಅಂತ ಅವರ ನಂಬಿಕೆ. ಹಾಗಾಗಿ ಚಪ್ಪಲಿ ಕಿತ್ತು ಹೋಯ್ತು ಅಂದ ತಕ್ಷಣ ಒಂದಿಷ್ಟು ಹೊತ್ತು ಸಹಸ್ರ ನಾಮಾರ್ಚನೆಯಾಗುತ್ತಿತ್ತು ನಮ್ಮ ಬೇಜವಾಬ್ದಾರಿತನದ ಬಗ್ಗೆ. ಈಗಿನ ಕಾಲದ ಮಕ್ಕಳಿಗೆ ಇದೆಲ್ಲ ಹಾಸ್ಯ ಅನ್ನಿಸುತ್ತದೋ, ಏನೋ. ಒಂದೂವರೆ ವರ್ಷಗಳ ಕಾಲ ಒಂದೇ ಒಂದು ಚಪ್ಪಲಿ ಉಪಯೋಗಿಸುತ್ತಿದ್ದೆವು ಅನ್ನುವುದೇ ಈಗ ಹಾಸ್ಯವೆನ್ನಿಸುತ್ತದೋ ಏನೋ. ಕಿತ್ತು ಹೋದ ಚಪ್ಪಲಿಗೆ ರಿಪೇರಿ ಭಾಗ್ಯ. ಬಾಯಿ ಬಿಟ್ಟು ಕೊಂಡ ಪದರಗಳಿಗೆ ಮಧ್ಯೆ ಗಮ್ ಹಾಕಿ, ಕುಟ್ಟಿ, ತಟ್ಟಿ ಜೊತೆಗೊಂದು ಸಲ ಆ ಉಂಗುಷ್ಠಕ್ಕೆ ಹೊಲಿಗೆ ಹಾಕಿಸಿ ಗಟ್ಟಿಯಾಗಿಸಿದರೆ ಇನ್ನೂ 8-10 ತಿಂಗಳು ಸರ್ವಿಸ್ ಕೊಡುತ್ತಿತ್ತು ಪಾಪ.ಆ ನಂತರ ಇನ್ನೂ ಒಂದಿಷ್ಟು ರಿಪೇರಿ ಕಂಡ ಚಪ್ಪಲಿ, ಕೊನೆಗೊಂದು ದಿನ ವಯಸ್ಸಾಗಿ ‘ಉಶ್ಶಪ್ಪ, ಇನ್ನು ನನ್ನಿಂದ ಸಾಧ್ಯವಿಲ್ಲ’ ಅಂತ ಕೂತಾಗ ಹೊಸ ಚಪ್ಪಲಿಯ indent ಸಿದ್ಧ ಮಾಡುತ್ತಿದ್ದೆವು.

ಈಗ ಒಂದಿಷ್ಟು ಜೊತೆಯ ಚಪ್ಪಲಿ, ಶೂಗಳು ಮನೆಯ ತುಂಬೆಲ್ಲ ಚೆಲ್ಲಾಡುತ್ತವೆ. ಡ್ರೆಸ್ಸಿಗೆ ಮ್ಯಾಚ್ ಆಗುವಂಥ ಚಪ್ಪಲಿಗಳು ಒಂದಷ್ಟು ಜೊತೆಗಳು ಇರುವುದು ಮಾಮೂಲು. Branded ಚಪ್ಪಲಿ ಮತ್ತು ಶೂಗಳು ಮಾತ್ರ ಮನೆಯಲ್ಲಿರುತ್ತವೆ. ಸಾವಿರಗಟ್ಟಳೆಯ ಚಪ್ಪಲಿ, ಶೂ ನೋಡುವಾಗೆಲ್ಲ ಅಂದುಕೊಳ್ಳುತ್ತೇನೆ ‘ನನ್ನ ಅಮ್ಮನಾಗಿದ್ದರೆ ಒಂದು ಚಪ್ಪಲಿಯ ಬೆಲೆಗೆ ಹತ್ತು ಜೊತೆ ಕೊಳ್ಳುತ್ತಿದ್ದಳು’ ಅಂತ.  ಈಗಿನ ಕಾಲದಲ್ಲಿ ಚಪ್ಪಲಿ ರಿಪೇರಿ ಮಾಡುವ ಅಂಗಡಿಗಳು ಎಷ್ಟೊಂದು ಕಡಿಮೆಯಾಗಿದೆ ಅನ್ನುವುದು ನಿಮ್ಮ ಗಮನಕ್ಕೂ ಬಂದಿದೆಯಾ? ಬೀದಿ ಬೀದಿಯಲ್ಲಿ ಇರುತ್ತಿದ್ದ ರಿಪೇರಿಗರು ಈಗ ಕಿಲೋಮೀಟರ್ ದೂರಕ್ಕೆ ಒಬ್ಬರಂತೆ ಸಿಕ್ಕರೆ ಪುಣ್ಯ. ಅದೂ exclusive ರಿಪೇರಿ ಅಂಗಡಿಗಳಲ್ಲ, ಚಪ್ಪಲಿ ಹೊಲೆಯುವ ಅಂಗಡಿಗಳು … ಆಗೀಗ ಬರುವ ರಿಪೇರಿ ಕೆಲಸವನ್ನೂ ಮಾಡಿಕೊಡುವಂಥವರು. ರಸ್ತೆ ಮೂಲೆಯಲ್ಲಿ ಕೂತಿರುತ್ತಿದ್ದ ರಿಪೇರಿಯವರೆಲ್ಲ ಈಗ extinct ಆಗಿಹೋಗಿದ್ದಾರೋ, ಏನೋ. ನಾನು ಹೊಸದಾಗಿ ಕೊಂಡ ಒಂದು ಚಪ್ಪಲಿಯನ್ನ ಹಾಕಿಕೊಂಡು ಕವಲೆದುರ್ಗ ಬೆಟ್ಟ ಹತ್ತಿದ ಪರಿಣಾಮವಾಗಿ (ಎಂಥ ಜಾಣತನ!) ಪೀಸ್ ಪೀಸ್ ಆಗಿದ್ದ ಚಪ್ಪಲಿ ರಿಪೇರಿಯವ ಸಿಕ್ಕದ ಕಾರಣಕ್ಕೆ ವರ್ಷಗಟ್ಟಳೆ ಹಾಗೆಯೇ ಬಿದ್ದಿದ್ದು, ಮೊನ್ನೆ ಮೊನ್ನೆ ರಿಪೇರಿಯಾಯ್ತು.

ಪೆನ್ನುಗಳಂತೂ ಉಪಯೋಗಿಸಿ ಬಿಸಾಕುವಂಥವೇ ಜಾಸ್ತಿ. ಹೊಸ ಪೆನ್ನಿನ ಬೆಲೆಗೂ ಮತ್ತು ರೀಫಿಲ್ಲಿನ ಬೆಲೆಗೂ ಎಷ್ಟು ಕಡಿಮೆ ಬೆಲೆ ಅಂತರ ಇರುತ್ತದೆ ಅಂದರೆ, ‘ಅಯ್ಯೋ ಈ ಹಳೆ ಪೆನ್ನಿಗೆ ರೀಫಿಲ್ ಹಾಕೋದರ ಬದಲು ಹೊಸತನ್ನೆ ಕೊಳ್ಳುವುದೇ ಬೆಸ್ಟು’ ಅಂತ ಅನ್ನಿಸುವಷ್ಟು ಕಡಿಮೆ. ಹಾಗಾಗಿ ರೀಫಿಲ್ ಖಾಲಿ ಆದ ಪೆನ್ನು ಡಸ್ಟ್ ಬಿನ್ ಸೇರುವುದು ಸಾಮಾನ್ಯ. ನನ್ನ ಮಗನಿಗಂತೂ ಹೊಲಿಗೆ ಬಿಟ್ಟ ಮತ್ತು ಹರಿದುಹೋದ ಬಟ್ಟೆಗಳ ಮಧ್ಯದ ವ್ಯತ್ಯಾಸವೇ ತಿಳಿದಿಲ್ಲ. ಹೊಲಿಗೆ ಬಿಟ್ಟವನ್ನು ನಿರ್ದಾಕ್ಷಿಣ್ಯವಾಗಿ ‘ಅದು ಹರಿದುಹೋಗಿದೆ’ ಅಂತ ಎಸೆಯುತ್ತಾನೆ. ನಾನು ಅದನ್ನ ಪರೀಕ್ಷಿಸಿ ‘ಅಯ್ಯೋ ಅದು ಹರಿದಿಲ್ಲ, ಹೊಲಿಗೆ ಬಿಟ್ಟಿದೆ ಅಷ್ಟೇ’ ಅಂದರೆ ‘ಎರಡೂ ಒಂದೇ’ ಅಂದ. ಎರಡೂ ಒಂದೇ ಅಲ್ಲ ಅನ್ನುವುದನ್ನು ಅವನಿಗೆ ಅರ್ಥಮಾಡಿಸುವ ತಾಳ್ಮೆ ಇಲ್ಲದ ನಾನು ಸುಮ್ಮನಾಗಿ ಹೋದೆ.

ಮೊನ್ನೆ ಯಾರೋ ಪಾಪ ವಯಸ್ಸಾದ ಮುದುಕರೊಬ್ಬರು ಕೊಡೆ ರಿಪೇರಿ ಅಂತ ಕೂಗುತ್ತಾ ಹೋಗುತ್ತಿದ್ದುದನ್ನು ಕಂಡು ನಿಜಕ್ಕೂ ಪಾಪ ಅನ್ನಿಸಿತು. ಅಮಿತಾಭ್ ಎಲ್ಲೋ ಒಂದು ಕಡೆ ಹೇಳಿದ್ದ ಮಾತು ಓದಿದ್ದು ನೆನಪಾಗುತ್ತದೆ ‘ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕಾಲ ಮಗುಚಿ ಹಾಕಿದ ಹಾಗೆ ಬದಲಾಗಿ ಹೋಗಿದೆ. ನಾನು ಯಾವುದೋ ಅಪರಿಚಿತ ರೈಲ್ವೇ ಸ್ಟೇಷನ್ನಿನಲ್ಲಿ ಇಳಿದು, ಎಲ್ಲಿದ್ದೇನೆ ಅಂತ ತಿಳಿಯದೆ ಕಕ್ಕಾಬಿಕ್ಕಿಯಾಗಿ, ಅಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕೂತು ಅರೆ ಕ್ಷಣ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಾನು ಹೋಗಬೇಕಾದ ಜಾಗದ ಟ್ರೇನುಗಳೆಲ್ಲ ಹೊರಟುಹೋಗಿ, ಅಪರಿಚಿತ ಜಾಗದಲ್ಲಿ ಎಲ್ಲಿಗೆ ಹೋಗಬೇಕಂತಲೇ ತಿಳಿಯದೆ, ಸ್ಟೇಷನ್ನಿನಲ್ಲಿ ಬಂಧಿಯಾಗಿ ಹೋಗಿದ್ದೇನೆ ಅನ್ನಿಸುತ್ತಿದೆ’ ಅಂತ. ಅವರ ಸಿನೆಮಾಗಳೆಲ್ಲ ಸೂಪರ್ ಹಿಟ್ ಆಗುತ್ತಿದ್ದವಲ್ಲ ಒಂದು ಕಾಲದಲ್ಲಿ, ಆ ನಂತರ ಯಾವುದೇ ರೀತಿಯ ಸಿನೆಮಾ ತೆಗೆದರೂ ಅದು ಬಾಕ್ಸ್ ಆಫೀಸಿನಲ್ಲಿ ಗೆಲುವು ಕಾಣದೇ ಹೋದಾಗ ಪ್ರೇಕ್ಷಕನ ಅಭಿರುಚಿ ಬದಲಾಗಿದ್ದು ಯಾವಾಗ ಅಂತಲೇ ನನಗೆ ತಿಳಿಯಲಿಲ್ಲ ಅಂತ ಹೇಳುವಾಗ ಈ ಮಾತು ಹೇಳಿದ್ದರು. ಈ ಕೊಡೆ ರಿಪೇರಿಯ ಮುದುಕರನ್ನು ನೋಡಿದಾಗಲೂ ಅದೇ ಅನ್ನಿಸಿತು ‘ಅಪರಿಚಿತ ಸ್ಟೇಷನ್ನಿನಲ್ಲಿ ಕೂತು ಅರೆ ಕ್ಷಣ ಕಣ್ಣು ಮುಚ್ಚಿರಬೇಕು ಈತ ಕೂಡಾ. ಆತ ಕಣ್ಣು ಬಿಡುವಷ್ಟರಲ್ಲಿ ಮುರಿದ ಕೊಡೆ ರಿಪೇರಿ ಮಾಡಿಸುವ ಜನರು ಮಾಯವಾಗಿರುವುದು ಅವನ ಅರಿವಿಗೇ ಬಂದಿಲ್ಲ ಪಾಪ’ ಎಂದು.

ಮೊನ್ನೆ ಎಲ್ಲೋ ಒಂದು ಕೋಟ್ ಓದಿದೆ … ಸುದೀರ್ಘ ದಾಂಪತ್ಯ ನಡೆಸಿದ ವೃದ್ಧ ದಂಪತಿಗಳನ್ನು ಯಾರೋ ಕೇಳುತ್ತಾರೆ ‘ಇದರ ರಹಸ್ಯವೇನು?’ ಅಂತ. ಅದಕ್ಕೆ ಅವರ ಉತ್ತರ ‘ನಾವು ಕಿತ್ತು ಹೋದದ್ದನ್ನು ಹೊಲೆವ, ರಿಪೇರಿ ಮಾಡಿ, ಮತ್ತೆ ಅದನ್ನು ಉಪಯೋಗಿಸಲು ಯೋಗ್ಯವಾಗಿಸುತ್ತಿದ್ದ ಕಾಲದವರು ಮತ್ತು ನೀವು ವಸ್ತುವನ್ನು ಎಸೆದು ಅದರ ಜಾಗದಲ್ಲಿ ಹೊಸತನ್ನು ತರುವ ಕಾಲದವರು …’ ಎಂದು…

ಹೌದು, ನಮಗೆ ಈಗ ಎಲ್ಲವೂ ಯೂಸ್ ಅಂಡ್ ಥ್ರೋ ಆಗಿಹೋಗಿದೆ. ಸಂಬಂಧಗಳು ಕೂಡಾ ; ಹರಿದ – ಮುರಿದ – ಜಾಳಾದ ಸಂಬಂಧಗಳಿಗೆ ತೇಪೆ ಹಚ್ಚುವ ವ್ಯವಧಾನ ಯಾರಲ್ಲೂ ಇಲ್ಲ. ಸಂಬಂಧಗಳು ತುಂಬ ಸಸ್ತಾ ಆಗಿಹೋಗಿವೆ ಈಗ. ದಾಂಪತ್ಯದಲ್ಲಿ  ಗಂಡ ಹೆಂಡಿರು ಹೊಂದಿಕೊಳ್ಳಲು ತುಂಬ ಪ್ರಯತ್ನ ಪಟ್ಟು, ಇನ್ನು ಸಾಧ್ಯವೇ ಇಲ್ಲ ಅನ್ನಿಸಿದಾಗ ಮಾತ್ರ ದೂರವಾಗುತ್ತಿದ್ದರು. ಒಂದು ಸಂಬಂಧ ಮುರಿದು ಹೋಗುವ ಮುನ್ನ, ಬಂಧು ಬಳಗ ಎಲ್ಲರೂ ಅದನ್ನು ಕೂಡಿಸಲು ಪ್ರಯತ್ನ ಪಡುತ್ತಿದ್ದರು. ಹಾಗೂ ಎಲ್ಲ ಪ್ರಯತ್ನಗಳಿಗೂ ಮೀರಿ ಇನ್ನು ಸಾಧ್ಯವೇ ಇಲ್ಲ ಅನ್ನಿಸಿದಾಗ ದೂರವಾಗುತ್ತಿದ್ದರು. ಸ್ನೇಹದ ವಿಷಯದಲ್ಲೂ ಹಾಗೆಯೇ. ಮುಂಚೆ ಒಬ್ಬಳು ನಮ್ಮ ಗೆಳತಿಯಾಗಬೇಕು ಅಂದರೆ ಅವಳು ಸ್ಕೂಲಿನಲ್ಲೋ, ಕಾಲೇಜಿನಲ್ಲೋ ನಮ್ಮ ಜೊತೆ ವರ್ಷಗಟ್ಟಳೆ ಓದುವಂಥವಳಾಗಿರುತ್ತಿದ್ದಳು. ಇಲ್ಲವೆಂದರೆ ಅಕ್ಕ-ಪಕ್ಕದ ಮನೆಯವರು, ಆಫೀಸಿನಲ್ಲಿ ಕೆಲಸ ಮಾಡುವಂಥವರು ಮೊದಮೊದಲಲ್ಲಿ ಪರಿಚಿತರಾಗಿ, ಕಾಲ ಕಳೆದಂತೆ ಸ್ನೇಹಿತರಾಗಿ, ಮತ್ತಿಷ್ಟು ಕಾಲ ಆದ ಮೇಲೆ ಆತ್ಮೀಯರಾಗಿ, ಕೊನೆಗೊಮ್ಮೆ ಯಾವಾಗಲೋ ಪ್ರಾಣ ಸ್ನೇಹಿತೆಯರಾಗುತ್ತಿದ್ದೆವು. ಈಗ ಫ಼್ರೆಂಡ್ ಆಗಲು ಅಷ್ಟೆಲ್ಲ ಸರ್ಕಸ್ ಬೇಕೇ ಇಲ್ಲ. ಯಾವುದೋ ಸಾಮಾಜಿಕ ಜಾಲ ತಾಣದಲ್ಲಿ ಯಾರೋ, ಯಾರಿಗೋ ‘ಫ಼್ರೆಂಡ್ ರಿಕ್ವೆಸ್ಟ್’ ಕಳಿಸುತ್ತೇವೆ. ಎಂದೂ ಕಾಣದ, ಕೇಳದ ಯಾರಿಗೋ ಈ ರೀತಿ ರಿಕ್ವೆಸ್ಟ್ ಕಳಿಸುತ್ತೇವೆ ಮತ್ತು ಅವರು ಅದನ್ನು ಅಕ್ಸೆಪ್ಟ್ ಮಾಡುತ್ತಾರೆ … ಅಲ್ಲಿಗೆ ಅವರಿಬ್ಬರೂ ಫ಼್ರೆಂಡ್ಸ್! ಆ ನಂತರ ‘ನೀವು ಯಾರು? ಎಲ್ಲಿದ್ದೀರಿ? ಏನು ಮಾಡುತ್ತೀರಿ? ನಿಮಗೇನು ಇಷ್ಟ? ನನಗೆ ನೀವು ಇಷ್ಟ ….’ ಅಂತೆಲ್ಲ ಪರಿಚಯದ ಕಸರತ್ತಿಗೆ ಇಳಿಯುತ್ತೇವೆ.

ದಿಢೀರ್ ಅಂತ ಶುರುವಾಗುವ ಈ ಸ್ನೇಹಗಳು, ಪೌಡರ್ ಹಾಕಿ ಹಣ್ಣು ಮಾಡಿದ ಮಾವಿನ ಹಾಗೆ. ಸುಮಾರು ಹಣ್ಣುಗಳು ಮೇಲೆ ಬಣ್ಣವೋ ಬಣ್ಣ, ಒಳಗೆಲ್ಲ ಬರೀ ಹುಳಿ. ಹಾಗಾಗಿ ಒಂದೆರಡು ಸಲ ಕಚ್ಚಿ, ಸಣ್ಣ ಕಣ್ಣು ಮಾಡಿ ಹುಳಿ ಹಣ್ಣನ್ನೇ ತಿನ್ನಲು ಪ್ರಯತ್ನಿಸುತ್ತೇವೆ. ಆ ನಂತರ ಸಾಕಾಗಿ ಹೋಗಿ, ಅದನ್ನು ಎಸೆದು ಬಿಡುತ್ತೇವೆ. ಒಂದು ಸಲ ಕಚ್ಚಿದ ನಂತರ ಅದು ಹುಳಿ ಅಂತ ಗೊತ್ತಾದ ಹಣ್ಣುಗಳನ್ನು, ಮತ್ತೆ ಹಣ್ಣಾಗಲಿಕ್ಕೆ ಇಡುವ ಹಾಗೂ ಇಲ್ಲ. ಒಮ್ಮೆ ಹಲ್ಲಿನ ಗುರುತು ಬಿದ್ದ ಹಣ್ಣು, ಮತ್ತೆ ಇಟ್ಟರೂ ಕೊಳೆಯುಹೋಗುವುದು ಗ್ಯಾರಂಟಿ. ಆದರೆ ಅದೃಷ್ಟ ಚೆಂದಕ್ಕಿದ್ದರೆ ಬೆರಳೆಣಿಕೆಯಷ್ಟು ಸಿಹಿ ಸಿಹಿ ಹಣ್ಣುಗಳೂ ನಮ್ಮದಾಗುತ್ತವೆ. ಮುಂಚೆ ಎಲ್ಲ ಸಂಬಂಧಗಳನ್ನು time testingಗೆ ಒಡ್ಡುತ್ತಿದ್ದೆವು. ಆ ಪರೀಕ್ಷೆಯಲ್ಲಿ ಪಾಸ್ ಆದ ಸಂಬಂಧಗಳು ವರ್ಷ ವರ್ಷಗಳ ಕಾಲ ನಮ್ಮ ಜೊತೆ ಉಳಿಯುತ್ತಿದ್ದವು. ನಾನು ಸ್ಕೂಲಿನಲ್ಲಿ ಓದುವಾಗ ನನ್ನ ಜೊತೆಯಲ್ಲಿದ್ದ ಶೈಲಾ ನಮ್ಮೆಲ್ಲ ಭಿನ್ನಾಭಿಪ್ರಾಯಗಳ ಮಧ್ಯೆಯೂ ದಶಕಗಳಿಂದ ಜೊತೆಯಾಗೇ ಉಳಿದಿದ್ದಾಳೆ, ನನ್ನ ಪಕ್ಕದ ಮನೆಯಲ್ಲಿದ್ದ ಗೀತಾ ಕೂಡಾ ಇವತ್ತಿಗೂ ನನ್ನೆಲ್ಲ ಕಥೆಗಳಿಗೂ ಅವಳು ಮತ್ತು ಅವಳೆಲ್ಲ ಕಥೆಗಳಿಗೂ ನಾನು ಕಿವಿ ಅನ್ನುವಷ್ಟು ಹತ್ತಿರವಿದ್ದೇವೆ. ಕಾಲೇಜಿನಲ್ಲಿ ನನ್ನ ಗೆಳತಿಯಾಗಿದ್ದ ಚಂಪಾ ಮತ್ತು ನಾನು ಈಗ ಕೂಡಾ ಸಾವಿರಾರು ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕ ಕೆಲವರು ಕೂಡಾ ಹೃದಯಕ್ಕೆ ತುಂಬ ಹತ್ತಿರವಾಗಿದ್ದಾರೆ. ಕಷ್ಟ – ಸುಖಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗುತ್ತೇವೆ. ಆದರೆ ಈ ಸಿಹಿ ಹಣ್ಣುಗಳ ಪಕ್ಕದಲ್ಲೇ ತಿನ್ನಲಾಗದೇ ಎಸೆದ ಹುಳಿ ಹಣ್ಣುಗಳ ಒಂದು ಸಣ್ಣ ಗುಡ್ಡೆಯೇ ಇರುತ್ತದೆ. ಅವು ಹಾಗೇ ಬಿಟ್ಟರೆ, ಒಂದು ದಿನ ಕೊಳೆಯುತ್ತವೆ … ಮೂಗು ಮುಚ್ಚಿ ನಡೆವ ಹಾದಿ ಬದಲಿಸುವುದೊಂದೇ ದಾರಿ ಅನ್ನುವ ಸ್ಥಿತಿ ಎದುರಾಗುತ್ತದೆ. ಹರಿದ ಸಂಬಂಧಗಳನ್ನು ತೇಪೆ ಹಾಕಿ ಕೂಡಿಸುವ, ಮತ್ತೆ  ಮತ್ತೆ ಉಪಯೋಗಿಸುವ ತಾಳ್ಮೆಯ ಗುಪ್ತಗಾಮಿನಿ ಮಾತ್ರ ಯಾವತ್ತೂ ಬತ್ತದಿರಲಿ …

‍ಲೇಖಕರು avadhi

March 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

25 ಪ್ರತಿಕ್ರಿಯೆಗಳು

  1. Anil Talikoti

    ತುಂಬಾ ಲವಲವಿಕೆಯ ಚೆಂದದ ಬರಹ
    -ಅನಿಲ

    ಪ್ರತಿಕ್ರಿಯೆ
  2. Aparna Rao

    ಭಾರತೀ ಓದಿ ..ಹಸಿವಾದರೆ ಹುಳಿಯನ್ನ ಕಲೆಸಿಕೊಂಡು ತಿನ್ನೋ ಕಾಲಕ್ಕೆ ಹೋಗಿ ಬಾಯಿ ಮನಸ್ಸು ಒದ್ದೆ ಒದ್ದೆ.. ಈಗ ಹಸಿವಾಯಿತು ಅಂದಕೂಡಲೇ 2 ನಿಮಿಷದ ಮ್ಯಾಗಿಗೆ ಮೊರೆ ಹೋಗುವ ಕಾಲಕ್ಕೆ .. ನಿನ್ನ ಬರವಣಿಗೆ ಬಹಳ ಅಗತ್ಯ..ಎಷ್ಟು ಹೇಳಿದರು ಕೇಳಬಯಸುವ ಇಂತ ಪುಟ್ಟ ಪುಟ್ಟ ಘಟನೆಗಳ ಸೊಗಸು ಈಗಿನವರಿಗೆ ಅರ್ಥವಾಗುವುದಿಲ್ಲ ಎಂದು ಹಳ ಹಳಿಸುವ ಮೂರ್ಖತನದ ಮಾತುಗಳನ್ನು ಬಿಟ್ಟು ಸಂಬಂಧ ಬೆಸೆಯುವ ಪ್ರಾಮಾಣಿಕ ಪ್ರಯತ್ನ ಎಲ್ಲರಿಂದಲೂ ಆಗಲೇಬೇಕಿದೆ.. ಇದನ್ನು ಮಕ್ಕಳಿಗೆ ನೆನಪಿಸುವುದಕ್ಕಲ್ಲ .. ನಮ್ಮನ್ನು ನಾವು ಎಚ್ಚರವಾಗಿಟ್ಟುಕೊಳ್ಳಲು ಅನುಭವದ ಕನ್ನಡಕದೊಳಗಿಂದ ವಿಶ್ಲೇಷಣೆ ಮಾಡಿಕೊಳ್ಳಬೇಕಿದೆ.

    ಪ್ರತಿಕ್ರಿಯೆ
  3. vijayashree

    ಭಾರ್ತಿ , ಇನ್ನೂ ಒಂದು ಏನೆಂದರೆ, ನಮ್ಮ ಕಾಲದಲ್ಲಿ ಹೋಲಿಸುವ ಅಥವಾ ತರುವ ಫ್ರಾಕ್ ಆಗಲೀ , ಉದ್ದಾ ಲಂಗವಾಗಲೀ ಯಾವುದಾದರೂ ಕರೆಕ್ಟ್ ಫಿಟ್ಟಿಂಗ್ ಇರ್ತಾ ಇತ್ತಾ..? ಬೆಳೀತಾರೆ ಮಕ್ಳು ಅಂತ ಅರ್ಧ ಅಡಿ ಉದ್ದ ಮತ್ತು ನಾಲ್ಕು ಇಂಚ್ ಅಗಲ ಇಟ್ಟೆ ಹೊಲಿಸುತ್ತಿದ್ದಿದ್ದು … ಉದ್ದ ಲಂಗ ವನ್ನು ಮೂರು ಮಡಿಕೆ ಮಡಚಿ ಹೋಲಿಸಿ ವರ್ಷಾ ವರ್ಷಾ ಹೊಲಿಗೆ ಬಿಚ್ಚಿಸಿ ಮಕ್ಕಳು ಬೆಳೆದಂತೆ ಅಳತೆ ಸರಿ ಮಾಡಿಸುತ್ತಿದ್ದುದು ನೆನಪಿದೆಯಾ..? ಮತ್ತೆ ಇಷ್ಟೆಲ್ಲಾ ಸರ್ಕಸ್ಸು ಆದಮೇಲೆ ಇನ್ನು ಹೊಲಿಗೆ ಬಿಚ್ಚಲು ಸಾಧ್ಯವಾಗದಿದ್ದಾಗ ಅದು ತಂಗಿಗೆ ಹಸ್ತಾಂತರ …!!!
    ಈ ದಿನಗಳಲ್ಲಿ ಈ ಸಂಗತಿಗಳೆಲ್ಲಾ ಅದೆಷ್ಟು ಪಳೆಯುಳಿಕೆಗಳಾಗಿ ಹೋಗಿದೆಯೆಂದರೆ ಮರೆತೇ ಹೋದಂತಿದ್ದ ವಿಷಯಗಳು ನಿಮ್ಮ ಲೇಖನದಿಂದ ಮತ್ತೆ ನೆನಪಾಯ್ತು..:) ಚನ್ನಾಗಿದೆ ಬರಹ ..

    ಪ್ರತಿಕ್ರಿಯೆ
    • ಶಮ, ನಂದಿಬೆಟ್ಟ

      ವಿಜಯಕ್ಕಾ, ಆವಾಗೆಲ್ಲ ಕೇಳುತ್ತಿದ್ದಿದ್ದೇ ಇಟ್ಕೊಂಡು ಹಾಕ್ಕೊಳ್ಳೋ ಥರದ್ದು ಬಟ್ಟೆ ಕೊಡಿ ಅಂತ. ಒಂದು ವೇಳೆ ಅದು ಬರೀ ಒಂದು ವರ್ಷಕ್ಕೆ ಮಾತ್ರ ಹಾಕಲು ಸಾಧ್ಯ ಅಂತಾದರೆ ಅದೊಂದು ದುರಂತವೇನೋ ಎಮಬ ಭಾವ. ಮೊತ್ತ ಮೊದಲ ಬಾರಿಗೆ ನಾ ಮೆಜೆಸ್ಟಿಕ್ಕಿನ ಸಮೀಪದೊಂದು ಅಂಗಡಿಯಲ್ಲಿ ಅಳತೆಗೆ ಚೂಡಿದಾರ್ ಕೊಟ್ಟಾಗ ಟೈಲರು ನನ್ನ ಆಪಾದಮಸ್ತಕ ದಿಟ್ಟಿಸಿದ್ದ. ಕಾರಣ ಅದರೊಳಗೆ ಒಂದೂವರೆ ಶಮ ಹಿಡಿಸಬಹುದಿತ್ತು. ನಂತರ ಹೊಸದಾಗಿ ಅಳತೆ ತೆಗೆದು ಹೊಲ್ಕೊಟ್ಟ. ಸರಿಯಾದ Perfect Fitting. ಮೊದಲ ಸಲ ಹಾಕಿಕೊಂಡಿದ್ದು ಆ ಥರದ ಬಟ್ಟೆಯನ್ನು. ಎಲ್ಲರೂ ನನ್ ಕಡೆಗೇ ನೋಡುತ್ತಿದ್ದಾರೇನೋ ಎಂಬಂತೆ, ಇನ್ನೂ ಏನೇನೋ ಮುಜುಗರಗಳು.. ಈಗ ನೆನಪಿಸಿಕೊಂಡೆ ನಗು ತಂತಾನೇ ಬರುತ್ತದೆ. ಕೊಂಡು ತಂದ ಬಟ್ಟೆ ಹಾಕಿ ನೋಡಿ ಚೂರೇ ಚೂರು ದೊಡ್ಡ ಅನಿಸಿದರೂ ಫಟಾಫಟ್ ಮೆಷೀನಿನ ಮುಂದೆ ಕೂರುತ್ತೇನೆ. Perfect Fitting ಆಯಿತಾ ಖಾತ್ರಿಪಡಿಸಿಕೊಂಡೇ ಹಾಕಿಕೊಳ್ಳುತ್ತೇನೆ. ಕಾಲನ ತಾಳಕ್ಕೆ ನಮ್ಮ ಹೆಜ್ಜೆಗಳೂ ಅದೆಷ್ಟು ಬದಲಾದವು ಅಲ್ವಾ ?

      ಪ್ರತಿಕ್ರಿಯೆ
  4. viswa bagalooru

    ಮಾಸದ ನೆನಪುಗಳು .ಬರಹ ಬಹಳ ಚೆನ್ನಾಗಿದೆ

    ಪ್ರತಿಕ್ರಿಯೆ
  5. Anonymous

    ಭಾರತಿಯವರೆ ಈಗಿನ ಜನರೇಷನಗೆ ತುಂಬಾ ಉಪಯುಕ್ತವಾದ ಲೇಖನವನ್ನು ನೀಡಿದ್ದೀರ. ನಿಜವಾಗಿಯೂ ಈಗಿನ ಸಂಬಂಧಗಳು ಯುಸ್ ಆಂಡ್ ಥ್ರೋ ಆಗಿಬಿಟ್ಟಿದೆ.ಜಾಳಾದ ಸಂಬಂಧಗಳಿಗೆ ತೇಪೆ ಹಚ್ಚುವ ವ್ಯವಧಾನ ಯಾರಲ್ಲೂ ಇಲ್ಲ ಇಂತಹ ಸಂದರ್ಭದಲ್ಲಿ ನಿಮ್ಮ ಬರವಣಿಗೆ ಸೂಕ್ತವಾದುದು.ನನ್ನ ಪ್ರಕಾರ ಹಿರಿಯರು ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡದಿರಲಿ ಅಂತ ಕೊಟ್ಟ ಸವಲತ್ತೆ, ಅಂದರೆ ಮಕ್ಕಳಿಗೆ ಅದರ ಅವಶ್ಯಕತೆ ಗೊತ್ತಾಗುವ ಮೊದಲೇ ಎಲ್ಲವನ್ನು ಪೂರೈಸಿ ಬಿಡುತ್ತೇವಲ್ಲ ಅದೇ ಈ ಎಲ್ಲ ಅನಾಹುತಕ್ಕೆ ಕಾರಣ ಎಂಬುದು ನನ್ನ ಅನಿಸಿಕೆ.

    ಪ್ರತಿಕ್ರಿಯೆ
  6. Pratima Naik

    ಭಾರತಿಯವರೆ ಈಗಿನ ಜನರೇಷನಗೆ ತುಂಬಾ ಉಪಯುಕ್ತವಾದ ಲೇಖನವನ್ನು ನೀಡಿದ್ದೀರ. ನಿಜವಾಗಿಯೂ ಈಗಿನ ಸಂಬಂಧಗಳು ಯುಸ್ ಆಂಡ್ ಥ್ರೋ ಆಗಿಬಿಟ್ಟಿದೆ.ಜಾಳಾದ ಸಂಬಂಧಗಳಿಗೆ ತೇಪೆ ಹಚ್ಚುವ ವ್ಯವಧಾನ ಯಾರಲ್ಲೂ ಇಲ್ಲ ಇಂತಹ ಸಂದರ್ಭದಲ್ಲಿ ನಿಮ್ಮ ಬರವಣಿಗೆ ಸೂಕ್ತವಾದುದು.ನನ್ನ ಪ್ರಕಾರ ಹಿರಿಯರು ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡದಿರಲಿ ಅಂತ ಕೊಟ್ಟ ಸವಲತ್ತೆ, ಅಂದರೆ ಮಕ್ಕಳಿಗೆ ಅದರ ಅವಶ್ಯಕತೆ ಗೊತ್ತಾಗುವ ಮೊದಲೇ ಎಲ್ಲವನ್ನು ಪೂರೈಸಿ ಬಿಡುತ್ತೇವಲ್ಲ ಅದೇ ಈ ಎಲ್ಲ ಅನಾಹುತಕ್ಕೆ ಕಾರಣ ಎಂಬುದು ನನ್ನ ಅನಿಸಿಕೆ.

    ಪ್ರತಿಕ್ರಿಯೆ
  7. Tejaswini Hegde

    ನಿಮ್ಮ ಈ ಲೇಖನ ತುಂಬಾ ಇಷ್ಟವಾಯಿತು. ತುಂಬಾ ಅಂತರಾಳದಿಂದ ಹೊರ ಹೊಮ್ಮಿದ ಭಾವನೆಗಳಿವು ಎಂದೆನಿಸಿತು. ನನಗೂ ಕೊನೆಯ ಪ್ಯಾರ ತುಂಬಾ ತುಂಬಾ ಇಷ್ಟವಾಯಿತು. ಈ ದಿನ ಸಂಬಂಧಗಳೆಷ್ಟು ಸಡಿಲವಾಗಿವೆಯೋ ಅಷ್ಟೇ ಸ್ನೇಹವೂ ನಾಜೂಕಾಗಿ ಹೋಗಿದೆ. ಅದರಲ್ಲೂ ಈ ಸಾಮಾಜಿಕ ಜಾಲದ ಒಂದು ಕ್ಲಿಕ್‌ನಿಂದಾಗುವ ಫ್ರೆಂಡ್ ಹಾಗೂ ಮತ್ತೊಂದೇ ಕ್ಲಿಕ್‌ಗೆ ಆಗುವ ಅನ್‌ಫ್ರೆಂಡ್ ಇದೆಯಲ್ಲಾ.. ಇದು ಮಾತ್ರ ಸೂಕ್ಷ್ಮ ಸಂವೇದನೆಯ ಜೀವಿಗಳಿಗೆ ಅರಗಿಸಿಕೊಳ್ಳಲಾಗದಂಥದ್ದೆ! ಕಸಿ ಮಾಡಿದ, ರಂಗು ರಂಗಿನ ಮಾವಿನ ಹಣ್ಣಿನಿಗಿಂತ, ತುಸು ಒಗರಾದರೂ ಸರಿಯೇ ಮನೆಯಲ್ಲೇ ನೆಟ್ಟದ್ದೋ ಇಲ್ಲಾ ಊರಿನ ಗೊಬ್ಬರದಲ್ಲಿ ಬೆಳೆದ ಹಣ್ಣೊ ಎಷ್ಟೋ ಪಾಲು ಮೇಲು!! 🙂

    ಪ್ರತಿಕ್ರಿಯೆ
  8. sarala

    nijakkau naanu maadutidda harkat galanne baredidderi Bharathi. sambhandagalige hidida dhoolannu jaadisi odisabeku anisuttide nanage.

    ಪ್ರತಿಕ್ರಿಯೆ
  9. bharathi

    ಬರೀ ಈಗಿನ ಜನರೇಷನ್ ಅಂತಲ್ಲ …. ಈ ಕಾಲದಲ್ಲಿ ಬದುಕಿರುವ ನಮ್ಮೆಲ್ಲರ ಕಥೆಯೂ ಇದೇ ಆಗಿಹೋಗಿದೆ … ಅದು ಹೆಚ್ಚು ಟೆನ್ಷನ್ ತರಿಸತ್ತೆ …

    ಪ್ರತಿಕ್ರಿಯೆ
  10. Raghunandan K

    ಹಳೆಯ ನೆನಪುಗಳ ಸಂತೆಯಲ್ಲಿ ನಡೆದು ಬಂದೆ,
    ಆ ಕಾಲದಲ್ಲಿ ಬಂದ ಎರಡು ರೂಪಾಯಿಯ ಪೆನ್ನನ್ನ ಈಗಲೂ ಬಳಸುತ್ತೇವೆ, ಮುರಿದ ನಿಬ್ಬಿನ ಇಂಕು ಪೆನ್ನು ನಟರಾಜ ಕಂಪಾಸ್ ಬಾಕ್ಸಿನಲ್ಲಿ ಭದ್ರವಾಗಿದೆ… ಹೀಗೇ ಎಷ್ಟೆಷ್ಟೊ ಸಂಬಂಧಗಳು…
    ಇಷ್ಟವಾಯಿತು ಬರಹ.

    ಪ್ರತಿಕ್ರಿಯೆ
  11. Swarna

    ತೇಪೆ ಹಾಕಿ ಕೌದಿ ಮಾಡೋ ಕಾಲ ಹೋಯ್ತು ಆದ್ರೆ ಕೌದಿ ಕೊಡೋ ಸುಖ ಬೇರಾವುದೂ ಕೊಡಲ್ಲ ಅನ್ನೋದನ್ನಮರೆತ ನಾವು ಅದನ್ನ ಗಮನಿಸಲೇ ಇಲ್ಲ. ಚಂದದ ಬರಹ

    ಪ್ರತಿಕ್ರಿಯೆ
  12. samyuktha

    ಹಳೆ ನೆನಪುಗಳು ಮರುಕಳಿಸಿದವು. ಒಳ್ಳೆಯ ಬರಹ 🙂

    ಪ್ರತಿಕ್ರಿಯೆ
  13. nandini

    Really nice article madam… It reflects present situation among the relationship….

    ಪ್ರತಿಕ್ರಿಯೆ
  14. Geetha

    ನಮಸ್ಕಾರ ಭಾರತೀ ಮೇಡಂ
    ಮೊದಲ ಬಾರಿಗೆ ನಿಮ್ಮ ಲೇಖನ ಓದಿದೆ. ಬಹಳ ಚೆನ್ನಾಗಿದೆ. ನನಗೆ ನಮ್ಮಮ್ಮ ತೆಗೆಸಿದ ಮೊಗ್ಗಿನ ಜಡೆಯ photo ನೆನಪಾಯ್ತು. ಅದರಲ್ಲಿ ನಾನು ಹವಾಯಿ ಚಪ್ಪಲಿ ತೊಟ್ಟು ನಿಂತಿದ್ದೆ! ಫೋಟೋ ಬಂದ ಮೇಲೆ ಅಮ್ಮ ಚಪ್ಪಲಿ ಬಿಟ್ಟು ಫೋಟೋ ತೆಗೆಸಬೇಕಿತ್ತು ಅಂತ ನಕ್ಕಿದ್ದರು 🙂 ಸವಿನೆನಪು ಮರಳಿಸಿದ್ದಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  15. sunil rao

    Bahala ishta aaytu.
    Pakkadalli bidda huli hannu..kalitamele…wine maadbahudu. Olle kick iratte 🙂

    ಪ್ರತಿಕ್ರಿಯೆ
  16. V Sagar

    Yeshhtondu satya!!! aa baalyada prati kshanagalu madhura. Pratiyobbara jeewanadalli haaduhoda aparoopada kshanagalannu nimma baravanigeya mukhantara taaja golisiddiri.

    ಪ್ರತಿಕ್ರಿಯೆ
  17. Dr.D.T.Krishnamurthy.

    ನಮ್ಮ ಬಾಲ್ಯದ ದಿನಗಳಿಗೆ ಒಂದು “ಜಾಲಿ ರೈಡ್”ಹೋಗಿ ಬಂದ ಹಾಗಾಯಿತು 🙂

    ಪ್ರತಿಕ್ರಿಯೆ
  18. ಶಮ, ನಂದಿಬೆಟ್ಟ

    ಅದೆಂಥ ಚೆಂದ ಬರೆದಿದ್ದೀಯವ್ವಾ … ಹೊಲಿಗೆ ಕಿತ್ತು ಮಡಿಕೆ ಬಿಚ್ಚೀ ಬಿಚ್ಚೀ ಲಂಗವನ್ನು ಉದ್ದ ಮಾಡುತ್ತಿದ್ದ ಹಾಗೇ ಸಾವಿರ ನೆನಪುಗಳು.. ಸಾವಿರ ಹೊಲಿಗೆಗಳಂತೆ ಪದರ ಬಿಚ್ಚಿಕೊಂಡವು. Thanks ಕಣೇ ಸುಂದ್ರೀ…
    ಅಂದ ಹಾಗೆ ನಾನು ಒಂದನೇ ಕ್ಲಾಸಲ್ಲಿದ್ದಾಗ ಅಜ್ಜಿ ತಂದು ಕೊಟ್ಟ ಸ್ವಟರೊಂದು ಇನ್ನೂ ಹಾಗೇ ಇದೆ. ಸ್ವಲ್ಪ ದೊಡ್ಡದೇ ಇರಲಿ ಒಂದಷ್ಟು ವರ್ಷ ಹಾಕಬಹುದು ಅಂತ ತಂದದ್ದಿರಬೇಕು. ಎಷ್ಟು ದೊಡ್ಡ ಅಂದರೆ ಈಗಲೂ ಹಾಕಲು ಬರುತ್ತದೆ ನೋಡು 🙂

    ಪ್ರತಿಕ್ರಿಯೆ
  19. umavallish

    Bharathi chennagide ninna hogalade irukke nanagagallamma Bharathiya beesanige naaa antha kavana rachisa bekashtte.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: