ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ’ಬಹುಶಃ ನಾನು ಆ ಕಥೆಯನ್ನು ಪೂರ್ತಿ ಕೇಳಿರುತ್ತಿದ್ದೆನೇನೋ..’

ನಾವು ಆ ಊರಿಗೆ ಕಾಲಿಟ್ಟ ದಿನ ಅಪ್ಪ ನನ್ನನ್ನು ಕರೆದುಕೊಂಡು ಹೋಗಿ ಸರಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯ ಒಳಗೆ ಬಿಟ್ಟು ಹೊರಟುಹೋದರು. 5ನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನನ್ನು ಯಾರೋ ಕರೆದುಕೊಂಡು ಹೋಗಿ ನಮ್ಮ ಕ್ಲಾಸ್ ರೂಮಿನೊಳಗೆ ಬಿಟ್ಟರು. ಆ ಸಣ್ಣ ರೂಮಿನಲ್ಲಿ ಹಿಂದಿನ ಸಾಲಲ್ಲಿ ಎರಡು ಬೆಂಚುಗಳಿದ್ದವು ಮತ್ತು ಅದರ ಮುಂದಿನ ಸಾಲಿನವೆಲ್ಲಾ ಮರದ ಮಣೆಗಳು. ಮೊದಲಲ್ಲಿ ಬಂದವರಿಗೆ ಬೆಂಚಿನ ಮೇಲೆ ಕೂತುಕೊಳ್ಳುವ ಸೌಭಾಗ್ಯ. ನಂತರದವರೆಲ್ಲ ಮಣೆಯ ಮೇಲೆ ಕೂಡಬೇಕಿತ್ತು. ಹಳ್ಳಿಯ ಶಾಲೆಗಳಲ್ಲಿ ಇಂಜಿನಿಯರ್ ಅಂದರೆ ಮುಖ್ಯ ಮಂತ್ರಿ ಇದ್ದಂತೆ. ಹಾಗಾಗಿ ಟೀಚರ್ ನನಗೆ ತುಂಬ ಸ್ಕೋಪ್ ಕೊಟ್ಟು ಕ್ಲಾಸಿಗೆ ಪರಿಚಯಿಸಿದರು. ಪಕ್ಕದಲ್ಲಿ ಕೂತಿದ್ದ ಮುಖದ ಅರ್ಧ ಭಾಗ ಕರಿಯ ಮಚ್ಚೆ ಆವರಿಸಿದ್ದ ಪುಟ್ಟ ಹುಡುಗಿಯೊಬ್ಬಳು ನನ್ನನ್ನು ನೋಡಿ ನಕ್ಕು ನನ್ನ ಹೆಸರು ಕಾಂತಿ ಅಂತ ಪರಿಚಯಿಸಿಕೊಂಡಳು. ಅವಳ ಗುಂಪಿನ ಪೂರ್ಣಿಮಾ, ನಳಿನಿ, ಚಂದ್ರಿಕಾ, ಲತಾ ಎಲ್ಲರೂ ನನ್ನನ್ನು ಅವರ ಗುಂಪಿನಲ್ಲಿ ಒಬ್ಬಳಾಗಿಸಿಕೊಂಡರು. ಅಲ್ಲಿಂದ ಮುಂದಿನ ಮೂರು ವರ್ಷಗಳ ಕಥೆಯಿದು …
ಕಾಂತಿ ಜಿಂಕೆಯಂತೆ ಚುರುಕಾಗಿದ್ದಳು. ಐದು ಕಾಲಿನ ಎರಡು ಬಿಗಿ ಜಡೆ ಹಾಕಿರುತ್ತಿದ್ದ ಅವಳು ನನಗೆ ಯಾಕೋ ತುಂಬ ಇಷ್ಟವಾಗುತ್ತಿದ್ದಳು. ಅವಳ ಕಣ್ಣುಗಳು ನಗುತ್ತಿರುವಂತಿದ್ದವು. ಓದಿನಲ್ಲೂ ಚುರುಕು. ಅವಳ ತಂದೆ ನಮ್ಮೂರಿನ ಹೈಸ್ಕೂಲಿಗೆ ಹೆಡ್ ಮಾಸ್ಟರ್ ಆಗಿದ್ದರಿಂದ ಅವಳಿಗೆ ಒಂಥರಾ star attraction ಇತ್ತು ನಮ್ಮ ಶಾಲೆಯಲ್ಲಿ. ಅವಳ ಮನೆಯಲ್ಲಿ ಅವಳ ಜೊತೆ ಹುಟ್ಟಿದ 5 ಜನರ ಜೊತೆಗಿನ ಆ ಕಚ್ಚಾಟ, ತರಲೆಯೆಲ್ಲ ನನಗೆ ತುಂಬ ಇಷ್ಟವಾಗುತ್ತಿತ್ತು. ಪೂರ್ಣಿಮಾ ಅಪ್ಪ ಆ ಊರಿನಲ್ಲಿ ಸಾಕಷ್ಟು ಶ್ರೀಮಂತರಾಗಿದ್ದರು. ಅವಳ ಮನೆ ಒಂಥರಾ ಛತ್ರದ ಹಾಗಿರುತ್ತಿತ್ತು. ಸದಾ ಕಾಲ ಯಾರು ಯಾರೋ ಬರುತ್ತ, ಹೋಗುತ್ತ ಇರುತ್ತಿದ್ದರು. ಪೂರ್ಣಿಮಾಳ ಮನೆ ಅಪ್ಪಟ ಲಿಂಗಾಯತರ ಮನೆ. ಯಾವ ಯಾವುದೋ ಸ್ವಾಮಿಗಳನ್ನು ಮನೆಗೆ ಕರೆಸಿ ಪಾದಪೂಜೆ ಮಾಡುತ್ತಿದ್ದರು ಅವಳ ತಂದೆ. ಅವಳು ಶಾಲೆಗೆ ಬರುವಾಗಲೂ ಹಣೆಯ ಮೇಲೆ ವಿಭೂತಿಯ ಮೂರು ಅಡ್ಡ ಪಟ್ಟಿ ಎಳೆದುಕೊಂಡೇ ಬರುತ್ತಿದ್ದಳು. ಪೂರ್ಣಿಮಾಳ ಮೆಚ್ಚಿನ ಕೆಲಸವೆಂದರೆ ಟೆಂಟಿನಲ್ಲಿ ನೋಡಿದ ಮೂರು ಘಂಟೆಯ ಸಿನೆಮಾಗಳನ್ನು ಮೂರು ಘಂಟೆಗಳ ಕಾಲ ನಮಗೆ ಹೇಳುತ್ತಿದ್ದುದು! ಮೊದಲಿಗೆ ಸ್ಕ್ರೀನ್ ತೆಗೆಯುವಾಗಿನಿಂದ ಶುರು ಮಾಡಿ, ಟೈಟಲ್ ಕಾರ್ಡ್ಸ್, ಇಡೀ ಕಥೆಯ ಪಾತ್ರಧಾರಿಗಳು, ಕ್ಲೈಮ್ಯಾಕ್ಸ್, ಕೊನೆಗೆ ತೆರೆ ಎಳೆಯುವುದನ್ನು ಕೂಡಾ ಹೇಳುತ್ತಿದ್ದಳು! ತುಂಬ ಬುದ್ದಿವಂತೆಯಾಗಿದ್ದ ನಳಿನಿಯ ಮನೆಯಲ್ಲಿ ಯಾಕೋ ಯಾವಾಗಲೂ ತುಂಬ ಬಿಗಿ ವಾತಾವರಣ. ಸದಾಕಾಲ ಓದಿನಲ್ಲೇ ಮುಳುಗಿರಬೇಕೆಂದು ಹೇಳುತ್ತಿದ್ದರು ಅವಳ ಅಪ್ಪ-ಅಮ್ಮ. ಇನ್ನು ಲತಾ ಒಂದು ಗುಬ್ಬಚ್ಚಿಯ ಹಾಗಿದ್ದಳು. ತುಂಬ ಕುಳ್ಳಗೆ, ಸಣ್ಣಗೆ, ಬೆಳ್ಳಗಿದ್ದಳು. ಬಲಗೈಗೆ ಒಂದು ವಾಚು ಕಟ್ಟುತ್ತಿದ್ದಳು. ಇಡೀ ಸ್ಕೂಲಿನಲ್ಲಿ ವಾಚ್ ಕಟ್ಟುತ್ತಿದ್ದವರು ನಾನು ಮತ್ತು ಲತಾ ಇಬ್ಬರೇ. ಇನ್ನು ಚಂದ್ರಿಕಾ ನಮ್ಮೂರಿನ ಜೈನರ ಬೀದಿಯಲ್ಲಿದ್ದಳು. ಅವಳ ತಂದೆ ಏನೋ ಅಂಗಡಿ ಇಟ್ಟಿದ್ದರು. ಸಂಜೆ ದೀಪ ಹೊತ್ತಿಸುವ ಮುಂಚೆ ಊಟ ಮುಗಿಸುವಷ್ಟು ಧರ್ಮದ ಅನುಯಾಯಿಗಳು. ನೋಡಲು ಮುದ್ದಾಗಿದ್ದಳು ಚಂದ್ರಿಕಾ. ಲತಾ ಕೂಡಾ ಜೈನರವಳೇ. ಹಾಗಾಗಿ ಅವಳಿಗೂ ಮತ್ತು ಚಂದ್ರಿಕಾ ಮನೆಯವರಿಗೂ ಜಾಸ್ತಿ ಒಡನಾಟ. ಚಂದ್ರಿಕಾ ಅಮ್ಮ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ನಟಿಸಿದ್ದ ಕಲಾವತಿ ಥರ ಇದ್ದರು. ತುಂಬ ಸುಸಂಸ್ಕೃತ ಮನೆ ಅವಳದ್ದು. ಇದಿಷ್ಟು ಅವರೆಲ್ಲರ ಪರಿಚಯ.
ಒಂದು ದಿನ ಪೂರ್ಣಿಮಾ ಸ್ಕೂಲಿಗೆ ಬರಲೇ ಇಲ್ಲ. ಹಾಗೆಲ್ಲ ಹೇಳದೇ ಸ್ಕೂಲು ತಪ್ಪಿಸುವವಳಾಗಿರಲಿಲ್ಲ ಪೂರ್ಣಿ. ಹಾಗಾಗಿ ಏನಾಯಿತೋ ಅಂತ ಬೆದರಿ ಅವಳ ಮನೆಗೆ ಹೋದೆವು. ಅವಳ ಅಮ್ಮ ನಮ್ಮನ್ನು ಸ್ವಾಗತಿಸಿ ‘ಅಲ್ಲೇ ಒಳ್ಗಡೆ ಮನೆಯಾಗೆ ಕುಂತಿದೆ .. ಓಗಿ’ ಅಂದರು. ನಾವು ಏನಾಗಿದೆಯೋ ಅಂತ ಹೋಗಿ ನೋಡಿದರೆ ಅವಳು ನೆಟ್ಟಗೇ ಕೂತಿದ್ದಳು! ನಾವು ಆಶ್ಚರ್ಯದಿಂದ ಮತ್ತೆ ಸ್ಕೂಲಿಗೆ ಯಾಕೇ ಬರಲಿಲ್ಲ ಅಂದರೆ ಪೂರ್ಣಿ ‘ಅಯ್ಯೋ! ಇಂಥಾ ಪಿಳ್ಳೆಗಳ ಜೊತೆ ಎಂಥ ಮಾತು?’ ಅನ್ನುವಂತೆ ಹಿರಿಯ ನಗೆ ಬೀರುತ್ತ ಕೂತಿದ್ದಳು. ನಮ್ಮ ಪ್ರಶ್ನೆಗೆ ಅವಳು ಉತ್ತರ ಕೊಡದೇ ಸುಮ್ಮನೆ ನಕ್ಕಾಗ ನಮಗೆಲ್ಲ ಸ್ವಲ್ಪ ಅವಮಾನವಾಗಿಹೋಯ್ತು. ಅವಳ ಬೆನ್ನು ಹತ್ತಿದ ಬೇತಾಳವಾದೆವು. ಕೊನೆಗೆ ಅವಳು ನಗುತ್ತಾ, ನಾಚುತ್ತ ತಾನು ದೊಡ್ಡವಳಾದೆ ಅಂತ ಹೇಳಿದ್ದಳು. ದೊಡ್ಡವಳಾದಳೇ?! ಒಂದೇ ದಿನದಲ್ಲಿ ಅದು ಹೇಗೆ ಸಾಧ್ಯ!! ನೋಡಿದರೆ ಏನೂ ದೊಡ್ಡವಳಾದ ಹಾಗೆ ಕಾಣಿಸುತ್ತಿಲ್ಲವಲ್ಲ ಅಂತ ನೂರಾರು ಪ್ರಶ್ನೆಗಳು ಮನಸಲ್ಲಿ ಮೂಡುವಷ್ಟರಲ್ಲೇ ಅವಳು ತಾನು ದೊಡ್ಡವಳಾದದ್ದು ಹೇಗೆ ಅಂತ ವಿವರಿಸಿದಳು. ನಾನಂತೂ ಅಸಹ್ಯದಿಂದ ವಾಂತಿ ನುಗ್ಗಿದಂತಾಗಿ ಶಾಕ್ ಹೊಡೆದವಳಂತೆ ಕೂತು ಬಿಟ್ಟಿದ್ದೆ. ಶೀಈಈ! ಇದೆಂಥಾ ಅಸಹ್ಯ ಇದೆಲ್ಲ ಅಂತ ಜೋರಾಗೇ ಹೇಳಿಬಿಟ್ಟೆ ತಡೆಯಲಾರದೇ. ಪೂರ್ಣಿ ನಗುತ್ತಾ ಜಗತ್ತಿನ ಎಲ್ಲ ಹೆಂಗಸರಿಗೂ ಇದು ಮಾಮೂಲೆಂದು ಹೇಳಿದಾಗಲಂತೂ ನಾನು ಥೂ! ಇಲ್ಲಪ್ಪ .. ನಾವು ಬ್ರಾಹ್ಮಣರು. ಅದೆಲ್ಲ ನಮಗೆ ಆಗಲ್ಲ ಅಂದಿದ್ದೆ! ಅವಳು ಇಲ್ವೇ .. ನಿಮ್ಮಮ್ಮ ಕೂಡಾ ಆಗ್ತಾರೆ ಅಂದಾಗ ನಾನು ಅವಳ ಜೊತೆಗೆ ಜಗಳಕ್ಕೇ ಇಳಿದು ಬಿಟ್ಟಿದ್ದೆ. ನೋಡು, ನೀನು ಬೇಕಿದ್ರೆ ನಿನ್ನ ಬಗ್ಗೆ ಏನಾದರೂ ಹೇಳಿಕೋ. ನಮ್ಮಮ್ಮನಿಗೆ ಹೀಗೆಲ್ಲ ಅಸಯ್ಯವಾಗಿ ಆಗಲ್ಲ ಅಂತ ವಾದಿಸಿದ್ದೆ! ಅವಳು ಹೇಳುವಷ್ಟೂ ಹೇಳಿ ನಕ್ಕು ಸುಮ್ಮನಾಗಿದ್ದಳು.

ಅಲ್ಲಿಂದ ಮುಂದೆ ಪೂರ್ಣಿಯ ವರಸೆಯೇ ಬದಲಾಯ್ತು. ನಡಿಗೆಯಲ್ಲಿ ಲಾಸ್ಯ ಬಂದಿತ್ತು. ಸಣ್ಣಗಿನ ನಾಚಿಕೆ ಕೂಡಾ. ಈಗೀಗ ಸಿನೆಮಾ ಕಥೆ ಹೇಳುವಾಗ ಲವ್ ಸೀನ್‌ಗಳು ಬಂದರೆ ಪೂರ್ಣಿ ಮುಂಚಿನಂತೆ ಬಿಡುಬೀಸಾಗಿ ಹೇಳದೇ ಮೆಲುದನಿಯಲ್ಲಿ ತಾನೇ ಆ ಚಿತ್ರದ ನಾಯಕಿಯೇನೋ ಅನ್ನುವ ಹಾಗೆ ನಾಚುತ್ತ, ನಗುತ್ತಾ ಕಥೆ ಹೇಳುವುದಕ್ಕೆ ಶುರು ಮಾಡಿಬಿಟ್ಟಿದ್ದಳು! ಅವತ್ತೊಂದು ದಿನ ಒಲವು ಗೆಲವು ಚಿತ್ರ ನೋಡಿ ಬಂದು ಅವಳು ಕಥೆ ಹೇಳಿದ್ದು ನನಗೆ ಇವತ್ತಿಗೂ ನೆನಪಿದೆ. ಲಕ್ಷ್ಮಿ ಕಾಲೇಜಿನಲ್ಲಿ ರಾಜ್‌ಕುಮಾರ್‌ನ ಚುಡಾಯಿಸುವುದು, ಆಮೇಲೆ ಪ್ರೇಮಿಸುವುದು … ಇದ್ದಕ್ಕಿದ್ದ ಹಾಗೆ ತಾನು ಪ್ರೇಮಿಸಲೇ ಇಲ್ಲ ಅಂತ ಹಿಂದೆಗೆಯುವುದು ಎಲ್ಲವನ್ನೂ ಹೇಳುವಾಗ ಪೂರ್ಣಿ ಸಾಕ್ಷಾತ್ ಲಕ್ಷ್ಮಿಯೇ ಆಗಿಹೋಗಿದ್ದಳು! ಮುಂದಿನ ದಿನಗಳಲ್ಲಿ ಅವಳು ಕಲ್ಪನಾ, ಆರತಿ, ಮಂಜುಳಾ ಎಲ್ಲ ಆಗುತ್ತ ಆಗುತ್ತ ಕಥೆ ಹೇಳುವ ಚಾಳಿಗೆ ಬಿದ್ದಳು. ಹೀಗಿರುವಾಗ ಒಂದು ಸಲ ಚಂದ್ರಿಕಾ ಸ್ಕೂಲಿಗೆ ಚಕ್ಕರ್. ಮರುದಿನ .. ಅದರ ಮರುದಿನವೂ ಪತ್ತೆಯಿಲ್ಲ. ಈಗಾಗಲೇ ತುಂಬ experienced ಮಕ್ಕಳಾದ ನಾವು ಓಓಓಓಓ ಇವಳೂ ದೊಡ್ಡವಳಾದ್ಲು ಅನ್ಸತ್ತೆ ಕಣ್ರೇ ಅಂತ ಮಾತಾಡಿಕೊಂಡೆವು. ನಮ್ಮ ಊಹೆ ಸುಳ್ಳಾಗಿರಲಿಲ್ಲ! ಚಂದ್ರಿಕಾ 15 ದಿನ ಕಳೆದು ಶಾಲೆಗೆ ಬಂದಾಗ ಇನ್ನೂ ಬೆಳ್ಳಗಾಗಿದ್ದಳು. ಮಾತಾಡುವಾಗ ನಾಚುವ, ಕೆನ್ನೆ ಕೆಂಪಗಾಗಿಸಿಕೊಳ್ಳುವ ಅವಳ ರೀತಿಗೆ ನಾವು ಬೆರಗಾಗಿದ್ದೆವು. ನಮ್ಮ ಗುಂಪಿನ ಇಬ್ಬರು ‘ದೊಡ್ಡವರಾದ’ ಮೇಲೆ ಪೂರ್ಣಿ ಹೇಳಿದ್ದೇ ಸತ್ಯವೇನೋ … ಎಲ್ಲ ಹೆಣ್ಣುಗಳೂ ದೊಡ್ಡವರಾಗುವುದು ಅನಿವಾರ್ಯವೇನೋ ಅಂತ ಅನ್ನಿಸಲು ಶುರುವಾಗಿತ್ತು. ಆದರೂ ಮನಸ್ಸು ಅದನ್ನು ಒಪ್ಪಲು ನಿರಾಕರಿಸಿತ್ತು.
ಹೀಗಿರುವಾಗ ಈ ಪೂರ್ಣಿ ಮತ್ತು ಚಂದ್ರಿಕಾ ತುಂಬ ಕ್ಲೋಸ್ ಆಗಿಹೋದರು. ತಾವಿಬ್ಬರೇ ಕೂತು ಅದೇನೋ ಕಿಸಿ ಪಿಸಿ ಅಂತ ಮಾತಾಡಿಕೊಳ್ಳುತ್ತಿದ್ದರು. ನಾವು ಗುಂಪಿನ ಆಚೆ ನಿಲ್ಲುವ ಸ್ಥಿತಿ ಬಂದಿತ್ತು. ಅವರಿಬ್ಬರು ದೊಡ್ಡವರ ಮುಂದೆ ನಾವು ಸಣ್ಣವರಾಗಿ ಯಾಕಿದ್ದೇವೋ ಅನ್ನಿಸಲು ಶುರುವಾಯ್ತು! ಅದೇನು ಮಾತಾಡುತ್ತಿದ್ದಾರೋ ಅಂತ ಅವರಿಬ್ಬರೇ ಇರುವಾಗ ಅಲ್ಲಿಗೆ ಹೋದರೆ ಕೂಡಲೇ ಮಾತು ನಿಲ್ಲಿಸಿಬಿಡುತ್ತಿದ್ದರು. ನಾವು ದೊಡ್ಡವರಾಗುವ ಘಳಿಗೆಗೆ ಕಾಯಲು ಶುರು ಮಾಡಿದೆವು! ಅಲ್ಲಿಂದ ಮುಂದೆ ಒಂದು ವರ್ಷದಲ್ಲಿ ನನ್ನ ಬದುಕಿನಲ್ಲೂ ಆ ದಿನ ಬಂತು. ಸ್ವಲ್ಪ ಮುಜುಗರದಿಂದ, ತುಂಬ ಅಸಹ್ಯದಿಂದ ಅದನ್ನು ಸ್ವಾಗತಿಸಿದೆನಾದರೂ ಇನ್ನು ಪೂರ್ಣಿ ಮತ್ತು ಚಂದ್ರಿಕಾಳ ಪಿಸಿ ಪಿಸಿ, ಕಿಸಿ ಕಿಸಿಯಲ್ಲಿ ನಾನು ಪಾಲುದಾರಳಾಗುತ್ತೇನೆ ಅಂತ ಖುಷಿಯೋ ಖುಷಿ. ಅವರ ಪ್ರಪಂಚಕ್ಕೆ ಕಾಲಿಟ್ಟ ನನಗೆ ಅವರು ಮಾತಾಡುತ್ತಿದ್ದ ವಿಷಯವೆಲ್ಲ ತೀರ ಹೊಸದು. ಸಿನೆಮಾದಲ್ಲಿ ಮಾತ್ರ ಪ್ರೇಮ-ಕಾಮಗಳ ದೃಶ್ಯಗಳನ್ನು ಕಂಡ ನನಗೆ (ಅದೂ ಆ ಕಾಲದಲ್ಲಿ ಗಂಡು-ಹೆಣ್ಣು ಒಬ್ಬರ ಹತ್ತಿರ ಒಬ್ಬರು ಬಂದರೆಂದರೆ ಒಂದು ಗಿಡವೋ, ಮರವೋ, ಹೂವೋ ಅವರಿಬ್ಬರ ಪ್ರೇಮ-ಕಾಮಕ್ಕೆ ಅಡ್ಡ ಪರದೆ ಹಾಕುತ್ತಿದ್ದಂತ ಗುಟ್ಟು ಗುಟ್ಟಾಗಿನ ದೃಶ್ಯಗಳು! ಆ ಪರದೆಯ ಹಿಂದಿನ ಕಥೆಗಳು ನನಗೆ ಅರ್ಥವಾಗುತ್ತಿರಲಿಲ್ಲ ..) ಗಂಡು-ಹೆಣ್ಣಿನ ನಡುವಿನ ಸಂಬಂಧದ ಸ್ವರೂಪವೇ ಗೊತ್ತಾಗುತ್ತಿರಲಿಲ್ಲ.

ನಮ್ಮ ಮೇಷ್ಟರೊಬ್ಬರು ಹೈಸ್ಕೂಲಿನ ಹುಡುಗಿಯೊಬ್ಬಳನ್ನು ಕಪಿಲಾನದಿಯ ದಾರಿಯಲ್ಲಿ ಕದ್ದು ಭೇಟಿಯಾಗುವರೆಂಬ ರೋಚಕ ವಿಷಯ ಅವತ್ತೊಂದು ದಿನ ಪೂರ್ಣಿ ಮತ್ತು ಚಂದ್ರಿಕಾ ಹೇಳಿದಾಗ ನಾನು ದಂಗು ಬಡೆದಿದ್ದೆ. ಆ ಹುಡುಗಿ ನನ್ನಕ್ಕನ ಫ಼್ರೆಂಡ್ ಆಗಿದ್ದಳು. ಹಣೆಯ ಎರಡೂ ಕಡೆ ಜಡೆಗಿಂತ ಜಾಸ್ತಿ ಕೂದಲನ್ನು ಮುಂಗುರುಳಿನ ರೂಪದಲ್ಲಿ ಬಿಟ್ಟಿರುತ್ತಿದ್ದಳು. ನಮ್ಮ ದೇಹ ರಚನೆಗಿಂತ ಅವಳದ್ದು ತುಂಬ ಬೇರೆ ಇತ್ತು! ಆಗಲೇ ಅವಳು ಬೆಳೆದ ಹೆಂಗಸಿನ ಹಾಗೆ ಉಬ್ಬು-ತಗ್ಗುಗಳನ್ನು ಹೊಂದಿದ್ದಳು ಮತ್ತು ಅದನ್ನು ಅಮೂಲ್ಯ ಆಸ್ತಿಯೇನೋ ಅನ್ನುವ ಹಾಗೆ ಪ್ರದರ್ಶಿಸಿಕೊಂಡು ನಡೆಯುತ್ತಿದ್ದಳು! ಅಂಥ ಹುಡುಗಿಯೂ, ನಮ್ಮ ಮೇಷ್ಟ್ರೂ ಒಟ್ಟಿಗೆ ಇರುವುದನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ ಸೋತ ನಾನು ‘ಹೋಗ್ರೇ ಇದೆಲ್ಲ ಸುಳ್ಳು ಅನ್ಸತ್ತೆ. ನಾನು ಅಕ್ಕನ್ನ ಈ ವಿಷಯ ಕೇಳ್ತೀನಿ ’ ಅಂದಾಗ ಅವರಿಬ್ಬರೂ ಹೌಹಾರಿದ್ದರು. ಅದು ಗುಟ್ಟಿನ ವಿಷಯ ಅಂತಲೂ ಗೊತ್ತಿಲ್ಲದ ನನ್ನ ಹತ್ತಿರ ಅದನ್ನು ಯಾಕಾದರೂ ಹೇಳಿದೆವೋ ಅಂತ ಕೈ ಕೈ ಹಿಸುಕಿಕೊಂಡರು. ಕೊನೆಗೆ ಯಾರ ಹತ್ತಿರವೂ ಬಾಯಿ ಬಿಡುವುದಿಲ್ಲ ಅಂತ ಆಣೆ ಕೂಡ ಹಾಕಿಸಿಕೊಂಡರು. ಅಲ್ಲಿಂದ ಮುಂದೆ ಆಗಾಗ ಆ ವಿಷಯವೆಲ್ಲ ಅಪ್ ಡೇಟ್ ಆಗುತ್ತಿತ್ತು. ಮೇಷ್ಟರು ಅವಳ ದೇಹವನ್ನೆಲ್ಲ ಸ್ಪರ್ಶಿಸುವ ಕಥೆ ಹೇಳುತ್ತಿದ್ದರು. ಆಕೆಯ ವಿಷಯದಿಂದ ಮೇಷ್ಟರಿಗೂ, ಅವರ ಹೆಂಡತಿಗೂ ಜಗಳವಾಗುತ್ತೆ ಅನ್ನುವ ರಹಸ್ಯ ಬಿಡಿಸಿಡುತ್ತಿದ್ದರು. ಇದೆಲ್ಲ ಅವರಿಗೆ ಹೇಗೆ ಗೊತ್ತಾಗುತ್ತದೆ ಅಂತ ನಾನು ಆಶ್ಚರ್ಯ ಪಡುತ್ತಿದ್ದೆ.
ಅಲ್ಲಿಂದ ಮುಂದೆ ನಮ್ಮ ಸಣ್ಣ ಊರಿನಲ್ಲಿನ ಅನೇಕ ಪ್ರೇಮ-ಕಾಮದ ಕಥೆಗಳು ಅವರಿಬ್ಬರ ಮೂಲಕ ಅನಾವರಣವಾಗುತ್ತಾ ಹೋಯ್ತು. ಮದುವೆಯಾಗದ ನಮ್ಮ ಟೀಚರ್ ಒಬ್ಬರು ನಮ್ಮ ಮೇಲೆ ಸದಾ ಸಿಡುಕುತ್ತ ಇರುತ್ತಿದ್ದುದು ಕೂಡಾ ಸಿಗದ ಪ್ರೇಮ-ಕಾಮದ ದೆಸೆಯಿಂದಲೇ ಅಂತ ನಿರ್ಧಾರಕ್ಕೆ ಬರುವಷ್ಟು ಮಾನಸಿಕವಾಗಿ ಬೆಳೆದಿದ್ದರು ಅವರಿಬ್ಬರೂ! ಆಗಿನ್ನೂ ಅವರು ಓದುತ್ತಿದ್ದುದು ಆರನೆಯ ಕ್ಲಾಸಿನಲ್ಲಿ! ನನಗೆ ಅದಕ್ಕೂ, ಆಕೆಯ ಸಿಡುಕಿಗೂ ಏನು ಸಂಬಂಧ ಅಂತ ಅರ್ಥವೇ ಆಗುತ್ತಿರಲಿಲ್ಲ. ನೀನು ದೊಡ್ಡವಳಾಗಿದ್ದು ದಂಡಕ್ಕೆ ಅಂತ ಅವರಿಬ್ಬರೂ ಹಿಡಿ ಶಾಪ ಹಾಕುತ್ತಿದ್ದರು. ನಮ್ಮದೇ ಶಾಲೆಯ ಹೆಡ್ ಮಾಸ್ಟರ್ ಸ್ಪರ್ಶ ಒಂಥರಾ ಹಿಂಸೆಯೆನ್ನಿಸುವ ರೀತಿ ಇತ್ತು. ಅದನ್ನು ಯಾವ ರೀತಿ ಅರ್ಥೈಸಿಕೊಳ್ಳುವುದು ಅಂತ ತಿಳಿಯದೇ ನಾನು ಸುಮ್ಮನಾಗಿಹೋಗಿದ್ದೆ. ಇವರಿಬ್ಬರೂ ಅದಕ್ಕೂ ಅರ್ಥ ಹುಡುಕಿಕೊಟ್ಟರು! ನಮ್ಮೂರಿನ ಶ್ರೀಮಂತರ ಹುಡುಗನೊಬ್ಬ ಒಬ್ಬಳು ಹುಡುಗಿಯ ಹಿಂದೆ ಸೈಕಲ್ಲಿನಲ್ಲಿ ಅಲೆದೇ ಅಲೆಯುತ್ತಿದ್ದನಂತೆ. ನನ್ನ ಎದುರು ಕೂಡಾ ಅವರಿಬ್ಬರೂ ಎಷ್ಟೋ ಸಲ ಹಾದು ಹೋದರೂ ನಾನು ಅದರ ಕಡೆ ಗಮನವನ್ನೇ ಕೊಟ್ಟಿರಲಿಲ್ಲ. ಅವನಿಗೆ ಆ ಹುಡುಗಿಯ ಮೇಲೆ ಲವ್ ಆಗಿದೆಯಂತೆ, ಅದಕ್ಕೇ ಹಾಗೆ ಸುತ್ತುತ್ತಿದ್ದಾನೆ ಅಂತ ಸಾಕ್ಷಾತ್ಕಾರ ಮಾಡಿಸಿದರು ಈ ಹುಡುಗಿಯರಿಬ್ಬರು! ಸಣ್ಣ ವಯಸ್ಸಿಗೇ ಅಷ್ಟೆಲ್ಲ ಹೇಗೆ ಗೊತ್ತಿತ್ತು? ಅನ್ನುವುದೇ ನನಗೆ ಆಶ್ಚರ್ಯ.
ಅಲ್ಲಿಂದ ಮುಂದೆ ನಾನು ಏಳನೆಯ ಕ್ಲಾಸ್ ಆದಮೇಲೆ ಬೆಂಗಳೂರಿಗೆ ಬಂದೆ. ಬೆಂಗಳೂರಿನ ಇಂಗ್ಲೀಷ್ ವಾತಾವರಣದಲ್ಲಿ ನನ್ನಂತ ಕನ್ನಡ ಮೀಡಿಯಮ್ ಹೊಂದಿಕೆ ಆಗಲೇ ಇಲ್ಲ. ನಾನು ನೀರಿನಿಂದ ಹೊರಬಿದ್ದ ಮೀನಿನ ಹಾಗಾಗಿದ್ದೆ. ಕನ್ನಡ ಮೀಡಿಯಮ್‌ನಲ್ಲಿ ಓದುವಾಗ ಸಾಕಷ್ಟು ಬುದ್ದಿವಂತೆ ಅಂತ ಅನ್ನಿಸಿಕೊಂಡಿದ್ದ ನಾನು ಇಲ್ಲಿನ ಇಂಗ್ಲಿಷ್‌ಮಯ ಜಗತ್ತಿನಲ್ಲಿ ಪೆದ್ದು ಹುಡುಗಿಯಾಗಿ ಹೋಗಿದ್ದೆ. ಅವೆಲ್ಲ ನನ್ನ self esteem ಅನ್ನು ತುಂಬ ಕುಗ್ಗಿಸಿಬಿಟ್ಟಿದ್ದವು. ಹಾಗಿರುವಾಗಲೇ ನನಗೆ ನನ್ನ ಹಳೆಯ ಗೆಳತಿಯರನ್ನು ಮೀಟ್ ಮಾಡಬೇಕೆಂಬ ಗೀಳು ಹತ್ತಿದ್ದು. ಅಪ್ಪನಿಗೆ ಕಾಡಿಸಿ, ಪ್ರಾಣ ತಿಂದು ನಮ್ಮೂರಿಗೆ ಹೊರಟೆ. ನಾನು ಬಂದ ಕೂಡಲೇ ಹಳೆಯ ಗೆಳತಿಯರೆಲ್ಲ ನನ್ನನ್ನು ಓಡಿ ಬಂದು ತಬ್ಬುತ್ತಾರೆ ಅಂತ ಕನಸೋ ಕನಸು. ಆದರೆ ಆ ನನ್ನ ಗೆಳತಿಯರ ಗುಂಪು ಒಡೆದು ಚೂರಾಗಿ ಹೋಗಿದೆ ಅನ್ನುವುದು ನನಗೆ ಗೊತ್ತಿರಲೇ ಇಲ್ಲ…
ನಾನು ಸ್ಕೂಲಿನ ಹತ್ತಿರ ಹೋಗಿ ಅವರೆಲ್ಲರನ್ನು ಭೇಟಿ ಆದೆ. ನಳಿನಿ ತಾನು ಹೈಸ್ಕೂಲಿಗೆ ಬಂದಿದ್ದೇ ತಡ ತುಂಬ ಜವಾಬ್ದಾರಿ ಬಂದ ಹಾಗಾಗಿ ಗೆಳತಿಯರ ಗುಂಪಿನಿಂದ ತುಂಬ ದೂರ ಸರಿದು ಬಿಟ್ಟಿದ್ದಳು. ಅವಳು ನನ್ನನ್ನು ಕಂಡು ತುಂಬು ಗಾಂಭೀರ್ಯದಿಂದ ಹೇಗಿದ್ದೀ ಅಂದಳು ಅಷ್ಟೇ. ಕಾಂತಿ ಮಾತ್ರ ಅದೇ ತುಂಟಿ ಕಾಂತಿಯಾಗಿದ್ದಳು. ಲತಾ ಓದಲು ಅಕ್ಕನ ಊರಿಗೆ ಹೋಗಿಬಿಟ್ಟಿದ್ದಳು. ಚಂದ್ರಿಕಾ ಸ್ಕೂಲಿಗೇ ಬಂದಿರಲಿಲ್ಲ. ಯಾಕೆ ಅಂತ ಕೇಳಿದ ಕೂಡಲೇ ಪೂರ್ಣಿ ನನ್ನನ್ನು ಒಂದು ಮೂಲೆಗೆ ಕರೆದುಕೊಂಡು ಹೋಗಿ ಚಂದ್ರಿಕಾ ನಡತೆಗೆಟ್ಟವಳು ಕಣೇ ಅಂದಳು. ಹಾಗಂದರೆ ಏನೇ ಅನ್ನುವ ನನ್ನ ಪ್ರಶ್ನೆ ಕೇಳಿ ಅವಳು ನನ್ನನ್ನು ಮರುಕದಿಂದ ನೋಡಿದಳು. ಥೂ! ಬೆಂಗಳೂರಿಗೆ ಹೋದರೂ ಇನ್ನೂ ಬುದ್ದಿ ಬೆಳೀಲಿಲ್ಲ ನಿನಗೆ. ಏನು ಗೊತ್ತಾ … ಅವಳ ಮನೆಗೆ ಒಬ್ಬ ಬರುತ್ತಿದ್ದ. ಅವರ ದೂರದ ನೆಂಟರಂತೆ. ಅವನನ್ನು ಅಣ್ಣ ಅಂತ ಕರೆಯುತ್ತಿದ್ದಳು. ಅವನು ದೊಡ್ಡವನು ಕಣೇ. ಮದುವೆಯೂ ಆಗಿದೆ. ಆಗಾಗ ಇವಳನ್ನ ಸ್ಕೂಲಿನ ಹತ್ತಿರ ಬಿಡೋದಕ್ಕೆ ಬರ್ತಿದ್ದ. ಆಮೇಲೆ ನೋಡಿದರೆ ಅವರಿಬ್ಬರೂ ಲವ್ ಮಾಡ್ತಿದ್ದರಂತೆ ಕಣೇ! ಅವಳ ಅಪ್ಪ ಒಂದಿನ ಅವರಿಬ್ಬರೂ ಬೈಕಿನಲ್ಲಿ ಬರುವಾಗ ನೋಡಿಬಿಟ್ಟು, ಆಮೇಲೆ ತುಂಬ ಗಲಾಟೆಯಾಗಿ ಅವಳನ್ನು ಸ್ಕೂಲಿಗೆ ಹೋಗಬೇಡ ಅಂದುಬಿಟ್ರಂತೆ. ಆವತ್ತಿನಿಂದ ಅವಳು ಸ್ಕೂಲಿಗೇ ಬಂದಿಲ್ಲ. ನಮ್ಮನೇಲಿ ಇಂಥವಳ ಜೊತೆ ಫ಼್ರೆಂಡ್ ಆಗಿದ್ದಕ್ಕೆ ಎಲ್ಲರೂ ಬಾಯಿಗೆ ಬಂದ ಹಾಗೆ ಬಯ್ತಿದ್ದಾರೆ …’ ಅಲ್ಲಿಂದ ಮುಂದೆ ಮನಸ್ಸು blank ಆಗಿಹೋಯಿತು. ಚಂದ್ರಿಕಾ ಹೀಗೆ …? ಹೇಗೆ…? ಉಹ್ಞೂ, ಸಾಧ್ಯವೇ ಇಲ್ಲ … ಅಯ್ಯೋ ಹೇಗೆ ನಂಬಲಿ … ಒಂಥರಾ ಗಲಿಬಿಲಿಯಲ್ಲೇ ಚಂದ್ರಿಕಾ ಮನೆಗೆ ಹೋದೆ.

ಅವಳ ಅಮ್ಮ ಬಾಗಿಲು ತೆರೆದರು. ನನ್ನನ್ನು ಕಂಡು ಮುಖ ಸಿಂಡರಿಸುತ್ತಾ ಬಾ ಒಳಗೆ ಅಂತಲೂ ಕರೆಯದೇ ಒಳಗೆ ಸರಿದು ಹೋದರು. ಮೆಟ್ಟಿಲ ಪಕ್ಕದಲ್ಲಿದ್ದ ಜಾಗದಲ್ಲಿ ಚಂದ್ರಿಕಾ ಕೂತಿದ್ದಳು … ತಲೆ ಕೂಡಾ ಬಾಚದೇ, ಸುಕ್ಕು ಸುಕ್ಕಾಗಿದ್ದ ಬಟ್ಟೆ ಧರಿಸಿ. ನನ್ನನ್ನು ನೋಡಿ ಕೈ ಬಿಗಿಯಾಗಿ ಹಿಡಿದು ಕೂತಳು. ಸ್ಕೂಲಿನ ಹತ್ತಿರ ಹೋಗಿದ್ಯಾ ಅಂದಳು. ಅವಳ ಮಾತಿನಲ್ಲೇ ಎಲ್ಲ ವಿಷಯ ಗೊತ್ತಾಗಿರಬೇಕಲ್ಲ ಅನ್ನುವ ಒಳಾರ್ಥವಿತ್ತು. ನಾನು ಹ್ಞೂ ಅನ್ನುವಂತೆ ತಲೆಯಾಡಿಸಿದೆ. ಅವಳು ಯಾವ ಪೀಠಿಕೆಯೂ ಇಲ್ಲದೇ ನಿಜವಾಗಲೂ ಅವನು ನನ್ನ ಅಣ್ಣನ ಹಾಗೇ ಇದ್ದಾನೆ .. ಇವರು ಯಾರೂ ನನ್ನ ನಂಬ್ತಾನೇ ಇಲ್ಲ ನೋಡು. ಅ ಪೂರ್ಣಿ ನಾನು ನಡತೆಗೆಟ್ಟವಳು ಅಂತ ಎಲ್ಲರ ಜೊತೆ ಹೇಳ್ತಿದ್ದಾಳಂತೆ. ಸಿಟ್ಟು ಬರತ್ತೆ ಕಣೇ ಅಂದಳು. ಮತ್ತೆ ಅವನು ನಿನ್ನ ಸ್ಕೂಲಿಗೆ ಬಿಡ್ತಿದ್ದನಂತೆ? ಅಂದೆ. ಹ್ಞೂ, ಅಣ್ಣ ಸ್ಕೂಲಿಗೆ ಬಿಡಬಾರದಾ ಅಂದಳು. ಥೂ! ಇವಳ ವಾದವೂ ಸರಿಯೇ ಇದೆಯಲ್ಲವಾ ಅನ್ನಿಸಲು ಶುರುವಾಯ್ತು. ಅಲ್ಲಿಂದ ಮುಂದೆ ಅವನು ಅಣ್ಣನೇ ಅಂತ ಪ್ರೂವ್ ಮಾಡಲು ನಾನಾ ನಿದರ್ಶನಗಳನ್ನು ಕೊಡಲು ಶುರು ಮಾಡಿದಳು. ಕೇಳುವಷ್ಟು ಕೇಳಿ ಕೊನೆಗೆ ಮತ್ತೆ ನಿಮ್ಮಪ್ಪ ಸ್ಕೂಲಿಗೆ ಹೋಗಬೇಡ ಅಂತ ಯಾಕೆ ಅಂದರು ಅಂದೆ. ಅಲ್ಲಿಯವರೆಗೆ ಮೆಲುದನಿಯಲ್ಲೇ ಬಲವಾದ ವಾದ ಮಾಡುತ್ತಿದ್ದ ಚಂದ್ರಿಕಾ ಈಗ ನನ್ನ ಕಣ್ಣು ತಪ್ಪಿಸುತ್ತಾ ನನ್ನ ಮೇಲೆ ಯಾರೋ ಇಲ್ಲದ್ದೆಲ್ಲ ಚಾಡಿ ಹೇಳಿದ್ದಕ್ಕೇ ಸ್ಕೂಲು ಬಿಡಿಸಿದ್ದು ಅಂದಳು. ಚಂದ್ರಿಕಾ ಸುಳ್ಳಾಡುತ್ತಿದ್ದಳು ಅನ್ನಿಸಿತು ನನಗೆ. ಅಲ್ಲಿ ಕೂತಿರಲು ಆಗದೇ ಎದ್ದು ಬಿದ್ದು ಓಡಿ ಬಂದೆ .. ಮತ್ತೆ ಎಂದೂ ಆ ಊರಿಗೆ ಕಾಲಿಡಲೇ ಇಲ್ಲ …
ಬದುಕನ್ನು ಕಪ್ಪು-ಬಿಳುಪಿನಲ್ಲಿ ಮಾತ್ರ ನೋಡುತ್ತಿದ್ದ ನಾನು ಚಂದ್ರಿಕಾ ಮಾಡಿದ್ದು ತಪ್ಪು ಅಂತ ಅವತ್ತು ತೀರ್ಮಾನಿಸಿ ಬಿಟ್ಟಿದ್ದೆ. ಈಗ ಅನ್ನಿಸುತ್ತದೆ, ಎರಡೂ ಬಣ್ಣ ಕಲೆಸಿದರೆ ಬೂದು ಬಣ್ಣ ಸೃಷ್ಟಿಯಾಗುತ್ತದೆ ಅನ್ನುವ ಸರಳ ಸತ್ಯ ನನಗೆ ಗೊತ್ತಾಗಿದ್ದರೆ ಬಹುಶಃ ಚಂದ್ರಿಕಾ ಪಕ್ಕ ಕೂತು ಅವಳು ಹೇಳುವ ಕಥೆಯನ್ನು ನಾನು ಪೂರ್ತಿ ಕೇಳಿರುತ್ತಿದ್ದೆನೇನೋ ಎಂದು …

‍ಲೇಖಕರು avadhi

16 May, 2013

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. Badarinath Palavalli

    ಚಂದ್ರಿಕಾಳ ದೃಷ್ಟಿ ಕೋನವೇ ಅಪ್ರಬುಧ್ಧ.
    ತುಂಬಾ ಸರಾಗವಾಗಿ ಮನದಾಳಕ್ಕೆ ಇಳಿಯುವ ಕಲೆ ನಿಮಗೆ ಗೊತ್ತಿದೆ.

  2. Manjunath Maravanthe

    ಓದುವಾಗ ಕ್ಷಣಕಾಲ ನಾನೂ ಬಾಲೆಯಾಗಿ ಬಿಟ್ಟಿದ್ದೆ.
    ತುಂಬಾ ಚನ್ನಾಗಿದೆ

  3. h g malagi, dharwad

    ತುಂಬಾ ಚೆನ್ನಾಗಿ ಬರೆದಿದ್ದೀರಿ. ಅಭಿನಂದನೆಗಳು.

  4. ಶಮ, ನಂದಿಬೆಟ್ಟ

    ಇದನ್ನ ೋದಿದ ಮೇಲೆ ಕಟ್ಟ ಕಡೆಯ ಪ್ರಶ್ನೆ ಭಗವಂತಾ ಇಷ್ಟು ಚೆಂದಾಗಿ ಬರೆಯೋದು ಹೇಗಪ್ಪಾ… ವಾರಕ್ಕೊಂದು ಬರಿಯೋರು ದಿನಾ ಬರೆಯೋ ಹಂಗ್ ಮಾಡಪ್ಪಾ.. Love you Bharthi..

  5. samyuktha

    nanna baalyada nenapaytu!

  6. Anuradha.B.Rao

    ಭಾರತೀ .. Love youuuuuuuuuuuuuuuuuuu…:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading