ಕುಂ ವೀ ಕಾಲಂ : 'ತೇಲಲರಿಯರು. ಮುಳಗಲೂ ಅರಿಯರು'

ಭಾಗ – ೧

ನಿನಗೆ ಮಾನಮರ್ಯಾದೆ ಇದೆ ಏನೇ ದರಿದ್ರದೋಳೆ! ಅಲ್ಲೆಲ್ಲಾದ್ರು ಸಾಯೋದುಬಿಟ್ಟು ಮತ್ತೆ ಯಾಕೆ ಬಂದೆಲೇ ಬೋಸೂಡಿ ಹೆತ್ತೋರ ಹೊಟ್ಟೆ ಉರಿಸೋಕ್ಕೆ ಎನ್ನುತ್ತ ಎದ್ದು ನಿಂತ, ಹೊಡೆಯಲೆಂದು ತನ್ನ ಬಲಗೈಯನ್ನು ಎತ್ತಿದ, ಹೆತ್ತ ಕರುಳು ತನ್ನ ಕೈಯನ್ನು ತಡೆಯಿತು. ನಿನ್ನಂಥ ಪಾಪಿಷ್ಟೆಯನ್ನು ಮುಟ್ಟಿ ನನ್ನ ಕೈಯನ್ಯಾಕೆ ಮೈಲಿಗೆ ಮಾಡಿಕೊಳ್ಳಲಿ ಎಂದು ಕೈಯನ್ನು ಉಪಸಂಹರಿಸಿಕೊಂಡ. ಆತ ಕೂತಿದ್ದ ಕಟ್ಟೆಗೆ ಅಭಿಮುಖವಾಗಿದ್ದ ಕಲ್ಲಚಪ್ಪಡಿ ಮೇಲೆ ತನ್ನೆರಡೂ ಮೊಣಕಾಲುಗಳಲ್ಲಿ ಮುಖವಿಟ್ಟು ಕೂತಿದ್ದ ನಿಂಗಜ್ಜ ಸಿಟ್ಟಿನ ಕೈಗೆ ಬುದ್ದಿ ಕೊಡಬ್ಯಾಡ ನಾಗಪ್ಪ, ಸಮಾಧಾನ ಮಾಡ್ಕೊ ಎಂದು ಹೇಳಿದ, ಅಪಾದಮಸ್ತಕ ದಿಟ್ಟಿಸಿದ, ಚಪ್ಪರದ ಗೂಟಕ್ಕೆ ಒರಗಿ ತನ್ನ ಮುಖವನ್ನು ಸೀರೆ ಸೆರಗಿನಲ್ಲಿ ಮರೆಮಾಚಿ ಅದರ ಚುಂಗನ್ನು ಹಲ್ಲುಗಳ ನಡುವೆ ಕಚ್ಚಿ ಅವನತಮುಖಿಯಾಗಿ ನಿಂತಿದ್ದಳು, ಅದೂ ನಾಚಿಕೆಯಿಂದ. ಇಷ್ಟು ದಿವಸ ಎಲ್ಲಿಗೆ ಹೋಗಿದ್ದಿ ಸುಶೀಲಾ? ಎಂದು ಕೇಳಿದ, ಕೇರಿಗೆ ಹಿರಿಯನಾದ ಆತ ಅಷ್ಟು ಜೋರಾಗಿ ಮಾತಾಡಿದ್ದು ಅದೇ ಮೊದಲ ಸಲ. ನಿಂತಲ್ಲಿಂದ ಕಣ್ಣುಗಳನ್ನೊರಳಿಸಿದಳು, ನಾಗಪ್ಪ ತನ್ನನ್ನು ಹೆತ್ತವನೇನೋ ಸರಿ, ಆದರೆ ತಾನು ಆಡಿ ಬೆಳೆದದ್ದು ನಿಂಗಜ್ಜನ ಝೋಪಡಿಯಲ್ಲಿ. ತಾನು ಓಡಿ ಹೋಗುವ ಹಿಂದಿನ ದಿವಸ ಗಟ್ಟಿಮುಟ್ಟಾಗಿಯೇ ಇದ್ದ, ಆದರೆ ಈ ಕೆಲವು ದಿವಸಗಳಲ್ಲಿ ಕಡ್ಡಿಯಷ್ಟು ಸಣಕಲಾಗಿರುವನು, ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರಲೂಬಹುದು, ಯಾಕೆ ಹಿಂಗಾದ್ದೀ ಯಜ್ಜಾ, ಜ್ವರಗಿರ ಏನಾದ್ರು!
ತನ್ನ ತಂದೆಯ ಕಡೆಗೂ ವಾರೆನೋಟ ಬೀರಿದಳು, ಆತನೂ ಮೊದಲಿನ ಹಾಗೆ ಇಲ್ಲ, ಅಸ್ತಮಾ ರೋಗಿ ಬೇರೆ, ಸರ್ಕಾರಿ ದವಾಖಾನೆಗೆ ಹೋಗಿ ಬರುತ್ತಿರುವನೋ ಇಲ್ಲವೋ! ದಿನಂಪ್ರತಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವನೋ ಇಲ್ಲವೋ! ಅವರೀರ್ವರ ಕ್ಷೇಮಲಾಭ ವಿಚಾರಿಸಬೇಕೆನ್ನಿಸಿತು. ಆದರೆ ಅಷ್ಟರಲ್ಲಿ ಯಾರದೋ ಬಿಸಿಯುಸಿರು ತನ್ನನ್ನು ತಾಕಿತು, ಕತ್ತೊರಳಿಸಿ ನೋಡಿದಳು, ತನ್ನ ಮಲತಾಯಿ! ಆ ಕೂಡಲೆ ತನ್ನ ಗತಿಸಿದ ಹೆತ್ತ ತಾಯಿಯನ್ನು ನೆನಪಿಸಿಕೊಂಡಳೋ ಇಲ್ಲವೋ, ತುಂಬಿದ ನೀರೆಲ್ಲಿ ಹೊರಜಾರುವುದೋ! ರೆಪ್ಪೆಗಳನ್ನು ಒಂದು ಕ್ಷಣ ಮುಚ್ಚಿ ತೆರೆದಳು. ರಮೇಶನನ್ನು ಓಡಿಸಿಕೊಂಡು ಹೋಗಿದ್ದು ತಾನೋ! ಅಥವಾ ಅವನೇ ತನ್ನನ್ನು ಓಡಿಸಿಕೊಂಡು ಹೋದನೋ! ತನ್ನ ದೇಹದ ಸೌಂದರ್ಯವನ್ನು ಅವನು ಅನುಭವಿಸಲಿಲ್ಲ, ಆರಾಧಿಸಿದ, ಸ್ಪಂದಿಸಿದ. ಕೂಲಿನಾಲಿ ಮಾಡಿಯಾದರೂ ಸಾಕುವುದಾಗಿ ಗೋಗರೆದ. ಆದರೆ ತನ್ನ ಗಂಡನ ಅಸಹಾಯಕ ಸ್ಥಿತಿ ತನ್ನನ್ನು ಕಾಡಲಾರಂಭಿಸಿತು, ತನ್ನನ್ನಿಲ್ಲಿಗೆ ಪುನಃ ಕರೆತಂದಿತು. ಎಂಥವನಿದ್ದರೂ ಗಂಡ ಗಂಡನೆ! ಮಿಂಡ ಮಿಂಡನೆ!
ಪ್ರತಿಸಲ ತಾಳಿಕಟ್ಟಿದವನಿಗೆ ನಿಷ್ಟಳಾಗಿರಬೇಕೆಂದು ತಾನು ಯೋಚಿಸುವುದುಂಟು, ಪುನಃ ತಪ್ಪು ಮಾಡುತ್ತಿರುವುದೂ ಉಂಟು. ಆದರೆ ಯೌವನ, ಆಸೆ ಆಕಾಂಕ್ಷೆ ತನ್ನ ಮಾತನ್ನು ಕೇಳುತ್ತಿಲ್ಲ, ನಿಟ್ಟುಸಿರುಬಿಟ್ಟಳು. ತಲೆ ತಗ್ಗಿಸಿಯೇ ತನ್ನನ್ನು ವಿಲಕ್ಷಣ ಪ್ರಶ್ನೆಗಳಿಗೆ ಗುರಿಪಡಿಸುತ್ತಿರುವ ಕೇರಿಯ ಹಿರಿಯರ ಕಡೆ ನೋಡಿದಳು. ಅವರ್ಯಾರೂ ಅಮಾಯಕರಲ್ಲ, ಪ್ರತಿಯೊಬ್ಬರಿಗೂ ತನ್ನ ಜಾತಕ ಗೊತ್ತು. ವಾಪಸ್ಸು ಬಂದಿರುವುದು ತನ್ನ ದೊಡ್ಡತನ. ಆದರೆ ಅದ್ಯಾವುದೋ ಇವರಿಗೆ ಅರ್ಥವಾಗುತ್ತಿಲ್ಲ! ಇವರಿಗೆ ಏನು ಹೇಳುವುದು! ಏನನ್ನೂ ಹೇಳಲಾಗದೆ ಮೌನಕ್ಕೆ ಶರಣಾದಳು. ಇನ್ನೇನು ತಾನು..
ಅಸಹಾಯಕತೆಯಿಂದ ಅವುಡುಗಚ್ಚಬೇಕೆನ್ನುವಷ್ಟರಲ್ಲಿ ಮಲತಾಯಿ ತನ್ನ ತಲೆಗೂದಲನ್ನು ಹಿಡಿದು ಎಳೆದಾಡುವುದೆ! ಅಮ್ಮಾ ಎಂದು ನರಳಿದಳು, ನರಳಿಕೆಯ ನಡುವೆ ನೆರೆದವರಲ್ಲಿ ಗೌರಿ ರತ್ನ ಪಂಕಜರನ್ನು ಗುರುತಿಸಿದಳು, ತನ್ನನ್ನು ಯಮಹಿಂಸೆಯಿಂದ ಕಾಪಾಡುವಂತೆ ಕಣ್ಣಿಂದ ಸನ್ನೆ ಮಾಡಿದಳೋ, ಅಥವಾ ಅದನ್ನು ಹಾಗೆಂದು ರತ್ನ ತಿಳಿದುಕೊಂಡಳೋ! ರತ್ನ ನಿಂತಲ್ಲಿಂದಲೇ ಕುಪ್ಪಳಿಸಿ ಮುಂದೆ ಬಂದಳು, ಆಕೆ ಬಗ್ಗೆ ಈಕೆಗೆ ಅದ್ಯಾವ ಪೂರ್ವಾಗ್ರಹಗಳಿದ್ದವೋ! ಬಂದವಳೆ ತನ್ನ ಗೆಳತಿಯ ರೆಟ್ಟೆ ಹಿಡಿದು ಬಿಡಿಸುತ್ತ ಉದ್ದೇಶಪೂರ್ವಕವಾಗಿಯೋ, ಅನುದ್ದೇಶಪೂರ್ವಕವಾಗಿಯೋ ಹೊಟ್ಟೇಲಿ ಹುಟ್ಟಿದ ಮಗಳಾಗಿದ್ರೆ ಹಿಂಗ ಎಳೆದಾಡುತ್ತಿದ್ದೆ ಏನೇ ಅತ್ತೆ! ಎಂದಳು, ತಾನು ಅಂಥ ಮಾತನ್ನು ಹೇಳಬಾರದಿತ್ತೆಂದು ಪಶ್ಚಾತ್ತಾಪಪಡುವಷ್ಟರಲ್ಲಿ ಗಂಗವ್ವ ನೀನೇನು ಘನವಾದಾಕೇನೆ, ಕಾಟನುಮಿಲ್ಲಿನಲ್ಲಿ ನೀನ್ಯಾವ ಮಿಂಡರನ ಮಾಡ್ತೀ ಅಂತ ಊರಿಗೆಲ್ಲ ಗೊತ್ತಲೇ ಚಿನಾಲಿ, ಇವಳೊಬ್ಬಳು ಹಾಗಲಕಾಯಿ, ಅವಳೊಬ್ಬಳು ಬೇವಿನಕಾಯಿ. ಬಂದುಬಿಟ್ಟಳು ನ್ಯಾಯ ಹೇಳೋಕೆ ಎನ್ನುತ್ತ ಬುಸುಗುಟ್ಟಲಾರಂಭಿಸಿದಳು, ಏನನ್ನೋ ನೆನಪಿಸಿಕೊಂಡು ಒಡನೆಯೇ…

ಕಲೆ : ರೂಪಾ ಹಾಸನ್

ಹ್ಹಾಂ! ಹೊಟ್ಟೇಲಿ ಹುಟ್ಟಿದ ಮಗಳಾಗಿದ್ರೆ ಕೊಂದು ಅಗಸೆ ಬಾಗಿಲಿಗೆ ನೇತಾಕ್ತಿದ್ದೆ, ಸೂಗನಂಗ ನಿಂತ್ಕೊಂಡಿದ್ದೆಯಲ್ಲೋ ಗಂಡನೆಂಬ ಬಾಡ್ಕಾವ್, ಆ ಭೋಸೂಡೀನ ಮೆಟ್ಟೀಲಿ ಹೊಡಿಲಿಲ್ಲಾಂದ್ರ ತವರ್ಮನೀಗೆ ಹೊಂಟೋಗ್ತೀನಿ ಎಂದು ತಾಳಿ ಕಟ್ಟಿದವನ ಕಡೆ ದುರುಗುಟ್ಟಿದಳು, ರೆಟ್ಟೆಯಲ್ಲಿ ಸಿಟ್ಟೂ, ಹೊಟ್ಟೆಯಲ್ಲಿ ಹಿಟ್ಟೂ ಎರಡೂ ಇರದಿದ್ದ ನಾಗಪ್ಪ ಹೆಂಡತಿಯ ಮಾತು ಕೇಳಿ ಅಸಹಾಯಕತೆಯಿಂದ ಕುಗ್ಗಿ ಹೋದ. ಆತ ಅದಕ್ಕೆ ಏನು ಪ್ರತಿಕ್ರಿಯೆ ನೀಡಲಿದ್ದನೋ! ಆದರೆ ಅಷ್ಟರಲ್ಲಿ ರತ್ನಿ ಗಂಗವ್ವಳ ಸೀರೆ ಸೆರಗು ಹಿಡಿದು ನಾನ್ಯಾವ ಮಿಂಡರನ್ನ ಮಾಡೀನೆಂಬುದನ್ನು ತೋರಿಸಿಕೊಡು ಮೊದ್ಲು ಎಂದು ಜಗ್ಗಾಡಲಾರಂಭಿಸಿದಳು, ಯುವತಿಯೂ ದೃಢಕಾಯಳೂ ಆಗಿರುವ ತಾನು ಮುದುಕಿಯೂ ದೈಹಿಕವಾಗಿ ದುರ್ಬಲಳೂ ಆಗಿರುವಂಥ ಗಂಗವ್ವಳನ್ನು ಚಿತ್ ಮಾಡುವುದು ಕಷ್ಟದ ಕೆಲಸವೇನಲ್ಲ, ಆದರೆ ಅದಕ್ಕೆ ತನ್ನ ಮನಸ್ಸು ಸಮ್ಮತಿಸುತ್ತಿಲ್ಲ, ಕೇರಿಯ ಹಿರಿಯಳಾದ ಆಕೆಯ ಮರ್ಯಾದೆ ಕಾಪಾಡುವುದು ಯುವತಿಯಾದ ತನ್ನ ಕರ್ತವ್ಯವೆಂದು ಬಗೆದ ರತ್ನಿ ಬೇಕೆಂದೇ ಆಯತಪ್ಪಿ ಕೆಳಕ್ಕೆ ಬಿದ್ದಳಲ್ಲದೆ ಆಕೆಯನ್ನು ಮೇಲೆಳೆದುಕೊಂಡಳು.
ಅಷ್ಟೂ ಸಾಲದೆಂಬಂತೆ ಸತ್ನೆಪ್ಪೋ ಯಾರಾದ್ರು ತನ್ನನ್ನು ಈ ಮುದುಕಿಯಿಂದ ಕಾಪಾಡಿರೆಪ್ಪೋ ಎಂದು ಅಂಗಾತಬಿದ್ದಲ್ಲಿಂದಲೇ ಬಾಯಿಬಾಯಿ ಬಡಿದುಕೊಳ್ಳಲಾರಂಭಿಸಿದಳು. ಆಕೆಯ ಎದೆಯ ಮೇಲೆ ತನ್ನೆರಡೂ ಕಾಲುಗಳನ್ನು ಹಿಗ್ಗಲಿಸಿ ಕೂತಿದ್ದ ಗಂಗವ್ವ ಹುಡುಗಿಯಾದರೂ ಪರವಾಗಿಲ್ಲ, ತಿಳವಳಿಕಸ್ಥಳು, ಅಂತೂ ಸಾರ್ವಜನಿಕವಾಗಿ ತನ್ನ ಮರ್ಯಾದೆಯನ್ನು ಕಾಪಾಡಿದಳಲ್ಲ ಅಷ್ಟೇ ಸಾಕು ಎಂದು ಯೋಚಿಸಿ ತನ್ನ ಪಟ್ಟುಗಳನ್ನು ನಿಧಾನವಾಗಿ ಸಡಿಲಿಸಿದಳು. ಆದರೆ ಅದರಿಂದ ಅಪರಾಧಿ ಸ್ಥಾನದಲ್ಲಿ ನಿಂತಿದ್ದ ಸುಶೀಲಳಿಗೆ ನಿರಾಶೆಯಾಯಿತು. ತನ್ನ ಮಲತಾಯಿಯನ್ನು ಬೆಂಬಲಿಸುವುದೋ! ತನ್ನ ಜೀವದ ಗೆಳತಿಯೂ ಹಾಗೂ ಹಾದರ ಲೋಕಕ್ಕೆ ತನ್ನನ್ನು ವಿದ್ಯಕ್ತವಾಗಿ ಪರಿಚಯಿಸಿದ ಆಕೆಯ ಪರವಹಿಸುವುದೋ! ತನಗೆ ಒಂದೂ ತಿಳಿಯದಾಯಿತು. ಆದರೂ ಸಮಯಪ್ರಜ್ಞೆಗೆಗಾಗಲೀ ಸಾಂದರ್ಭಿಕವಾಗಿ ಅಭಿನಯಿಸುವುದಾಗಲೀ ತನಗೇನೂ ಹೊಸತಲ್ಲ, ಕೂಡಲೆ ಅವರಿಬ್ಬರ ನಡುವೆ ಕೂಡಲೆ ಧಾವಿಸಿದಳಲ್ಲದೆ ನೀವ್ಯಾಕೆ ಹೊಡೆದಾಡ್ತೀರಿ ಕಣ್ರವ್ವಾ, ಬಿಡ್ರವ್ವಾ ಬಿಡ್ರಿ, ನಾನು ಪಾಪ ಮಾಡಿರುವೆನೋ ಇಲ್ಲವೋ ಎನ್ನುವುದು ಆ ಭಗವಂತನಿಗೆ ಗೊತ್ತು ಎಂದು ಧ್ವನಿಯನ್ನು ಸ್ವಲ್ಪ ಎತ್ತರಿಸಿ ನಾಲ್ಕು ಮಂದಿ ದೈವಸ್ಥರಿಗೆ ಕೇಳಿಸುವಂತೆ ಹೇಳುತ್ತ ಅವರಿಬ್ಬರನ್ನು ಅವರಿಬ್ಬರಿಂದ ನಿಧಾನವಾಗಿ ಬೇರ್ಪಡಿಸಿದಳು. ತಾನೆಷ್ಟು ಚಾಣಾಕ್ಷಳೆಂದರೆ ಜಾರಿದ್ದ ಸೆರಗನ್ನು ಹೊದ್ದಿಸುವುದರ ಮೂಲಕ ರತ್ನಳ ತುಂಬಿದ ಎದೆಯ ಸಾಮಾಜಿಕ ಗೌರವವನ್ನು ರಕ್ಷಿಸಿದಳು, ಅಲ್ಲದೆ ತನ್ನೆರಡೂ ಕೈಗಳನ್ನೇ ಬಾಚಣಿಕೆಯನ್ನಾಗಿ ಪರಿವರ್ತಿಸಿ ತನ್ನ ಮಲತಾಯಿಯ ಸಿರಿಮುಡಿಯ ಗೌರವವನ್ನೂ ಕಾಪಾಡಿದಳು.

ಕಲೆ : ರೂಪಾ ಹಾಸನ್

ಇಂಥ ಒಳ್ಳೆಯ ಹುಡುಗಿಗೆ ತಾನು ತಾಯಿಯಾಗಲಿಲ್ಲವಲ್ಲವೆಂಬ ಹಳಹಳಿಕೆ ಕಾಡಿದರೂ ಗಂಗವ್ವ ಅದನ್ನು ತೋರ್ಗೊಡದೆ ಥೂ ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ, ನಾಚಿಕೆ ಹೇಸಿಕೆ ಒಂದೂ ಇಲ್ವಲ್ಲೇ ನಿನಗೆ ಎನ್ನುತ್ತ ಮಲಮಗಳ ರೆಟ್ಟೆಗಳನ್ನು ಅಪ್ಯಾಯತೆಯಿಂದ ಅಮುಕಿದಳು. ಅಷ್ಟಕ್ಕೂ ಸುಮ್ಮನಾಗಲು ಮನಸ್ಸು ಒಪ್ಪದ ಪರಿಣಾಮವಾಗಿ ತನ್ನ ಬತ್ತಿದ ಎದೆಯನ್ನು ತನ್ನೆರಡೂ ಕೈಗಳಿಂದ ಬಡಿದುಕೊಳ್ಳುತ್ತ ಇದನ್ನೆಲ್ಲ ನೋಡ್ತ ಬದುಕಲು ಏನು ಕರ್ಮ ಮಾಡಿರುವೆನೋ ಶಿವನೆ, (ಅಲ್ಲಿಯೇ ಅಸಹಾಯಕತೆಯಿಂದ ಕುಳಿತಿದ್ದ ತನ್ನ ಗಂಡನನ್ನುದ್ದೇಶಿಸಿ) ಹೊಟ್ಟೆಕಟ್ಟಿ ಇದ್ದು ರೊಕ್ಕಾನೆಲ್ಲ ಖರ್ಚು ಮಾಡಿ ನನ್ನನ್ಯಾಕೆ ಆಸ್ಪತ್ರೆ ಸೇರಿಸಿದೆಯೋ, (ಅಲ್ಲಿಯೇ ನಿಂತು ಕುತೂಹಲದಿಂದ ನೋಡುತ್ತಿದ್ದ ನಾಟಿವೈದ್ಯ ಸೋಮಣ್ಣನನ್ನುದ್ದೇಶಿಸಿ) ನನಗ್ಯಾಕೆ ಬಣ್ಣದ ಸೂಜಿ ಮಾಡಿ ಬದುಕಿಸಿದೆಯೋ ಡಾಟ್ರೆ, (ಸುತ್ತೆಲ್ಲ ಜಮಾವಣೆಗೊಂಡಿದ್ದ ನೆರೆಹೊರೆಯವರನ್ನುದ್ದೇಶಿಸಿ) ನನ್ನಂಥ ಮೂಳ ಬದುಕಲೀ ಅಂತ ದೇವರು ದಿಂಡಿರನ್ನೆಲ್ಲ ಬೇಡಿಕೊಂಡಿರ್ಯಾಕೆ ನೀವೆಲ್ಲ, (ನೆಲವನ್ನುದ್ದೇಶಿಸಿ) ನನ್ನನ್ಯಾವಾಗ ನಿನ್ನ ಮಡಲೊಳಗೆ ಸೇರಿಸ್ಕೊಂತಿಯೇ ಭೂಮ್ತಾಯಿ ಎಂದು ತಾನು ದುಃಖವನ್ನು ಅಭಿನಯಿಸಲಾರಂಭಿಸಿದ್ದು ಸಾರ್ವಜನಿಕರ ಅನುಕಂಪವನ್ನು ಸೂರೆಗೊಳ್ಳಲೆಂದೆ!
ಆದರೆ ಬಂಜೆತನ, ದೂರದ ಲೋಕಕ್ಕೆ ಹೋಗಿರುವ ತನ್ನನ್ನು ಹೆತ್ತವರು, ದಿಕ್ಕಾಪಾಲಾಗಿರುವ ಒಡಹುಟ್ಟಿದವರು, ನೋಡಿಕೊಳ್ಳುವವರಿಲ್ಲದೆ ಅನಾಥವಾಗಿರುವ ತಮ್ಮಿಬ್ಬರ ವೃದ್ಯಾಪ್ಯ! ಅದೂ ಅಲ್ಲದೆ ಈ ಸ್ಥಿತಿಯಲ್ಲಿರುವ ತಮ್ಮನ್ನು ನೋಡಿಕೊಂಡಾಳು, ಎರಡು ದಿವಸಕ್ಕೊಂದು ಸಲವಾಗಿ ಒಂದು ತುತ್ತು ಕೂಳು ಕೊಟ್ಟಾಳು, ಒಂದೆರಡಾದರೂ ಕೂಸುಗಳನ್ನು ಹೆತ್ತು ತಮ್ಮ ವಂಶವನ್ನು ಬೆಳೆಸ್ಯಾಳು ಎಂಬ ಮುಂದಾಲೋಚನೆಯಿಂದಲ್ಲವೆ ಸುಶೀಲಾಳನ್ನು ಕೇರಿಯ ಇನ್ನೊಂದು ತುದಿಯಲ್ಲಿರುವ ತನ್ನ ಅಳಿಯ ಚಂದ್ರನಿಗೆ ಕಟ್ಟಿ ಹಾಕಿದ್ದು! ಈ ಎಲ್ಲ ನೆನಪುಗಳು ಒಂದರ ಹಿಂದೊಂದರಂತೆ ದಾಳಿ ಮಾಡಿದ ಪರಿಣಾಮವಾಗಿ ದುಃಖ ಉಮ್ಮಳಿಸಿ ಬಂತು. ಆದರೆ ತಮ್ಮ ಮಗಳು ಹಡೆಯುವುದಾಗಲೀ ಕೂಳು ಕೊಡುವುದರ ಮೂಲಕ ತಮ್ಮನ್ನು ನೋಡಿಕೊಳ್ಳುವುದಾಗಲೀ ಬ್ಯಾಡವೇ ಬೇಡ, ಆದರೆ ಓಡಿಹೋಗುವುದರ ಮೂಲಕ ವೈವಾಹಿಕ ಬಂಧನದ ಬೆನ್ನ ಮೇಲೆ ಬರೆ ಎಳೆಯುವುದೆಂದರೇನು! ಉಮ್ಮಳಿಸಿ ಬಂದ ದುಃಖ ಶಾಬ್ಧಿಕ ಪ್ರಭಾವಳಿ ಮುಡಿಸಲು ಹಾತೊರೆದ ಪರಿಣಾಮವಾಗಿ!
ಸಡನ್ನ ತಿರುಗಿ ದೌಡಾಯಿಸಿ ತನ್ನ ಗಂಡನ ಕಡ್ಡಿಯಂಥ ರೆಟ್ಟೆ ಹಿಡಿದ ಗಂಗವ್ವ ಇನ್ಯಾವ ಪುರುಷಾರ್ಥಕ್ಕೆ ಕೇರೀಲಿ ಇರೋದು! ಸುಡುಗಾಡನ ಹುಡುಕ್ಕೊಂಡು ಹೋಗೋಣ ನಡಿ ಎಂದು ಎಳೆದಳು. ಹಿಡಿತವನ್ನು ನಿರಾಕರಿಸದೆ ಆರ್ತತೆಯಿಂದ, ನಿಸ್ಸಹಾಯಕತೆಯಿಂದ ಆಕೆಯತ್ತ ನೋಡಿದ, ಏಳಲೆಂದು ಪ್ರಯತ್ನಿಸಿದನಾದರೂ ಕೂತಿದ್ದ ನೆಲ ತನ್ನನ್ನು ಬಿಟ್ಟುಕೊಡಲಿಲ್ಲ. ಹಿರೀಕ ನಿಂಗಜ್ಜ ಕೂತಲ್ಲಿಂದಲೇ ಬೇ ಗಂಗೀ ನಿಂದು ಜಾಸ್ತಿಯಾತು, ನಮ್ಮ ಕೇರಿ ಏನ್ಮಾಡೈತಂತ ಹಿಂಗ ಮಾತಾಡ್ತಿ! ನೆಲದ ರಿಣ ಇರೋವರ್ಗೂ ಯಾರ್ಯಾರೆಲ್ಲೆಲ್ಲಿರಬೇಕೋ ಅಲ್ಲೆಲ್ಲೇ ಇರಬೇಕವ್ವ, ಮಕ್ಕಳುಮರಿ ಮನೀ ತುಂಬ ಇರೋ ನಾವೇನಾದ್ರೂ ಸುಖವಾಗಿದೀವೇನು! ಅವಿದ್ರೂ ಒಂದೇ ಇರದಿದ್ರೂ ಒಂದೆ. ನಿನ್ನ ದುಕ್ಕಾನ ಇಲ್ಲಿಗೆ ಸಾಕು ಮಾಡು, ಶಿವನ ದಯೆಯಿಂದ ಮಗಳು ತಿರುಗಿ ಬಂದಾಳಲ್ಲ, ಅಷ್ಟು ಸಾಕು ಎಂದು ಕೊಕ್ ಕೊಕ್ ಕೆಮ್ಮಿ ಬಳಿಕ ಚೇತರಿಸಿಕೊಂಡ. ಅದುವರೆಗೆ ಮೂಕ ಪ್ರೇಕ್ಷಕನಂತೆ ಗುಂಪಿನಲ್ಲಿ ಆಲಿಸುತ್ತ ನೋಡುತ್ತ ನಿಂತಿದ್ದ ಕೇರಿಯ ಇನ್ನೊಬ್ಬ ಹಿರೀಕ ಸಿದ್ದಪ್ಪ ಸ್ವಲ್ಪ ಮುಂದೆ ಬಂದು ಸುಶೀಲಾಳನ್ನು ಅಪಾದಮಸ್ತಕ ದಿಟ್ಟಿಸಿದ ಬಳಿಕ ಬಾಯಿಯಿಂದ ಉಗುಳಿದ ತೊಂಬಲನ್ನ ಈಕಿ ಗಂಡ ಪುನಃ ಬಾಯಲ್ಲಿ ಹಾಕ್ಕೊಳ್ತಾನೋ! ಇಲ್ಲ ನಿನ್ನ ದಾರಿ ನಿಂದು, ನನ್ನ ದಾರಿ ನಂದು ಅಂದುಬಿಡ್ತಾನೋ! ಅದು ಮುಖ್ಯ. ಚವುಡವ್ವನ ಗುಡೀಲಿರೋ ಅವ್ನೀಗೆ ಹೇಳಿ ಕಳುವಿರೋ ಹೆಂಗೆ! ಎಂದು ಕೇಳಿದ.
ಹ್ಹಾಂ! ಅಂದಹಾಗೆ ಸ್ವಲ್ಪಹೊತ್ತಿನ ಹಿಂದೆ! ಗೂರಲ ಕೆಂಚಜ್ಜ ತನ್ನ ಕೆಮ್ಮುದಮ್ಮು ಪರಿಹಾರಾರ್ಥವಾಗಿ ಚುಟ್ಟ ಸೇದಿದ್ದ ಹೊಗೆಯನ್ನು ಮಸ್ತಕಕ್ಕೆ ಏರಿಸಿಕೊಂಡು ಅದನ್ನು ಕಂಡಲನೀಶಕ್ತಿಯನ್ನಾಗಿ ಪರಿವರ್ತಿಸುವ ಸನ್ನಾಹದಲ್ಲಿರುವಾಗಲೇ ಹುಲುಗ ತನ್ನ ಹಮಾಲಿ ದಣುವನ್ನು ಪರಿಹರಿಸಿಕೊಳ್ಳಲೆಂದು ಕಂಠಮಟ ಕುಡಿದು ಚಿತ್ತಾಗಿ ಅದೇ ತಾನೆ ಹನುಮಂದೇವರ ಗುಡಿ ಸಂದಿ ಮೂಲಕ ಕೇರಿಯನ್ನು ಪ್ರವೇಶಿಸಿದ್ದನಷ್ಟೆ, ಎಂದೋ ಕುಡಿಸಿದ್ದ ಋಣವನ್ನು ತೀರಿಸಿಕೊಳ್ಳಲೆಂದು ಕಿವುಡನು ಲೇ ಕೆಂಚ ನೀನು ಈ ಯಕಃಶ್ಚಿತ್ ಭೂಮಿ ಮೇಲಿದ್ದೇನು ಸಾರ್ಥಕ ಎಂದು ಪಲ್ಲವಿ ಆರಂಭಿಸಿ ಹೀಗಗಂತ ಎರಡೇ ಮಾತುಗಳಲ್ಲಿ ಸವಿವರವಾಗಿ ವಿವರಿಸಿದನು, ಅವನು ಹೇಳಿದ್ದೊಂದಾದರೆ ಇವನು ಅರ್ಥಮಾಡಿಕೊಂಡಿದ್ದು ಇನ್ನೊಂದು. ಹ್ಹಾಂ ಹಂಗ ಅಂದಳಾ ಆ ಭೋಸೂಡಿ ಎಂದು ಹೂಂಕರಿಸುತ್ತ ಆ ದೈವಸ್ಥರ ಸಭೆಯನ್ನು ಪ್ರವೇಶಿಸಿದ್ದನು, ಕೇರಿಯ ಮಹಾಕುಡುಕನಾದ ಅವನು ಸಭೆಯ ಗೌರವವನ್ನು ಮಣ್ಣುಪಾಲು ಮಾಡಲಿರುವನು ಎಂದು ಅರ್ಥ ಮಾಡಿಕೊಂಡ ದೂರಸಂವೇದಿಗ್ರಹದಂಥ ನಿಂಗಜ್ಜ ಲೇ ತಮ್ಮಾ ಈ ಕೂಡಲೆ ಹೋಗಿ ಚಂದ್ರನನ್ನು ಕರೆದುಕೊಂಡು ಬಾ ಎಂದು ಆಜ್ಞೆ ಮಾಡಿದ್ದನು, ಮೊದಲೇ ಯಜಮಾನ ಸಾಧುಸಂತರೊಡನೆ ಒಡನಾಡುವ ಹಿರೀಕ, ಮಾತು ಕೇಳದವರಿಗೆ ಕೇಡು ಶತಃಸಿದ್ಧ, ಆಯ್ತಜ್ಜಾ ಎಂದು ಹಾಗೆ ಮರಳಿದ್ದನು.
(ಇನ್ನೂ ಇದೆ….)

‍ಲೇಖಕರು avadhi

May 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. keshava reddy handrala

    HASIVU MATTU BADATANAVANNU ADARELLA BERUGALONDIGE BIDISIDUVA KALEYALLI NIMMANNU MEERISUVAVARILLA . NIJAVAAGIYU GANDA GANDANE MINDA MINDANE.HASIVIGE MATTU KAMAKKE PARIDIGALE ILLA.NIMMA KATHEGALALLINA MUPPANU MUDUKIYARANNU KANDARE NANAGE INNILLADA PYAR.

    ಪ್ರತಿಕ್ರಿಯೆ

Trackbacks/Pingbacks

  1. ಕುಂ ವೀ ಕಾಲಂ : ‘ತೇಲಲರಿಯರು. ಮುಳಗಲೂ ಅರಿಯರು’ « ಅವಧಿ / avadhi - [...] (ಭಾಗ – ೧ ಓದಲು ಇಲ್ಲಿ ಕ್ಲಿಕ್ಕಿಸಿ) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: