ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ಬದಲಾಗದೇ ಇರುವುದು ಬದಲಾವಣೆ ಮಾತ್ರ!

ಈ ನಡುವೆ ಅಥವಾ ಯಾವ ಕಾಲಕ್ಕೂ ಜನ ಮಾತಾಡುವಾಗ ‘ಈಗ ಕಾಲ ಕೆಟ್ಟುಹೋಗಿದೆ’ ಅಂತ ಮಾತಾಡುತ್ತಾರಲ್ಲ, ಹಾಗೆಂದರೆ ಏನು?! ಯಾವ ಕಾಲಕ್ಕೂ ಜನ ಇದೇ ಕಾಲ ಕೆಟ್ಟುಹೋಗುವ ಮಾತನ್ನೇ ಹೇಳುತ್ತಿದ್ದರು ಅಲ್ಲವಾ? ನೆನ್ನೆ ಮಲೆಗಳಲ್ಲಿ ಮದುಮಗಳು ನಾಟಕ ನೋಡುವಾಗ ಅದರಲ್ಲೂ ಕಾಲ ಕೆಟ್ಟು ಹೋಗಿದೆ ಅಂತ ಮಾತು ಬಂತು! ಅದನ್ನು ನಮ್ಮ ಕುವೆಂಪು ಅವರು ಬರೆದಿದ್ದು 1967 ರಲ್ಲಿ … 46 ವರ್ಷಗಳ ಕೆಳಗೆ! ಹಾಗಾಗಿ ಈ ಕಾಲ ಕೆಟ್ಟು ಹೋಗುವ concept ಇದೆಯಲ್ಲ, ಅದು ತುಂಬ out dated ಅನ್ನಿಸುತ್ತದೆ ನನಗೆ. ಕಾಲ ಯಾವ ಕಾಲಕ್ಕೂ ಹೇಗಿರಬೇಕೋ ಹಾಗೆಯೇ ಇರುತ್ತದೆ. ಕೆಟ್ಟುಹೋಗಿದೆ ಅನ್ನುವುದು ಪಕ್ಕಾ ಹೊಟ್ಟೆ ಉರಿಯ ಮಾತಷ್ಟೇ…
ಉಡುಪುಗಳ- ಅದರಲ್ಲೂ ಹೆಣ್ಣು ಮಕ್ಕಳ ಮತ್ತು ಹೆಂಗಸರ ಉಡುಪಿನ ಬಗ್ಗೆ ಬರೆಯುವಾಗ ಈ ಮಾತು ತುಂಬ ಸಲೀಸಾಗಿ ಎಲ್ಲರ ಬಾಯಲ್ಲೂ ಬಂದುಬಿಡುತ್ತದೆ. ಪಾಪ ಯಾವುದೋ ಹೆಣ್ಣುಮಗಳು ಎಲ್ಲೋ ಅತ್ಯಾಚಾರಕ್ಕೆ ಒಳಗಾದರೆ ಅದಕ್ಕೂ ತೊಡುವ ಉಡುಪೇ ಕಾರಣ, ಕಾಲ ಕೆಟ್ಟುಹೋಯ್ತು ಅಂತ ಹಿಂದು ಮುಂದು ಯೋಚಿಸದೇ ಥಟ್ಟಂತ ಆಡುವಾಗ ಆಹಾ! ಮೈ ತುಂಬ ಬಟ್ಟೆ ತೊಟ್ಟ ಯಾವ ಹೆಂಗಸನ್ನೂ ಅತ್ಯಾಚಾರ ಮಾಡದ ಪುರುಷೋತ್ತಮರು ನೀವು! ಅಂತ ವ್ಯಂಗ್ಯವಾಡೋಣ ಅನ್ನಿಸುತ್ತದೆ. ಎಷ್ಟೊಂದು ಮುದುಕಿಯರು, ಸೀರೆಯುಟ್ಟ ಗೃಹಿಣಿಯರು ಅತ್ಯಾಚಾರಕ್ಕೆ ಒಳಗಾದಾಗ ಥೂ! ತೊಂದರೆ ಇರುವುದು ಅವಳ ಬಟ್ಟೆಯಲ್ಲಲ್ಲ, ಹಾಗೆ ಮಾಡಿದವನ ಮನಃಸ್ಥಿತಿಯಲ್ಲಿ ಅಂತ ಪ್ರೂವ್ ಮಾಡಿದ ಹಾಗಾಗಲಿಲ್ಲವಾ? ಹೀಗೆ ಯೋಚಿಸುತ್ತಾ ಕೂತಾಗ ನನಗೆ ಕಾಲ ಕೆಟ್ಟು ಹೋಗಿದೆ ಅಂತ ಅನಾದಿಕಾಲದಿಂದಲೂ ಬೆಳೆದು ಬಂದ ಸಿದ್ಧ stock ವಿಷಯಗಳು ನೆನಪಾದವು…
ನನ್ನ ಮುತ್ತಜ್ಜಿಯ ಕಾಲದಲ್ಲಿ ಹೆಂಗಸರು ಪೆಟ್ಟಿಕೋಟ್ ಹಾಕುತ್ತಿರಲಿಲ್ಲ. ಸೀರೆಯನ್ನು ಸೊಂಟಕ್ಕೊಂದು ಗಂಟು ಹಾಕಿ ಅದು ಹೇಗೋ ಸಪೋರ್ಟ್ ಕೊಟ್ಟು ಉಡುತ್ತಿದ್ದರು. ನನ್ನ ಅಜ್ಜಿಯ ಕಾಲಕ್ಕೂ ಅದೇ ರೀತಿ ಸುಮಾರು ಹೆಂಗಸರು ಸೀರೆ ಉಡುತ್ತಿದ್ದುದು. ಆಮೇಲೆ ನನ್ನ ಅಮ್ಮನ ಕಾಲಕ್ಕೆ ಪೆಟ್ಟಿಕೋಟ್ ಬಂದಾಗ ಇದೇ ಈ ‘ಕಾಲ ಕೆಟ್ಟುಹೋಯ್ತು’ ಅನ್ನುವ ಮಾತು ಕೇಳಿ ಬಂದಿತ್ತಂತೆ! ಥೂ .. ಅದೇನು ಮಾನ ಮರ್ಯಾದೆ ಇಲ್ಲದೆ ‘ಯಾವುದೋ’ ಹೆಂಗಸರ ಥರ ಈ ವಯ್ಯಾರಗಳೆಲ್ಲ ಅಂತ ಆಡಿಕೊಳ್ಳುತ್ತಿದ್ದರಂತೆ. ಆಮೇಲೆ ನನ್ನಜ್ಜಿಯ ಕಾಲಕ್ಕೆ ಒಂಭತ್ತು ಗಜದ ಹತ್ತಿಯ ಸೀರೆ ಅಥವಾ ರೇಷ್ಮೆ ಸೀರೆ ಉಡುವುದು ಮಾಮೂಲಾಗಿತ್ತು. ನನ್ನಜ್ಜಿಯ ಬ್ಲೌಸ್ ಕೂಡಾ ಸ್ವಲ್ಪ ತುಂಡಗಿರುವ ಶರ್ಟ್ ಅಂತ ಹೇಳಬಹುದು! ದಗಳಾ ಬಗಳೆ fitting ..ಒಟ್ಟಿನಲ್ಲಿ ಮೈ ಮುಚ್ಚಿದರೆ ಅದರ ಕೆಲಸ ಮುಗಿದ ಹಾಗೆ ಅನ್ನುವಂತೆ. ಆಮೇಲೆ ನನ್ನ ಅಮ್ಮನ ಕಾಲದಲ್ಲಿ ವಾಯಿಲ್, ನೈಲಾನ್ ಸೀರೆಗಳೆಲ್ಲ ಶುರುವಾದವಂತೆ. ಆ ‘ಕೆಟ್ಟುಹೋಗದ’ ಕಾಲದಲ್ಲಿ ಸೆರಗನ್ನು ಉದ್ದಕ್ಕೆ ತೆಗೆದು ಮೈ ಪೂರಾ ಮುಚ್ಚುವಂತೆ ಸೀರೆ ಉಡುವುದು ಮಾಮೂಲಿ ವಿಧಾನವಾಗಿತ್ತು. ಆ ಕಾಲದಲ್ಲಿ ಇದ್ದಕ್ಕಿದ್ದ ಹಾಗೆ ಸಿನೆಮಾಗಳಲ್ಲಿ ಹೀರೋಯಿನ್‌ಗಳು ಇದ್ದಕ್ಕಿದ್ದ ಹಾಗೆ ಭುಜವನ್ನು ಆವರಿಸಿ ಕೇವಲ ಒಂದು ಅಡಿ ಹಿಂದಕ್ಕೆ ಬೀಳುವ ರೀತಿ ಸೆರಗು ತೆಗೆಯಲು ಶುರು ಮಾಡಿದರಲ್ಲ, ಆಗ ಅಮ್ಮನೂ ಅದನ್ನು ಅನುಕರಿಸಲು ಶುರು ಮಡಿದಾಗ ನನ್ನ ಅಜ್ಜಿ ಮತ್ತು ತಾತ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಂತೆ! ಇದೇನು ಅಸಹ್ಯದ ಕಾಲ ಬಂತಪ್ಪಾ … ಲಕ್ಷಣವಾಗಿ ಉದ್ದ ಸೆರಗು ತೆಗೆಯಬಾರದಾ? ಕಾಲ ಕೆಟ್ಟು ಹೋಯ್ತು ಅಂದಿದ್ದರಂತೆ !! ಆಮೇಲೆ ಕಲ್ಪನಾ ಕಾಲ ಬಂತಲ್ಲ, ಆ ಸೀಸನ್ನಲ್ಲಿ ತುಂಡು ತೋಳಿನ ಬ್ಲೌಸ್ ಹಾಕುವ ಫ್ಯಾಷನ್ ಬಂತಂತೆ. ಆಗಲೂ ಅಜ್ಜಿ ಪ್ರಪಂಚ ಕುಲಗೆಟ್ಟುಹೋಯ್ತು ಅಂತ ಪೇಚಾಡಿದ್ದರಂತೆ.
ನನ್ನ ಅಪ್ಪನ ಅಪ್ಪ- ನನ್ನ ಅಜ್ಜ- ತುಂಬ ಸ್ಟ್ರಿಕ್ಟ್ ಇದ್ದರಂತೆ. ಆಗ ತಾನೇ ರೇಡಿಯೋದಲ್ಲಿ ಹಿಂದಿ ಹಾಡುಗಳ ಜ಼ಮಾನಾ ಶುರುವಾಗಿತ್ತು. ಯೌವನದಲ್ಲಿದ್ದ ನನ್ನ ಅಪ್ಪನಿಗೆ ಆ ಹಾಡುಗಳು ಸಖತ್ ಕಿಕ್ ಕೊಡುತ್ತಿದ್ದವಂತೆ. ಮನೆಯಲ್ಲಿ ಹಾಡು ಹಾಕುವ ಹಾಗಿಲ್ಲ. ಅದಕ್ಕೇ ಎಲ್ಲೋ ಕೂತು ನ್ಯೂಸ್ ಕೇಳಿ ಬರುತ್ತೇನೆ ಅಂತ ಜಾರಿಕೊಳ್ಳುತ್ತಿದ್ದರಂತೆ. ನ್ಯೂಸ್ ಕೇಳುತ್ತೇವೆ ಅಂತ ಸುಳ್ಳು ಹೇಳಿ ಹಾಡು ಕೇಳಿ ಬಂದರೆ ತಾತನಿಗೆ ಗೊತ್ತಾಗುವುದಿಲ್ಲ ಅನ್ನುವ ಹೋಪ್ ಪಾಪ! ಕದ್ದು ಹಾಡು ಕೇಳಿ ಮನೆಗೆ ಕಾಲಿಡುವಾಗಲೇ ತಾತ ‘ನ್ಯೂಸ್ ಕೇಳಿದ್ಯೋ?’ ಅನ್ನುತ್ತಿದ್ದರಂತೆ. ಅಪ್ಪ ಹ್ಞೂ ಅಂತ ತಪ್ಪಿಸಿಕೊಂಡು ಒಳ ಜಾರಲು ನೋಡಿದರೆ ನ್ಯೂಸಲ್ಲಿ ಏನೇನು ಬಂತು?!’ ಅಂತ ಕೇಳುತ್ತಿದ್ದರಂತೆ. ನ್ಯೂಸ್ ಕೇಳಿಲ್ಲದವರು ಸಿಕ್ಕಿಬಿದ್ದಾಗ ತಾತ ಹೀನಾಮಾನ ಬಯ್ದು ಥೂ ಕಾಲ ಕೆಟ್ಟುಹೋಯ್ತು ಅಂತ ಅನ್ನುತ್ತಿದ್ದರಂತೆ!

ಚಿತ್ರ: ಎಂ ಎಸ್  ಮೂರ್ತಿ

ಆ ಕಾಲದ ಕ್ಯಾಬರೆ ಡ್ಯಾನ್ಸ್‌ಗಳನ್ನು (ಕಕ್ಕೂ ಮತ್ತು ನಮ್ಮ ಹೆಲೆನ್ ಅವರ ಕ್ಯಾಬರೆ ಡ್ಯಾನ್ಸ್‌ಗಳನ್ನು) ಅಪ್ಪ ಮುಂದೆ ಯಾವತ್ತೋ ಒಂದು ಸಲ ತೋರಿಸಿದಾಗ ನಾನು ಮೀಟರ್‌ಗಟ್ಟಳೆ ಸೀರೆಯುಟ್ಟ ಆ ‘ಕ್ಯಾಬರೆ’ ನೋಡಿ ನಗಲೋ, ಅಳಲೋ ಅಂತ ಕೂಡ ತಿಳಿಯದೇ ಬೆಪ್ಪಾಗಿದ್ದೆ. ಈ ಹಾಡುಗಳನ್ನು ಕೇಳಿದರೇನೇ ತಾತ ಕಾಲ ಕೆಟ್ಟುಹೋಯ್ತು ಅಂತ ಬಯ್ಯುತ್ತಿದ್ದಿದು!! ಯಾವುದೋ ಹಾಡಿನಲ್ಲಿ ಡಿಯರ್ ಅಂತಲೋ, ಡಾರ್ಲಿಂಗ್ ಅಂತಲೋ ಬಂದಾಗ ಹಿರಿಯರೆಲ್ಲ ಬಾಯಿ ಬಾಯಿ ಬಡಿದುಕೊಂಡು ಬಿಟ್ಟಿದ್ದರಂತೆ! ಈಗಲೂ ಅದೇ ಮಾತು ನಮ್ಮ ಸಿನೆಮಾ ಹಾಡುಗಳ ಬಗ್ಗೆ ಕೇಳಿ ಬರುತ್ತದೆ …ಅದೇನು ಅಸಹ್ಯದ ಹಾಡುಗಳು ಅಪ್ಪ ಲೂಸಾ ಅಮ್ಮ ಲೂಸಾ ಅಂತೆ …ಎಂಥ ಕಾಲ ಬಂತು! ತಾಯಿ ತಂದೆಯ ಸೇವೆಯಾ ಯೋಗ ಅಂತ ಇದ್ದ ಹಾಡುಗಳ ಸಾಲುಗಳು ಈಗ ಹೀಗೆ!! ಅಂತ ಎಲ್ಲರೂ ಲೊಚಗುಟ್ಟುವುದು ಕೇಳಿ ನಾನು ದಣಿದಿದ್ದಷ್ಟೇ ಬಂತು …
ಜುಟ್ಟು ಕತ್ತರಿಸಿ ಕ್ರಾಪು ಬಿಟ್ಟಾಗ, ಟೂರಿಂಗ್ ಟಾಕೀಸುಗಳಲ್ಲಿ ಸಿನೆಮಾ ಹಾಕಲು ಶುರು ಮಾಡಿದಾಗ, ಪೌರಾಣಿಕ ಮತ್ತು ಸಾಮಾಜಿಕ ಸಂದೇಶಗಳ ಸಿನೆಮಾ ಕಾಲ ಮುಗಿದು ಬೇರೆ ಥರದ ಸಿನೆಮಾಗಳು ಶುರುವಾದಾಗ, ಮಗ ಚಪ್ಪಲಿ ಇಲ್ಲದೇ ನಡೆಯುವುದಿಲ್ಲ, ಚಪ್ಪಲಿ ಕೊಡಿಸು ಅಂತ ಹಟ ಮಾಡಿದಾಗ ಕೂಡಾ ಕಾಲ ಕೆಟ್ಟುಹೋದ ಅದೇ ಹಳೇ ಗ್ರಾಮಾಫೋನ್ ರೆಕಾರ್ಡ್ ಹಾಕಿದ್ದು ಮಾಮೂಲು ತಾನೇ? ನನ್ನಜ್ಜ, ಅಜ್ಜಿ ಒಂದೇ ಒಂದು ಸಿನೆಮಾ ನೋಡದ ಜೀವಿಗಳು. ನನ್ನ ಮಾವ ಚಂದ್ರಲೇಖಾ ಸಿನೆಮಾವನ್ನು 25-30 ಸಲ ಕದ್ದು ನೋಡಿದಾಗ ಮೈ ತುಂಬ ಬಾಸುಂಡೆ ಬರುವಂತೆ ಹೊಡೆದಿದ್ದರಂತೆ. ಸಿನೆಮಾ ನೋಡುವುದು ಕೆಡುವ ಜನರ ಹವ್ಯಾಸ ಅಂತ ಅವರು ತೀರ್ಮಾನಿಸಿಬಿಟ್ಟಿದ್ದರಲ್ಲ! ಇನ್ನು ಅಷ್ಟೊಂದು ಸಲ ಸಿನೆಮಾ ನೋಡಿದ ಅಂತ ಗೊತ್ತಾದಾಗ ಹಿಡಿದು ಚೆಚ್ಚಿದ್ದರಲ್ಲಿ ಆಶ್ಚರ್ಯವೇನಿದೆ?! ಗಂಡುಮಕ್ಕಳು ಸೈಕಲ್ ಕೊಡಿಸು ಅಂತ ಹಠ ಮಾಡಿದಾಗ ಕೂಡಾ ಕಾಲ ಕೆಟ್ಟು ಹೋಗಿದೆ ಅಂತ ತೀರ್ಮಾನಿಸಿದ್ದ ಕಾಲವೊಂದಿತ್ತು. ಆಮೇಲೆ ಹೆಣ್ಣು ಮಕ್ಕಳು ಸ್ಕೂಟರ್ ಬಿಡಲು ಶುರು ಮಾಡಿದಾಗಲೂ ಕಾಲ ಕೆಟ್ಟುಹೋಗಿತ್ತು … ಕೊನೆಗೆ ಹೆಂಗಸರು ಗಂಡಸರನ್ನು ಟೂ ವ್ಹೀಲರ್‌ನ ಹಿಂದೆ ಕೂರಿಸಿಕೊಂಡು ಹೊರಟಾಗಲಂತೂ ಅವರನ್ನು ಜಗತ್ತು ‘ಥೂ ಇದೇನು ಕಾಲ ಬಂದೋಯ್ತು’ ಅಂತ ಅದೇನೋ outrageous ಕೆಲಸವಿದ್ದ ಹಾಗೆ ರೋಡಿನಲ್ಲಿರುವ ಜನರೆಲ್ಲ ಅವರನ್ನೇ ನಿಂತು ನೋಡುತ್ತಿದುದು ನೆನ್ನೆ-ಮೊನ್ನೆ ಅನ್ನಿಸುವಷ್ಟರಲ್ಲೇ ಈಗ ಅದು ತುಂಬ ಸಾಮಾನ್ಯ ಸಂಗತಿಯಾಗಿ ಹೋಗಿದೆಯಲ್ಲವಾ? ಸತ್ಯಂ ಶಿವಂ ಸುಂದರಂನಲ್ಲಿ ಜ಼ೀನತ್ ಅಮಾನ್ ತೆಳು ಬಿಳಿ ಸೀರೆಯಲ್ಲಿ ನೀರಲ್ಲಿ ನೆಂದು ಅವಳ ಸರ್ವ ಆಸ್ತಿಯನ್ನೂ ತೆಗೆದಿಟ್ಟಾಗ ಜನ ಬೆಚ್ಚಿ ಬಿದ್ದಿದ್ದರು. ಈ ರಾಜ್‌ಕಪೂರ್ ಯಾವ ಹೆಣ್ಣು ಮಕ್ಕಳನ್ನೂ ಮರ್ಯಾದೆಯಿಂದ ಇರೋದಿಕ್ಕೆ ಬಿಡ್ಲಿಲ್ಲಪ್ಪಾ, ಕಾಲ ಕೆಟ್ಟುಹೋಯ್ತು ಅಂತ ಕೊರಗಿದ್ದರು. ಈಗ ಅಲ್ಲಿಂದ ಮುಂದೆ ಒಂದೆರಡು ಮೂರು ದಶಕ ಕಳೆಯುವಷ್ಟರಲ್ಲಿ ಅದೇ ರಾಜಕಪೂರನ ಮೊಮ್ಮಕ್ಕಳು ತುಂಡು ಬಟ್ಟೆ ಹಾಕಿ ತೆರೆಯ ಮೇಲೆ ಆರಾಮವಾಗಿ ನಟಿಸುವಾಗಲೂ ಅದೇ ರಾಗ- ಅದೇ ಹಾಡು!
ನಾವು ಕಾಲೇಜಿಗೆ ಕಾಲಿಟ್ಟಾಗ ಸಲ್ವಾರ್ ಕಮೀಜ಼್ ಹಾಕುತ್ತೇವೆ ಅಂತ ಅಂದಾಗ ತೀವ್ರವಾಗಿ ವಿರೋಧಿಸಿದ್ದ ಅಮ್ಮ ಈಗ ಅವಳೇ ನಮಗೆ ಈ ವಯಸ್ಸಿನಲ್ಲೂ ಅದನ್ನೇ ಉಡುಗೊರೆಯಾಗಿ ಕೊಡುತ್ತಾಳೆ. ಮಿಡಿ ಹಾಕಿದಾಗಲಂತೂ ಮನೆಯಲ್ಲಿ ದೊಡ್ಡ ಗಲಾಟೆ. ಅಪ್ಪ ಅಮ್ಮನಿಗೆ ನೈಸ್ ಹಚ್ಚಿ ಪರ್ಮಿಷನ್ ಕೊಡಿಸಿದ್ದರು! ಆಮೇಲೆ ಮದುವೆಯಾದ ಹೆಂಗಸರಂತೂ ಸೀರೆಯನ್ನೇ ಉಡಬೇಕು ಅನ್ನುವುದು ಹೆಚ್ಚು ಕಡಿಮೆ mandatory ಆಗಿಹೋಗಿತ್ತು ಅಮ್ಮನ ಕಾಲದಲ್ಲಿ. ನಮ್ಮ ಕಾಲಕ್ಕೆ ಬರುವಾಗ ಜೀನ್ಸ್, ಸ್ಕರ್ಟ್, ಮಿಡಿ, ಸಲ್ವಾರ್ ಎಲ್ಲವೂ ತೀರಾ ಕಾಮನ್ ಅನ್ನಿಸಿದೆಯಲ್ಲವಾ? ಈಗ ನಾನಂತೂ ನನ್ನ ಮನೆಗೆ ಬರುವ ಹುಡುಗಿಗೆ ಗೌರಿ ಹಬ್ಬಕ್ಕೆ ಜೀನ್ಸ್ ಕೊಡಿಸಲು ಕೇಳಿದರೂ ಓಕೆ ಅನ್ನುತ್ತೇನೆ! ಒಟ್ಟಿನಲ್ಲಿ ಬದುಕು ಖುಷಿಯಾಗಿರಬೇಕು ಅಷ್ಟೇ ಅಂದುಕೊಂಡರೆ ಎಲ್ಲವೂ ಸಹ್ಯವಾಗುತ್ತದೆ. ಪ್ರತೀ ಬದಲಾವಣೆಗೂ ಕಾಲ ಕೆಟ್ಟುಹೋಗಿರುವ ರೆಕಾರ್ಡ್ ಹಾಕದೇ ಜನ ಯಾವುದನ್ನಾದರೂ accept ಮಾಡಿದ ಉದಾಹರಣೆ ನಿಮ್ಮ ಕಣ್ಣೆದುರು ಇದೆಯಾ? ಪೀಡ್ಜ಼ಾ ಕಾರ್ನರ್ ಬಂದಾಗ, ಸಾವಿರಗಟ್ಟಳೆ ಬೆಲೆಯ ಶೂ ಮಾರ್ಕೆಟ್ಟಿಗೆ ಬಂದಾಗ, ಮೆತ್ತನೆಯ ಸುಪ್ಪತ್ತಿಗೆಯಂಥ ಸೀಟುಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ 200 ರೂಪಾಯಿ ಅಂದಾಗ, ಬಸ್ಸಿನಲ್ಲಿ ಕಾಲೇಜಿಗೆ ಹೋಗುವುದು ಸಾಮಾನ್ಯವಾಗಿದ್ದ ನಮ್ಮಂತವರ ಮಕ್ಕಳು ಗಾಡಿಯಿಲ್ಲದೇ ಕಾಲೇಜಿಗೆ ಹೋಗುವುದೇ ಅಸಾಧ್ಯ ಅಂತ ವಾದಿಸಿ ಮೊಂಡು ಹಿಡಿದಾಗ, 10 ರೂಪಾಯಿಗೆ ಸಿಗುತ್ತಿದ್ದ ಹುರುಳಿಕಾಯಿಗೆ ಇವತ್ತು 120 ರೂಪಾಯಿ ಅಂದಾಗ, 5000 ಕ್ಕೆ ಸೈಟು ಸಿಗುತ್ತಿದ್ದ ಜಾಗದಲ್ಲಿ ಅದರ ಬೆಲೆ ಲಕ್ಷಕ್ಕೇರಿದಾಗ ಕೂಡಾ ಕಾಲ ಕೆಟ್ಟು ಹೋಯ್ತು ಅನ್ನುತ್ತಾರೆ ಜನ …
ಈಗ ಹೇಳಿ ಕಾಲ ಯಾವತ್ತು ಕೆಟ್ಟು ಹೋಗಿತ್ತು ಮತ್ತು ಯಾವತ್ತು ಕೆಟ್ಟು ಹೋಗಿರಲಿಲ್ಲ?! ಅದು ಯಾವತ್ತೂ ಇದ್ದ ಹಾಗೆಯೇ ಇದೆ. ಬದಲಾವಣೆ ಜಗದ ನಿಯಮವಷ್ಟೇ ಅಂತ ಯಾವತ್ತು ಮುಕ್ತವಾಗಿ ಎಲ್ಲವನ್ನೊ ಬದುಕಿನೊಳಕ್ಕೆ ಬರಮಾಡಿಕೊಳ್ಳುತ್ತೀವೋ ಅಲ್ಲಿಯವರೆಗೆ ಈ ಥರ ಕೊರಗು ಇದ್ದೇ ಇರುತ್ತದೆ. ಬದುಕಿನಲ್ಲಿ ಸಣ್ಣ ಪುಟ್ಟದಕ್ಕೆಲ್ಲ ಚೌಕಟ್ಟು ಹಾಕಿಕೊಳ್ಳದೇ ಬದುಕಿ ನೋಡಿ …ಹೆಗಲಿಗೆ ಹಳೆಯದರ ಭಾರವಿಲ್ಲದ ಬದುಕು ತುಂಬ ಹಗುವಾಗಿರುತ್ತದೆ ಹೊರಲಿಕ್ಕೆ!
After all change is the only constant factor in life …ಅಲ್ವಾ?

‍ಲೇಖಕರು avadhi

25 April, 2013

ನಿಮಗೆ ಇವೂ ಇಷ್ಟವಾಗಬಹುದು…

14 Comments

  1. Radhika

    Truth of all times Bharathi!

  2. Anjali Ramanna

    haudu bhaarati. ee vaakya nanagoo irritate maaDutte. “haageyE eegina kaalada makkaLu tuMbaa jaaNaru/churuku naavellaa eShTu innocent aagiddvi” anta hELtaaralla adoo disgusting! endinante ahavi haaDu shRutibaddhavaagide 🙂

  3. M.S.Krishna Murthy

    Hogli bidi madam kala kethogide en madokagute 🙂

  4. samyuktha

    Excellent!! Chennnaaagi helidri 🙂

  5. RENUKA NIDAGUNDI

    ಹಾಗೆ ಒಂದೊಂದು ಕಾಲಕ್ಕೆ ಒಂದೊಂದು ರೀತಿ. ಬದಲಾವಣೆಯನ್ನು ಸ್ವೀಕರಿಸುವುದೇ ಬದುಕು, ಮತ್ತದು ನಮ್ಮ ಅರಿವಿಗೆ ಬಾರದೆಯೇ ಸ್ವೀಕರಿಸುತ್ತ ಮುಂದೆ ಸಾಗುತ್ತಿರುತ್ತದೆ..ಈಗ ನಮ್ಮ ಅಮ್ಮಂದಿರು ನಮ್ಮನ್ನು ಸಲವಾರ್ ಕಮೀಜ್ ಹಾಕೊಳ್ಲೋವರೆಗೆ, ಕೂದಲು ಕತ್ತರಿಸೋವರೆಗೆ ಬದಲಾವಣೆಯನ್ನೂ ಒಪ್ಪಿದ್ದರಲ್ಲ…!! ನಿರಂತರ ಬದಲಾವಣೆಯೇ ಕಾಲದ ಗುರುತು. ಚೆನ್ನಾಗಿದೆ ಬರಹ ಭಾರತಿ.

  6. Pramod

    ಕಾಲ ಕೆಡುವುದು ಸಾರ್ವಾಕಾಲಿಕ (ಅ?)ಸತ್ಯ. ಕಾಲಕ್ಕೆ ತಕ್ಕ೦ತೆ ಕೋಲ ತುಳುವಿನಲ್ಲೊ೦ದು ಗಾದೆ ಇದೆ. Change is constant. 🙂

  7. Sandhya Bhat

    ಯಾಕೋ ಊರಲ್ಲಿ, ಕಟ್ಟೆ ಮೇಲೆ ಕುಳಿತು ಹೀಗೆ … ಹೀಗೆ .. ಮತಾನಾಡುತ್ತಿದ್ದವರೆಲ್ಲ ನಿಮ್ಮ ಲೇಖನ ಓದುವಾಗ ಕಣ್ಮುಂದೆ ಬಂದು ಹೋದರು … ತುಂಬಾ ಚೆನಾಗಿದೆ …

  8. Veena bhat

    ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು….. 🙂
    ಒಂದು ರೀತಿಯಲ್ಲಿ ನೋಡಿದರೆ ದೊಡ್ಡವರು ಹೇಳುವ ಸಣ್ಣವರ ತಪ್ಪುಗಳನ್ನು ಅವರು ಕೂಡಾ ಮೊದಲು ಮಾಡಿರುತ್ತಾರೆ…;)

  9. Aparna

    Bharathi.. hottekichchu andrallaa.. ade sariyaaduu.anusarane swapla badalayisidaroo adu kaaladamele horisuva tappu.nange arthavaagaddendare yaake ee prakriye ishtu asahaneeya antha.

  10. Gopaal Wajapeyi

    ಕಾಲ ಕೆಟ್ಟಿಲ್ಲ… ಕೆಡೋದೂ ಇಲ್ಲ. ತುಂಬಾ ಸುಧಾರಣೆಗಳಾಗಿವೆ, ಆಗ್ತಿವೆ, ಆಗ್ತಾನೇ ಇರತ್ವೆ… ನಮ್ಮ ಜನ ಅದನ್ನ ನೋಡೋ ರೀತಿ ಸರಿ ಇಲ್ಲ ಅಷ್ಟೇ.

  11. umasekhar

    kala endu kedalilla. badalavanegalannu baramadikpndavaru navu.. adu sahya vadare hagura ashya vadARE BHARA. tumba chennagide bharathi.

  12. ಜಿ.ಎನ್ ನಾಗರಾಜ್

    ಇದು ಮಾರ್ಕ್ಸ್ ರವರ ಪ್ರಸಿದ್ಧ ಹೇಳಿಕೆ. ಮಾರ್ಕ್ಸ್ ವಾದದ ಮೂಲಭೂತ ತತ್ವಗಳಲ್ಲಿ ಒಂದು. ” ಈ ವಿಶ್ವದಲ್ಲಿ ಎಲ್ಲವೂ ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ.ಬದಲಾಗದಿರುವುದು ಬದಲಾವಣೆ ಮಾತ್ರ” ” ಹಳತು ಮತ್ತು ಹೊಸತರ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಇರುತ್ತದೆ.ಅನೇಕ ವೇಳೆ ಈ ಸಂಘರ್ಷ ಹಿರಿಯರು-ಕಿರಿಯರ ನಡುವಣ ಸಂಘರ್ಷವಾಗಿ ತಲೆಮಾರುಗಳ ನಡುವಣ ಸಂಘರ್ಷವಾಗಿ ಹೊರನೋಟಕ್ಕೆ ಕಾಣಿಸಿಕೊಳ್ಳುತ್ತದೆ ಅಷ್ಟೇ.ಹೊಸತನ್ನು ಬಗ್ಗೆ ತೆರೆದ ಮನಸ್ಸಿನಿಂದ ಸ್ವೀಕರಿಸುವ ಹಿರಿಯರು ಇರುವಂತೆಯೇ ಹಳೆಯದಕ್ಕೇ ಗಂಟು ಬೀಳುವ ಕಿರಿಯರೂ ಇದ್ದಾರೆ. ”
    ಇದು ಪುರುಷರು, ಸ್ತ್ರೀಯರು, ಉಡುಪುಗಳು,ವೇಷ ಭೂಷಣಗಳಿಗೆ ಅನ್ವಯವಾಗುವಂತೆ ಚಿಂತನೆಗಳು, ಪರಿಕಲ್ಪನೆಗಳು, ಸಾಹಿತ್ಯ ರೂಪಗಳಿಗೂ ಅನ್ವಯಿಸುತ್ತವೆ ಎಂಬುದನ್ನು ಸಾಹಿತ್ಯದ ಻ನೇಕ ವಾಗ್ವಾದಗಳು ತೋರಿಸುತ್ತವೆ.
    “ಕ್ರಾಪು ತಲೆಯು ಈ ನವೀನ ಯುಗದ ಜಗದ ಕೇತನ
    ಎಲ್ಲೆ ಕಟ್ಟನೆಲ್ಲ ಮೆಟ್ಟಿ ಮುಂದೋಡುವ ಯುವಜನ ”
    ಇದು ನವ್ಯ ಕವಿ ಆದರೆ ಸಾಂಪ್ರದಾಯಿಕ ಮನಸ್ಸಿನ ಕವಿ ಅಡಿಗರ ಸಾಲುಗಳು. ಈ ವೈರುದ್ಧ್ಯ ನೋಡಿ.

  13. ಅಶೋಕ ಶೆಟ್ಟರ್

    ಬರಹವೇನೋ ಚೆನ್ನಾಗಿದೆ,ಕಾಲ ಕೆಟ್ಟಿರುವುದರ ವ್ಯಾಖ್ಯಾನ ಬರಿದೇ ವೇಷ-ಭೂಷಣ,ಸಿನಿಮಾ-ನಾಟಕ,ಹಾಡು-ಹಸೆಗಳಿಗೆ ಸೀಮಿತವಾಗಿದ್ದರೆ ಇದು ಸರಿ. ಮನುಷ್ಯರ ದುರಾಶೆ,ಲಾಲಸೆ,ವ್ಯಾಮೋಹ,ಲೋಭಗಳ ವಿಕೃತಿಯ ಪ್ರಮಾಣದ ಅಸದೃಶ ಹೆಚ್ಚಳ ಪರಿಸರದ ಮೇಲೆ ಉಂಟು ಮಾಡಿರುವ ಪರಿಣಾಮದ ರೂಪಗಳು ದಿನನಿತ್ಯದ ನಮ್ಮ ಅನುಭವದ ಭಾಗಗಳಾಗಿರುವ, ಧರ್ಮ ಅಧರ್ಮವಾಗಿರುವ, ಅಧ್ಯಾತ್ಮ ವ್ಯಾಪಾರವಾಗಿರುವ, ಲೈಂಗಿಕ ವಿಕೃತಿ ಕುಟುಂಬ ಎಂಬ ಘಟಕವನ್ನು ಗಟಾರಕ್ಕೆಸೆಯುತ್ತಿರುವ, ನಗೆ-ನಲಿವು ಕೂಡ ಮ್ಯಾನ್ಯುಫ್ಯಾಕ್ಚರ್ಡ್ ಸರಕುಗಳಾಗಿರುವ, ಸುಶಿಕ್ಷಿತ ಮಧ್ಯಮವರ್ಗೀಯರು ಮರ್ಡರ್,ಥೆಫ್ಟ್,ಪ್ರೊಸ್ಟಿಟೂಶನ್ ನಂಥ ಕ್ರೈಮ್ ನಲ್ಲಿ ತೊಡಗಿರುವ,ಇಡೀ ನೈತಿಕತೆಯ ಪ್ರಶ್ನೆಗಳು ಮೂಲಭೂತವಾಗಿ ಪಲ್ಲಟವಾದಂತಿರುವ….,ಸಮಸ್ಯೆ ಆಳವಾಗಿರುವಂತಿದೆ. Degeneration is not only of the degrees, it is also of the kind….ಕಾಲ ನಿಜವಾಗಿಯೂ ಕೆಟ್ಟಿದೆ….

  14. sunitha.a

    kaala kettu hoitu kane bhaaaaaaa………….:))))))

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading