ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾಲಂ : ಇಲ್ಲಿದೆ ನೀಳ್ಗತೆ ’ವಿದುಷಿ’ ಭಾಗ ೨

(ಕಥೆಯ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)

ಅದೆಷ್ಟು ಸಮ್ಮೋಹಕವಾಗಿತ್ತೆಂದರೆ ನಾನು ನಿಂತಲ್ಲಿಯೇ ಕಂಪಿಸಿದೆ, ಕತ್ತೊರಳಿಸಿ ಸುತ್ತಮುತ್ತ ನೋಡಿದೆ, ಒಳ್ಳೆಯ ಧ್ವನಿಮುದ್ರಿಕೆಯನ್ನು ಹಾಕಿರಬಹುದಾದ ಅಗೋಚರ ಸಂಗೀತಪ್ರಿಯರನ್ನು ಮನಸ್ಸಿನಲ್ಲಿಯೇ ಅಭಿನಂದಿಸಿದೆ, ಕಾರಣ ನನಗೂ ಶಾಸ್ತ್ರೀಯ ಸಂಗೀತವೆಂದರೆ ಪಂಚಪ್ರಾಣ. ಮನೆಯ ಕಪಾಟಿನಲ್ಲಿರುವ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ನೂರಾರು ಅತ್ಯಮೂಲ್ಯ ಧ್ವನಿಮುದ್ರಿಕೆಗಳನ್ನು ಒಂದೊಂದಾಗಿ ನೆನಪಿಸಿಕೊಂಡೆ. ಕೇಳಿಸುತ್ತಿರುವುದು ಸ್ತ್ರೀಯ ಧ್ವನಿ, ಅವರಲ್ಲಿ ಇದು ಯಾರದಿದ್ದಿರಬಹುದು! ಯೋಚಿಸಿದೆನಾದರೂ ಹೊಳೆಯಲಿಲ್ಲ. ನನ್ನ ಸಂಗ್ರಹದಲ್ಲಿರದ ಯಾವುದೋ ಒಂದು ಕ್ಯಾಸೆಟ್, ಅದನ್ನು ಪ್ಲೇ ಮಾಡುತ್ತಿರುವರನ್ನು ಹತ್ತಿರದಿಂದ ನೋಡಬೇಕು, ಅದು ಯಾರದೆಂದು ತಿಳಿದುಕೊಳ್ಳಬೇಕು. ಆದರೆ ನಾನು ನಿಂತಿರುವುದು ವಜ್ರಮುಷ್ಠಿಗೆ ಸಮಾನವಾದ ಸರತಿಸಾಲಲ್ಲಿ, ಅದೂ ಹೆಂಡತಿಯ ಮೇಲುಸ್ತುವಾರಿಯಲ್ಲಿ. ತಪ್ಪಿಸಿಕೊಳ್ಳುವುದು ಕಷ್ಟ. ಆದರೆ ಗಾಯನ ರಸಧಾರೆ ಸೂಜಿಗಲ್ಲಿನಂತೆ ಸೆಳೆಯಲಾರಂಭಿಸಿತು, ಗರ್ಭಗುಡಿಯ ಕಡೆ ನೋಡಿದೆ, ತೆರೆಯ ನೇಪಥ್ಯದಲ್ಲಿ ತನ್ನನ್ನು ತಾನು ಮರೆಮಾಚಿಕೊಂಡಿರುವ ದೇವಿ ಅನ್ನಪೂರ್ಣೆ, ಆಕೆ ಅನಾವರಣಗೊಳ್ಳಲು ತಾಸೊತ್ತಾದರೂ ಕಾಯುವುದು ಅನಿವಾರ್ಯ, ಅಷ್ಟರೊಳಗೆ ಅಲ್ಲಿಗೆ ಹೋಗಿಬಂದರೆ ಹೇಗೆ! ಮೂತ್ರಶಂಕೆಯ ಚಿಹ್ನೆಯಾದ ಒಂಟಿ ಬೆರಳನ್ನು ತೋರಿಸಿದೆ, ಥೂ ನಿಮ್ಮ ಎಂದು ಪತ್ನಿ ಹೊರಡಲು ವಿಸಾ ದಯಪಾಲಿಸಿದಳು, ಎಡಬಲದಲ್ಲಿದ್ದ ಕೆಲ ಹೆಂಗಸರು ನನ್ನ ಕಡೆ ವಿಲಕ್ಷಣ ನೋಟಬೀರಿದರು, ಸರತಿಸಾಲಿನಿಂದ ಮೆಲ್ಲಗೆ ತಪ್ಪಿಸಿಕೊಂಡು ಹೊರಬಿದ್ದೆ.
ಆರೋಹಣವೋ ಅವರೋಹಣವೋ! ಸರಿಯಾಗಿ ತಿಳಿಯದು, ಆದರೂ ಅದು ಚಿತ್ತಾಕರ್ಷಕ ಶಾರೀರ. ಪ್ರಾಂಗಣ ದಾಟಿ ಗೋಪುರದ ನೆರಳಲ್ಲಿ ನಿಂತೆ, ಕಾರಣ ಆಲಾಪನೆ ಸರ್ವದಿಕ್ಕುಗಳನ್ನು ವ್ಯಾಪಿಸಿತ್ತು. ಸಂಗೀತಕ್ಕಾತೀತರಂತಿದ್ದ ಯಾತ್ರಾರ್ಥಿಗಳು ತಮ್ಮ ಪಾಡಿಗೆ ತಾವು ನಡೆದಾಡುತ್ತಿದ್ದರು. ಬಲಕ್ಕೆ ಹೋದವನು ಪುನಃ ವಾಪಸ್ಸಾದೆ, ತುಸು ಹೊತ್ತು ಯೋಚಿಸಿದಾದ ಬಳಿಕ ಎಡದಿಕ್ಕಿನ ಕಡೆ ಹೆಜ್ಜೆ ಹಾಕಿದೆ. ಇಕ್ಕೆಲದುದ್ದಕ್ಕೂ ಅಷ್ಟೇನೂ ಪುರಾತನವಲ್ಲದ ಕಲ್ಲುಮಂಟಪಗಳು, ಬೆಂಕಿಪೊಟ್ಟಣವನ್ನು ಜೋಡಿಸಿಟ್ಟಂತೆ. ಪ್ರತಿಯೊಂದರೊಳಗೆಲ್ಲ ನಿರ್ಲಕ್ಷಿತರು, ಅಸಹಾಯಕರು, ಶ್ರೀಮಂತರ ವೇಷದ ಬಡವರು, ಬಡವರ ವೇಷದಲ್ಲಿರುವ ಶ್ರೀಮಂತರು. ಒಂದೊಂದಾಗಿ ಕ್ರಮಿಸತ್ತ ನಡೆದೆ, ಆಲಾಪನೆ ಹತ್ತಿರವಾದಂತೆ, ಪುನಃ ದೂರವಾದಂತೆ ಕಿವಿಮುಚ್ಚಾಲೆ ಆಟವಾಡಲಾರಂಭಿಸಿತು. ಒಂದೊಂದರೊಳಗೂ ಇಣುಕುತ್ತ, ಅಪರಿಚಿತರ ಕೈಗಳಲ್ಲಿನ ಯಾವುದೋ ವಸ್ತುವನ್ನು ಟೇಪ್ರೆಕಾರ್ಡರ್ ಎಂದು ಭ್ರಮಿಸುತ್ತ, ಯಾರನ್ನಾದರೂ ಕೇಳಿದರೆಲ್ಲಿ ಸಂದೇಹ ನಿವಾರಣೆಯಾಗುವುದೋ ಎಂಬ ಆತಂಕದಿಂದ ಕೇಳಲಾರದೆ ನಡೆದೂ ನಡೆದೂ ಕಟ್ಟಕೊನೆಗೆ ತಲುಪಿದ್ದು!
ಅದೂ ಒಂದು ಪಾಳುಕಲ್ಲುಮಂಟಪವೇ! ಅತಿವೃಷ್ಠಿಯ ಕಾರಣದಿಂದಾಗಿ ಹಿಂಬದಿ ಗೋಡೆ ಕುಸಿದಿತ್ತಾದ್ದರಿಂದಾಗಿ ಸಹಜವಾಗಿಯೇ ವಾತಾಯಾನ ವ್ಯವಸ್ಥೆ ನಿರ್ಮಾಣಗೊಂಡಿತ್ತು. ಮೂಲೆಯ ಕತ್ತಲಲ್ಲಿ ಮುಲುಕುತ್ತ ಇದ್ದ ಒಂದಿಬ್ಬರು ಭಿಕ್ಷುಕರಿರಬಹುದೆಂದು ಊಹಿಸಿದೆ. ಟೇಪ್ರೆಕಾರ್ಡರ್ ಬದಲಿಗೆ ಬೆಳಕಿನ ಬೆನ್ನಲ್ಲಿ ಕುಳಿತ್ತಿದ್ದ ಸ್ಥೂಲಕಾಯದ ಮಹಿಳೆಯೋರ್ವಳು ಅದುವರೆಗೆ ಆಲಾಪನೆಗೆ ತೊಡಗಿದ್ದಳಷ್ಟೆ, ತನ್ನ ಕೈಯಲ್ಲಿದ್ದ ಸಿಲವಾರ ತಟ್ಟೆಚೆಂಬುಗಳನ್ನು ತಬಲಗಳನ್ನಾಗಿ ಪರಿವರ್ತಿಸಿಕೊಂಡು ಶಾಸ್ತ್ರೀಯವಾಗಿ ನುಡಿಸುತ್ತಿದ್ದಳು. ಆಕೆಗೆ ಅಪರಿಚಿತನಾದ ನನ್ನಾಗಮನದ ಗಮನವೂ ಇರಲಿಲ್ಲ, ಪ್ರಾಯಶಃ ತಾನು ಕಣ್ಣುಗಳನ್ನು ಮುಚ್ಚಿಕೊಂಡಿರಲೂಬಹುದು. ಆರೋಹಣದಿಂದ ಅವರೋಹಣಕ್ಕಿಳಿದು ಯಾವುದೋ ಒಂದು ಕೀರ್ತನೆಯನ್ನು ಹಾಡಲಾರಂಭಿಸಿದಳು ನಿಮಗ್ನತೆಯಿಂದ. ಸಮಕ್ಷಮ ಕೇಳಲಾರಂಭಿಸಿದೊಡನೆ ನಖಶಿಖಾಂತ ಕಂಪನಕ್ಕೊಳಗಾದೆ. ಆದರೆ ನನಗೋ ರಾಗ ಯಾವುದೆಂದು ತಿಳಿಯದು, ಅದರ ಕೀರ್ತನೆಯಾಗಲೀ ಕೀರ್ತನಾಕಾರರಾಗಲೀ ತಿಳಿಯದು. ಆದರೂ ಆಕೆಯ ಗಾಯನ ಸುಬ್ಬಲಕ್ಷ್ಮಿ, ವಸಂತಕುಮಾರಿಯರಂಥ ಸಂಗೀತ ವಿದುಷಿಯರ ಗಾಯನಕ್ಕೆ ಸರಿಸಾಟಿಯಾಗಿತ್ತು, ಅಥವಾ ಅವರಿಬ್ಬರ ಶಾರೀರವನ್ನು ಎರಕ ಹೊಯ್ದಂತಿತ್ತು, ಅಥವಾ ಅವರೆಲ್ಲರಿಗಿಂತ ಮಿಗಿಲಾಗಿತ್ತು, ಅಥವಾ ಅವರಿಬ್ಬರೂ ಒಂದೇ ದೇಹವಾಗಿ ಮಾರುವೇಷದಲ್ಲಿ ಬಂದೇನಾದರೂ ಹಾಡುತ್ತಿರಬಹುದೆ ಎಂಬ ಸಂದೇಹ ಮೂಡಿತು. ನನಗರಿವಿಲ್ಲದಂತೆ ಶರೀರದಾದ್ಯಂತ ಕಿವಿಗಳನ್ನು ಮುಡಿದೆ, ಎಳೆ ಮಗುವಾದೆ, ವಿಧೇಯ ಸಂಗೀತಾಕಾಂಕ್ಷಿಯಾದೆ, ಧೈರ್ಯ ಸಾಲದೆ ಸಪ್ಪಳ ಮಾಡಲಿಲ್ಲ, ಕಳ್ಳಬೆಕ್ಕಿನಂತೆ ಹೊಸ್ತಿಲಿರದಿದ್ದ ಬಾಗಿಲನ್ನು ದಾಟಿ ಪ್ರವೇಶಿಸಿದೆ, ಮುಂಬಾಗಿಲ ಬೆಳಕೂ ನಿಧನಿಧಾನವಾಗಿ ನನ್ನೊಡನೆ ತಾನೂ ಪ್ರವೇಶಿಸಿ ಒಳಾವರಣವನ್ನು ನಿಚ್ಚಳಗೊಳಿಸಿತು. ಸಮಕ್ಷಮ ನೆಲಕ್ಕೆ ತನ್ನ ಕತ್ತನ್ನಂಟಿಸಿ ಉದ್ದಕ್ಕೆ ಮಲಗಿದ್ದ ನಾಯಿಯೊಂದು ಅಪರಿಚಿತನಿದ್ದ ನನ್ನನ್ನು ತನ್ನ ಪ್ರತಿಸ್ಪರ್ಧಿ ಎಂದೇ ಅಪಾರ್ಥ ಮಾಡಿಕೊಂಡು ಕತ್ತೆತ್ತಿ ನೋಡಿ ಪುನಃ ಯಥಾಸ್ಥಿತಿಗೆ ತಲುಪಿತು. ನೆಮ್ಮದಿಯ ಉಸಿರುಬಿಡುತ್ತ ಅದರೆದುರು ಆಕೆಯ ಸಮಕ್ಷಮ ಪರಮವಿಧೇಯತೆಯಿಂದ ಕುಳಿತೆ, ಪದ್ಮಾಸನಯುಕ್ತನಾಗಿ, ಕಣ್ಣುಮುಚ್ಚಿಕೊಂಡು.
ಹಾಗೆ ಕುಳಿತು ಅರ್ಧತಾಸಾಯಿತೋ! ಒಂದು ತಾಸಾಯಿತೋ! ತಿಳಿಯದು. ಸುದೀರ್ಘ ಗಾಯನದೌತಣದ ಬಳಿಕ ಆಕೆಯೂ ಕಣ್ಣು ತೆರೆದಳು, ನಾನೂ ಕಣ್ಣ ತೆರೆದೆ, ನಿಧಾನವಾಗಿ. ಮೆಲ್ಲಗೆ ಕತ್ತೆತ್ತಿ ನೋಡಿದೆ ಅರವತ್ತೆಪ್ಪರ ವೃದ್ದೆ, ಸ್ಥೂಲದೇಹಿ, ಜಡ್ಡುಗಟ್ಟಿದ್ದ ತಲೆಕೂದಲು, ಮೈಮೇಲೆ ಮಲಿನ ಬಟ್ಟೆಬರೆ, ತನ್ನ ಮುಂದೆ ಸಿಲವಾರ ತಟ್ಟೆ ಪ್ಲಾಸ್ಟಿಕ್ ತಂಬಿಗೆ, ಪಕ್ಕದಲ್ಲಿ ಅಲ್ಲಲ್ಲಿ ಹರಿದಿದ್ದ ಬ್ಯಾಗು. ಆಕೆಗೆ ಅಪರಿಚಿತನಾದ ನನ್ನ ಕಡೆಗಾಗಲೀ, ನಾಯಿವೇಷದಲ್ಲಿದ್ದ ನಾಯಿ ಬಗೆಗಾಗಲೀ ದ್ಯಾಸವಿರಲಿಲ್ಲ. ತೆರೆದ ಕಣ್ಣುಗಳನ್ನು ಬ್ಯಾಗಿನ ಕಡೆ ಹೊರಳಿಸಿದಳು, ಅದರಿಂದ ಕೆಲವು ಸಾಮಾಗ್ರಿಗಳನ್ನು ಹೊರತೆಗೆದು ಒಂದೊಂದಾಗಿ ಪರಿಶೀಲಿಸಲಾರಂಭಿಸಿದಳು. ಆಕೆ ಅರೆಹುಚ್ಚಳೆನ್ನುವುದಕ್ಕೆ ಇನ್ನೇನು ಬೇಕು ನಿದರ್ಶನ! ಕುತೂಹಲ ಮೇರೆ ದಾಟಿತು, ಆತಂಕ ಹೆಚ್ಚಿತು. ಸುಮ್ಮನೆ ನೋಡತೊಡಗಿದೆ.

ಅಕ್ಷರಸ್ಥೆಯಾಗಿದ್ದ ತಾನು ನೋಟುಪುಸ್ತಕದಲ್ಲಿದ್ದ ಟಿಪ್ಪಣಿಗಳನ್ನು ಕಣ್ಣಿಂದ ಓದಲಾರಂಭಿಸಿದಳು, ಏನನ್ನೋ ಬರೆಯಲಾರಂಭಿಸಿದಳು. ಬಳಿಕ ಅದನ್ನು ತನ್ನ ಮುಂದೆ, ನನ್ನ ಮುಂದೆಸೆದು ಬ್ಯಾಗಿನಿಂದ ಇನ್ನೊಂದು ಪುಸ್ತಕ ತೆಗೆದು ಕೈಯಲ್ಲಿ ಹಿಡಿದುಕೊಂಡಳು, ಅದು ಅಣ್ಣಮಾಚಾರ್ಯರ ಸಂಕೀರ್ತನಗಳ ಕೃತಿಯಾಗಿತ್ತು. ಹುಂಬತನದಿಂದಲೋ ಕುತೂಹಲ ತಾಳಲಾರದೆಯೋ ನೋಟುಪುಸ್ತಕವನ್ನು ನಿಧಾನವಾಗಿ ಕೈಗೆತ್ತಿಕೊಂಡೆ, ತುಂಬಾ ಗಲೀಜಾಗಿತ್ತು, ಯಾವ್ಯಾವುದೋ ನೂರಾರು ಹಾಳೆಗಳ ಮರುಜೋಡಣೆ ಅದಾಗಿತ್ತು, ಅದರಲ್ಲಿ ಕೆಲವು ಯಾರು ಯಾರಿಗೋ ಬರೆದ ಕೈಬರಹದ ಪತ್ರಗಳಿದ್ದವು, ತೆಲುಗು ಇಂಗ್ಲೀಷ್, ತಮಿಳು ಹೀಗೆ. ಅವುಗಳಲ್ಲಿದ್ದ ಒಂದು ಪತ್ರ ನೋಡಿದ ನನ್ನನ್ನು ಬೆರಗಾಗಿಸಿತು. ಬರೆದವರೂ ಬರೆಸಿಕೊಂಡವರೂ ನೆನಪಾದರು. ಬರೆದವರು ಕನ್ನಡದ ಪ್ರಸಿದ್ದ ಚಲನಚಿತ್ರ ನಿರ್ದೇಶಕ ಸಿದ್ಧಲಿಂಗಯ್ಯನವರು, ಬರೆಸಿಕೊಂಡವರು ತನ್ನ ಶಿಷ್ಯ ಸಹನಿರ್ದೇಶಕ ಗುರುರಾಜ! ಅವರೀರ್ವರೂ ನನಗೆ ಚಿರಪರಿಚಿತರೆ! ಕಾರಣ ಎಂಬತ್ತರ ದಶಕದಲ್ಲಿ ನಾನೂ ಅವರೊಂದಿಗೆ ಚಿತ್ರಕಥೆಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದೆ. ಎರಡು ಮೂರು ದಶಕದವಧಿಯಲ್ಲಿ ನಿರ್ದೇಶಕರನ್ನು ಹಲವು ಸಲ ಭೆಟ್ಟಿ ಮಾಡಿದ್ದೆ, ಆದರೆ ಅವರ ಶಿಷ್ಯ ಗುರುರಾಜನನ್ನು ಭೆಟ್ಟಿ ಮಾಡಿರಲಿಲ್ಲ. ಆದರೆ ನನ್ನ ವಾರಿಗೆಯ ಆತನ ನೆನಪು ಮನಃಪಟಲದಲ್ಲಿ ಅಚ್ಚಳಿಯದೆ ಉಳಿದಿತ್ತು.
ವೃದ್ದೆ ಅದನ್ನು ಕಸಿದುಕೊಳ್ಳಲು ಚಾಚಿದ ತನ್ನ ಕೈಯನ್ನು ಉಪಸಂಹರಿಸಿಕೊಂಡಳು, ವಿಲಕ್ಷಣ ನೋಟ ಬೀರಿದಳು, ಅಪಾದಮಸ್ತಕ ದಿಟ್ಟಿಸಿದಳು. ನೀನ್ಯಾರು ಎಂದು ಪ್ರಶ್ನಿಸಲಿದ್ದಳೇನೋ! ಗುರುರಾಜ ಗೊತ್ತೆ ಎಂದು ಕೇಳಿದೆ, ಗೊತ್ತಿರದೇನು! ಅವನು ನನ್ನ ಮಗ ಎಂದು ಹೇಳುವುದೆ! ತನ್ನೆರಡೂ ಕೈಗಳಿಂದ ತಲೆಯನ್ನು ಕೆರೆದುಕೊಂಡಳು, ಬೆರಳ ಉಗುರುಗಳಲ್ಲಿ ಬಂಧಿಯಾಗಿದ್ದ ಹೇನುಗಳನ್ನು ಅಂಗೈಯಲ್ಲಿ ಉದುರಿಸಿ ಕುಕ್ಕಿದಳು, ಏನನ್ನೋ ಯೋಚಿಸಿ ನಿಟ್ಟುಸಿರುಬಿಟ್ಟಳು. ಆಕೆ ನನ್ನನ್ನು ಆಪದ್ಬಾಂಧವನೆಂದು ಭಾವಿಸಿದಳೇನೋ! ನಮ್ಮಿಬ್ಬರ ನಡುವೆ ಸುದೀರ್ಘ ಮಾತುಕತೆ ತಮಿಳು ಭಾಷೆಯಲ್ಲಿ ಆರಂಭವಾಗಿ ಕನ್ನಡ ಭಾಷೆಯಲ್ಲಿ ಮುಕ್ತಾಯಗೊಂಡಿತು. ಅದರ ಆಧಾರದ ಮೇಲೆ ವಿವರಿಸುವುದಾದರೆ!
ಹೆಸರು ಅಲುಮೇಲಮ್ಮ, ಗಂಡ ಗೋವಿಂದಸ್ವಾಮಿ, ಸಂತಾನ ಒಂದು ಗಂಡು, ಒಂದು ಹೆಣ್ಣು. ವಾಸ ಬೆಂಗಳೂರಿನ ಇಂದಿರಾನಗರದಲ್ಲಿ, ವೃತ್ತಿ ಸೀರೆ ವ್ಯಾಪಾರ, ಹವ್ಯಾಸ ನಾದಸ್ವರವಾದನ. ಅಂದ ಮೇಲೆ ಸಾರ್ವಜನಿಕ ಸಂಪರ್ಕ ಇರುವುದು ಸಹಜ ತಾನೆ! ಅದರಲ್ಲೂ ಪ್ರಸಿದ್ದ ಸಂಗೀತಗಾರರು ತಮ್ಮ ಮನೆಗೆ ಭೆಟ್ಟಿ ನೀಡುತ್ತಿದ್ದರು, ರಾತ್ರಿ ವೇಳೆ ಮದ್ಯಸೇವನೆ ಯಥೇಚ್ಯ ಮಾಡುತ್ತಿದ್ದರು, ಬೆಳಗಾಗುವವರೆಗೆ ಹಾಡುತ್ತಿದ್ದರು. ಅಲುಮೇಲಮ್ಮಗೂ ಶಾಸ್ತ್ರೀಯ ಸಂಗೀತವೆಂದರೆ ಪಂಚಪ್ರಾಣ, ಕಾರಣ ತನ್ನ ತವರೂರು ಸೇಲಂ! ತನ್ನ ತಂದೆತಾಯಿಗಳೀರ್ವರೂ ಶಾಸ್ತ್ರೀಯ ಸಂಗೀತ ವಲಯದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಂಥವರೆ! ಗಂಡನ ಭಯದಿಂದಾಗಿ ತಾನು ಸುಮ್ಮನಿದ್ದರೂ ತನ್ನೊಳಗಿನ ಪ್ರತಿಭೆ ಸುಮ್ಮನಿರುತ್ತಿರಲಿಲ್ಲ, ಸ್ವಾಮಿ ಸಂಗೀತ ಕಛೇರಿಗಳಲ್ಲಿ ಪಾಲ್ಗೊಳ್ಳಲು ಹೋದಾಗ ಮನದಣಿಯೆ ಹಾಡುತ್ತಿದ್ದಳು, ಕುತೂಹಲದಿಂದ ನೋಡಿದ, ತದೇಕಚಿತ್ತದಿಂದ ಆಲಿಸಿದ ಕೀರ್ತನೆಗಳನ್ನು ಅಭ್ಯಾಸ ಮಾಡುತ್ತಿದ್ದಳು. ನೆರೆಹೊರೆಯವರು ತಮ್ಮತಮ್ಮ ಮನೆಗಳಲ್ಲಿ ಸಾಲಿಯಾನ ಆಚರಿಸುತ್ತಿದ್ದ ಗೌರಿಪೂಜೆ ಸತ್ಯನಾರಾಯಣ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು, ಅವರು ಕೇಳಿದರೂ ಕೇಳದಿದ್ದರೂ ಮೈಮರೆತು ಹಾಡುತ್ತಿದ್ದಳು, ತನ್ನ ಹೆಂಡತಿಯ ಈ ಪಠ್ಯೇತರ ಚಟವಟಿಕೆ ಗಂಡನಾದ ಸ್ವಾಮಿ ಇಷ್ಟಪಡುತ್ತಿರಲಿಲ್ಲ, ಹಾಡಬಾರದೆಂದು ನಿರ್ಬಂಧ ವಿಧಿಸುತ್ತಿದ್ದ, ಮನಸೇಚ್ಛೆ ದಂಡಿಸುತ್ತಿದ್ದ, ತಾನು ಹೊರಗಡೆ ಹೋಗುವಾಗ ಆಕೆಯನ್ನು ಗೃಹಬಂಧನದಲ್ಲಿರಿಸುತ್ತಿದ್ದ. ಹೀಗಾಗಿ ತಾನು ಮಾನಸಿಕವಾಗಿ ಕುಗ್ಗಿದಳು, ಅಸ್ವಸ್ಥಳಾದಳು. ಕೌಟುಂಬಿಕ ಪರಿಸರವೆಂಬ ಚಿನ್ನದ ಪಂಜರದಿಂದ ತಪ್ಪಿಸಿಕೊಂಡು ತೋಚಿದ ಕಡೆ ಪಲಾಯನ ಮಾಡಲಾರಂಭಿಸಿದಳು, ಆದರೆ ಗಂಡ ಸ್ವಾಮಿ ಮಕ್ಕಳ ಸಹಾಯದಿಂದ ತನ್ನನ್ನು ಹುಡುಕಿ ಎಳೆತಂದು ಪುನಃ ಗೃಹಬಂದನದಲ್ಲಿರಿಸುತ್ತಿದ್ದ, ಇದು ಹಲವು ಸಲ ಪುನರಾವರ್ತನೆಯಾಯಿತು. ಮೊದಲು ಅರೆಕಾಲಿಕ ಹುಚ್ಚಿಯಾಗಿದ್ದ ತಾನು ದಿನಗಳೆದಂತೆ ಪೂರ್ಣಪ್ರಮಾಣದ ಹುಚ್ಚಿಯಾದಳು. ತನ್ನನ್ನು ಸೇರಿಸಿದ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ತಿರುಪತಿಗೆ ಪ್ರಯಾಣ ಬೆಳೆಸಿದಳು. ವೆಂಕಟೇಶ್ವರನ ಸನ್ನಿಧಿಯಲ್ಲಿ ಅಣ್ಣಮಾಚಾರ್ಯರ, ಪುರಂಧರದಾಸರ, ದೀಕ್ಷಿತರ ಕೀರ್ತನೆಗಳನ್ನು ಕಂಠಸ್ಥ ಮಾಡಿಕೊಂಡಳು, ತಾನು ತನ್ನವೇ ಆದ ಕೀರ್ತನೆಗಳನ್ನೂ, ವಿಲಕ್ಷಣ ರಾಗಗಳನ್ನೂ ರಚಿಸುವುದರ ಮೂಲಕ ವಾಗ್ಗೇಯಕಾರಳಾದಳು. ಭಕ್ತರ ಸಮೂಹವಿರುವ ಕಡೆ ಹಾಡುತ್ತಿದ್ದಳು, ಅವರಿವರು ಭಿಕ್ಷೆ ರೂಪದಲ್ಲಿ ನೀಡುತ್ತಿದ್ದ ಹಣದಲ್ಲಿ ತನ್ನ ಕ್ಷುದ್ಬಾಧೆ ತಣಿಸಿಕೊಳ್ಳುತ್ತಿದ್ದಳು, ಅದೂ ನಾಯಿಗಳೊಂದಿಗೆ.
ಆಕೆಯ ವೃತ್ತಾಂತ ಆಂಜನೇಯನ ಬಾಲದುದ್ದಕ್ಕೂ ಇದೆ, ಕಾದಂಬರಿಯಾಗುವಷ್ಟು. ದಣಿವರಿಯದೆ ಹೇಳಿದಾದ ಬಳಿಕ ಆಕೆಬಿಟ್ಟ ನಿಟ್ಟುಸಿರು ನನ್ನೆದೆಯೊಳಗೆ ಇನ್ನೂ ಸುಂಟರಗಾಳಿಯಂತೆ ಸುತ್ತುತ್ತಲೇ ಇದೆ.

ಮಗಾ ಇದು ನನ್ನ ಪ್ರಾರಾಬ್ಧವಲ್ಲ, ದೇವತೆಗಳ ಕುರಿತು ಕೀರ್ತನೆಗಳನ್ನೂ ರಾಗಗಳನ್ನೂ ಸೃಷ್ಠಿಸುವುದಕ್ಕೆ ಪುಣ್ಯ ಮಾಡಿರಬೇಕು, ಮನೆಬಿಟ್ಟು ಏಳೆಂಟು ವರ್ಷಗಳಾದವು, ಕಟ್ಟಿಕೊಂಡವರು ಹೆತ್ತಮಕ್ಕಳು ನನ್ನನ್ನು ಹುಡುಕಿದರೋ ಇಲ್ಲವೋ! ಪೀಡೆ ತೊಲಗಿತೆಂದು ನೆಮ್ಮದಿಯಿಂದಿರುವರೋ! ಯೋಚಿಸುವುದಕ್ಕೆ ಹೋಗಿಲ್ಲ, ದಕ್ಷಿಣದ ಬಹುಪಾಲು ಪುಣ್ಯಕ್ಷೇತ್ರಗಳನ್ನು ಸುತ್ತಿದ್ದೀನಿ, ತಿರುಪತಿ, ಮಂತ್ರಾಲಯದಲ್ಲೆಲ್ಲ ತಿಂಗಳುಗಳ ಕಾಲ ಇದ್ದು ಈಗ ಅನ್ನಪೂರ್ಣೇಶ್ವರಿ ಆಶ್ರಯದಲ್ಲಿದ್ದೀನಿ, ಅದಿರಲಿ ನನ್ನನ್ಯಾಕೆ ನೀನು ಹಡುಕಿಕೊಂಡು ಬಂದಿರುವಿ? ಎಂದು ಕೇಳಿತು.
ನೀವು ಹಾಡದೇ ಇದ್ದಿದ್ದರೆ ನಾನು ಹುಡುಕಿಕೊಂಡು ಬರ್ತಿರಲಿಲ್ಲ ಅಜ್ಜಿ ಎಂದು ತಡವರಿಸದೆ ಉತ್ತರಿಸಿದೆ.
ಹಾಗಾದರೆ ನಿನಗೆ ಸಂಗೀತ ಜ್ಞಾನವಿದೆಯೋ!
ಫಜೀತಿಗಿಟ್ಟುಕೊಂಡಿತು, ಏನೆಂದು ಹೇಳಲಿ? ಆದರೂ ಹೇಳಿದೆ ಭಂಡತನದಿಂದ.
ಹ್ಹೋ ತುಂಬಾನೆ ಗೊತ್ತು, ಕಾಂಬೋಜ, ಮಧ್ಯಮಾವತಿ, ಕಲಾವತಿ ರಾಗಗಳೆಲ್ಲ ಗೊತ್ತು, ಸ್ವಲ್ಪ ಹೊತ್ತು ಯೋಚಿಸುತ್ತಿರುವಂತೆ ಮುಖ ಮಾಡಿತು, ನೇರನೋಟದಿಂದ ದಿಟ್ಟಿಸಿದಾದ ಬಳಿಕ
ಹಾಗಿದ್ದರೆ ಆದಿತಾಳ ಹಾಕು ನೋಡೋಣ ಎಂದು ಕೇಳಿಬಿಡುವುದೆ! ಒಂದುಕ್ಷಣ ದಿಗ್ಬ್ರಮಿತನಾದೆ, ಆದರೂ ವಿಚಲಿತನಾಗದೆ ಹಸ್ತ ಮತ್ತು ಬೆರಳುಗಳನ್ನು ತೊಡೆ ಮೇಲೆ ತಟ್ಟಿ ತೋರಿಸಿದೆ, ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ! ಅದನ್ನು ಗಮನಿಸಿದ ಮುದುಕಿ ನಗಾಡಿತು, ಅಲ್ಲದೆ ಆದಿತಾಳದ ಲಕ್ಷಣಗಳನ್ನು ಪ್ರಾಯೋಗಿಕವಾಗಿ ವಿವರಿಸಿ ತೋರಿಸಿದ ಬಳಿಕ ಹೇಳಿದ್ದೇನೆಂದರೆ..
ನಿನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಲವಲೇಶ ತಿಳವಳಿಕೆ ಇಲ್ಲ ಹುಚ್ಚಪ್ಪಾ, ಗೊತ್ತಿಲ್ಲವೆಂದು ಹೇಳಿದ್ದರೆ ಕಿಮ್ಮತ್ತು ಕಡಿಮೆಯಾಗ್ತಿತ್ತಾ, ಸುಳ್ಳುಗಳಿಂದಾಗಿಯೇ ಇವತ್ತು ಶಾಸ್ತ್ರೀಯ ಸಂಗೀತ ಕುಲಗೆಟ್ಟು ಹೋಗಿದೆ, ಮಾತುಗಳನ್ನು ಕೇಳಿ ಮಂಕಾದೆ, ಆಕೆ ಹುಚ್ಚಿಯೋ, ಹುಚ್ಚಿಯಂತೆ ಅಭಿನಯಿಸುತ್ತಿರುವಳೋ! ಒಂದೂ ತಿಳಿಯದಾಯಿತು, ನಾಚಿಕೆಯಿಂದ ಮುಖ ತಗ್ಗಿಸಿದೆ, ಸ್ವಲ್ಪ ಹತ್ತಿರ ಸರಿದಳು, ನನ್ನ ಹೆಗಲ ಮೇಲೆ ತನ್ನ ಬಲಗೈಯನ್ನಿರಿಸಿ ಅಪ್ಯಾಯತೆಯಿಂದ ಅದುಮಿದಳು, ಆ ಸ್ಪರ್ಶ ತಾಯಿಯ ವಾತ್ಸಲ್ಯವನ್ನು ನೆನಪಿಸಿತು. ಯಾರು ಮೊದಲು ಮಾತಾಡುವುದು? ನಮ್ಮೀರ್ವರ ನಡುವೆ ಮೌನ ಆವರಿಸಿತು, ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು ನಾನೇ ಅಮ್ಮಾ, ನಿನ್ನಂಥ ಸಂಗೀತ ವಿದುಷಿ ಈ ಸ್ಥಿತಿಯಲ್ಲಿರೋದು ಸರಿಯಲ್ಲ, ನಮ್ಮ ಜೊತೆ ಬನ್ನಿ, ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ತೀನಿ ಎಂದೆ. ನನ್ನ ಮಾತು ಕೇಳಿ ವಿಷಣ್ಣನಗೆ ಚೆಲ್ಲಿತು.
ಆ ಬಂಧನ ತೊರೆದು ಬಂದಿರುವ ನನಗ್ಯಾಕೆ ಬೇಕು ಮನೆಮಠ, ನನ್ನದೊಂದು ಆಸೆ!
ಕೇಳಮ್ಮಾ ಅದೇನಂತ!
ಅನ್ನಪೂಣೇಶ್ವರಿ ಅಮ್ಮನವರೆದುರು ನಿಂತು ಹಾಡುವ ಆಸೆ ಇದೆ, ಅದಕ್ಕೆಂದೇ ಹೊಸ ಕೀರ್ತನೆ ರಚಿಸಿದ್ದೀನಿ, ಆದರೆ ಅರ್ಚಕರು ಒಪ್ಪುತ್ತಿಲ್ಲ, ನೀನು ಅವರನ್ನು ಒಪ್ಪಿಸಿದಿಯಾದರೆ!
ಓಹ್! ಅಷ್ಟೇತಾನೆ! ದೇವಿ ಸಂಗೀತಪ್ರಿಯಳು, ಅರ್ಚಕರು ಒಪ್ಪದಿರಲು ಸಾಧ್ಯವಿಲ್ಲ, ಪ್ರಯತ್ನಿಸ್ತೀನಿಬಿಡಿ ಎಂದೆ ಪೂವರ್ಾಪರ ಯೋಚಿಸದೆ. ಅಷ್ಟು ಮಾಡು ಮಗನೆ ಎಂದು ನನ್ನನ್ನು ಅಲ್ಲಿಂದ ಕಳಿಸಿಕೊಟ್ಟಿತು.
ಇನ್ನೂ ಬೆಳಗಿನ ಪೂಜೆ ಆರಂಭಗೊಂಡಿರಲಿಲ್ಲ, ಸಾಲಲ್ಲಿ ಆತಂಕದಲ್ಲಿದ್ದ ಹೆಂಡತಿಗೆ ಸಮಾಧಾನ ಹೇಳಿದೆ, ಬಹಳ ಪ್ರಯತ್ನಿಸಿದಾದ ಬಳಿಕ ಅರ್ಚಕರು ದೊರಕಿದರು, ವಿವರಿಸಿದೆ, ವಿನಂತಿಸಿಕೊಂಡೆ. ಅದಕ್ಕವರು ದೇವಿ ಸನ್ನಿಧಿಯಲ್ಲಿ ಸಂಗೀತ ನಿಷಿದ್ಧ, ಆದರೆ ಧ್ವಜಸ್ತಂಭದ ಬಳಿ ಹಾಡಲಿಕ್ಕೆ ಅಭ್ಯಂತರವಿಲ್ಲ ಎಂದು ತಾಳ್ಮೆಯಿಂದಲೇ ಹೇಳಿದರು. ಆಕೆಯ ಕಡೆ ಮರಳಿದೆ, ವಿವರಿಸಿದೆ, ನಿಡುಸುಯ್ದಳು, ಅನ್ನಪೂರ್ಣೇಶ್ವರಿಯೂ ಒಂದೆ ಭೂಮಾತೆಯೂ ಒಂದೆ, ಎಲ್ಲಿ ಹಾಡಿದರೂ ತಾಯಿ ಕೇಳಿಸಿಕೊಳ್ತಾಳೆ, ಇದ್ಯಾಕೆ ನನಗೆ ಹೊಳೀಲಿಲ್ಲ ಎನ್ನುತ್ತ ಪುನಃ ನಿಡುಸುಯ್ದಳು. ಬೆಳಗಿನ ಪೂಜೆ ಇನ್ನೇನು ಸ್ವಲ್ಪ ಹೊತ್ತಲ್ಲಿ! ಅಷ್ಟರೊಳಗೆ ತಾವು ಅಲ್ಲೆಲ್ಲಾದರೂ!
ಧ್ವಜಸ್ತಂಭ ಕೈಬೀಸಿ ಕರೆಯಿತು, ಹೊರಟೆವು. ದಾರಿಯಲ್ಲಿ ಆಕೆ ಹೇಳಿದಳು ಎರಡು ತಿಂಗಳಾದವು ನಾನಿಲ್ಲಿಗೆ ಬಂದು, ಪ್ರಸಾದ ಇನ್ಮುಂದೆ ಇಲ್ಲಿ ಸಿಕ್ಕೋದು ದುರ್ಲಭ, ಸಿದ್ಧಗಂಗಾಕ್ಕೆ ಹೊರಡಬೇಕೆಂದಿರುವೆ, ಅಲ್ಲಿ ಎಷ್ಟು ದಿನವಿದ್ದರೂ ಯಾರೂ ಕೇಳಲ್ವಂತೆ! ನಿಜವೇನು? ಅಲ್ಲಿಯೇ ಹಾಡುತ್ತ ಕೊನೆಯುಸಿರು ಬಿಡ್ತೀನಿ, ಈ ದರಿದ್ರ ಎಲ್ಲಿದ್ದರೇನು! ಅಲ್ಲಿಗೆ ಹೋಗಲು ಬಸ್ಸು ಚಾರ್ಜು ಕೊಡುವಿ ತಾನೆ! ಎಂದು ಕೇಳಿದಳು, ಸಮ್ಮತಿಸಿದೆ.
ಧ್ವಜಸ್ತಂಭದ ನೆರಳು ಪಡುವಣದ ಕಡೆ ಹರಿಯಲು ಹಾತೊರೆಯಲಾರಂಭಿಸಿತ್ತು, ಭಕ್ತಾದಿಗಳ ಸರತಿಸಾಲು ದೀರ್ಘಗೊಳ್ಳುತ್ತಲೇ ಇತ್ತು, ಮಡಿಯುಡಿಯಿಂದ ಇದ್ದ ಯಾತ್ರಾರ್ಥಿಗಳು ತಾವು ಏನನ್ನೋ ಕಳೆದುಕೊಂಡಿರುವವರಂತೆ ಅವಸರದಿಂದ ಅಡ್ಡಾಡುತ್ತಿದ್ದರು. ಅವರ ಗಮನ ತೃಣಮಾತ್ರದವರಾದ ನಮ್ಮ ಕಡೆಗಿರಲಿಲ್ಲ. ಅಲುಮೇಲಮ್ಮ ಗರ್ಭಗುಡಿಗೆ ಅಭಿಮುಖವಾಗಿ ನಿಂತಳು, ಕರಗಳನ್ನು ಜೋಡಿಸಿ ಅಂಜಲೀಬದ್ದಳಾದಳು, ಕಣ್ಣಲ್ಲಿ ನೀರು ತುಂಬಿಕೊಂಡಳು, ಗದ್ಗದಿತಳಾದಳು, ಬಿಕ್ಕಳಿಸಿದಳು, ಸಾಸ್ಟಾಂಗಪ್ರಣಾಮ ಸಲ್ಲಿಸಿದಳು. ಮೇಲಕ್ಕೇಳಲು ತನ್ನ ಸ್ಥೂಲಕಾಯ ಸಹಕರಿಸಲಿಲ್ಲ, ಕೈಹಿಡಿದು ಮೇಲಕ್ಕೆಬ್ಬಿಸಿದೆ, ಅನ್ನಪೂರ್ಣೇಶ್ವರಿಯನ್ನು ತನ್ನೊಳಗೆ ಆವಹಿಸಿಕೊಂಡವಳಂತೆ ರಾಗಾಲಾಪನೆ ಆರಂಭಿಸಿದಳು, ಮಂದ್ರಸ್ಥಾಯಿಯಿಂದ ಇದ್ದಕ್ಕಿದ್ದಂತೆ ಆರೋಹಣಕ್ಕೇರಿದಳು. ತನ್ನದೆಷ್ಟಿದ್ದರೂ ಕಂಚಿನಕಂಠ, ರಾಗವೋ ಹಾಡೋ! ನಾಲ್ದೆಸೆಗೆ ಜಲಪಾತದೋಪಾದಿಯಲ್ಲಿ ದುಮ್ಮಿಕ್ಕಿತು, ಅಷ್ಟದಿಕ್ಕುಗಳಲ್ಲಿದ್ದ ಯಾತ್ರಾರ್ಥಿಗಳ ನಡಿಗೆ ಇದ್ದಕ್ಕಿದ್ದಂತೆ ಸ್ತಬ್ಧಗೊಂಡಿತು, ಅವರೆಲ್ಲರ ಪಂಚೇಂದ್ರಿಯಗಳು ಸ್ವಯಂಚಾಲಿತವಾಗಿ ಹಾಡಿನತ್ತ ಕೇಂದ್ರೀಕೃತಗೊಂಡವು, ಅದೇ ಸಮಯಕ್ಕೆ ಸರಿಯಾಗಿ ಪೂಜೆ ಆರಂಭಗೊಂಡ ಪರಿಣಾಮವಾಗಿ ತೆರೆಸರಿಯಿತಲ್ಲದೆ ದೇವಿಯ ದೃಶ್ಯ ಸಾಕ್ಷಾತ್ಕಾರವಾಯಿತು, ಅಲ್ಲದೆ ಪೂಜೆ ಸಂಬಂಧಿಸಿದ ಮಂತ್ರೋಚ್ಚಾರವೂ! ಇಲ್ಲಿ ಈಕೆಯ ಹಾಡು, ಅಲ್ಲಿ ಅವರ ಸಂಸ್ಕೃತ ಶ್ಲೋಕಗಳು! ಅವೆರಡರ ನಡುವೆ ಜುಗಲ್ ಬಂಧಿ ಏರ್ಪಟ್ಟಿತು, ಅವರಿವರೊಂದೇ ಅಲ್ಲದೆ ಸರತಿಸಾಲಲ್ಲಿದ್ದ ದೇವಿಯ ದರ್ಶನಾಪೇಕ್ಷಿಗಳು ತಮಗರಿವಿಲ್ಲದಂತೆ ಚಲಿಸಿ ಬಂದು ನಮ್ಮ ಸುತ್ತ ವರ್ತುಳಾಕಾರದಲ್ಲಿ ನೆರೆದರು, ಅದೂ ಮೂಕವಿಸ್ಮಿತರಾಗಿ. ಸುಮಾರು ಅರ್ಧ ತಾಸಿನವರೆಗೆ ನಡೆದ ಆ ಗಾತ್ರಕಛೇರಿಯು..
ವಿದುಷಿ ಅದುವರೆಗೆ ಮುಚ್ಚಿದ್ದ ಕಣ್ಣುಗಳನ್ನು ನಿಧಾನವಾಗಿ ತೆರೆದು ತಾಯಿಯ ಕಡೆ ನೋಡಿ ಕರಜೋಡಿಸಿದಳು, ವಾಸ್ತವಕ್ಕೆ ಮರಳಿದಳು, ನೆರೆದಿದ್ದ ಜನಸಂದೋಹದಿಂದ ಸ್ಥಿತಪ್ರಜ್ಞಳಾದ ತಾನು ವಿಚಲಿತಳಾಗಲಿಲ್ಲ, ಆದರೆ ನೆರೆದಿದ್ದ ಸಂಗೀತಾಭಿಮಾನಿಗಳು ಒಟ್ಟಿಗೆ ನಿಡುಸುಯ್ದರು, ಆಕೆಯ ಕಡೆ ಆರ್ತತೆಯಿಂದ, ಅಭಿಮಾನದಿಂದ, ಧೈನ್ಯತೆಯಿಂದ ನೋಡಿದರು, ಅಭಿಮಾನಿಗಳ ನಡುವೆ ಇದ್ದ ವ್ಯಕ್ತಿಯೊಬ್ಬ ಧಾವಿಸಿ ಮುಂದೆ ಬಂದ, ಸಮಕ್ಷಮ ಕೈಮುಗಿದು ನಿಂತ, ತಾನು ಕಾಫಿಪ್ಲಾಂಟರ್ ಎಂದೂ, ತನ್ನ ಮಗಳಿಗೆ ಸಂಗೀತ ಕಲಿಸಬೇಕೆಂದೂ ವಿನಂತಿಸಿದ, ಅದನ್ನು ತಾಯಿ ನಿರಾಕರಿಸಿದಳು, ದಣಿದವಳಂತೆ ಕೂತಳು. ಇನ್ನೊಬ್ಬ, ಮತ್ತೊಬ್ಬ, ಮಗುದೊಬ್ಬ ಹೀಗೆ. ನಾದದ ನದಿಗೆ ಅಣೆಕಟ್ಟು ನಿರ್ಮಿಸಲಾಗುವುದೆ! ಸಹ್ಯಾದ್ರಿಯನ್ನು ಪಾತಿಯಲ್ಲಿ ಅಳವಡಿಸಲಾದೀತೆ!
ದಡಗಳ ಆಸರೆ ಹರಿಯುವ ನದಿಗೆ ಮುಖ್ಯ, ಅರಣ್ಯಕ್ಕೆ ವ್ಯಾಘ್ರದ ಆಸರೆ ಮುಖ್ಯ, ವ್ಯಾಘ್ರಕ್ಕೆ ಅರಣ್ಯದ ಆಸರೆ ಅಷ್ಟೇ ಮುಖ್ಯ, ಅಲ್ಲಿಯೇ ಇದ್ದ ಪತ್ನಿ ಅನ್ನಪೂರ್ಣ ತನ್ನ ವ್ಯಾನಿಟ್ ಬ್ಯಾಗಿನಿಂದ ಐವತ್ತರ ನೋಟು ತೆಗೆದು ಆಕೆಯ ಮುಂದಿರಿಸಿ ಮರಳಿದಳು. ಉಳಿದವರೆಲ್ಲ ಹತ್ತರ ಐವತ್ತರ ನೂರರ ನೋಟುಗಳನ್ನು ಆಕೆಯ ಮುಂದೆ ಪೇರಿಸಿದರು. ಆ ಹಣವೂ ಆಕೆಯನ್ನು ಪರವಶಗೊಳಿಸಲಿಲ್ಲ, ಸಿದ್ಧಗಂಗೆಗೆ ಹೊರಡಲು ಬಸ್ಸು ಚಾರ್ಜು ಎಷ್ಟೆಂದು ಕೇಳಿದಳು, ಎರಡು ನೂರಾಗಬಹುದೆಂದು ಹೇಳಿದೆ. ನೂರರ ಎರಡು ನೋಟುಗಳನ್ನು ಮಾತ್ರ ಸೀರೆ ಸೆರಗಿನಲ್ಲಿ ಕಟ್ಟಿಕೊಂಡಳು, ಉಳಿದ ಹಣವನ್ನು ಬೊಗಸೆಯಲ್ಲಿ ತುಂಬಿಕೊಂಡು ನಿಧಾನವಾಗಿ ದೇವಾಲಯದ ಪ್ರಾಂಗಣದ ಕಡೆ ಹೆಜ್ಜೆ ಹಾಕಿದಳು, ತಾನೆಲ್ಲಿ ಅದನ್ನು ಹುಂಡಿ ಡಬ್ಬಿಯಲ್ಲಿ ಹಾಕುವಳೋ! ಆತಂಕವಾಯಿತು, ಇನ್ನೇನು ಹಾಕಬೇಕೆನ್ನುವಷ್ಟರಲ್ಲಿ ಮುಂಗೈ ಹಿಡಿದು ತಡೆದೆ, ಇಷ್ಟು ದಿವಸ ತಿಂದಿರೋ ಅನ್ನದ ಋಣ ತೀರಿಸಬೇಡವೇನಪ್ಪಾ, ಅಮ್ಮ ಮುಂದಿನ ದಾರಿ ತೋರಿಸಿದಳಲ್ಲ, ಅಷ್ಟು ಸಾಕು ನನಗೆ ಎಂದು ಅಪರೂಪಕ್ಕೆ ನಕ್ಕಳು, ನಿಜವೆನ್ನಿಸಿತು, ಹಿಡಿತ ಸಡಿಲಿಸಿದೆ, ಹಾಕಿ ಕೈಮುಗಿದು ಪುನಃ ವಾಪಸ್ಸಾದಳು. ಒಂದು ತಾಸಿನ ಬಳಿಕ..
ಆಕೆಯ ಲಗೇಜು ಇತ್ತೆಂದರೆ ಇತ್ತು, ಇರಲಿಲ್ಲವೆಂದರೆ ಇರಲಿಲ್ಲ. ನಿಜವಾದ ಲಗೇಜೆಂದರೆ ತನ್ನ ದೇಹ. ಸನ್ನದ್ದಳಾಗಿದ್ದಾಗಲೀ ಹೊರಟದ್ದಾಗಲೀ ವಿಳಂಬವಾಗಲಿಲ್ಲ. ಬಸ್ಸು ನಿಲ್ದಾಣದವರೆಗೆ ನನ್ನೊಂದಿಗೆ ತನ್ನ ಹಲವು ಅಭಿಮಾನಿಗಳು ಜೊತೆಯಾದರು. ಬೆಂಗಳೂರಿಗೆ ಹೊರಟಿದ್ದ ಬಸ್ಸು ಹತ್ತಿಸುವಾಗ ಒಬ್ಬರು ಆಕೆಯ ಕೈಹಿಡಿದರೆ ಇನ್ನೊಬ್ಬರು ಆಕೆಯ ಬ್ಯಾಗನ್ನು ಹಿಡಿದುಕೊಂಡರು, ಮಗುದೊಬ್ಬರು ಬೆಂಗಳೂರಿನವರೆಗೆ ಟಿಕೆಟ್ ತೆಗೆಸಿದರು, ಇನ್ನೂ ಒಬ್ಬರು ಕಂಡಕ್ಟರನಿಗೆ ಆಕೆಯ ಸೃಜನಶೀಲ ವ್ಯಕ್ತಿತ್ವವನ್ನು ನಾಲ್ಕೇ ನಾಲ್ಕು ಮಾತುಗಳಲ್ಲಿ ವರ್ಣಿಸಿದರು. ಅದಕ್ಕೆ ಆ ಖಾಕಿವಸ್ತ್ರಧಾರಿ ಆಕೆಯತ್ತ ಅಪಾದಮಸ್ತಕ ನೋಟಬೀರಿದ, ಆದರೆ ನಿಟ್ಟುಸಿರು ಬಿಡಲಿಲ್ಲ. ಕೆಲವು ನಿಮಿಷಗಳ ಬಳಿಕ ಬಸ್ಸು ಧೂಳೆಬ್ಬಿಸದೆ ಹೊರಟು ಅಗೋಚರವಾಯಿತು.
ಈ ಪ್ರಪಂಚದಲ್ಲಿ ಎಂಥೆಂಥವರಿದ್ದಾರಲ್ರೀ ಎಂದು ಪ್ರತಿಕ್ರಿಯಿಸುವ ಆರಂಭದಲ್ಲಿ ಪತ್ನಿ ಅನ್ನಪೂರ್ಣ ದಿಗ್ಬ್ರಮೆಗೊಂಡಿದ್ದಳು. ಇಂಥವರಿರೋದ್ರಿಂದಾಗಿಯೇ ಇದು ಪ್ರಪಂಚ ಅನ್ನಿಸಿಕೊಂಡಿರೋದು ಎಂದು ನಾನೂ ಹೇಳಿದೆ. ದೇವಿಯ ಸಾನ್ನಿಧ್ಯದಲ್ಲಿ ಒಂದು ರಾತ್ರಿ ಕಳೆಯುವುದರಿಂದ ಪುಣ್ಯ ಬರುವುದು, ಆಕೆಯ ಮಾತನ್ನು ಉಪೇಕ್ಷಿಸುವ ಧೈರ್ಯ ನನ್ನಲ್ಲಿರಲಿಲ್ಲ, ಒಪ್ಪಿ ವಾಸ್ತವ್ಯ ಹೂಡಿದ್ದ ವಸತಿಗೃಹದಿಂದ ಸಾಮಾನುಗಳನ್ನು ದೇವಾಲಯಕ್ಕೆ ತಂದಿರಿಸಿದೆ, ಜನಜಂಗುಳಿ, ಮೈಕೊರೆಯುವಂಥ ಚಳಿ, ನೆಲದ ಮರೆಯ ನಿಧಿಯಂಥ ಭಿಕ್ಷುಕರ ಚಿತ್ರಸಂತೆ! ನಿದ್ದೆ ಬಂದಿತಾದರೂ ಹೇಗೆ! ಕಣ್ಣುಮುಚ್ಚಿದ ಬೆನ್ನಲ್ಲೇ ರೆಪ್ಪೆ ತೆರೆದು ಪಿಳಿಪಿಳಿ ಕಣ್ಣು ಬಿಡುವುದು ಹೀಗೇ ಸಾಗಿತು ತುಂಬಾ ಹೊತ್ತಿನವರೆಗೆ. ದುಪ್ಪಟಿಯಿಂದ ತನ್ನ ಮುಖವನ್ನು ಅನಾವರಣಗೊಳಿಸಿದ ಅನ್ನಪೂರ್ಣ ನನ್ನೆರಡೂ ಕೈಗಳನ್ನು ಬಲವಾಗಿ ಹಿಡಿದುಕೊಂಡಳು, ಇಷ್ಟೊತ್ತಿಗೆ ಆಕೆ ಸಿದ್ದಗಂಗಾಮಠದಲ್ಲಿರಬಹುದಲ್ವಾ! ಎಂದು ಕೇಳಿದಳು, ಹ್ಹು! ಎಂದೆ.

***

ಮಲಗಿದ್ದರೆ ತಾನೆ ಎಚ್ಚರಗೊಳ್ಳುವುದು! ಅದೂ ಅಲ್ಲದೆ ವಿದುಷಿ ಅಲುಮೇಲಮ್ಮನಿಂದಾಗಿ ದೇವಿಯ ದರ್ಶನವಾಗಿರಲಿಲ್ಲ. ಭಕ್ತಾದಿಗಳು ಸಹ ನಮ್ಮಂತೆ ಮಲಗಿರಲಿಲ್ಲ, ಆಕಳಿಕೆ ಕೆಮ್ಮು ಸೀನುಗಳಂಥ ಉಪಾದಿಗಳಿಗೆ ಬರವಿರಲಿಲ್ಲ. ಆಗಾಗ್ಗೆ ಮೂಡಣದ ಕಡೆ ಕಣ್ಣಾಯಿಸುವುದು, ಬೆಳಗಿನ ಮುನ್ಸೂಚಕವಾದ ಬೆಳ್ಳಿಚುಕ್ಕಿ ಉದಿಸಿರುವುದೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳುವುದು, ಹೀಗೆ ಸಾಗಿತು ಕಾಲಕ್ಷೇಪ. ಅಂತೂ ಅದು ಉದಿಸಿದ್ದೂ ಅಲ್ಲದೆ ನಿಧನಿಧಾನವಾಗಿ ಮೇಲೇರಿತು, ಅರುಣೋದಯಪೂರ್ವದ ಚಳಿ ಹಿಮಹೊಗೆಯ ಪರಿವೇಷ ಧರಿಸಿತು. ಇಂದ್ರಜಾಲವೋ ಎಂಬಂತೆ ಕಾಡುಕಣಿವೆ, ಬೆಟ್ಟಗುಡ್ಡಗಳನ್ನು ತನ್ನ ಶ್ವೇತಸೆರಗಿನಲ್ಲಿ ಮರೆಮಾಚಿತು. ಬಯಲಸೀಮೆಯ ನನ್ನಂಥವರಲ್ಲಿ ಅಗಣಿತ ಮುಗ್ದತೆಯನ್ನು ತುಂಬಿತು. ಚಳಿ ನಮಗೇನೂ ಅಪರಿಚಿತವಲ್ಲ, ಅಪರಿಚಿತ ಅನುಭವೆಂದರೆ ಹೊಗೆಮಂಜು, ಅದನ್ನು ಅಮೂಲಾಗ್ರವಾಗಿ ಅನುಭವಿಸದೆ ಇರಲಾದೀತೆ! ಅಲ್ಲಲ್ಲಿ ತಿರುಗಾಡಿದ ಪರಿಣಾಮವಾಗಿ ಸಮಯ ಸರಿದದ್ದೇ ತಿಳಿಯಲಿಲ್ಲ. ಆಗ ವೇಳೆ ಆರು ಗಂಟೆ!
ಬಿಸಿನೀರಿಲ್ಲದಿದ್ರೇನಾಯ್ತು! ತಣ್ಣೀರನ್ನೇ ನಾಲ್ಕು ತಂಬಿಗೆ ಸುರಿದುಕೊಂಡು ಬೇಗ ಬನ್ನಿ, ಆಮೇಲೆ ಮಗನನ್ನು ಕರ್ಕೊಂಡು ನಾನು ಹೋಗಿಬರ್ತೀನಿ ಎಂದು ಹೇಳುತ್ತ ಪತ್ನಿ ಸೂಟ್ಕೇಸಿನಿಂದ ಬಾಚಣಿಕೆಯನ್ನು ಕೈಗೆತ್ತಿಕೊಂಡಳು. ಟವಲ್ಲನ್ನು ಹೆಗಲಿಗಿಳಿಬಿಟ್ಟುಕೊಂಡು ಹೊರಟೆ, ನನ್ನ ಪುಣ್ಯಕ್ಕೆ ಬಹುಪಾಲು ಸ್ನಾನಗೃಹಗಳು ಫಲಾನುಭವಿಗಳ ನಿರೀಕ್ಷೆಯಲ್ಲಿದ್ದವು. ಅವುಗಳ ಪೈಕಿ ನಟ್ಟನಡುವೆ ಇದ್ದ ಬಾತ್ರೂಮಿನ ಹತ್ತಿರಕ್ಕೆ ಹೋದೆ, ಇನ್ನೇನು ಮುಚ್ಚಿದ್ದ ಬಾಗಿಲನ್ನು ತೆರೆಯಬೇಕೆನ್ನುವಷ್ಟರಲ್ಲಿ ಒಳಗಡೆಯಿಂದ ರಾಗಾಲಾಪನೆ ಆರಂಭಗೊಂಡಿತು. ಒಂದುಕ್ಷಣ ರೋಮಾಂಚನಗೊಂಡೆ, ಅದೇ ರಾಗ, ಅದೇ ಧ್ವನಿ! ಸಂಗೀತಾಭಿಮಾನಿಗಳಲ್ಲಿ ಯಾರಾದರೂ ಆಕೆಯ ಹಾಡುಗಾರಿಕೆಯನ್ನು ಧ್ವನಿಮುದ್ರಿಸಿಕೊಂಡಿಬಹುದೆಂದು ಭಾವಿಸಿದೆ. ಯಾರಿರಬಹುದೆಂದು ನೋಡುವ ಸಲುವಾಗಿ ಕದವನ್ನು ಸ್ವಲ್ಪ ಓರೆ ಮಾಡಿ ಇಣುಕಿದೆ. ಆಶ್ಚರ್ಯವೆಂದರೆ ವಿದುಷಿ ಅಲುಮೇಲಮ್ಮ ಪದ್ಮಾಸನಯುಕ್ತಳಾಗಿ ಹಾಡುತ್ತ ಮೈಮರೆತಿದ್ದಳು. ಗಾಬರಿಯಿಂದ ಮರಳಿದೆನೋ ಅಲ್ಲಿಯೇ ನಿಂತಿದ್ದೆನೋ!

‍ಲೇಖಕರು avadhi

25 April, 2013

10 Comments

  1. N.VENKATESH

    hi boss wonderfull

  2. Basavanneppa.P.Kambar

    wonderful story sir

  3. ಜಿ.ಎನ್ ನಾಗರಾಜ್

    ಕರುಳು ಹಿಂಡುವ ಕಥೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಇನ್ನೂ ಕೊಟ್ಯಾಂತರ ಜನಕ್ಕೆ ಸ್ವಾತಂತ್ರ್ಯದ ಫಲ ಲಭಿಸಿಲ್ಲ. ಬಹಳ ಮುಖ್ಯವಾಗಿ ಮಹಿಳೆಯರಿಗೆ . ಹೀಗಾಗಿ ಅವರ ಪ್ರತಿಭೆ ಅರಳುವ ಮೊದಲೇ ಚಿವುಟಿ ಹಾಕಲಾಗುತ್ತಿದೆ. ಹಾಗೂ ಪ್ರತಿಭೆ ಅರಳಿಯೇ ಬಿಟ್ಟರೆ ಆಗ ಪ್ರತಿಭಾನ್ವಿತ ವ್ಯಕ್ತಿತ್ವಕ್ಕೂ ಆಕೆಯ ಸಾಮಾಜಿಕ ಪರಿಸರಕ್ಕೂ ನಡೆಯುವ ಸಂಘರ್ಷ ಯಾವ ಯಾವ ರೂಪಗಳನ್ನು ಪಡೆಯುತ್ತದೆಯೋ !

  4. Manju.M.Doddamani

    ವಿದುಷಿ ಅಲುಮೇಲಮ್ಮ ಕಣ್ಮುಂದೆ ಬಂದರು ಕಣ್ತುಂಬಿ ಬಂತು…

  5. mahantesh navalkal

    ಸರ್
    ನಿಮಗೂ ಮತ್ತು ಅನ್ನಪೂರ್ಣ ಅಕ್ಕ ಅವರಿಗೂ ಧನ್ಯವಾದಗಳು ಅವರಿಂದಲೇ ಇಂಥ ಅನುಭವ ನೀವು ಪಡೆದಿದ್ದು ಮುಂದಿನ ಕತೆಗಾಗಿ ಕಾಯುತ್ತೇನೆ.
    ಮಹಾಂತೇಶ ನವಲಕಲ್

  6. Anil Talikoti

    ಉಸಿರು ಬಿಗಿಹಿಡಿದು ಓದಿಸಿಕೊಂಡು ಹೋಯಿತು. ಹೆಪ್ಪುಗಟ್ಟಿದ ನೋವೆ ಗಾಯನವಾಗಿ ಹೊಹೊಮ್ಮಿದ ಅನುಭವ, ಆ ಪರಿಸರ, ಆ ಬೆಳಗಿನ ಬೆಡಗು ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿದೆ. ಕೊನೆಯಿಲ್ಲದ ಕಾಡುವ ಪ್ರಶ್ನೆಗಳ ಉತ್ತರ ಅನವಶ್ಯಕ ಎನ್ನುವ ಸ್ಥಿತಿಗೆ ತಳ್ಳುವ ಬರಹ.
    -ಅನಿಲ ತಾಳಿಕೋಟಿ

  7. lakshmishankarjoshi

    sir,adbhutavagide.bahala chennagide.aparoopaddu.lakshmishankarjoshi.

  8. lingaraju hassan

    sari, madam allige matte bandiddu hege mestre, bus hattisidvi andralla. annapoorne matte ake samgeetha kelalu kareasikondirbhude

  9. Vikram Hathwar

    nooraaru kathe baredoo maasada nimma kathana shaktiyalli entha aayaskaantavide….thnx!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading