ಅಹವಿ ಹಾಡು : ’ನಾನು ನನ್ನ ಮಗ, ಇಬ್ಬರ ಸೀಕ್ರೆಟ್ ಸೊಸೈಟಿ!’

ನನ್ನ ಮಗ ಥೇಟ್ ನನ್ನಂತೆಯೇ … ಅವನ ಮೂಗಿನ ನೇರಕ್ಕೆ ನಡೆದು ಮೈ ಮೇಲೆ ತೊಂದರೆ ಎಳೆದು ಹಾಕಿಕೊಳ್ಳುವಂಥವನು. ತೊಂದರೆ ಶುರುವಾಗುತ್ತಿದೆ ಅನ್ನುವ ಸುಳಿವು ಸಿಕ್ಕಿದಾಗಲಾದರೂ ಎಚ್ಚೆತ್ತು ಕೊಳ್ಳುತ್ತಾನಾ ಅಂದರೆ ಅದೂ ಇಲ್ಲ. ಸಣ್ಣ ಗಾಯವೊಂದು ಗ್ಯಾಂಗ್ರೀನ್ ಮಟ್ಟ ತಲುಪುವಷ್ಟು ಕೊಳೆಯುವವರೆಗೂ ಸುಮ್ಮನಿದ್ದು ಬಿಡುತ್ತಾನೆ. ಆ ನಂತರ ಕಾಲು ಕಟ್ ಮಾಡಬೇಕು ಅನ್ನುವ ಸ್ಥಿತಿ ಬಂದಾಗ ಎದ್ದು ಬಿದ್ದು ನನ್ನ ಹತ್ತಿರ ಓಡಿ ಬರುತ್ತಾನೆ. ನಾನು ಅವನನ್ನು ಬಯ್ಯುವುದಿಲ್ಲ … ಯಾಕೆಂದರೆ, ಅವನು ಥೇಟ್ ನನ್ನಂತೆಯೇ ಅಂತ ಮೊದಲಿಗೇ ಹೇಳಿಬಿಟ್ಟಿದ್ದೇನಲ್ಲ! ನಾನಾದರೂ ಸ್ಕೂಲಿನಲ್ಲಿರುವಾಗ ಕಡಿಮೆ ಗಲಾಟೆ ಮಾಡಿದವಳಲ್ಲ. ಹತ್ತನೆಯ ತರಗತಿಯ ರಿಸಲ್ಟ್ ಬಂದ ದಿನ ನಮ್ಮ ಗಣಿತದ ಮೇಷ್ಟ್ರು ‘ಸಧ್ಯ ಪಾಸಾಗಿ ನೀನು ಹೊರಡುವ ದಿನ ಬಂತು’ ಅಂತ ಹಿಗ್ಗಿದ್ದರು ಅಂದರೆ ನನ್ನ ಬಾಲಪ್ರತಿಭೆ ಇನ್ನೆಷ್ಟಿರಬೇಕು ಊಹೆ ಮಾಡಿ. ಹಾಗಾಗಿ ಅಂತ ಅಮ್ಮನ ಮಗನಾದ ನನ್ನ ಕುಲಪುತ್ರ ಮಾಡುವ ಯಾವ ಗಲಾಟೆಯೂ ನನಗೆ ಎಂದೂ ಅಸಹಜ ಅನ್ನಿಸುತ್ತಲೇ ಇರಲಿಲ್ಲ. ಅವನು ತೊಂದರೆಗೆ ಸಿಕ್ಕಿ ಕೊಂಡಾಗಲೆಲ್ಲ ನನ್ನ ಹತ್ತಿರ ಓಡಿ ಬರುವುದು ಮತ್ತು ನಾನು, ಅವನು ಪಿಸುಗುಟ್ಟಿಕೊಳ್ಳುತ್ತಾ ಒಳಗೊಳಗೇ ಆ ತೊಂದರೆಯನ್ನು ನಿವಾರಿಸಿಕೊಳ್ಳುವ ದಾರಿ ಹುಡುಕುವುದು ಮಾಮೂಲು.
ನಾವಿಬ್ಬರೂ ಪಿಸುಗುಟ್ಟಿಕೊಳ್ಳುವುದು ಯಾಕೆ ಅಂತ ನೀವು ಕೇಳುತ್ತೀರ ಅನ್ನುವುದು ನನಗೆ ಗೊತ್ತು … ಉತ್ತರ ತುಂಬ ಸಿಂಪಲ್, ನನ್ನ ಗಂಡನಿಗೆ ನನ್ನ ಮಗನ ಬದುಕಿನಲ್ಲಾದ ತೊಂದರೆಯ ಸುಳಿವು ಕೊಡಬಾರದು ಅನ್ನುವ ಕಾರಣಕ್ಕೆ ಈ ರೀತಿ ನಾವು ಪಿಸುಗುಟ್ಟಿಕೊಳ್ಳುತ್ತೇವೆ. ನಾನು ಹೀಗೆ ಹೇಳಿದ ಕೂಡಲೇ ನಿಮ್ಮ ಕಣ್ಣೆದುರು ಕೆಂಗಣ್ಣಿನ, ದೊಡ್ಡ ಮೀಸೆಯ, ಸಿಡುಕು ಮೋರೆಯ ಗಂಡಸೊಬ್ಬನ ಚಿತ್ರ ಮೂಡಿರುತ್ತದೆ ಅಲ್ಲವಾ? ಆತ ತುಂಬ ಸ್ಟ್ರಿಕ್ಟ್ ಇರುವುದರಿಂದ ಮಗನನ್ನು ಶಿಕ್ಷೆಗೆ ಗುರಿ ಪಡಿಸುತ್ತಾನೆ ಅನ್ನುವ ಹೆದರಿಕೆಯಿಂದ ನಾನು ಮತ್ತು ನನ್ನ ಮಗ, ನನ್ನ ಗಂಡನನ್ನು ದೂರವಿಡುತ್ತೇವೆ ಅನ್ನುವುದೂ ನಿಮ್ಮ ಮುಂದಿನ ಊಹೆಯಾಗಿರುತ್ತದೆ. ಅಸಲು ವಿಷಯ ಅದಲ್ಲ ಸ್ವಾಮಿ, ಒಂದೆರಡು ಘಟನೆಯ ಬಗ್ಗೆ ಹೇಳುತ್ತೇನೆ ತಾಳಿ, ಆಗ ನಿಮಗೇ ಅರ್ಥವಾದೀತು …
ಆಗ ನನ್ನ ಮಗ ಮೂರನೆಯ ಕ್ಲಾಸ್ ಪಾಸ್ ಆಗಿದ್ದ. ತಕ್ಕ ಮಟ್ಟಿಗೆ ಬುದ್ಧಿವಂತನಿದ್ದ. ಆದರೆ, ಆ ಸೆಂಟ್ರಲ್ ಸಿಲಬಸ್ ಅನ್ನುವ ಶನಿ ನಮ್ಮ ಬದುಕಿನ ರಸ ಘಳಿಗೆಗಳನ್ನೆಲ್ಲ ನಾಶ ಮಾಡಲು ಶುರು ಮಾಡಿತ್ತು. ಯಾವ ಯಾವುದೋ ರಾಜ್ಯಗಳ ಮೂಲ ನಿವಾಸಿಗಳ ಆಚಾರ-ವಿಚಾರ-ಉಡುಗೆ-ಊಟಗಳ ಬಗ್ಗೆಯೇ ಚಾಪ್ಟರ್‌ಗಟ್ಟಳೆ ವಿವರಣೆ ಇರುವ ಸಮಾಜ ಶಾಸ್ತ್ರ, ನಾನು ಡಿಕ್ಷನರಿ ಹಿಡಿದು ಅರ್ಥ ಹುಡುಕುವ ಸ್ಥಿತಿ ತಲುಪಿಸುತ್ತಿದ್ದ ಇಂಗ್ಲಿಷ್, ಕಬ್ಬಿಣದ ಕಡಲೆಯಂಥ ವಿಜ್ಞಾನ ಎಲ್ಲದರ ಜೊತೆ ಏಗಿ ಸುಸ್ತಾಗಿದ್ದ ಮಗನ ಕಷ್ಟ ನೋಡಲಾರದೇ (ಹಾಗೂ ನನ್ನ ಕಷ್ಟ ನೋಡಲಾರದೆ ಕೂಡಾ!), ನಾಲ್ಕನೇ ಕ್ಲಾಸಿಗೆ ಅವನನ್ನು ಸ್ಟೇಟ್ ಸಿಲಬಸ್‌ನ ಸ್ಕೂಲಿಗೆ ಹೊತ್ತು ಹಾಕಲು ತೀರ್ಮಾನಿಸಿದ್ದೆ. ಸ್ಕೂಲ್ ಸೇರಿದ ನಂತರ ಮಧ್ಯದಲ್ಲಿ ಶಾಲೆ ಬದಲಿಸುವ ಕೆಲಸ ಯಾವತ್ತಾದರೂ ಮಾಡಿದ್ದರೆ ನಿಮಗೆ ಈ ಕಷ್ಟ ಕೂಡಲೇ ಗೊತ್ತಾಗಿ ಬಿಡುತ್ತದೆ. ಎಷ್ಟೊಂದು ಸ್ಕೂಲುಗಳ ಮೆಟ್ಟಿಲು ಹತ್ತಿ ಇಳಿದಿದ್ದು! ಅರ್ಧದಷ್ಟು ಸ್ಕೂಲುಗಳಲ್ಲಿ ಸೆಂಟ್ರಲ್ ಸಿಲಬಸ್ಸೇ ಇದ್ದ ಕಾರಣ ನಾವೇ ಅವನ್ನು ಬಿಟ್ಟಿದ್ದಾಯ್ತು. ಇನ್ನು ಕೆಲವು ಸ್ಕೂಲುಗಳಲ್ಲಿ ಅವರ ಏರಿಯಾದಲ್ಲಿರುವವರಿಗೆ ಮಾತ್ರ ಸೀಟ್ ಅಂದರು. ಮತ್ತೆ ಕೆಲವು ಸ್ಕೂಲುಗಳು ಬರೀ ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲಾಗಿತ್ತು. ಇವೆಲ್ಲವನ್ನೂ ಬಿಟ್ಟು, ಉಳಿದ ಬೆರಳೆಣಿಕೆಯಷ್ಟು ಸ್ಕೂಲುಗಳು ಮಾತ್ರ ಉಳಿದವು.
ಅವುಗಳಲ್ಲಿ ಒಂದು ಶಾಲೆಯ ಹೆಡ್ ಮೇಷ್ಟ್ರು ಭಾರೀ ಸ್ಕೋಪ್ ತೆಗೆದುಕೊಳ್ಳುವ ಹಾಗೆ ಮಾತಾಡುತ್ತಿದ್ದರು. ನಾಳೆ ಬನ್ನಿ, ಮುಂದಿನ ವಾರ ಬನ್ನಿ, ಅಯ್ಯೋ ಸೀಟ್ ಖಾಲಿ ಇರೋ ಹಾಗೆ ಕಾಣ್ತಿಲ್ಲ, ನೀವು ಒಂದು ಕೆಲ್ಸ ಮಾಡಿ ನಿಮ್ಮ ಮಗನ್ನ ನಮ್ಮ ಸೆಂಟ್ರಲ್ ಸಿಲಬಸ್ ಶಾಲೆಗೆ ಸೇರಿಸಿ … ಹೀಗೇ ನಾನಾ ಕಾರಣಗಳನ್ನು ಹೇಳುತ್ತಾ ಹೋದರು. ನಾವೂ ಕಾರ್ಯವಾಸಿ ಕತ್ತೆ ಕಾಲು ಕಟ್ಟಬೇಕಿತ್ತಲ್ಲ, ಹಾಗಾಗಿ ಅವರನ್ನು ಅದ್ಭುತ ನಿರೀಕ್ಷೆಯಲ್ಲಿ ಭೇಟಿ ಆಗಿ, ಆ ನಂತರ ಜೋಲು ಮೋರೆ ಹಾಕಿ ವಾಪಸ್ ಬರುತ್ತಿದ್ದೆವು. ಇನ್ನೊಂದು ಶಾಲೆಯಲ್ಲಿ ಸೀಟ್ ಕೊಟ್ಟರು. ಆದರೆ ಈ ಸ್ಕೋಪ್ ಹೆಡ್ ಮಾಸ್ಟ್ರಿದ್ದ ಶಾಲೆ ನಮಗೆ ಹತ್ತಿರವಿದ್ದುದರಿಂದ, ಆ ಶಾಲೆಯಲ್ಲೇ ಹೇಗಾದರೂ ಮಾಡಿ ಸೀಟು ಪಡೆಯಬೇಕೆನ್ನುವುದು ನಮ್ಮ ಆಸೆ. ಆದರೆ ಸೀಟು ಸಿಕ್ಕ ಶಾಲೆಯಲ್ಲಿ ಅವತ್ತು ಅಡ್ಮಿಷನ್‌ಗೆ ಕೊನೆಯ ದಿನ. ಕೈಲಿದ್ದ ಸೀಟಿನ ಸ್ಕೂಲಿಗೆ ಅವನನ್ನು ದಬ್ಬ ಬೇಕಾ, ಇಲ್ಲವಾದರೆ ಈ ಸ್ಕೂಲಿಗೆ ಕಾಯಬೇಕಾ? ಇಲ್ಲಿ ಸಿಗದೇ ಹೋದರೆ? ಅಂತೆಲ್ಲ ನಾನಾ ಯೋಚನೆಗಳು. ಹಾಗಾಗಿ ಈ ಸ್ಕೂಲಿನ ಹೆಡ್ ಮೇಷ್ಟ್ರನ್ನ ಭೇಟಿಯಾಗಿ, ಬೇಡಿಕೊಂಡು ಸೀಟು ಸಿಗುತ್ತದಾ, ಇಲ್ಲವಾ ಅನ್ನುವುದನ್ನು ತಿಳಿದು ಕೊಳ್ಳಲೇ ಬೇಕಿತ್ತು. ನಾವು ಮೂವರೂ ಶಾಲೆಗೆ ಹೋದೆವು.

ಘಂಟೆಗಟ್ಟಳೆ ಕಾಯಿಸಿದ ನಂತರ ಹೆಡ್ ಮೇಷ್ಟ್ರು ದರ್ಶನ ಭಾಗ್ಯ ಕರುಣಿಸಿದರು. ನಾನು ‘ಸರ್ ದಯವಿಟ್ಟು ನನ್ನ ಮಗನಿಗೆ ಸೀಟ್ ಸಿಗುತ್ತದಾ ಇಲ್ಲವಾ ಹೇಳಿ. ನನಗಂತೂ ನಿಮ್ಮ ಶಾಲೆಗೇ ಮಗನನ್ನು ಸೇರಿಸಬೇಕು ಅನ್ನುವ ಆಸೆ. ಹಾಗಾಗಿ ನೀವು ಏನಾದರೊಂದು ತೀರ್ಮಾನ ಕೊಟ್ಟರೆ …’ ಅಂತ ರಾಗವೆಳೆಯುತ್ತಿರುವಾಗಲೇ ನನ್ನ ಗಂಡ ಕತ್ತೆ ಒದ್ದಂತೆ ‘ಸಾರ್ ನೋಡಿ, ನನ್ನ ಮಗನಿಗೆ ಬೇರೆ ಸ್ಕೂಲಲ್ಲಿ ಸಿಟ್ಟು ಸಿಕ್ಕಿದೆ. ಈಗೇನು ಅವನನ್ನು ಅಲ್ಲಿ ಅಡ್ಮಿಷನ್ ಮಾಡಿಸಲೋ ಅಥವಾ ನಿಮ್ಮ ಸ್ಕೂಲಲ್ಲಿ ಸೀಟ್ ಕೊಡ್ತೀರೋ’ ಅಂದುಬಿಟ್ಟ. ಮೊದಲೇ ಹೆಡ್ ಮೇಷ್ಟ್ರು … ಸಿಟ್ಟು ನೆತ್ತಿಗೇರಿ ‘ಅಲ್ಲಿಗೇ ಸೇರಿಸಿಕೊಳ್ಳಿ ಹೋಗ್ರೀ’ ಅಂತ ಮೂತಿಗೆ ಹೊಡೆದ ಹಾಗೆ ಉತ್ತರಿಸಿದರು. ಈ ಅರ್ಜುನ- ಬಭ್ರುವಾಹನರು ಆರು ತಿಳಿಯರು ನಿನ್ನ ಭುಜಬಲದ … ಅಂತ ಹಾಡಾಡಿಕೊಂಡು ಯುದ್ಧವಾಡಿ, ನನ್ನನ್ನುಮತ್ತು ನನ್ನ ಮಗನನ್ನು ಕುಕ್ಕಿ ಒಗೆದು, ಜಾಲಿಸಿ, ಹಿಂಡಿ, ಹರವಿದ್ದರು! ಆಮೇಲೆ ಕೈ ಕಾಲಿಗೆ ಬಿದ್ದು ಸೀಟು ದೊರಕಿಸಿಕೊಂಡ ನಂತರ ಯಾವಾಗ ನನ್ನ ಮಗನ ಪಾಲಿಗೆ ವರವಾಗುತ್ತಾನೋ, ಶಾಪವಾಗುತ್ತಾನೋ ಅಂತ ಗೊತ್ತಿಲ್ಲದೇ ನಾನು ಗಂಡನನ್ನು ಬಿಟ್ಟು ಮಗನ ಜೊತೆ ಒಂದು ರಹಸ್ಯ ವಿಶ್ವ ನಿರ್ಮಿಸಿಕೊಂಡೆ.
ಹೋಮ್ ವರ್ಕ್ ಮಾಡಲು ಬೇಸರವಾದಾಗ ತಿಂಗಳುಗಟ್ಟಳೆ ‘ಹೋಮ್ ವರ್ಕೇ ಕೊಟ್ಟಿಲ್ಲ’ ಅಂತ ನೀಟಾಗಿ ಸುಳ್ಳು ಹೇಳಿ ಕೊನೆಗೊಂದು ದಿನ ಟೀಚರ್ ಬರ ಹೇಳಿದಾಗ, ಕೋಳಿ ಕಾಲು ಅಕ್ಷರ ನೋಡಿ ರೋಸಿ ಹೋಗಿ ವಾರ್ನ್ ಮಾಡಲು ಕರೆಸಿದಾಗ, ಮಾರ್ಕ್ಸ್ ನೆಲ ಕಚ್ಚಿದಾಗಲೆಲ್ಲ ನಾನೊಬ್ಬಳೇ ಮಗನ ಜೊತೆ ಶಾಲೆಗೆ ಹೋಗಿ ಟೀಚರ್‌ಗಳಿಗೆ ಸಲಾಮು ಹಾಕಿ, ಎದುರಾದ ತೊಂದರೆಗಳನ್ನು ನಿವಾರಿಸಿಕೊಳ್ಳುವುದನ್ನು ಕಲಿತೆ. ಸುಮಾರು ವರ್ಷ ಹೀಗೇ ಕಳೆದಿತ್ತು. ನನ್ನ ಮಗ ಕಾಲೇಜಿಗೆ ಕಾಲಿಟ್ಟಿದ್ದ ಈಗ. ಆ ಭಂಡ ಬುದ್ಧಿಯೂ ವಯಸ್ಸಿಗೆ ತಕ್ಕ ಹಾಗೆ ಬೆಳೆಯುತ್ತಾ ಹೋಗಿತ್ತು! ಸ್ಕೂಲಿನಲ್ಲಿರುವಾಗ ‘ಥೂ ಈ ಸೋಷಿಯಲ್ ಸೈನ್ಸು, ಕನ್ನಡ ಎರಡೂ ಬೋರ್ ನನಗೆ. ಕಾಲೇಜಿಗೆ ಹೋದ್ಮೇಲೆ ನನಗಿಷ್ಟದ ಸಬ್ಜೆಕ್ಟ್ ಮಾತ್ರ ಇರತ್ತೆ. ಆಗ ನೋಡು ಹೇಗೆ ಓದ್ತೀನಿ ಅಂತ’ ಎಂದು ಆಶ್ವಾಸನೆ ನೀಡಿದ್ದ ಮಗರಾಯ ‘ಥೂ ಫಿಸಿಕ್ಸ್, ಕಂಪ್ಯೂಟರ್ ಸೈನ್ಸ್, ಗಣಿತ ಮಾತ್ರ ಇಷ್ಟವಾಗತ್ತೆ. ಈ ಕೆಮಿಸ್ಟ್ರಿ ಮತ್ತೆ ಸಂಸ್ಕೃತ ಸಖತ್ ಬೋರಿಂಗ್’ ಅನ್ನಲು ಶುರು ಮಾಡಿದ್ದ.
ಕಾಲೇಜಿಗೆ ಹೋಗುತ್ತಿದ್ದಾನೆ ಅಂತ ನಾನೂ ಆರಾಮವಾಗಿದ್ದೆ. ಅವನು ಕೆಮಿಸ್ಟ್ರಿ ಬೋರ್ ಅನ್ನುತ್ತ ಲ್ಯಾಬ್‌ಗೆ ಹೋಗದೇ ಅರ್ಧ ವರ್ಷ ಕಳೆದು ಬಿಟ್ಟಿದ್ದ. Attendance shortage! ಮತ್ತೆ ಅಪ್ಪ-ಅಮ್ಮನನ್ನು ಕರೆ ತರಲು ನೋಟಿಸ್ ಕೊಟ್ಟು ಕಳಿಸಿದರು. ನನ್ನ ಗಂಡನಿಗೂ ಇಷ್ಟು ಹೊತ್ತಿಗೆ ಸ್ವಲ್ಪ ವಯಸ್ಸಾಗಿತ್ತಲ್ಲ , ಬುದ್ಧಿ ಬಂದಿರಬಹುದು ಅಂತ ಎಣಿಸಿ ಅವನನ್ನೂ ಕರೆದುಕೊಂಡು ಹೋದೆ. ಕೆಮಿಸ್ಟ್ರಿ ಟೀಚರಮ್ಮನ ಎದುರು ನಿಲ್ಲುತ್ತಲೇ ಸಹಸ್ರ ನಾಮಾರ್ಚನೆ ಶುರು ಮಾಡಿದರು. ನಾನು ಸುಮ್ಮನೆ ನಿಂತಿದ್ದೆ ಅವರ ಮಾತಿಗೆಲ್ಲ ಒಪ್ಪಿಗೆಯಿರುವವಳ ಹಾಗೆ ಒಪ್ಪಿಗೆ ನೀಡುತ್ತಾ. ಅಷ್ಟರಲ್ಲಿ ಪತಿದೇವರು ಬಾಯಿ ತೆರೆದ ‘ನೀವು ಇಷ್ಟು ಕೊನೆಯವರೆಗೂ ಯಾಕೆ ಸುಮ್ಮನಿದ್ರಿ?’ ಅಂತ! ಅವರೇನೋ ಪಾಪ ಮಗನನ್ನು ಬಯ್ದು ಬುದ್ಧಿ ಹೇಳುತ್ತಾರೆ ಅಂತ ನಮ್ಮನ್ನು ಕರೆಸಿದರೆ, ಇವನು ಆ ಟೀಚರಮ್ಮನಿಗೇ ಪ್ರಶ್ನೆ ಹಾಕಲು ಶುರು ಮಾಡುತ್ತಾನೆ ಅಂತ ನಾನೂ ಎಣಿಸಿರಲಿಲ್ಲ. ಆಯಮ್ಮ ಉರಿದು ಬೀಳುತ್ತಾ ಆ ಜಾಗದಿಂದ ಹೊರಟೇ ಹೋದರು. ನಾನು ಅಯ್ಯೋ! ಮಗನ ಭವಿಷ್ಯವೇ ನನ್ನಿಂದ ದೂರ ಓಡುತ್ತಿದೆ ಅನ್ನುವ ಹಾಗೆ ಹೊರಲಾರದ ದೇಹ ಹೊತ್ತು, ಅವರ ಹಿಂದೆ ಓಡಿದೆ. ನನ್ನ ಮಗ ಮತ್ತು ನಾನು ಅಲ್ಲಿಂದ ಮುಂದೆ ಅವರಿಗೆ ಪಾದಕ್ಕೆ ಬಿದ್ದು ಎಕ್ಸ್ಟ್ರಾ ಕ್ಲಾಸ್ ತೆಗೆದುಕೊಂಡು ನನ್ನ ಮಗನಿಗೊಂದು ದಾರಿ ಮಾಡಿ ಅಂತ ಬೇಡಿಕೊಳ್ಳುವ ಹೊತ್ತಿಗೆ ಕುರಿ ಕೋಣ ಬಿದ್ದು ಹೋಗಿತ್ತು.

ಅದಾದ ನಂತರ ನನ್ನ ಮಗ ಇಂಜಿನಿಯರಿಂಗ್‌ಗೆ ಕಾಲಿಟ್ಟ. ಇನ್ನಾದರೂ ಕ್ಲಾಸಿಗೆ ಸರಿಯಾಗಿ ಹೋಗು, ನನ್ನನ್ನು ಕಾಲೇಜಿಗೆ ಬರುವ ಹಾಗೆ ಮಾಡಬೇಡ ಅಂತ ದೈನೇಸಿಯಂತೆ ಬೇಡಿದೆ. ಅವನೂ ಶಿಸ್ತಾಗಿ ತಲೆ ಆಡಿಸಿದ. ಆದರೆ ಕರ್ಮ ನೋಡಿ, ಈ ಸಲ ವಿಧಿಯೇ ಅವನ ವಿರುದ್ಧ ನಿಂತಿತ್ತು. ಇನ್ನೂ ಕಾಲೇಜು ಶುರುವಾಗುವಾಗಲೇ ಟೈಫಾಯಿಡ್ ಮತ್ತು ಜಾಂಡೀಸ್ ಎರಡೂ ಅಂಟಿಕೊಂಡು ಸುಮಾರು ಎರಡು ತಿಂಗಳು ಚಕ್ಕರ್. ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟರೂ ಪರೀಕ್ಷೆಗೆ ಕೂಡಿಸುವುದಿಲ್ಲ ಅನ್ನುವಂಥ ವಿಚಿತ್ರ ಕಾಲೇಜು ಅದು. ನಾನು ಮತ್ತೆ ಕಾಲೇಜಿಗೆ ಹೊರಟೆ. ಹುಷಾರಿಲ್ಲದ ಮಗನನ್ನು ಒಬ್ಬಳೇ ಸಂಭಾಳಿಸುವುದು ಸಾಧ್ಯವಿಲ್ಲ ಅಂತ ಗಂಡನನ್ನೂ ಜೊತೆಗೆ ಕರೆದೆ. ಅದೇ ನಾನು ಮಾಡಿದ ತಪ್ಪು! ಯಂಡಮೂರಿಯ ಕಾದಂಬರಿಯ ಹಾಗೆ ಹೇಳಬೇಕೆಂದರೆ ಆ ತಪ್ಪು ಏನೆಂಬುದು ನನಗೆ ಸರಿಯಾಗಿ ಅಲ್ಲಿಂದ ಒಂದು ಘಂಟೆ ಹತ್ತು ನಿಮಿಷ ಮೂವತ್ತ ಮೂರು ಸೆಕೆಂಡುಗಳ ನಂತರ ತಿಳಿಯಿತು!!
ಪ್ರಿನ್ಸಿಪಾಲ್ ಇದ್ದ ರೂಮಿಗೆ ಹೋಗಿ ಯಥಾಪ್ರಕಾರ ದ್ರಾಬೆ ಮುಖದಲ್ಲಿ ನಿಂತೆವು. ಆತನಿಗೋ ಜಗತ್ತಿನ ಎಲ್ಲ ವಿದ್ಯಾರ್ಥಿಗಳೂ ಕಳ್ಳರೇ ಅನ್ನುವ ನಂಬಿಕೆ. ನಾವು ಹಾಸ್ಪಿಟಲ್‌ಗೆ ಅಡ್ಮಿಟ್ ಆದ ರೆಕಾರ್ಡ್ಸ್ ತೋರಿಸಿದರೂ ‘ಆ ಥರ ರೆಕಾರ್ಡ್ಸ್ ಪ್ರೊಡ್ಯೂಸ್ ಮಾಡುವುದು ಕಷ್ಟವೇನಿಲ್ಲ’ ಅಂದುಬಿಟ್ಟರು ಹೃದಯ ಹೀನನಂತೆ. ನನಗೆ ಯಾಕೋ ತುಂಬ ಸಂಕಟವಾಗಿ ಹೋಗಿ ‘ಇಲ್ಲ ಸರ್, ಸುಳ್ಳು ಸರ್ಟಿಫಿಕೇಟ್ ಈ ರೀತಿಯದ್ದೆಲ್ಲ ತೋರಿಸಲು ನನ್ನಿಂದ ಆಗುವುದಿಲ್ಲ. ಇದು ನಿಜದ್ದು’ ಅಂದೆ. ಅಷ್ಟರಲ್ಲಿ ನನ್ನ ಪತಿದೇವ ಕಣಕ್ಕಿಳಿದ. ‘ಸಾರ್, ಅಟೆಂಡೆನ್ಸ್ ಎಷ್ಟು ಇರ್ಬೇಕು ಸಾರ್ ಮಿನಿಮಮ್ಮು?’ ಅಂದ. ಆತ ‘85%’ ಅಂದರು ಚುಟುಕಾಗಿ. ನನ್ನ ಗಂಡ ತೋಳು ಮಡಚಿ ‘ಸಾರ್, ಇದು ತೀರಾ ಜಾಸ್ತಿಯಾಯ್ತು. ಎಂಭತ್ತೈದು ಪರ್ಸೆಂಟ್ ಅಂದ್ರೆ ಅದು ಹೇಗೆ ಮೇಂಟೇಯ್ನ್ ಮಾಡಕ್ಕೆ ಸಾಧ್ಯ ಹೇಳಿ’ ಅಂತ ವಾದಕ್ಕೆ ನಿಂತ. ಆ ಪ್ರಿನ್ಸಿಪಾಲ್ ಕ್ಷಣ ಕಾಲ ಬೆಪ್ಪಾದರು. ಈ ರೀತಿ ಹೇಳುವ ಅಪ್ಪನನ್ನು ಮೊದಲ ಸಲ ಆತ ನೋಡುತ್ತಿದ್ದರು ಅನ್ನಿಸುತ್ತದೆ! ಅಲ್ಲಿಂದ ಮುಂದೆ ನನ್ನ ಗಂಡನ ಅದ್ಭುತ ವಾಗ್ವೈಖರಿ ಮುಂದುವರೆಯಿತು. ‘ನಾವು ಓದ್ತಿರುವಾಗ ನಮ್ಗೆ 75% ಮಿನಿಮಮ್ ಇತ್ತು ಸಾರ್. ನಮಗೆ ನೆಟ್ಟಗೆ 60% ಕೂಡಾ ಇರ್ತಿರಲಿಲ್ಲ. ಆಗೆಲ್ಲ ಈ ಥರ ಇರ್ಲಿಲ್ಲ ಸಾರ್. ಆರಾಮವಾಗಿ ಫೈನ್ ಕಟ್ಟಿದ್ರೆ ಅಟೆಂಡೆನ್ಸ್ ಸಿಗ್ತಿತ್ತು. ನಿಮಗೆ ನೆನಪಿದ್ಯಾ ಸಾರ್, ಆಗ ಒಂದು ಸೂರ್ಯಗ್ರಹಣ ಆಗಿತ್ತು .. ನಾವು ಎಕ್ಸಾಮ್ ಮಿಸ್ ಮಾಡಿ ಸೂರ್ಯಗ್ರಹಣ ನೋಡಕ್ಕೆ ಹೋಗಿದ್ವಿ. ಪರೀಕ್ಷೆ ಏನು ಸಾರ್ ಮತ್ತೆ ಬರತ್ತೆ, ಪೂರ್ತಿ ಸೂರ್ಯಗ್ರಹಣ ಸಿಗಕ್ಕೆ ಸಾಧ್ಯಾನಾ? ಪರೀಕ್ಷೆಗೇ ಹೆದರದ ನಾವು ಇನ್ನು ಕ್ಲಾಸನ್ನ ನೆಟ್ಟಗೆ ಅಟೆಂಡ್ ಮಾಡ್ತೀವಾ ನೀವೇ ಹೇಳಿ’ ಅಂದ. ಪ್ರಿನ್ಸಿಪಾಲ್ ಮುಖದಲ್ಲಿ ಸಿಟ್ಟು ತಾಂಡವವಾಡತೊಡಗಿತು. ‘ನಮ್ಮ ಕಾಲೇಜಲ್ಲಿ ದುಡ್ಡು ತಗೊಂಡು ಅಟೆಂಡೆನ್ಸ್ ಕೊಡೋ ಅಭ್ಯಾಸ ಎಲ್ಲ ಇಲ್ಲ’ ಅಂತ ಗಡುಸಾಗಿ ಹೇಳಿದರೆ ಈ ಮನುಷ್ಯ ಅಲ್ಲಿಗೂ ನಿಲ್ಲಿಸದೇ ‘ಸಾರ್, ಅದೆಲ್ಲ ಇರಬೇಕು. ಮಕ್ಳಿಗೆ ಏನಾದರೊಂದು ಆಪ್ಷನ್ ಇರಬೇಕು ಅಲ್ವಾ?’ ಅಂದ!!
ನಾನು ಇನ್ನು ಸುಮ್ಮನಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಅಂತಂದುಕೊಂಡು ನನ್ನ ಪಕ್ಕದಲ್ಲಿ ಕೂತಿದ್ದವನ ಕಾಲನ್ನು ಮೆತ್ತಗೆ ತುಳಿದೆ ‘ದಯವಿಟ್ಟು ಬಾಯಿ ಮುಚ್ಚು ಮಾರಾಯಾ’ ಅಂತ ಎಚ್ಚರಿಸುವಂತೆ. ಅವನು ತಗುಲುತ್ತಿದ್ದ ನನ್ನ ಕಾಲುಗಳ ಹತ್ತಿರದಿಂದ ಅವನ ಕಾಲನ್ನು ದೂರ ಸರಿಸಿ ಕೂತ! ಅಷ್ಟರಲ್ಲಿ ಅವರು ‘ಈಗಿನ ಮಕ್ಕಳಿಗೆ ಒಂಚೂರೂ ಡಿಸಿಪ್ಲಿನ್ ಇಲ್ಲ, ಏನಿಲ್ಲ. ಕಾಲೇಜಿಗೆ ಮೊಬೈಲ್ ತರಬೇಡಿ ಅಂದ್ರೆ ತರ್ತಾರೆ…’ ಇನ್ನೂ ಅವರ ಮಾತು ಮುಗಿಯುವ ಮುಂಚೆಯೇ ನನ್ನ ಗಂಡ ‘ಸಾರ್ ನಾವು ಟೆಕ್ನಾಲಜಿಯ ಪೂರ್ತಿ ಉಪಯೋಗ ಪಡ್ಕೋಬೇಕು. ಮೊಬೈಲ್ ಕೈಲಿ ಇಲ್ಲಾಂದ್ರೆ ಎಮರ್ಜೆನ್ಸಿಲಿ ಫೋನ್ ಮಾಡೋದು ಹೇಗೆ ಹೇಳಿ’ ಅಂದ. ಭಗವಂತಾ ಕಾಪಾಡೋ, ಇವನ್ನ ಬಾಯನ್ನ ಹೇಗಾದರೂ ಮುಚ್ಚಿಸೋ ಅಂತ ನಾನು ಮನಸ್ಸಿನಲ್ಲೇ ಬಾಯಿ ಬಡಿದುಕೊಳ್ಳಲು ಶುರು ಮಾಡಿದೆ. ಪ್ರಿನ್ಸಿಪಾಲ್ ‘ಅದಕ್ಕೇ ನಮ್ಮ ಕಾಲೇಜಲ್ಲಿ ಮೂಲೆ ಮೂಲೇಗೂ ಪಬ್ಲಿಕ್ ಫೋನ್ ಹಾಕ್ಸಿದೀವಿ. ಅಲ್ಲಿಂದ ಮಾಡಬಹುದಲ್ಲ’ ಅಂದರೆ ಈತ ‘ಸಾರ್ ಎಮರ್ಜೆನ್ಸಿ ಬಂದು ತಲೆ ತಿರುಗಿ ಬಿದ್ರೆ ಆಗ ಪೋನ್ ಬೂತ್ ಹುಡುಕಕ್ಕೆ ಆಗತ್ತಾ ನೀವೇ ಹೇಳಿ. ಇದಕ್ಕೆಲ್ಲಾ ನೀವು ಸ್ವಲ್ಪ consideration ತೋರಿಸಬೇಕು ….’ ಅಂತ ಹೆಂಗೆ ಪಾಯಿಂಟ್ ಹಾಕ್ದೆ ನೋಡು ಅನ್ನುವಂತೆ ಹೆಮ್ಮೆಯಿಂದ ನೋಡಿದ. ನಾನು ಹಿಂದೆ ನಿಂತಿದ್ದ ಮಗನ ಮುಖ ನೋಡಿದೆ. ಅದು ಕಪ್ಪಿಟ್ಟು ಹೋಗಿತ್ತು! ನನಗೆ ಈಗ ಇವನ ಬಾಯಿ ಹೇಗಾದರೂ ಮುಚ್ಚಿಸದಿದ್ದರೆ ಸಾಧ್ಯವೇ ಇಲ್ಲ ಅನ್ನಿಸಿ ಅವನ ಕಾಲನ್ನು ನನ್ನ ಕಾಲಿನಿಂದ ಹುಡುಕಿ ಒಂದಿಷ್ಟು ನೋವಾಗುವ ಹಾಗೆ ಜೋರಾಗಿ ಒದ್ದೆ. ‘ಕಾಲು ಆ ಕಡೆ ಇಟ್ಕೋ’ ಅಂದ ನನ್ನ ಕಡೆ ತಿರುಗಿ. ಅಲ್ಲಿಗೆ ನನಗೆ ಖಾತರಿಯಾಯ್ತು ಇವನಿಗೆ ಸಧ್ಯಕ್ಕೆ ಏಳುವ ಉದ್ದೇಶವಿಲ್ಲ ಅಂತ. ನಾನು ಎದ್ದು ನಿಂತು ‘ಸರ್, ಥ್ಯಾಂಕ್ ಯೂ’ ಅನ್ನುತ್ತ ಹೊರಗೆ ಬಂದೇಬಿಟ್ಟೆ. ನಾವಿಬ್ಬರೂ ಹೊರಟ ಮೇಲೆ ವಿಧಿಯಿಲ್ಲದೇ ನನ್ನ ಗಂಡನೂ ಹಿಂಬಾಲಿಸಿದ.
ಅಯ್ಯೋ! ಆ ವರ್ಷ ಅವನ ಹಾಲ್ ಟಿಕೆಟ್ ಕೈಗೆ ತರಿಸಿಕೊಳ್ಳುವಷ್ಟರಲ್ಲಿ ನರಕ ದರ್ಶನವಾಗಿ ಹೋಯ್ತು. ಎಲ್ಲ ಕಾಲಕ್ಕೂ ಬುದ್ಧಿ ಬಂದಿರಬಹುದು, ಈ ವರ್ಷ ಬಂದಿರಬಹುದು ಅಂತ ಕಲ್ಪನೆಯಲ್ಲಿ ಅವನ ಜೊತೆ ಹೋಗಿ ಹೋಗಿ ನರಳಿದ ಮೇಲೆ ಗೊತ್ತಾಯ್ತು ‘ಇಷ್ಟು ವರ್ಷ ಬಾರದ ಬುದ್ಧಿ ಇನ್ನೆಂದೂ ಬರುವುದು ಕಷ್ಟ’ ಅಂತ!! ಅಲಿಂದ ಮುಂದೆ ನಾನು ಮತ್ತು ನನ್ನ ಮಗ ಮತ್ತೆ ನಮ್ಮದೊಂದು ಪಾರ್ಟಿ ಕಟ್ಟಿಕೊಂಡು, ನನ್ನ ಗಂಡನಿಗೆ ತಿಳಿಯದಂತೆ ಗುಟ್ಟಿನಲ್ಲಿ ಎಲ್ಲ ಕಾರಸ್ಥಾನಗಳನ್ನು ನಡೆಸಲು ಶುರು ಮಾಡಿದೆವು ಅನ್ನುವಲ್ಲಿಗೆ ಜಗತ್ತಿನ believe it or not ಕತೆಯೊಂದು ಮುಗಿಯುತ್ತದೆ ….!!
 

‍ಲೇಖಕರು G

February 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. lakshmishankarjoshi.

    Tayi bharati divya muruti ramya chetana mooruti.antoo nanna pratinidhi neenu.maga nanu odi odi nakkevu.

    ಪ್ರತಿಕ್ರಿಯೆ
  2. Anonymous

    ಸುಮಾರು ಹದಿನಾರು ವರ್ಶಗಳ ಹಿ೦ದೆ ಪಿಸುಗುಟ್ಟಿದ್ದನ್ನು ಮತ್ತೆ ಮಕ್ಕಳ ಜೊತೆ ಪಿಸುಗುಟ್ಟಬೇಕು ಅ೦ತ ಅನ್ನಿಸುತ್ತಿದೆ. ನನ್ನ ಗ೦ಡ ಬಾಳ ಜಾಣ, ಸ್ಕೂ ಲಿನಲ್ಲಿನ ಸಹಸ್ರ ನಾಮಾರ್ಚನೆಯನ್ನು ನನ್ನ ಪಾಲಿಗೆ ಬಿಟ್ಟು ಮತ್ತೆ ಮನೆಯಲ್ಲಿ ಅದರ ಎರಡು ಪಟ್ಟು ಸಹಸ್ರ ನಾಮಾರ್ಚನೆ ಇರುತ್ತಿತ್ತು. ಅಮ್ಮ ಮತ್ತು ಮಕ್ಕಳ ಪಿಸುಗುಟ್ಟುವಿಕೆಯನ್ನು ಮತ್ತೆ ನೆನಪಿಸಿದ್ದಕ್ಕೆ ತು೦ಬ ಥಾ೦ಕ್ಸ್ ಭಾರತಿ ಅವರೆ.

    ಪ್ರತಿಕ್ರಿಯೆ
  3. amardeep.p.s.

    ಯಾವಾಗಲೂ ಅಮ್ಮ, “ಅಯ್ಯೋ ಕಂದಾ” ಅಂದರೂ ಅಪ್ಪ ಮಾತ್ರ “ಅಹಹಾಹಹಹಹಾ ರುದ್ರ ….. ವೀರಭಧ್ರ …………………”. ಅನ್ನುವುದು ನನ್ನ ಅನುಭವವೂ ಹೌದು… ಬಹಳ ಇಷ್ಟವಾಯಿತು.ಮೇಡಂ ನಿಮ್ಮ ಸೀಕ್ರೆಟ್ ಸೊಸೈಟಿ …..

    ಪ್ರತಿಕ್ರಿಯೆ
  4. N.VISWANATHA

    Maganige ishtaadamele buddhi bandiralebeku.Athavaaa…..Idellavoo gnaapaka iddare munde nenesikollalu chenna.Ideneyiddaroo baraha maatra sooperoo sooper
    N.Viswanatha

    ಪ್ರತಿಕ್ರಿಯೆ
  5. Renuka Nidagundi

    ಪಾಪ …ಸಾಧು ಕಣೇ ನಿನ್ ಗಂಡ ಭಾರತೀ….:))) ಮಸ್ತ ಆಗಿದೆ….:) ನಗ್ತಾನೇ ಇದೀನಿ ಕಲ್ಪಿಸಿಕೊಂಡು…

    ಪ್ರತಿಕ್ರಿಯೆ
  6. Kavya Nagarakatte

    ತುಂಬ ಚೆನ್ನಾಗಿದೆ ಭಾರತಿಯವರೇ, ಎಷ್ಟು ಸುಲಲಿತವಾಗಿ, ಪ್ರಾಮಾಣಿಕ ಧಾಟಿಯಲ್ಲಿ ಬರೆಯುತ್ತೀರಿ. ನಾನು ನನ್ನ ಗಂಡ ಇಬ್ಬರೂ ಬಿದ್ದು ಬಿದ್ದು ನಕ್ಕೆವು 🙂

    ಪ್ರತಿಕ್ರಿಯೆ
  7. Dr.D.T.Krishnamurthy.

    ಕೆಲವು ಸೂಕ್ಸ್ಮಗಳು ತಾಯಿ ಕರುಳಿಗೆ ಮಾತ್ರ ಅರ್ಥವಾಗುತ್ತವೆ.ಇದೇ ರೀತಿಯ ಎಷ್ಟೋ ವಿಷಯಗಳನ್ನು ನಮ್ಮ ಮನೆಯಲ್ಲೂ ತಾಯಿ ಮಕ್ಕಳೇ ಬಗೆ ಹರಿಸಿಕೊಳ್ಳುತ್ತಿದ್ದರು. 🙂

    ಪ್ರತಿಕ್ರಿಯೆ
  8. Santosh

    ಮಕ್ಳಿಗೆ ಏನಾದರೊಂದು ಆಪ್ಷನ್ ಇರಬೇಕು ಅಲ್ವಾ? 🙂 ಹಹಹಹ … ಇರಲೇ ಬೇಕು.. 🙂

    ಪ್ರತಿಕ್ರಿಯೆ
  9. Anuradha.B.Rao

    ಹಾಸ್ಯ ಜೊತೆಗೆ ವಾಸ್ತವ ಎರಡೂ ಸೇರಿ ಚೆನ್ನಾಗಿದೆ ಲೇಖನ . ನನ್ನ ಮಗನ ವಿಧ್ಯಾಭ್ಯಾಸದ ಸಮಯ ನೆನಪಾಯಿತು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: