ಅಹವಿ ಹಾಡು : ನಾನು ದೇವರಿಗೆ ಪವರ್ ಆಫ್ ಅಟಾರ್ನಿ ಕೊಟ್ಟಿದ್ದೆ ….


ದೇವರಿಗೆ ಪವರ್ ಆಫ್ ಅಟಾರ್ನಿ ಕೊಟ್ಟ ಕಥೆ ಶುರುವಾಗುವುದು ನನ್ನ ಇಸ್ಪೀಟ್ ಆಟದ ಚಟದಿಂದ. ಮೊದಲಲ್ಲಿ ಸ್ವಲ್ಪ ಜಾಸ್ತಿಯೇ ಪೀಠಿಕೆ ಹಾಕುತ್ತೇನೆ, ಬೇಸರಿಸಬೇಡಿ …
ನಮ್ಮ ದೇಶದ ನ್ಯಾಷನಲ್ ಗೇಮ್ ಯಾವುದು ಅಂದರೆ ಥಟ್ ಅಂತ ‘ಹಾಕಿ’ (ನಿಜದ ಲೆಕ್ಕದಲ್ಲಿ ಕ್ರಿಕೆಟ್ ಅನ್ನುವುದು ಸರಿ ಉತ್ತರವಾದರೂ …) ಅನ್ನುವ ಉತ್ತರ ಹೇಗೆ ಬರುತ್ತದೋ ಹಾಗೆ, ನಮ್ಮ ‘ಫ಼್ಯಾಮಿಲಿ ಗೇಮ್’ ಯಾವುದು ಅಂತ ನಮ್ಮ ಸಂಸಾರದ ಒಂದು ಸಣ್ಣ ಪಿಳ್ಳೆಯನ್ನು ಕೇಳಿದರೂ ‘ಕಾರ್ಡ್ಸ್’ ಅಂತ ಹೇಳಿಬಿಡುತ್ತದೆ! ನನ್ನ ಜನರೇಷನ್‌ವರೆಗಿನ ಎಲ್ಲರಿಗೂ ಆ ಆಟ ಆಡುವುದು ರಕ್ತದಲ್ಲೇ ಬಂದುಬಿಟ್ಟಿದೆ. ಯಾವುದೇ ಮದುವೆ, ಮುಂಜಿ, ಗೃಹಪ್ರವೇಶಗಳು ನಡೆಯುವಾಗಲೂ ಕಾರ್ಡ್ಸ್ ಆಡುವ ಒಂದು ಪ್ರೋಗ್ರಾಮ್ ಅನ್ನುವುದೂ ಡಿಸೈಡ್ ಆಗಿಹೋಗಿರುತ್ತದೆ. ಫಂಕ್ಷನ್ ಎಷ್ಟು ಮುಖ್ಯವೋ, ಕಾರ್ಡ್ಸ್ ಕೂಡಾ ಅಷ್ಟೇ ಮುಖ್ಯವಾದ ಸ್ಥಾನ ಪಡೆದುಬಿಟ್ಟಿದೆ. ವರಪೂಜೆಯ ದಿನ ರಾತ್ರಿ ಪೂರಾ ಕಾರ್ಡ್ಸ್ ಆಡಿ, ಬೆಳಿಗ್ಗೆ ಅರೆ ನಿದ್ದೆಯಲ್ಲಿ ಕಣ್ಣು ಊದಿಸಿಕೊಂಡು ಓಡಾಡುವುದು ನಮ್ಮ ಮನೆಗಳಲ್ಲಿ ಮಾಮೂಲಿನ ಕಥೆ. ವರಪೂಜೆಯ ದಿನ ರಾತ್ರಿ ಇಂಥ ಮಹತ್ಕಾರ್ಯ ನಡೆಯುವಾಗ ಆಟಗಾರರಿಗೆ ನಿದ್ದೆ ಬಾರದಿರಲಿ ಅಂತ ಕಾಫಿ ಸಪ್ಲೈ ಮಾಡಲು ಸ್ಪೆಷಲ್ ಆಗಿ ಒಬ್ಬರು ಅಡಿಗೆಯವರನ್ನು ಗೊತ್ತು ಮಾಡುವಷ್ಟರ ಮಟ್ಟಿಗೆ ಈ ಆಟದ ಹುಚ್ಚು ಮನೆಯಲ್ಲಿ.
ಹಾಗಂತ, ಸಾವಿರಾರು ರೂಪಾಯಿ ಸೋತು, ಮನೆ-ಮಠ ಮಾರಿಕೊಳ್ಳುವಂತ ದುಶ್ಚಟದವರು ನಾವು ಅಂತೆಲ್ಲ ತಪ್ಪು ಲೆಕ್ಕ ಹಾಕಿ ಬಿಡಬೇಡಿ … ನಾವು ಬುಕ್ಕಿಗೆ ಇಡುವ ಹಣ ತುಂಬ ತುಂಬ ಕಡಿಮೆ. ಆದರೆ, ಪಾಯಿಂಟ್‌ಗೆ ಸಾವಿರಾರು ರೂಪಾಯಿ ಸ್ಟೇಕ್ಸ್ ಇಟ್ಟಿರುವ ಥರ ಸೀರಿಯಸ್ಸಾಗಿ ನಾವು ಆಡುವುದನ್ನು ನೀವು ನೋಡಿದರೆ ಆಶ್ಚರ್ಯ ಬೀಳುತ್ತೀರಿ. ಬರೀ ಮದುವೆ ಮನೆ ಅಂತಲೂ ಅಲ್ಲ. ನೆಂಟರು ಯಾರಾದರೂ ಮನೆಗೆ ಬಂದಾಗ, ಟ್ರಿಪ್ ಹೋದಾಗ .. ಇಂಥ ಸಂದರ್ಭಗಳಲ್ಲಿ ಕಾರ್ಡ್ಸ್ ಪ್ಯಾಕ್ ಇಲ್ಲದೇ ಜೀವನ ಸಾಧ್ಯವೇ ಇಲ್ಲ. ಸಣ್ಣ ಮಕ್ಕಳ ಅಮ್ಮಂದಿರಿಗೆ ಆಡಲು ಸಹಾಯ ಮಾಡಲೂ ಎಲ್ಲರೂ ಸಿದ್ದ. ಆಟವಾಡದ ಯಾರೋ ಒಂದಿಬ್ಬರು ಬೇಬಿ ಸಿಟ್ಟಿಂಗ್ ಮಾಡಲು ‘ಸದಾ ನಿಮ್ಮ ಸೇವೆಯಲ್ಲಿ’ ಅನ್ನೋ ಹಾಗೆ ಕಾದಿರುತ್ತಾರೆ ಪಾಪ.
ನಾನು ಕೂಡಾ ಅದೆಷ್ಟನೆಯ ವಯಸ್ಸಿಗೆ ಈ ಆಟ ಕಲಿತೆ ಅಂತ ಕೂಡ ಮರೆತು ಹೋಗುವಷ್ಟು ಹಿಂದಿನ ದಿನಗಳಿಂದ ಈ ಆಟ ಆಡುತ್ತಿದ್ದೆ. ನಾವು ತುಂಬ ಹಿಂದೆ ಹರಿಹರದಲ್ಲಿದ್ದ ನಮ್ಮ ದೊಡ್ಡಮ್ಮನ ಮನೆಗೆ ಹೋದಾಗ ನಾನು ತುಂಬ ಚಿಕ್ಕವಳು. ಆಗ ನಮ್ಮನೆಯ ಎಲ್ಲರೂ ಕೂತು ಆಡುವಾಗ ನಾವು ಮಕ್ಕಳು ಕೂಡಾ ಕಾಫಿ ಸಪ್ಲೈ ಮಾಡುತ್ತಾ ಸಂಭ್ರಮದಿಂದ ರಾತ್ರಿ ಎಲ್ಲ ಓಡಾಡುತ್ತಿದ್ದುದು ಈಗಲೂ ನೆನಪಾದರೆ ಖುಷಿ. ಆಗಲೇ ನಾವು ಕೂಡಾ tricks of the trade ಕಲಿತದ್ದು ಅನ್ನಿಸುತ್ತದೆ. ಅದಾದ ಮೇಲೆ ನಾನು ಕಾಲೇಜಿಗೆ ಬರುವಷ್ಟರಲ್ಲಿ ಎಕ್ಸ್‌ಪರ್ಟ್ ಆಗಿಹೋಗಿದ್ದೆ ಈ ಆಟದಲ್ಲಿ. ಕಾಲೇಜಿನಲ್ಲಿ ಓದುತ್ತಿರುವಾಗ ನನ್ನ ಕಥೆ ನೋಡಬೇಕು ನೀವು. ಕಾಲೆಳೆದುಕೊಂಡು ಬಂದವಳು ಸೀದಾ ಮನೆಗೆ ಹೋಗುತ್ತಲೇ ಇರಲಿಲ್ಲ. ನಮ್ಮ ಮನೆಯ ಕೆಳಗಿನ ಮನೆಯಲ್ಲಿ ನನ್ನ ದೊಡ್ಡಪ್ಪನ ಮನೆಯಿತ್ತು. ನಾನು ದೊಡ್ಡಮ್ಮನ ಜೊತೆ ಒಂದು ಜ್ಯಾಕ್‌ಪಾಟ್ ಆಡಿದ ನಂತರವೇ ಮನೆಗೆ ಹೋಗುತ್ತಿದ್ದಿದ್ದು!
ಅವತ್ತು ಗೆದ್ದ ಅಥವಾ ಸೋತ ಹಣ ಕೈಗೇನೂ ಬರುತ್ತಿರಲಿಲ್ಲ. ನಾವು ಆ ಲೆಕ್ಕ ಬರೆಯಲೆಂದೇ ಶುಭಮಂಗಳದ ಹೇಮಾ ಥರ ಒಂದು ನೂರು ಪೇಜಿನ ನೋಟ್ ಬುಕ್ ಇಟ್ಟುಬಿಟ್ಟಿದ್ದೆವು. ಅದರಲ್ಲಿ + ಅಥವಾ – ಅಂತ ಹಿಂದಿನ ದಿನದ ಲೆಕ್ಕಕ್ಕೆ ಇದು ಸೇರುತ್ತಿತ್ತು ಅಷ್ಟೇ! ಆದರೆ, ನಾನು ಮತ್ತು ದೊಡ್ಡಮ್ಮ ಆಡುತ್ತಿದ್ದ ಸೀರಿಯಸ್‌ನೆಸ್ ಕಂಡರೆ ಅವತ್ತು ಗೆಲ್ಲುವ ಹಣದಲ್ಲಿ ಒಂದು ಸೈಟ್ ಕೊಂಡು ರಿಜಿಸ್ಟ್ರೇಷನ್ ಮಾಡಿಸಲು ಹೊರಡಬೇಕೇನೋ ಅಂದುಕೊಳ್ಳಬೇಕು!
ಅದಾದ ಮೇಲೆ ಮದುವೆಯಾಯ್ತು. ದಿನ ನಿತ್ಯ ಆಡುವ ಅಭ್ಯಾಸ ಕಳೆದುಹೋಯ್ತು. ಫಂಕ್ಷನ್ ಅಂತ ಬಳಗದವರು ಸೇರಿದಾಗ ಮಾತ್ರ ಆಡುವುದು ಬಿಡಲಿಲ್ಲ. ಗಂಡನ ಮನೆಯಲ್ಲೂ ಕಾರ್ಡ್ಸ್ ಆಡುವವರು ಇದ್ದರು. ಆದರೆ ಇಲ್ಲಿ ಒಂದೇ ವ್ಯತ್ಯಾಸ ಅಂದರೆ ಗಂಡಸರು ಮಾತ್ರ ಆಡುತ್ತಿದ್ದರು ಅಷ್ಟೇ. ಹೆಂಗಸರು ಯಾರೂ ಅದನ್ನು ಮುಟ್ಟುತ್ತಿರಲಿಲ್ಲ. ಮೊದ ಮೊದಲಲ್ಲಿ ನಾನೂ ಕಷ್ಟ ಪಟ್ಟು ಕೈ ಬಿಗಿ ಹಿಡಿದು ಸುಮ್ಮನೆ ಕೂರುತ್ತಿದ್ದೆ. ದಿನ ಕಳೆದ ಹಾಗೆ ಮೆಲ್ಲನೆ ನಾನೂ ಸೇರಿಕೊಂಡು ಆಡಲು ಶುರು ಮಾಡಿ, ಅವರಿಗೆಲ್ಲ ಶಾಕ್ ಕೊಟ್ಟಿದ್ದೆ. ಒಂದಷ್ಟು ದಿನ ಕಳೆದ ಮೇಲೆ ಎಲ್ಲರಿಗೂ ಅದು ಅಭ್ಯಾಸವಾಗಿ ಹೋಯ್ತು.
ಆ ನಂತರ ನಾನು ಕೆಲಸಕ್ಕೂ ಹೋಗಲು ಶುರು ಮಾಡಿದೆ, ಜೊತೆಗೆ ಮಗನೂ ದೊಡ್ಡವನಾಗುತ್ತಾ ಹೋದ… ನನ್ನ ಕಾರ್ಡ್ಸ್ ಹುಚ್ಚು ತುಂಬ ಕಡಿಮೆಯಾಗುತ್ತಾ ಹೋಯ್ತು. ನನ್ನ ಮಗ ಸಣ್ಣ ಕ್ಲಾಸ್‌ಗಳಲ್ಲಿದ್ದ. ನನ್ನ ಸಹಾಯ ಅವನಿಗೆ ಬೇಕಾಗುತ್ತಿತ್ತು. ಎಲ್ಲ ಅಮ್ಮಂದಿರ ಹಾಗೆ ಅವನ ಸುತ್ತಲೇ ಸುತ್ತುತ್ತಿತ್ತು ನನ್ನ ಬದುಕೂ. ಆಫೀಸು, ಮನೆ, ಮಗನ ಸ್ಕೂಲು, ಲಂಚ್ ಬಾಕ್ಸ್, ಹೋಮ್ ವರ್ಕ್, ಎಕ್ಸಾಮ್ ಇವುಗಳಲ್ಲಿ ಮುಳುಗಿಹೋದ ನನಗೆ ಉಳಿದ್ಯಾವುದಕ್ಕೂ ಸಮಯವೇ ಇರಲಿಲ್ಲ. ಈ ಥರ ಪಟ್ಟಿ ಕಟ್ಟಿದ ಕುದುರೆಯ ಹಾಗೆ ಓಡುತ್ತಿದ್ದ ಬದುಕಿನಲ್ಲಿ ಬದಲಾವಣೆ ಬಂದು ಬಿಟ್ಟಿತು ಒಂದು ದಿನ! ಅಪ್ಪ-ಅಮ್ಮನ ಫ಼್ರೆಂಡ್ಸ್ ಎಲ್ಲ ಸೇರಿಕೊಂಡು ಒಬ್ಬರ ಮನೆಯಲ್ಲಿ ಆಡಲು ಶುರು ಮಾಡಿದರು. ಅವರೆಲ್ಲ ರಿಟೈರ್ ಆಗಿದ್ದವರು. ಹಾಗಾಗಿ ಆಡಲು ಯಾವ ಅಡೆತಡೆಯೂ ಇರಲಿಲ್ಲ, ಹಾಗಾಗಿ ದಿನವೂ ಆಡುತ್ತಿದ್ದರು. ಆದರೆ ನನಗೆ ಅಷ್ಟೆಲ್ಲ ಸಮಯ ಇರುತ್ತಿರಲಿಲ್ಲ. ತುಂಬ ದಿನಗಳಿಂದ ಆಡಿಲ್ಲದ ನನಗೆ, ಈಗ ನಾನು ನನ್ನ ಖುಷಿಗೂ ಏನಾದರೊಂದು ಸಣ್ಣ ಪುಟ್ಟದು ಬೇಡವಾ ಅನ್ನುವ ತಾಕಲಾಟ ಶುರುವಾಯ್ತು. ಒಂದು ಸಲ ತಾಕಲಾಟ ಶುರುವಾಯ್ತೋ ಮನಸ್ಸು ಅದಕ್ಕೆ ನಾನಾ ಸಮಜಾಯಿಷಿ ಕೊಟ್ಟುಕೊಳ್ಳಲು ಶುರು ಮಾಡುತ್ತದೆ ಅಲ್ಲವಾ? ಹಾಗೇ ನಾನು ಕೂಡಾ ಏನೇನೋ ಕಾರಣ ಕೊಟ್ಟುಕೊಂಡು ಕೊನೆಗೆ ‘ವಾರಕ್ಕೆ ಒಂದು ದಿನ ಆಡಲು ಶುರು ಮಾಡ್ತೀನಿ’ ಅನ್ನುವ ನಿರ್ಧಾರಕ್ಕೆ ಬಂದೆ.
ಈ ಚಟಗಳಿವೆಯಲ್ಲ, ಅವು ಶುರುವಾಗುವುದು ಹೀಗೆಯೇ. ಒಂದೇ ದಿನ ಇಸ್ಪೀಟ್ ಆಟ, ದಿನಕ್ಕೊಂದೇ ಸಿಗರೇಟು, ಖುಷಿಗೆ ಮಾತ್ರ ಒಂದು ಪೆಗ್ಗು ಅಂತಲೇ ಶುರುವಾಗುವ ಇವುಗಳು, ಯಾವಾಗ ಚರ್ಮದ ಹಾಗೆ ಅಂಟಿಕೊಳ್ಳುತ್ತವೆ ಅಂತ ಗೊತ್ತಾಗುವುದೇ ಇಲ್ಲ … ಗೊತ್ತಾಗುವಷ್ಟರಲ್ಲಿ ಕೀಳಲು ಆಗುವುದೇ ಇಲ್ಲ. ನಾನು ಶುರುವಿನಲ್ಲಿ ವಾರಕ್ಕೆ ಒಂದು ದಿನ ಮಾತ್ರ ಆಡಿದೆ. ಒಂದಿಷ್ಟು ದಿನಗಳಾದ ನಂತರ ಆಟವಾಡಿ ಹೊರಡುವಾಗ ‘ಇನ್ನೂ ಏಳು ದಿನ ಕಾಯಬೇಕಾ’ ಅನ್ನಿಸಲು ಶುರುವಾಯ್ತು. ಆ ನಂತರ ವಾರಕ್ಕೆ ಎರಡು ದಿನ ಆಡಲು ಶುರು ಮಾಡಿದೆ. ಸಂಜೆ ಆಫೀಸಿನಿಂದ ಮನೆಗೆ ಬಂದು ಹೋಗಲು ಸಮಯವಿರುತ್ತಿರಲಿಲ್ಲ, ಹಾಗಾಗಿ ಕೆಲಸದಿಂದ ಹಾಗಿಂದ ಹಾಗೆಯೇ ಕಾರ್ಡ್ಸ್ ಟೇಬಲ್ಲಿಗೆ ಹಾರಲು ಶುರು ಮಾಡಿದೆ. ಮಗ ಅದೇನು ಓದಿಕೊಳ್ಳುತ್ತಿದ್ದನೋ, ಬಿಡುತ್ತಿದ್ದನೋ ಅಂತೆಲ್ಲ ಮೊದ ಮೊದಲಲ್ಲಿ ಆತಂಕವಿದ್ದಿದ್ದು ಬರಬರುತ್ತಾ ಅದೂ ಕಡಿಮೆಯಾಗುತ್ತಾ ಬಂತು. ಎರಡು ಮೂರಾಗಿ, ನಾಲ್ಕಾಕಿ, ಐದಾಗಿ ಕೊನೆಗೆ ವಾರದ ಏಳೂ ದಿನ ಆಡದೇ ಬದುಕು ಸಾಧ್ಯವೇ ಇಲ್ಲ ಅನ್ನುವಂತ ಸ್ಥಿತಿಗೆ ಬಂದುಬಿಟ್ಟೆ.
ಮೊದಲಲ್ಲಿ ಸಂಜೆ ಮನೆಗೆ ಬಂದ ಮೇಲೆ ಕವನ, ಸಣ್ಣ ಕಥೆ ಅಂತೆಲ್ಲ ಬರೆಯುತ್ತಿದ್ದ ನಾನು ಈಗ ಸಂಪೂರ್ಣ ಕಾರ್ಡ್ಸ್ ದಾಸಳಾದೆ. ಬರೆಯುವುದು ಮರೆತೇ ಹೋಗುತ್ತಾ ಬಂತು. ಆಟದಲ್ಲಿ ಗೆದ್ದ ದಿನ ಖುಷಿಯೋ ಖುಷಿ, ಸೋತ ದಿನ ಹ್ಯಾಪ್ ಮೋರೆ, ಸಣ್ಣ ಸಿಡುಕು, ತಲೆ ನೋವು, ಅಸಹನೆ ಎಲ್ಲ ಶುರುವಾಯ್ತು. ಏಕಾಂತದಲ್ಲಿ ಸದ್ದಿಲ್ಲದೆ ಘಂಟೆಗಟ್ಟಳೆ ಸಮಯ ಕಳೆಯುತ್ತಿದ್ದ ನಾನು ಈಗ ಈ ಗದ್ದಲ, ಸಿಡುಕು, ದುಡ್ಡು ಕಳಕೊಂಡ ಸಿಟ್ಟು ಇವುಗಳಲ್ಲಿ ಕಳೆದೇ ಹೋದೆ. ಸಂಜೆಗಳಲ್ಲಿ ಒಂದಿಷ್ಟು ಟ್ರೆಡ್ ಮಿಲ್ ಮೇಲೆ ನಡೆದು ಬೆವರಿಳಿಸುತ್ತಿದ್ದವಳು, ಈಗ ಅದನ್ನೂ ಮರೆತೆ. ಆಫೀಸಿನ ಟೇಬಲ್ಲಿನ ಎದುರಿಂದ ಮತ್ತೊಂದು ಟೇಬಲ್ಲಿನ ಮುಂದಕ್ಕೆ ಡೈರೆಕ್ಟ್ ಶಿಫ಼್ಟ್! ಮಾನಸಿಕವಾಗಿ ಬದಲಾಗಿದ್ದಲ್ಲದೇ ದೈಹಿಕವಾಗೂ ಜಡ್ಡಾಗಿ ಹೋದೆ. ರಕ್ತ ಸಂಚಾರ ಕಡಿಮೆಯಾಗಿ ಕಾಲೆಲ್ಲ ಊದಲು ಶುರುವಾಯ್ತು. ಆದರೂ ಈ ಚಟದಿಂದ ಆಚೆ ಬರಲು ಸಾಧ್ಯವಾಗಲೇ ಇಲ್ಲ.

ಹೀಗೇ ಅದರಲ್ಲೇ ಮುಳುಗಿದ್ದ ದಿನಗಳಲ್ಲೇ ಅದು ನಡೆದಿದ್ದು! …
ನಾವು ಕಾರ್ಡ್ಸ್ ಆಡುತ್ತಿದ್ದ ಮನೆಯಾತನಿಗೆ ವಯಸ್ಸಾಗಿತ್ತು. ಸಿಕ್ಕಾಪಟ್ಟೆ ಮುಂಗೋಪದ ವ್ಯಕ್ತಿ. ನಾನೇನೂ ಕಡಿಮೆ ಮುಂಗೋಪಿಯಾಗಿರಲಿಲ್ಲ. ಹಾಗಾಗಿ ನಮ್ಮಿಬ್ಬರ ನಡುವೆ ಆಗೀಗ ಮಾತಿನ ಚಕಮಕಿ ನಡೆಯುವುದು ಮಾಮೂಲಾಗಿ ಹೋಗಿತ್ತು. ಮೊದಲಲ್ಲಿ ಫ಼್ರೆಂಡ್ಲಿಯಾಗಿ ಆಡುತ್ತಿದ್ದೆವು ನಾವೆಲ್ಲ. ಯಾರೋ ಏನೋ ತಿಂಡಿ ತಂದು, ಎಲ್ಲರೂ ಹಂಚಿಕೊಂಡು ತಿಂದು, ಖುಷಿಯಾಗಿ ಆಟವಾಡುತ್ತಿದ್ದೆವು. ಬರಬರುತ್ತಾ ಸ್ಟೇಕ್ಸ್ ಹೆಚ್ಚುತ್ತಾ ಹೋಯಿತು. ಅದು ಹೆಚ್ಚಾದ ಮೇಲೆ ಸೋತವರ ಗೊಣಗೊಣ, ಗೆದ್ದವರ ನಗು, ದುಡ್ಡು ಕಡಿಮೆ ಇದ್ದವರು ಸಾಲ ಹೇಳುವುದು, ಮತ್ಸರ ಎಲ್ಲವೂ ಹೆಚ್ಚಾಗುತ್ತಾ ಹೋಯಿತು. ನಾನು ಕೂಡಾ ಇವೆಲ್ಲ ಕಲ್ಯಾಣ ಗುಣಗಳ ಸಾಕಾರವಾದೆ. ಅವತ್ತೊಂದು ದಿನ ಆ ವಯಸ್ಸಾದಾತ ತುಂಬ ಸೋತಿದ್ದರು. ನಾನು ಗೆದ್ದಿದ್ದೆ. ಹಾಗಾಗಿ ಅವತ್ತಿನ ಮಟ್ಟಿಗೆ ನಾನು ಖಳನಾಯಕಿಯಾಗಿದ್ದೆ. ಒಂದು ಆಟ ಮುಗಿದ ನಂತರ ಪೋಸ್ಟ್ ಮಾರ್ಟಮ್ ನಡೆಸುತ್ತಾ ಕೂತಿದ್ದೆ, ಪಕ್ಕದಲ್ಲಿದ್ದವರೊಡನೆ. ಆತ ಇದ್ದಕ್ಕಿದ್ದ ಹಾಗೆ ಮುಖ ಕೆಂಚಗೆ ಮಾಡಿಕೊಂಡು ನನ್ನ ಮೇಲೆ ಕೂಗಾಡಲು ಶುರು ಮಾಡಿದರು. ನಾನೂ ಸುಮ್ಮನಿರದೇ ‘ನನ್ನ ಮೇಲೆ ಯಾಕೆ ಕೂಗಾಡ್ತಿದ್ದೀರಾ ಅಂತ ಕಾರಣ ಹೇಳಿ. ಸುಮ್ ಸುಮ್ನೆ ಸಿಡುಕಿದರೆ, ನಾನೂ ಕಿರುಚಾಡ್ತೀನಿ’ ಅಂದೆ. ಅಷ್ಟು ಹೇಳಿದ್ದೇ ತಡ, ಆತ ಸ್ಫೋಟಗೊಂಡು ಒಂದಿಷ್ಟು ಹೊತ್ತು ಕಿರುಚಾಡಿದರು. ಆ ನಂತರ ‘ಮೊದಲು ನನ್ನ ಮನೆ ಬಿಟ್ಟು ಹೊರಡು. ಮತ್ತೆ ನನ್ನ ಮನೆಗೆ ಯಾವತ್ತೂ ಕಾಲಿಡಬೇಡ’ ಅಂದುಬಿಟ್ಟರು. ಇಡೀ ಜೀವಮಾನದಲ್ಲೇ ಯಾರಿಂದಲೂ ಅಂತ ಮಾತು ಕೇಳದ ನಾನು ಅವಮಾನದಿಂದ ಕುಸಿದು ಹೋದೆ. ಗೆಟ್ ಔಟ್ ಅಂತ ಅನ್ನಿಸಿಕೊಳ್ಳುವ ಸ್ಥಿತಿಗೆ ಬಂದೆನಲ್ಲಾ ಅಂತ ಅಳಲು ಶುರು ಮಾಡಿದೆ. ಒಂದೆರಡೇ ನಿಮಿಷದಲ್ಲಿ ರೋಷಗೊಂಡು ‘ಇನ್ನೆಂದಾದರೂ ನಿಮ್ಮ ಮನೆಯ ಹೊಸಿಲು ತುಳಿಯುತ್ತೇನಾ ನೋಡಿ… ನೀವೇ ಕರೆದರೂ ಬರುವವಳಲ್ಲ’ ಅಂತ ಶಪಥ ಮಾಡಿ ಅಲ್ಲಿಂದ ಭರ ಭರ ಅಂತ ಹೊರಟುಬಿಟ್ಟೆ.
ಸಿಟ್ಟಿನಲ್ಲಿ ಆ ಶಪಥ ಮಾಡಿ ಆಚೆಯೇನೋ ಬಿದ್ದಿದ್ದೆ. ಆದರೆ ರಕ್ತದ ಕಣಕಣದಲ್ಲಿ ಆ ಚಟ ಬೆರೆತುಹೋಗಿತ್ತಲ್ಲ, ಅದನ್ನು ಹೇಗೆ ತಣಿಸುವುದು? ಸಂಜೆಯಾದರೆ ಹುಚ್ಚು ಹಿಡಿಯುವ ಹಾಗಾಗುತ್ತಿತ್ತು. ಮಾನ ಮರ್ಯಾದೆ ಬಿಟ್ಟು ಮತ್ತೆ ಹೋಗಲಾ ಅಂತೆಲ್ಲ ಅಂದುಕೊಳ್ಳುತ್ತಿದ್ದೆ. ಆದರೂ ಸಧ್ಯ ಹೋಗದೇ ಉಳಿದೆ. ಸಂಜೆಗಳಲ್ಲಿ ಮಗನ ಜೊತೆ ಪಾಠಕ್ಕೆ ಕೂತುಕೊಳ್ಳುವ ಅಭ್ಯಾಸ ತಪ್ಪೇ ಹೋಗಿತ್ತು. ಅದನ್ನು ಮತ್ತೆ ಶುರು ಮಾಡಲೂ ಮನಸ್ಸಾಗದೇ ಒದ್ದಾಡಿದೆ. ಒಂಥರಾ ಡಿಪ್ರೆಷನ್. ಅದರಿಂದ ಬಿಡಿಸಿಕೊಳ್ಳಲು, ಅದರಷ್ಟೇ ಪವರ್‌ಫ಼ುಲ್ ಆದ ಮತ್ತೊಂದೇನಾದರೂ ಬೇಕಿತ್ತು ಬದುಕಿಗೆ. ಅದು ಯಾವುದು, ಯಾವುದು ಅಂತ ಹುಡುಕಾಡಿದರೆ ದಾರಿಯೇ ಸಿಗುತ್ತಿಲ್ಲ. ಏಕಾಂತವನ್ನು ಪ್ರೀತಿಸುತ್ತಿದ್ದ ನನಗೀಗ ಅದು ‘ಒಂಟಿತನ’ ಅನ್ನಿಸಲು ಶುರುವಾಯ್ತು. ಮನಸ್ಸಿನಲ್ಲೇ ಸುಟ್ಟುಹೋದೆ ಒಂದಿಷ್ಟು ದಿನಗಳು. ಮತ್ತೆಲ್ಲಾದರೂ ಆಡಲು ಹೋಗಲಾ ಅಂದುಕೊಂಡವಳಿಗೆ, ಯಾಕೋ ಅದಕ್ಕೂ ಮನಸ್ಸಾಗಲಿಲ್ಲ. ‘ಈ ಕಾರ್ಡ್ಸ್‌ನಿಂದ ಇಂಥ ಮಾತೆಲ್ಲಾ ಕೇಳಬೇಕಾಯ್ತಲ್ಲಾ’ ಅನ್ನುವ ಕಾರಣಕ್ಕೆ ಆ ಆಟದ ಮೇಲೆಯೇ ಜಿಗುಪ್ಸೆ ಬಂದುಹೋಗಿತ್ತು.
ವಿಧಿಯಿಲ್ಲದೇ ಮತ್ತೆ ಓದಲು ಶುರು ಮಾಡಿದೆ. ಒಂದಷ್ಟು ದಿನ ಅದರಲ್ಲಿ ಮನಸ್ಸು ನಿಲ್ಲಲಿಲ್ಲವಾದರೂ, ಬರಬರುತ್ತಾ ಮತ್ತೆ ಓದಿನಲ್ಲಿ ಆಸಕ್ತಿ ಕುದುರುತ್ತಾ ಹೋಯ್ತು. ಮತ್ತೆ ಬರೆಯಬೇಕು ಅನ್ನಿಸಲು ಶುರುವಾಯ್ತು. ಆದರೆ ನನ್ನ ಕಲ್ಪನೆಗಳ ಟ್ಯೂಬ್‌ನಲ್ಲೆಲ್ಲಾ ಬರೀ ಬ್ಲಾಕ್‌ಗಳು. ಹಾಗಾಗಿ ಬರೆಯಲು ಕೂತರೆ ತಲೆ ಖಾಲಿ, ಹಾಗಾಗಿ ಹಾಳೆಯೂ ಖಾಲಿ. ಅದೊಂಥರಾ frustration ಶುರುವಾಯ್ತು. ಆದರೂ ಬಿಡದೇ ಹಠ ಹಿಡಿದೆ. ಸಣ್ಣದ್ದೇನನ್ನೋ ಬರೆಯುವ ಪ್ರಯತ್ನ ಮಾಡುತ್ತಲೇ ಇರುತ್ತಿದ್ದೆ. ಎಷ್ಟೋ ತಿಂಗಳು (ಅಥವಾ ವರ್ಷಗಳೇ ಆಗಿ ಹೋಗಿದ್ದವೇನೋ …) ಆದ ನಂತರ ಬರೆಯುವ ಅಭ್ಯಾಸ ಮತ್ತೆ ಕೈಗೂಡಿತು. ಕವನಗಳು ಎದೆಯಲ್ಲಿ ಮೊಳೆತಾಗ ಅದೆಷ್ಟು ಸಂಭ್ರಮ ಪಟ್ಟೆನೋ. ಬದುಕು ಮತ್ತೆ ಹಳಿಯ ಮೇಲೆ ಬಂದಿತ್ತು …
ಒಂದು ವರ್ಷವೇ ಕಳೆದು ಹೋಗಿತ್ತು. ಒಂದು ದಿನ ಬೆಳಿಗ್ಗೆ ಬೆಳಿಗ್ಗೆಯೇ ಬಾಗಿಲು ಬಡೆದ ಸದ್ದು. ಬಾಗಿಲಾಚೆ ನಿಂತಿದ್ದವರು ನನ್ನನ್ನು ಬಯ್ದು ಮನೆಯಿಂದ ಓಡಿಸಿದಾತ. ‘ನಿಮ್ಮನೇಲಿ ಕಾಫಿ ಕುಡೀಬೇಕು ಅನ್ನಿಸ್ತು… ಬಂದೆ’ ಅಂದರು! ‘ಬನ್ನಿ ಬನ್ನಿ’ ಅಂದೆ. ಇಬ್ಬರೂ ಕೂತು ಕಾಫಿ ಕುಡಿದೆವು. ‘ನಾನು ಅವತ್ತು ನಿನ್ನ ಬಯ್ದುಬಿಟ್ಟೆ. ನೀನು ಅದನ್ನೇ ಮನ್ಸಲ್ಲಿಟ್ಕೊಂಡು ಬರೋದೇ ಬಿಟ್ಟೆ. ನಾನು ಅಂದಿದ್ದನ್ನ ಮರೆತು ಮತ್ತೆ ಮನೆಗೆ ಬಾ, ಆಡು …’ ಅಂದರು. ‘ಖಂಡಿತಾ ಬರ್ತೀನಿ ಅಂಕಲ್’ ಅಂದೆ. ನನಗೆ ಗೊತ್ತಿತ್ತು ನಾನು ಮತ್ತೆ ಎಂದೂ ಅಲ್ಲಿ ಕಾಲಿಡುವುದಿಲ್ಲ ಎಂದು … ಬದುಕು ಒನ್ ವೇ ದಾರಿ, ಯಾವತ್ತೂ ವಾಪಸ್ ಆ ದಾರಿಯಲ್ಲಿ ಹೋಗಬಾರದು. ಹೋದರೆ ಫ಼ೈನ್ ಕಟ್ಟಬೇಕಾಗುತ್ತದೆ ಎಂದೂ ಗೊತ್ತಿತ್ತು …

***

ನನ್ನ ಬದುಕು ಹೀಗೆಯೇ … ಎರಡು ದಾರಿಗಳು ಎದುರಿರುವಾಗ ಯಾವಾಗಲೂ ತಾಕಲಾಟ. ಈ ದಾರಿ ಸರಿಯೋ, ಆ ದಾರಿ ಸರಿಯೋ ಅಂತ. ಸಾಕಷ್ಟು ಯೋಚಿಸಿ ಕೊನೆಗೆ ಯಾವುದೋ ಒಂದು ದಾರಿಯಲ್ಲಿ ಹೊರಟು, ಸ್ವಲ್ಪ ಕಾಲ ನಡೆದ ನಂತರ ಆ ದಾರಿ ಸರಿಯಿಲ್ಲ ಅಂತ ಸಂಕಟಪಟ್ಟು, ಬದುಕು ಒನ್ ವೇ ಆದ್ದರಿಂದ ಹಿಂದೆ ಬರಲು ದಾರಿಯಿಲ್ಲದೇ ಸಂಕಟ ಪಡುವಾಗ … ಆಗ … ದೇವರು ಎದುರಾಗುತ್ತಾನೆ! ನಾನು ಯೋಚಿಸಿ ಯೋಚಿಸಿ ಹೈರಾಣಾಗಿ ನಿದ್ರೆ ಹೋಗಿ ಕಣ್ಣು ಬಿಡುವಷ್ಟರಲ್ಲಿ ಅವನು ಒಂದು ದಾರಿಯನ್ನು ನೀಟಾಗಿ ಮುಚ್ಚಿ ಹಾಕಿ, ನಾನು ಮತ್ತೆಂದಾದರೂ ಭಂಡತನದಿಂದ ಆ ಮುಳ್ಳಿನ ದಾರಿಯ ಮೇಲೆಯೇ ಕಾಲಿಟ್ಟರೆ ಅಂತ ಎಕ್ಸ್ಟ್ರಾ ಕೇರ್‌ಫ಼ುಲ್ ಆಗಿಬಿಟ್ಟು ಮರ ಗಿಡ ಬೆಳೆಸಿ, ಹಾದಿ ಎಲ್ಲಿತ್ತು ಅಂತ ಸುಳಿವೂ ಸಿಗದಂತೆ ಕಾಡು ಬೆಳೆಸಿ ಬಿಟ್ಟಿರುತ್ತಾನೆ. ಹಾಗಾಗಿ ನಾನು ವಿಧಿಯಿಲ್ಲದೇ ಇರುವ ಒಂದು ದಾರಿಯಲ್ಲೇ ನಡೆಯಲು ಶುರು ಮಾಡುತ್ತೇನೆ. ತುಂಬ ದಿನ ಬಿಟ್ಟು ಬಂದ ದಾರಿ ಕಾಡುತ್ತದೆ, ಅಳುತ್ತೇನೆ, ನೋಯುತ್ತೇನೆ. ಹಾಗೆ ಅಳುತ್ತಲೇ ನಡೆಯುತ್ತ ಇರುತ್ತೇನೆ, ಅದನ್ನಂತೂ ನಿಲ್ಲಿಸಿರುವುದಿಲ್ಲ. ಹಾಗೆ ನಡೆಯುತ್ತ, ನಡೆಯುತ್ತ ಇರಬೇಕಾದರೆ ಯಾವತ್ತೋ ಒಂದು ದಿನ ಜ್ಞಾನೋದಯವಾಗುತ್ತದೆ ‘ಅರೆ! ನಾನು ಈ ದಾರಿಯಲ್ಲಿನ ನಡಿಗೆಯನ್ನು ನನಗೇ ಅರಿವಿಲ್ಲದಂತೆ ಎಂಜಾಯ್ ಮಾಡಲು ಶುರು ಮಾಡಿದ್ದೇನಲ್ಲ!!’ ಎಂದು. ಹಾಗೊಂದು ಜ್ಞಾನೋದಯವಾದಾಗ ಅರ್ಥವಾಗುತ್ತದೆ … ನನ್ನ ಎದುರಿಗಿದ್ದ ಎರಡು ದಾರಿಗಳಲ್ಲಿ ಈಗ ನಾನು ನಡೆದು ಬಂದಿದ್ದೇ ಸರಿ ಹಾದಿಯಾಗಿತ್ತು ಎಂದು ಮತ್ತು ನಿರ್ಧಾರ ತೆಗೆದುಕೊಳ್ಳಲು ಅಸಮರ್ಥಳಾಗಿದ್ದ ನಾನು, ನನ್ನ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ದೇವರಿಗೆ ಪವರ್ ಆಫ್ ಅಟಾರ್ನಿ ಕೊಟ್ಟಿದ್ದೆ ಎಂದು…
All is well, that ends well … ಅಷ್ಟೇ …
 

‍ಲೇಖಕರು G

March 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. Balu Vl

    Nice one kerp writing…
    ……uncle ge excuse madi when he asked forgive adu humanity if you excue you will be GOD….ahaaa artha agbekadre…kamala hasan movie. …Veerumandi and Anbeshivam nodi…..

    ಪ್ರತಿಕ್ರಿಯೆ
    • Ramesh

      ನಿಮ್ಮ ಚಟದ ಬಗ್ಗೆ ನೀವು ಅಕ್ಷರ ರೂಪದಲ್ಲಿ ತೆರದಿಟ್ಟ ರೀತಿ ಮನಮುಟ್ಟುವಂತಿದೆ Madam.

      ಪ್ರತಿಕ್ರಿಯೆ
  2. viswa bagaloor

    ಪಬ್ಲಿಕ್ ಆಗಿ ಬಯ್ದು ಪ್ರೈವೇಟ್ ಆಗಿ ಸಾರೀ ಹೇಳಿದರೆ ಪ್ರಯೋಜನವಿಲ್ಲ ಪಬ್ಲಿಕ್ ಆಗಿಯೇ ಸಾರೀ ಆಗಬೇಕಿತ್ತು.ಅಥ ಮಾಡಿದ್ದು ಎಸ್ಕೇಪ್ ಅಷ್ಟೇ.ಕೇಳಿದರೆ ಅವಳಿಗೆ ಮರ್ಯಾದೆ ಇಲ್ಲ ಬಂದಳು ಅಂತ ಹೇಳಿ ಜಾರಬಹುದಲ್ಲ .ಈ ರೀತಿಯ ಜನ ದ್ಯರ್ಯ ವಿಲ್ಲದ ಹೇಡಿಗಳು.ಈ ಘಟನೆ ನಡೆದನಂತರ ನಾನೂ ಅಲ್ಲಿಗೆ ಹೋಗುತ್ತಿಲ್ಲ .೫ ವರುಷದ ಮೇಲಾಯ್ತು .ಬರಹ ಮಾತ್ರ ಸೂಪರ್ .
    ನ.ವಿಶ್ವನಾಥ

    ಪ್ರತಿಕ್ರಿಯೆ
  3. Aparna Rao

    praamaaNika baraha.. kaDeya nirNaayaka baravaNige ..beLagina ottaDakke, bisilige koDehiDidu be cool antaarallaa haage tampaada baraha. 🙂

    ಪ್ರತಿಕ್ರಿಯೆ
  4. amardeep.ps

    ಯಪ್ಪಾ ಯಪ್ಪಾ ….. ಇಸ್ಪೀಟು ಎಲೆಯೇ … ಏನು ನಿನ್ನ ಲೀಲೆ …. ಮೇಡಂ … ನಾನು ನಮ್ ಫ್ರೆಂಡ್ಸ್ ಜೊತೆ ಕಲೀಬೇಕು ಅಂತಾನೆ ಕುಂತರೆ ಈ ಜನ್ಮಕ್ಕೆ ನೀನ್ ಕಲಿಯಲ್ಲ ಜಾಗ ಖಾಲಿ ಮಾಡಲೇ ಅನ್ನಿಸಿಕೊಂಡವನು …. ಆದರೆ ಒಮ್ಮೆ ಆಟದ ಕಲೆ ಕಲಿತ ನನ್ನ ಗೆಳೆಯರೆಲ್ಲ ಹೀಗೆ … ಟೈಮ್ ಸಿಕ್ಕರೆ ಸಾಕು ತಕ್ಕಂಬಾರ್ಲಾ ಪ್ಯಾಕು …. ಅನ್ನೋರೇ ……

    ಪ್ರತಿಕ್ರಿಯೆ
  5. Kiran

    ನನ್ನ ಬದುಕು ಹೀಗೆಯೇ … ಎರಡು ದಾರಿಗಳು ಎದುರಿರುವಾಗ ಯಾವಾಗಲೂ ತಾಕಲಾಟ….ನನ್ನ ಎದುರಿಗಿದ್ದ ಎರಡು ದಾರಿಗಳಲ್ಲಿ ಈಗ ನಾನು ನಡೆದು ಬಂದಿದ್ದೇ ಸರಿ ಹಾದಿಯಾಗಿತ್ತು.. Frostean analysis. Remember “The road not taken” by Robert Frost? Dualities are MUST in every life. Very nice “look back”!

    ಪ್ರತಿಕ್ರಿಯೆ
  6. Shwetha Hosabale

    ಚೆನ್ನಾಗಿದೆ ನಿಮ್ಮ ಇಸ್ಪೀಟ್ ಕಥೆ…ಮೊದಲು ನಮ್ಮೂರ ಕಡೆಯೂ ತುಂಬಾ ಆಡುತ್ತಿದ್ದರು…ಹೆಂಗಸರಲ್ಲ, ಗಂಡಸರು. ನಿಜವಾಗಿಯೂ ಆ ಚಟ ಹಿಡಿದುಕೊಂಡರೆ ಬಿಡಿಸಿಕೊಳ್ಳುವುದೆಷ್ಟು ಕಷ್ಟ ಅಂಥ ಚೆನ್ನಾಗಿ ವಿವರಿಸಿದ್ದೀರಿ…ಚಿಕ್ಕಂದಿನಿಂದ ಆ ಆಟದ ಬಗ್ಗೆ ತುಂಬಾ ಸಿಟ್ಟು..ದ್ವೇಷ…ಈಗಲೂ ಇದೆ…ಬರೆದರೆ ಅದೇ ಒಂದು ಕಥೆಯಾದೀತು!

    ಪ್ರತಿಕ್ರಿಯೆ
  7. Rashmi

    super madam…eradu daarigalalli yavdo ondanna aayke madkobeku amele adanne enjoy maadtivi 🙂

    ಪ್ರತಿಕ್ರಿಯೆ
  8. umavallish

    Bharathi doddamma maneyalli Mysoorinalli CARDS nasadagara sambrama nanu nodidde:)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: