ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ದಿಲ್ಲಿ ಡೈರಿಯ ಪುಟಗಳು’ ಭಾನುವಾರ ನಿಮ್ಮ ಕೈಗೆ

ಕರ್ನಾಟಕದ ರೇಣುಕಾ ನಿಡಗುಂದಿಯವರನ್ನು ಬದುಕು ಕೊಂಡೊಯ್ದದ್ದು ದೆಹಲಿಗೆ. ದೆಹಲಿಯನ್ನು ಆಮೇಲೆ ಅವರು ತಮ್ಮದಾಗಿಸಿಕೊಂಡರು, ಹನಿ ಹನಿಯಾಗಿ.

ಹೀಗೆ ತಮ್ಮದಾದ ದೆಹಲಿಯ ಬಗ್ಗೆ ರೇಣುಕಾ ಅವರು ಬರೆದ ಪುಸ್ತಕ ’ದಿಲ್ಲಿ ಡೈರಿಯ ಪುಟಗಳು’.

’ಕಾಡು ಹೂವಿನ ಸೊಲ್ಲು’ ಲೇಖನಗಳ ಮೂಲಕ ’ಅವಧಿ’ ಓದುಗರಿಗೂ ರೇಣುಕಾ ಪರಿಚಿತರು.

ಅವರ ಈ ಪುಸ್ತಕ ಅಹರ್ನಿಶಿ ಪ್ರಕಾಶನದ ಮೂಲಕ ಈ ಭಾನುವಾರ ಬಿಡುಗಡೆ ಆಗುತ್ತಿದೆ.

ಪುಸ್ತಕಕ್ಕೆ ರೆಹಮತ್ ತರೀಕೆರೆಯವರು ಬರೆದ ಮುನ್ನುಡಿಯ ಒಂದು ಭಾಗ, ಪುರುಷೋತ್ತಮ ಬಿಳಿಮಲೆಯವರ ಬೆನ್ನುಡಿ ಮತ್ತು ಕಾರ್ಯಕ್ರಮದ ಆಹ್ವಾನ ಪತ್ರಿಕೆ ನಿಮಗಾಗಿ.

ರೆಹಮತ್ ತರೀಕೆರೆ

ಮುನ್ನುಡಿ…

ಇಲ್ಲಿರುವ ಜೀವನ ಪ್ರೀತಿ ಮತ್ತು ಮಾನವ ಸಂಬಂಧಗಳ ಸ್ವರೂಪವು ವಿಶಿಷ್ಟವಾಗಿದೆ. ಯಾವುದೇ ಊರು ಅದರ ಬೃಹತ್ ಕಟ್ಟಡಗಳ ಮೂಲಕ, ಪಾರ್ಕು ಹೋಟೆಲು ಪ್ರವಾಸಿ ತಾಣಗಳ ಮೂಲಕ ನಮ್ಮದಾಗುವುದಿಲ್ಲ; ಅದು ಅಲ್ಲಿರುವ ಜನರ ಜತೆ ಬೆಳೆಯುವ ನಮ್ಮ ಮನುಷ್ಯ ಸಂಬಂಧಗಳ ಮೂಲಕ ಅಂತರಂಗಕ್ಕೆ ಇಳಿಯುತ್ತದೆ. ಧಾರವಾಡದಿಂದ ವಲಸೆ ಹೋದ ಲೇಖಕಿ, ದೂರದ ಪರಕೀಯವಾದ ದೆಹಲಿಯಲ್ಲಿ ಬದುಕುತ್ತ, ಅದನ್ನು ತಮ್ಮೂರನ್ನಾಗಿ ಪರಿವರ್ತಿಸಿಕೊಳ್ಳುವ ಪರಿ ಸ್ವಾರಸ್ಯಕರವಾಗಿದೆ. ಇದಕ್ಕಾಗಿ ಲೇಖಕಿ ಸೂಕ್ಷ್ಮವಾಗಿ ಕುತೂಹಲದಿಂದ ಆಸುಪಾಸಿನ ಜನರನ್ನು ಅವರ ವರ್ತನೆ ಮಾತುಕತೆ ಔದಾರ್ಯ ಸಣ್ಣತನ ಗಮನಿಸತೊಡಗುತ್ತಾರೆ.

ಮೊದಲಿದ್ದ ಶಂಕೆ ಬೇಸರ ಹಿಂಜರಿಕೆಗಳು ಅವರ ಜತೆ ಮಾತಿಗಿಳಿಯುತ್ತ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದಂತೆ ಕರಗತೊಡಗುತ್ತವೆ. ಊರು ತನ್ನೆಲ್ಲ ಕೊಳಕುತನ  ಬಿಸಿಲು ಚಳಿ ಹಸಿರು ಒಳ್ಳೆತನಗಳ ಜತೆಗೆ ಅಂತರಂಗಕ್ಕೆ ಇಳಿಯತೊಡಗುತ್ತದೆ. ಇಲ್ಲಿನ ಎಲ್ಲ ಬರೆಹಗಳು ಮನುಷ್ಯ ಸಂಬಂಧಗಳ ಮೂಲಕ ಮೈತಳೆಯುತ್ತದೆ. ಮನೆಗೆಲಸದ ಸರಸ್ವತಿಯನ್ನು ಕುರಿತು ಒಂದು ನದಿಯ ಹೆಸರಿನಲ್ಲಿ ಇಲ್ಲಿರುವ ಬರೆಹವು ಮನುಷ್ಯ ಸಂಬಂಧಗಳಿಗೆ ಕೊಟ್ಟಿರುವ ದೊಡ್ಡ ಗೌರವದ ಪ್ರತೀಕದಂತಿದೆ. ಇಲ್ಲಿ ಪ್ರಾಂತ್ಯ ಭಾಷೆ ಧರ್ಮಗಳ ಗಡಿಯಾಚೆ ಸ್ಥಾಪನೆಯಾಗುವ ಮಾನವ ಸಂಬಂಧಗಳ ಬಗ್ಗೆ ಒಂದು ಬಗೆಯ ವಿಸ್ಮಯವಿದೆ. ದೂರದ ಆಫ್ರಿಕೆಯಿಂದ ಬಂದು ಆಸ್ಪತ್ರೆಯಲ್ಲಿ ಭೇಟಿಯಾಗುವ ಸೇಯಿ ಎಬಿದೆ ಎಂಬ ವ್ಯಕ್ತಿಯ ಕತೆಯೂ ಇಲ್ಲಿ ಸೇರಿದೆ. ಈ ಅರ್ಥದಲ್ಲಿ ಈ ಬರೆಹಗಳು ವ್ಯಕ್ತಿಚಿತ್ರಗಳ ಗುಚ್ಛ. ಜನರನ್ನು ಪ್ರೀತಿಸದೆ ಊರನ್ನು ಪ್ರೀತಿಸುವುದು ಸಾಧ್ಯವಿಲ್ಲ. ಜಯಂತ ಕಾಯ್ಕಿಣಿಯವರ ಕತೆಗಳ ಮೂಲಕ ಮುಂಬೈ ಆಪ್ತವಾಗುವುದು ಹೀಗೇ. ಮುಂಬೈ ಕುರಿತು ನಾನು ಈಚಿಗೆ ಓದಿದ ಶಾಮಲಾ ಮಾಧವ ಅವರ ಲೇಖನಗಳು ಕೂಡ ಸಾಮಾನ್ಯವೆನಿಸುವ ವಿವರಗಳ ಮೂಲಕ ಅಸಾಮಾನ್ಯವಾದ ನಗರದ ಕಥನವನ್ನು ಹೇಳುವಂತಹವು.

ನಗರವೆಂದರೆ ಮನುಷ್ಯ ಸಂಬಂಧಗಳ ಯಾಂತ್ರಿಕ ನಿರ್ವಹಣೆ ಮತ್ತು ವಿಘಟನೆ ಎಂದು ನಮ್ಮ ಸಾಮಾನ್ಯ ಗ್ರಹಿಕೆ. ಆದರೆ ಇಲ್ಲಿ ಮನುಷ್ಯ ಸಂಬಂಧಗಳ ಮೂಲಕವೇ ಮಹಾನಗರಿ ರೂಪುಗೊಳ್ಳುತ್ತದೆ. ದೆಹಲಿ ಕಲ್ಕತ್ತೆ ಮುಂಬೈನಲ್ಲಿ ಕೆಲವು ಕಾಲ ವಾಸವಾಗಿದ್ದು ಅದರ ಮೇಲೆ ದೊಡ್ಡದೊಡ್ಡ ಕೃತಿಗಳನ್ನು ಬರೆದಿರುವ ವಿದೇಶಿಗರ ಬರೆಹಕ್ಕಿಂತ ಇದು ಭಿನ್ನವಾಗುವುದು ಇಲ್ಲೇ. ಕೃಷ್ಣಾನಂದ ಕಾಮತರು ಬಂಗಾಳದಲ್ಲಿದ್ದು ಬರೆದಿರುವ ಕಥನವು ಅಥವಾ ಬಿಜಿಎಲ್ ಸ್ವಾಮಿಯವರು ಮದರಾಸಿನಲ್ಲಿದ್ದು ಬರೆದಿರುವ ಅನುಭವವೂ ಅಲ್ಲಿನ ಜನರ ಬಗ್ಗೆ ಪೂರ್ವಗ್ರಹಗಳಿಂದ ತುಂಬಿದೆ. ಆದರೆ ಇಲ್ಲಿನ ಬರೆಹಗಳು ದೆಹಲಿಗರ ಆಪ್ತ ಚಿತ್ರಗಳ ಮೂಲಕ ದೆಹಲಿಯ ಬಗ್ಗೆ ಪ್ರೀತಿ ಹುಟ್ಟಿಸುತ್ತವೆ. ದೇವನೂರರ `ಕುಸುಮಬಾಲೆ’ಯ ಮಾತನ್ನು ಬಳಸಿ ಹೇಳುವುದಾದರೆ, ಈ ಕೃತಿಯ ಮೂಲಕ ಹೊಮ್ಮುವ  ದರ್ಶನವನ್ನು `ಸಂಬಂಜ ಅನ್ನೋದು ದೊಡ್ಡದು ಕನಾ’ ಎಂದೂ ಹೇಳಬಹುದು.

***

ಪುರುಷೋತ್ತಮ ಬಿಳಿಮಲೆ

ಪ್ರಿಯರಾದ ಶ್ರೀಮತಿ ನಿಡಗುಂದಿ ಅವರಿಗೆ ವಂದನೆಗಳು,

ನೀವು ಕಳಿಸಿಕೊಟ್ಟ ಎಲ್ಲ ಪ್ರಬಂಧಗಳನ್ನು ಧ್ಯಾನಿಸಿ ಓದುತ್ತಿದ್ದಂತೆ ಮನಸು ಉಲ್ಲಸಿತವಾಯಿತು. ಮೊದಲ ಬಾರಿಗೆ ನಿಮ್ಮ ಪ್ರಬಂಧಗಳ ಮೂಲಕ ದೆಹಲಿ ಎಂಬ ಮಹಾನಗರವು ಕನ್ನಡದಲ್ಲಿ ಪ್ರತ್ಯಕ್ಷವಾಗಿದೆ. ನಾವೆಲ್ಲ ಒಮ್ಮೆ ದೆಹಲಿ ಕರ್ನಾಟಕ ಸಂಘದಲ್ಲಿ ಚರ್ಚೆ ಮಾಡಿದ್ದು ನೆನಪಿದೆಯಾ? ಯಶವಂತ ಚಿತ್ತಾಲ, ಅರವಿಂದ ನಾಡಕರ್ಣಿ,  ವ್ಯಾಸರಾಯ ಬಲ್ಲಾಳ ಮೊದಲಾದ ಹಿರಿಯ ಬರಹಗಾರರು ತಮ್ಮ ಸೃಜನಶೀಲ ಕೃತಿಗಳಲ್ಲಿ ಮಹಾನಗರಿ ಮುಂಬೈಯ ಸೂಕ್ಷ್ಮಗಳನ್ನು ಹಿಡಿದಿಟ್ಟು ಕನ್ನಡಿಗರಿಗೆ ಹೊಸ ಅನುಭವಗಳನ್ನು ಕೊಟ್ಟರು. ಆದರೆ ದೆಹಲಿಯಲ್ಲಿ ಹಾಗಾಗಲಿಲ್ಲ. ಮುಂಬೈ ನಗರದಲ್ಲಿದ್ದಂತೆ ಇಲ್ಲಿ ದೊಡ್ಡ ಮಟ್ಟದ ಬರೆಹಗಾರರು ಇಲ್ಲ. ಕರ್ನಾಟಕದಿಂದ ಇಲ್ಲಿಗೆ ಆಗಮಿಸಿದ ಬರೆಹಗಾರರು ದೆಹಲಿಯ ಆಕ್ರಮಣಶೀಲತೆಯನ್ನೊ, ಅದರ ವಾರಾಂಗನಾ ಸ್ವರೂಪದ ವೈಯಾರವನ್ನೋ ಬಣ್ಣಿಸಿದ್ದುಂಟು. ಅದೇನಿದ್ದರೂ ಅವೆಲ್ಲ ಹೊರಗಿನವರ ಇಣುಕುನೋಟದಲ್ಲಿ ಕಂಡ ದೆಹಲಿ. ನಿಮ್ಮ ಪ್ರಯತ್ನ ಹಾಗಲ್ಲ. ನೀವು ಎಳೆಯವಯಸ್ಸಿನಲ್ಲಿಯೇ ದೆಹಲಿಗೆ ಬಂದವರು, ಸಂಸಾರ ಹೂಡಿದವರು, ಇಲ್ಲಿನ ಕಷ್ಟ ಸುಖಗಳನ್ನು ಅನುಭವಿಸಿದವರು.

ಹಳ್ಳಿಯಾಗಿರುವ ಮುನೀರ್ಕಾದಿಂದ, ಆಧುನಿಕ ನೋಯ್ಡಾದವರೆಗೆನ ವಿವಿಧ ಜಾಗೆಗಳಲ್ಲಿ ವಾಸಿಸಿ, ಜೀವನಾನುಭವವನ್ನು ಹೆಚ್ಚಿಸಿಕೊಂಡವರು. ಎಲ್ಲಕ್ಕಿಂತ ಮಿಗಿಲಾಗಿ,  ತಾನು ಬದುಕಿದ ಕಡೆಗಳಲ್ಲಿ ಪರಿಸರವನ್ನುತೆರೆದ ಕಣ್ಣುಗಳಿಂದ ಮಗುವಿನ ಹಾಗೆ ನೋಡಿದವರು. ಈ ಮುಗ್ಧತೆ, ಬೆರಗುಗಳು ಅಸಾಮಾನ್ಯವಾದುವಾದ್ದರಿಂದ ನಿಮಗೆ ಇಂಥದ್ದೊಂದು ಪ್ರಬಂಧ ಸಂಕಲನವನ್ನು ತರಲು ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ಕಾಣಸಿಕ್ಕ ನೈಜೀರಿಯನ್ರೋಗಿ, ಕಳೆದು ಹೋದ ಹೆಂಡತಿಗೆ ಒಂದಿಷ್ಟೂ ಗದರಿಸದ ಮಲೆಯಾಳಿ ರಾಮಚಂದ್ರನ್, ಶರ್ಮಾಜಿಯ ಛೋಲೆ ಭಟೂರೆ, ಚಳಿಗೆ ನೆನಪಾಗುವ ಪಾರಿಜಾತ, ಗರಂಗರಂಚಾಯ, ಸೈಕಲ್ರಿಕ್ಷಾದ ಡೋಗ್ರೂ, ಮೊದಲಾದ ಅನೇಕ ವ್ಯಕ್ತಿ ವಿಷಯಗಳು ಈಗ ನಮ್ಮ ನೆನಪಿನ ಭಾಗಗಳಾಗಿವೆ. ಎಲ್ಲೋ ಒಂದೆಡೆ ದೆಹಲಿಯ ಬಗೆಗೆ ಬೆಳೆಯುತ್ತಿದ್ದ ಅಸಹನೆಯನ್ನು ನೀವೀಗ ಕಳೆದುಹಾಕಿದ್ದೀರಿ. ನಾವೆಲ್ಲ ದೆಹಲಿಯನ್ನು ಹೊಸ ಕಣ್ಣಗಳಿಂದ ನೋಡುವಂತೆ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು.

ಸಮಾರಂಭದ ಆಹ್ವಾನ ಇಲ್ಲಿದೆ :

 

‍ಲೇಖಕರು avadhi

27 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading