ಅಹವಿ ಹಾಡು : ನಾನು ಕಲೆಕ್ಷನ್ ಏಜೆಂಟ್ ಆದ ಕಥೆ!

ನಮ್ಮ ಕೊರವಂಜಿ ರಾಶಿಯವರ ಮಗ ಅಪರಂಜಿ ಶಿವಕುಮಾರ್ ಅವರು ಒಂದು ಕಡೆ ಬರೆದಿದ್ದರು – ಅವರ ಬಿಸಿನೆಸ್‌ಗೆ ಆರ್ಡರ್ ಕೇಳಿ ಪಡೆದ ಮೇಲೆ, order execute ಮಾಡಿದ ನಂತರ, ಹಣ ಕೇಳಲು ಹೋದರೆ ‘ಏನ್ರೀ ಪಾಪ ಅಂತ ಆರ್ಡರ್ ಕೊಟ್ರೆ ದುಡ್ಡು ಬೇರೆ ಕೇಳ್ತೀರಲ್ಲ’ ಅನ್ನುತ್ತಿದ್ದರಂತೆ ಆ ಮಹಾನುಭಾವರು! ನಮ್ಮದೂ ಅದೇ ಕತೆ. ಸಪ್ಲೈ ಮಾಡಿಸಿಕೊಳ್ಳುವ ಹಿಂದಿನ ದಿನದವರೆಗೆ ದಿನ ಬೆಳಗಾದರೆ ಫೋನ್ ಮಾಡಿ ಪ್ರಾಣ ತಿನ್ನುವವರು, ಮರುದಿನದಿಂದ ನಾಪತ್ತೆ! ನನ್ನ ಗಂಡ ಸುಸ್ತಾಗಿ ಹೋಗಿ ಪೇಮೆಂಟ್ ಕಲೆಕ್ಷನ್ ಕೆಲಸವನ್ನ ನನಗೆ ವಹಿಸಿದ…ಅಂದರೆ ಅವನು ಆ ಕೆಲಸ ಮಾಡಲು ಸಾಧ್ಯವಾಗದ ಕೇಸ್‌ಗಳನ್ನು ನನಗೆ ವರ್ಗಾಯಿಸಲು ಶುರು ಮಾಡಿದ. ಹೀಗೆ ನಾನು ಕಲೆಕ್ಷನ್ ಏಜೆಂಟ್ ಆದೆ…
ಭಗೀರಥ ಅನ್ನುವ ಕಂಪನಿಯೊಂದಕ್ಕೆ ನಮ್ಮ ಬೋರ್ಡ್ ಸಪ್ಲೈ ಮಾಡಿದ ನಂತರ ಆಸಾಮಿಗಳು ನಾಪತ್ತೆ! ಅಲ್ಲಿದ್ದ ಮಹಾನ್ ಪಾಪದವನೊಬ್ಬ ಮಲಯಾಳಿಯ ಫೋನ್ ನಂಬರ್ ಸಂಪಾದಿಸಿ, ದಿನ ಬೆಳಗ್ಗೆ ಸೀಟಿನಲ್ಲಿ ಕೂತೊಡನೆ ‘ಅಮ್ಮಾಆಆಆ ತಾಯೀ …’ ಅನ್ನುವ ಟೋನ್‌ನಲ್ಲಿ ಬೇಡಲು ಶುರು ಮಾಡುತ್ತಿದ್ದೆ. ಅವನು ಹಾರಿಕೆಯ ಉತ್ತರ ಕೊಡಲು ಶುರು ಮಾಡಿದ. ನಾನು ಜಗತ್ತಿನ ಎಲ್ಲ ಕಷ್ಟಗಳೂ ನನಗೇ ಅಡರಿಕೊಂಡಿವೆಯೇನೋ ಅನ್ನುವ ಹಾಗೆ ಅವನಿಗೆ ಕಥೆ ಹೇಳಿ ಹೇಳಿ, ಅವ ಕೇಳಿ ಕೇಳಿ ಸುಸ್ತಾಗಿ ಹೋದ. ಅಂತೂ ಅವನ ಬಾಕಿ ಹಣವನ್ನು ಐದು instalmentನಲ್ಲಿ ಕೊಟ್ಟೇ ಬಿಟ್ಟ. ಭಗೀರಥ ಪ್ರಯತ್ನ ಮಾಡಿ ಗೆದ್ದ ಮೇಲೆ ನಾನು ಆ ಕೆಲಸದಲ್ಲಿ ಪಳಗಿ ಹೋದೆ.
ನಮ್ಮಲ್ಲಿ ಬೋರ್ಡ್ ಕೊಳ್ಳಲು ಬಂದ ಇನ್ನೊಂದು ಆಸಾಮಿ ಮಹಾನ್ ಅಯ್ಯಪ್ಪನ ಭಕ್ತ. ಕಪ್ಪು ಪಂಚೆ, ಶರಟು, ವಲ್ಲಿ ಹಾಕಿ ಬರಿಗಾಲಲ್ಲಿ ಬಂದು ಬಂದು ಕೆಲಸ ಮಾಡಿಸಿಕೊಂಡವ ನಮ್ಮನ್ನು ಬರಿಗೈ ಮಾಡಿಟ್ಟ. ನಾನಂತೂ ಅವನನ್ನು ಮನಸಾರೆ ಶಪಿಸಿ ‘ಇಷ್ಟು ಪಾಪ ಮಾಡ್ತೀ ಅಂತ್ಲೇ ಇಷ್ಟೊಂದು ಪೂಜೆ ಮಾಡ್ತೀಯೇನೋ ಪಾಪ ತೊಳೆದುಕೊಳ್ಳಕ್ಕೆ’ ಅಂದುಕೊಳ್ಳುತ್ತಿದ್ದೆ ಮನಸ್ಸಿನಲ್ಲೇ. ಆತ ಮಾತ್ರ ನನ್ನ ಯಾವ ಪಟ್ಟಿಗೂ ಬಗ್ಗಲೇ ಇಲ್ಲ.
ಆತನ ಅಣ್ಣ ಸ್ವಲ್ಪ ಮಾನ ಮರ್ಯಾದೆ ಇರುವವ ಅಂತ ಸುದ್ದಿ ತಿಳಿದ ನಾನು ಅವನಿಗೆ ತಗಲಿಕೊಂಡು ದಿನಾ ಫೋನ್ ಮಾಡಿ ‘ಸಾರ್ ಈ ಫೋನ್ ಬಿಲ್ ಕಟ್ಟಕ್ಕೂ ದುಡ್ಡಿಲ್ಲ ಸಾರ್ … ಈ ತಿಂಗಳೊಳಗೆ ದುಡ್ಡು ಕೊಡದಿದ್ರೆ ನಾನು ಸಾಲ ಕೊಟ್ಟೋರಿಗೆ ಹೇಗೆ ಮುಖ ತೋರಿಸ್ಲಿ? ಬಾಡಿಗೆ ಕಟ್ಟಿಲ್ಲ. ಮಗನ ಫೀಸ್ ಕಟ್ಟಿಲ್ಲ. ನಮ್ಮ ಇಡೀ ಸಂಸಾರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ತೀವಿ’ ಅಂತ ಶುರು ಹಚ್ಚಿಕೊಂಡೆ. ಅವನು ಪಾಪ ಮರ್ಯಾದಸ್ಥ .. ನನ್ನ ಮಾತು ಕೇಳಿ ಹೆದರಿ ‘ಸಿಸ್ಟರ್ ನೀವು ಸಾಯಬಾರ್ದು .. ಪ್ಲೀಸ್ ಪ್ಲೀಸ್ …’ ಅಂತ ಅಣ್ಣ-ತಂಗಿ ಸಿನೆಮಾ ಸ್ಟೈಲ್‌ನಲ್ಲಿ ಅಂತೂ ಈ ತಂಗಿಗೆ ಅವನ ತಮ್ಮನಿಂದ ದುಡ್ಡು ಕೊಡಿಸಿದ ! May his tribe increase …
ಇನ್ನೊಬ್ಬ ಆಸಾಮಿ ಬಂದು ಬೋರ್ಡ್ ತೆಗೆದುಕೊಂಡು ಚೆಕ್ ಒಂದನ್ನ ದಯಪಾಲಿಸಿ ಅಂತರ್ಧಾನನಾದ. ನಾವು ಭಕ್ತಿಯಿಂದ ಅದನ್ನು ಬ್ಯಾಂಕಿಗೆ ಕಟ್ಟಿದೆವು. ಅದು ಶರವೇಗದಿಂದ ವಾಪಸ್ ಒದ್ದಿತು ನಮ್ಮನ್ನು! ಆತನ ಮನೆ ನಮಗೆ ಗೊತ್ತಿದ್ದರಿಂದ ಆಫೀಸಿನ ಹುಡುಗರನ್ನು ಅವನಲ್ಲಿಗೆ ಕಳಿಸಿದರೆ ‘ನಿಮ್ಮ ಮೇಲೆ atrocity ಕೇಸ್ ಹಾಕಿಸಿ ಒದ್ದು ಒಳಗೆ ಹಾಕಿಸ್ತೀನಿ. ನಿಮ್ಮ ಬಾಸ್ ಬ್ರಾಹ್ಮಣರು ಅಂತ ನಂಗೊತ್ತು’ ಅಂದನಂತೆ. ನಮಗೆ ಕಂಬಿ ಎಣಿಸಲು ಮ್ಯಾಥ್ಸ್ ಸರಿಯಾಗಿ ಬರುತ್ತಿರಲಿಲ್ಲವಾದ ಕಾರಣ ಉಸಿರೆತ್ತದೆ ಸುಮ್ಮನಾದೆವು. ಅದೇ ಮನುಷ್ಯ ಮೂರು ವರ್ಷದ ನಂತರ ಮತ್ತೊಂದು ಸಲ ಬೋರ್ಡ್ ಬೇಕೆಂದು ನಮ್ಮ ಹತ್ತಿರಕ್ಕೇ ಬಂದರು. ನಾವು ಅಚ್ಚುಕಟ್ಟಾಗಿ ಮಾತಾಡಿಸಿದೆವು ಹಳೆಯದೆಲ್ಲ ಮರೆತೇ ಹೋದವರಂತೆ. ಹೊಸದಾಗಿ ಬೋರ್ಡ್ ಬೇಕೆಂದಾಗ ‘ಆಗ್ಲಿ ಸೋಮಿ ನಮ್ಗಾರ ಇದ್ಕಿಂತ ಇನ್ನೇನು ಒಳ್ಳೆ ಕೆಲ್ಸ ಇದ್ದಾತು?’ ಅಂತ ಹೇಳಿ ಅಡ್ವಾನ್ಸ್ ತೆಗೆದುಕೊಂಡು, ಅದನ್ನುಹಳೆಯ ಬಾಕಿಗೆ ಜಮಾ ಮಾಡಿಕೊಂಡು ಕಾಲು ಚಾಚಿ ಕೂತುಬಿಟ್ಟೆ. ಹೊಸ ಬೋರ್ಡ್ ಕೆಲಸ ಮುಟ್ಟದೇ ಕೂತಾಗ ಇರೋ ಬರೋ ಬೆದರಿಕೆ ಎಲ್ಲ ಪ್ರಯೋಗಿಸಿದಾತ ಕೊನೆಗೂ ನಾನು ಬಗ್ಗದೇ ಹೋದಾಗ ಮತ್ತೆ ದುಡ್ಡು ಕೊಟ್ಟು ಬೋರ್ಡ್ ತೆಗೆದುಕೊಂಡು ‘ಥೂ ಹಲ್ಕಾ ಜನಗಳ ಸಹವಾಸ’ ಅಂತ ಬಯ್ದು ಹೋದ!

ಹೈದರಾಬಾದಿನಲ್ಲಿ ಒಂದ್ರಾಶಿ ದುಡ್ಡು ಬಾಕಿ ಉಳಿದಾಗ ಅಲ್ಲಿಗೂ ಹೋದೆವು. ನನ್ನ ಗಂಡ ನನ್ನನ್ನು ಆ ಆಫೀಸಿನಲ್ಲಿ ಕೂರಿಸಿ ಹೊರಟುಹೋದ. ನಾನು ಹಣ ಕೇಳಿದರೆ ‘ಪೇಮೆಂಟ್ ಕೊಡಲು ದುಡ್ಡಿದ್ದರೆ ತಾನೇ’ ಅಂತ ಅಲ್ಲಿನ ಅಕೌಂಟ್ಸ್‌ನವರು ತಾರಮ್ಮಯ್ಯ ಆಡಿಸಿದರು. ಇಂಥದ್ದೆಲ್ಲ ಎಷ್ಟು ಕಂಡಿರಲಿಲ್ಲ ನಾನು?! ಮೌನ ಸತ್ಯಾಗ್ರಹಕ್ಕೆ ಕೂತಂತೆ ಅಲ್ಲೇ ಬೇರುಬಿಟ್ಟೆ. ಬೆಳಿಗ್ಗೆ ಹೊಟ್ಟೆಬಿರಿಯ ತಿಂಡಿ ತಿಂದಿದ್ದವಳು ಆ ನಂತರ ಇಡೀ ದಿನ ಅಲ್ಲಾಡದೇ ಕೂತಲ್ಲೆ ಕೂತೆ. ಹೀಗೆ ಎಷ್ಟೇ ಹೊತ್ತು ಕೂತರೂ ದುಡ್ಡು ಕೊಡಕ್ಕಾಗಲ್ಲ, ಯಾಕಂದ್ರೆ ನಮ್ಮ ಹತ್ರ ದುಡ್ಡಿಲ್ಲ ಅಂತ ಮತ್ತೊಬ್ಬ ಬಂದು ಹೇಳಿದ. ನಾನು ನನಗಲ್ಲವೇ ಅಲ್ಲವೇನೋ ಅನ್ನುವ ಹಾಗೆ ಕೂತಿದ್ದೆ. ಮಧ್ಯಾಹ್ನವಾಗಿ ಊಟದ ಸಮಯವಾದಾಗ ‘ಮೇಡಮ್ ಹೋಗಿ ಊಟ ಮಾಡಿ ಬನ್ನಿ’ ಅನ್ನುವ ಮಾತು ಕಿವಿಗೇ ಬೀಳದವಳಂತೆ ಕೂತೇ ಇದ್ದೆ. ಸಂಜೆ ಕಾಫಿ ಸಮಯಕ್ಕೆ ಕಾಫಿ ಕುಡಿದು ಬನ್ನಿ ಅಂದಾಗಲೂ ನಿರಾಕರಿಸಿ ಕೂತೇ ಇದ್ದೆ. ಆಗ ಅವರ ಮುಖದಲ್ಲಿ ಸ್ವಲ್ಪ ಗಾಭರಿ ಕಂಡಿತು. ಈ ಶನಿ ದುಡ್ಡಿಲ್ಲದೇ ಹೊರಡುವುದಿಲ್ಲ ಅಂತ ಅವರಿಗೆ ವಾಸನೆ ಹತ್ತಿರಬೇಕು! ಸಂಜೆಯಾಗುವಷ್ಟರಲ್ಲಿ ‘ಮೇಡಮ್ ಪ್ಲೀಸ್ ಇನ್ನೊಂದು ವಾರದಲ್ಲಿ ದುಡ್ಡು ಕಳಿಸ್ತೀವಿ … ಈಗ ಹೊರಡಿ’ ಅಂತ ಬೇಡಲು ಶುರು ಮಾಡಿದರು. ಆಗಲೂ ನಾನು ಕಲ್ಲುಬಂಡೆ! ಆಫೀಸ್ ಮುಚ್ಚುವ ಸಮಯ ಬಂದಾಗಲೂ ನಾನು ಅಲ್ಲೇ ಕೂತಿದ್ದೆ. ಕೊನೆಗೆ ಮಾರನೆಯ ದಿನ ಪೇಮೆಂಟ್ ಕೊಡ್ತೀವಿ ಅನ್ನುವ ಮಾತು ಅವರ ಬಾಯಿಂದ ಬರುವವರೆಗೆ ಅಲ್ಲೇ ಕೂತಿದ್ದೆ… ಮರುದಿನ ದುಡ್ಡು ಬಂತು ಅಂತ ಹೇಳಬೇಕಾಗಿಲ್ಲ ಅಲ್ಲವೇ? 🙂
ಇನ್ನೊಂದು ಕಂಪನಿ ದುಡ್ಡು ಕೊಡದೇ ಕೈ ಎತ್ತಿದಾಗ ನನಗೊಬ್ಬಳು ಮಗಳನ್ನು ಸೃಷ್ಟಿಸಿ, ಅವಳಿಗೊಂದು ಹಾರ್ಟ್ ಆಪರೇಷನ್ ಮಾಡಿಸಿ, ಈಗ ನೀವು ದುಡ್ಡು ಕೊಡದಿದ್ದರೆ ಆಸ್ಪತ್ರೆ ಬಿಲ್ ಕಟ್ಟಲೂ ದುಡ್ಡಿಲ್ಲ ಅಂತ ಅಳುತ್ತಾ ಕೂತೆ. ಆ ಬಾಸ್ ಅಂತೂ ಪಾಪ ತುಂಬ ಕರುಣಾಮಯಿ. ತುಂಬ ನೊಂದುಕೊಂಡು ಬಿಟ್ಟು ಸಂಜೆಯೊಳಗೆ ಹಣ ಕೊಟ್ಟ! ಇನ್ನೊಂದು ಕಂಪನಿಯವರಂತೂ ನನಗಿಂತ ಭಂಡರು. ಎಷ್ಟೇ ಕಥೆ ಕಟ್ಟಿದರೂ ಆರಾಮವಾಗಿ ಅಪ್ಪ-ಮಗ ‘ನಮ್ಮ ಹತ್ರ ದುಡ್ಡಿದ್ರೆ ಕೊಡ್ತಾ ಇರ್ಲಿಲ್ವಾ? ನಿಜವಾಗ್ಲೂ ಇಲ್ಲ ನಮ್ಮ ಹತ್ರ’ ಅಂತ ನಮಗಿಂತ ದೊಡ್ಡ ಗುಬ್ಬಿ ವೀರಣ್ಣರಾದರು! ನಾನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ನಿದ್ದೆ ಮಾತ್ರೆ ಎತ್ತಿ ಪಕ್ಕಕ್ಕಿಟ್ಟುಕೊಂಡು ‘ಇಲ್ಲೇ ಸತ್ತೋಗೊದೊಂದು ಬಿಟ್ಟು ನನಗೆ ಬೇರೆ ಮಾರ್ಗ ಇಲ್ಲ’ ಅಂದೆ!!
ಅವತ್ತಿನ ದಿನದ ಶ್ರೇಷ್ಠ ನಟ/ನಟಿ ಪ್ರಶಸ್ತಿ ಯಾರ ಪಾಲಾಗುತ್ತದೋ ಅನ್ನುವ ಆತಂಕವಿರುವವರಂತೆ ಇಬ್ಬರೂ ಅತ್ಯದ್ಭುತವಾಗಿ ನಟಿಸಿದೆವು. ಆತ ಮಗನ ಜೊತೆ ತೆಲುಗಿನಲ್ಲಿ ‘ಇವಳು ಎಲ್ಲಿಂದ ಬಂದಳೋ ಪೀಡೆ ಥರ. ಸತ್ತು ಗಿತ್ತು ಹೋಗ್ತಾಳೋ ಏನೋ’ ಅಂದ. ಮಗ ‘ಏಮಿ ಆಯಲೇದು ನಾನಾ … ಇದಂತಾ ಊರ್ಕೆ acting ಚೇಸ್ತಾವುಂದಿ’ ಅಂದ ನಪುಂಸಕ ಲಿಂಗದಲ್ಲಿ! ಅದರಪ್ಪ ಮಾತ್ರ ಪಾಪ ಹೆದರಿ ‘ಲೇದುರಾ … ಅದಿ ಸೀರಿಯಸ್‌‌ಗಾ ಚಪ್ತಾವುಂದಿ …’ ಅಂದರು. ಕೊನೆಗೆ ಇಬ್ಬರೂ ನನ್ನ ಗಂಡನನ್ನು ಕರೆದು ‘ನಿಮ್ಮ ಹೆಂಡ್ತೀನ ಕರ್ಕೊಂಡು ಹೋಗಿ ಇಲ್ಲಿಂದ’ ಅಂತ ಆವಾಜ಼್ ಹಾಕಿದರು. ಅವತ್ತು ಯಾಕೋ ನನ್ನ ಗಂಡ ಕೂಡಾ ಶ್ರೇಷ್ಠ ನಟ ಪ್ರಶಸ್ತಿ ಪಡೆಯುವಂತೆ ನಟಿಸುವ ನಿರ್ಧಾರ ಮಾಡಿದ್ದ ಅನ್ನಿಸುತ್ತದೆ ‘ಸಾಲ ಕೊಟ್ಟೋರು ಜೀವ ಹಿಂಡ್ತಿದಾರೆ … ಅವಳು ಅದೇನು ಮಾಡಿಕೊಳ್ತಾಳೋ ಮಾಡಿಕೊಳ್ಳಲಿ. ನಾನು ಮನೇಲಿ ಇಲ್ಲದಿರುವಾಗ ಅವಳೇ ತಾನೇ ಅನುಭವಿಸಬೇಕಾದೋಳು’ ಅಂದ!! ಅವತ್ತು ಶ್ರೇಷ್ಠ ನಟಿ/ನಟ ಪ್ರಶಸ್ತಿಯನ್ನು ನಾನು, ನನ್ನ ಗಂಡ ಹಂಚಿಕೊಂಡೆವು ಅಂದರೆ ಅವತ್ತಿನ ರಿಸಲ್ಟ್ ನಿಮಗೆ ಅರ್ಥವಾಗುತ್ತದೆ ಅಂದುಕೊಂಡಿದ್ದೇನೆ …!

ಇನ್ನೊಬ್ಬ ಮಹಾಶಯ ತುಂಬ ಮಿತಭಾಷಿಯಾದವ ಬೋರ್ಡ್ ಪಡೆದು ಚೆಕ್ ಕೈಲಿ ಇರಿಸಿ ಹೋದ. ಯಥಾಪ್ರಕಾರ ಚೆಕ್ ಬೌನ್ಸ್! ಮತ್ತೆ ಫೋನ್ ಮಾಡಿದರೆ ಇವತ್ತು ಪ್ರೆಸೆಂಟ್ ಮಾಡಿ ಅಂದ. ಮತ್ತೆ ಬೌನ್ಸ್! ಮತ್ತೆ ಫೋನ್ ಮಾಡಿದರೆ ‘ನಾಳೆ ಡಿಡಿ ’ ಅಂದ. ಬರಲಿಲ್ಲ ಅಂತ ಫೋನ್ ಮಾಡಿದರೆ today ಅಂದ. ಅಂತ ಸಾವಿರ today ಗಳಾದವು. ದುಡ್ಡಿನ ಪತ್ತೆಯಿಲ್ಲ. ಇನ್ನೊಂದು ಸ್ವಲ್ಪ ದಿನಕ್ಕೆ ‘ನೆನ್ನೇನೆ ಕಳಿಸಿ ಆಯ್ತಲ್ಲ’ ಅಂದ! ನಾವು ಮಾರನೆಯ ದಿನ ಕಾದು ಸುಸ್ತಾದೆವು. ಅದೂ ಸುಳ್ಳು ಅಂತ ಗೊತ್ತಾಗುವಷ್ಟರಲ್ಲಿ ಆತ ಪ್ರಾಜೆಕ್ಟ್ ಆಫೀಸ್ ಕೂಡಾ ಮುಚ್ಚಿ ಕಾಣೆಯಾಗಿದ್ದ. ಕೊನೆಗೊಂದು ದಿನ ಅವನು ಫೈನಲ್ ಬಿಲ್‌ಗಾಗಿ ಬೆಂಗಳೂರಿನ ಆಫೀಸಿಗೆ ಬಂದಿದ್ದಾನೆ ಅಂತ ತಿಳಿದು ಅಲ್ಲಿಗೆ ಹೋಗುವಷ್ಟರಲ್ಲಿ ನಾವು ಬರುತ್ತಿರುವ ಸುದ್ದಿ ತಿಳಿದ ಆತ ಮಾಯ!
ಆದರೆ ಆತನ ಶಿಷ್ಯರು ನನ್ನ ಕೈಲಿ ಸಿಕ್ಕಿ ಬಿದ್ದರು. ಮೊದಮೊದಲಿಗೆ ದುಡ್ಡಿಲ್ಲ ಅಂದರು. ನಿರಾಕರಿಸಿದಾಗ ಮುಂದಿನ ತಿಂಗಳು ಅಂದರು. ಒಪ್ಪದಾಗ ಮುಂದಿನ ವಾರ ಅಂದರು. ಅದಕ್ಕೂ ಒಪ್ಪದೇ ರಸ್ತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಡಯಾಬಿಟಿಸ್ ಮಾತ್ರೆ ತಂದೆ. ತುಂಬ ಜನ ಸೇರಿಬಿಟ್ಟರು. ಪಾಪ ಆ ಗುಂಪಿನಲ್ಲಿದ್ದ ಮುದುಕ ನಾನು ನಿಜಕ್ಕೂ ಸತ್ತುಹೋಗುತ್ತೇನೆ ಅಂದುಕೊಂಡು ತುಂಬ ಅಂತಃಕರಣದಿಂದ ‘ನೀನು ಸಾಯಕೂಡದು ಅಮ್ಮ’ ಅಂತ ನನ್ನ ಕೈಲಿದ್ದ ಮಾತ್ರೆಗಳನ್ನೆಲ್ಲ ನೆಲಕ್ಕೆ ಬೀಳಿಸಿಬಿಟ್ಟಿತು! ‘ಅಯ್ಯೋ ಕೆಲಸ ಕೆಟ್ಟಿತಲ್ಲ’ ಅಂತ ನಾನು ಸಂಕಟಪಟ್ಟೆ. ಆ ಮುದುಕ ‘ನೀನು ಸತ್ತೋದ್ರೆ ಆ ದುಡು ವಾಪಸ್ ಬತ್ತದೇನವ್ವಾ? ಬಾ ಅವ್ನ ಯಜಮಾನ ಎಲ್ಲವ್ನೆ ಅಂತ ಪೋಲಿಸ್ ಕಂಪ್ಲೇಂಟ್ ಕೊಟ್ಟು ಹುಡುಕ್ಸಾಣ. ನೀ ಮಾತ್ರ ಸಾಯಕೂಡದು’ ಅಂತ ಬೆನ್ನು ಹತ್ತಿಬಿಟ್ಟಿತು. ನನಗೋ ಮನಸ್ಸಿನ ಒಳಗೆ ಒಂದು ಕಡೆ ಸಿಟ್ಟಾದರೆ ಮತ್ತೊಂದು ಕಡೆ ನಗು. ಆದರೆ ಈ ಜಗತ್ತಿನಲ್ಲಿ ಯಾವ ಉದ್ದೇಶವೂ ಇಲ್ಲದೇ ಒಬ್ಬ ಮನುಷ್ಯ ಇನ್ನೊಬ್ಬ ವ್ಯಕ್ತಿಗಾಗಿ ಈ ರೀತಿ concern ತೋರಿಸಬಹುದು ಅಂತ ತೋರಿಸಿಕೊಟ್ಟ ತಾತನ ಮೇಲೆ ಯಾಕೋ ತುಂಬ ಪ್ರೀತಿ ಉಕ್ಕಿ ಬಂತು.
ಆ ನಂತರ ನನ್ನ ಗಂಡನ ಗಾಂಧಿನಗರದ ಗೆಳೆಯರು ಕಣಕ್ಕೆ ಕಾಲಿಟ್ಟರು. ಹಣ ಕೊಡುವವರೆಗೆ ನಮ್ಮ ಆತಿಥ್ಯ ಸ್ವೀಕರಿಸಿ ಅಂತ ತುಂಬ ಪ್ರೀತಿಯಿಂದ (?!) ಆ ಶಿಷ್ಯರಿಗೆ ಕೇಳಿಕೊಂಡರು. ಪಾಪ ಆ ಶಿಷ್ಯಂದಿರು ಕಿಡ್ನ್ಯಾಪ್ ಮಾಡಿಬಿಡುತ್ತಾರೇನೋ ಅಂತ ಬೆದರಿಹೋದರು. ಒಂದು ಕಡೆ ನನ್ನ ಆತ್ಮಹತ್ಯೆಯ ಭಯ .. ಇನ್ನೊಂದು ಕಡೆ ಅವರ ಕಿಡ್ನ್ಯಾಪ್ ಭಯ! ಹೈರಾಣಾದ ಅವರು ಅಂತೂ ಮರುದಿನ ಹಣ ಹೊಂದಿಸಿ ಕೊಡುತ್ತೇನೆ ಅನ್ನುವ ಲೆವೆಲ್‌ಗೆ ಇಳಿದರು. ಮರುದಿನ ನಮ್ಮ ಕೈಗೆ ಡಿಡಿ ಇಟ್ಟ ಆ ಶಿಷ್ಯರು ‘ಈ ಬಾಸ್ ನನ್ಮಗ ನಮಗೆ ಸಂಬಳ ಕೊಟ್ಟೇ ಆರು ತಿಂಗಳಾಯ್ತು … ಅದನ್ನು ಅನುಭವಿಸೋದಲ್ದೇ ನಿಮ್ಮಂತವರ ಕೈಗೆ ಬೇರೆ ಸಿಕ್ಕಿ ಸಾಯಬೇಕು’ ಅಂತ ಅಂದಾಗ ಸಮಸ್ಯೆಯ ಇನ್ನೊಂದು ಮಗ್ಗಲಿನ ಅನಾವರಣವಾಯ್ತು …
ಈ ರೀತಿ ವಸೂಲಿಗೆ ಮಾಡಿದ ಸರ್ಕಸ್‌ಗಳನ್ನು ಬರೆಯುತ್ತಾ ಹೋದರೆ ಒಂದು ಕಾದಂಬರಿಯಾಗುತ್ತದೆಯಾದ್ದರಿಂದ ಇಲ್ಲಿಗೆ ನಿಲ್ಲಿಸಲೇಬೇಕಾಗಿದೆ. ಅನುಭವಿಸಿದಾಗ ಇವೆಲ್ಲ ತುಂಬ ಸಿಟ್ಟು ತರಿಸಿದರೂ ಈಗ ನೆನೆಸಿಕೊಂಡರೆ ಸಖತ್ ಮಜವೆನ್ನಿಸುತ್ತದೆ. ನಿಮ್ಮಲ್ಲೂ ಯಾರಿಗಾದರೂ ಮಾಡಿದ ಕೆಲಸಕ್ಕೆ ಹಣ ಕೊಡದೇ ಯಾರಾದರೂ ಸತಾಯಿಸುತ್ತಿದ್ದರೆ ನನ್ನನ್ನು ಸಂಪರ್ಕಿಸಿ ಅನ್ನುವ ಮನವಿಯೊಡನೆ ನನ್ನ ಉದ್ಯೋಗಪರ್ವ ಮುಗಿಯುತ್ತದೆ ..:)

‍ಲೇಖಕರು avadhi

July 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Tejaswini Hegde

    ಬೆಳ್‌ಬೆಳಗ್ಗೆ ಮನಸೇನಾದ್ರೂ ತುಂಬಾ ಡಿಪ್ರೆಸ್ಸ್ ಆಗಿದ್ರೆ ಇಂಥ ಬರಹ ಓದ್ಬೇಕು…. ಕೊಂಚ ಮನಸು ರಿಲೀಫ್ ಆಗೇ ಆಗೊತ್ತೆ 🙂

    ಪ್ರತಿಕ್ರಿಯೆ
  2. Anonymous

    neevu duddu collect maaduvudanna hasya lepisi heliddaru, eshtu kashtada kelsa anta gottagatte. Ene adru ‘never give up’ attitudege thumbs up Bharati. BTW, you can seriously think of an alternative career as you are good at Acting 😉

    ಪ್ರತಿಕ್ರಿಯೆ
  3. ಉದಯ್ ಇಟಗಿ

    ಕೊಡಬೇಕಾದ ದುಡ್ಡನ್ನು ಕೊಡಿ ಎಂದು ಕೇಳಿದರೆ ಜನ ಅದ್ಯಾಕೆ ಅಷ್ಟೊಂದು ಉರಿದುಬೀಳುತ್ತಾರೆ ಅಂತಾ ನನಗೆ ಗೊತ್ತಾಗಿದೆ. ಅಸಲಿಗೆ ಅವರಿಗೆ ದುಡ್ಡನ್ನು ವಾಪಾಸು ಕೊಡುವ ಮನಸ್ಸೇ ಇರುವದಿಲ್ಲ. ಹಾಗಾಗಿಯೇ ಅವರು ನಮ್ಮನ್ನು ಅಷ್ಟೊಂದು ಸತಾಯಿಸುವದು?

    ಪ್ರತಿಕ್ರಿಯೆ
  4. Sarala

    neevu duddu collect maaduvudanna hasya lepisi heliddaru, eshtu kashtada kelsa anta gottagatte. Ene adru ‘never give up’ attitudege thumbs up Bharati. BTW, you can seriously think of an alternative career as you are good at Acting 😉

    ಪ್ರತಿಕ್ರಿಯೆ
  5. sujathalokesh

    ಕೊಟ್ಟೋನು ಕೋಡಂಗಿ, ಇಸ್ಕೊಂಡವ್ನು ವೀರಭದ್ರ 🙂 ಸಾಲ ವಸೂಲಾತಿಗೆ ಬೇಜ್ಜಾನ್ ಐಡಿಯಾ 🙂 ಚೆನ್ನಾಗಿದೆ ನೀವು ಹೇಳಿರೋದು.

    ಪ್ರತಿಕ್ರಿಯೆ
  6. ವಿಜಯ್

    ಇಲ್ಲಿರುವ ಘಟನೆಗಳು ಹಾಸ್ಯಲೇಪನ ಹೊಂದಿದ್ದರೂ, ನ್ಯಾಯವಾಗಿ ಬರಬೇಕಾದ ಹಣದ ವಸೂಲಿಗೆ ನೀವು ಪಟ್ಟ ಕಷ್ಟ ಓದಿದವರ ಕಣ್ಣೆದುರಿಗೆ ಬರುತ್ತದೆ. ಬರಹದ ವಿಷಯದಲ್ಲಿ ನೀವು ಕುಂ.ವಿ ಯವರಿಂದ ಪ್ರಭಾವಿತರಾಗಿದ್ದೀರ?:)
    [ ನಿಮ್ಮಲ್ಲೂ ಯಾರಿಗಾದರೂ ಮಾಡಿದ ಕೆಲಸಕ್ಕೆ ಹಣ ಕೊಡದೇ ಯಾರಾದರೂ ಸತಾಯಿಸುತ್ತಿದ್ದರೆ ನನ್ನನ್ನು ಸಂಪರ್ಕಿಸಿ ಅನ್ನುವ ಮನವಿಯೊಡನೆ ನನ್ನ ಉದ್ಯೋಗಪರ್ವ ಮುಗಿಯುತ್ತದೆ ..:)]
    ರಾಣೆಬೆನ್ನೂರ ಅಥವ ಹಾವೇರಿ ಇರಬೇಕು..ಅಲ್ಲಿಯೂ ಇಂತಹ ಒಬ್ಬ ‘ವಸೂಲಿಗಾರ’ ಇದ್ದ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ, ಅವರು ಕೂಡ ನಿಮ್ಮಷ್ಟೇ ಗಟ್ಟಿ. ಕಂಬಳಿ ಹಾಸಿ, ಮನೆ ಮುಂದೆ ಬೀಡು ಬಿಟ್ಟು ಬಿಡುತ್ತಿದ್ದರಂತೆ.. ದುಡ್ಡು ಕೊಡುವವರೆಗೆ!

    ಪ್ರತಿಕ್ರಿಯೆ
  7. ಓದುಗ, ಬೆಂಗಳೂರು

    ಮೇಡಮ್, ಹಲವರಿಂದ ನನಗೂ ಹಣ-ವಸೂಲಿ ಮಾಡಲಿಕ್ಕಿದೆ, ನಿಮ್ಮ ವಿಧಾನವನ್ನೋದಿದಾಗ ಒಂದು MBA ಕೋರ್ಸ್ ಅನ್ನೇ ಮಾಡಿದ ಹಾಗೆ ಅನ್ನಿಸಿತು. “ಬಾಕಿ-ವಸೂಲಿ” ಎಂಬ ಕೋರ್ಸ್ ಎಲ್ಲಾದರೂ ಅಥವಾ ಯಾವುದಾದರೂ ವಿವಿಯಲ್ಲಿದ್ದರೆ ಇದ್ದರೆ ಖಂಡಿತವಾಗಿಯು ನಿಮಗೆ HOD ಸ್ಥಾನ ಸಿಗಬಹುದು.

    ಪ್ರತಿಕ್ರಿಯೆ
  8. krishnappa

    Eventhough tone of article is funny, it shows difficulties in doing own business. Good article madam

    ಪ್ರತಿಕ್ರಿಯೆ
  9. Anonymous

    ತುಂಬಾ ಚೆನ್ನಾಗಿದೆ ಉದ್ಯೋಗಪರ್ವ . ಅಭಿನಂದನೆಗಳನ್ನು ಹೇಳಲೇ ಬೇಕು .

    ಪ್ರತಿಕ್ರಿಯೆ
  10. ಸತೀಶ್ ನಾಯ್ಕ್

    ನಿಮ್ಮೊಳಗೆ ಇಂಥಾದ್ದೊಂದು ವ್ಯಕ್ತಿತ್ವ ಇದೆಯಾ..??
    ಆಶ್ಚರ್ಯ ಆಗುತ್ತೆ.. ಆದರೂ ವಸೂಲಿಗೆ ನೀವು ಪಟ್ಟ ಪಾಡುಗಳನ್ನ ಓದಿದರೆ ಒಂದು ಕಡೆ ನಗು ಬರತ್ತೆ.. ನೆನೆಸ್ಕೊಂಡ್ರೆ ಮತ್ತೊಂದು ಕಡೆ ವ್ಯಾವಹಾರಿಕ ಸಂಬಂಧಗಳು ಎಷ್ಟು ಸೂಕ್ಷ್ಮ ಆಲ್ವಾ.. ಒಂದು ಸಾರಿ ನಂಬಿಕೆ ಹೋದ್ರೆ ಹೋಯ್ತಲ್ಲ.. ಅಂತದರ ಮಧ್ಯೆ ಇಬ್ಬರ ನಡುವಣ ಸಂಬಂಧಕ್ಕೆ ಯಾವ ತೊಡಕೂ ಬರದ ಹಾಗೆ ಹೊಡೆದಾಡಬೇಕಲ್ಲ ಅನ್ನೋ ವಿಚಾರ ಕೂಡಾ ಕಾಡತ್ತೆ.
    ವ್ಯವಹಾರ ಬಹಳ ಕಷ್ಟ ಮೇಡಂ. ಅದರಲ್ಲೂ ಭಾವುಕ ಜೀವಿಗಳು ಅದರಲ್ಲಿ ಸೋಲೋದೆ ಸೈ.. ಆದರು ನಿಮ್ಮ ಹಟಮಾರಿತನ, ನಿಮ್ಮ ಛಲ ನೀವು ಅವುಗಳನ್ನ ಸಾಧಿಸಿದ್ದ ಪರಿ ಕಂಡು ಇನ್ನೂ ಒಂದು ಥರದ ಅಭಿಮಾನ ಮೂಡತ್ತೆ. ಬರಹ ಇಷ್ಟ ಆಯ್ತು.

    ಪ್ರತಿಕ್ರಿಯೆ
  11. Gopaal Wajapeyi

    ಪಾಪ ಅನಿಸ್ತು… ಕೋಪನೂ ಬಂತು… ಥೂ ಆ ಕಳ್… ಮಕ್ಳನ್ ತಗೊಂಡೋಗಿ… ಭಾರತಿ, ನಿಮ್ಮ ಸುಭಗ ಶೈಲಿಗೆ ಜೈ…

    ಪ್ರತಿಕ್ರಿಯೆ
  12. Anonymous

    ಬಾ ತಾಯಿ ಭಾರತಿಯೇ ……ನಿಮ್ಮಿಂದ we demand a comedy ಫಿಲ್ಲಂ ಸ್ಕ್ರಿಪ್ಟ್. ಇನ್ನಂತೂ ಇದನ್ನು ಮುಂದೆ ಹಾಕುವಂತೆಯೇ ಇಲ್ಲ. ಇಲ್ಲಾ ಅಂದ್ರೆ …..ಮೇಲೆ ವಿವರಿಸಲಾಗಿರುವ ಅಸ್ತ್ರಗಳೆಲ್ಲವೂ ನಮ್ಮ ಕೈಯಲ್ಲಿ !

    ಪ್ರತಿಕ್ರಿಯೆ
  13. ಶಮ, ನಂದಿಬೆಟ್ಟ

    ಅಡ್ಡ ಬಿದ್ದೆ ತಾಯೀ… ನಿಮ್ ಪಾದ ಜೆರಾಕ್ಸ್ ಕೊಟ್ಟಿರಿ ಒಂದು ಏನಕ್ಕೂ ಇರ್ಲಿ…
    ಅಂದ್ಹಂಗೆ ನಂಗೊಂದಷ್ಟು ಬಾಕಿ ಬರೋದಿದೆ… ಅಲ್ಲೇ ನಿಮ್ಮನೆ ಹತ್ತಿರವೇ ಅವರ ಮನೆ.. ಬಂದೆ ಇನ್ನೊಂದೆರಡು ದಿನದಲ್ಲಿ ತಮ್ಮ ಭೇಟಿ ಮತ್ತು ಮಾರ್ಗದರ್ಶನಕ್ಕೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: