ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ’ಕ್ಯಾ ಸೆ ಕ್ಯಾ ಹೋಗಯಾ….’

ಅಹವಿ ಮನೆಯಲ್ಲಿನ ಏಕಾಂಗಿತನಕ್ಕೆ ಹೆದರಿದವಳಂತೆ ಕಾಡಿನ ದಾರಿಯಲ್ಲಿ ಸುಮ್ಮನೆ ನಡೆಯುತ್ತ ಇದ್ದಳು. ಎದುರಿಗೆಲ್ಲ ದಟ್ಟ ಕಾಡು. ಸ್ವಲ್ಪವೇ ಸ್ವಲ್ಪ ಇದ್ದ ಸೂರ್ಯನ ಮಂದ ಬೆಳಕು. ಯಾಕೋ ಉದಾಸೀನ ಎಲ್ಲದಕ್ಕೂ ಅಂದುಕೊಂಡಳು. ಅದೇ ಅದೇ ಕಾಡು, ಅದೇ ಕಾಡು ಹೂಗಳು, ಅದೇ ಎಲ್ಲ ಹೂಗಳ ಮೊತ್ತದ ಘಾಟು ಪರಿಮಳ, ಅದೇ ಕಾಡು ಹಣ್ಣುಗಳು. ಯಾಕೋ ಯಾವುದೂ ಅವಳನ್ನು ಬದುಕಿಗೆ ಕಟ್ಟಿ ಹಾಕಲು ಶಕ್ತವೆನಿಸಲಿಲ್ಲ. ಯಾಕೆ ಹೀಗೆ ಅಂದುಕೊಳ್ಳುತ್ತಾ ಹೆಜ್ಜೆ ಹಾಕುತ್ತಿದ್ದಳು. ಅವಳಿಗೆ ಆ ನಿಮಿಷಕ್ಕೆ ಹೊಳೆಯಿತು … ಹೌದು, ಇತ್ತೀಚೆಗೆ ನನ್ನಲ್ಲಿ ಯಾವುದೂ ಕನಸೇ ಇಲ್ಲ! ಹಾಗಾಗಿಯೇ ಈ ಉದಾಸೀನ ಎಂದು. ಈ ಗಿಡ ಮರಗಳ ಕೊಂಬೆಗೆ ಕನಸುಗಳು ಜೋತು ಬಿದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು. ಒಂದಿಷ್ಟನ್ನು ಕಿತ್ತು ಎದೆಯಲ್ಲಿ ನೆಟ್ಟು ಬೆಳೆಸಬಹುದಿತ್ತು ಅನ್ನಿಸಿತು. ಸುಮ್ಮನೆ ಎಲ್ಲ ವಿಲಕ್ಷಣ ಯೋಚನೆಗಳು…
‘ಎಷ್ಟು ಚಂದವಿದ್ದೀಯ ನೀನು! ನಿನ್ನ ಹೆಸರೇನು?’ ದನಿ ಬಂದತ್ತ ತಿರುಗಿದರೆ ಅಲ್ಲಿತ್ತು ಒಂದು ಕಡು ನೀಲ ವರ್ಣದ ಸುಂದರ ಚಿಟ್ಟೆ. ಅದ್ಭುತ ಚಿತ್ರಕಾರನೊಬ್ಬ ಕುಳಿತು ತಾಳ್ಮೆಯಿಂದ ಅದರ ರೆಕ್ಕೆಗಳನ್ನು ಸೃಷ್ಟಿಸಿದನೋ ಅನ್ನುವಷ್ಟು ಸೊಗಸಿನ ಬಣ್ಣ. ನನ್ನ ಹೆಸರು ಅಹವಿ ಅಂದಳು ಯಾವುದೋ ಮಾಯಾಲೋಕದಲ್ಲಿರುವ ಹಾಗೆ. ನನಗೆ ನಿನ್ನ ಮೇಲೆ ಮನಸ್ಸಾಗಿದೆ ಅಹವಿ… ನೀನು ನನ್ನವಳಾಗುತ್ತೀಯಾ?’ ಅಂದಿತು ಆ ಕಾಮನಬಿಲ್ಲಿನಂತ ಚಿಟ್ಟೆ!
ಸುಮ್ಮನೇ ಯಾರೋ ಮುಷ್ಟಿ ತುಂಬ ನೀಲ ಬಣ್ಣ ತುಂಬಿ ಒಂದು ಸಲ ಜೋರಾಗಿ ಗಾಳಿಗೆ ಬೀಸಿದರೆ ಅವಳ ಸುತ್ತ ಆ ಬಣ್ಣ ಹರಡಿ ಇಡೀ ಜಗತ್ತೇ ನೀಲ ವರ್ಣ ತಳೆದ ಹಾಗೆ ಅನ್ನಿಸಿತು ಅಹವಿಗೆ. ನೀನು ಯಾರು ಅಂದಳು ಅಹವಿ ಮಂತ್ರ ಶಕ್ತಿಗೆ ಒಳಗಾದವಳಂತೆ, ಬೆರಗಿನಿಂದ. ನಾನು ಫರಾಶಾ ಅಂದಿತು ಆ ಚಿಟ್ಟೆ. ಫರಾಶಾ! ಎಂಥ ಸುಂದರ ಹೆಸರು! ನೀನು ನನ್ನವಳಾಗುತ್ತೀಯಾ ಅಂತ ಕೇಳಿದ್ದು ನನ್ನನ್ನೇ? ಅಹವಿಗೆ ಅನುಮಾನದಲ್ಲಿ ಕೇಳಿದಳು. ಹೌದು, ನಿನ್ನನ್ನೇ. ಮತ್ತೆ ಯಾರಿದ್ದಾರೆ ಇಲ್ಲಿ ಅಂದಿತು ಫರಾಶಾ. ಅಹವಿ ನಕ್ಕಳು …ಆಹ್! ಎಂತ ಚಂದದ ಅನಿಸಿಕೆ. ಯಾರದ್ದಾದರೂ ಆಗಿಹೋಗುವುದು!!
ಆದರೆ ಅಹವಿಗೆ ಸಣ್ಣ ಅನುಮಾನ …ಬಣ್ಣ ಬಣ್ಣದ ರೆಕ್ಕೆಯಿಲ್ಲದ, ಬೆಡಗಿಲ್ಲದ, ಸೊಬಗಿಲ್ಲದ ನಾನು ಆ ಚಿಟ್ಟೆಗೆ ಯಾಕೆ ಇಷ್ಟವಾದೆ? ಅಂತ. ಹಾಗಂತ ಕೇಳಿಯೇ ಬಿಟ್ಟಳು. ಫರಾಶಾ ಸುಮ್ಮಗೆ ನಕ್ಕಿತು …ಮಾತಿಲ್ಲದೇ ನೆಲಕ್ಕೆ ರೆಕ್ಕೆ ಆನಿಸಿ ಕುಳಿತಿತು … ಅಹವಿ ಯೋಚಿಸದೇ ಚಿಟ್ಟೆಯ ಬೆನ್ನೇರಿದಳು, ಪಾರಿಜಾತದಷ್ಟು ಹಗೂರವಾಗಿ. ಫರಾಶಾನ ರೆಕ್ಕೆಗಳು ಮಾಯಾಕಂಬಳಿಯ ಹಾಗಿದ್ದವು. ಅದರ ಮೇಲೆ ಕೂತ ಅಹವಿ ತನಗೇ ರೆಕ್ಕೆ ಬಂದಂತೆ ಸಂಭ್ರಮಿಸಿದಳು. ಅಹವಿಯ ಬದುಕಿನಲ್ಲೀಗ ಬೇಸರದ ಘಳಿಗೆಗಳು ಇದ್ದವೇ ಅಂದುಕೊಳ್ಳುವಷ್ಟು ಖುಷಿ.
ಕಡು ನೀಲದ ರೆಕ್ಕೆಗಳ ಫರಾಶಾ ಮನೆಯಲ್ಲಿ ಅವಳ ಜೊತೆಗೇ …ಸದಾ ಕಾಲ. ಬೆಳಿಗ್ಗೆಯೇ ಎದ್ದು ಅಹವಿಯ ಪಾದದ ಮೇಲೆ ಕೂತ ಫರಾಶಾ ಬೇಗ ಏಳು, ಬೇಗ ಅಂತ ಅವಸರಿಸಿತು. ಕಣ್ಣು ಬಿಟ್ಟ ಅವಳಿಗೆ ಗಾದಿಯ ಮೇಲೆಲ್ಲ ನೀಲ ನಕ್ಷತ್ರ ಮಿನುಗುತ್ತಿರುವ ಹಾಗೆ ಭಾಸವಾಯಿತು. ಅದು ಫರಾಶಾ ಅಲ್ಲಿ ಮಲಗಿದ್ದರ ಗುರುತು. ಗುಡಿಸಲ ತುಂಬ ಅಲ್ಲಲ್ಲಿ ನೀಲ ನಕ್ಷತ್ರಗಳು ಮಿನುಗುತ್ತಿದ್ದವು. ಬದುಕು ಯಾಕಿಷ್ಟು ಸುಂದರ ಅಂದುಕೊಳ್ಳುತ್ತಾ ಎದ್ದಳು ಅಹವಿ. ಅವತ್ತಿನಿಂದ ಅಹವಿಯ ಬದುಕು ಬದಲಾಗಿ ಹೋಯಿತು. ಅವಳ ಹೆಜ್ಜೆಯಲ್ಲೇ ಈಗೊಂದು ಲಯವಿತ್ತು … ಪ್ರೇಮ ತಂದುಕೊಡುವ ಲಯ ಅದು!
ಅಹವಿ ಅವಳ ಕೆಲಸದಲ್ಲಿ ಮುಳುಗಿದಾಗಲೂ ಬದುಕು ತುಂಬ ಚೆಂದವಿದೆ ಅನ್ನಿಸುತ್ತಿತ್ತು. ಫರಾಶಾಗೆ ಹೊಟ್ಟೆ ಹಸಿವಾಯಿತೇನೋ … ನಾನು ಹೋಗಿ ಮಕರಂದ ಹೀರಿ ಬರುತ್ತೇನೆ ಅಂದಿತು. ಬೇಡ ಫರಾಶಾ ನಿನಗೆ ಇಷ್ಟವಾಗುವುದನ್ನೇ ಮಾಡಿ ತಿನ್ನಲು ಕೊಡುತ್ತೇನೆ ಅಂತ ಅಹವಿ ಅನ್ನುವಷ್ಟರಲ್ಲಿ ಫರಾಶಾ ಆ ಮಾತು ಕಿವಿಗೇ ಬೀಳದಂತೆ ಹೊರಗೆ ಹಾರಿಯಾಗಿತ್ತು. ಅಹವಿಗೆ ಮನಸ್ಸು ತುಂಬ ಯಾಕೋ ಕಸಿವಿಸಿ.

ಒಂದಷ್ಟು ಹೂಗಳನ್ನು ತಬ್ಬಿ, ಪೀಡಿಸಿ ಮಕರಂದ ಹೀರಿ ಬಂದಿತು ಫರಾಶಾ. ಅಲ್ಲಿಗೆ ಅದರ ಹಸಿವೆಯ ಆಟ ಮುಗಿಯಿತು. ಇನ್ನೂ ಮಂಕಾಗಿಯೇ ಇದ್ದ ಅಹವಿ ‘ಮನುಷ್ಯಳಾದ ನನ್ನ ಜೊತೆ ಬದುಕು ಬೇಕು, ಆದರೆ ಉಳಿದಂತೆ ನೀನು ಚಿಟ್ಟೆಯಾಗಿಯೇ ಉಳಿಯುವುದು ಹೇಗೆ ಸಾಧ್ಯ?’ ಅಂದಳು ಫರಾಶಾನಿಗೆ. ಫರಾಶಾ ಆ ಮಾತು ಕೇಳಿಸಲೇ ಇಲ್ಲ ಅನ್ನುವ ಸುಮ್ಮನೆ ಕೂತಿತ್ತು. ಯಾಕೆ ಇಲ್ಲದ ಮಾತು, ಬೇಸರ ಅಂದುಕೊಳ್ಳುತ್ತಾ ಸುಮ್ಮನಾದಳು. ಹಾಗೆ ಹೋಗಿ ಬಂದ ಫರಾಶಾ ಇನ್ನುಳಿದಂತೆ ಅಹವಿಯ ಅಕ್ಕ ಪಕ್ಕದಲ್ಲೇ ಹಾರಾಡುತ್ತ ಉಳಿಯಿತು. ಅಂಗಳದಲ್ಲಿನ ಗಿಡಗಳಿಗೆ ನೀರು ಹಾಕುವಾಗ, ಹೂ ಬಿಡಿಸುವಾಗ, ಮನೆಯನ್ನು ಓರಣಗೊಳಿಸುವಾಗ ಪಕ್ಕದಲ್ಲಿಯೇ ಇರುವ ಫರಾಶಾ ಮೋಹದಲ್ಲಿ ಬಿದ್ದುಬಿಟ್ಟಳು ಅಹವಿ.
ಮನೆಯಲ್ಲಿ ಎಲ್ಲೆಲ್ಲೋ ಕೂತಾಗ, ಕೈ ಇಟ್ಟಾಗ, ಪಾದ ಸೋಕಿಸಿದಾಗ ಅಂಟುವ ಫರಾಶಾ ರೆಕ್ಕೆಯ ನೀಲ ನೀಲ ಹುಡಿಗೆ ಅಹವಿ ಪರವಶಳಾದಳು. ಅಂದಿನಿಂದ ಫರಾಶಾ ಮಕರಂದ ಹೀರಿ ಬರುವವರೆಗಿನ ಸಮಯ ಅಹವಿಗೆ ಅಭ್ಯಾಸವಾಗಿ ಹೋಯಿತು. ಅದು ಇಲ್ಲದಾಗಿನ ಘಳಿಗೆಗಳಲ್ಲಿ ಅದರ ನೀಲ ಹುಡಿಯನ್ನು ಬೆರಳಿಗೆ ಮೆತ್ತಿಕೊಂಡು ತಾನೇ ಮೈಯೆಲ್ಲ ಸ್ಪಶಿಸಿಕೊಳ್ಳುತ್ತಿದ್ದಳು … ಫರಾಶಾ ಎದುರು ನಿಂತು ಸ್ಪರ್ಶಿಸುತ್ತಿರುವ ಹಾಗೆ! ನೀನಿಲ್ಲದಿರುವಾಗಲೂ ನೀನು ಇಲ್ಲಿ ಇರುತ್ತೀ ಫರಾಶಾ ಅಂತ ಮೆತ್ತಗೆ ಹೇಳಿಕೊಳ್ಳುತ್ತಿದ್ದಳು …ಅಹವಿಯ ಬದುಕೀಗ ಬಣ್ಣಗಟ್ಟಿತ್ತು!
ಅವತ್ತೊಂದು ದಿನ ಅಹವಿ ಎದ್ದಾಗ ಯಾಕೋ ಮೈ ಕೈಲಿ ಸಣ್ಣಗೆ ಸೂಜಿ ಚುಚ್ಚಿದ ಹಾಗೆ ಉರಿ. ಗಾದಿಯ ಮೇಲೆಲ್ಲ ತಡವಿದ ನೋಡಿದಳು. ಏನೂ ಇರಲಿಲ್ಲ. ಉರಿ ನನ್ನ ಭ್ರಮೆಯೇನೋ ಅಂತ ಸುಮ್ಮನಾದಳು. ಆದರೆ ಅಲ್ಲಲ್ಲಿ ಕೆಂಪಾದ ಅವಳ ಮೈ ಅದು ಭ್ರಮೆಯಲ್ಲ ಅಂತ ಹೇಳಿತು. ಆದರೆ ಅಹವಿಗೆ ಆ ಉರಿ ಮತ್ತು ಚುಚ್ಚುವಿಕೆಗೆ ಕಾರಣ ಮಾತ್ರ ಹೊಳೆಯಲೇ ಇಲ್ಲ. ಫರಾಶಾ ನನಗೆ ಮೈ ಎಲ್ಲ ಉರಿ, ಉರಿ … ಯಾಕಿರಬಹುದು? ಅಂದಳು. ಫರಾಶಾ ಹಸಿವೆಯಾಯಿತು ಎಂದು ಹೊರಟಿದ್ದ ಘಳಿಗೆ ಅದು. ಅಹವಿಗೆ ಉತ್ತರಿಸಲು ತಾಳ್ಮೆ ಇಲ್ಲ ಅನ್ನುವ ಹಾಗೆ ಮಾತಿಲ್ಲದೇ ಹಾರಿ ಹೋಯ್ತು. ಅಹವಿ ಬಾವಿಯ ಹತ್ತಿರ ನೀರು ತರಲು ಹೋದಾಗೊಮ್ಮೆ ಪಾದಕ್ಕೆ ಏನೋ ಚುಚ್ಚಿದ ಹಾಗಾಯ್ತು. ಚೀರಿ ಕೂತ ಅಹವಿಗೆ ಪಾದ ನೋಡಿಕೊಂಡರೆ ಗಾಯವೇನೂ ಕಾಣಿಸಲಿಲ್ಲ. ಆದರೆ ಗಾಯವಿದ್ದರೆ ಮಾತ್ರ ನೋವೇ? ಒಳಗೊಳಗೆ ಉರಿವ ಉರಿಗೆ ಅದರ ಸಾವಿರ ಪಟ್ಟು ನೋವು ಅಂದಕೊಂಡಳು. ಪಾದಕ್ಕೆ ತಣ್ಣಗಿನ ನೀರು ಹನಿಸಿ ನೀರು ಸೇದದೇ ವಾಪಸ್ಸಾದಳು. ಅಷ್ಟರಲ್ಲಿ ಬಂದು ಕೂತಿದ್ದ ಫರಾಶಾ ಖಾಲಿ ಕೈಲಿ ಯಾಕೆ ಬಂದೆ ಅಂದಿತು. ಅಹವಿ ಯಾಕೋ ಮಾತಾಡದೇ ಸುಮ್ಮನಿದ್ದಳು.

ಅಲ್ಲಿಂದ ಮುಂದೆ ಅಹವಿಗೆ ಆಗಾಗ ಈ ಅನುಭವ ಆಗುತ್ತಲೇ ಹೋಯ್ತು. ಕೂತಲ್ಲಿ, ನಿಂತಲ್ಲಿ ಇದ್ದಕ್ಕಿದ್ದಂತೆ ಏಳುವ ಉರಿ ಒಂದೊಂದು ಸಲ ಅಸಹನೀಯ ಅನ್ನಿಸುತ್ತಿತ್ತು. ಆದರೆ ಉರಿಗೆ ಮೂಲ ಕಾರಣ ಮಾತ್ರ ಗೊತ್ತಾಗಲಿಲ್ಲ. ಇಡೀ ಮನೆ ನೀರು ಹಾಕಿ ತೊಳೆದಳು. ಗಾದಿಯ ಮೇಲಿನ ವಸ್ತ್ರ ತೊಳೆದಳು. ಅಂಗಳವನ್ನೆಲ್ಲ ಶುಭ್ರ ಮಾಡಿದಳು. ಆದರೂ ಆ ಚುಚ್ಚುವಿಕೆ ಮತ್ತು ಉರಿ ಮಾತ್ರ ದಿನ ದಿನಕ್ಕೆ ಹೆಚ್ಚುತ್ತಲೇ ಹೋಯ್ತು. ಅಳು ದನಿಯಲ್ಲಿ ಒಮ್ಮೊಮ್ಮೆ ಫರಾಶಾ ನೀನಾದರೂ ನನ್ನ ಜೊತೆ ಸ್ವಲ್ಪ ಹುಡುಕು ಅಂತ ಬೇಡುತ್ತಿದ್ದಳು. ಫರಾಶಾ ಒಂದೇ ಒಂದು ಸಲವೂ ಆ ಪ್ರಯತ್ನಕ್ಕೂ ಇಳಿಯದೇ ಕೂತಿರುತ್ತಿತ್ತು. ಅದು ತನ್ನೊಡನೆ ಇದೆ ಅಂದುಕೊಂಡಿದ್ದು ತನ್ನದೇ ಭ್ರಮೆಯಿದ್ದಿರಬೇಕು ಅನ್ನಿಸಿತು ಅಹವಿಗೆ. ಅವಳ ಆ ಉರಿ, ಸಂಕಟ ಫರಾಶಾ ಜಗತ್ತಿಗೆ ಸೇರಿಯೇ ಇರಲಿಲ್ಲ …
ಅವತ್ತು ಅಹವಿಗೆ ಯಾಕೋ ಎಚ್ಚರದಂತಹ ನಿದ್ರೆ. ನಿದ್ರೆಯಲ್ಲೂ ಜಾಗೃತವಾಗಿಯೇ ಇರುವಂಥ ಚಡಪಡಿಕೆ. ರೆಪ್ಪೆ ಕೂಡಾ ಮುಚ್ಚಿಲ್ಲ ಅನ್ನುವಂಥ ತೆಳು ನಿದ್ರಾವಸ್ಥೆ. ಎದ್ದಾಗ ಕೂಡಾ ಬದುಕನ್ನು ಕನಸಿನಂತೆ ಕಳೆಯುತ್ತಿದ್ದ ಅಹವಿಗೆ ಈಗ ನಿದ್ರೆಯಲ್ಲೂ ಕನಸು ಹತ್ತಿರವಾಗುತ್ತಿರಲಿಲ್ಲ. ಬೆಳಕಾದ ನಂತರ ಆಗೀಗ ಕಾಡಿಸುವ ಆ ಉರಿ ಅವಳನ್ನು ತಲ್ಲಣಗೊಳಿಸಿದೆ. ಹಾಗಾಗಿ ನಿದ್ರೆಯಲ್ಲಿ ಕೂಡಾ ಅದರದ್ದೇ ನೆನಪು. ಫರಾಶಾ ಈ ಮುಳ್ಳಿನಂತೆ ಚುಚ್ಚುವುದು ಏನು ಅಂತ ಹುಡುಕು ಫರಾಶಾ … ನನ್ನ ಜೊತೆಗೆ ನೀನೂ ಕೈ ಜೋಡಿಸಿದರೆ ಮಾತ್ರ ನಾನು ಈ ಉರಿ ಕಳೆದು ನೆಮ್ಮದಿಯಾಗಬಲ್ಲೆ … ಅವಳು ನಿಜಕ್ಕೂ ಹೇಳಿದಳೋ? ನಿದ್ರಾವಸ್ಥೆಯಲ್ಲೋ? ನನಗೆ ಈ ಉರಿ ಸಾಕಾಗಿದೆ ಫರಾಶಾ … ಅಹವಿಯ ದನಿಯೀಗ ಯಾಕೋ ಅಳುವಿನಲ್ಲಿ ಅದ್ದಿದಂತಿತ್ತು.
ಅದು ಕೂಡಾ ನಿದ್ರೆ? ಎಚ್ಚರ? ನನಗೆ ಸಾಕಾಗಿದೆ ಇದೆಲ್ಲ … ಅಯ್ಯೋ! ಬಾಯಾರಿಕೆ … ನೋಡು, ಮತ್ತೆ ಶುರುವಾಯ್ತು ಆ ಮುಳ್ಳಿನ ಗೀರಿನಂತಾ ಚುಚ್ಚು ಮತ್ತು ಉರಿ…ಅಹವಿ ಧಿಗ್ಗನೆ ಎದ್ದು ಕೂತಳು ಬೆವರುತ್ತಾ. ಮೈ ಎಲ್ಲ ಒದ್ದೆಯಾಗಿಹೋಗಿತ್ತು. ಪಕ್ಕ ತಿರುಗಿ ನೋಡಿದರೆ ಫರಾಶಾನ ನೀಲ ಬಣ್ಣ ಕಾಣಿಸಲೇ ಇಲ್ಲ! ಅಹವಿ ಗಾಭರಿಯಿಂದ ಎದ್ದು ಕಂದೀಲು ಹೊತ್ತಿಸಿ ಗುಡಿಸಲನ್ನು ಬೆಳಗಿಸಿ ಗಾದಿಯ ಕಡೆ ತಿರುಗಿದವಳು ಎದೆಯಲ್ಲಿನ ಚೀತ್ಕಾರ ಅದುಮುತ್ತಾ ನಿಂತುಬಿಟ್ಟಳು … ಕತ್ತಲಿನ ಬಣ್ಣದಲ್ಲಿ ಒಂದಾಗಿ ಹೋಗಿದ್ದ, ಕಪ್ಪು ರೋಮಗಳಿಂದ ತುಂಬಿದ್ದ ಕಂಬಳಿ ಹುಳು ಗಾಢ ನಿದ್ರೆಯಲ್ಲಿತ್ತು … ಚಿಟ್ಟೆಯಾಗಿದ್ದ ನೀಲ ಫರಾಶಾ ಕಂಬಳಿ ಹುಳುವಾಗಿ ಬದಲಾಗಿದ್ದ…!

‍ಲೇಖಕರು avadhi

9 May, 2013

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. Raghunandan K

    ಬಹುಶಃ ಸಂಬಂಧಗಳು ಹೀಗೇ ಏನೋ… ಆರಂಭದಲ್ಲಿ ಚಿಟ್ಟೆ ನಂತರದಲ್ಲಿ…
    ಕಾಡುವ ಕಥೆ ಕೊಟ್ಟಿದ್ದಕ್ಕೆ ಧನ್ಯವಾದ…

  2. Swarna

    ಮೋಹಿಸಿದ ಚಿಟ್ಟೆ ಕಂಬಳಿ ಹುಳುವಾದ ಘಳಿಗೆ 🙁

  3. Sandhya Bhat

    abba..!!! enthaa tiruvu… chennaagide.. kaaduva kathe idu

  4. Naveen

    waw… baduku ishtu saralavagi katheyagboda…

  5. chalam

    tumba chendada yochane…aste sundara nirupane..

  6. Aravind

    ondolle kavitheyanthide Bharathi.

  7. ಸವಿತ ವಿನು

    ವಾವ್!!!!!!
    ಎಂಥ ನವಿರು ನೋವಿನ ಕಥೆ!!
    ಮೋಹಕ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading