ಮಹಾಕಾದಂಬರಿಯ ರಂಗಾನುಭೂತಿ – ವಿಕಾಸ್ ನೇಗಿಲೋಣಿ

-ವಿಕಾಸ ನೇಗಿಲೋಣಿ

ಫೋಟೋ : ಸುರೇಶ್ ಕುಮಾರ್

1.
ನಾಗಕ್ಕ ಒಂದು ದಿನ ತೋಟಕ್ಕೆ ಹೋದವಳು ಕೇಳಲೋ ಬೇಡವೋ ಎನ್ನುತ್ತಲೇ ಚಿನ್ನಮ್ಮನ ಹತ್ತಿರ ಕೇಳಿಬಿಡುತ್ತಾಳೆ:
`ನಿನ್ನೆ ರಾತ್ರಿ ನನ್ನ ಗಂಡ ಬಂದಿದ್ದ, ನಿಜವೇನೇ?’
-ಆ ರಾತ್ರಿ ಅವಳ ಅತ್ತೆ ಹಾಲಲ್ಲಿ ಮತ್ತು ಬೆರೆಸಿ ಕುಡಿಸಿದ್ದಾಳೆ, ಕುಂಟ ಯಂಕ್ಟಪ್ಪ ಬಂದು ಅವಳ ಜೊತೆ ಸುಖಿಸಿ ಹೋಗಿದ್ದಾನೆ. ಅವಳ ಮನಸಿನಲ್ಲಿ ಗಂಡನಿದ್ದೂ ಈ ಪ್ರಶ್ನೆ ಕೇಳಿದಳೇ, ಅವಳಿಗೆ ತನ್ನ ಪಕ್ಕ ಬಂದವನು ಗಂಡನಲ್ಲ ಎನ್ನುವ ಸತ್ಯ ಗೊತ್ತಿತ್ತೇ, ನಿಜ ಗೊತ್ತಾಗುತ್ತಲೇ ಆಘಾತದಲ್ಲಿ ಮೂರ್ಛೆ ಹೋದವಳ ಮನದಲ್ಲಿ ಅಪಚಾರದ ಭಯವಿದ್ದಿತ್ತೇ, ಅಪವಾದದ ಭಯ ಇದ್ದಿತ್ತೇ?
2.
ಐತು-ಪೀಂಚಲು ಇಬ್ಬರನ್ನೂ ಯಾವುದೋ ಕೆಲಸದ ನೆಪದಿಂದ ಮುಕುಂದ ತೋಟಕ್ಕೆ ಕರೆದೊಯ್ದಿದ್ದಾನೆ. ಹೇಗೋ ನಾಟಕ ಮಾಡಿ ಐತುವನ್ನು ಮುಕುಂದ ಅಲ್ಲಿಂದ ಸಾಗ ಹಾಕಿದ್ದಾನೆ. ಈಗ ತೋಟದಲ್ಲಿ ಪೀಂಚಲು ಮತ್ತು ಮುಕುಂದ ಇಬ್ಬರೇ. ಇನ್ನೇನೋ ರಾಜಕಾರ್ಯಕ್ಕೆ ಪೀಂಚಲನ್ನು ಮುಕುಂದ ಸಜ್ಜುಗೊಳಿಸಿ ಅವರಿಬ್ಬರ ಮಧ್ಯೆ ಇರುವುದು ಅಕ್ರಮ ಸಂಬಂಧದ ಸೋಂಕು ಅಲ್ಲವೆಂದು ಗೊತ್ತಾಗುವ ಹೊತ್ತಿಗೆ ಥಟ್ಟನೆ ಐತು ಬರುತ್ತಾನೆ. ಅವರಿಬ್ಬರ ಸಂಬಂಧದ ಬಗ್ಗೆ ವಿಚಿತ್ರ ಅನುಮಾನದ ಗಾಳಿ ಅವನ ಕಿವಿ ಹೊಕ್ಕು ಅವನು ವಿಚಲಿತನಾಗುತ್ತಾನೆ.
ಆ ಕಡೆ ಮುಕುಂದ ಚಿನ್ನಮ್ಮನ ಭ್ರಾಂತಿನಲ್ಲಿದ್ದರೂ, ಐತು ಪೀಂಚಲಿನ ಅಮಲಿನಲ್ಲಿದ್ದರೂ ಪೀಂಚಲಿನ ಎದೆಯ ಕಡಲು ನಿಜಕ್ಕೂ ಒಂದು ಕ್ಷಣ ಮುಕುಂದನ ಕಡೆ ಅನುರಾಗದಿಂದ ಬೀಗದೇ ಹೋಗಿತ್ತೇ?

*

ಅಲ್ಲಿ ನಾಗಕ್ಕ, ಇಲ್ಲಿ ಪೀಂಚಲು. ಮತ್ತೊಂದು ಕಡೆ ಕಾವೇರಿ, ಇನ್ನೆಲ್ಲೋ ನಾಯಿಗುತ್ತಿ, ಮತ್ತೊಂದು ಕಡೆ ತಿಮ್ಮಿ. ಎದೆಯ ಕಡಲು ಗಾಳಿಗಷ್ಟೇ ಪ್ರಾಮಾಣಿಕ ಹೊರತೂ ಗಾಳಿ ಸೋಂಕಿ ಬರುವ ವ್ಯಕ್ತಿಗಳಿಗಲ್ಲ. ಒಂದು ಮನವು ಮತ್ತೊಂದು ಕಡೆಗೆ ಹೊಯ್ದಾಡುವ ಸತ್ಯವನ್ನು ಆ ಕ್ಷಣಕ್ಕೆ ತಿಳಿದುಕೊಂಡಷ್ಟೇ ತಿಳಿವಿಗೆ ಬರುವುದು. ಇಂಥ ಒಂದು ಕ್ಷಣದಲ್ಲಿ ಮಿಂಚಿನಂತೆ ಹೊಳೆದ, ಮೊಗ್ಗೊಂದು ಥಟ್ಟನೆ ಹೂವಾಗಿ ಬಿರಿದ ಅಪೂರ್ವ ಘಟನೆಗಳೆಲ್ಲಾ `ಮಲೆಗಳಲ್ಲಿ ಮದುಮಗಳು’ ನಾಟಕ ನಡೆದ ರಾತ್ರಿ ನಡೆದಿವೆ, ನಡೆಯುತ್ತಿವೆ. ಪ್ರೇಕ್ಷಕ ಕತೆಯ ಹಿಂದೆ ಓಡುತ್ತಾ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಧಾವಿಸುತ್ತಾ ಮುಂದೇನಾಗುತ್ತೆ ಅಂತ ಕಾಯುತ್ತಾ ನಿಲ್ಲುವುದರ ಜೊತೆಗೇ ಹೀಗೆ ನಾಟಕದುದ್ದಕ್ಕೂ ಎದುರಾಗುವ ಬಿಟ್ಟ ಸ್ಥಳಗಳನ್ನು ನೋಡಬೇಕು, ನಾವು ಆ ಕ್ಷಣ ಆಯಾ ಪಾತ್ರಗಳೇ ಆಗಿ ಆ ಬಿಟ್ವಿನ್ ದಿ ಲೈನ್ನ ಅರ್ಥವನ್ನು ಹೊಳೆಸಿಕೊಳ್ಳಬೇಕು.
ಇದೀಗ ಕನ್ನಡ ರಂಗಭೂಮಿಯ ಬೃಹತ್ ಘಟನೆಯಂತೆ ರಂಗಾಸಕ್ತರು ಸಿಕ್ಕಲ್ಲೆಲ್ಲಾ ಇದೇ ಸುದ್ದಿ, ಮಲೆನಾಡಿನ ಮದುಮಗಳು ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ವಾರದಲ್ಲಿ ಮೂರು ರಾತ್ರಿ ಮೈದಾಳುತ್ತಿರುವ ಬಗ್ಗೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿರೆಂದರೂ ರಿಂಗಾಗಬಹುದು ಸೆಲ್ಲು, ಮಾತಾಡಬೇಡಿರೆಂದರೂ ಕಿಸಕ್ಕೆನ್ನಬಹುದು ದೃಶ್ಯಗಳ ಮಧ್ಯೆ ಮಧ್ಯೆ ಹರಯದ ಹುಡುಗರು, ಪ್ರಣಯದೃಶ್ಯದ ಉತ್ಕಟತೆಯಲ್ಲಿ ಯಾರೋ ಹಾಕಬಹುದು ಕಳ್ಳ ಶಿಳ್ಳೆ. ಆದರೆ ಕನಿಷ್ಠ ಐವತ್ತು ವರ್ಷಗಳ ಹಿಂದೆ ಮಲೆನಾಡಿನ ಮಣ್ಣಲ್ಲಿ ಹೂಬಿಟ್ಟ, ಫಲಬಿಟ್ಟ ಐತು, ಪೀಂಚಲು, ನಾಯಿಗುತ್ತಿ, ಗುತ್ತಿಯ ನಾಯಿ, ಹಂದಿ, ಕುರ್ಕ, ಮೈಮೇಲೆ ಬರುವ ದಯ್ಯ, ಹುಲಿಕಲ್ ನೆತ್ತಿ, ಮೇಗರವಳ್ಳಿಯ ತುಳಸಿ ಕಟ್ಟೆಯಂಗಳ, ಸೂರ್ಯೋದಯದ ನೆತ್ತಿಗಳೆಲ್ಲಾ ಮತ್ತೆ ನಮ್ಮ ನಿಮ್ಮ ಮುಂದೆ ಮೈದಾಳಿವೆ.
ಆ ಪಾತ್ರಗಳೆಲ್ಲಾ ಕೊಂಚವೂ ಮುಕ್ಕಾಗಿಲ್ಲ, ಮಸುಕಾಗಿಲ್ಲ, ಭೌತಿಕ ವ್ಯಾಪಾರಗಳು ಜಾಗತೀಕರಣದ ತವೆಯ ಮೇಲೆ ಬೆಂದು, ಬಾಡಿ, ಬದಲಾಗಿ ರೂಪವನ್ನೇ ಬದಲಿಸಿದರೂ ಮನಸಿನ ವ್ಯಾಪಾರ ಅದೇ, ಅಷ್ಟೇ ಸಂಕೀರ್ಣ ಅಥವಾ ಅದಕ್ಕಿಂತ ಹೆಚ್ಚಿಗೆ ದಾರುಣ. ಹಾಗಾಗಿ ಕಾವೇರಿಯನ್ನು ಹೊತ್ತುಕೊಂಡು ಹೋಗಿ ಅತ್ಯಾಚಾರವೆಸಗಿ (?) ಶಾಲೆಯ ಬಾವಿಗೆಸೆದ ಸೇರೆಗಾರ, ಫಕ್ಕನೆ ಇವತ್ತಿನ ಅತ್ಯಾಚಾರ ಪ್ರಕರಣಗಳೆಲ್ಲದ ಹಿಂದಿನ ಪ್ರಾಚೀನ, ಮೃಗೀಯ ಮನಸ್ಸಾಗಿ ಕಂಡುಬಿಡುತ್ತಾನೆ. ಯಾವ ಪಾತ್ರದ ಮನಸ್ಸಿನ ರೂಪ-ವಿರೂಪಗಳೂ ನಮ್ಮ ಈ ಜಗತ್ತಿಗೆ ಹೊರತಾದವುಗಳೇ ಅಲ್ಲ. ಹಾಗಾಗಿ ಒಂದು ಹಳೆಯ ಕಾದಂಬರಿಯ ದೃಶ್ಯರೂಪದ ಮರು ಓದು ಎಂದು ಈ ರಂಗಪ್ರಯೋಗವನ್ನು ಪ್ರತ್ಯೇಕಿಸಿ ನಾವು ಪರಿಭಾವಿಸಲಾರೆವು. ಹಾಗೆ ಮಾಡಿದರೆ ಬಸು ನಿರ್ದೇಶನದ ಈ ಪ್ರಯೋಗಕ್ಕೆ ನಾವು ಮಾಡುವ ಅಪಚಾರ.
ರಂಗಭೂಮಿ ಸಾಧ್ಯತೆಗಳ ತೊಟ್ಟಿಲು. ಒಬ್ಬೊಬ್ಬ ನಿರ್ದೇಶಕ ತನ್ನ ಕಲ್ಪನೆಯಲ್ಲಿ ಆ ರಂಗವನ್ನು ಅಂತ-ರಂಗಕ್ಕೋ ಬಹಿ-ರಂಗಕ್ಕೋ ವಿಸ್ತರಿಸಬಲ್ಲ. ಬಿವಿ ಕಾರಂತರು ನಾಟಕದ ದೃಶ್ಯ ಮತ್ತು ಶ್ರವಣ ವಿಭಾಗದಲ್ಲಿ ಅಪೂರ್ವ ಪ್ರಯೋಗ ನಡೆಸಿದ್ದರಿಂದಲೇ ಜಡಭರತರ `ಸತ್ತವರ ನೆರಳು’ ರಂಗದಲ್ಲಿ ಕಾರಂತರ `ನೆರಳಾ’ಗಿ ನಡೆದುಬಂತು. ಈ ಹಿಂದೆ ಕಾರ್ನಾಡರ `ಅಗ್ನಿ ಮತ್ತು ಮಳೆ’ಯನ್ನೂ ಸಿ. ಬಸವಲಿಂಗಯ್ಯ ತಮ್ಮದೇ ರಂಗ-ರಚನೆಯನ್ನಾಗಿಸಿದ್ದರು. ಈಗ ಮತ್ತೆ ಕಾದಂಬರಿಯ ರೂಪದ ಕುವೆಂಪು `ಮದುಮಗಳು’, ರಂಗ-ಮಲೆಯ ಮದುಮಗಳಾಗಿ ರೂಪು ಪಡೆದುಕೊಂಡಿದೆ. ವ್ಯವಸ್ಥೆಯನ್ನು ಧಿಕ್ಕರಿಸುವ ಛಾತಿಯನ್ನು ಸದಾ ತೋರುವ `ಬಸು’ ಇಲ್ಲೂ ಮತಾಂತರ, ಮಠಗಳ ಕೇಸರೀಕರಣದ ಬಗ್ಗೆ ತುಸು ದೊಡ್ಡ ಕಂಠದಲ್ಲೇ ಪ್ರತಿಭಟಿಸಿದ್ದಾರೆ. ಅದು `ಮದುಮಗಳಿ’ ಂದ ಕೊಂಚ ದೂರವೇ ಉಳಿದಂತೆ ಕಂಡರೂ ಒಬ್ಬ ನಿರ್ದೇಶಕ ರಂಗಭೂಮಿಯಲ್ಲಿ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯ ಅಂತ ಕರೆಯಬಹುದೇನೋ?
ಭೂತಕಾಲದಿಂದ ವರ್ತಮಾನ ಮತ್ತು ಭವಿಷ್ಯತ್ಕಾಲಕ್ಕೆ, ಕಾದಂಬರಿಯಿಂದ ರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ವಿಸ್ತರಣೆಗೊಂಡು ಸಾಲಂಕೃತವಾಗಿ ಬೆಳಗುತ್ತಿರುವ ಈ ಪಾತ್ರಸಮೂಹ ನಮ್ಮೊಳಗಿರುವ ಎಲ್ಲಾ ಮುಗ್ಧತೆ, ಕ್ರೌರ್ಯ, ಕಾಪಟ್ಯಗಳ ಉತ್ಖನನ.
ಉತ್ಖನನದ ನಂತರ ಚಿನ್ನದ ನಿಕ್ಷೇಪ ಸಿಗುತ್ತದೆ ಅಥವಾ ಸಿಗುತ್ತದೆನ್ನುವ ಭರವಸೆಯಲ್ಲೇ ತಾನೇ ಉತ್ಖನನ, ವ್ಯವಸಾಯದ ಸಾರ್ಥಕತೆ ಅಡಗಿರುವುದು?

‍ಲೇಖಕರು avadhi

May 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. kum.veerabhadrappa

    ವಿಕಾಸ್ ನಿಮ್ಮದು ವಾಚಕರ ಮನಸ್ಸನ್ನು ಸಮ್ಮೋಹಕಗೊಳಿಸುವ ಆಪ್ತ ಬರವಣಿಗೆ, ಓದಿದೊಡನೆ ಎಷ್ಟೊಂದು ಒಳ್ಳೆಯ
    ಸ್ರುಜನಶೀಲ ಬರಹಗಾರ ನಮ್ಮೆಲ್ಲರ ಪ್ರೀತಿಯ ನೆಗಿಲೋಣಿಯೊಳಗೆ ವಿಕಾಸ ಹೊಂದುತ್ತಿರುವನಲ್ಲ ಎಂದು ಸಂತೋಷವಾಯಿತು,
    ಬರೆಯುತ್ತಲೇ ಇರಿ
    ಕುಂವೀ

    ಪ್ರತಿಕ್ರಿಯೆ
  2. Raghunandan K

    ನಾಟಕದ ಗುಂಗಲ್ಲಿರುವಾಗಲೇ ಮತ್ತಷ್ಟು ಅಕ್ಷರದ ರಂಗು ತುಂಬಿದ್ದೀರಿ, ಧನ್ಯವಾದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: