ಅಹವಿ ಹಾಡು – ’ಎಲ್ಲಿ ಹೋದ ನನ್ನ ಮಣಿರತ್ನಂ …. ?’

ಭಾರತಿ ಬಿ ವಿ

ತೀರಾ ಸಣ್ಣ ವಯಸ್ಸಿನಿಂದಲೇ ನನಗೆ ಅಸಾಧ್ಯ ಸಿನೆಮಾ ಹುಚ್ಚು. ಎಲ್ಲರೂ ಸಿನೆಮಾ ತೆಗೆಯೋದೇ ನಾನು ನೋಡಲಿ ಅಂತಲೇನೋ ಅಂದುಕೊಂಡು ಬಿಟ್ಟಿದ್ದೆ. ನಾನು ನೋಡದಿದ್ದರೆ ಪಾಪ ಆ ಪ್ರೊಡ್ಯುಸರ್‌ಗಳ ಗತಿ ಏನಾಗತ್ತೋ ಅನ್ನುವ ಹಾಗೆ ರಿಲೀಸ್ ಆದ ಎಲ್ಲ ಸಿನೆಮಾ ಕೂಡಾ ನಾನು ನೋಡಲೇಬೇಕು! ಅದರಲ್ಲಿ ಅರ್ಧದಷ್ಟು ನಿಜಕ್ಕೂ ತುಂಬ ಕೆಟ್ಟದಾಗಿರುತ್ತಿದ್ದವು. ಆದರೇನು ಮಾಡೋದು .. ನಾನೇ ನೋಡದಿದ್ದರೆ ಮತ್ತೆ ಇನ್ನು ಯಾರು ನೋಡಬೇಕು ಅವುಗಳನ್ನು ಅನ್ನುವ ಉದಾತ್ತತೆ ನನ್ನದು!
ಆ 80ರ ದಶಕದಲ್ಲಿ ಅದೇ ಅದೇ ಖಾಕಿ ಕಥೆಗಳು, ಅದೇ ಅದೇ ತಾಯಂದಿರ ಕಥೆಗಳು, ಅದೇ ಅದೇ ಪ್ರೇಮ ಕತೆಗಳು … ನೋಡಿದ ಒಂದೊಂದು ಸಿನೆಮಾ ಕೂಡಾ ಮುಂಚೆ ನೋಡಿದ ಮತ್ತೊಂದು ಸಿನೆಮಾದ ರೀಮೇಕ್‌ನ ಹಾಗಿರುತ್ತಿತ್ತು! ಹೀರೋ ಎಲ್ಲ ಸಿನೆಮಾದಲ್ಲೂ ಅದೇ ಖಾಕಿ ಹಾಕಿರುತ್ತಿದ್ದ ಮತ್ತು ಎಲ್ಲ ಸಿನೆಮಾದಲ್ಲೂ ಅದೇ ಅದೇ ವಿಲನ್ ಪಾತ್ರ ಮಾಡುತ್ತಿದ್ದ ಪಾತ್ರಧಾರಿಗಳನ್ನು ಢಮ್ ಎಂದು ಕೊನೆಗೆ ಗುಂಡಿಟ್ಟು ಸಾಯಿಸಿ ಮುಗಿಸುತ್ತಿದ್ದ. ನಂತರ ನಾಲ್ಕು ದಿನ ಬಿಟ್ಟು ನೆನಪಿಸಿಕೊಂಡರೆ ಎಲ್ಲ ಸಿನೆಮಾ ಕೂಡಾ ಅದೇ ರೀತಿ ಇರುತ್ತಿದ್ದರಿಂದ ಅದು ಯಾವ ಸಿನೆಮಾ ಅಂತಲೇ ನೆನಪಾಗುತ್ತಿರಲಿಲ್ಲ. ಅಮ್ಮಂದಿರಂತೂ ಸದಾ ಕಣ್ಣೀರಿಡುವ, ಮಕ್ಕಳಿಗಾಗಿ ಸದಾ ತ್ಯಾಗ ಮಾಡುವುದನ್ನು ನೋಡಿ ನೋಡಿ ನಾನು ಅಮ್ಮಂದಿರ ಬದುಕೆಂದರೆ ಹಾಗೇ ಇರಬೇಕೇನೋ ಅಂದುಕೊಂಡುಬಿಟ್ಟಿದ್ದೆ. ಅಮ್ಮಾಆಆಆಆಆ ಅಂತ ಹೀರೋ ಬಂದ ಕೂಡಲೇ ಏನಪ್ಪಾಆಆಆ ಅಂತ ಸೆರಗಿಗೆ ಒದ್ದೆ ಕೈ ಒರೆಸಿಕೊಂಡು ಮುದ್ದು ಮುನಿಸು ತೋರುವ ಸ್ಟೀರಿಯೋ ಟೈಪ್ಡ್ ಅಮ್ಮಂದಿರು. ಎಲ್ಲ ಚೌಕಟ್ಟಿನೊಳಗಿನ ಚಿತ್ರಗಳು! ಅಣ್ಣ, ಅತ್ತಿಗೆ, ಅಮ್ಮ, ಪೊಲೀಸ್, ರಾಜಕಾರಣಿಗಳು, ಪ್ರೇಮಿಗಳು ಎಲ್ಲರೂ ಕಾಲದ ಜೊತೆ ಓಡದೇ ಅಲ್ಲೇ ನಿಂತುಬಿಟ್ಟಿದ್ದರು. ಹಾಗಂತ ನಾನೇನೂ ಬೇಸರ ಪಡಲಿಲ್ಲ ಬಿಡಿ .. ಅದನ್ನದನ್ನೇ ನೋಡಿ ದಣಿದೆ.

ಆಗ ಬಂದಿದ್ದು ‘ಪಲ್ಲವಿ ಅನುಪಲ್ಲವಿ’ ! ಮಣಿರತ್ನಂ ಎಂಬ ಮಾಂತ್ರಿಕನ ಮೊದಲ ಸಿನೆಮಾ.! ನಾನು ಪೂರ್ತಿ ಫಿದಾ ಆಗಿ ಹೋದೆ ಆತನಿಗೆ. ಆವರೆಗೆ ಅಂಥ ಸಿನೆಮಾ ನಾನಂತೂ ನೋಡಿರಲಿಲ್ಲ. ಕನ್ನಡದ ಮಟ್ಟಿಗೆ ತುಂಬ bold ಅನ್ನಿಸಿದಂಥಾ ವಸ್ತು. ಮತ್ತೆ ಆ ನಿರೂಪಣೆ ಕೂಡಾ. ಅನಿಲ್ ಕಪೂರ್, ಲಕ್ಷ್ಮಿ, ಕಿರಣ್, ವಿಕ್ರಮ್, ನಮ್ಮ ಶ್ರೀನಾಥ್ ಮಗ ರೋಹಿತ್ ಎಲ್ಲರ ನಟನೆ ನನಗೆ ಪ್ರಿಯವೆನ್ನಿಸಿತ್ತು. ಕಿರಣ್‌ಗೆ ಲೈನ್ ಹೊಡೆಯುವ ಅನಿಲ್ ಅವಳಿಗೆ ಮುಖಾಮುಖಿಯಾಗೋ ಉದ್ದೇಶದಿಂದಲೇ ಅವಳ ಹಿಂದೆ ಬರ್ತಿದ್ದವನು ಇಡೀ ಒಂದು ರೋಡ್ ಓಡಿಕೊಂಡು ಸುತ್ತಿ ಅವಳೆದುರಿಗೆ ‘what a pleasant surprise!!’ ಅಂತ ಉದ್ಗರಿಸೋ ಸೀನ್ ಈಗಲೂ ನಗು ಉಕ್ಕಿಸುತ್ತದೆ. ಕಿರಣ್‌ಳನ್ನು ಎಳೆದುಕೊಂಡು ಹೋಗ್ತಿರುವಾಗ ಎದುರಾದ ಅವಳ ಅಪ್ಪನಿಗೆ ‘ನಿಮ್ಮ ಮಗಳನ್ನ ಹಾರಿಸ್ಕೊಂಡು ಹೋಗ್ತಿದೀನಿ’ ಅಂದಾಗ ಆ ತುಂಟ ಅಪ್ಪ ‘ಸರಿ ಸರಿ ಹಾರಿಸ್ಕೊಂಡು ಹೋಗು’ ಅಂತ ನಕ್ಕಿದ್ದು, ಲಕ್ಷ್ಮಿ ಊರಿಗೆ ಹೋಗಿದ್ದವರು ಬಂದಿರೋದನ್ನ ವಿಚಾರಿಸೋದಿಕ್ಕೆ ‘ಅನೂ ಬಂದಿದಾಳಾ?’ ಅಂತ ಅವಳ ಮಗ ಪುಟ್ಟ ರೋಹಿತ್ ಕೇಳೋದು ಎಲ್ಲ ನನಗೆ ಖುಷಿ ತರಿಸಿತ್ತು. ಅಮ್ಮ-ಮಗನ ಪಾತ್ರಗಳು ಎಷ್ಟು ಬೇರೆಯಾಗಿತ್ತು ಆ ಸಿನೆಮಾದಲ್ಲಿ! ಆವರೆಗೆ ಅಮ್ಮನೆಂದರೆ ಗೊಳೋ ಅಂತ ಅಳುವ, ತ್ಯಾಗಮಯಿ ಪಾತ್ರಗಳನ್ನ ನೋಡಿ, ನೋಡಿ ಸುಸ್ತಾದ ನನಗೆ ಈ ಅಮ್ಮ ‘ಅಮ್ಮ’ನಾಗಿಯೂ ಹೆಣ್ಣಾಗಿ ಹೇಗೆ ಉಳೀತಾಳೆ ಅಂತ ಮೆಚ್ಚುಗೆಯಾಗಿತ್ತು. ಅಮ್ಮ-ಮಗನಂತೂ ಅಪ್ಪಟ ಸ್ನೇಹಿತರು ಇದರಲ್ಲಿ. ಬೆಳ ಬೆಳಗ್ಗೆ ಕೊರೆಯೋ ಚಳಿಯಲ್ಲಿ ವಾಕ್ ಹೋಗೋ ದೃಶ್ಯ ಮಣಿ ಕಟ್ಟಿದ್ದ ರೀತಿ ಮರೆತಿದ್ದರೆ ಇನ್ನೊಂದೇ ಒಂದು ಸಲ ನೋಡಿ ಮರುದಿನ ನೀವು ನಿಮ್ಮ ಮಗ / ಮಗಳೊಡನೆ ಚುಮು ಚುಮು ಛಳಿಯಲ್ಲಿ ವಾಕ್ ಹೋಗಬೇಕು ಅನ್ನಿಸದಿದ್ದರೆ ಕೇಳಿ …
ಅದಾದ ಮೇಲೆ ಅವನ ಚಿತ್ರಗಳೆಲ್ಲ ನೋಡ್ತಲೇ ಹೋದೆ…

ಅವನ ಮೌನ ರಾಗಂ ಚಿತ್ರ ಒಂದು ಮಾಮೂಲಿ ಕಥೆಯ ಸಿನೆಮಾ. ಮದುವೆಗೆ ಮುಂಚೆ ಒಬ್ಬ ಪ್ರೇಮಿಯಿದ್ದು, ಅವನ ಜೊತೆ ಮದುವೆ ಆಗದೇ ಬೇರೆ ಯಾರ ಜೊತೆಯೋ ಮದುವೆಯಾಗಿ ಆ ನಂತರವೂ ಪ್ರೇಮಿಯನ್ನು ಮರೆಯೋದಿಕ್ಕೆ ಆಗದೇ ಒದ್ದಾಡುವ ಕಥೆ. ಆದರೆ ಅಂಥ ಸಾಧಾರಣ ಕಥೆಯಲ್ಲೂ ಎಲ್ಲ nuances ಗಳನ್ನೂ ಬಗೆಯುತ್ತಾ ಹೋಗುವ ಸಿನೆಮಾ ನೋಡಿ ನಾನು ಮೆಚ್ಚಿ ಸತ್ತು ಹೋಗಿದ್ದೆ. ಬಯಸಿದ್ದು ಸಿಗದ, ಸಿಕ್ಕಿದ್ದು ಬೇಡವಾಗುವ ಇಂಥ ಕಥೆ ಜಗತ್ತಿನ ಎಲ್ಲರದ್ದೂ ಕೂಡಾ. ಹಾಗಾಗಿ ಅಲ್ಲಿನ ಪಾತ್ರಗಳಲ್ಲಿ ನನ್ನನ್ನು ಕೂಡಾ ಗುರುತಿಸಿಕೊಂಡಿದ್ದೆ .. ಬಹುಶಃ ನನ್ನ ಹಾಗೇ ತುಂಬ ಜನ ಗುರುತಿಸಿಕೊಂಡಿದ್ದರು ಅನ್ನುವ ಕಾರಣಕ್ಕೇನೆ ಅದು ಹಿಟ್ ಆಗಿದ್ದು ಕೂಡಾ.

ರೋಜಾ ಕೂಡಾ ಎಂಥ ಚೆಂದಕ್ಕೆ ಮಾಡಿದ ಅವನು! ಭಯೋತ್ಪಾದಕರ ಕಥೆ ಅಂದ ಕೂಡಲೇ ಬಾಂಬು ಮಣ್ಣು ಮಸಿ ಅಂತ ಯಾವುದೋ ಬೇಸ್‌ನಲ್ಲಿ ಮಾತ್ರ ತೋರಿಸುವ ಸಿನೆಮಾಗಳ ಮಧ್ಯೆ ಒಂದು ಅದ್ಭುತ human story ಮಾಡಿದ್ದ ಈ ಮಣಿ. ಅವನ ಬಾಂಬೆ, ನಾಯಗನ್, ದಿಲ್ ಸೆ, ದಳಪತಿ ಎಲ್ಲವನ್ನೂ ಚಪ್ಪರಿಸಿ ಚಪ್ಪರಿಸಿ ನೋಡಿದವಳು ನಾನು. ಬೇರೆಯವರ ಕೈಗೆ ಸಿಕ್ಕರೆ ಒಂದು ಸಾಧಾರಣ communal violence ಸಿನೆಮಾ ಆಗುವಂಥದ್ದನ್ನೋ, ಒಂದು ಮಾಮೂಲಿನ underworld ಕಿಂಗ್‌ಗಳ ಸಿನೆಮಾ ಆಗುವಂಥದ್ದನ್ನೋ ಅವನು ಎಂಥ ಸೂಕ್ಷ್ಮತೆ ಬೆರೆಸಿ ಚಿತ್ರ ಮಾಡಿಬಿಡುತ್ತಿದ್ದ ಅಂದರೆ ಆ ಸಿನೆಮಾಗಳು ಯಾವ ಚೌಕಟ್ಟಿಗೂ ಸಿಗದಂಥ ಮತ್ತು one line caption ಹಾಕುತ್ತಾರಲ್ಲ ಇದು ಹೃದಯಗಳ ವಿಷಯ, ತಾಯಿಗಾಗಿ ಹುಡುಕಾಟ ಅಂತೆಲ್ಲ … ಹಾಗೆ ಒಂದು ದಿಕ್ಕಿನಲ್ಲಿ ಮಾತ್ರ ನೋಡುವಂಥ ಸಿನೆಮಾ ಮಾತ್ರ ಆಗಿ ಉಳಿಯುತ್ತಲೇ ಇರಲಿಲ್ಲ. ಮಣಿಯ ಕೈಗೆ ಸಿಕ್ಕ Underworld Don ಕೂಡಾ ಸಂಬಂಧಗಳ ಮಧ್ಯೆ ಸಿಕ್ಕಿರುತ್ತಿದ್ದ, ಸಂಸಾರಸ್ಥ ಕೂಡಾ ಒಂಟಿಯಾಗಿರುತ್ತಿದ್ದ! ಎಂಥಾ ಮಾಂತ್ರಿಕ ಈ ಮಣಿ!!
Family story ಇರುವಂಥ ಕಥೆಗಳು ಕೈಗೆ ಸಿಕ್ಕಿದರೆ ಅವುಗಳಲ್ಲಿ ಕುಸುರಿ ಕಲೆ ಕೆತ್ತಿಬಿಡುತ್ತಿದ್ದ ಮಣಿ. ಅಗ್ನಿ ನಕ್ಷತ್ರಂ ಸಿನೆಮಾದ ಎರಡು ಹೆಂಡತಿಯರು ಮತ್ತು ಅವರ ಮಕ್ಕಳ ಮಧ್ಯೆಯ ತಿಕ್ಕಾಟದ ವಸ್ತು ನಮ್ಮ ಇಬ್ಬರು ಹೆಂಡಿರ ರಾಜ ರವಿಚಂದ್ರನ್ ಕೈಗೋ, ಅಥವಾ ರೀಮೇಕ್ ವೀರ ಸಾಯಿಪ್ರಕಾಶ್ ಕೈಗೋ ಸಿಕ್ಕಿದ್ದರೆ ಅದನ್ನೊಂದು ಅದ್ಭುತ ಕಾಮೆಡಿ ಚಿತ್ರ ಮಾಡಿಡುತ್ತಿದ್ದರೇನೋ! ಆದರೆ ಮಣಿಯಂತ ಸೂಕ್ಷ್ಮಜ್ಞನ ಕೈಗೆ ಸಿಕ್ಕ ಕಥೆಗಳು ಕಲ್ಲಲ್ಲಿ ಕುಸುರಿ ಕೆತ್ತುವ ಶಿಲ್ಪಿಯ ಕೆತ್ತನೆಯ ಹಾಗೆ ಅರಳುತ್ತ ಹೋಗುತ್ತಿದ್ದವು. ದುಃಖವಿರುವ ಕಥೆಗಳನ್ನು ಅವನು ಗೊಳೋ ಅನ್ನುವ ಸ್ಟೈಲ್‌ನಲ್ಲಿ ಮಾಡುತ್ತಿರಲಿಲ್ಲ. ಅದರ ಜೊತೆಗೆ ಚೂರು ಹಾಸ್ಯ, ಒಂದಿಷ್ಟು ಪ್ರೇಮ ಒಂಚೂರು ಭಾವುಕತೆ, ಮತ್ತಿಷ್ಟು ಶೃಂಗಾರ ಬೆರೆಸಿ ನೇಯುತ್ತಾ ಹೋಗಿ ಚೆಂದದ್ದೊಂದು ನವಿರಾದ ನೇಯ್ಗೆಯ fabric ಎದುರು ಇಡುತ್ತಿದ್ದ… ನೋಡಿದರೆ ಎದೆಯ ಬೆತ್ತಲಿಗೆ ಸುತ್ತಿಕೊಳ್ಳಬೇಕು ಅನ್ನಿಸುವಂಥದ್ದು! ಅವನ ಸಿನೆಮಾಗಳಲ್ಲಿನ ದುಃಖ ಕೂಡಾ ಒಂಥರಾ ಚೆಂದವೇ ಇದೆಯಲ್ಲವಾ …! ಅಂತ ಅನಿಸಿಬಿಡುತ್ತಿತ್ತು. ಅಂಜಲಿ ಸಿನೆಮಾದ ಬುದ್ಧಿಮಾಂದ್ಯ ಮಗುವಿನ ಕಥೆಯನ್ನು ಸಿನೆಮಾ ಆಗಿಸುವಾಗ ಮಣಿ ಒಂದಿಷ್ಟು ಸಣ್ಣ ಪ್ರಮಾಣದ ಮೆಲೊಡ್ರಾಮ ಬೆರೆಸಿದ್ದ. ಆಮೇಲೆ ಮಸ್ತಾದ ತುಂಟ ತುಂಟ ತರಲೆ ಮಕ್ಕಳು. ಅವುಗಳ ನಡವಳಿಕೆ ಏನೂ ಮಾಮೂಲಿನದ್ದೂ ಆಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಎದ್ದೆದ್ದು, ಮಕ್ಕಳು ಮಕ್ಕಳೇ ಸೇರಿ ಊರೆಲ್ಲ ಓಡಾಡುವ, ದಾಂಧಲೆ ಎಬ್ಬಿಸುವ, ಕೀಟಲೆ ಮಾಡುವ ಮಕ್ಕಳು ಅಸಹಜ ಅನ್ನಿಸಿದರೂ ಕೂಡಾ ‘ಇಂತವು ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ’ ಅಂತ ತಳ್ಳಿ ಹಾಕುವಂತವೂ ಆಗಿರುತ್ತಿರಲಿಲ್ಲ. ಮಣಿಗೆ ಎಲ್ಲವನ್ನೂ ಎಲ್ಲಿ ನಿಲ್ಲಿಸಬೇಕು ಅನ್ನುವ ಲಕ್ಷ್ಮಣ ರೇಖೆ ಎಳೆಯಲು ಗೊತ್ತಿತ್ತು. ಹಾಗಾಗಿಯೇ ಅವನ ಸಿನೆಮಾಗಳು ಗೆಲ್ಲುತ್ತ ಹೋದವು ಒಂದಾದ ಮೇಲೊಂದು.
ಮತ್ತೆ ಅವನ ಅಲಿಪಾಯುದೆ ಸಿನೆಮಾದ ಬಗ್ಗೆ ಹೇಳದಿದ್ದರೆ ನಾನು ದೊಡ್ಡ ತಪ್ಪು ಮಾಡಿದ ಹಾಗೆ. ಅದು ಕೂಡಾ ಸಾಧಾರಣ ಕಥೆಯ ಸಿನೆಮಾ. ಗಂಡ ಹೆಂಡಿರ ನಡುವಿನ ಪ್ರೇಮ ಮತ್ತು ನಂಬಿಕೆಯ ವಸ್ತುವಿನದ್ದು. ಹೇಳಿಕೊಳ್ಳುವಂತದ್ದು ಏನೇನೂ ಇರಲಿಲ್ಲ ಅದರಲ್ಲಿ. ಆದರೆ ಆ ಮಾಂತ್ರಿಕ ಪ್ರೇಮ ದೃಶ್ಯಗಳನ್ನು ಹೆಣೆಯುವ ರೀತಿಗೆ ನಾನಂತೂ ಹುಚ್ಚಿಯಾಗಿ ಹೋಗುತ್ತಿದ್ದೆ. ಒಂದಿಷ್ಟೂ ಬಟ್ಟೆ ತೆಗೆಯದೇ, ಮೈ ತುಂಬ ಮೀಟರ್‌ಗಟ್ಟಲೆ ಸೀರೆ ಸುತ್ತಿಕೊಂಡ ಹೆಂಗಸರು ಅಲ್ಲೊಂದು ಪ್ರಣಯ ಕಾವ್ಯ ಸೃಷ್ಟಿ ಮಾಡಿಬಿಡುತ್ತಿದ್ದರು … ಎದೆ ಬೆಚ್ಚಗಾಗಿಸುವಂಥ ಪ್ರಣಯ ಕಾವ್ಯ! ಗೀತಾಂಜಲಿ ಸಿನೆಮಾ ನೋಡಿರಲೇಬೇಕು ನೀವು. Terminally ill ರೋಗದಿಂದ ನರಳುವ ಇಬ್ಬರು ರೋಗಿಗಳ ಮಧ್ಯದ ಪ್ರೇಮ ಕಥೆ ಅದು. ಕಣ್ಣೀರಿಗೆ ಹೆದರಿ ಹುಚ್ಚಾಗಿ ಪ್ರೀತಿಸುವ ಅಮ್ಮನಿಂದ ಕೂಡಾ ದೂರ ಓಡುವ ನಾಗಾರ್ಜುನ ಅವತ್ತು ಕರುಣೆ ಉಕ್ಕಿಸಿದ್ದ. ಆದರೆ ಕ್ಯಾನ್ಸರ್ ಎದುರಿಸಿದ ನಂತರದ ದಿನಗಳಲ್ಲಿ ನಾಗಾರ್ಜುನ ಈಗ ನನಗೆ ಅರ್ಥವಾದ. ಜಗತ್ತಿನಲ್ಲಿ ಸಮಸ್ತ ಜೀವಕೋಟಿಗಳಿರುವ ಜಗತ್ತಿನಲ್ಲಿ ನಮಗೆ ಮಾತ್ರ ಬದುಕುವ ಅವಕಾಶ ಮುಗಿದು ಹೋಗಿದೆ ಅನ್ನೋ ಘಳಿಗೆ ಎದುರಾಗುತ್ತದಲ್ಲ, ಆಗ ಒಂಟಿತನವೊಂದು ಮಾತ್ರ ನಮ್ಮ ಸಂಗಾತಿ ಅನ್ನಿಸುವುದು ಮಣಿಗೆ ಗೊತ್ತಿತ್ತು ! ಅದು ಗೊತ್ತಿದ್ದ ಮಣಿ ನನಗೆ ಮತ್ತಷ್ಟು ಪ್ರಿಯವಾದ. ಅಂಥ ಖಾಯಿಲೆಗೆ ಬಿದ್ದ ನಾಯಕ-ನಾಯಕಿ ಬದುಕನ್ನು passionate ಆಗಿ ಕಳೆಯುವ ರೀತಿ ನನ್ನ ಮನಸ್ಸನ್ನೂ ಈ ಖಾಯಿಲೆಯ ದಿನಗಳಲ್ಲಿ ರೀತಿ ನಿರ್ದೇಶಿಸಿತು ಅನ್ನಿಸುತ್ತದೆ. ಹಾಗಾಗಿಯೇ ಬದುಕಿರುವವರೆಗೂ ‘ಬದುಕುವ’ ಸಿದ್ಧಾಂತ ರೂಢಿಸಿಕೊಂಡೆನೇನೋ …
ಮಣಿರತ್ನಂ ಅಂದರೆ ಅಪ್ಪಟ ಹುಚ್ಚಿಯಾಗುತ್ತಿದ್ದ ನಾನು ಅವನ ವಿಷಯಕ್ಕೆ ಬಂದಾಗ ಹೇಳ್ತಿದ್ದೆ ‘ಮಣಿ ಸಿನೆಮಾ ಅಂತ ಹೇಳಿ ಥಿಯೇಟರಿನಲ್ಲಿ ಕೂರಿಸಿ ಬರೀ ಬಿಳಿಯ ಪರದೆಯನ್ನ ತೋರಿಸ್ತಿದ್ರೂ ಮಣಿ ಎಂಥ ಸಾಂಕೇತಿಕವಾಗಿ ಎಲ್ಲ ಹೇಳಿದ್ದಾನೆ .. ಎಂತ ಅದ್ಭುತ ಸಿನೆಮಾ ಅಂತ ಮೆಚ್ಚಿ ಬಿಡುತ್ತೇನೆ ನಾನು’ ಅಂತ! ಅಂತಾ ಅವನ ಆರಾಧಕಿಯಾದ ನನಗೆ ಮಣಿಯ ಈಗಿನ ಸಿನೆಮಾ ನೋಡಿ ಯಾಕೋ ತುಂಬ ನೋವೆನಿಸುತ್ತದೆ. ಕೊನೆ ಕೊನೆಯಲ್ಲಿ ಬಂದ ಕಣ್ಣತ್ತಿಲ್ ಮುತ್ತಮಿತ್ತಾಲ್ ಇದ್ದುದರಲ್ಲಿ ಪರವಾಗಿಲ್ಲ ಚೆನ್ನಾಗಿದೆ ಅನ್ನಿಸಿತು. ರಾವಣ್ ಸಿನೆಮಾ ನೋಡುವಾಗ ಸೀಟಿನಲ್ಲಿ ತಿಣುಕಾಡಿಬಿಟ್ಟೆ. ಅವ ಏನು ಹೇಳುತ್ತಿದ್ದಾನೋ, ನಾನು ಏನು ಅರ್ಥ ಮಾಡಿಕೊಳ್ಳಬೇಕೋ ಅಂತಲೆ ಅರ್ಥವಾಗದ ಸ್ಥಿತಿ. ಮಣಿ ಬಿಟ್ಟು ಮತ್ತೆ ಯಾರೇ ತೆಗೆದಿದ್ದರೂ ಅರ್ಧ ಘಂಟೆಗಿಂತ ಥಿಯೇಟರಿನಲ್ಲಿ ಕೂಡುವುದು ಅಸಾಧ್ಯ ಅನ್ನಿಸುವಂತೆ ಬೋರ್ ಹೊಡೆಯಿತು. ಆದರೆ ಮಣಿಯ ಬಗ್ಗೆಗಿನ ನನ್ನ ಆಶಾವಾದ ತುಂಬ ದೊಡ್ಡದು. ಸ್ವತಃ ಮಣಿಯೇ ಅವನಲ್ಲಿ ನಂಬಿಕೆ ಕಳೆದುಕೊಂಡರೂ ನಾನು ಮಾತ್ರ ಕಳೆದುಕೊಳ್ಳುವುದಿಲ್ಲ ಅಂತ ನಂಬಿದ್ದೆ. ಮೊನ್ನೆ ಮೊನ್ನೆ ಕಡಲ್ ಸಿನೆಮಾ ರಿಲೀಸ್ ಆಗುತ್ತದೆ ಅಂದಾಗ ಮತ್ತೆ ‘ಈ ಸಲ ಮಣಿ ನನಗೆ ನಿರಾಸೆ ಮಾಡುವುದಿಲ್ಲ’ ಅಂತ ನೆರಿಗೆ ಸರಿ ಮಾಡಿಕೊಂಡು ಎದ್ದು ಹೊರಡುವಷ್ಟರಲ್ಲಿ ಅದೊಂದು ಫ್ಲಾಪ್ ಚಿತ್ರ ಅನ್ನಿಸಿಕೊಂಡು ಥಿಯೇಟರಿನವರು ಕತ್ತು ಹಿಡಿದು ಆಚೆ ನೂಕಿ ಆಗಿತ್ತು…

ಹೀರೋ ಒಬ್ಬ ಬೀಳುವುದು ತುಂಬ ದುಃಖ ತರಿಸುತ್ತೆ. ಆದರೆ ಅದನ್ನು ನೋಡುವುದಿದೆಯಲ್ಲಾ , ಅದು ಇನ್ನೂ ಕಷ್ಟ. ಅವ ಸದಾಕಾಲ larger than life figure ಆಗಿಯೇ ಉಳಿಯಬೇಕು. ಮಣಿ ನನಗೆ ಅಂಥ ಹೀರೋಗಳಲ್ಲಿ ಒಬ್ಬನು. ಅವ ಏಳದಂತೆ ಬಿದ್ದಿದ್ದಾನೆ ಅಥವಾ ಖಾಲಿಯಾಗಿದ್ದಾನೆ ಅಂದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಅವ ಕಾಣೆಯಾಗಿದ್ದಾನೆ ಅಷ್ಟೇ … ಮತ್ತೆ ಸಿಗುತ್ತಾನೆ ..ಹಾಗಂತ ದೃಢ ನಂಬಿಕೆಯಲ್ಲಿ ಮತ್ತೆ ಮೈಕೊಡವಿದರೆ ಕ್ಷಿತಿಜದಲ್ಲಿ ಅವ ಅಜ಼ಾನ್ ಅನ್ನುವ ಹೊಸ ಚಿತ್ರ ಶುರು ಮಾಡಿದ್ದಾನೆ ಅನ್ನುವ ಸುದ್ದಿ … ಮತ್ತೆ ಕಣ್ಣು ಕಿರಿದಾಗಿಸಿ ಕೈ ಅಡ್ಡ ಇಟ್ಟುಆ ಕಡೆ ನೋಡಲು ಶುರು ಮಾಡಿದ್ದೇನೆ … ಕಳೆದು ಹೋದ ಮಣಿ ಮತ್ತೆ ಸಿಗುತ್ತಾನೆ ಅನ್ನುವ ನಂಬಿಕೆಯಲ್ಲಿ …

‍ಲೇಖಕರು avadhi

March 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಅಶೋಕ ಶೆಟ್ಟರ್

    “ಕಿರಣ್‌ಗೆ ಲೈನ್ ಹೊಡೆಯುವ ಅನಿಲ್ ಅವಳಿಗೆ ಮುಖಾಮುಖಿಯಾಗೋ ಉದ್ದೇಶದಿಂದಲೇ ಅವಳ ಹಿಂದೆ ಬರ್ತಿದ್ದವನು ಇಡೀ ಒಂದು ರೋಡ್ ಓಡಿಕೊಂಡು ಸುತ್ತಿ ಅವಳೆದುರಿಗೆ ‘what a pleasant surprise!!’ ಅಂತ ಉದ್ಗರಿಸೋ ಸೀನ್ ಈಗಲೂ ನಗು ಉಕ್ಕಿಸುತ್ತದೆ”.
    ಇದೊಂದು ಪ್ರತಿಭೆ ಭಾರತಿಯವರೇ,ನೀವು ನಗುವ ವಿಷಯ ಅಂತೀರಲ್ಲ..’ಎಷ್ಟೆಲ್ಲ ಕಷ್ಟ ಬೀಳಬೇಕಾಗುತ್ತಲ್ಲಪ್ಪ ಹುಡುಗರು’ ಅಂದುಕೊಳ್ಳಬೇಕಾದ ಮಾತು ಅದು…:)

    ಪ್ರತಿಕ್ರಿಯೆ
  2. Swarna

    ನನಗೆ ಮೌನರಾಗಂದ ರೇವತಿ ಇಷ್ಟ .ನೀವು ಹೇಳಿದಂತೆ ಮಕ್ಕಳನ್ನ ಬಾಲ್ಯವನ್ನ ಅವರಷ್ಟು ಚಂದಗೆ ತೋರಿಸುವವರು ಕಡಿಮೆ
    ಚೆನ್ನಾಗಿದೆ

    ಪ್ರತಿಕ್ರಿಯೆ
  3. Anuradha.B.Rao

    ನನಗೆ ಮತ್ತೆ ನನ್ನ ಪ್ರಿಯವಾದ ಚಲನ ಚಿತ್ರಗಳನ್ನು ನೆನಪು ಮಾಡಿಕೊಟ್ಟಿರಿ. ಮೌನರಾಗಂ ನನ್ನ ಪ್ರಿಯವಾದ ಚಿತ್ರ.’ ಕಳೆದು ಹೋದ ಮಣಿ ಮತ್ತೆ ಸಿಗುತ್ತಾನೆ ಅನ್ನುವ ನಂಬಿಕೆಯಲ್ಲಿ ‘ ನಿಮ್ಮ ನಂಬಿಕೆ ನಿಜವಾಗಲಿ .

    ಪ್ರತಿಕ್ರಿಯೆ
  4. M.S.Prasad

    Mani and his Vision is a Gift to Indian cinema, One of the Finest Technicians and a Master in his own right interms of framing each shot so meticulously.
    Thanks for rekindling the memories Bharathi.

    ಪ್ರತಿಕ್ರಿಯೆ
  5. Srimatha

    nangannisiddellaa nimage hELi, adanna neevu nimma super style nalli baredu… haagE annistu ondondu saalu Odtaa…(except he is not ‘Mani’ for me 😛 ) naanU nimmjote kaNNu kiridaagisi kaaytiddeeni

    ಪ್ರತಿಕ್ರಿಯೆ
  6. ಶಮ, ನಂದಿಬೆಟ್ಟ

    ಪಲ್ಲವಿ ಅನುಪಲ್ಲವಿ ನನ್ನ ಅತೀ ಪ್ರಿಯ ಚಿತ್ರಗಳಲ್ಲಿ ಮೊದಲನೆಯದು.. ಇದನ್ನ ಓದಿದ ಮೇಲಂತೂ ಅಷ್ಟೂ ಸಿ.ಡಿಗಳನ್ನು ಗುಡ್ಡೆ ಹಾಕಿಕೊಂಡು ಒಂದೇ ಬಾರಿಗೆ ಒಬ್ಬಳೇ ಕೂತು ನೋಡಬೇಕು ಅನಿಸ್ತು… ಕಣ್ಣತ್ತಿಲ್ ಮುತ್ತಮಿಟ್ಟಾಲ್ ನ ೊರು”ದೈವ ತಂದ ಪೂವೇ”ನಮ್ಮನೇಲಿ ಎಲ್ಲರ ಫೇವರಿಟ್…
    ಇದೋ ಹೊರಟೆ ನೋಡೋಕೆ

    ಪ್ರತಿಕ್ರಿಯೆ
  7. Anupama Gowda

    mouna raagam……………olle movie,innondsala nodthini…bharthi akka nimge film nodo hucchu ishtondide antha gotthe irlilla 😉

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: