ಅಹವಿ ಹಾಡು : ಆಮೇಲೆ ಅವರಿಬ್ರೂ ಸುಖವಾಗಿ….

ಅವರ ಪ್ರೇಮ ಶುರುವಾಗಿ ಮೂರು ವರ್ಷವಾಗಿದೆ. ಥೇಟ್ ಸಿನೆಮಾ ಶೈಲಿಯಲ್ಲಿ ನಾಯಿ-ಬೆಕ್ಕುಗಳ ಥರ ಕಿತ್ತಾಟದಿಂದ ಶುರುವಾದ ಸಂಬಂಧವದು. ಅದು ಯಾವ ಕ್ಷಣದಲ್ಲಿ ಪರಿಚಯವಾದರೋ ಗೊತ್ತಿಲ್ಲ, ಸಿಕ್ಕಿದ್ದೇ ಜಗಳವಾಡಲು ಅನ್ನುವ ಹಾಗೆ ಹತ್ತದ ಹರಿಯದ ಜಗಳ. ಇಬ್ಬರೂ ಬದುಕಿನ ಬಗ್ಗೆ ಅಪಾರ ಪ್ರೀತಿಯುಳ್ಳವರಾದ್ದರಿಂದ ಬದುಕಿನ ಎಲ್ಲ ಕ್ಷಣಗಳನ್ನೂ passionate ಆಗಿ ಕಳೆಯುವ ಅವರಿಗೆ ಜಗಳವನ್ನು ಕೂಡಾ passionate ಆಗಿಯೇ ಆಡುವ ಅಭ್ಯಾಸ! ಯಾವ್ಯಾವುದಕ್ಕೆ ಜಗಳವಾಡಿಲ್ಲ ಅವರು?!
ಒಂದಿಷ್ಟು ಆತುರ ಮತ್ತು ಕೆಟ್ಟ ಸಿಟ್ಟಿನ ಅವಳು ಮತ್ತು ಒಂದಿಷ್ಟು ಹೆಚ್ಚೇ ಸಿಟ್ಟಿನ ಅವನು ,.. ಜಗಳಕ್ಕೆ ಕಾರಣ ಬೇರೆ ಬೇಕೇ ಅನ್ನುವ ಹಾಗೆ ಕಿತ್ತಾಡಿದರು. ಜಗಳವೆಂದ ಮೇಲೆ ವಿರಸ … ಆಮೇಲೊಂದು ಕದನ ವಿರಾಮ … ಹಿಂದೆಯೇ ಒಂದು ಪ್ರೀತಿ ಬುಗ್ಗೆ … ಜಗತ್ತು ಎಷ್ಟೊಂದು ಸುಂದರವಾಗಿದೆ ಅಲ್ಲವಾ ಅಂತ ಕಣ್ಣರಳಿಸುವಷ್ಟರಲ್ಲಿ ಮತ್ತೊಂದು ಜಗಳ! ಎಲ್ಲ ಕಥೆಗಳಲ್ಲೂ They lived happily ever after ಅಂದುಕೊಳ್ಳುವಂತ ದೊಡ್ಡ ಬ್ರೇಕ್ ಬರುತ್ತದಲ್ಲ, ಆ ಥರ ಅವಳ-ಅವನ ನಡುವೆ ಬರುತ್ತಲೇ ಇರಲಿಲ್ಲ … ಒಂದು ಜಗಳದ ಹಿಂದೆಯೇ ಮತ್ತೊಂದು ಅನ್ನುವಂತೆ.
ಹಾಗಾಗಿ ಇಬ್ಬರೂ ಸುಖವಾಗಿ ಕಿತ್ತಾಡಿಕೊಳ್ಳುತ್ತಾ ಬದುಕಿದ್ದರು ಅನ್ನುವುದು ವಾಸಿ. ಕಾಲ ಕಳೆದ ಹಾಗೆ ಕಿತ್ತಾಟ ಕಡಿಮೆಯಾಗಬೇಕು ಅನ್ನುವುದು ಜಗದ ನಿಯಮ. ಇವರಿಬ್ಬರ ವಿಷಯದಲ್ಲಿ ಎಲ್ಲ ಉಲ್ಟಾ … ಕಾಲ ಕಳೆದಂತೆ ಜಗಳವೂ ಜೋರು ಜೋರು .. ಅವರಿಬ್ಬರಿಗೆ ಮಾತ್ರ ಇಲ್ಲ ಬೋರು ಬೋರು. ಆದರೆ ಈಗೀಗ ಜಗಳದ frequency ಸ್ವಲ್ಪ ಕಡಿಮೆಯಾಗಿದೆ. ವಾರಕ್ಕೆ ಮೂರು ದಿನ ಜಗಳವಾಡುತ್ತಿದ್ದವರು ಈಗ ಅದನ್ನು ಎರಡಕ್ಕೆ ಇಳಿಸಿದ್ದಾರೆ! ಅದನ್ನೇ ಹೊಂದಾಣಿಕೆ ಅನ್ನಲೂಬಹುದಾ?! ಆದರೆ ಈ ಜಗಳಗಳ ಮಧ್ಯೆ ಕೂಡಾ ಪ್ರೀತಿ ಅಚ್ಚುಕಟ್ಟಾಗಿ ಸೆಟಲ್ ಆಯ್ತು ಅನ್ನುವಲ್ಲಿಗೆ ಪ್ರೀತಿಯ ಮೊದಲ ಅಧ್ಯಾಯ ಮುಗಿಯುತ್ತದೆ …

***

ಅವತ್ತು ಬೆಳಿಗ್ಗೆ ಒಂದು ಮಾರಾಮಾರಿ ಜಗಳಕ್ಕೆ ಬಿದ್ದರು ಅವರಿಬ್ಬರು. ಭಯಂಕರ ಪೊಸೆಸಿವ್‍ನೆಸ್ ಇರುವ ಅವನಿಗೆ ಅವಳು ಅವನ ಫೋನ್ ರಿಸೀವ್ ಮಾಡದಿದ್ದರೂ ಮೂಗಿನ ತುದಿಗೆ ಕೋಪ. ನಾನೇನು ಫೋನಿನ ಪಕ್ಕಾನೇ ಕೂತಿರ್ತೀನಾ ಅನ್ನುವುದು ಅವಳ ವಾದ. ಮೂರು ವರ್ಷದ ಕೆಳಗೆ ತಕ್ಷಣ ಎತ್ಕೊಳ್ತಿದ್ದೆ ಅಂತ ಅವನು. ಹೌದು, ಅಷ್ಟೊಂದು ಸಲ ಎತ್ತಿದೀನಲ್ಲ, ಇದೊಂದು ಸಲ ಎತ್ತದಿದ್ದರೆ ಏನಾಯ್ತು ಅಂತ ಅವಳ ವಾದ. ಸರಿ, ಮಾತು ಬೆಳೆಯುತ್ತಾ ಹೋಯ್ತು. ದಿನ ಮುಗಿಯುವಷ್ಟರಲ್ಲಿ ಹಲ್ಲು ಹಲ್ಲು ಮಸೆಯುವಂತ ದ್ವೇಷ ಇಬ್ಬರಿಗೂ. ಜಗಳಕ್ಕೆ ಬಿದ್ದಾಗಲೆಲ್ಲ ಮಾರಾಮಾರಿಯಾಗೇ ಕಿತ್ತಾಡುತ್ತಿದ್ದರು ಅನ್ನುವುದು ಸತ್ಯವಾದರೂ, ಈ ಸಲದ್ದು ಸ್ವಲ್ಪ ಜಾಸ್ತಿ ಸೀರಿಯಸ್ ಆಗಿ ಹೋಯ್ತು … ಒಂದು ಸಣ್ಣ ಯುದ್ಧ ಅನ್ನುವ ಲೆವೆಲ್ಲಿನದು.
ಮಾಮೂಲಿಯಾಗಿ ಎರಡು ದಿನದಲ್ಲಿ ಮುಗಿಯುತ್ತಿದ್ದ ಜಗಳ ಈ ಸಲ ಮುಗಿಯಲೂ ಇಲ್ಲ. ಅವನು ಒಪ್ಪಂದಕ್ಕೆ ಬಂದು ಫೋನ್ ಮಾಡಿದಾಗ ಅವಳು ಉರಿಮಾರಿ … ಅವಳು ತಗ್ಗಿ ಹೋಗುವಾಗ ಅವನು ದೂರ್ವಾಸ ಮುನಿ. ಆಯ್ದ ಶ್ರೇಷ್ಠ ಬೈಗುಳಗಳಿಂದ ಒಬ್ಬರನ್ನೊಬ್ಬರು ಬಯ್ದುಕೊಂಡರು. ಕೊನೆಗೆ ಇಬ್ಬರಿಗೂ ಈ ಸಲ ತಮ್ಮಿಬ್ಬರ ಪ್ರೀತಿಯ ಕೊನೆಯ ಅಂಕ ಶುರುವಾಗಿದೆ ಅಂತ ಅನ್ನಿಸಿಬಿಟ್ಟಿತು. ಅದನ್ನು ಡಿಕ್ಲೇರ್ ಮಾಡಿಯೂ ಬಿಟ್ಟರು. ನಿನಗಿಂತ ಅದ್ಭುತ ಪ್ರೇಮಿಯೊಬ್ಬ ನನಗೆ ಸಿಗುತ್ತಾನೆ ಮತ್ತು ಅವನ ಜೊತೆ ನೂರ್ಕಾಲ ಸುಖವಾಗಿ ಬದುಕ್ತೀನಿ ಅಂತ ಅವಳೂ, ಹೋಗೇ ನಿನ್ನಪ್ಪನಂತವಳು ನನಗೂ ಸಿಗ್ತಾಳೆ …ನನ್ನ ಪ್ರೀತಿಯ ಬೆಲೆ ಏನು ಅಂತ ನನಗೆ ಗೊತ್ತು ಅಂತ ಅವನೂ ಶಪಥಗೈಯುತ್ತಾ ಬೆನ್ನು ಹಾಕಿ ಹೊರಟರು. ಹಾಗೆ ಹೊರಟ ಇಬ್ಬರ ಕಣ್ಣಲ್ಲೂ ನೀರಿತ್ತು. ಸುಮ್ಮನೆ ಒಂದು ಸಲ .. ಒಂದೇ ಒಂದು ಸಲ ಹಿಂತಿರುಗಿ ನೋಡಿದ್ದರೆ ಇಬ್ಬರಿಗೂ ಇನ್ನೊಬ್ಬರ ಕಣ್ಣಿನ ಹನಿ ಕಾಣುತ್ತಿತ್ತೇನೋ. ಆದರೆ, ಇಬ್ಬರೂ ತಿರುಗಿ ನೋಡಲಿಲ್ಲ ಅನ್ನುವಲ್ಲಿಗೆ ಎರಡನೆಯ ಅಧ್ಯಾಯದ ಕೊನೆ …

***

ಮಾರನೆಯ ದಿನ ಹೊಸ ಜಗತ್ತು ಇಬ್ಬರದ್ದೂ. ‘ಅಬ್ಬಾ! ಎಂತ ಸುಂದರವಾಗಿದೆ ಈ ಪ್ರಪಂಚ … ಇವನ ಗೀಳಿನಲ್ಲಿದ್ದ ನಾನು ಸೂರ್ಯಾಸ್ತ-ಸೂರ್ಯೋದಯ ಕೂಡಾ ನೋಡದೆ ವರ್ಷಗಳಾಗಿ ಹೋಗಿದ್ದವು! ಎಷ್ಟೊಂದು ಬುಕ್ಸ್ ಓದುವುದು ಬಾಕಿ ಉಳಿಸಿದ್ದೇನೆ. ಕವನಗಳನ್ನು ಬರೆದು ಯಾವ ಕಾಲವಾಯ್ತು. ಇನ್ನು ಮುಂದೆ ಪ್ರಪಂಚದ ಸಮಯವೆಲ್ಲ ನನ್ನದೇ. ಫೋನ್ ಮಾಡಿದ ಕೂಡಲೇ ಕಾಲ್ ತೆಗೆದುಕೊಳ್ಳಲಿಲ್ಲ ಅಂತ ಕಿತ್ತಾಡುವ ಅವನು ಇಲ್ಲವೇ ಇಲ್ಲ! ನನಗೆ ಇನ್ನು ಪದೇ ಪದೇ ಫೋನಿನ ಕಡೆ ನೋಡುವ ಕೆಲಸವಿಲ್ಲ … ಆ ಆತಂಕವಿಲ್ಲ … ಆ ಧಾವಂತ ಕೂಡಾ ಇಲ್ಲ. ನನ್ನ ಹಾಡು ನನ್ನದು …’ ಅಂತ ಲಹರಿಗೆ ಬಿದ್ದಳು ಅವಳು.
‘ನನ್ನ ಶನಿವಾರ-ಭಾನುವಾರವಲ್ಲದೇ ವಾರದ ಯಾವುದೇ ದಿನದಲ್ಲಿ ನಿನ್ನ ನೋಡಬೇಕು ಬಾರೋ ಅಂತ ಕ್ರ್ಯಾಕ್ ಥರ ಆರ್ಡರ್ ಮಾಡಿದ್ದಳಲ್ಲ ಇವಳು. ನಾನು ಕೆಲಸಕ್ಕೆ ಹೋಗಿ ಬಂದ ಸುಸ್ತಿದ್ದರೂ ಇವಳು ಕರೆದಳಲ್ಲ ಅಂತ ಓಡಿ ಹೋಗ್ತಿದ್ದೆ. ಈಗ ಪೀಡೆ ಕಾಟ ಕಳೆಯಿತು. ಒಂದೆರಡು ದಿನ ಊರಿಗೆ ಹೋಗಿ ಅಮ್ಮನ್ನ ನೋಡ್ಕೊಂಡು ಬರ್ಬೇಕು. ಜಗತ್ತಿನಲ್ಲಿ ತಾಯಿ ಒಬ್ಬಳೇ ಮುಖ್ಯ. ಇವಳ ಜೊತೆ ಕಿತ್ತಾಟದಲ್ಲಿ ಅಮ್ಮನ್ನ ನೋಡಕ್ಕೂ ಹೋಗದೇ ತಿಂಗಳುಗಟ್ಟಳೇ ಸಮಯವಾಯ್ತು. ನನ್ನ ಓದು ಮತ್ತೆ ಶುರು ಮಾಡಬೇಕು. ಕ್ಲಾಸಿಕ್ ಸಿನೆಮಾಗಳ ಒಂದು ಪಟ್ಟಿ ಮಾಡ್ಕೊಂಡು ಎಲ್ಲ ನೋಡಿ ಮುಗಿಸಬೇಕು. ಥೂ! ಈ ನಿರ್ಧಾರ ತುಂಬ ಮುಂಚೆ ತೆಕ್ಕೊಂಡಿದ್ರೆ ಎಷ್ಟು ಚೆನ್ನಾಗಿರ್ತಿತ್ತು. ಸುಮ್ಮನೇ ಇವಳ ಪ್ರೀತಿಗೆ ಬಿದ್ದು ಟೈಮ್ ಹಾಳು ಮಾಡಿದೆ. ಕೊನೆಗಾದ್ರೂ ಬುದ್ದಿ ಬಂತಲ್ಲ ಮಗಾ ..’ ಅಂತ ತನ್ನ ಬೆನ್ನು ತಾನೇ ತಟ್ಟಿಕೊಂಡ.
ಅವನು ಊರಿಗೆ ಹೋಗಿ ಅಮ್ಮನ ಜೊತೆ ಒಂದೆರಡು ದಿನ ಕಳೆದು ಬಂದ. ಓದದ ಪುಸ್ತಕವನೆಲ್ಲ ಪೇರಿಸಿ ಕೈಲಿ ಹಿಡಿದು ಕೂತ. ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಪುಸ್ತಕದ ಸಾಂಗತ್ಯ ಅದೇನು ನೆಮ್ಮದಿ…’ ಅಂತ ಸಂಭ್ರಮಿಸಿದ. ಇದ್ದ ಬದ್ದ ಸಿನೆಮಾಗಳ ಸಿ ಡಿ ತಂದು ಗುಡ್ಡೆ ಹಾಕಿ ನೋಡಿ ನೋಡಿ ಮೆಚ್ಚಿದ. ಏನೆಲ್ಲ ಮಿಸ್ ಮಾಡ್ಕೊಂಡಿದ್ದೆ ಬದುಕಲ್ಲಿ!!! ಅಂತ ಅಚ್ಚರಿಪಟ್ಟ. ಅವಳು ಕೂಡಾ ಫುಲ್ ಖುಷಿ. ಸೂರ್ಯಾಸ್ತ ನೋಡೇ ನೋಡಿದಳು, ಒಂದಿಷ್ಟು ಕವನ ಬರೆದು ಗುಡ್ಡೆ ಹಾಕಿದಳು. ಒಂದೆರಡು ಕಥೆಗಳನ್ನು ಬರೆಯಲು ಶುರು ಮಾಡಬೇಕು ಅಂತ ಬಿಳಿ ಹಾಳೆ ತಂದಿಟ್ಟಿದ್ದೂ ಆಯ್ತು! ಇಷ್ಟು ಸುಂದರ ಸ್ವಾತಂತ್ರ ಇಲ್ಲದೇ ಅದು ಹೇಗೆ ಇಷ್ಟು ದಿನ ಬದುಕಿದ್ದೆನೋ’ ಅಂದುಕೊಂಡು ಸುಮ್ಮ ಸುಮ್ಮನೆ ಕಾರಣವಿಲ್ಲದ್ದಕ್ಕೆಲ್ಲ ನಕ್ಕಳು …

***

ಇಬ್ಬರೂ ಬೇರೆಯಾಗಿ 15 ದಿನ ಕಳೆದಿತ್ತು …
ಗೆಳತಿಯ ಜೊತೆ ಜಾಮೂನು ತಿನ್ನುತ್ತ ಕೂತವಳಿಗೆ ದಿಢೀರನೆ ಅವನ ನೆನಪು … ಜಾಮೂನು ತಿನ್ನುವಾಗ ನನ್ನ ಬಾಯಿಗೆ ಇಡದೇ ಅವನು ಎಂದೂ ತಿಂದದ್ದೇ ಇಲ್ಲ ಅನ್ನುವ ನೆನಪಾಯ್ತು. ಯಾಕೋ ತಿನ್ನುತ್ತಿದ್ದ ಜಾಮೂನು ರುಚಿಯಾಗಿಲ್ಲ ಅನ್ನಿಸಿ ಬಿಟ್ಟಿತು. ಹೋಟೆಲ್ಲಿನಲ್ಲಿ ಬಿಸಿಬೇಳೆ ಬಾತ್ ತಿನ್ನುತ್ತಾ ಕೂತ ಅವನಿಗೆ ಅವಳ ನೆನಪು. ಅವಳಮ್ಮ ಬಿಸಿಬೇಳೆ ಬಾತ್ ಮಾಡಿದ ದಿನ ಡಬ್ಬಿಗೆ ಹಾಕಿ ತಂದು ಪೂರಾ ತಿನ್ನಿಸಿ ಹೋಗುತ್ತಿದ್ದಳು. ಅದಕ್ಕೋಸ್ಕರ ಎಷ್ಟೊಂದು ದೂರ ಬರ್ತಿದ್ದಳು … ಬಿಸಿಬೇಳೆ ಬಾತ್ ತಟ್ಟೆ ದೂರ ತಳ್ಳಿದ ‘ಅವಳ ಮನೆ ಬಾತಿನ ಥರ ಇಲ್ಲ ..’ ಮನಸ್ಸಿನಲ್ಲಿ ಸಣ್ಣ ವಿಷಾದ …
ಮರುಕ್ಷಣ ಇಬ್ಬರೂ ವಿಷಾದ ಒದ್ದು ಓಡಿಸುವಂತೆ ತಲೆ ಕೊಡವಿಕೊಂಡರು ‘ಅಯ್ಯೋ ಅದೊಂದು ಐದು ನಿಮಿಷದ ಖುಷಿಗಾಗಿ ಬದುಕನ್ನೇ ನಾಶ ಮಾಡ್ಕೊಳಕ್ಕೆ ಆಗತ್ತಾ ..’ ಅಂದುಕೊಂಡು ಮತ್ತೆ ಇಬ್ಬರೂ ಮರೆತ ಓದು … ಸ್ವಾತಂತ್ರ … ಬಿಡುಗಡೆಯ ನೆನಪನ್ನು ಬಲವಂತವಾಗಿ ಎದುರಿಗೆ ಗುಡ್ಡೆ ಹಾಕಿಕೊಂದು ಸಂಭ್ರಮಕ್ಕೆ ಇಳಿದರು. ಆದರೆ ಅದ್ಯಾವುದರಲ್ಲೂ ಅಗಲಿಕೆಯ ದಿನ ಕಂಡ ರಮ್ಯತೆ-ರುಚಿ ಯಾವುದೂ ಇದ್ದ ಹಾಗೆ ಅನ್ನಿಸಲಿಲ್ಲ …

***

ಅವತ್ತಿಗೆ ಒಂದು ತಿಂಗಳಾಗಿತ್ತು ಒಬ್ಬರನ್ನೊಬ್ಬರು ನೋಡದೇ …
ಆಫೀಸಿನಲ್ಲಿ ಅವನೊಬ್ಬ ಅವಳ ಕಡೆ ನೋಡಿದಾಗ ಅವನ ಜೊತೆ ಪ್ರೇಮ ಹುಟ್ಟಬಹುದೋ, ಏನೋ … ಟ್ರೈ ಮಾಡಲಾ ಅಂದುಕೊಂಡಳು ಅವಳು. ಮರುಕ್ಷಣವೇ ಅಯ್ಯೋ ಟ್ರೈ ಮಾಡೋದಿಕ್ಕೆ ಪ್ರೇಮವೇನು ಹೊಸರುಚಿಯಾ? ಆಗೋದಿಲ್ಲ ಹೋಗು … ಕಂಡ ಕಂಡವರ ಜೊತೆಯೆಲ್ಲ ಹೇಗೆ ಪ್ರೇಮ ಹುಟ್ಟಿಸಿಕೊಳ್ಳೋದು ಅಂತ ರೇಗಿಕೊಂಡಳು. ಕೆಲಸದಿಂದ ಮನೆಗೆ ಹೋದ ಕೂಡಲೇ ಟೆರೇಸಿಗೆ ಹೋಗಿ ಸೂರ್ಯಾಸ್ತದಲ್ಲಿ ತಲ್ಲೀನಳಾಗುತ್ತಿದ್ದ ಅವಳು ‘ಥೂ ಸೂರ್ಯಾಸ್ತ ನೋಡಿ ಸುಸ್ತಾಯ್ತು. ಎಷ್ಟಂತ ಅದನ್ನೇ ನೋಡುವುದು’ ಅಂತ ಮುದುರಿ ಮಲಗಿದಳು. ಹಾಡು ಹಾಕಿದಳು. ಅದೂ ಯಾಕೋ ಗದ್ದಲವೆನ್ನಿಸಿ ಆಫ್ ಮಾಡಿದಳು. ಸಿನೆಮಾಗೆ ಹೋಗಲು ಗೆಳತಿಯನ್ನು ಕರೆಯಲಾ ಅಂದುಕೊಂಡಳು. ಮತ್ತೆ ಅವನ ಬೆರಳಲ್ಲಿ ಬೆರಳು ಸೇರಿಸಿ ಚಪ್ಪರಿಸಿ ಸಿನೆಮಾ ನೋಡುತ್ತಿದ್ದ ನೆನಪು. ಅವನ ಜೊತೆಯಿಲ್ಲದೇ ಸಿನೆಮಾ ಎಂಥ ನೀರಸ ಅನ್ನಿಸಿ ಮತ್ತೆ ಮುಸುಕು ಹೊದ್ದು ಬಿದ್ದುಕೊಂಡಳು. ಎಷ್ಟೋ ಜನ್ಮ ಮಲಗಿದ್ದೆ ಅನ್ನಿಸಿದಾಗ ಎದ್ದು ನೋಡಿದರೆ ಇನ್ನೂ ಎಂಟು ಘಂಟೆ … ಸಂಜೆಯಲ್ಲಿ ಅವನ ಜೊತೆ ಇರುತ್ತಿದ್ದೆ ಅಥವಾ ಮನೆಯಲ್ಲಿದ್ದರೆ ಅವನ ಜೊತೆ ಫೋನಿನಲ್ಲಿ ಮಾತಾಡುತ್ತ ಇರುತ್ತಿದ್ದೆ … ಸಮಯ ಹೇಗೆ ಓಡುತ್ತಿತ್ತು ಅನ್ನೋದೇ ಗೊತ್ತಾಗ್ತಿರಲಿಲ್ಲ ಅಂದುಕೊಂಡವಳ ಎದೆಯಲ್ಲಿ ಧಗೆ…
ಕೈಲಿದ್ದ ಪುಸ್ತಕದಲ್ಲೊಂದು ಆಸಕ್ತಿಕರವಾದ ವಿಷಯ ಬಂದಾಗ ಅವಳು ನೆನಪಾದಳು. ಪಾಪಿ! ಅವಳಿದ್ದಿದ್ದರೆ ಎಷ್ಟು ಮುದ್ದಾಗಿ ಕೂತು ಇದನ್ನೆಲ್ಲ ಮಾತಾಡುತ್ತಿದ್ದೆವು. ಈಗ ಓದುವುದೂ ಯಾಕೋ ಯಾಂತ್ರಿಕವಲ್ಲವಾ? ಎಷ್ಟಂತ ಓದಲಿ? ಯಾವುದೋ ಹಾಡು ಗುನುಗಿಕೊಳ್ಳುತ್ತಾ ಕೂತಿರುತ್ತಿದ್ದ ಅವಳ ನೆನಪಾದ ಕೂಡಲೇ ಪುಸ್ತಕ ಎಸೆದು ಕೂತ. ಈ ಒಂದು ತಿಂಗಳಲ್ಲಿ ಒಂದೇ ಒಂದು ಹೆಣ್ಣನ್ನೂ ಪ್ರೀತಿ ಮಾಡ್ಬೇಕು ಅಂತಲೇ ಅನ್ನಿಸಲಿಲ್ಲವಲ್ಲ … ಅವಳಪ್ಪನಂಥವಳನ್ನ ಹುಡುಕಿ ಪ್ರೀತಿಸಬೇಕು ಅಂದುಕೊಂಡಿದ್ದೂ ಮರೆತೇ ಹೋಗಿತ್ತು … ಅಯ್ಯೋ! ಎಷ್ಟು ಇಷ್ಟವಾಗ್ತಿದ್ದ ಅವಳನ್ನ ಬಿಟ್ಟು ಮತ್ತೆ ಯಾರನ್ನೂ ಪ್ರೀತಿಸೋದಿಕ್ಕೆ ಆಗೋದೇ ಇಲ್ವಲ್ಲಾ …
ಅವತ್ತು ರಾತ್ರಿ ಧೋ ಅಂತ ಸುರಿದ ಮಳೆಯ ಜೊತೆ ಅವರ ನೆನಪಿನ ಮಳೆ ಕೂಡಾ ಸೇರಿತು. ಒಂದು ತಿಂಗಳ ಕೆಳಗೆ ಪೊಸೆಸಿವ್‌ನೆಸ್ ಅನ್ನಿಸಿದ್ದು ಪ್ರೀತಿಯ ಇನ್ನೊಂದು ಮುಖವಲ್ಲವಾ ಅಂತ ಅನ್ನಿಸಿತು ಅವಳಿಗೆ. ಪಾಪ, ಫೋನ್ ತೆಗೆಯಕ್ಕೆ ತಡ ಮಾಡಿದ್ದಕ್ಕೆ ಹಾಗ್ಯಾಕೆ ರಾಕ್ಷಸನ ಹಾಗೆ ಆಡಿದೆ ನಾನು ಮೂರ್ಖ ಅಂತ ಅವನು ಹಳಹಳಿಸಿದ. ನನಗೆ ನೀನು ಇಷ್ಟ … ಇಷ್ಟು ಕಾಲದ separation ಸರಿಯಾಗಿ ಬುದ್ಧಿ ಕಲಿಸಿದೆ. ಇನ್ಯಾವತ್ತೂ ಜಗಳ ಆಡದೇ ಹೇಗೆ ಬದುಕಿ ಬಿಡ್ತೀವಿ ಅನ್ನೋದನ್ನ ರಜತ ಪರದೆಯ ಮೇಲೇ ಕಾದು ನೋಡಲಿ ಈ ಜಗತ್ತು ಅಂತ ತೀರ್ಮಾನಿಸಿದರು.
ಬೆಳಿಗ್ಗೆ ಎದ್ದು ಹಳಸಲು ಮುಖದಲ್ಲಿ ಮೊದಲ ಕೆಲಸ ಮಾಡಿದ್ದೆಂದರೆ ಇಬ್ಬರೂ ಮಾತಾಡಿದ್ದು. ರಾಜಿಯಾಯ್ತು. ಸಂಜೆ ಭೇಟಿ ಆಗುವ ಕಾರ್ಯಕ್ರಮ.
ಅವತ್ತು ಬೇಗ ಸಂಜೆಯಾಯ್ತು ಅನ್ನಿಸಿತು ಇಬ್ಬರಿಗೂ. ಅರ್ಜೆಂಟಲ್ಲಿ ಕೆಲಸ ಮುಗಿಸಿ ಬಿಸಾಕಿ ಒಬ್ಬರಿಗೊಬ್ಬರು ಭೇಟಿಯಾದರು. ಒಂದಷ್ಟು ಕಣ್ಣೀರು, ಒಂದಷ್ಟು ಪ್ರೀತಿ, ಆತ್ಮ ನಿವೇದನೆ … ಪ್ರೇಮವೆಂದರೆ ‘ನೀನು ಬೇಕು’ … ‘ನೀನು ಬೇಕೇ ಬೇಕು’ ಮತ್ತು ‘ನೀನೇ ಬೇಕು …’ ಅಂತೆಲ್ಲ ವ್ಯಾಖ್ಯಾನ … ಇತ್ಯಾದಿ, ಇತ್ಯಾದಿ …

***

ಉಪಸಂಹಾರ:
ಮಾರನೆಯ ದಿನ ….
‘ಹಲ್ಲೋ! ಯಾಕೇ ಫೋನ್ ಅಷ್ಟೊತ್ತಿಂದ ಎಂಗೇಜ್ಡ್ …?’
‘ಅಯ್ಯೋ! ನಾನೂ ನಿನಗೇ ಟ್ರೈ ಮಾಡ್ತಿದ್ದೆ ಕಣೋ …’
‘ನಿಜಕ್ಕೂ ನನಗಾ? ಅಥವಾ …’
‘ನೀನೊಬ್ಬ ಪಿಶಾಚಿ. ಬಾ ಕಾಲ್ ಲಾಗ್ ತೋರಿಸ್ತೀನಿ’ …­­­
But, they lived happily ever after …!
 
 

‍ಲೇಖಕರು avadhi

August 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. D.Ravivarma

    But, they lived happily ever after …!
    ತುಂಬಾ ಮಾರ್ಮಿಕವಾದ ಅಸ್ಟೆ ಬದುಕಿನ ನಿಗೂಡ ಸತ್ಯಗಳನ್ನು ಹಂತ ಹಂತವಾಗಿ ಬಿಚ್ಚಿಡುವ ವಾಸ್ತವ ಕಥೆ ಯನ್ನು ತುಂಬಾ ಕಲಾತ್ಮಕವಾಗಿ ಬರೆದಿದ್ದಿರಿ. ಕೆಲವೊಮ್ಮೆ ಸಣ್ಣ ಸಣ್ಣ ಕಾರಣಗಳಿಗಾಗಿ ವೈಮನಸ್ಸು ಸೃಸ್ತಿಸಿಕೊಳ್ಳುವ ಬದುಕನ್ನು ಕಳೆದುಕೊಳ್ಳುವ ಕಳೆದುಕೊಂಡು ಪರದಾಡುವ ,ಇಂದಿನ ಬದುಕನ್ನು ನಿಮ್ಮ ಸುಂದರ ಬಾಷೆಯಲ್ಲಿ ಮನಮುಟ್ಟುವ ಹಾಗೆ ಚಿತ್ರಿಸಿದ್ದಿರಿ ,,ಇಲ್ಲಿ ಆತ್ಮಾವಲೋಕನದ ಅಗತ್ಯತೆ,ಅನಿವಾರ್ಯತೆ ಯನ್ನು ಕೂಡ ನಿಮ್ಮ ಕಥೆ ಪ್ರತಿಬಿಂಬಿಸುತ್ತದೆ,ನಿಮಗೂ ಅವಧಿಗೂ ವಂದನೆಗಳು

    ಪ್ರತಿಕ್ರಿಯೆ
  2. vijayashree

    ಸಿಂಪಲ್ಲಾಗೊಂದು ಲವ್ ಸ್ಟೋರಿ,, ಭಯ೦ಕರ ಚನ್ನಾಗಿದೆ ಭಾರ್ತಿ..:)

    ಪ್ರತಿಕ್ರಿಯೆ
  3. Tejaswini Hegde

    ಬೆಳಿಗ್ಗೆ ಎದ್ದು ಹಳಸಲು ಮುಖದಲ್ಲಿ ಮೊದಲ ಕೆಲಸ ಮಾಡಿದ್ದೆಂದರೆ ……….. 😀 😀 😀 liked it.

    ಪ್ರತಿಕ್ರಿಯೆ
  4. Kiran

    “ಆಯ್ದ ಶ್ರೇಷ್ಠ ಬೈಗುಳಗಳಿಂದ ಒಬ್ಬರನ್ನೊಬ್ಬರು ಬಯ್ದುಕೊಂಡರು” My vocabulary is perishing fast, but my wife’s is still strong. Details please!!:)

    ಪ್ರತಿಕ್ರಿಯೆ
  5. Gopinatha Rao

    “ಹೋಗೇ ನಿನ್ನಪ್ಪನಂತವಳು ನನಗೂ ಸಿಗ್ತಾಳೆ …ನನ್ನ ಪ್ರೀತಿಯ ಬೆಲೆ ಏನು ಅಂತ ನನಗೆ ಗೊತ್ತು ಅಂತ ಅವನೂ ಶಪಥಗೈಯುತ್ತಾ …”
    ವ್ಯಾಕರಣಕ್ಕೆ ಜೋತು ಬಿದ್ದು ಪುಣ್ಯಕ್ಕೆ “ನಿನ್ನಮ್ಮ” ಅನ್ನಲಿಲ್ಲ….!ಒಂದಕ್ಕೆರಡಾಗಿ ಡೈವೋರ್ಸೇ ಆಗಿಬಿಡುತ್ತಿತ್ತೇನೋ.. ..

    ಪ್ರತಿಕ್ರಿಯೆ
  6. Shwetha Hosabale

    ತುಂಬಾ ಲವಲವಿಕೆಯ ಬರಹ…ಇಷ್ಟ ಆಯ್ತು:)

    ಪ್ರತಿಕ್ರಿಯೆ
  7. shaila

    ಹಾಗೇ ತುಂಬಾ ಚೆನ್ನಾಗಿದೆ ಭಾರತಿ ..:-) ನೀವು ಬರೆದದ್ದೂ , ನಿಮ್ಮದೇ ಆದ vocabulary ನೂ ..:-) patent ಮಾಡಿಸಿಕೊಂಡು ಬಿಡಿ ..:-)

    ಪ್ರತಿಕ್ರಿಯೆ
  8. ಸತೀಶ್ ನಾಯ್ಕ್

    ಅದೆಂಥ ಪ್ರೀತಿ ಜಗಳವಿಲ್ಲದ ಮೇಲೆ..?? ಸಣ್ಣ ಸಣ್ಣ ಜಗಳದಲ್ಲಿ ಅಖಂಡ ಪ್ರೀತಿ ಇದೆ ಅಂತ ಎಲ್ಲೆಲ್ಲೊ ಯಾರ್ಯಾರೋ ಹೇಳಿದ್ದು ಕೇಳಿದ ನೆನಪು..
    ಬರೆದಿರೋ ವಸ್ತು ಆಗ್ಲಿ ಬರೆದ ರೀತಿ ಆಗ್ಲಿ ಎರಡೂ ಸೂಪರ್.. ಅರ್ಜೆಂಟ್ ಆಗಿ ನಾನು ಒಂದು ಹುಡುಗಿ ಹತ್ರ ಜಗಳ ಮಾಡ್ಬೇಕು ಅನ್ನಿಸ್ತಿದೆ.. ಮೊದ್ಲು ಅದಕ್ಕೆ ಒಂದು ಹುಡುಗಿ ಹುಡುಕಬೇಕಿದೆ.. 😉

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: