ಅಶೋಕ ಶೆಟ್ಟರ್ ಕಾಲಂ : ’ಹೆಂಡ್ತಿ ಅಂತ ಇರೋಳೇ ನೀನೊಬ್ಳು…’!

ನನ್ನ ತೀರ್ಥಕ್ಷೇತ್ರ ಯಾತ್ರೆ ೨೦೧೩

ಆಸ್ತಿಕನೋ ನಾಸ್ತಿಕನೋ ಎಂಬುದು ಸ್ವತ: ನನಗೇ ಸ್ಪಷ್ಟವಿಲ್ಲದ ನಾನು ಹದಿನೈದು ದಿನಗಟ್ಟಲೇ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಳ್ಳುತ್ತೇನೆ ಎಂಬುದು ನನಗೇ ವಿಚಿತ್ರವಾಗಿತ್ತು. ನಾನು ಹತ್ತು ದಿನಗಳ ಅವಧಿಯಲ್ಲಿ ಭೇಟಿಕೊಟ್ಟ ಹತ್ತಾರು ಸ್ಥಳಗಳಲ್ಲಿ ರಾಜಕೀಯ ಕೇಂದ್ರವಾದ ದೆಹಲಿ, ಕಾಶ್ಮೀರದ ರಮ್ಯ ಪ್ರಕೃತಿ ತಾಣಗಳಾದ ಪಹಲಗಾಂ ಹಾಗೂ ಸೋನಾಮಾರ್ಗ್ ಮತ್ತು ಪ್ರೇಮಸ್ಮಾರಕ ತಾಜ್ ಮಹಲ್ ಇರುವ ಉತ್ತರಪ್ರದೇಶದ ಅಗ್ರಾ ಹೊರತು ಪಡಿಸಿ ಇನ್ನುಳಿದ ಎಲ್ಲವೂ ( ಜಮ್ಮು-ಕಾಟ್ರಾದಲ್ಲಿರುವ ವೈಷ್ಣೋದೇವಿ, ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿರುವ ಶಂಕರಾಚಾರ್ಯ ದೇಗುಲ, ದಕ್ಷಿಣ ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಹದಿಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಸ್ಥಿತವಿರುವ ಅಮರನಾಥ್, ಉತ್ತರಾಖಂಡದಲ್ಲಿರುವ ಹರಿದ್ವಾರ್ ಮತ್ತು ಋಷಿಕೇಶ್) ಧಾರ್ಮಿಕ ಶ್ರದ್ಧೆಯ ಕೇಂದ್ರಗಳೇ.
ನಮ್ಮ ಮನೆಯಲ್ಲಿ ನನ್ನ ಹೆಂಡತಿ ಮಾತ್ರ ಶತಪ್ರತಿಶತ ಆಸ್ತಿಕಳು. ಮಹಾ ದೈವಭಕ್ತೆಯಾದ ಅವಳ ಪೂಜಾ ವಿಧಾನಗಳಿಗೆ ಹೊಸ ಹೊಸ ಮಂತ್ರಪಠಣಗಳು, ಹೊಸ ಹೊಸ ಅಚರಣೆಗಳು ಸೇರ್ಪಡೆಗೊಳ್ಳುತ್ತ ಹೋಗಿ ಅವಳು ಮಾಡುವ ಪೂಜೆ ಎಂಬುದೀಗ ಅಂತಿಮವಾಗಿ ಸುಮಾರು ಎರಡು ತಾಸುಗಳಷ್ಟು ಸುದೀರ್ಘವಾದ ಕಾರ್ಯಕ್ರಮವಾಗಿ ಮಾರ್ಪಟ್ಟು ನನ್ನ ಮತ್ತು ನನ್ನ ಮಗನ ಟೀಕೆ ಟಿಪ್ಪಣಿಗಳಿಗೆ ಕಾರಣವಾಗಿದೆ. ಹೀಗಾಗಿ ಅವಳು ತನ್ನ ಪೂಜೆ-ಪ್ರಾರ್ಥನೆಗಳಿಂದ ತನ್ನ ಮನಸಿಗೆ ಉಂಟಾಗುವ ಸುಖಾನುಭೂತಿಗೆ ತಾತ್ಕಾಲಿಕ ತಡೆ ಕೊಟ್ಟುಕೊಳ್ಳುತ್ತ ನಮಗೆ ಅವಲಕ್ಕಿ ಅಥವಾ ಉಪ್ಪಿಟ್ಟು ಮಾಡಿ ಕೊಡುವದು, ಚಹ ಹಾಕಿ ಕೊಡುವದು ಇತ್ಯಾದಿ ಲೌಕಿಕ ಕರ್ಮಗಳನ್ನು ಮಾಡುತ್ತಲೇ ಕಂತುಗಳಲ್ಲಿ ತನ್ನ ಪೂಜಾ ಕೈಂಕರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿರುತ್ತಾಳೆ.
ನನ್ನ ಮಗ ಸ್ನಾನ ಮಾಡಿ ಬಂದು ದೇವರ ಕೋಣೆ ಪ್ರವೇಶಿಸಿ ಕೈಮುಗಿದು ಕೆಲ ಕ್ಷಣ ನಿಂತುಕೊಂಡು ವಿಭೂತಿ ಹಚ್ಚಿಕೊಂಡು ಒಂದು ದೀಪ ಬೆಳಗಿಸಿ ಹೊರಬೀಳುವಷ್ಟು ಮತ್ತು ಪ್ರತಿ ಗುರುವಾರ ಧಾರವಾಡದಲ್ಲಿರುವ ಶಿರಡಿ ಸಾಯಿಬಾಬ ಮಂದಿರಕ್ಕೆ ಹೋಗುವಷ್ಟು ಆಸ್ತಿಕ. ನನ್ನದೇ ಸಮಸ್ಯೆ. ನನ್ನ ಹೆಂಡತಿ ಹಬ್ಬ ಹರಿದಿನಗಳಂದು ನಾನಾಗೇ ದೇವರ ಕೋಣೆಗೆ ಹೋಗಿ ಕೈ ಮುಗಿಯಬಹುದೆಂದು ಕಾಯ್ದು ನೋಡಿ ನಿರಾಶಳಾಗಿ ಕೊನೆಗೆ “ಏನ್ರಿ, ದೊಡ್ಡ ಹಬ್ಬ ಈವೊತ್ತು. ದೇವರ ಕೋಣೆಗೆ ಹೋಗಿ ಸ್ವಲ್ಪ ಕೈ ಮುಗೀರಿ” ಎಂದು ವಿನಂತಿಸಿಕೊಳ್ಳುವ ಧ್ವನಿಯಲ್ಲಿ ಹೇಳಿದ ಮೇಲೆ ಅಷ್ಟು ಮಾಡಿ ಹೊರಬರುತ್ತೇನೆ. ಇಂಥ ನಾನು ಇಷ್ಟು ಕಷ್ಟ ಪಟ್ಟುಕೊಂಡು ಖರ್ಚು ಮಾಡಿಕೊಂಡು ತೀರ್ಥಕ್ಷೇತ್ರಗಳ ಯಾತ್ರೆಗೆ ಹೋದದ್ದು ಹೇಗೆ?
ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಎಂದು ತೋರುತ್ತದೆ. ಬೆಂಗಳೂರಿನಲ್ಲಿರುವ ನನ್ನ ಹೆಂಡತಿಯ ಅಕ್ಕನ ಮಗಳು ಪುಷ್ಪಾಂಜಲಿ ನನ್ನ ಹೆಂಡತಿಯ ತಲೆಯಲ್ಲಿ ಹೀಗೆ ಈ ವಿಚಾರದ ಬೀಜವನ್ನು ಬಿತ್ತಿದಳು “ಆಂಟಿ, ನಾನು ಮಮ್ಮಿ ಡ್ಯಾಡೀ ಮೀನಿ ಪಾಪಕ್ಕಾ ಹಿಂಗಿಂಗೆ ಜುಲೈ ತಿಂಗಳಲ್ಲಿ ವೈಷ್ಣೋದೇವಿ ಮತ್ತು ಅಮರನಾಥ ಪ್ರವಾಸ ಹೊರಟಿದ್ದೇವೆ. ಈಗಲೇ ಏರ್ ಟಿಕೆಟ್ ಬುಕ್ ಮಾಡಿದರೆ ಹಣ ಕಡಿಮೆ ತಗಲುತ್ತದೆ, ನೀನೂ ಬರ್ತೀ?” ನನ್ನವಳು “ನಿಮ್ ಅಂಕಲ್” ನ (ಅಂದರೆ ನನ್ನನ್ನು) ಕೇಳಿ ಹೇಳುತ್ತೇನೆ ಎಂದಳು. ಸರಿ,ಅಂಕಲ್ (ಅಂದರೆ ನಾನು) ಏನನ್ನೇ ಆಗಲೀ ಹೇಳುವ ಮೊದಲೇ ನನ್ನ ಮಗ ” ಮಮ್ಮೀ, ನಿನ್ ಕೈಲೇ ಅದೆಲ್ಲಾ ಆಗೂ ಹೋಗೂ ಮಾತಲ್ಲ. ಸುಮ್ಮನೇ ನಿನ್ನ ಕಳಿಸಿ ನಾವು ಇಲ್ಲಿ ಟೆನ್ಶನ್ ನ್ಯಾಗ ಇರಬೇಕಾಗ್ತೈತಿ. ನೀ ಈ ಅಮರನಾಥ್ ವಿಚಾರ ತೆಲ್ಯಾಗಿಂದ ತಗದ್ ಬಿಡು” ಎಂದಿದ್ದ. ನನ್ನ ಹೆಂಡತಿಗೋ ಇದು ಬಹುಕಾಲದ ಅವಳ ಅಭೀಪ್ಸೆಯನ್ನು ಈಡೇರಿಸಿಕೊಳ್ಳಲು ಸಾಕ್ಷಾತ್ ಶಿವ-ಶಿವೆಯರೇ ರೂಪಿಸಿ ಕಳುಹಿಸಿದ ಆಫರ್ ಆಗಿದ್ದಂತಿತ್ತು. “ಬೇಕಾದ್ದಷ್ಟ್ ತ್ರಾಸಾಗಲಿ, ನಾ ಮಾತ್ರ ಹೋಗಾಕಿನs” ಎಂದಳವಳು.
ಪುಷ್ಪಾಂಜಲಿ ನನಗೇ ಫೋನ್ ಮಾಡಿದಳು.“ಅಂಕಲ್ ನೀವೂ ಬರ್ರಿ” ಎಂದಳು. ತಡ ಮಾಡಿದರೆ ಪ್ಲೇನ್ ಟಿಕೆಟ್ ಮತ್ತೆ ದುಬಾರಿಯಾಗಬಹುದೆಂದಳು.”ಸ್ವಲ್ಪ ಟೈಮ್ ಕೊಡೇ, ನಾನು ನನ್ನ ಅಕೆಡಮಿಕ್ ಕೆಲೆಂಡರ್ ನೋಡಬೇಕು. ಮಧ್ಯಾಹ್ನ ಕನ್ ಫರ್ಮ್ ಮಾಡುತ್ತೇನೆ” ಎಂದ ನಾನು ನಮ್ಮ ವಾರ್ಷಿಕ ರಜೆ ಜುಲೈ ಅಂತ್ಯದ ವರೆಗೆ ಇರುವದನ್ನು ಖಚಿತ ಪಡಿಸಿಕೊಂಡು ಎಸ್ ಎಂದೆ. “ವಿಚಾರ ಮಾಡ್ರಿ, ಮೊದಲs ನಿಮ್ ಹೆಲ್ಥ್ ಸ್ವಲ್ಪ ನಾಜೂಕ. ನಿಮಗ ನೀಗೂವಂಗ್ ಇದ್ರ ಬರ್ರಿ” ಎಂದ ನನ್ನ ಹೆಂಡತಿಗೆ “ಅದೆಲ್ಲಾ ಸೆಕಂಡರಿ, ನಿನ್ನ ಒಬ್ಬಕಿನ್ನs ಕಳಿಸಿ ಇಲ್ಲಿ ಚಿಂತೀ ಮಾಡಿಕೊಂತ ಕೂಡ್ರುದಕಿಂತ ನಾನೂ ಬಂದ್ ಬಿಡೂದs ಛಲೋ. ಹೆಂಡ್ತಿ ಅಂತ ಇರೋಳೇ ನೀನೊಬ್ಳು, ನಿನಗ ಏನಾರ ಹೆಚ್ಚೂ ಕಡಿಮಿ ಆದ್ರ ನನ್ನ ಗತಿ ಏನು” ಎಂದು ತಮಾಷೆ ಮಾಡಿ ಬೆಂಗಳೂರಿನಿಂದ ದೆಲ್ಲಿ ಮತ್ತು ಅಲ್ಲಿಂದ ಜಮ್ಮುಗೆ ನನಗೂ ನನ್ನ ಹೆಂಡತಿಗೂ ವಿಮಾನದ ಟಿಕೆಟ್ ಗಳನ್ನು ಬುಕ್ ಮಾಡಲು ಹೇಳಿದೆ. ಮರುದಿನವೇ ಟಿಕೆಟ್ ಬುಕ್ ಮಾಡಿದ ಅವಳು ಮತ್ತೊಂದು ವಾರದಲ್ಲಿ ಅಮರನಾಥ್ ಯಾತ್ರಾ ಮಂಡಳಿಗೆ ನಾವು ಕಳಿಸಬೇಕಿದ್ದ ಫಿಜಿಕಲ್ ಫಿಟ್ನೆಸ್ ಪ್ರಮಾಣಪತ್ರ, ಜಮ್ಮು ಕಾಶ್ಮೀರ ಬ್ಯಾಂಕ್ ನ ಬೆಂಗಳೂರ್ ಶಾಖೆಯಲ್ಲಿ ಸಲ್ಲಿಸಬೇಕಾದ ನೋಂದಾವಣೆ ಮತ್ತಿತರ ದಸ್ತಾವೇಜು,ದಾಖಲೆಗಳ ನಮೂನೆಗಳನ್ನು ನನಗೆ ಕಳಿಸಿದಳು. ಅನಿವಾರ್ಯ ಸನ್ನಿವೇಶದಲ್ಲಿ ನಮ್ಮ ಮಗನ ಮದುವೆ ಹೂಡಿಕೊಂಡು ಮೂರೇ ಮೂರು ವಾರಗಳಲ್ಲಿ ಅದರ ಕೆಲಸ ಕಾರ್ಯಗಳನ್ನು ಹಗಲಿರುಳು ಮಾಡಿ ಮುಗಿಸಿದ್ದ ನಾವು ಆ ದಣಿವು ಆರಿಸಿಕೊಳ್ಳುವ ವ್ಯವಧಾನವೂ ಇಲ್ಲದೇ ಅವನ ಮದುವೆ ಮುಗಿದ ಮೂರನೇ ದಿನವೇ ಮತ್ತೊಂದು ಸುದೀರ್ಘ ಪ್ರವಾಸದ ದಣಿವಿಗೆ ಸಿದ್ಧರಾಗಿದ್ದೆವು.
ಇದೇ ಜುಲೈ ೧೭ರಂದು ಬೆಂಗಳೂರಿನಿಂದ ದೆಹಲಿ ತಲುಪಿದಾಗ ಅಲ್ಲಿಂದ ಮುಂದೆ ಜಮ್ಮುಗೆ ಹೋಗುವ ವಿಮಾನವು ತಾಸೊಪ್ಪತ್ತಿನಲ್ಲೇ ಇತ್ತಾದ್ದರಿಂದ ನಿಲ್ದಾಣದಿಂದ ಹೊರಗೆ ಹೋಗುವ ಪ್ರಮೇಯವೇ ಬರಲಿಲ್ಲ, ದೆಹಲಿಯ ಬಿಸಿಲಿನ ಬೇಗೆಯ ಸಂಪರ್ಕವೂ ಆಗಲಿಲ್ಲ. ಅಲ್ಲೇ ಏರೋಡ್ರೋಮಿನ ಬುಕ್ ಶಾಪ್ ನಲ್ಲಿ ಖುಶವಂತ್ ಸಿಂಗ್ ರ “ದಿ ಪೋರ್ಟ್ರೇಟ್ ಆಫ್ ಏ ಲೇಡಿ” ಎಂಬ ಶೀರ್ಷಿಕೆಯ ಕಥಾ ಸಂಗ್ರಹ ಮತ್ತು ಅಮಿತಾವ್ ಘೋಷ್ ಬರೆದ “ದಿ ಸರ್ಕಲ್ ಆಫ್ ರೀಜನ್” ಪುಸ್ತಕಗಳನ್ನು ಕೊಂಡು ಕಣ್ಣಾಡಿಸುವಷ್ಟರಲ್ಲಿ ಲಗೇಜ್ ಸ್ಕ್ಯಾನಿಂಗ್, ಬೋರ್ಡಿಂಗ್ ಪಾಸ್ ಪಡೆದುಕೊಳ್ಳುವಿಕೆಯಂಥ ಔಪಚಾರಿಕತೆ ಶುರುವಾಗಿ ಆಮೇಲೆ ವಿಮಾನವೇರಿ ಅಲ್ಲಿ ನಾದಿ ಇಟ್ಟ ಮೈದಾಹಿಟ್ಟಿನಿಂಥ ಮೈಬಣ್ಣದ ಗಗನಸಖಿಯರು ಮುಖದಲ್ಲಿ ಸದಾ ಮೆತ್ತಿಕೊಂಡ ಮುಗುಳ್ನಗೆಯೊಂದಿಗೆ ಬಂದು ಕೈಗಿಟ್ಟ ಕೆಲಸಕ್ಕೆ ಬಾರದ “ಫುಡ್” ತಿಂದು ಜಮ್ಮು ನಿಲ್ದಾಣದಲ್ಲಿಳಿದಾಗ ಮೊದಲು ನಮ್ಮನ್ನು ಸ್ವಾಗತಿಸಿದ್ದು ಉರಿಬಿಸಿಲು ನಂತರ ಮಳೆ. ಸೀದಾ ಒಲೆಯಲ್ಲಿ ಇಳಿಸಿದಂತಿದ್ದ ಝಳದಿಂದ ತತ್ತರಿಸುವಷ್ಟರಲ್ಲಿ ಶುರುವಾದ ಜಡಿಮಳೆ ಜಮ್ಮುವಿನಿಂದ ಐವತ್ತು ಕಿಲೋಮೀಟರ್ ಅಂತರದಲ್ಲಿರುವ ಕಾಟ್ರಾದಲ್ಲಿ ನಮಗೆ ನಿಗದಿತವಾಗಿದ್ದ ಹೊಟೆಲ್ ವರುಣ್ ತಲುಪುವ ವರೆಗೂ ಸುರಿಯಿತು.
ಅಲ್ಲಿಂದ ನಾವು ಹೋಗಬೇಕಿದ್ದುದು ಪವಿತ್ರ ತೀರ್ಥಕ್ಷೇತ್ರಗಳಲ್ಲೊಂದೆಂದು ಖ್ಯಾತವಾದ ಶ್ರೀಮಾತಾ ವೈಷ್ಣೋದೇವಿ ಮಂದಿರಕ್ಕೆ. ತ್ರಿಕೂಟ್ ಎಂದು ಕರೆಯಲ್ಪಡುವ ಮೂರು ಎತ್ತರದ ಪರ್ವತಗಳ
ಶಿಖರಾಗ್ರದ ಮಡಿಲಲ್ಲಿ ಸ್ಥಿತವಾಗಿರುವ ಈ ಮಂದಿರ ವರ್ಷದುದ್ದಕ್ಕೂ ಕೋಟ್ಯಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಹಗಲು ರಾತ್ರಿಗಳೆಂಬ ಭೇದವಿಲ್ಲದೇ ಆ ಋತು ಈ ಮಾಸ ಎನ್ನದೇ ಹಗಲು-ರಾತ್ರಿ ಸದಾ ಕಾಲ ಈ ದೇಗುಲದಲ್ಲಿ ಭಕ್ತಾದಿಗಳು ದೇವಿಯ ದರ್ಶನ ಮಾಡುವದು ನಡೆದೇ ಇರುತ್ತದೆ. ಕಾಟ್ರಾದಲ್ಲಿರುವ ಬೇಸ್ ಕ್ಯಾಂಪ್ ನಿಂದ ಸುಮಾರು ಆರು ಸಾವಿರ ಅಡಿಗಳಿಗೂ ಮೀರಿದ ಎತ್ತರದಲ್ಲಿರುವ ಕಮಾನಿನಾಕಾರದ ಸ್ಫಟಿಕ ಸ್ವಚ್ಛ ಶಿಲಾಜೋಡಣೆ ಇರುವ ಗುಹೆಯೊಂದರಲ್ಲಿ ಸಾಗಿ ಹೋಗಿ ದೇವಿಯ ದರ್ಶನ ಮಾಡುವದರೊಂದಿಗೆ ಈ ಯಾತ್ರೆ ಮುಗಿಯುತ್ತದೆ. ದೇವಿ ಎಂದರೆ ಅಲ್ಲಿ ಯಾವುದೇ ಮೂರ್ತಿಯಾಗಲೀ ವಿಗ್ರಹವಾಗಲೀ ಇಲ್ಲ. ಸ್ವಾಭಾವಿಕವಾಗಿ ರೂಪುಗೊಂಡ ಮೂರು ಶಿಲಾರಚನೆಗಳೇ ಇಲ್ಲಿಯ ದಿವ್ಯ ದರ್ಶನದ ವಸ್ತುಗಳು. ಸ್ಥಳೀಯವಾಗಿ ಅವುಗಳನ್ನು ಪಿಂಡಿಗಳೆಂದು ಕರೆಯಲಾಗುತ್ತದೆ. ಒಟ್ಟು ಯಾತ್ರೆಯನ್ನು ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್ ನಿರ್ವಹಿಸುತ್ತದೆ. ದೇವಿಗೆ ಭಕ್ತಾದಿಗಳು ಸಮರ್ಪಿಸಬೇಕಾದ ವಸ್ತುಗಳೆಂದರೆ ಬಣ್ಣ ಬಣ್ಣದ ಎರಡು ಜರೀ ವಸ್ತ್ರಗಳು, ಇನ್ನುಳಿದಂತೆ ಕಾಯಿ ಒಡೆಯುವದು, ಕರ್ಪೂರ ಬೆಳಗುವದು, ಧೂಪ ದೀಪ ಎಂಥದೂ ಇಲ್ಲ. ಆ ವಸ್ತ್ರಗಳಲ್ಲೊಂದನ್ನು ದೇವಿಗೆ ತಾಕಿಸಿ ಮರಳಿ ಕೊಡುತ್ತಾರೆ ಇನ್ನೊಂದನ್ನು ದೇವಿಗೆ ಹೊದ್ದಿಸುತ್ತಾರೆ.
ಸಮಸ್ಯೆ ಇರುವದು ಬೇಸ್ ಕ್ಯಾಂಪ್ ನಿಂದ ದೇವಿಯ ಗುಹೆ ಇರುವ ಪರ್ವತಾಗ್ರದ ನಡುವಿನ ಭೌತಿಕ ಅಂತರದ್ದು. ಅದು ಹನ್ನೆರಡು ಕಿಲೋಮೀಟರ್ ಏರು ಮುಖದಲ್ಲಿ ಸಾಗಬೇಕಾದ ದಾರಿ. ಕೈಕಾಲು ಆಡದವರು, ನಿಶ್ಶಕ್ತರು, ವೃದ್ಧರು ಸಾಮಾನ್ಯವಾಗಿ ನಾಲ್ಕು ಜನ ತಮ್ಮ ಹೆಗಲ ಮೇಲೆ ಹೊತ್ತೊಯ್ಯುವ ಡೋಲಿ ಅಥವಾ ಪಾಲ್ಕಿಯಲ್ಲಿ ಕುಳಿತು ಸಾಗಿದರೆ, ಕೆಲವರು ಕುದುರೆಯನ್ನು ಏರಿ ಹೋಗುತ್ತಾರೆ. ಹಲವಾರು ಇತರರು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ನನ್ನ ಎಲುವು ಕೀಲುಗಳ ಡಾಕ್ಟರಾಗಿದ್ದ ಡಾ.ತೃಪ್ತಿ ಗಲಗಲಿಯವರು “ಬೆಟ್ಟ ಗುಡ್ಡ ಮೆಟ್ಟಿಲು ಹತ್ತಿ ಇಳಿದು ಮಾಡಬೇಡಿ, ಸಮತಟ್ಟಾದ ನೆಲದಲ್ಲಿ ಪ್ರತಿನಿತ್ಯ ನಲವತ್ತು ನಿಮಿಷ ವಾಕಿಂಗ್ ಮಾಡಿ” ಎಂದು ಹೇಳಿದ್ದನ್ನೂ, “ನಾನು ಹೀಗೆ ಅಮರನಾಥ್ ಯಾತ್ರೆಗೆ ಹೋಗಲಿದ್ದೇನೆ” ಎಂದು ಹೇಳಿದಾಗ ನನ್ನ ನೆಫ್ರೊಲಾಜಿ ಕನ್ಸಲ್ಟಂಟ್ ಡಾ. ವೆಂಕಟೇಶ್ ಮೊಗೇರ್ ಅವರು “Don’t exert yourself” ಎಂದು ಹೇಳಿದ್ದನ್ನೂ ನೆನಪಿಸಿಕೊಂಡು ನಾನು ಪಂಜಾಬ್ ಸಿಂಗ್ ಎಂಬ ಕುದುರೆಯವನೊಂದಿಗೆ ಮಾತನಾಡಿ ಸಂಜೆ ಐದೂ ವರೆಯ ಹೊತ್ತಿಗೆ ಕುದುರೆಯ ಮೇಲೆ ವಿರಾಜಮಾನನಾದೆ, ನನ್ನ ಹೆಂಡತಿಯ ಹಿರಿಯಕ್ಕ ಡೋಲಿಯಲ್ಲಿ ಬಂದರೆ ನನ್ನ ಹೆಂಡತಿ, ಅವಳ ಇನ್ನೊಬ್ಬ ಅಕ್ಕ, ಭಾವ ಮತ್ತು ಅಕ್ಕಂದಿರ ಇಬ್ಬರು ಮಕ್ಕಳು ಕಾಲ್ನಡಿಗೆಯಲ್ಲಿ ಕ್ರಮಿಸಲು ನಿರ್ಧರಿಸಿ ನಡೆಯತೊಡಗಿದರು.
ಮೊದಲೆರಡು ಕಿಲೋಮೀಟರ್ ಉದ್ದಕ್ಕೂ ರಸ್ತೆಯ ಇಕ್ಕೆಲದಲ್ಲೂ ಬಗೆಬಗೆಯ ಅಂಗಡಿಗಳು, ನಂತರವೂ ಅಲ್ಲೊಂದು ಇಲ್ಲೊಂದು ಅಂಗಡಿಗಳು, ಬೆಟ್ಟವನ್ನೇರುವವರು, ಬೆಟ್ಟದಿಂದಿಳಿಯುವವರು, ಡೋಲು ಬಾರಿಸುತ್ತ ಜನರನ್ನು ಹುರಿದುಂಬಿಸುವವರು, “ಜೈ ಮಾತಾ ದೀ” ಎಂಬ ಉದ್ಘೋಷಗಳು, ಮುದುಕರು, ತದುಕರು, ಮಕ್ಕಳು, ನವದಂಪತಿಗಳು,ಬಸವಳಿದಿದ್ದರೂ ಕೋಲೂರುತ್ತ, ಮೊಳಕಾಲ ಮೇಲೆ ಆಗಾಗ ಅಂಗೈ ಇಟ್ಟುಕೊಂಡು ಹೆಜ್ಜೆ ಕೀಳುತ್ತ ನಡೆಯುತ್ತಿದ್ದವರು ಹೀಗೆ ಥರಾವರಿ ದೃಶ್ಯಗಳನ್ನೂ, ಸಾವಿರಾರು ಕುದುರೆಗಳು ಹಾಕಿದ್ದ ಒಣಗಿ ನವಿರು ಪುಡಿಯಾದ ಲದ್ದಿಯನ್ನು ನೀಳ ಹಿಡಿಕೆಯ ಪೊರಕೆಯೊಂದರಿಂದ ಬಳಿದು ಬದಿಗೆ ಸರಿಸುತ್ತಿದ್ದ ಹೆಂಗಳೆಯರನ್ನೂ, ಕೆಳಗಿಳಿಯುವವರನ್ನು ಮೇಲೆರುವವರೂ ಮೇಲೇರುವವರನ್ನು ಕೆಳಗಿಳಿಯುವವರೂ ಶೂನ್ಯ ನೋಟದಿಂದ ನೋಡುತ್ತಿದ್ದುದನ್ನೂ ಅಂಥದೇ ಶೂನ್ಯ ನೋಟದಿಂದಲೋ, ಕುತೂಹಲದಿಂದಲೋ ಆಸಕ್ತಿಯಿಂದಲೋ ನೋಡುತ್ತ, ಚಲಿಸುವ ಕುದುರೆಯ ಮೇಲಿಂದಲೇ ಕೆಳಗಿನ ಪ್ರಪಾತದ ಅಥವಾ ಮೇಲಿನ ಬೆಟ್ಟದ ಫೋಟೋ ತೆಗೆಯುತ್ತ ಹೊರಟಿದ್ದೆ ನಾನು.

ನಾನು ಕುಳಿತ ಕುದುರೆಯವನ ಜೊತೆಗಾರನೊಬ್ಬನ ಕುದುರೆಯ ಮೇಲೆ ಒಂದು ಸ್ವಲ್ಪ ಧಡೂತಿ ಎನ್ನಬಹುದಾದ ತರುಣಿಯೊಬ್ಬಳು ಕುಳಿತು ನನ್ನ ಹಿಂದೆ ಹಿಂದೆಯೇ ಬರುತ್ತಿದ್ದಳು. ಅವಳ ತಂದೆ ತಾಯಿ ಅವಳನ್ನು ಕುದುರೆಯ ಮೇಲೆ ಹತ್ತಿಸಿ ಕುದುರೆಯವನಿಗೆ ಹತ್ತಾರು ಜಾಗರೂಕತೆಯ ಮನವಿ ಸಲ್ಲಿಸಿ, ಸಲಹೆ ಕೊಟ್ಟು “ಬೋತಲ್ ಕೀ ಪಾನಿ ಪೀಲೇನಾ ಬಿಟಿಯಾ” ಎಂದೆಲ್ಲಾ ತಮ್ಮ ಮಗಳಿಗೂ ಹಲವಾರು ಸಲಹೆಗಳನ್ನು ಕೊಟ್ಟು ಬೀಳ್ಕೊಟ್ಟು ತಾವು ಕಾಲ್ನಡಿಗೆಯಲ್ಲಿ ಬರುತ್ತಿದ್ದರು.ಆ “ಬಿಟಿಯಾ” ತಾನೇರಿದ ಕುದುರೆ ಕೊಂಚ ಮಾತ್ರ ವಾಲಿದರೂ ಪ್ರಪಾತದತ್ತ ಇದ್ದ ದಂಡೆಗೆ ಒಂದಿಂಚು ಸರಿದರೂ ತಾನು ಇನ್ನೇನು ಕೆಳಗೆ ಬಿದ್ದು ಸತ್ತೇ ಬಿಟ್ಟಳು ಎಂಬಂತೆ ಚೀರುತ್ತ “ಬಗಲ್ ಮೇ ಹೀ ರಹನಾ ಭಯ್ಯಾ, ಥೋಡಾ ಆಹಿಸ್ತಾ ಚಲಾನಾ ಭಾಯಿಸಾಬ್” ಎಂದೆಲ್ಲಾ ವಿನಂತಿಸಿಕೊಳ್ಳುತ್ತಿದ್ದುದು ನನಗೆ ಕೇಳಿಸುತ್ತಿತ್ತು. ಮಾರ್ಗಮಧ್ಯೆ ಅವಳು ಕುಳಿತ ಕುದುರೆಗೆ ಅವಳು ಸ್ವಲ್ಪ ಭಾರ ಎನಿಸುತ್ತಿರುವದಾಗಿಯೂ ನಾನು ಆಕೆ ಕುಳಿತಿದ್ದ ಕುದುರೆ ಏರಬೇಕೆಂದೂ ಅವಳು ಅದುವರೆಗೆ ನಾನೇರಿದ್ದ ಕುದುರೆಯನ್ನೇರುವಳೆಂದೂ ಪಂಜಾಬ್ ಸಿಂಗ್ ಹೇಳಿ ಕೈಯ್ಯಾಸರೆ ಕೊಟ್ಟು ನನ್ನನ್ನು ಕೆಳಗಿಳಿಸಿದ. ಅವನ ಜೊತೆಗಾರ, ತರುಣ ಪ್ರಾಯದ ಹುಡುಗ ಆ ಕನ್ಯೆಯ ಬಂಧುರವಾದ ಸೊಂಟಕ್ಕೆ ಕೈ ಹಾಕಿ ಪ್ರೀತಿಯಿಂದ ಅವಳನ್ನು ಕೆಳಗಿಳಿಸಿದ. ಕುದುರೆಯವರಿಬ್ಬರೂ ಸ್ವಲ್ಪ ವಿಶ್ರಮಿಸೋಣ ಎಂದರು. ನಾನು ಆ ಹುಡುಗಿ ಒಂದು ಮರದಡಿ ಕುಳಿತು ಮಾತನಾಡತೊಡಗಿದೆವು. ಅವಳು ವಾರಣಾಸಿಯವಳು. ಅವಳು ನಾಲ್ಕನೆಯ ಕ್ಲಾಸಿನಲ್ಲಿದ್ದಾಗ ಅವಳಿಗೆ ಹೃದಯದ ತೊಂದರೆ ಕಾಣಿಸಿಕೊಂಡಿತ್ತಂತೆ. ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಿದ್ದರಂತೆ. ಆಗ ಹೊತ್ತ ಹರಕೆಯನ್ನು ತೀರಿಸಲು ತಂದೆ ತಾಯಿ ಅವಳನ್ನು ಕರೆದುಕೊಂಡು ಬಂದಿದ್ದರು. ಕುದುರೆ ಸವಾರಿಯಲ್ಲಿ ತನಗೆ ಆಗುತ್ತಿದ್ದ ಗಾಬರಿಯ ಕುರಿತು ಆ ಹುಡುಗಿ ನನ್ನೊಂದಿಗೆ ಹೇಳಿಕೊಳ್ಳುವಾಗ ಸುಂದರಿಯಲ್ಲದಿದ್ದರೂ ಆಕೆ ಮುದ್ದಾಗಿ ಕಂಡಳು.
ನಾನು ಕುಳಿತ ಕುದುರೆ ಬೆಟ್ಟವೇರಿಯೇ ಏರಿತು. ಒಂದು ತಾಸು, ಎರಡು ತಾಸು, ಮೂರು ತಾಸು ಆಗುತ್ತ ಬಂದರೂ ವೈಷ್ಣೋದೇವಿಯ ದೇಗುಲದ ಸುಳಿವೇ ಇಲ್ಲ. ಕೊನೆಗೂ ರಾತ್ರಿ ಎಂಟೂ ವರೆ ಗಂಟೆಗೆ ವೈಷ್ಣೋದೇವಿ ದೇಗುಲದ ಬಳಿ ಹೋದ ನಾನು ಹಿಂದೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ನನ್ನ ಹೆಂಡತಿಯ ಕುರಿತು ಚಿಂತಿಸತೊಡಗಿದೆ. ಮೊದಲೇ ಮರುದಿನ ಬೆಳಿಗ್ಗೆ ಆರೂ ವರೆಗೆ ಇದ್ದ ಫ್ಲೈಟ್ ಹಿಡಿಯಬೇಕು, ಅಂದರೆ ಏರ್ ಪೋರ್ಟಿನಲ್ಲಿ ಐದು ಗಂಟೆಗೆಲ್ಲ ಇರಬೇಕು ಅಂದರೆ ಮೂರುವರೆ ಗಂಟೆಗೆಲ್ಲ ಸ್ನಾನ ಮಾಡಿ ರೆಡಿ ಇರಬೇಕು ಎಂಬ ಧಾವಂತದಲ್ಲಿ ಬೆಂಗಳೂರಿನಲ್ಲಿ ಹಿಂದಿನ ರಾತ್ರಿ ಒಂದೆರಡು ತಾಸು ಮಾತ್ರ ನಿದ್ರಿಸಿದ್ದ ಅವಳು ಬೆಂಗಳೂರಿನಿಂದ ದಿಲ್ಲಿ, ದಿಲ್ಲಿಯಿಂದ ಜಮ್ಮು ವರೆಗೆ ಪ್ರಯಾಣಿಸಿದ ದಣಿವು, ಸರಿಯಾಗಿ ಊಟ ತಿಂಡಿ ಕೂಡ ತಿಂದಿರದೇ ಇದ್ದ ಸ್ಥಿತಿ ಎಲ್ಲ ಸೇರಿ ಸಂಜೆ ಕಾಲ್ನಡಿಗೆಯ ಯಾತ್ರೆ ಕೈಗೊಳ್ಳುವ ಮುನ್ನ ಅಸ್ವಸ್ಥಳಂತೆ ಬೇರೆ ಕಂಡಿದ್ದಳು.ಪ್ರಿಪೇಡ್ ಸಿಮ್ ಜಮ್ಮು ಕಾಶ್ಮೀರ ರಾಜ್ಯದಲ್ಲಿ ನಡೆಯುವದಿಲ್ಲ, ನನ್ನ ಅಥವಾ ಅವಳ ಫೋನಿಗೆ ಪೋಸ್ಟ್ ಪೇಡ್ ಸಿಮ್ ಇಲ್ಲ, ಪೋಸ್ಟ್ ಪೇಡ್ ಸಿಮ್ ಇದ್ದ ಫೋನ್ ಹೊಂದಿದ್ದ ಅವಳ ಅಕ್ಕನ ಮಗಳಿಗೆ ಒಂದು ಪಬ್ಲಿಕ್ ಬೂಥ್ ನಿಂದ ಫೋನ್ ಮಾಡಿದರೆ ಅವಳು ತನ್ನ ಮಮ್ಮೀ ಮತ್ತು ಶಾಂತೀ ಆಂಟೀ (ಅಂದರೆ ನನ್ನ ಹೆಂಡತಿ) ಮಾರ್ಗಮಧ್ಯೆ ಎಲ್ಲೋ ತಮ್ಮಿಂದ ಬೇರ್ಪಟ್ಟಿರುವದಾಗಿಯೂ ಅವರಿಗಾಗಿ ಕಾದು ಎಲ್ಲರೂ ಸೇರಿಯೇ ನಾನಿರುವಲ್ಲಿಗೆ ಬರುವದಾಗಿಯೂ ಹೇಳಿದಳು. ಕೊನೆಗೂ ಅವರೆಲ್ಲ ರಾತ್ರಿ ಹತ್ತೂವರೆ ಸುಮಾರಿಗೆ ಬಂದರು.
ಹಲವು ಸ್ತರಗಳ ಭದ್ರತಾ ತಪಾಸಣೆ, ಪಾದರಕ್ಷೆಗಳನ್ನು ಒಂದೆಡೆ ಇರಿಸಿ ಟೋಕನ್ ಪಡೆಯುವದು ಎಲ್ಲ ಮುಗಿದು ಪ್ರಾಚೀನ ಗುಹೆಯಲ್ಲಿನ ದೇವಿ ದರ್ಶನ ಮುಗಿಸಿಕೊಂಡಾಗ ರಾತ್ರಿ ಒಂದು ಗಂಟೆಯಾಗಿತ್ತು. ಆಮೇಲೆ ಹನ್ನೆರಡು ಕಿಲೋಮೀಟರುಗಳ ಅಂತರವನ್ನು ಮತ್ತೆ ನಡೆದು ಕ್ರಮಿಸುವ ತ್ರಾಣ ಅವರಲ್ಲಿ ಯಾರಲ್ಲೂ ಉಳಿದಿರಲಿಲ್ಲ. ಎಲ್ಲರೂ ಕುದುರೆಗಳನ್ನೇರಿ ಮರಳಿ ಕೆಳಗೆ ಬರುವ ಹೊತ್ತಿಗೆ ಬೆಳಗಿನ ನಾಲ್ಕೂವರೆ ಗಂಟೆಯಾಗಿತ್ತು. ಅಂಥ ಅಪರಾತ್ರಿಯಲ್ಲೂ ಕುದುರೆಗಳನ್ನೇರಿ ಅಥವಾ ಕಾಲ್ನಡಿಗೆಯಿಂದ ಬೆಟ್ಟದತ್ತ ಸಾಗುತ್ತಿದ್ದ ನೂರಾರು ಜನ ದಾರಿಯುದ್ದಕ್ಕೂ..! ಓಟದ ನಡಿಗೆಯಲ್ಲಿ ಇಳಿದು ಬರುವ ಕುದುರೆ ತೀವ್ರವಾಗಿ ಇಳಿಜಾರಾಗಿದ್ದ ದಾರಿಯಲ್ಲಿ ಹೇರ್ ಪಿನ್ ನಂತಿದ್ದ ತಿರುವುಗಳಲ್ಲಿ ಹೊರಳುವಾಗ ತಡೆಗೋಡೆಗಳಿಲ್ಲದ ಕಡೆ ಪ್ರಪಾತದ ದಂಡೆಗೆ ಹೋದಂತೆನಿಸಿ ನನಗೆ ಭಯವಾಗುತ್ತಿತ್ತು. ಹೋಗುವಾಗ ಪಂಜಾಬ್ ಸಿಂಗ್ ನ ಕುದುರೆಯ ಬೆನ್ನ ಮೇಲಿದ್ದ ಆಸನ ಮೆತ್ತಗಿತ್ತು. ಬರುವಾಗ ತೀವೃ ಇಳಿಜಾರಿನಲ್ಲಿ ಬೇರೊಬ್ಬ ಕುದುರೆಯವ ಅದೇನೋ ಖಟಕ್ ಎಂಬಂಥದೊಂದು ಶಬ್ದ ಉಚ್ಚರಿಸುತ್ತಿದ್ದಂತೆಯೇ ಕುದುರೆ ತನ್ನ ಮೇಲೆ ಕುಳಿತ ನಾನು ಎದ್ದೆದ್ದು ಕುಕ್ಕರಿಸುವಂತೆ ಘಲ್ ಘಲ್ ಕುಣಿಯುತ್ತ ನಡೆಯುತ್ತಿತ್ತು.ಆ ಆಸನಕ್ಕೆ ಹಾಕಿದ್ದ ಹಸಿಗೆಯೂ ಒರಟಾಗಿತ್ತು.ಈ ಯಾತ್ರೆ ಮುಗಿದು ನಾನು ಯಾವಾಗ ಬೇಸ್ ಕ್ಯಾಂಪ್ ತಲುಪುವೆನೋ ಎಂಬಂತಾಗಿತ್ತು ನನಗೆ. ಅಲ್ಲಿ ತಲುಪುವ ವೇಳೆಗೆ ಆರು ತಾಸುಗಳಿಗೆ ಮಿಕ್ಕಿದ ಅವಧಿಯ ಕುದುರೆ ಸವಾರಿಯ ಪರಿಣಾಮವಾಗಿ ನನ್ನ ಅಂಡು ನೋಯತೊಡಗಿತ್ತು.

ವೈಷ್ಣೋದೇವಿಯ ಹೆಸರನ್ನು ನಾನು ಕೇಳಿದ್ದೆ. ೧೯೮೦ರ ದಶಕದಲ್ಲಿ ದೆಹಲಿಯಲ್ಲಿ ಇದ್ದ ವರ್ಷಗಳಲ್ಲಿ ಟ್ರಾನ್ಸ್ ಪೋರ್ಟ್ ವಾಹನಗಳ ಮೇಲೆ, ಬಸ್ ಡ್ರೈವರುಗಳು ಕೂಡ್ರುವ ಸ್ಥಳದಲ್ಲಿ ” ಜೈ ಮಾತಾ ದೀ” ಎಂಬ ಬರವಣಿಗೆಯ ಫಲಕಗಳನ್ನು
ನೋಡುತ್ತಿದ್ದೆ. ನಮ್ಮ ಮಾಜಿ ಮುಖ್ಯಮಂತ್ರಿ ಶ್ರೀಮಾನ್ ಯಡಿಯೂರಪ್ಪನವರನ್ನು ಅವರ ಮೇಲಿದ್ದ ಭ್ರಷ್ಟಾಚಾರದ ಅಪಾದನೆಗಳ ಕುರಿತು ಮುಜುಗರಕ್ಕೊಳಗಾಗಿ ಕೊನೆಗೊಮ್ಮೆ ಅವರ ಪಕ್ಷದ ಹೈಕಮಾಂಡ್ ನವರು ದೆಹಲಿಗೆ ಕರೆಸಿಕೊಂಡು ಅವರಿಂದ ರಾಜೀನಾಮೆ ಪತ್ರ ಪಡೆದುಕೊಳ್ಳುವ ಸನ್ನಾಹದಲ್ಲಿದ್ದಾಗ ತಮ್ಮ ನಿಗೂಢ ನಡೆಗಳಿಗಾಗಿ ಕರ್ನಾಟಕದಲ್ಲಿ ಜಗತ್ಪ್ರಸಿದ್ಧರಾಗಿದ್ದ ಅವರು ಅಲ್ಲಿದ್ದಾರೆ ಇಲ್ಲಿದ್ದಾರೆ ಎನ್ನುವಷ್ಟರಲ್ಲಿ ಗುಳಕ್ಕನೇ ಕಾಣೆಯಾಗಿ ವೈಷ್ಣೋದೇವಿಗೆ ತೆರೆಳಿದ್ದರು. ವೈಷ್ಣೋದೇವಿಗೆ ಭಾರತದಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಪ್ರಮಾಣದ ಭಕ್ತವೃಂದವಿದೆ ಎಂಬುದು ಗೊತ್ತಿರಲಿಲ್ಲ. ಆಯಾಸವೋ, ಬಳಲಿಕೆಯೋ, ಖರ್ಚುವೆಚ್ಚಗಳೋ, ನಿದ್ದೆ ನೀರಡಿಕೆಗಳೋ, ಹಸಿವು, ಅನಾರೋಗ್ಯಗಳೋ.., ಜನ ಎಲ್ಲವನ್ನೂ ಸಹಿಸುತ್ತ ಉಸಿರು ಬಿಗಿ ಹಿಡಿದು , ಹಟಕ್ಕೆ ಬಿದ್ದವರಂತೆ ಇನ್ನೂ ಮರೀಚಿಕೆಯಂತೆ ಮುಂದೆಲ್ಲೋ ಇರುವ ದೇವಿ ಸನ್ನಿಧಿಯನ್ನು ತಲುಪುವದನ್ನೇ ಏಕೈಕ ಲಕ್ಷ್ಯವಾಗಿಸಿಕೊಂಡು ಆ ನಟ್ಟಿರುಳಿನಲ್ಲೂ, ಮೂರನೆಯ ಪ್ರಹರದ ಕತ್ತಲೆಯಲ್ಲೂ ನಡೆಯುತ್ತಿದ್ದುದನ್ನೂ ನೋಡುತ್ತಿದ್ದ ನಾನು ಆ ನಡೆಗಳ ಹಿಂದಿನ ಚಾಲಕ ಶಕ್ತಿ ಯಾವುದು ಎಂದು ಯೋಚಿಸುತ್ತಿದ್ದೆ. ನಂಬಿಕೆಯೇ? ಶ್ರದ್ಧೆಯೇ? ಕಷ್ಟ ಕಾರ್ಪಣ್ಯಗಳೇ,ಹರಕೆ ಹಾರೈಕೆಗಳೇ?
ಅದಕ್ಕಿಂತ ಹೆಚ್ಚಾಗಿ ಭಕ್ತಿ, ಶ್ರದ್ಧೆ, ನಂಬಿಕೆಗಳೇ ಇಲ್ಲದಿದ್ದಲ್ಲಿ ಜನರ ಸ್ಥಿತಿ ಏನಾಗಿರುತ್ತಿತ್ತು ಎಂದೂ ಯೋಚಿಸುತ್ತಿದ್ದೆ.
 

‍ಲೇಖಕರು avadhi

July 31, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. sunil rao

    Ella vaara nimma writeup odiddene….this is most thrilling for me…
    Nimage nenapiranahudu 1974li banda vaishnodevi chitra idee box office looti maadittu mattu ashtu khyaati illada aa devate, innoo kotyaantara bhaktarannu sampaadisiddalu.

    ಪ್ರತಿಕ್ರಿಯೆ
  2. ಶಮ, ನಂದಿಬೆಟ್ಟ

    ರುಚಿಗೆ ತಕ್ಕಷ್ಟು ಹಾಸ್ಯ,ನವಿರು ನಿರೂಪಣೆ, ಭಾವ ಬುಧ್ಧಿ ಎರಡನ್ನೂ ತಾಕಿತು ಸರ್.. ಮುಂದಿನ ಕಂತು ಎಂದು ?

    ಪ್ರತಿಕ್ರಿಯೆ
  3. sharadhi

    ಅಂತೂ ಬೀವಿಯ ನೆವದಲ್ಲಿ ದೇವಿಯರ (!) ದರ್ಶನ ಆಯಿತು! 😉 . ಆಸ್ತಿಕವೋ ನಾಸ್ತಿಕವೋ ಅಮುಖ್ಯ!!

    ಪ್ರತಿಕ್ರಿಯೆ
  4. Parameshwara.K

    ನವಿರು ನಿರೂಪಣೆ. ವೈಷ್ಣೋದೇವಿಯ ಯಾತ್ರೆಗೆ ಹೋಗಿ ಬಂದಂತೆಯೇ ಆಯಿತು ಗುರುಗಳೆ….ಥ್ಯಾಂಕ್ಯು ಇಂತಹ ಸುಂದರ ಬರಹಕ್ಕೆ.

    ಪ್ರತಿಕ್ರಿಯೆ
  5. ವಿಶ್ವಾರಾಧ್ಯ ಸತ್ಯಂಪೇಟೆ

    ಶ್ರೀ ಆಶೋಕ ಶೆಟ್ಟರ ಅವರಿಗೆ
    ನಾನೂ ಒಂದು ಸಲ ವೈಷ್ಣವಿ ದೇವಿಗೆ ಹೋಗಿ ಬಂದಿದ್ದೆ. ಇದೆಲ್ಲ ಮತ್ತೆ ಮತ್ತೆ ನೆನಪಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: