ಅಶೋಕ ತಾರದಾಳೆ ಕಂಡ ‘ಸಮುದ್ರ’

ಅಶೋಕ ತಾರದಾಳೆ

**

ಸಮುದ್ರ ತೀರದಲ್ಲಿ ಬರೀ ಮೌನ. ಅಲೆಗಳ ಸಂಗೀತವೊಂದನ್ನು ಬಿಟ್ಟು. ಈ ಅಲೆಗಳಿಗೆ ಆಯಾಸವೇ ಆಗುವುದಿಲ್ಲವೆ? ಅದ್ಯಾವ ಬರದಿಂದ ಓಡಿಬರುತ್ತವೆಯೋ ಈ ದಡಕ್ಕೆ. ಎಷ್ಟೋ ಸಾವಿರ ವರ್ಷಗಳಿಂದ ಹೀಗೆ ದಡಕ್ಕೆ ಬಡಿಯುತ್ತಲೇ ಇವೆ. ದಡಕ್ಕೆ ಬಡಿದು ಬಡಿದು ಭೂಮಿಯನ್ನು ಚೂರೇ ಚೂರಾಗಿ ಆಕ್ರಮಿಸುತ್ತ ಇನ್ನೊಂದು ತೀರ ಸೇರುವ ಆಸೆಯೇನೋ. ಎಲ್ಲ ದಡಗಳಲ್ಲೂ ಇದೇ ಪ್ರಯತ್ನ ನಡೆಯುತ್ತಿದೆ‌. ಒಂದು ದಿನ ಈ ಭೂಮಿ ಮುಳುಗಿ ಎಲ್ಲ ಸಮುದ್ರಗಳು ಒಗ್ಗೂಡಿದಾಗ ಅಲೆಗಳು ನಿಲ್ಲುತ್ತವೇನೋ. ಆಗ ಬಡಿಯಲು ದಡವೇ ಇರುವುದಿಲ್ಲವಲ್ಲ. ಆಗ ಏನಿದ್ದರೂ ಸಮುದ್ರದೊಳಗೆನೇ ಏರಿಳಿತ ಆಗಬೇಕು. ಎಷ್ಟೇ ಏರಿಳಿತ ಆದರೂ ಅವು ಮುಳುಗಿಸಬೇಕಾಗಿರುವುದು ಏನು?

ಆಗಾಗ ಹೀಗೆ ಎನಿಸುತ್ತದೆ, ಸಾವಿರ ನದಿಗಳು ಸೇರಿ ಆಗುವ ಸಮುದ್ರದಲ್ಲಿ ಇಂತಹ ಅಶಾಂತಿ ಅನಿವಾರ್ಯವೇನೋ ಎಂದು. ಬೇರೆ ಬೇರೆ ದಿಕ್ಕುಗಳಲ್ಲಿ ಹರಿದು ಒಂದು ಜಾಗ ಸೇರುವ ನದಿಗಳಿಗೆ ತಮ್ಮ ಅಸ್ತಿತ್ವ ಕಳೆದುಹೋಗುತ್ತಿರುವ ಭಯವೇನೋ. ಹೀಗೆ ತಮ್ಮ ಅಸ್ತಿತ್ವ ಹುಡುಕುವ ನೆಪದಲ್ಲಿ ದಡಗಳಿಗೆ ಓಡಿ ಬರುತ್ತವೇನೋ. ಕೆಲ ಕ್ಷಣಗಳ ಕಾಲ ದಡಕ್ಕೆ ಬಡಿದು, ಒಂದೆರಡು ಹೆಜ್ಜೆ ಮುಂದೆ ಹೋಗಿ ತಮ್ಮ ಅಸ್ತಿತ್ವ ಸಾಬೀತು ಮಾಡುತ್ತಲೇ ಇರುತ್ತವೆ. ಬಹುಶಃ ನಮ್ಮ ಸಮಾಜದಲ್ಲಿ ಇರುವಂತೆ ಸಮುದ್ರದಲ್ಲಿ ಕಾಲೆಳೆಯುವವರು ಇದ್ದಾರೇನೋ? ದಡ ಮುಟ್ಟುವುದೇ ತಡ ಎಳೆದು ಬಿಡುತ್ತಾರೆ. ನದಿಯ‌‌ ಹೋರಾಟ ನಿಜವೂ ಆದರೂ, ನದಿಗೆ ನಿನ್ಯಾರು ಅಂತ ಕೇಳಿದರೆ ಅದು ಹೇಳಬಲ್ಲುದೆ? ನದಿಯೆಂದರೆ ನೀರಾ? ಹರಿದುಬಂದ ದಾರಿಯಾ? ಮೂಲವಾ? ತೊಳೆದ ಪಾಪವಾ?

ಒಮ್ಮೊಮ್ಮೆ ಹೀಗೂ ಎನಿಸುತ್ತದೆ, ಸಮುದ್ರ ಎನ್ನುವುದು ನಮ್ಮ ಮತ್ತು ನಮ್ಮ ಸಮಾಜದ ಪ್ರತಿಬಿಂಬ ಅಂತ. ಒಂದೇ ರೀತಿಯ ಬೇರೆ ಬೇರೆ ಗರ್ಭಗಳಲ್ಲಿ ನಮ್ಮದೇ ರೀತಿಯಲ್ಲಿ ಬೆಳೆದ ನಾವು, ಒಂಬತ್ತು ತಿಂಗಳಾದ ಮೇಲೆ ಈ ಸಮಾಜವೇನ್ನೋ ಸಮುದ್ರಕ್ಕೆ ಸೇರಿ ಬಿಡುತ್ತೇವೆ. ಹುಟ್ಟಿದ ಕ್ಷಣದಿಂದ ನಮ್ಮ ಅಸ್ತಿತ್ವದ ಹೋರಾಟ ಶುರುವಾಗುತ್ತದೆ. ಮೊದಲು ಗಂಡು ಹೆಣ್ಣಿಗೆ ಮೀಸಲಾದ ಅದು ದೊಡ್ಡವರಾಗುತ್ತ ಬಹಳ ಸಂಕೀರ್ಣ ವಿಷಯಗಳಿಗೆ ತೆರೆದುಕೊಳ್ಳುತ್ತದೆ. ನಾವೆಷ್ಟೇ ಪ್ರತಿಭಟಿಸಿದರೂ ಸಮಾಜದ ದಡವನ್ನು ಮೀರಿ ಹೋಗಲಾಗುವುದೇ ಇಲ್ಲ. ಸಮುದ್ರದಂತೆ ಸಮಾಜವೂ ಕೂಡ ನಮ್ಮನ್ನು ನಮ್ಮ ಆಶೆಗಳಿಗೆ ವಿರುದ್ಧವಾಗಿ ಒಂದು ಕಡೆ ಹಿಡಿದಿಟ್ಟಂತೆ ಭಾಸವಾಗುತ್ತದೆ. ನಾವು ಅಂದುಕೊಂಡ ಅಸ್ತಿತ್ವಕ್ಕೂ ಸಮಾಜ ನಮಗೆ ಕೊಟ್ಟ ಅಸ್ತಿತ್ವಕ್ಕೂ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ನಾವೇ ಸಮಾಜದ ಭಾಗವಾಗಿರುವಾಗ ಅದು ಒಂದು ರೀತಿಯಲ್ಲಿ ನಮ್ಮೊಳಗಿನ ತಿಕ್ಕಾಟವೂ ಹೌದು.

Seamless abstract hand-drawn pattern, waves background. Vector illustration

ಸಮುದ್ರ ದಡದಲ್ಲಿ ಕೂತಾಗ ಅದರ ತಿಕ್ಕಾಟಗಳು ಮತ್ತು ನಮ್ಮೊಳಗಿನ ತಿಕ್ಕಾಟಗಳು ಒಂದೇ ಎನಿಸುತ್ತವೆ. ದೂರದಲ್ಲಿ ಒಂದು ಅಲೆ ಇನ್ನೊಂದು ಅಲೆಯ ಮೇಲೆ ಸವಾರಿ ಮಾಡುತ್ತ ಓಡೋಡಿ ದಡ ಸೇರಲು ಬರುತ್ತಿರುವಾಗ ನಮ್ಮೊಳಗಿನ ತಿಕ್ಕಾಟಕ್ಕೆ ಒಂದು ಕನ್ನಡಿ ಹಿಡಿದಂತೆ ಆಗುತ್ತದೆ. ಬೊಗಸೆಯಷ್ಟು ಸಮುದ್ರದ ನೀರನ್ನು ಕೈಯಲ್ಲಿ ಹಿಡಿದು ನೋಡಿದಾಗ “ನಾನು ಯಾರು?” ಎಂಬ ಗಂಭೀರ ಪ್ರಶ್ನೆಯಷ್ಟೇ ಸಂಕೀರ್ಣವಾಗಿ ಕಾಣುತ್ತದೆ ಅದು. ಅಲ್ಲಿ ಇದು ಈ ನದಿಯ ನೀರು, ಇದು ಆ ನದಿಯ ನೀರು ಅಂತ ಹೇಳಲು ಬರುವುದಿಲ್ಲ. ನಾವೂ ಹಾಗೆ ಅಲ್ಲವೇ ಸಮಾಜವೆಂಬ ಸಮುದ್ರದಲ್ಲಿ ಸಿಕ್ಕು ಬೇರೆಯ ರೂಪವನ್ನೇ ಪಡೆದುಕೊಂಡಿದ್ದೇವೆ. ನಮ್ಮನ್ನು ನಾವು ವಿಶ್ಲೇಷಿಸಿಕೊಂಡಾಗ ಯಾವುದು ಎಲ್ಲಿಂದ ಬಂತು ಅಂತ ಗೊತ್ತಾಗುವುದೇ ಇಲ್ಲ. ಒಂದು ಯೋಚನೆ ಇನ್ನೊಂದು ಯೋಚನೆಯನ್ನು ತಿರಸ್ಕರಿಸುತ್ತಲೇ ಇರುತ್ತದೆ. ಪ್ರತಿಯೊಬ್ಬರ ತಪ್ಪು ಸರಿಗಳು ಬದಲಾಗುತ್ತಲೇ ಇರುತ್ತವೆ.

ಪ್ರತಿ ಸಲ ಸಮುದ್ರದ ದಡಕ್ಕೆ ಹೋದಾಗ ಅದರ ಮುಂದೆ‌ ನನ್ನ ಅಸ್ತಿತ್ವದ ಹೋರಾಟ ಬಹಳ ಚಿಕ್ಕದು ಎನಿಸುತ್ತದೆ. ಸಾವಿರ ಅಲೆಗಳ‌ ತಿಕ್ಕಾಟ ಒಂದು ಸಂಗೀತದಂತೆ ಕೇಳಿ ವಿಚಿತ್ರ ಎನಿಸುತ್ತದೆ. ನಾವೂ ಕೂಡ ಸಮಾಜದಲ್ಲಿ ಅದಕ್ಕೆ ವೈವಿಧ್ಯತೆ ಎನ್ನುತ್ತೇವೆ ಅಲ್ಲವೆ? ವೈವಿಧ್ಯತೆಯೆನ್ನುವುದೂ ಕೂಡ ಒಂದು ತಿಕ್ಕಾಟವೇ. ನದಿಗಳ ಹಾಗೆ ನಾವು ಕೂಡ ಗೊತ್ತಿದ್ದೊ ಗೊತ್ತಿಲ್ಲದೆಯೋ ಇಷ್ಟವೋ ಕಷ್ಟವೋ ಬೆರೆತು ಬಾಳುತ್ತಿದ್ದೆವೆ. ಹುಟ್ಟಿನಿಂದ ಸಾವಿನವರೆಗೆ ನಾವು ಎಷ್ಟು ಮುಂದುವರೆದರೂ ನಾವು ಅಸ್ತಿತ್ವಕ್ಕಾಗಿ ಹೋರಾಡುತ್ತಲೇ ಇರುತ್ತೇವೆ. ವಿಪರ್ಯಾಸವೆನೆಂದರೆ ಎಷ್ಟೇ ಹೋರಾಡಿದರೂ ನಾನ್ಯಾರು ಎಂಬ ಪ್ರಶ್ನೆ ನಿಗೂಢವಾಗುತ್ತಲೇ ಹೋಗುತ್ತದೆ!

‍ಲೇಖಕರು avadhi

March 1, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: