ಗೀತಾ ಹೆಗಡೆ ಕಲ್ಮನೆ ಹೊಸ ಕವಿತೆ- ಜೀವನೋತ್ಸಾಹಕ್ಕೊಂದು ಗತ್ತು

ಗೀತಾ ಜಿ ಹೆಗಡೆ ಕಲ್ಮನೆ

**

ಮಂಜಾದ ಕನ್ನಡಕದ ಗ್ಲಾಸನ್ನು
ತಿಕ್ಕಿ ತಿಕ್ಕಿ ಒರೆಸುತ್ತೇನೆ
ಅದೇ ಹಳದಿ ಕ್ಲಾತು
ಕೇಸಲ್ಲಿ ಅವಿತುಕೊಂಡಿದ್ದು
ಅದೂ ಹಳತು.

ಹಾಂ… ಈಗ ಕ್ಲೀನಾಯಿತು ಎಂದು
ನೆಟ್ಟಗೆ ಕುಳಿತು ಕಣ್ಣಿಗೆ ಏರಿಸುತ್ತೇನೆ
ಬೆಳಗಿನ ಪೇಪರ್
ಆಚೀಚೆ ಮಗುಚಿ ಹಾಕಿ
ಕೆಲಸ ಮತ್ತೆ ಮಾಡಿದರಾಯಿತೆಂದು.

ಅರೆ ಇಸ್ಕಿ?
ಮತ್ತೆ ಮಂಜು ಮಂಜು
ಏನಾಯಿತು ಇದಕ್ಕೆ
ಕಣ್ಣನ್ನೂ ಮೆಲ್ಲಗೆ ಉಜ್ಜಿಕೊಳ್ಳುತ್ತಾ
ಸ್ಪಷ್ಟವಾಗಿ ಓದಲು ಕನ್ನಡಕ ಸರಿಮಾಡಿಕೊಳ್ಳುತ್ತೇನೆ.

ಊಹೂಂ…. ಸುತಾರಾಂ ಒಪ್ಪುತ್ತಿಲ್ಲ
ಕನ್ನಡಕವೇ ಸರಿ ಇಲ್ಲ ಎಂದು ತೀರ್ಮಾನಿಸಿ
ಗಂಟೆ ಹತ್ತಾಗುವುದನ್ನೇ ಕಾದು
ಚಪ್ಪಲಿ ಮೆಟ್ಟಿ ಹೊರಡುತ್ತೇನೆ
ಚಾಳೀಸು ಅಂಗಡಿಗೆ.

ಎಂದಿನಂತೆ ಬನ್ನಿ ಬನ್ನಿ ಆಂಟಿ
ಎಂಬ ನಗು ಸೂಸುವ ಆ ಮಂಗಳೂರಿನ ಹುಡುಗ
ನನ್ನ ಕನ್ನಡಕ ಪಡೆದು ತಾನೂ ಒರೆಸುತ್ತಾನೆ
ಹೌದಿರಬಹುದೇನೋ ಗ್ಲಾಸು ಮಂಕಾಗಿದ್ದು
ನನ್ನ ಮಾತು ನಂಬಿ.

ಒಳಗಿನಿಂದ ಕರೆಯುತ್ತಾನೆ
ಬನ್ನಿ ಆಂಟಿ ನಿಮ್ಮ ಕಣ್ಣು ಚೆಕ್ ಮಾಡುವಾ
ನನ್ನ ಕಣ್ಣಿಗೆ ಎಂತಾ ಆಗಿದ್ದು ಮಣ್ಣು
ಎಂದಲವತ್ತುಕೊಂಡು ನನ್ನ ಕಣ್ಣು ಸರಿಯಾಗಿಯೇ ಇದೆ
ಎಂದು ಹೇಳುತ್ತ ಅವನು ತೋರಿಸಿದ
ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ.

ಕಣ್ಣಿಗೆ ಒಂದು ಸ್ಟೀಲ್ ಫ್ರೇಮ್ ಹಾಕಿ
ಒಂದೊಂದೇ ಬಿರಡಿ ಗ್ಲಾಸ್ ಹಾಕುತ್ತಾ
ದೂರದಲ್ಲಿ ಇರುವ ಎಬಿಸಿಡಿ ಓದಲು ಹೇಳುತ್ತಾನೆ
ಅಲ್ಲೂ ಆಗಾಗ ಮಂಜು ಈ ಗ್ಲಾಸೇ ಸರಿ ಇಲ್ಲ
ನನಗೆ ನನ್ನ ಕನ್ನಡಕವೇ ಸಾಕು ಸರಿ ಮಾಡಿ ಅಂದೆ.

ಅವನು ಆಯಿತು ಆಯಿತು ಎಂದು ಮಾಮಾ ಮಾಡಿ
ಈಗ ಓದಿ ಈಗ ಓದಿ ಎಂದು ಬಿರಡಿ ಬದಲಾಯಿಸುತ್ತಾ
ಸ್ವಲ್ಪ ಹೊತ್ತು ಹೊರಗೆ ಕೂತಿರಿ ಅಂದಿದ್ದು
ನನಗೋ ಒಳಗೊಳಗೆ ಖುಷಿಯೋ ಖುಷಿ;
ಏಕೆಂದರೆ ನನ್ನ ಕನ್ನಡಕವನ್ನೇ ಕೊಡುತ್ತೇನೆ ಅಂದಿದ್ದು.

ಕೈಯಲ್ಲಿ ಇರುವ ಮೊಬೈಲಾಗಲಿ
ಅಲ್ಲಿರುವ ಪೇಪರ್ ಆಗಲಿ ಕನ್ನಡಕವಿಲ್ಲದೇ
ಓದಲಾಗದ ನಾನು ಗದ್ದಕ್ಕೆ ಕೈಕೊಟ್ಟು ಕೂತಿದ್ದೆ
ಗ್ಲಾಸಿನ ತುಂಬಾ ತರಾವರಿ ಕನ್ನಡಕ ನೋಡುತ್ತ
ಟೇಬಲ್ ಮೇಲಿನ ಮಿರರ್ ನಲ್ಲಿ ಆಗಾಗ ಮುಖ ನೋಡಿಕೊಳ್ಳುತ್ತ.

ನೋಡಿ ಆಂಟಿ ಈಗ ಹಾಕಿಕೊಂಡು ಹೇಳಿ…
ವಾವ್! ನನ್ನ ಕನ್ನಡಕ ಸ್ಪಷ್ಟವಾಗಿ ಕಾಣುತ್ತಿದೆ
ಥ್ಯಾಂಕ್ಯೂ ಕಣೋ ಬರ್ಲಾ ಎಂದು ಹೊರಡುವಾಗ
ಅವನಂದ ಆಂಟಿ ಏಜಾಗುತ್ತಿದ್ದಂತೆ
ಹೀಗೆ ನಂಬರ್ ಬದಲಾವಣೆ ಆಗುತ್ತಿರುತ್ತದೆ
ಪೇ ಮಾಡಿ ಎಂದು ಬಿಲ್ಲು ಕೊಟ್ಟ.

‘ಏಜಾಗುತ್ತ’ಅಂದಿದ್ದು ಕೇಳಿ
ತಲೆ ಮೇಲೆ ಕೈ ಆಡಿಸುತ್ತಾ ಮತ್ತೆ ಮಿರರ್ ನೋಡಿಕೊಂಡು
ಡೈ ಮಾಡಿಕೊಂಡಿದ್ದು ಸರಿಯಾಗಿಯೇ ಇದೆ
ಹಾಕಿದ ಸಲ್ವಾರ್ ಬುಜದ ಮೇಲಿನಿಂದ ಇಳಿಬಿಟ್ಟ ವೇಲ್
ಸರಿಯಾಗಿಯೇ ಇದೆ ಮತ್ತೆ ಏಜ್ ಅಂದನಲ್ಲಾ!

ದುಮು ದುಮು ಅಂತ ಸೆಟಗೊಂಡು ಮನೆಗೆ ಬಂದು
ಮತ್ತೆ ನಿಲುವುಗನ್ನಡಿಯಲ್ಲಿ ನಖಶಿಖಾಂತ ನೋಡಿಕೊಂಡೆ
‘ಮಂಕೆ ನೀನೇನು ಶೃಂಗಾರ ಮಾಡಿಕೊಂಡರೂ
ವಯಸ್ಸನ್ನು ಮುಚ್ಚಿಡಲು ಸಾಧ್ಯವೇನೆ?
ಆರೋಗ್ಯವೇ ತೋರಿಸುತ್ತದೆ ಇನ್ನಾದರೂ ಒಪ್ಪಿಕೊ
ನಿನಗೆ ವಯಸ್ಸಾಯಿತೆಂದು’

ಬುದ್ಧಿ ಅಣಕಿಸುತ್ತ ಕಿಸಕ್ ಎಂದ ಈ ಮಾತು
ಕೂತಲ್ಲಿ ನಿಂತಲ್ಲಿ ಕೊರೆಯಲು ಶುರುವಾಯಿತು
ಮನಸ್ಸೆಲ್ಲಾ ಅಲ್ಲೋಲ ಕಲ್ಲೋಲ
ವಯಸ್ಸಾಯಿತೆಂದು ಒಪ್ಪಿಕೊಳ್ಳುವು ಎಷ್ಟು ಕಷ್ಟ
ಸುಳ್ಳೆಪಳ್ಳೆ ಆದರೂ ಸರಿ ನಾನಿನ್ನೂ ಯಂಗ್ ಅಂದುಕೊಳ್ಳುವುದೇ ಖುಷಿ.

ಆದರೆ ಅದೇನೋ ಹಲವರು ಸಮರ್ಥಿಸಿಕೊಳ್ಳುತ್ತಾರೆ;
‘ವಯಸ್ಸಾಗಿದ್ದು ದೇಹಕ್ಕೆ ಮನಸ್ಸಿಗೆ ಅಲ್ಲ’
ಈ ರೀತಿಯಲ್ಲಾದರೂ ಒಳಗೊಳಗೇ
ಖುಷಿ ಪಡಲು ಅವರುಗಳು ಆಡಿದ ಮಾತು
ವೇದ ವಾಕ್ಯವಾಗಿ ಊರೆಲ್ಲ ಹಬ್ಬಿದ್ದು.

ನಾನ್ ಬಿಡ್ತೀನಾ…
ಯಾರು ಏನಾದರೂ ಅನ್ನಲಿ ನಾನು ನಾನೇ
ಮತ್ತೆರಡು ಹೊಸಾ ಲೇಟೆಸ್ಟ್ ಸಲ್ವಾರ್ ಖರೀದಿ ಮಾಡಿ
ಕಪ್ಪು ಹೆರಳನ್ನು ಇಳಿಬಿಟ್ಟು ಓಡಾಡುತ್ತೇನೆ
ನಿಮಗೆಷ್ಟು ವಯಸ್ಸು ಎಂದು ಕೇಳಿದವರಿಗೆ ಹೇಳುತ್ತೇನೆ
“ನಾನಿನ್ನೂ ಸೋ…..ಯಂಗ್”

‍ಲೇಖಕರು avadhi

March 1, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: