ಅವರು.. ಪಂಕಜ್‌ ಉಧಾಸ್‌

ವಿಶಿಷ್ಟ ಕಂಠದ ಗಾಯಕ ಪಂಕಜ್‌ ಉಧಾಸ್‌

ಗಝಲ್‌ ಗಾಯನವನ್ನು ಜನಸಾಮಾನ್ಯರ ನಡುವೆ ಜನಪ್ರಿಯಗೊಳಿಸಿದ ಮಧುರ ಸ್ವರ

ನಾ ದಿವಾಕರ

**

ಉತ್ತರ ಭಾರತದ ಸಂಗೀತ ವಲಯದಲ್ಲಿ ಗಝಲ್‌ಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಪರ್ಷಿಯನ್‌, ಉರ್ದು ಮತ್ತು ಅರೇಬಿಕ್‌ ಭಾಷೆಯಲ್ಲಿ ತಮ್ಮ ಗಝಲ್‌ಗಳನ್ನು ರಚಿಸಿ ಒಂದು ಪರಂಪರೆಯನ್ನೇ ಸೃಷ್ಟಿಸಿದ ಮಿರ್ಜಾ ಗಾಲಿಬ್‌ ಈ ಸಾಹಿತ್ಯ ಪ್ರಕಾರಕ್ಕೆ ಒಂದು ವಿಶಿಷ್ಟ ಆಯಾಮವನ್ನು ಕಲ್ಪಿಸಿದ್ದರೆ ಮತ್ತೊಂದೆಡೆ ಸೂಫೀ ಪರಂಪರೆಯಿಂದ ಮೂಡಿದ ಹಲವಾರು ಕವಿಗಳು ಗಝಲ್‌ಗಳನ್ನು ಜನಪ್ರಿಯಗೊಳಿಸಿದ್ದಾರೆ. ಭಾರತದಲ್ಲಿ ಗಝಲ್‌ಗಳ ಪಿತಾಮಹ ಎಂದೇ ಪ್ರಸಿದ್ಧಿ ಪಡೆದಿರುವ ಅಮೀರ್‌ ಖುಸ್ರೋ ಅವರಿಂದ ಇತ್ತೀಚಿನ ಶಹರ್‌ಯಾರ್‌ವರೆಗೂ ಈ ಕಾವ್ಯ ಪ್ರಕಾರ ಜನಸಾಮಾನ್ಯರ ಮನಸೂರೆಗೊಂಡಿದೆ. ಸಾಮಾನ್ಯವಾಗಿ ಪ್ರೀತಿ ಪ್ರೇಮ ವಿರಹ ಮತ್ತು ಸೂಕ್ಷ್ಮ ಮನುಜ ಸಂಬಂಧಗಳ ಸುತ್ತಲೇ ಹೆಣೆಯಲಾಗುವ ಗಝಲ್‌ಗಳು ಒಂದೇ ಸ್ಥಾಯಿ ಭಾವವನ್ನು ವಿಭಿನ್ನ ಆಯಾಮಗಳಿಂದ ಹೊರಸೂಸುವ ಸಾಹಿತ್ಯದ ಸಾಲುಗಳಿಂದ ಕೂಡಿರುತ್ತವೆ.

ಹಿಂದಿ ಚಲನಚಿತ್ರ ರಂಗದಲ್ಲಿ 1940ರ ಕೆ.ಎಲ್‌. ಸೈಗಲ್‌ ಕಾಲದಿಂದಲೂ ಗಝಲ್‌ಗಳು ತಮ್ಮ ಛಾಪು ಮೂಡಿಸಿವೆ. 16ನೆ ಶತಮಾನದಲ್ಲಿ ಹೈದರಾಬಾದ್‌ನ ಖುತುಬ್‌ಶಾಹಿ ಸಾಮ್ರಾಜ್ಯದ ಸುಲ್ತಾನ ಮುಹಮ್ಮದ್‌ ಖುಲಿ ಖುತುಬ್‌ ಶಾಹ್‌ ಭಾರತದಲ್ಲಿ ಪ್ರಪ್ರಥಮವಾಗಿ ಗಝಲ್‌ ರಚಿಸಿದ್ದನೆಂದು ಹೇಳಲಾಗುತ್ತದೆ. ಇವನ ನಂತರವೂ ದಖನಿ ಕವಿಗಳು ಈ ಕಾವ್ಯಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ಇಂದಿಗೂ ಸಹ ಧಖನಿ ಉರ್ದು ಭಾಷೆಯು ಗಝಲ್‌ಗಳಿಗೆ ಅತ್ಯಂತ ಪ್ರಶಸ್ತವಾದ ಭಾಷೆ ಎಂದೇ ಹೇಳಲಾಗುತ್ತದೆ. ಹಿಂದಿ ಚಿತ್ರರಂಗದಲ್ಲಿ ತಲತ್‌ ಮೊಹಮ್ಮದ್‌ ಮತ್ತು ಮೊಹಮ್ಮದ್‌ ರಫಿ ಗಝಲ್‌ ಗಾಯನದಲ್ಲಿ ತಮ್ಮದೇ ಆದ ವಿಶಿಷ್ಟ ಗಾಯನಶೈಲಿಯಿಂದ ಛಾಪು ಮೂಡಿಸಿದ್ದಾರೆ. ಆದರೆ ಚಲನಚಿತ್ರಗಳಿಂದ ಹೊರತಾದ ಗಝಲ್‌ಗಳು ಜನಪ್ರಿಯತೆ ಪಡೆದುಕೊಂಡಿದ್ದು 1980ರ ದಶಕದ ಆಸುಪಾಸಿನಲ್ಲಿ.

ಜನಪ್ರಿಯ ಮಾದರಿಯಾಗಿ ಗಝಲ್

ಈ ಅವಧಿಯಲ್ಲಿ ಭಾರತದ ಗಝಲ್‌ ಗಾಯಕರಿಗೆ ಸಿದ್ಧಮಾದರಿಯಾಗಿ ಒಂದು ಚೌಕಟ್ಟನ್ನು ನಿರ್ಮಿಸಿಕೊಟ್ಟವರು ಪಾಕಿಸ್ತಾನದ ಗಝಲ್‌ ಗಾಯಕರಾದ ಮೆಹದಿ ಹಸನ್‌ ಹಾಗೂ ಘುಲಾಮ್‌ ಅಲಿ. ಭಾರತದಲ್ಲಿ ಈ ಗಾಯನ ಪ್ರಕಾರಕ್ಕೆ ಕಾಯಕಲ್ಪ ಒದಗಿಸಿದವರ ಪೈಕಿ ಜಗ್‌ಜಿತ್‌ ಸಿಂಗ್‌ ಮುಖ್ಯವಾಗುತ್ತಾರೆ. ಚಲನಚಿತ್ರಗಳಲ್ಲಿ ಗಝಲ್‌ಗಳನ್ನು ಪಾರಂಪರಿಕವಾಗಿ ಗಝಲ್‌ಗಳನ್ನು ಅಳವಡಿಸಲಾಗುತ್ತಿದ್ದಾದರೂ, ಬಾಹ್ಯ ವಲಯದಲ್ಲಿ ಸಂಗೀತ ಪ್ರಿಯರಿಗೆ ಅಪ್ಯಾಯಮಾನವಾಗಿ ಕಾಣುತ್ತಿದ್ದ ಗಝಲ್‌ಗಳನ್ನು ವಿವಿಧ ಗಾಯಕರ ಆಲ್ಬಂಗಳಿಂದ ಆಯ್ಕೆ ಮಾಡಿ ಸಿನೆಮಾಗಳಿಗೆ ಅಳವಡಿಸಲಾರಂಭಿಸಿದ್ದು, ಭಾರತದಲ್ಲಿ ಗಝಲ್‌ ಜನಪ್ರಿಯತೆಗೆ ನಾಂದಿ ಹಾಡಿತ್ತು. ಸಂಗೀತ ನಿರ್ದೇಶಕ ಖಯ್ಯಾಂ ಈ ನಿಟ್ಟಿನಲ್ಲಿ ಸ್ಮರಣೀಯರು. ಈ ಕಾಲಘಟ್ಟದಲ್ಲೇ ಹಿಂದಿ ಸಿನೆಮಾ ರಂಗದಲ್ಲಿ ಜನಪ್ರಿಯವಾದ ಅದ್ಭುತ ಕಂಠಸಿರಿಯ ಗಾಯಕ ಪಂಕಜ್‌ ಉಧಾಸ್ ಅಸಂಖ್ಯಾತ ಸಂಗೀತ-ಗಝಲ್‌ ಪ್ರೇಮಿಗಳನ್ನು ಅಗಲಿ, 26 ಫೆಬ್ರವರಿ 2024ರಂದು, ತಮ್ಮ 72ನೆಯ ವಯಸ್ಸಿನಲ್ಲಿ ಗಾಯನ ಪ್ರಪಂಚಕ್ಕೆ ಅಂತಿಮ ವಿದಾಯ ಹೇಳಿದ್ದಾರೆ.‌

ಪಂಕಜ್‌ ಉಧಾಸ್‌ ಚರಣ್‌  ಜನಿಸಿದ್ದು 1951ರ ಮೇ 17ರಂದು, ಗುಜರಾತ್‌ನ ರಾಜಕೋಟ್‌ನಲ್ಲಿ. ತಂದೆ ಕೇಶುಭಾಯಿ ಉಧಾಸ್‌ ಖ್ಯಾತ ವೀಣಾ ವಾದಕ ಅಬ್ದುಲ್‌ ಕರೀಮ್‌ ಖಾನ್‌ ಅವರಿಂದ ದಿಲ್‌ರುಬಾ ಎಂದು ಕರೆಯಲ್ಪಡುವ ವೀಣೆ ನುಡಿಸುವುದನ್ನು ಕಲಿತಿದ್ದರು. ತನ್ನ ತಂದೆಯ ವೀಣಾ ವಾದವನ್ನು ನೋಡುನೋಡುತ್ತಲೇ ಬೆಳೆದ ಪಂಕಜ್‌ ಉಧಾಸ್‌ ಸೋದರರಾದ ಮನ್ಹರ್‌ ಉಧಾಸ್‌ ಮತ್ತು ನಿರ್ಮಲ್‌ ಉಧಾಸ್‌ ಅವರಿಂದಲೂ ಉತ್ತೇಜಿತರಾಗಿ ಗಝಲ್‌ ಗಾಯನದ ಕಡೆಗೆ ಹೊರಳಿದ್ದರು. ರಾಜ್‌ಕೋಟ್‌ನ ಮ್ಯೂಸಿಕ್‌ ಅಕಾಡೆಮಿಯಲ್ಲಿ ಸಂಗೀತಾಭ್ಯಾಸ ಮಾಡಿದ ಪಂಕಜ್‌ ಉಧಾಸ್‌ ಆರಂಭದಲ್ಲಿ ತಬಲ ಕಲಿತಿದ್ದರೂ ಕ್ರಮೇಣ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಡೆ ಒಲವು ತೋರಿದ್ದರು. ಗುಲಾಮ್‌ ಖಾದಿರ್‌ ಖಾನ್‌ ಸಾಹಬ್‌ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿತ ಪಂಕಜ್‌ ಉಧಾಸ್‌ ಮುಂಬೈಗೆ ಬಂದು ನೆಲೆಸಿದ ಮೇಲೆ ನವರಂಗ್‌ ನಾಗುಪರ್‌ಕರ್‌ ಅವರ ಗ್ವಾಲಿಯರ್‌ ಘರಾನಾದಲ್ಲಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರೆಸಿದ್ದರು.

ಹಿರಿಯ ಸೋದರ ಮನ್ಹರ್‌ ಉಧಾಸ್‌ ನಾಟಕರಂಗದಲ್ಲಿ ಸಕ್ರಿಯರಾಗಿದ್ದುಕೊಂಡು, ಹಿಂದಿ ಸಿನೆಮಾಗಳಲ್ಲೂ ಗಾಯಕರಾಗಿ ಹೆಸರಾಗಿದ್ದರು. (ಅಮಿತಾಬ್-ಜಯಾ ಅಭಿನಯದ ಅಭಿಮಾನ್‌ ಚಿತ್ರದ “ ಲೂಟೇ ಕೊಯಿ ಮನ್‌ ಕಾ ನಗರ್‌ ಬನ್‌ ಕೆ ಮೆರಾ ಸಾಥಿ,,,” ಲತಾಮಂಗೇಶ್ಕರ್‌ ಅವರೊಂದಿಗೆ ಹಾಡಿದ್ದರು ). 1972ರಲ್ಲಿ ಕಾಮ್ನಾ ಎಂಬ ವಿಫಲ ಸಿನೆಮಾ ಒಂದರ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪಂಕಜ್‌ ಉಧಾಸ್‌, ಇದೇ ಅವಧಿಯಲ್ಲಿ ಗಝಲ್‌ ಗಾಯನದಲ್ಲಿ ಹೆಸರಾಂತರಾಗಿದ್ದ ತಲತ್‌ ಅಝೀಜ್‌ ಮತ್ತು ಜಗ್‌ಜಿತ್‌ ಸಿಂಗ್‌ ಅವರ ನಡುವೆಯೇ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಗಝಲ್‌ ಗಾಯನದಲ್ಲಿ ಆಸಕ್ತಿ ಮೂಡಿದ ನಂತರ ಉರ್ದು ಭಾಷೆಯನ್ನು ಕಲಿತ ಪಂಕಜ್‌ ಉಧಾಸ್‌ ಕೆಲ ಕಾಲ ಕೆನಡಾ ಮತ್ತು ಅಮೆರಿಕದಲ್ಲೂ ಸಹ ಗಾಯನ ಕಚೇರಿಗಳನ್ನು ನಡೆಸಿದ್ದರು.

ಗಾಯನ ಲೋಕದ ಪಯಣ

1980ರಲ್ಲಿ ತಮ್ಮ ಪ್ರಪ್ರಥಮ ಆಲ್ಬಮ್‌ “ ಆಹತ್‌ ” ಬಿಡುಗಡೆ ಮಾಡಿದ ಪಂಕಜ್‌ ಉಧಾಸ್‌ ಒಮ್ಮೆಲೆ ಜನಪ್ರಿಯರಾಗಿದ್ದು ಈ ಗಝಲ್‌ಗಳಿಂದಲೇ ಆದರೂ, ದೇಶವ್ಯಾಪಿಯಾಗಿ ಒಬ್ಬ ಗಾಯಕನಾಗಿ ಜನಪ್ರಿಯತೆ ಗಳಿಸಿದ್ದು 1986ರಲ್ಲಿ ತೆರೆಕಂಡ ಮಹೇಶ್‌ ಭಟ್‌ ಅವರ ನಾಮ್‌ ಚಿತ್ರದ ಮೂಲಕ. ಮೆಹದಿ ಹಸನ್‌ ಅವರ ಶಾಸ್ತ್ರೀಯ ಮಾದರಿ, ಘುಲಾಮ್‌ ಅಲಿ ಅವರ ಅದ್ಭುತ ಕಂಠ ಮಾಧುರ್ಯ, ಜಗ್‌ಜಿತ್‌ ಸಿಂಗ್‌ ಅವರ ಮೃದು ಕಂಠಸಿರಿ, ಭೂಪಿಂದರ್‌ ಅವರ ಗದ್ಗದಿತ ಕಂಠ, ತಲತ್‌ ಅಝೀಜ್‌ ಅವರ ತೇಲು ಧ್ವನಿ, ಇವೆಲ್ಲ ಶೈಲಿಗಳಿಗಿಂತಲೂ ಭಿನ್ನವಾಗಿ ಪಂಕಜ್‌ ಉಧಾಸ್‌ ತಮ್ಮದೇ ಆದ ಸ್ವರ ಮಾದರಿಯನ್ನು ರೂಢಿಸಿಕೊಂಡಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಪ್ರೀತಿ-ಪ್ರೇಮ-ವಿರಹ ಮತ್ತು ಭಗ್ನಪ್ರೇಮಿಯ ಮದ್ಯಪ್ರಿಯತೆ ಈ ಭಾವುಕತೆಯ ಚೌಕಟ್ಟಿನಲ್ಲೇ ಗಝಲ್‌ಗಳನ್ನು ಆಯ್ಕೆ ಮಾಡಿಕೊಂಡು ಹಾಡುತ್ತಿದ್ದ ಪಂಕಜ್‌ ಉಧಾಸ್‌ ತಳಮಟ್ಟದ ಜನಸಾಮಾನ್ಯರಿಗೆ ತಲುಪುವಂತಹ ಗಝಲ್‌ಗಳನ್ನೇ ಹೆಚ್ಚಾಗಿ ಹಾಡುತ್ತಿದ್ದರು.

1986ರ ನಾಮ್‌ ಚಿತ್ರದ “ ಚಿಟ್ಟಿ ಆಯೀ ಹೈ ಆಯೀ ಹೈ ಚಿಟ್ಟಿ ಆಯೀ ಹೈ ” ( ಆನಂದ್‌ ಬಕ್ಷಿ -ಲಕ್ಷ್ಮಿಕಾಂತ್‌ ಪ್ಯಾರೇಲಾಲ್‌ ) ಪಂಕಜ್‌ ಉಧಾಸ್‌ ಅವರ ಧ್ವನಿಯನ್ನು ಮನೆಮನೆಗೂ ಮುಟ್ಟಿಸಿತ್ತು. ದೇಶವನ್ನು ತೊರೆದು ಹೋದವರು ತಮ್ಮ ತಾಯ್ನಾಡನ್ನೇ ಮರೆತು, ತವರಿನ ಪ್ರೀತಿ ಬಾಂಧವ್ಯಗಳನ್ನು ತೊರೆದು, ಸುಖಜೀವನ ಕಂಡುಕೊಳ್ಳುವ ಒಂದು ಪ್ರಕ್ರಿಯೆಗೆ 1980ರ ದಶಕ ಚಾಲನೆ ನೀಡಿತ್ತು. ಹಣ ಸಂಪಾದಿಸಲು ಕೊಲ್ಲಿ ರಾಷ್ಟ್ರಗಳಿಗೆ, ಪಶ್ಚಿಮ ರಾಷ್ಟ್ರಗಳಿಗೆ ಹೋಗುವುದು ಮಧ್ಯಮ ವರ್ಗದ-ಕೆಳಮಧ್ಯಮ ವರ್ಗದ ಒಂದು ಅನಿವಾರ್ಯ ಫ್ಯಾಷನ್‌ ಸಹ ಆಗಿತ್ತು. ಈ ಅವಧಿಯಲ್ಲೇ ತೆರೆಕಂಡ ಮಹೇಶ್‌ ಭಟ್‌ ಅವರ ಚಿತ್ರ ʼನಾಮ್‌ʼ ಇದೇ ರೀತಿಯ ಕಥಾಹಂದರವನ್ನೂ ಹೊಂದಿತ್ತು. ಈ ಚಿತ್ರದ                      ʼ ಚಿಟ್ಟಿ ಆಯೀ ಹೈ ʼ ಹಾಡು ಪಂಕಜ್‌ ಉಧಾಸ್‌ ಅವರ ಧ್ವನಿಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದೇ ಅಲ್ಲದೆ, ಥಿಯೇಟರ್‌ನಲ್ಲಿ ಕುಳಿತ ಪ್ರೇಕ್ಷಕರ ಕಣ್ಣಲ್ಲೂ ನೀರಾಡಿಸಿತ್ತು.

“ ಸಾತ್‌ ಸಮಂಧರ್‌ ಪಾರ್‌ ಗಯಾ ತೂ/ ಹಮ್‌ ಕೋ ಜಿಂದಾ ಮಾರ್‌ ಗಯಾ ತೂ / ತೇರೇ ಬಿನ್‌ ಜಬ್‌ ಆಯೀ ಹೋಳಿ / ದೀಪ್‌ ನಹೀಂ ದಿಲ್‌ ಜಲೇ ಹೈ ಖಾಲಿ ” ಈ ಸಾಲುಗಳು ತವರು ತೊರೆದು ಸುಖಜೀವನ ಬಯಸುವ ಭಾರತೀಯರಲ್ಲಿ ಸಂಚಲನನ ಮೂಡಿಸಿದ್ದವು. ಈ ಹಾಡಿನ ಸಾಹಿತ್ಯ ಹೃದಯಸ್ಪರ್ಶಿಯಾಗಿದ್ದಂತೆಯೇ ಪಂಕಜ್‌ ಉಧಾಸ್‌ ಅವರ ಗಾಯನಶೈಲಿ ಮತ್ತು ಕಂಠಮಾಧುರ್ಯವೂ ಸಹ ಜನಸಾಮಾನ್ಯರ ಎದೆ ತಟ್ಟುವಂತಿತ್ತು. (ಚಿತ್ರದಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ). 1980ರವರೆಗೂ ಮೊಹಮ್ಮದ್‌ ರಫಿ, ಮುಖೇಶ್‌, ಕಿಶೋರ್‌ ಕುಮಾರ್‌, ಮನ್ನಾಡೇ ಮುಂತಾದ ದಿಗ್ಗಜರಿಂದ ಕೂಡಿದ್ದ ಬಾಲಿವುಡ್‌ ಚಿತ್ರರಂಗದಲ್ಲಿ ಹೊಸ ಗಾಯಕರ ಪ್ರವೇಶವೇ ದುಸ್ತರವಾಗಿತ್ತು. ಹಾಗಾಗಿ ಪಂಕಜ್‌ ಉಧಾಸ್‌ ಖ್ಯಾತ ಗಾಯಕಿ ಬೇಗಂ ಅಖ್ತರ್‌ ಅವರಿಂದ ಪ್ರೇರಣೆ ಪಡೆದು ಗಝಲ್‌ ಗಾಯನಕ್ಕೆ ತಮ್ಮ ಒಲವು ತೋರುವ ಮೂಲಕ, ತಮ್ಮದೇ ಆದ ಖಾಸಗಿ ಆಲ್ಬಮ್‌ಗಳನ್ನು ಹೊರತರಲು ಆರಂಭಿಸಿದ್ದರು.

1980ರ ದಶಕದಲ್ಲಿ ಮೂಲತಃ ಖಯ್ಯಾಂ-ಜಗ್‌ಜೀತ್‌ ಸಿಂಗ್-ಚಿತ್ರಾಸಿಂಗ್-ಭೂಪಿಂದರ್‌ ಅವರ ಸಹಯೋಗದಲ್ಲಿ ಮೂಡಿಬಂದ ಗಝಲ್‌ಗಳು ಹಿಂದಿ ಸಿನೆಮಾಗಳ ಆಕರ್ಷಣೆಯಾಗಿದ್ದವು. ಅರ್ಥ್‌, ಮಂಡಿ, ಅಂಕುರ್‌, ಮಂಥನ್‌ ಮುಂತಾದ ಕಲಾತ್ಮಕ ಚಿತ್ರಗಳೂ ಗಝಲ್‌ಗಳಿಗೆ ಅವಕಾಶ ನೀಡಿದ್ದವು. ಈ ಸಮಯದಲ್ಲಿ ಕೇಳಿಬಂದ ಎಲ್ಲ ಗಝಲ್‌ಗಳೂ ಶ್ರೇಷ್ಠ ಎನ್ನಲಾಗದಿದ್ದರೂ, ಸಿನೆಮಾ ಗೀತೆಗಳ ರಸಿಕರಿಗೆ ಒಂದು ಹೊಸ ಮಾದರಿಯ ಮನರಂಜನೆ ನೀಡಿದ್ದಂತೂ ಸತ್ಯ. ಹಿಂದಿ ಚಿತ್ರರಂಗದಲ್ಲಿ ಉರ್ದು ಭಾಷೆಯ ಸೌಂದರ್ಯ ಕ್ಷೀಣಿಸುತ್ತಿರುವಂತೆಯೇ ಗಝಲ್‌ಗಳಲ್ಲೂ ಸಹ ಭಾಷಾ ಗಾಂಭೀರ್ಯ ಮತ್ತು ಅರ್ಥಬದ್ಧತೆ ಕಡಿಮೆಯಾಗುತ್ತಾ ಹೆಚ್ಚು ಹೆಚ್ಚಾಗಿ ಮನರಂಜನೆ ಮುಖ್ಯವಾಗತೊಡಗಿತ್ತು. ಸಾಮಾನ್ಯ ಜನರಿಗೆ ತಲುಪುವಂತೆ ಮಾಡಲು ಗಝಲ್‌ಗಳನ್ನು ಸರಳೀಕರಿಸುವ ಮೂಲಕ ಹಲವು ಲೇಖಕರು ಈ ಸಾಹಿತ್ಯ ಪ್ರಕಾರದ ಮೂಲ ಸೌಂದರ್ಯವನ್ನು ಕೊಂಚ ಮಟ್ಟಿಗೆ ಭಂಗಗೊಳಿಸಿದ್ದೂ ಸತ್ಯ.

ಹೊಸ ಆಯಾಮ ಪಡೆದ ಗಝಲ್‌

ಹಾಗಾಗಿಯೇ ಮೆಹದಿ ಹಸನ್‌ ಅಥವಾ ಘುಲಾಂ ಅಲಿ ಅವರ ಗಝಲ್‌ ಗಾಯನದಲ್ಲಿ ಕಾಣಬಹುದಾದಂತಹ ಪರಿಶುದ್ಧತೆ ಅಥವಾ ಭಾವಪೂರ್ಣತೆಯನ್ನು ಈ ಕಾಲಘಟ್ಟದ ಗಝಲ್‌ಗಳಲ್ಲಿ ಕಾಣಲಾಗಲಿಲ್ಲ. ಆದರೂ ತಮ್ಮದೇ ಆದ ಶೈಲಿಯಲ್ಲಿ ಪ್ರೇಮ-ವಿರಹ ಗೀತೆಗಳನ್ನು ಪ್ರಸ್ತುತಪಡಿಸಿದ್ದ ಪಂಕಜ್‌ ಉಧಾಸ್‌ ತಮ್ಮ ತೆಳು ಧ್ವನಿಯ ಮೂಲಕವೇ ರಸಿಕರನ್ನು ತಲುಪಲು ಯಶಸ್ವಿಯಾಗಿದ್ದರು. ಉರ್ದು ಭಾಷೆಯ ಪರಿಚಯವಿಲ್ಲದ ಸಂಗೀತ ಪ್ರಿಯರನ್ನೂ ತಲುಪುವುದರಲ್ಲಿ ಪಂಕಜ್‌ ಉಧಾಸ್‌ ಅವರ ಗಝಲ್‌ಗಳು ಯಶಸ್ವಿಯಾಗಿದ್ದವು. “ ಚಾಂದಿ ಜೈಸಾ ರಂಗ್‌ ಹೈ ತೇರಾ ಸೋನೇ ಜೈಸಿ ಬಾಲ್‌ ” ,                        “ ಹುಯ್ಞಿ ಮೆಹಂಗಿ ಬಹುತ್‌ ಹೈ ಶರಾಬ್‌ ಕೀ ತೋಡಿ ತೋಡಿ ಪಿಯಾ ಕರೋಂ ” ಮುಂತಾದ ಗಝಲ್‌ಗಳ ಮೂಲಕ ಎಳೆಯರ ಮನಸ್ಸನ್ನು ಗೆಲ್ಲುವುದರಲ್ಲಿ ಪಂಕಜ್‌ ಉಧಾಸ್‌ ಯಶಸ್ವಿಯಾಗಿದ್ದರು. ಇದನ್ನು ಸಾಫ್ಟ್‌ ಪಾಪ್‌ ಶೈಲಿಯ ಗಝಲ್‌ಗಳೆಂದೂ ಕರೆಯಲಾಗುತ್ತದೆ.

1980ರಲ್ಲಿ ʼ ಆಹತ್‌ ʼ ಆಲ್ಬಂ ಹೊರತಂದ ಪಂಕಜ್‌ ಉಧಾಸ್‌ ತದನಂತರದಲ್ಲಿ ಮುಕರಾರ್‌, ತರನ್ನುಮ್‌, ಮೆಹಫಿಲ್‌ , ನಶಾ ಮೊದಲಾದ ನಲವತ್ತಕ್ಕೂ ಹೆಚ್ಚು ಆಲ್ಬಂಗಳನ್ನು ಹೊರತಂದರು. ಪಂಕಜ್‌ ಉಧಾಸ್‌ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದ ʼ ಚಿಟ್ಟಿ ಆಯೀ ಹೈ ʼ ಹಾಡು ಬಿಬಿಸಿ ರೇಡಿಯೋ ಆಯ್ಕೆ ಮಾಡಿದ ಶತಮಾನದ ನೂರು ಹಾಡುಗಳಲ್ಲಿ ಒಂದಾಗಿದ್ದುದು ಆ ಹಾಡಿನ ಜನಪ್ರಿಯತೆಗೆ ಸಾಕ್ಷಿ. ಸಂಗೀತ ವಲಯದಲ್ಲಿ ಕ್ಯಾಸೆಟ್‌ಗಳ ಯುಗ ಎಂದೇ ಕರೆಯಲಾಗುವ 1980ರ ನಂತರದ ಎರಡು ಮೂರು ದಶಕಗಳಲ್ಲಿ ಜಗ್‌ಜಿತ್‌ ಸಿಂಗ್‌ ಮತ್ತು ಪಂಕಜ್‌ ಉಧಾಸ್‌ ಅತ್ಯಂತ ಜನಪ್ರಿಯ ಗಝಲ್‌ ಗಾಯಕರಾಗಿ ಖಾತಿಪಡೆದಿದ್ದರು. ಇವರ ಗಝಲ್‌ಗಳು ಕ್ಯಾಸೆಟ್‌ ಲೋಕದಲ್ಲಿ ಅತ್ಯಂತ ಲಾಭದಾಯಕ ಮಾರುಕಟ್ಟೆಯನ್ನೂ ಸೃಷ್ಟಿಸಿದ್ದವು. 1990ರಲ್ಲಿ ತೆರೆಕಂಡ ಸಂಜಯ್‌ದತ್-ಸಲ್ಮಾನ್‌ ಖಾನ್‌ ಅಭಿನಯದ ಸಾಜನ್‌ ಚಿತ್ರದಲ್ಲಿ “ ಜಿಯೇನ್‌ ತೋ ಜಿಯೇನ್‌ ಐಸೇ,, ” ಪಂಕಜ್‌ ಉಧಾಸ್‌ ಅವರ ಅಭಿಮಾನಿ ಬಳಗವನ್ನು ಮತ್ತಷ್ಟು ವಿಸ್ತರಿಸಿತ್ತು.

1994ರಲ್ಲಿ ತೆರೆಕಂಡ ಪಕ್ಕಾ ಕಮರ್ಷಿಯಲ್‌ ಸಿನೆಮಾ ʼಮೊಹರಾʼ ದಲ್ಲಿ ಹಾಡಿದ ” ನಾ ಕಜ್‌ರೇಕೀ ಧಾರ್‌ ” ಈ ಜನಪ್ರಿಯತೆಗೆ ಮತ್ತಷ್ಟು ಮೆರುಗು ನೀಡಿತ್ತು. ಈ ಅವಧಿಯಲ್ಲಿ ಪಂಕಜ್‌ ಉಧಾಸ್‌ ಹೊರತಂದ ʼ ಅಫ್ರೀನ್‌ ʼ ಆಲ್ಬಮ್‌ ಅತ್ಯಂತ ಜನಪ್ರಿಯ ಗೀತಗುಚ್ಛವಾಗಿ ಜನಸಾಮಾನ್ಯರ ಹೃದಯ ಗೆದ್ದಿತ್ತು. ಗಝಲ್‌ ಪ್ರಕಾರದಲ್ಲಿ ಸಾಮಾನ್ಯವಾಗಿ ಪ್ರೀತಿ-ವಿರಹಗಳ ನೋವು ನಲಿವುಗಳ ನಡುವೆ ಭಗ್ನಪ್ರೇಮ ಮತ್ತು ವಿರಹಿ ಪ್ರೇಮಿಯ ಮದ್ಯಪಾನವೂ ಸಹ ಸ್ಥಾಯಿ ಭಾವವನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ 1990ರ ದಶಕದಲ್ಲಿ ಪಂಕಜ್‌ ಉಧಾಸ್‌ ಹೊರತಂದ ʼ ನಶಾ ʼ ಆಲ್ಬಂ ಯುವ ಪೀಳಿಗೆಯಲ್ಲಿ ಉನ್ಮಾದ ಸೃಷ್ಟಿಸಿತ್ತು. ʼ ಶರಾಬ್‌ ʼ ಅಥವಾ ʼ ಮದ್ಯ ʼ ಸ್ವೀಕೃತ ಪದದಂತೆ ಹಿರಿಯ-ಕಿರಿಯರೆನ್ನದೆ ಗಝಲ್‌ಗಳ ಮೂಲಕ ಹರಿದಾಡಿತ್ತು.

ಆದರೆ 1980-90ರ ಅವಧಿಯಲ್ಲಿ ಗಝಲ್‌ ಗಾಯನಕ್ಕೆ ಇದ್ದ ಪ್ರಾಶಸ್ತ್ಯ ಮತ್ತು ಅದರಲ್ಲಿದ್ದ ಸೌಂದರ್ಯೋಪಾಸಕ ಗುಣಮಟ್ಟ ಇವತ್ತಿನ ಬಾಲಿವುಡ್‌ ಚಿತ್ರರಂಗದಲ್ಲಿ ಊಹಿಸಲೂ ಸಾಧ್ಯವಾಗುವುದಿಲ್ಲ. ಬಾಲಿವುಡ್‌ ಚಿತ್ರರಂಗದ ಗುಣಾತ್ಮಕ ಕುಸಿತ ಗಝಲ್‌ಗಳ ಮೇಲೆ ಸಹ ತನ್ನ ಪ್ರಭಾವ ಬೀರಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. 2021ರ ಸಂದರ್ಶನವೊಂದರಲ್ಲಿ ಪಂಕಜ್‌ ಉಧಾಸ್‌ ಈ ಬೆಳವಣಿಗೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೂ ಉಂಟು ಕಾಲ್ಪನಿಕತೆಯಿಂದ ವಾಸ್ತವಿಕತೆಯೆಡೆಗೆ ಸಾಗಿರುವ ಬಾಲಿವುಡ್‌ ಚಿತ್ರರಂಗದಲ್ಲಿ ಹಾಡುಗಳು ಕಥಾಹಂದರದ ನಡುವೆ ಅಲ್ಲಲ್ಲಿ ತುರುಕಲಾಗುವ ಮನರಂಜನೆಯ ಸರಕುಗಳಂತಾಗಿರುವುದು, ಗಝಲ್‌ಗಳ ಪ್ರಾಮುಖ್ಯತೆಯನ್ನೂ ಕಡಿಮೆ ಮಾಡಿರುವುದು ವಾಸ್ತವ.

ಅಂತಿಮ ಪಯಣ-ನಮನ

2006ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಪಂಕಜ್‌ ಉಧಾಸ್‌ ಹಿಂದಿ ಸಿನೆಮಾ ರಂಗದ ಮೂಲಕ ಸಾಮಾನ್ಯ ಚಿತ್ರರಸಿಕರಿಗೆ ನಿಕಟವಾಗಿದ್ದರೂ, ಅವರ  40ಕ್ಕೂ ಹೆಚ್ಚು ಆಲ್ಬಂಗಳನ್ನು ಕಿವಿಗೊಟ್ಟು ಆಲಿಸಿದಾಗ ಅವರಲ್ಲಿ ಒಬ್ಬ ಮೃದು ಕಂಠದ ಅದ್ಭುತ ಗಾಯಕ ಕಾಣುತ್ತಾನೆ. ಭಾವನಾತ್ಮಕತೆಯನ್ನು ಮೈಗೂಡಿಸಿಕೊಂಡೇ ಉತ್ತಮ ಶಾಯರಿಗಳಿಗೆ ಗಝಲ್‌ ಸ್ವರೂಪದಲ್ಲಿ ರಾಗ ಸಂಯೋಜಿಸುವ ಮೂಲಕ ಪಂಕಜ್‌ ಉಧಾಸ್‌ ಸಂಗೀತ ಪ್ರಿಯರಿಗೆ ಹತ್ತಿರವಾಗುವುದು ಅವರ ಧ್ವನಿಯಲ್ಲಿನ ಆಪ್ತತೆ ಮತ್ತು ಆತ್ಮೀಯತೆಯಿಂದ. ನಾಮ್‌ ಚಿತ್ರದ  ʼ ಚಿಟ್ಟಿ ಆಯೀ ಹೈ ʼ ಹಾಡಿನಲ್ಲಿ ಬರುವ ʼ ಆ ಜಾ ಉಮರ್‌ ಬಹುತ್‌ ಹೈ ಚೋಟೀ- ಅಪನೇ ಘರ್‌‌ ಮೇ ಭೀ  ಹೈ ರೋಟೀ ʼ ಎಂಬ ಸಾಲು ಐಷಾರಾಮಿ ಅನಿವಾಸಿ ಭಾರತೀಯರನ್ನು ತಟ್ಟಿದೆಯೋ ಇಲ್ಲವೋ, ಇದು ಭಾರತದ ಗಝಲ್-ಸಂಗೀತ ಪ್ರಿಯರ ಹೃದಯದಲ್ಲಂತೂ ಶಾಶ್ವತವಾಗಿ ನೆಲೆಸಿದೆ.

ಇದಕ್ಕೆ ಕಾರಣ ಪಂಕಜ್‌ ಉಧಾಸ್‌ ಅವರ ಸ್ವರ ಮಾಧುರ್ಯ ಹಾಗೂ ಭಾವನಾತ್ಮಕ ಸಿರಿಕಂಠ. ತಮ್ಮ 72ನೆಯ ವಯಸ್ಸಿನಲ್ಲಿ ಕ್ಯಾನ್ಸರ್‌ ಖಾಯಿಲೆಗೆ ತುತ್ತಾಗಿ ಅಂತಿಮ ವಿದಾಯ ಹೇಳಿದ ಹೃದಯಸ್ಪರ್ಶಿ ಗಾಯಕ- ಪಂಕಜ್‌ ಉಧಾಸ್‌ ಅವರಿಗೆ ಭಾವಪೂರ್ಣ ನಮನಗಳು.

‍ಲೇಖಕರು avadhi

March 1, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: