ಅವ್ವ ಏಳೇ‌ ಹೊತ್ತಾಯಿತು…

 ಪ್ರದೀಪ.ಟಿ.ಕೆ

ಅವ್ವ ಏಳೇ ಹೊತ್ತಾಯಿತು

ನಾವು ಹೊರಡುವ ರೈಲು ಇನ್ನೇನು ಬಂದೀತು

ಏಳು, ಯಾರಾದರೂ ತುಳಿಯುವ ಮುನ್ನ

ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ನಮ್ಮ ಕನಸು, ಆಸೆಗಳನೆಲ್ಲ

ನಿನ್ನ ಬೋಳು ಕೈಗಳಲ್ಲೆ ಗುಡಿಸು, ಚೀಲಕ್ಕೆ ತುಂಬು, ಗಂಟುಮೂಟೆ ಕಟ್ಟು

ಈ ರೈಲು ತಪ್ಪಿಸಿಕೊಂಡರೆ ನಡೆದೇ ಊರಹಾದಿ ಹಿಡಿಯಬೇಕು

ಅಷ್ಟೊತ್ತಿಗೆ ಒಡೆದ ನಿನ್ನ ಇಮ್ಮಡಿ ಚೂರಾಗುವುದು‌

ಹ್ಞಾಂ, ಹಟ್ಟಿ ಸೇರಿದೊಡನೆ ಈ ಚೀಲದಲ್ಲಿರುವ ನಿನ್ನ ಚಡಾವು ಹೊಲೆಯುವ

ನಮ್ಮದೇ ಬಟ್ಟೆಗಳನ್ನು ಹೊಲೆದ ಮೊಂಡು ದಬ್ಬಳದಿಂದ

 

ನಾನು ‘ಅನ್ನ’ ಎಂದರೆ ನೀನು ‘ಹಸಿದು ಉಂಡರೆ ಚಂದ’ ಎಂದೆ

ಹಸಿದಿದ್ದೇ ಬಂತು, ಉಣ್ಣುವುದು ಯಾವಾಗ

ಯಾರಾರೋ ಎಸೆದ ಅನ್ನದ ಅಗುಳು ನಮ್ಮವರೆಗೆ ಬರಲೇ ಇಲ್ಲ

ಅಗೋ, ಆ ಹಳಿಗಳ ಮೇಲೆ ಎರಡೋ, ಮೂರೋ ರೊಟ್ಟಿ ಬಿದ್ದಿವೆ

ಪುಣ್ಯಾತ್ಮರು ಎಸೆದಿರಬೇಕು

ರೈಲು ಬರುವ ಮುನ್ನ ತಿಂದು ಬಿಡುವ

ಹೇಗೂ ಆ ಪ್ಲಾಸ್ಟಿಕ್ ಕವರಿನಲ್ಲಿ ನೀರಿದೆಯಲ್ಲ ಗುಟುಕರಿಸಲು

 

ಏನು ನಿದ್ರೆಯೇ ಇನ್ನೂ

ಈ ಪುರುಸೊತ್ತಿಲ್ಲದ ಜನದ‌‌ ನಡುವೆ ಅದೆಂತ ಮಾಯದ ನಿದ್ದೆ ಅವುತುಕೊಂಡಿದೆ ನಿನಗೆ

ಅದೂ ಈ ರೈಲು ನಿಲ್ದಾಣದಲ್ಲೆ

ಈ ಬಿಸಿಲ ಝಳದೊಳಗೆ ಆ ರಗ್ಗನ್ನೇಕೆ ಹಾಗೆ ಸುತ್ತಿಕೊಂಡಿರುವೆ

ಇತ್ತ ಕೊಡು ಅದನ್ನ, ಏಳು

ಅರೆ, ನಿನ್ನ ಮೊಲೆಗಳೆಲ್ಲ, ಬೆರಳಿಟ್ಟು ಎಣಿಸಬಹುದಾದ ಬಗ್ಗರಿ ಮೂಳೆಗಂಟಿಕೊಂಡಿವೆ

ವರ್ಷ ತುಂಬಿತೆಂದು ಮೊನ್ನೆಯಷ್ಟೇ ನನಗೆ ಹಾಲೂಡುವುದ ನಿಲ್ಲಿಸಿದ್ದಲ್ಲವೆ ನೀನು

ನಿಂತು ನೋಡುತಿದೆ ಜನ

ಕೆಲವರು ಲೊಚಗೊಡುತ್ತಾರೆ, ಕೆಲವರದು ಮರುಕ

ಅವರು ನಿಲ್ದಾಣದ ಅಂಚಿನವರೆಗೂ ತಿರುಗಿ ನೋಡುತ್ತಲೇ ಹೋದರೆ

ಇಲ್ಲಿ, ಯಾರೋ ಯಾರಿಗೋ ಬೈಯ್ಯುತ್ತಿದ್ದಾರೆ

ಕೆಲವರು ಕಿರಿಚುತ್ತಿದ್ದಾರೆ ‘ಯಾರು ಕಾರಣ, ಯಾರು ಹೊಣೆ’

ಏನಾಗಿದೆ ಇವರಿಗೆ

ಮುತ್ತಿರುವ ಹಸಿವು ಸಾಲದೆಲೆ ನಮಗೆ, ಇವರ ಈ ಸುತ್ತುಗಟ್ಟೇಕೆ

ಇಷ್ಟಾದರೂ ನೀ ಏಳುತ್ತಲೇ ಇಲ್ಲ

 

ನನಗಂತೂ ಆ ರೊಟ್ಟಿಗಳದೇ ಚಿಂತೆ

ನಿನಗೂ ಅದೇ ಇರಬೇಕು, ಜತೆಗೆ ಊರು ಸೇರುವ ತವಕ

ಎಲ್ಲರೂ ಮನೆಯೊಳಗಿರುವ ಈ ಹೊತ್ತು

ನಾನು, ನೀನಷ್ಟೆ ಹೊರಗೆ

ಚಣದ ಬಳಿಕ‌ ರೈಲು ಡಬ್ಬಿಯ ಒಳಗೆ

ಏಳು, ಊರು ಸೇರುವ

ಅಲ್ಲಿ ನಿನ್ನ ಮಡಿಲೊಳಗೆ ನನ್ನ ನೂರು ಸಾವಿರ ಕನಸ ಹೆಣೆವುದಿದೆ

‍ಲೇಖಕರು nalike

June 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನೂತನ ದೋಶೆಟ್ಟಿ

    ಇಂಥ ಕವಿತೆಗಳನ್ನು ಓದುವುದು ಕಷ್ಟ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: