ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವ್ವನ ದಿವಸ ನಾಳೆ..

ಪ್ರಶಾಂತ್ ಹಿರೇಮಠ

ಸುತ್ತು ಬಳಸು ಯಾಕೆ..?
ಜಾಂಬಳಿ, ಬಿಳಿ.. ನೀಲಿ ಅಲ್ಲಲ್ಲಿ..
ಅಹಂ ಬ್ರಹ್ಮಾಸ್ಮಿ.. ಬ್ರಹ್ಮ.. ನಾನೇ..
ಹುಟ್ಟಿದ್ದು ಯಾಕೆ ನೀ..?
ಏ.. ಬ್ರಹ್ಮ.., ಹುಟ್ಟಿಸಿದ್ದು ಯಾಕೆ ನೀ..?

ಎತ್ತರದಲಿ ಹಾರುತಿದೆ ಹೊಂಚುತ ಹದ್ದು
ಎದೆ ಒತ್ತಿ ಹೊತ್ತೊಯ್ಯುದಕೆ
ರೆಕ್ಕೆ ಬಿಚ್ಚಿ ಭೀಭತ್ಸ ಸೌಂದರ್ಯ ಆಗಸದಗಲ
ಅಂಜಿಸುತ ಅಲೆ ಎಬ್ಬಿಸಿ ತೋರಿದೆ
ಊರುವ ಉಗುರುಗಳ
ಮರೆಮಾಡಿ ಸೂರ್ಯನನೇ
ಕತ್ತಲನು ಕರೆಯುತಿದೆ ಕಣ್ಣ ಮಿಟುಕಿಸಿ
ಹೋಗು.. ದೂರ ಹೋಗು..
ಸೇರಿಸದಿರು.. ಕಣ್ಣಿಗೆ ಕಣ್ಣ
ನೀನೇನು ನಲ್ಲೆಯೇನು..?
ಬಿಗಿಹಿಡಿದ ಉಸಿರನು ಬಿಡಿಸೊಗೆದು ಉಸಿರಬೇಕಿದೆ ನನಗೆ..
ಆಳವಾಗಿ.. ನಿರಾಳವಾಗಿ.. ನಿರಾಳನಾಗಿ..
ಬದುಕುವುದಿದೆ ನನಗೆ ಇನ್ನೂ.. ಇನ್ನೂ..
ಮತ್ತೊಮ್ಮೆ ಮೊದಲಿಂದಾರಂಭಿಸಿದರೂ ಸರಿ..
ಬದುಕಬೇಕಿದೆ ನನಗೆ.. ಮತ್ತೂ.. ಮತ್ತೂ..

ಶಾಲೆಯ ಹಿಂದಿನ ಮರಳು ಜಾರು.. ಜಾರು..
ಢಿಶುಂ.. ಢಿಶುಂ.. ರೊಂಯ್.. ರೊಂಯ್..
ಕಾಲ ಗಾಯ ಮೈಯ ಗಾಯ
ಕೆಂಪೇ ಇಲ್ಲದ ರಕ್ತ
ಜಾಂಬಳಿ.. ಬಿಳಿ.. ನೀಲಿ.. ಅಲ್ಲಲ್ಲಿ..
ಕಪ್ಪು ಬಿಳುಪ ಕನಸ ನಿದ್ದೆ
ಜ್ವರದ ಮಂಪರಲ್ಲಿ ಬಂದ ಅವ್ವ ಕೇಳುವ ಪ್ರಶ್ನೆ
“ಏನಾತss.. ಯಪ್ಪಾ..?”
ನಾನವಳಿಗೆ ಅಪ್ಪನಾದದ್ದು ಯಾವಾಗ..?
ಮಗನಾದದ್ದು ಯಾವಾಗ..?
ಕಪ್ಪು ಬಿಳುಪ ಕನಸ ಅಂಚಿನಲಿ
ಜಾಂಬಳಿ.. ಬಿಳಿ.. ನೀಲಿ.. ಅಲ್ಲಲ್ಲಿ..

ನೆನಪಾದಗಲೆಲ್ಲ ನೀನು ನನಗೆ ಬೇಕು
ನೆನಪು ಮಾಸಿ ಬತ್ತಿದರೂ ಬೇಕೇ ಬೇಕು
ಸೊಗದ ಮಾತಲ್ಲ; ಜಗ ಯುಗದ ಮಾತಿದು
ನಿನ್ನ ಅಹಂಕಾರ ನಿನಗೆ ಮುಳುವು
ಪ್ರೀತಿ ಹೇಳೋದಲ್ಲ..
ತಿಳಿಯೋದೂ ಅಲ್ಲ ಬಿಟ್ಟುಬಿಡು

ಊರ ದಾರಿ ದೂರss
ಸೂರು ಹುಡುಕೋ ಭಾssರ
ಯಾವುದೀ ಸಾಗರ
ಯಾವುದೀ ದಡ
ಸೂಟ್ ಹಾಕಿಕೊಂಡು ಬೀಚ್ ಮೇಲೆ ಪರದಾಟ
ಸೆಖೆ.. ಸೆಖೆ.. ಅಬ್ಬಾ..
ಬೆವರಲಿ ಕುದ್ದು ಹಳಸುವ ದೇಹ ಒಳಗೆ
ನಿಧನಿಧಾನವಾಗಿ ಮುಗಿದುಬಿಡುವ ಬದುಕು
ಬೇಡ ಬೇಡ..
ನನ್ನ ಫೋಟೋ ಚೆನ್ನಾಗಿ ಬರೋಲ್ಲ
ಟಚ್ ಅಪ್ ಮಾಡಿದರೂ..
ಅಪ್ಪ ಮಾಡಿದ್ದು ಹೀಗೇ..

ಹೇಳು ಬ್ರಹ್ಮ.. ಹೇಳು..
ಸುತ್ತು ಬಳಸು ಯಾಕೆ..?
ಗೋಳು ಹೊಯ್ದದ್ದ್ಯಾಕೆ..?
ಹುಟ್ಟಿದ್ದು ಯಾಕೆ ನೀ..?
ಹುಟ್ಟಿಸಿದ್ದು ಯಾಕೆ ನೀ..?

‍ಲೇಖಕರು Avadhi

13 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading