ಅವರ ಕಣ್ಣಲ್ಲಿ ನೀರಾಡಿತು..

ಕಣ್ಣಿರುವ ಕಾನೂನೂ ಮತ್ತು ಅಂತ:ಕರಣವಿರುವ ನ್ಯಾಯವೂ

rajeev nayak (1)

ರಾಜೀವ ನಾರಾಯಣ ನಾಯಕ

ಸರ್ವೋಚ್ಛ ನ್ಯಾಯಾಲಯದ ಶ್ರೇಷ್ಠ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಠಾಕೂರ್‌ರವರು ಪ್ರಧಾನ ಮಂತ್ರಿಗಳು ಉಪಸ್ಥಿತರಿದ್ದ ಇತ್ತೀಚಿನ ಸಮಾರಂಭವೊಂದರಲ್ಲಿ ನ್ಯಾಯ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ನ್ಯಾಯಾಂಗ ವ್ಯವಸ್ಥೆಯು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಭಾವನಾತ್ಮಕವಾಗಿ ವ್ಯಕ್ತಪಡಿಸಿದ ಮಾತುಗಳು ಮಾಧ್ಯಮಗಳಲ್ಲಿ ಸುದ್ದಿಯಾದವು.

ಪ್ರಜೆಗಳ ಅಹವಾಲುಗಳನ್ನು ಆಲಿಸಿ ನಿರ್ಲಿಪ್ತತೆಯಲ್ಲಿ ನ್ಯಾಯ ನೀಡಬೇಕಾದ ಅತ್ಯುನ್ನತ ಸ್ಥಾನದಲ್ಲಿರುವ ನ್ಯಾಯಮೂರ್ತಿಗಳು ತಮ್ಮ ಭಾಷಣದಲ್ಲಿ ಭಾವುಕರಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದವು. ನ್ಯಾಯ ನೀಡಿಕೆಯಲ್ಲಿ ವೈಯಕ್ತಿಕ ಒಲವು ಮತ್ತು ಮಾನವ ಸಂವೇದನೆಗಳನ್ನು ಮೀರಿ ಕಾರ್ಯನಿರ್ವಹಿಸುವಂಥವರು ಸದಾ ಭಾವನಾತ್ಮಕ ಅಭಿವ್ಯಕ್ತಿಯಿಂದ ಅತೀತರಾಗುಳಿಯಬೇಕೇ?

CJI Thakurಅದ್ಯಾಕೋ ಈ ಲೇಖಕನಿಗೆ ಮೊದಲಿಂದಲೂ ಕೋರ್ಟು ಕಚೇರಿಗಳೆಂದರೆ ಗೌರವದ ನಡುವೆಯೂ ಅವ್ಯಕ್ತ ಭಯ. ನಿಜವೆಂದರೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗವು ಪ್ರತಿ ಪ್ರಜೆಯ ಹಕ್ಕುಗಳನ್ನು, ಸ್ವಾಭಿಮಾನವನ್ನು ರಕ್ಷಿಸುವ ಅತ್ಯುನ್ನತ ಸಂಸ್ಥೆಯಾದ್ದರಿಂದ ಅಲ್ಲಿ ಸುರಕ್ಷತಾ ಭಾವ ಸಹಜವಾಗಿ ಮೂಡಿಬರಬೇಕು. ಆದರೆ ಸಾಮಾನ್ಯರ ಅರಿವಿಗೆ ತೊಡಕಾಗುವ ಕಾನೂನಿನ ಪರಿಭಾಷೆಗಳು, ಅಂತ:ಸಾಕ್ಷಿಯ ಸತ್ಯವನ್ನೂ ಬಾಹ್ಯ ಪುರಾವೆಗಳಲ್ಲಿ ಅಭಿವ್ಯಕ್ತಗೊಳಿಸಬೇಕಾದ ಅನಿವಾರ್ಯತೆ, ಕಾನೂನು ವ್ಯವಸ್ಥೆ ಬಗ್ಗೆ ಸಾಮಾನ್ಯರಿಗಿರುವ ಅರಿವಿನ ಕೊರತೆ- ಈ ಎಲ್ಲ ಕಾರಣಗಳಿಗಾಗಿ ಅಲ್ಲಿ ಸಹಜ ಸಂಬಂಧವು ಚಿಗುರೊಡೆಯುವುದಿಲ್ಲಎಂದು ನನ್ನ ಭಾವನೆ.

ನಮ್ಮ ಇಲಾಖೆಯ ಕೆಲವು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನಾನು ಮುಂಬಯಿ ಹೈಕೋರ್ಟು ಮತ್ತು ಸಿಟಿ ಸಿವಿಲ್ ಕೋರ್ಟುಗಳಿಗೆ ಆಗಾಗ ಹೋಗುತ್ತಿರುತ್ತೇನೆ. ಸುಮಾರು ನೂರೈವತ್ತಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ, ಗಾಥಿಕ್ ವಾಸ್ತುಶಿಲ್ಪವನ್ನು ಹೊಂದಿರುವ ಹೈ ಕೋರ್ಟಿನ ಭವ್ಯ ಇಮಾರತು ದಕ್ಷಿಣ ಮುಂಬಯಿಯ ಹೃದಯ ಭಾಗದಲ್ಲಿದೆ. ಭವ್ಯ ಹಾಲ್‌ಗಳು, ತಿರುಗಣಿ ಮೆಟ್ಟಿಲುಗಳು, ತುರ್ತು ನಿರ್ಗಮನದ ಸುರುಳಿ ಬಾಗಿಲುಗಳು, ಗೋಡೆ ಹಾಗೂ ಸೀಲಿಂಗುಗಳಲ್ಲಿಯ ಶಿಲ್ಪಗಳು, ಓವಲ್ ಗ್ರೌಂಡ್ ಕಡೆಯಿಂದ ಬೀಸುವ ಅಹ್ಲಾದಕರ ಗಾಳಿ, ಕಪ್ಪು ಗೌನು ಧರಿಸಿ ಓಡಾಡುವ ಅತಿರಥ ಮಹಾರಥ ವಕೀಲರು, ಸಾಮಾನ್ಯರೂ ಪ್ರಸಿದ್ದರೂ ಸಾತ್ ಸಾತ್ ನಡೆದಾಡುವ ಕಾರಿಡಾರ್ ಗಳೂ-ಇವೆಲ್ಲವೂ ಇಲ್ಲಿ ವಿಶಿಷ್ಟ ವಾತಾವರಣವನ್ನು ನಿರ್ಮಿಸುತ್ತವೆ. ನ್ಯಾಯದ ನಿರೀಕ್ಷೆಯ ಮುಖಗಳೂ, ನ್ಯಾಯಕ್ಕಾಗಿ ವರ್ಷಗಟ್ಟಲೆ ಓಡಾಡಿ ದಣಿದ ಮುಖಗಳೂ ವಿವಿಧ ಭಾವಗಳಲ್ಲಿ ಕೋರ್ಟ್ ಆವರಣದಲ್ಲಿ ಕಾಣಸಿಗುತ್ತಾರೆ.

ಪಕ್ಕದಲ್ಲಿರುವ ದಿವಾಣಿ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯಗಳ ಜೊತೆಗೆ ಕ್ರಿಮಿನಲ್ ವ್ಯಾಜ್ಯಗಳೂ ಇತ್ಯರ್ಥವಾಗುವುದರಿಂದ ಅನೇಕ ವಿಚಾರಣಾಧೀನ ಕೈದಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತದೆ. ಏನೇನೋ ಅಪರಾಧಗಳನ್ನೆಸಗಿ ಜೈಲುವಾಸಿಗಳಾದ ಅವರನ್ನು ಕಾಣಲು ಆರೋಪಿ ವ್ಯಕ್ತಿಗಳ ಸಂಬಂಧಿಕರು ಕೋರ್ಟಿನ ಆವರಣದಲ್ಲಿ ಕಾದಿರುವ ನೋಟ ಮನಕರಗುವಂತಿರುತ್ತದೆ. ಪೋಲೀಸು ಭದ್ರತೆಯಲ್ಲಿ ಜೈಲಿನಿಂದ ವ್ಯಾನುಗಳಲ್ಲಿ ಕೋರ್ಟಿಗೆ ಬಂದು ನ್ಯಾಯಾಧೀಶರೆದುರು ಹಾಜರುಪಡಿಸುವ ದಾರಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿಮಾಡುವ ಒಂದೆರಡು ಕ್ಷಣಗಳ ಸನ್ನಿವೇಶವು ಹೃದಯಸ್ಪರ್ಶಿಯಾಗಿರುತ್ತದೆ.

court4ಗಂಡನನ್ನು ಕಾಣಲು ಬಂದಿರುವ ಹೆಂಡತಿ ಸ್ಕೂಲಲ್ಲಿ ಓದುವ ಮಕ್ಕಳನ್ನು ಕರೆತಂದು ಬೆಳಗ್ಗೆಯಿಂದಲೇ ಗಂಡನ ದರ್ಶನಕ್ಕಾಗಿ ಕಾದಿರುತ್ತಾಳೆ. ಆತ ಬಂದೊಡನೆ ಮಕ್ಕಳನ್ನು ಅಪ್ಪಿಕೊಂಡು ಮುದ್ದಿಸುತ್ತಾನೆ. ಹೆಂಡತಿಯನ್ನೊಮ್ಮೆ ಅಪ್ಪಿಕೊಳ್ಳುವ ಮನಸಿದ್ದರೂ ಆತ ಮಕ್ಕಳ ಅಪ್ಪುಗೆಯಿಂದ ಬಿಡಿಸಿಕೊಳ್ಳಲಾರ. ಪೋಲೀಸಿನವನ ಅವಸರಕ್ಕೆ ಹೆಂಡತಿಯ ಕೈಗಳನ್ನು ಸ್ಪರ್ಶಿಸಲು ಮಾತ್ರ ಸಾಧ್ಯವಾಗಿದೆ ಅವನಿಗೆ. ಕಣ್ಣುಗಳಲ್ಲಿ ನೀರೂರಿರುವುದರಿಂದ ಅವಳಿಗೆ ಗಂಡನ ಪೂರ್ತಿರೂಪವನ್ನು ಕಣ್ತುಂಬಿಕೊಳ್ಳುವುದೂ ಸಾಧ್ಯವಾಗುವುದಿಲ್ಲ.

ಇಷ್ಟು ಚಂದದ ಸಂಸಾರ ಇರುವ ಈತನಿಗೆ ಅಪರಾಧವೆಸಗುವ ಪ್ರಸಂಗ ಹೇಗೆ ಬಂತು? ಈತನ ಅಪರಾಧಕ್ಕೆ ನಿರಪರಾಧಿಗಳಾದ ಹೆಂಡತಿ ಮಕ್ಕಳಿಗೆ ಯಾಕೆ ಶಿಕ್ಷೆ? ಬಂಧನದಲ್ಲಿರುವರು ಜೈಲಲ್ಲಿರುವವನೋ ಅಥವಾ ಹೊರಗಿರುವ ಇವರೋ? ಇವನ ಅಪರಾಧ ಅಥವಾ ನಿರಪರಾಧ ಬೇಗನೇ ಇತ್ಯರ್ಥವಾಗಿ ಮತ್ತೆ ಹೆಂಡತಿ ಮಕ್ಕಳೊಡನೆ ಒಂದಾಗುವ ದಿನ ಎಷ್ಟು ದೂರವಿದೆ? ಅಥವಾ ಇವನ ಅಪರಾಧವು ಸಾಬೀತಾಗಿ ಪಡೆಯುವ ಶಿಕ್ಷೆಯು ಅವನನ್ನು ಹೊಸ ಮನುಷ್ಯನನ್ನಾಗಿ ರೂಪಿಸುವುದೆ? ಇವೆಲ್ಲ ಪ್ರಶ್ನೆಗಳಿಗೆ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಮೇಲಿಂದ ಎಲ್ಲವನ್ನೂ ಕಾಣುತ್ತಿರುವ ಆ ನ್ಯಾಯ ದೇವತೆಯೇ ಉತ್ತರಿಸಬೇಕು.

ಒಮ್ಮೆ ಕೋರ್ಟಿನ ಆವಾರದಲ್ಲಿ ಹಾದು ಹೋಗುತ್ತಿದ್ದಾಗ ರಿಪೇರಿಗಾಗಿ ತೆಗೆದಿಟ್ಟ ಸಾಕ್ಷಿ ನುಡಿಯುವ ಕಟಾಂಜನದಲ್ಲಿ ಮಗುವೊಂದನ್ನು ಮಲಗಿಸಿದ್ದು ಕಣ್ಣಿಗೆ ಬಿತ್ತು. ಹಾಲು ಕುಡಿದ ಹಸುಗೂಸು ನಿದ್ದೆಗೆ ಜಾರಿದಾಗ ತೊಟ್ಟಿಲಂತಿದ್ದ ವಿಟನೆಸ್ ಬಾಕ್ಸನಲ್ಲಿ ಶಿಶುವನ್ನು ಮಲಗಿಸಿ ಅವಳಮ್ಮ ಅವಸರದಲ್ಲಿ ಗಂಡನನ್ನು ಕಾಣಲುಹೋಗಿದ್ದಳೋ ಏನೋ. “ಮೈ ಲಾರ್ಡ್, ನಾನು ನಿರಪರಾಧಿ! ’ಎಂದು ಮಗು ಹೇಳುತ್ತಿರುವಂತೆ ಭಾಸವಾಗುತ್ತಿತ್ತು.

ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬೀಳುವ ಅಂತಾರಾಷ್ಟ್ರೀಯ ಅಪರಾಧಿಗಳನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಗುತ್ತದೆ. ಆಫ್ರಿಕಾದ ಬಡದೇಶಗಳ ಯುವಕರು ಈ ಅಪರಾಧದಲ್ಲಿ ಹೆಚ್ಚಾಗಿ ಸಿಕ್ಕಿಬೀಳುತ್ತಾರೆ. ಒಮ್ಮೆ ನಾನು ಕೋರ್ಟಿನಲ್ಲಿ ಮೆಟ್ಟಿಲಿಳಿಯುತ್ತಿರುವಾಗ ಕಪ್ಪು ವರ್ಣೀಯ ಸ್ತ್ರೀಯಳು ಕಣ್ಣುಗಳಲ್ಲಿ ನೀರು ತುಂಬಿಕೊಂಡು ಕೂತಿದ್ದಳು. ಅವಳ ಹದಿನೈದು ಹದಿನಾರರ ಹರೆಯದ ಮಗ ಮಾದಕ ವಸ್ತು ಕಳ್ಳಸಾಗಾಣಿಕೆಯವರ ಜಾಲದೊಳಗೆ ಸೇರಿಕೊಂಡು ಇಂಡಿಯಾದಲ್ಲಿ ಸಿಕ್ಕಿಬಿದ್ದಿದ್ದ. ಸುದ್ದಿ ತಿಳಿದಾಗ ತಂದೆ ತಾಯಿಯರಿಬ್ಬರಿಗೂ ಶಾಕ್ ಆಗಿದೆ. ಉತ್ತಮ ನಡತೆಯನ್ನೇ ಹೊಂದಿದ್ದ ಮಗನು ಫುಟಬಾಲ್ ಆಟದಲ್ಲಿ ಹೆಸರು ಗಳಿಸಿ ಎಲ್ಲರ ಪ್ರೀತಿಪಾತ್ರನಾಗಿರುವಾಗ ಅಚಾನಕ್ಕಾಗಿ ಹೀಗೆ ಎಂದು ಗೊತ್ತಾದರೆ!

court3ಇವಳು ಕಾದಿರುವಾಗಲೇ ಉತ್ತಮ ಮೈಕಟ್ಟಿನ ಆ ಹುಡುಗನನ್ನು ಪೋಲೀಸರು ಕರೆದು ತಂದರು. ಹುಡುಗ ಹಾಲಿವುಡ್ ಹೀರೋ ವಿಲ್ ಸ್ಮಿತ್ ನಂತಿದ್ದ. ಪೋಲೀಸಿನವರು ತಾಯಿ ಮಗನನ್ನು ಮಾತಾಡಲು ಒಂದಷ್ಟು ಹೊತ್ತು ಬಿಟ್ಟರು. ಆದರೆ ಅವರಿಬ್ಬರೂ ಮಾತೇ ಆಡಲಿಲ್ಲ. ಭಾರವಾದ ಭಾವದಲ್ಲಿ ಮಾತು ಮರೆತಿದ್ದರು. ಪೋಲೀಸರು ಅವಸರಿಸಿದಾಗ ಅವರ ಜೊತೆ ನಡೆದು ಕಾರಿಡಾರಿನ ಆ ತುದಿ ತಲುಪಿ ” ಲವ್ ಯು ಮಮ್ಮಾ, ಪ್ಲೀಸ್ ಪ್ರೇ ಫಾರ್ ಮಿ ” ಎಂದು ಕೂಗಿದ. ಅವನ ಧ್ವನಿ ಕೋರ್ಟಿನ ಇಡೀ ಅಂತಸ್ತನ್ನು ಅಲುಗಾಡಿಸಿತು! ನಾಗರಿಕ ಸಮಾಜದಲ್ಲಿ ಮುಗ್ಧರು ಅಪರಾಧಿಗಳಾಗುವ, ಅಮಾಯಕರು ನೋವನನುಭವಿಸುವ ವಿಷಚಕ್ರದಿಂದ ಮುಕ್ತಿ ಎಂದು?

ಅಪರಾಧಗಳೇ ಇಲ್ಲದ ಸಮಾಜವೊಂದರ ಹಂಬಲವು ಆದರ್ಶ ಪರಿಕಲ್ಪನೆಯಿರಬಹುದಾದರೂ ಪ್ರಸ್ತುತ ವ್ಯವಸ್ಥೆಯ ಮೂಲಕವೇ ಅವಿಳಂಬ ನ್ಯಾಯವೊದಗಿಸುವ ಮೂಲಕ ಸಾಮಾನ್ಯರ ಬವಣೆಗಳನ್ನು ಕಡಿಮೆ ಮಾಡುವುದು ಅಸಾಧ್ಯದ ಮಾತಾಗಬಾರದು. ಯಾಕೆಂದರೆ ವಿಳಂಬದ ನ್ಯಾಯವೂ ಅನ್ಯಾಯವೆ ಎಂಬುದು ನಮ್ಮ ತಂದೆಯವರ ಪ್ರಕರಣದಲ್ಲೇ ನನಗೆ ಅನಿಸಿದೆ. ಪಿತ್ರಾರ್ಜಿತ ಆಸ್ತಿಯ ರೆಕಾರ್ಡ್ ಉತಾರದಲ್ಲಿ ಹೆಸರು ಕಡಿಮೆಯಾಗಿದ್ದು ನಮ್ಮ ತಂದೆಯವರ ಗಮನಕ್ಕೆ ಬಂದಾಗ, ಅದನ್ನು ಸರಿಪಡಿಸಲು ಸುಮಾರು ಹತ್ತು ವರ್ಷಗಳಿಂದ ಕೋರ್ಟು ಕಚೇರಿಗಳನ್ನು ಅಲೆಯುತ್ತಿದ್ದರೂ ಅವರಿಗಿನ್ನೂ ನ್ಯಾಯ ಸಿಕ್ಕಿಲ್ಲ.

ಸ್ವಯಂಕೃತವಲ್ಲದ ಒಂದು ದೋಷವನ್ನು ಸರಿಪಡಿಸಿಕೊಳ್ಳಲೂ ಎಂಬತ್ತು ವರ್ಷ ಮೀರಿದ ನಿವೃತ್ತ ಶಿಕ್ಷಕರೊಬ್ಬರು ಇಷ್ಟು ಅಲೆದಾಟ ಮಾಡಬೇಕಾಗುತ್ತದೆ ಅಂದರೆ ಅದು ನಮ್ಮ ವ್ಯವಸ್ಥೆ ಅಥವಾ ಅವ್ಯವಸ್ಥೆಯ ಮೇಲಿನ ಭಾಷ್ಯವಲ್ಲವೆ? ಬಹುಶ: ಇಂಥ ಕೋಟ್ಯಾಂತರ ಜನರಿಗೆ ಸಕಾಲದಲ್ಲಿ ನ್ಯಾಯ ದೊರಕಿಸಲಾಗದ ಅಸಹಾಯಕತೆಯಿಂದಲೇ ನಮ್ಮ ಜ್ಯೇಷ್ಠ ನ್ಯಾಯಮೂರ್ತಿಗಳು ಭಾವುಕರಾಗಲು ಕಾರಣವಿರಬಹುದೇ?

‍ಲೇಖಕರು admin

April 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. lalitha sid

    ಈ ಲೇಖನ ಸಕಾಲಿಕ. ನ್ಯಾಯಮೂರ್ತಿಗಳ ಸಾರ್ವಜನಿಕ ಕಣ್ಣೀರನ್ನು ತಮಾಷೆ ಮಾಡಿದವರೂ ಉಂಟು. ಆ ಫೋಟೋ ಪತ್ರಿಕೆಯಲ್ಲಿ ನೋಡಿದಾಗಿನಿಂದ ನನ್ನೊಳಗೂ ಇಂತಹುದೇ ಆಲೋಚನೆಗಳು ಬಂದಿವೆ. ವ್ಯವಸ್ಥೆಯ ತಪ್ಪು ಸರಿಗಳ ಗುರುತಿಸುವ ನ್ಯಾಯಾಧೀಶರನ್ನೇ ಅಸಹಾಯಕ ಮಾಡಿರುವ ನಮ್ಮ ಈ ಭಂಡ ವ್ಯವಸ್ಥೆ ಎಂದು ಸರಿಹೋದೀತು ?

    ಪ್ರತಿಕ್ರಿಯೆ
  2. Shama, Nandibetta

    “ಬಹುಶ: ಇಂಥ ಕೋಟ್ಯಾಂತರ ಜನರಿಗೆ ಸಕಾಲದಲ್ಲಿ ನ್ಯಾಯ ದೊರಕಿಸಲಾಗದ ಅಸಹಾಯಕತೆಯಿಂದಲೇ ನಮ್ಮ ಜ್ಯೇಷ್ಠ ನ್ಯಾಯಮೂರ್ತಿಗಳು ಭಾವುಕರಾಗಲು ಕಾರಣವಿರಬಹುದೇ?”

    “ನ್ಯಾಯ ನೀಡಿಕೆಯಲ್ಲಿ ವೈಯಕ್ತಿಕ ಒಲವು ಮತ್ತು ಮಾನವ ಸಂವೇದನೆಗಳನ್ನು ಮೀರಿ ಕಾರ್ಯನಿರ್ವಹಿಸುವಂಥವರು ಸದಾ ಭಾವನಾತ್ಮಕ ಅಭಿವ್ಯಕ್ತಿಯಿಂದ ಅತೀತರಾಗುಳಿಯಬೇಕೇ?”

    “ನಾಗರಿಕ ಸಮಾಜದಲ್ಲಿ ಮುಗ್ಧರು ಅಪರಾಧಿಗಳಾಗುವ, ಅಮಾಯಕರು ನೋವನನುಭವಿಸುವ ವಿಷಚಕ್ರದಿಂದ ಮುಕ್ತಿ ಎಂದು?”

    ನನ್ನನ್ನೂ ಬಹಳ ಬಾರಿ ಕಾಡಿದ ಪ್ರಶ್ನೆಗಳಿವು. ಲೇಖನ ೋದಿ ಮುಗಿವ ಹೊತ್ತಿಗೆ ಅರಿವಿಲ್ಲದೆಯೇ ಕಣ್ಣಿಂದ ಹನಿ ಜಾರಿತ್ತು.

    ಪ್ರತಿಕ್ರಿಯೆ
  3. Anonymous

    ನ್ಯಾಯದಾನ ಮಾಡುವ ನ್ಯಾಯಮೂರ್ತಿಗಳೇ ವ್ಯವಸ್ಥೆಯ ಬಗ್ಗೆ ಮಾತಾಡುತ್ತ ಕಣ್ಣೀರು ಹಾಕುತ್ತಾರೆಂದರೆ ಹದಗೆಟ್ಟ ವ್ಯವಸ್ಥೆಯ ಬಗ್ಗೆ ಅವರ ಅಸಹಾಯಕತೆ ಯಾವ ಮಟ್ಟದ್ದೆಂದು ಈ ಸಮಾಜಕ್ಕೆ ಅರ್ಥವಾಗಬೇಕು. ಯಾವುದೇ ಕಾರಣಕ್ಕು ಆ ಕಣ್ಣೀರು ತಮಾಷೆಗೆ ವಸ್ತು ಆಗಬಾರದು.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ
  4. Jayashree Deshpande

    ಪ್ರಜಾಸತ್ತೆಯ ಪ್ರಬಲ ಅ೦ಗವೆನಿಸಿರುವ ನ್ಯಾಯಾ೦ಗದಲ್ಲಿ ನ್ಯಾಯಾಧೀಶರೂ ಅಸಹಾಯಕರಾಗುವರೆ? ಹೌದು ಅನಿಸುತ್ತದೆ, ಏಕೆ೦ದರೆ ನ್ಯಾಯಾಧೀಶರಾಗಿದ್ದ ನನ್ನ ಪತಿ ಸಹ ಕೆಲವೊ೦ದು ಬಾರಿ ಇ೦ಥದೇ ಅಸಹಾಯಕ ತಳಮಳವನ್ನು ಮೌನವಾಗಿ ಅನುಭವಿಸಿದ್ದನ್ನು ನಾನು ಕಣ್ಣಾರೆ ಕ೦ಡಿದ್ದೇನೆ. ಒಮ್ಮೆ ಕೋರ್ಟಿನಲ್ಲಿ ಗ೦ಡನ ಹಿ೦ಸೆ ತಾಳಲಾಗದೆ ವಿಚ್ಛೇದನ ಕೋರಿ ಬ೦ದಿದ್ದ ಅನಕ್ಷರಸ್ಥ, ಸ್ವಾವಲ೦ಬಿಯಲ್ಲದ ಹೆ೦ಡತಿಯನ್ನು ಕಾನೂನಿನ ಸಾಕ್ಷ್ಯಾಧಾರಗಳ ಬಲದಿ೦ದ (ಇದು ಡೊಮೆಸ್ಟಿಕ್ ವಾಯೋಲೆನ್ಸ್ ಕಾಯಿದೆ ಪರಿವರ್ತನೆಯಾಗುವದಕ್ಕೂ ಮೊದಲಿನ ಘಟನೆ) ಮತ್ತೆ ತನ್ನಲ್ಲಿಗೆ ಮರಳಬೇಕೆ೦ಬ ಕೋರ್ಟ್ ಆಜ್ಞೆ ಪಡೆದ ಗ೦ಡನನ್ನು ನೋಡಿ, ಆ ಅಸಹಾಯಕ ಹುಡುಗಿ ನ್ಯಾಯಾಲಯದಲ್ಲೇ ಹೃದಯವಿದ್ರಾವಕವಾಗಿ ರೋದಿಸಿದ್ದು ಅವರ ಮನಸ್ಸನ್ನು ಕಲಕಿಬಿಟ್ಟಿತ್ತು…ಆದರೆ ಏನು ಮಾಡುವುದೂ ಸಾಧ್ಯವಿರಲಿಲ್ಲ.ಅಪೀಲು ಹೋಗುವ ಶಕ್ತಿ ಅವಳಲ್ಲಿರಲಿಲ್ಲ. ಕಾನೂನು ಕತ್ತೆ ಅನ್ನುತ್ತಾರೆ. ಇ೦ಥ ಪ್ರಸ೦ಗಗಳಲ್ಲಿ ಅದು ನಿಜವೇನೋ ಅನಿಸುತ್ತದೆ.

    ಪ್ರತಿಕ್ರಿಯೆ
    • Rajeev N Nayak

      ಜಯಶ್ರೀ ಮ್ಯಾಡಮ್, ನಿಮ್ಮ ಅಭಿಪ್ರಾಯಗಳಿಗಾಗಿ ಧನ್ಯವಾದಗಳು…. Jolly LLB ಎಂಬ ಉತ್ತಮ ಹಿಂದಿ ಸಿನಿಮಾವೊಂದರಲ್ಲಿ ಸೌರಭ್ ಶುಕ್ಲಾ ಜಡ್ಜ್ ಆಗಿ ಅದ್ಭುತ ಅಭಿನಯ ನೀಡಿದ್ದರು. ಜಡ್ಜ್ ರಿಗೆ ಕೇಸುಗಳ ಒಳ ಸತ್ಯ ಗೊತ್ತಾದರೂ ಸಾಕ್ಷಿ ಪುರಾವೆಗಳ ಬರುವಿಕೆಗಾಗಿ ಕಾದು ನಿರಾಶರಾಗಿ ಕಾನೂನು ಪ್ರಕಾರ ನ್ಯಾಯ (?) ನೀಡಬೇಕಾಗುವ ಅಸಹಾಯಕತೆಯನ್ನು ಚೆನ್ನಾಗಿ ಅಭಿವ್ಯಕ್ತಿಸಿದ್ದರು. ನಿಮ್ಮ ಪ್ರತಿಕ್ರಿಯೆ ಮತ್ತೆ ನನಗೆ ಆ ಸಿನಿಮಾ ನೆನಪಿಸಿತು.
      ಲೇಖನಕ್ಕೆ ಸ್ಪಂದಿಸಿದ ಲಲಿತಾ, ಶಮಾ ಮತ್ತು ಅನುಪಮಾರಿಗೂ ವಂದನೆಗಳು!….ರಾಜೀವ

      ಪ್ರತಿಕ್ರಿಯೆ
  5. ಅಹಲ್ಯಾ ಬಲ್ಲಾಳ್

    ಕೋರ್ಟು-ಕಛೇರಿ ಅಂತ ಅಲೆದಾಟ ನಡೆಸಿದವರ/ನಡೆಸಿದವರನ್ನು ಹತ್ತಿರದಲ್ಲೇ ಕಂಡವರ ಪಾಲಿಗೆ ಈ ಲೇಖನದಲ್ಲಿನ ಎಲ್ಲ ಅಂಶಗಳೂ ಹೌದು, ನಿಜ ಎನಿಸುವಂಥವೇ.

    ಬರಹಗಾರರ ಸಂವೇದನೆ ಹೀಗೇ ಜೀವಂತವಾಗಿರಲಿ. ಸೂಕ್ಷ್ಮ ಕಣ್ಣಿನ ಅವಲೋಕನ ಹೀಗೇ ನಡೆಯುತ್ತಿರಲಿ.

    ಒಂದು ಉತ್ತಮ ಓದಿಗಾಗಿ ಧನ್ಯವಾದಗಳು, ರಾಜೀವ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: