ಅವರೊಬ್ಬರಿದ್ದರು..

ರಶ್ಮಿ ನವೀನ್  

ಉತ್ತರ ಕರ್ನಾಟಕದೊಳಗ ಹಿಂದು ಮುಸ್ಲಿಂ ಸೌಹಾರ್ದದ ಪರಂಪರೆ ಬದುಕಿ ಗೊತ್ತು. ವ್ಯಾಖ್ಯಾನಿಸಿ ಗೊತ್ತಿಲ್ಲ.

ನಾನು ನನ್ನ ಬದುಕಿನ ಮೊದಲ 20 ವರ್ಷಗಳನ್ನು ಒಬ್ಬ ಪಠಾಣ್‌ ಮನೆಯಲ್ಲಿಯೇ ಕಳೆದೆ. ನಮ್ಮ ಮನೆಯ ಮಾಲೀಕರಾಗಿದ್ದರು ಅವರು.

ನಾವು ಸ್ವಂತ ಮನೆ ಆದ ಮೇಲೂ ಹತ್ತು ವರ್ಷ ಅದೇ ಮನೆಯಲ್ಲಿದ್ದೆವು. ಕಾರಣ ಆ ಆತ್ಮೀಯತೆಯನ್ನು ಬಿಟ್ಟು ಹೋಗುವುದು ಅಸಾಧ್ಯವಾಗಿತ್ತು.

ಹದಿನೆಂಟು ಕಮಾನುಗಳ ಮನೆ ಅದು. ಚೌಕಾಕಾರದ ಅಂಗಳ, ಸುತ್ತಲೂ ಎಲ್‌ ಶೇಪಿನಲ್ಲಿ 18 ಕಮಾನುಗಳು. ಆ ಅಂಗಳದಲ್ಲಿಯೇ ನಾನು ಸೂಫಿತನವನ್ನೂ, ವಚನಕಾರರನ್ನೂ, ಕೀರ್ತನಕಾರರನ್ನೂ ಕೇವಲ ಜೀವಪರವಾಗಿ ಕಲಿತಿದ್ದು. ಜಾತಿಪರವಾಗಿ ಅಲ್ಲ.

ಅವರ ನೆನಪು.. ಇಲ್ಲೊಂದು ಬರಹದಲ್ಲಿ..


ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ…

ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ ಅವರೊಟ್ಟಿಗೆ ಮಾತಾಡ್ತಿರಲಿಲ್ಲ. ಬೇವಿನ ಮರದ ನೆರಳಾಗ ಕುಂತು ನೀಲಿ ಆಕಾಶದೊಳಗ ಹಾದು ಹೋಗುವ ಬಿಳೀ ಮುಗಿಲು ನೋಡ್ಕೊಂತ ಅವರ ಕೈ ಲೆಕ್ಕಾ ಹಾಕ್ತಿದ್ವು.

ಅವರ ಹೆಂಡತಿ ಜಿಯಾ, ಮೊಮ್ಮಾ ಅಂತ ಕರೀತಿದ್ವಿ. ಕುರ್ಚಿಯಿಂದ ‘ಜಿಯಾ… ಚಾಯ್‌.. ಪಿಲಾತೆ’ ಅಂತ ಕೇಳಿದ್ರ ಸಾಕು, (ಉತ್ತರ ಸಿಕ್ತು ಅಂತನೇ ಅರ್ಥ.)

ಛಾ ತರೂತನಾನೂ ಅವರ ಗುಡಾಣದಂಥ ಹೊಟ್ಟಿ ಮ್ಯಾಲೆ ನನ್ನ ಕೂಸಿನ್ಹಂಗ ಮಲಗಿಸಿಕೊಂಡು ಗುಳುಗುಳು ಮಾಡೋರು. ನನ್ನ ನಗಿ ಅಲಿಅಲಿಯಾಗಿ ಹರಡ್ತಿತ್ತು. ಏಳುವರಿ ಅಡಿ ಎತ್ತರದ ಅಜಾನುಬಾಹು ನನ್ನ ತಾಯಾ. ಅವರ ಕರಡಿ ಅಪ್ಪುಗೆಯೊಳಗ ನಾನು ಮಾತ್ರ ಯಾವತ್ತಿಗೂ ಕೂಸೇ.

ಯಾರಿಗೂ ಇರಲಾರದ ಸಲಗಿ ನನಗ ಇತ್ತು. ‘ಆಸ್‌ಮಾನ್‌ಸೆ ಕ್ಯಾ ಆಪ್‌ಕೊ ಅಲ್ಲಾತಾಲಾ ನೆ ಜವಾಬ್‌ ದಿಯಾ?’ (ಆಕಾಶದಿಂದ ಆ ದೇವರು ನಿಮಗ ಉತ್ತರ ಕೊಟ್ರೇನು?) ಅಂತ ಕೇಳಿದ್ರ ಅದಕ್ಕೂ ಗುಳುಗುಳು ಮಾಡೂದೆ ಉತ್ತರ ಆಗಿರ್ತಿತ್ತು.

ನಾವೆಷ್ಟೇ ದೊಡ್ಡವರು ಆಗಿದ್ರೂ ಈ ಕರಡಿ ಅಪ್ಪುಗೆ, ಈ ಗುಳುಗುಳು ಮತ್ತು ಅವರ ಮಡಿಲೊಳಗ ಮಗುವಾಗಿ ಮಲಗುವ ವಾತ್ಸಲ್ಯದಿಂದ ಮಾತ್ರ ಯಾವತ್ತೂ ವಂಚಿತರಾಗಿರಲಿಲ್ಲ. ಆದ್ರ ನಾವು ಬೆಳದ್ಹಂಗ ನಮ್ಮ ಪ್ರಶ್ನೆಗಳು ಭಿನ್ನ ಆಗಿರ್ತಿದ್ದವು.

ಬ್ಯಾಸಗಿ ರಾತ್ರಿ ಅದು. ಸ್ವಚ್ಛ ಆಕಾಶ. ಚುಕ್ಕಿ ಅಲ್ಲಲ್ಲೇ ಮಿಣಮಿಣ ಅಂತಿದ್ವು. ದೊಡ್ಡ ಅಂಗಳ. ಬೇವಿನ ಮರ, ತೆಂಗಿನ ಮರ, ಬದಾಮಿ ಮರದ ನೆರಳನಾಗ ನಾವೆಲ್ಲ ಕುಂತು ಆಕಾಶ ನೋಡ್ತಿದ್ವಿ. ಹೋಳಿ ಹುಣ್ಣಿವಿ ಸಮೀಪ ಇತ್ತು.

ಒಂದೆರಡೇ ಮೋಡದ ತುಂಡುಗಳು ದುಡುದುಡು ಓಡಿ ಹೊಂಟಿದ್ವು. ಅದೇ ಆಗ ಕಾಲು ಬಂದ ಉಡಾಳ ಕೂಸಿನ್ಹಂಗ. ಅವಾಗ ತಾಯಾನ ಮಡಿಲೊಳಗ ಕುಂತು ದ್ರಾಕ್ಷಿ ತಿನ್ಕೊಂತ.. ‘ಖರೇನೆ ನಿಮಗ ದೇವ್ರು ಉತ್ರಾ ಕೊಡ್ತಾನ? ಖರೇನೆ ದೇವರ ಮನಿ ಆಕಾಶದೊಳಗ ಐತೇನು? ನನಗೂ ಒಮ್ಮೆ ತೋರಸ್ರಿ…’ ಎಲ್ಲಾ ಪ್ರಶ್ನೆಗೂ ಉತ್ತರ ಕೊಡೂಕಿಂತ ಮೊದಲು ಉದ್ದಾನುದ್ದ ದ್ರಾಕ್ಷಿ ಆರಸಿ ಬಾಯಿಗೆ ಹಾಕ್ತಿದ್ರು.
ಆಮೇಲೆ ತಾಯಾ ಮಾತಾಡಾಕ ಸುರು ಮಾಡಿದ್ರು. ‘ದೇವರು ಆಕಾಶದೊಳಗ ಇರೂದಿಲ್ಲ. ದೇವರು ನಮ್ಮೊಳಗ ಇರ್ತಾನ. ನಮ್ಮ ಮನಸಿನಾಗ ಇರ್ತಾನ. ಮನಸನ್ನು ಆಕಾಶದಷ್ಟು ವಿಷಾಲ ಮಾಡಿಕೊಂಡು ಅವನಿಗೆ ನಮ್ಮೊಳಗೇ ಹುಡುಕಬೇಕು. ಅವಾಗ ಮನಸ ಮ್ಯಾಲೆ ಕವಿದಿರುವ ಮೋಡಗಳೆಲ್ಲ ಚದುರಿ ಹೋಗ್ತಾವ. ನಮ್ಮ ಚಿಂತಿನೂ ಹಂಗೆ. ನಮ್ಮನ್ನೇ ನಾವು ನೋಡ್ಕೋಬೇಕು. ನಮ್ಮನ್ನ ಆವರಿಸಿರುವ ಮೋಡಗಳು ಚದರುವ ಹಂಗ ಮಾಡಬೇಕು. ಆಗ ಪರಿಹಾರದ ಚುಕ್ಕಿಯ ಹೊಳಹು ನಮಗೇ ಹೊಳೀತಾವ’

ನಮ್ಮೊಳಗಿನ ದೇವರನ್ನು ಹುಡುಕುವ ಪರಿ ಮಾತ್ರ ನಾವೇ ಕಂಡುಕೋಬೇಕು. ನಮ್ಮ ದೇವರನ್ನು ನಾವೇ ಕಾಣಬೇಕು ಅಂದ್ರು.
‘ಅಂದ್ರ, ನಿಮ್ಮ ದೇವರು ಬ್ಯಾರೆ, ನನ್ನ ದೇವರು ಬ್ಯಾರೆ ಏನು’ ಅಂದೆ.
‘ದೇವರು ಅಂದ್ರ ಅದೊಂದು ಸತ್ಯ. ನಿನ್ನ ಸತ್ಯವೇ ಬೇರೆ, ನನ್ನ ಸತ್ಯವೇ ಬೇರೆ. ಒಂದು ಪರಿಪೂರ್ಣ ಸತ್ಯವಾಗಿರೂದು ಸಾಧ್ಯವೇ ಇಲ್ಲ. ಒಂದು ಸತ್ಯಕ್ಕೆ ನಾಲ್ಕಲ್ಲ ಹದಿನಾರು ಆಯಾಮ ಇರ್ತಾವ. ಒಂದು ಇನ್ನೊಂದಕ್ಕ ಸತ್ಯ ಅಲ್ಲ ಅಂತ ಅನ್ನಸಬಹುದು’.
‘ಹಂಗಾದ್ರ ಎಲ್ಲಾನೂ ಸತ್ಯ ಅಲ್ಲ, ಎಲ್ಲಾನೂ ಸುಳ್ಳಲ್ಲ ಅಂತ ಅಂತೀರೇನು? ಯಾರಿಗೂ ಕೆಡುಕಾಗದೇ ಇರೂದು ಸತ್ಯ. ನಮ್ಮೊಳಗಿನ ಸತ್ಯವನ್ನು ನಾವೇ ಹುಡುಕಬೇಕು.’

ಹಿಂಗೇ ಸೂಫಿ ಸಂತನಹಂಗ ಮಾತಾಡತಿದ್ದ ತಾಯಾಗ ಸಿಟ್ಟು ಬಂದ್ರ ಮಾತ್ರ ಅವರೇ ಹೇಳೂಹಂಗ ಹೈವಾನ್‌ ಆಗ್ತಿದ್ರು. ಸಿಕ್ಕಿದ್ದು ತೊಗೊಂಡು ಆಳಮಕ್ಕಳಿಗೆ ಹೊಡೀತಿದ್ರು.
ಅವರ ಆ ಅವತಾರ ಮಾತ್ರ ದಿಗಿಲು ಹುಟ್ಟಸ್ತಿತ್ತು. ಯಾಕ ಅವಾಗ ಅವರೊಳಗಿನ ದೇವರು ಮಲಗಿರ್ತಿದ್ದ? ಅಥವಾ ಅವರೇ ಹೇಳುಹಂಗ ಆ ದೇವರೇ ಇಲ್ಲವಾಗ್ತಿದ್ದನಾ? ಗೊತ್ತಿಲ್ಲ. ಈಗ ಹೇಳಾಕ ಅವರಿಲ್ಲ.
ಆದ್ರ ಅವರು ತೋರಿದ ಆ ದಾರಿ ಈಗಲೂ ಭಾಳಷ್ಟು ಸಲೆ ಖರೆ ಅನ್ನಸ್ತದ. ನಮ್ಮ ಜೀವನದಾಗ ಒಂದು ಹಂತ ಎಂಥಾದ್ದು ಬರ್ತದ ಅಂದ್ರ, ‘ಎಲ್ಲಾರಿಗೆ ನಾವು ಬ್ಯಾಡಾಗೇವಿ. ನಾವಿರಲಿಲ್ಲಂದ್ರೂ ಎಲ್ಲಾನೂ ನಡದು ಹೋಗ್ತದ. ನಾವು ಎಲ್ಲಿಯೂ ಅನಿವಾರ್ಯ ಅಲ್ಲ. ನಾವಿರಲಿಲ್ಲ ಅಂದ್ರ ನಮಗಿರುವ ಕಷ್ಟಗಳು ನಮಗಷ್ಟೇ ಇರೂದಿಲ್ಲ. ಆದ್ರ ಉಳದೋರು ಆರಾಮ ಇರ್ತಾರ’ ಅನ್ನೂದೊಂದು ಭಾವ ಗಟ್ಟಿಯಾಗಾಕ ಸುರುಮಾಡ್ತದ. ಇದೊಂಥರ ನಮ್ಮ ಜೀವನಾಸಕ್ತಿ, ಆಸ್ಥೆಯನ್ನೇ ಕೊಂದು ಬಿಡ್ತದ.

ಏನು ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಅಷ್ಟೆ… ಯಾರಿಗರೆ ಯಾಕ ಮಾಡಬೇಕು?’ ಇಂಥವೇ ಅಸಮಾಧಾನಗಳು ಗೂಡು ಕಟ್ತಾವ. ಈ ಗೂಡಿನೊಳಗ ಸಾವನ್ನು ಪ್ರೀತಿಸುವ ಸೈತಾನ ವಾಸಸ್ತಾನ. ಜೀವದ ಹಕ್ಕಿಯನ್ನ ತನ್ನ ಗೂಡಿನೊಳಗ ಮೆತ್ತನೆಯ ಹಾಸು ಮಾಡಿಕೊಂಡು ಮಲಗಿ ಬಿಡ್ತಾನ. ಅದು ಕೊಸರಾಡ್ತದ. ಒದ್ದಾಡ್ತದ. ಉಸಿರುಗಟ್ಕೊಂಡು, ಬದುಕಾಕ ಒಂದು ಸಣ್ಣ ಎಳಿ ಸಿಕ್ರೂ ಸಾಕು ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕುಂತಿರ್ತದ. ನಿದ್ದಿ ಅನ್ನೂದು ಅದಕ್ಕ ಬಂಗಾರದ್ಹಂಗ ಭಾಳ ತುಟ್ಟಿ.

ಹಿಂಗಾದಾಗಲೆಲ್ಲ ಎಲ್ಲಾರು ಮಲಕ್ಕೊಂಡ ಮ್ಯಾಲೆ ಬಾಲ್ಕನಿಗೆ ಬಂದು ನಿಂದರ್ತೀನಿ. ಸ್ವಚ್ಛ ಮುಗಲನಾಗ ಮೋಡಗಳೂ ಓಡತಿರ್ತಾವ. ಕೆಲವೊಮ್ಮೆ ಮಂದ. ಕೆಲವೊಮ್ಮೆ ಅಗ್ದಿ ಚುರುಕಾಗಿ.
ನಮ್ಮ ಪರಿಸ್ಥಿತಿಗೆ ಕಾರಣ ಹುಡುಕೂದೇ ಆಕಾಶ ನೋಡ್ಕೋಂತ ಮನಸಿನೊಳಗ ಹಣಕಿ ಹಾಕ್ತೀವಿ.

ಯಾರಿಗೂ ನಾವು ಅನಿವಾರ್ಯವಿಲ್ಲ ಅಂತ ಅಂದ್ಕೊಂಡ ಕ್ಷಣದ್ಹಂಗೇ ಒಂದರೆ ನಿಮಿಷ ಮರುದಿನದ ಬೆಳಗು ನಾನಿಲ್ಲದೆ, ನನ್ನ ಗಂಡ, ಮಕ್ಕಳಿಗೆ ಹೆಂಗಿರಬಹುದು, ನಾನಿಲ್ಲದ ಸತ್ಯವನ್ನು ನನ್ನ ಹೆತ್ತವರು ಹೆಂಗ ಒಪ್ಕೊಬಹುದು ಅನ್ನೂ ಪ್ರಶ್ನೆಗಳು ಈ ಮೋಡದೊಂದಿಗೆ ಹಾದು ಹೋಗ್ತಾವ.

ಮತ್ತ ಹಂಗೇ ಆಕಾಶ ಸ್ವಚ್ಛ ಆಗ್ತದ. ಮನಸೂ. ಕೆಲವೊಮ್ಮೆ ಆಕಾಶದೊಳಗ ಎಲ್ಲೊ ಚುಕ್ಕಿಯಾಗಿ ನನ್ನನ್ನ ನೋಡ್ತಿರುವ ತಾಯಾ, ಮೊಮ್ಮಾ ನೆನಪಾಗ್ತಾರ.

ಎಂಥ ಸಂದಿಗ್ಧ ಪರಿಸ್ಥಿತಿಯೊಳಗೂ ನಮ್ಮ ಇರುವಿಕೆಗೊಂದು ಅರ್ಥ ಅದ. ಆ ಪರಿಸ್ಥಿತಿಯೂ ನಮ್ಮ ಜೀವಕ್ಕ, ಜೀವನಕ್ಕ ಒಂದು ಅರ್ಥ ನೀಡ್ತದ. ಈ ಅರ್ಥದ ಹೊಳಹು ಹೊಳದಾಗ ಆಕಾಶದಾಗ ಬೂದು ಬಣ್ಣ ಹೋಗಿ, ತಿಳಿ ಗುಲಾಬಿ ಬಣ್ಣ ಮೂಡ್ತಿರ್ತದ. ಜೊತಿಗೆ ಸೂರ್ಯನೂ ಹುಟ್ಟತಿರ್ತಾನ. ಅದರೊಟ್ಟಿಗೆ ನಾವೂ ಮತ್ತ ಹುಟ್ಟಿ ಬರಬೇಕು. ಆ ಹೊಸ ಹೊಳಹಿನೊಂದಿಗೆ. ನಮ್ಮ ಸತ್ಯದ ದೇವರು ನಮಗ ಕಾಣುವ ಹೊತ್ತದು. ಮುಗಿಲಮಾರಿಯೊಳಗ ದೇವರು ನಕ್ಕು ಮುಂದ ಸಾಗೂ ಹೊತ್ತದು. ನೋಡುವ ಕಣ್ಣುಬೇಕು. ಹುಡುಕುವ ಮನಸು ಬೇಕು. ತಾಯಾನ್ಹಂಗ..!

‍ಲೇಖಕರು avadhi

April 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Shyamala Madhav

    ಮನಸ್ಪರ್ಶಿ ಬರಹ, ರಶ್ಮೀ. ಓದಿ ಖುಶಿಯಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: