ನನ್ನ ಬರಹದಲ್ಲಿ ತವರಿನ ಗಂಧವಿದೆ..


ಸಾಹಿತ್ಯ, ಪತ್ರಿಕೋದ್ಯಮ, ಯಕ್ಷಗಾನ- ಈ  ಮೂರೂ ರಂಗಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗಾಯತ್ರೀ ರಾಘವೇಂದ್ರ. ಪತಿ ರಾಘವೇಂದ್ರ ಬೆಟ್ಟಕೊಪ್ಪ ಪತ್ರಕರ್ತರು. ಮಗಳು ತುಳಸಿ ಬಾಲ್ಯದಲ್ಲಿಯೇ ಯಕ್ಷಗಾನದ ಹೆಜ್ಜೆಗೆ ಮನಸೋತವಳು. ಈಗ ದೇಶ ವಿದೇಶದಲ್ಲೂ ಹೆಸರುವಾಸಿ. ಈ ಎರಡೂ ಕ್ಷೇತ್ರಗಳ ಜೊತೆ  ಕವನ ಸಂಕಲನಗಳನ್ನು ಹೊರತಂದವರು ಗಾಯತ್ರಿ.

ಮಣ್ಣ ನೆನಪು, ಕನವರಿಕೆ, ಕಡಲ ಮಾತು, ಗೆಜ್ಜೆದನಿ, ಮುಂಜಾವದ ಹನಿಗಳು ಇವರ ಕೃತಿಗಳು. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾ, ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಾ ಜೊತೆಗೆ ಕೃಷಿ ಲೋಕದ ಜೊತೆಯೂ ಒಡನಾಟ ಇರುವವರು.

ತಮ್ಮ ಮನೆ ‘ನೆಮ್ಮದಿ’ಯಲ್ಲಿ ಪ್ರತೀ ವರ್ಷ ನಡೆಸುವ ಸಾಹಿತ್ಯ ಸಾಂಸ್ಕೃತಿಕ ಹಬ್ಬ ಆ ಭಾಗದ ಹೆಗ್ಗುರುತುಗಳಲ್ಲೊಂದು.  ನಾಡಿನ ಸಾಹಿತ್ಯ, ಸಾಂಕೃತಿಕ ಲೋಕಕ್ಕೆ ಇರುವ ಮುಖ್ಯ ಕೊಂಡಿ.

ಜಿಲ್ಲಾ ಕಸಾಪ ಯುವ ಪುರಸ್ಕಾರ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಶಿರಸಿ ತಾಲೂಕು ಕಸಾಪ ಸದಸ್ಯೆ, ‘ವಿಶ್ವಶಾಂತಿ ಸೇವಾ ಟ್ರಸ್ಟ್’ನ ಕಾರ್ಯದರ್ಶಿ. ಇದ್ದ ನೆಲದಲ್ಲೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿರುವಾಕೆ. ವಿಶ್ವಶಾಂತಿ ಸಂದೇಶ ಸಾರುತ್ತಿರುವ ಬಾಲೆ ತುಳಸಿಯ ‘ಅಮ್ಮ’. ಅವಳ ಯಕ್ಷಗಾನ ಮೊದಲ ಗುರುವೂ ಹೌದು.

ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ ?
ನನ್ನೊಳಗನ್ನು ಶೋಧಿಸಿಕೊಳ್ಳುವುದಕ್ಕಾಗಿ ಮತ್ತು ಭಾವನೆಗಳನ್ನು ಅಭಿವ್ಯಕ್ತಗೊಳಿಸುವುದಕ್ಕಾಗಿ ಹಾಗೂ ಆತ್ಮತೃಪ್ತಿಗಾಗಿ ಕತೆ, ಕವಿತೆಗಳನ್ನು ಬರೆಯುತ್ತೇನೆ

ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ?
ಏನನ್ನೋ ಹೆಳಬೇಕು ಎಂದುಕೊಂಡು ಹೇಳಲಾಗದೆ ಉಳಿದಾಗ ನನ್ನೊಳಗೊಂದು ಮೌನ ಆವರಿಸಿಕೊಳ್ಳುತ್ತದೆ.. ಆ ಮೌನದಲ್ಲಿ ಕತೆ,ಕವಿತೆ ಹುಟ್ಟಿಕೊಳ್ಳುತ್ತದೆ.

ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?
ನನ್ನ ಕತೆಗಳು ಹೆಚ್ಚಾಗಿ ಭಾವನಾತ್ಮಕ ವಿಷಯ ಮತ್ತು ಈಗಿನ ಜೀವ ಜಗತ್ತಿನ ತೊಳಲಾಟ, ನಿತ್ಯದ ವಾಸ್ತವ ಬವಣೆ ಮತ್ತು ಈಚೆಗೆ ಬರೆಯುತ್ತಿರುವ ಚಿಕ್ಕ ಕತೆಗಳಲ್ಲಿ ಸ್ಪೂರ್ತಿ ಹೊಂದುವಂತಹ ವಿಷಯಗಳನ್ನಿಟ್ಟು ಬರೆಯುತ್ತಿರುವೆ. ನಶ್ವರವಾದ ಈ ಬದುಕಿನಲ್ಲಿ ನಾವು ಮನಸ್ಸು, ಭಾವನೆ, ಆತ್ಮೀಯತೆ, ಸ್ನೇಹ, ಪ್ರೀತಿ, ಸಾಧನೆ ಅಂತೆಲ್ಲ ಏನೇನೋ ನಮ್ಮದೇ ಕಲ್ಪನೆಗಳಲ್ಲಿ ನಾನು ನನ್ನದು ಅಂತ ಬದುಕುತ್ತಿರುತ್ತೇವೆ, ಅದು ಬೇಕು ಇದು ಬೇಕು ಎಂಬ ಹಂಬಲಗಳಲ್ಲಿ ತೊಳಲಾಡುತ್ತೇವೆ. ಬದುಕು ಕೊಟ್ಟಷ್ಟು ನಮಗೆ ಸಿಕ್ಕಷ್ಟು ಸಾಕು ಎಂದು ಬದುಕಬಾರದೇ ಎಂದು ಪದೇ ಪದೇ ಅನಿಸುತ್ತದೆ.

ಕತೆ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ?
ಖಂಡಿತವಾಗಿ. ಬಾಲ್ಯ ಎಂಬುದು ಎಲ್ಲರಿಗೂ ಮತ್ತೆ ಮತ್ತೆ ಬರಬಾರದೇ ಎನಿಸುವ ಮಧುರ ನೆನಪು. ಅದು ಮರೆಯಲಾಗದ, ಸದಾ ಸಿಹಿನೀರ ಜಿನುಗಿಸುವ ಒರತೆಯಿದ್ದ ಹಾಗೆ.. ಹರೆಯ ಅನ್ನುವುದಕ್ಕಿಂತ ಒಲವು, ಪ್ರೀತಿ ಒನಪು, ವೈಯಾರಗಳು ಹೆಚ್ಚು ಕವಿತೆಗಳಲ್ಲಿ ಮೂಡಿವೆ ಅಂತ ನನ್ನ ಅನಿಸಿಕೆ.

ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?
ನಾನು ರಾಜಕೀಯದಿಂದ ದೂರ. ಹಾಗಾಗಿ ಅದರ ಬಗೆಗಾಗಿ ಎನೂ ಹೇಳಲಾರೆ

ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?
ದೇವರ ಕುರಿತಾಗಿ ನಂಬಿಕೆಯಿದೆ, ಆದರೆ ಮೂಢನಂಬಿಕೆಯಿಲ್ಲ. ಧರ್ಮ ಕೂಡ ಹಾಗೆಯೇ.

ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?
ಕನ್ನಡ ನಾಡಿನ ಕಲೆಗೆ, ಸಾಂಸ್ಕೃತಿಕ ಶ್ರೀಮಂತಿಕೆಗೆ ನಾವಿನ್ನೂ ಅಂಥ ಸ್ಥಾನ ನೀಡಿಲ್ಲ ಎಲ್ಲವೂ ಪಾಶ್ಚಾತ್ಯ ಸ್ಪರ್ಶ ಹೊಂದುತ್ತಿರುವ ಈ ಸಂದರ್ಭದಲ್ಲಿ ನೈಜವಾದ ಕಲೆಗೆ ಪ್ರಾಶಸ್ತ್ಯ ಕೊಡಬೇಕು. ಪ್ರತಿಯೊಬ್ಬರೂ ನೀಡಬೇಕು..

ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?
ಹೇಗೇ ಚಲಿಸಿದರೂ ಸುಸ್ಥಿರ ಬದುಕು ಕೊಡಬೇಕು. ನೆಮ್ಮದಿ ಒದಗಿಸಬೇಕು ಅಷ್ಟೇ.

ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?
ಇನ್ನಷ್ಟು ಉತ್ತಮವಾದ ಕತೆ, ಕವಿತೆ, ಲೇಖನಗಳನ್ನು ಬರೆಯಬೇಕು. ಹನಿಗವಿತೆಗಳು, ಕವಿತೆಗಳು ಮತ್ತು ಮಕ್ಕಳ ಕವಿತೆಗಳು ಪುಸ್ತಕದ ಹಂತದವರೆಗೆ ಬಂದು ಹಾಗೇ ನಿಂತಿದೆ.. ಮಕ್ಕಳಿಗಾಗಿ ಇನ್ನಷ್ಟು ಚಂದದ ಕತೆ, ಕವಿತೆ ಬರೆಯಬೇಕು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆಯಾಗಿ ಒಂದಷ್ಟು ಯುವ ಬರಹಗಾರರನ್ನು ತಯಾರು ಮಾಡಬೇಕು, ಅವರಲ್ಲಿ ಸಾಹಿತ್ಯ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸಬೇಕು ಎಂಬುದು ನನ್ನ ಕನಸು

ನಿಮ್ಮ ಇಷ್ಟದ ಕವಿ, ಸಾಹಿತಿ ಯಾರು ?
ಇಷ್ಟದ ಸಾಹಿತಿಗಳು ಬಹಳ ಇದ್ದಾರೆ. ಎಂ.ಎನ್ ವ್ಯಾಸರಾವ್, ಕೆ.ಎಸ್. ನಾರಾಯಣಾಚಾರ್ಯರು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕೆ ಎಸ್ ನ, ದ,ರಾ ಬೇಂದ್ರೆ, ಜಿ,ಎಸ್,ಎಸ್, ಎಚ್,ಎಸ್,ವಿ, ಸುಬ್ರಾಯ ಚೊಕ್ಕಾಡಿ, ರವಿ ಬೆಳಗೆರೆ, ಜಯಂತ ಕಾಯ್ಕಿಣಿ ಮುಂತಾದವರು

ಈಚೆಗೆ ಓದಿದ ಕೃತಿಗಳಾವವು?
ಅರಿವು ಅಕ್ಷರದಾಚೆ- ಚಂದ್ರಶೇಖರ ವಸ್ತ್ರದರ ವಚನ ಚೌಪದಿ, ಎಚ್ಚೆಸ್ವಿ ಸಮಗ್ರ ಮಕ್ಕಳ ಸಾಹಿತ್ಯ, ವಿವೇಕ ಶಾನಭಾಗರ ಘಾಚರ್ ಘೋಚರ್, ಕೆ,ಪಿ ಪೂರ್ಣಚಂದ್ರ ತೇಜಸ್ವಿಯವರ ಅಣ್ಣನ ನೆನಪುಗಳು, ವಿಲ್ಸನ್ ಕಟೀಲರ ನಿಷೇಧಕ್ಕೊಳಪಟ್ಟ ಒಂದು ನೋಟು, ಕೆ.ವಿ. ಅಕ್ಷರ ಅವರ ಶಂಕರ ವಿಹಾರ ಹೀಗೆ ಇನ್ನೂ ಹಲವಾರು

ನಿಮಗೆ ಇಷ್ಟವಾದ ಕೆಲಸ ಯಾವುದು?
ಹಾಡುವುದು, ಓದುವುದು, ಬರೆಯುವುದು ಮತ್ತು ಮಗಳಿಗೆ ಯಕ್ಷನೃತ್ಯ ತರಬೇತಿ ನೀಡುವುದು.

ನಿಮಗೆ ಇಷ್ಟವಾದ ಸ್ಥಳ ಯಾವುದು ?

ಬಾಲ್ಯದ ಬಹುತೇಕ ಕ್ಷಣಗಳನ್ನು ಕಳೆದ, ನನ್ನ ನಗು, ಅಳು, ಕವಿತೆ, ಹಾಡು ಎಲ್ಲದರ ಸಾಕ್ಷಿಯಾದ, ಸ್ಪೂರ್ತಿಯಾದ ನನ್ನ ತವರಿನ ತಣ್ಣನೆಯ ಹೊಳೆ ಮತ್ತು ನಿಸರ್ಗದ ಮಡಿಲಲ್ಲೇ ಬೆಳೆದ ನನಗೆ ನನ್ನ ಸುತ್ತಮುತ್ತಲಿನ ಕಾಡು, ಹೊಳೆ, ಬೆಟ್ಟ.. ಹೀಗೆ ಎಲ್ಲ ನನ್ನಗಿಷ್ಟದ ಸ್ಥಳ. ನನ್ನ ಬರಹದಲ್ಲಿ ತವರಿನ ಗಂಧವಿದೆ..

ನೀವು ಮರೆಯಲಾರದ ಘಟನೆ ಯಾವುದು?

ಒಂದು ಜೀವ ಎರಡಾಗುವ ಹೊತ್ತು. ತಾಯಿ ಅಥವ ಮಗು ಎರಡರಲ್ಲಿ ಒಂದು ಉಳಿಸಬಲ್ಲೆ ಎಂದಿದ್ದರು ಡಾಕ್ಟರ್. ಆದರೆ ಚಮತ್ಕಾರ ಎಂಬಂತೆ ಇಬ್ಬರೂ ಉಳಿದಿದ್ದೆವು.. ಅದನ್ನೆಂದಿಗಾದರೂ ಮರೆಯಲಾದೀತೆ?

‍ಲೇಖಕರು avadhi

April 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: