ಅವರು ಸ್ಮಶಾನದಲ್ಲಿ ನನ್ನನ್ನು ಕೂರಿಸಿಕೊಂಡು ಮಾತನಾಡುತ್ತಲೇ ಹೋದರು….

 ಗಿರಿಜಾಶಾಸ್ತ್ರಿ

“ಚಿಕ್ಕ ವಯಸ್ಸಿನಲ್ಲಿ ನಮ್ಮ ಹಳ್ಳಿಯಲ್ಲಿ ಯಾವುದೇ ಹೆಣ ಬಿದ್ರೂ ಸಾಕು ಓಡಿ ಹೋಗಿ ನೋಡಿಕೊಂಡು ಬತ್ತಿದ್ದೆ ಕಳ್ಳತನದಲ್ಲಿ, ಆಮೇಲೆ ನಮ್ಮವ್ವನ ಕೈಲಿ ಚೆನ್ನಾಗಿ ಹುಯ್ಸ್‍ಕೋತಿದ್ದೆ.”

–ಇದು ಮೈಸೂರಿನ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಗುಣಿತೋಡುವ 61 ವರ್ಷ ವಯಸ್ಸಿನ ನೀಲಮ್ಮಳ ಮಾತು.

ಸಾವು ನಮ್ಮನ್ನು ಅಧೀರರನ್ನಾಗಿ ಮಾಡುವ ಹಾಗೆ ಇನ್ನಾವುದೂ ಮಾಡಲಾರದು. ಹೆಣ ಹೆದರಿಸುವ ಹಾಗೆ ಇನ್ನಾವುದೂ ನಮ್ಮನ್ನು ಹೆದರಿಸಲಾರದು. ಭೂತ-ಪ್ರೇತ ಕಾಡುವ ಹಾಗೆ ಮತ್ಯಾವುದೂ ಕಾಡಲಾರದು. ಬದುಕಿನ ಇಂತಹ ಒಂದು ಸಿಂಹ ಸ್ವಪ್ನವನ್ನು, ಸ್ವಪ್ನದಲ್ಲಿ ಅಲ್ಲ ನಿಜವಾಗಿಯೇ ಆತುಕೊಂಡಿರುವ ನೀಲಮ್ಮ ನಿಜವಾಗಿ ಸಿಂಹದ ಎದೆಗಾರಿಕೆಯವರೆಂದೇ ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.

ಬಾಲ್ಯದಿಂದಲೇ ಅವರಿಗೂ ಹೆಣಗಳಿಗೂ ಅಂಟಿದ ನಂಟಿರಬೇಕು. ಹೆಣವೆಂದರೆ ದೊಡ್ಡವರೇ ಹೆದರಿ ನಡುಗುವಾಗ, ಸಣ್ಣ ವಯಸ್ಸಿನ ಪೋರಿಯೊಬ್ಬಳು ಜನಗಳ ಕಾಲಸಂದಿಯಲ್ಲಿ ತೂರಿಕೊಂಡು ಹೋಗಿ ಹೆಣ ನೋಡಿಕೊಂಡು ಬರುವುದೆಂದರೆ?

ಆಧುನಿಕ ವೀರಬಾಹು ಆಕೆ. ಕೃತಕ ವೀರಬಾಹು (ಎಂ.ಪಿ. ಶಂಕರ್) ಕೂಡ ಅವರ ಮನೆಯ ಮಗ್ಗುಲಲ್ಲೇ ಮಲಗಿದ್ದಾನೆ.

ಸುಮಾರು 13 ವರುಷಗಳಿಂದ ಸತತವಾಗಿ ಗುಣಿತೋಡುತ್ತಲೇ ಬಂದಿರುವ ಕೊತ್ತಗಾಲದ ನೀಲಮ್ಮ, 18 ವರುಷಕ್ಕೇ ಬಸವರಾಜು ಅವರನ್ನು ಮದುವೆಯಾಗಿ ಮೈಸೂರಿಗೆ ಬಂದರು. ಬಸವರಾಜು ಅವರದು ದೇವಸ್ಥಾನದಲ್ಲಿ ಪೂಜೆ ಮಾಡುವ ಮತ್ತು ಅಂತ್ಯ ಸಂಸ್ಕಾರ ಮಾಡುವ ಕಾಯಕ. ಪತಿ ಮತ್ತು ಮಕ್ಕಳೊಂದಿಗೆ ನೀಲಮ್ಮ 1991 ನೇ ಇಸವಿಯಿಂದ ರುದ್ರಭೂಮಿಯೊಳಗೆ ವಾಸಮಾಡಹತ್ತಿದರು-ಭೂತಪ್ರೇತಗಳ ಜೊತೆಯಲ್ಲಿಯೇ! ನೀಲಮ್ಮನನ್ನು ನೋಡದವರು, ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿ ವೀರಬಾಹುವಿನ ಪಾತ್ರ ಮಾಡಿದ ಎಂ.ಪಿ. ಶಂಕರ್ ಅವರ ದೈತ್ಯ ದೇಹವನ್ನು ಸ್ಮರಣೆಗೆ ತಂದುಕೊಳ್ಳುವುದು ಸಹಜ.  ಆದರೆ ನೀಲಮ್ಮ ಸೌಮ್ಯ ವ್ಯಕ್ತಿತ್ವದ, ನಗುಮುಖದ ಸಾಧಾರಣ ಮೈಕಟ್ಟಿನ ಮಹಿಳೆ.

ಹರಿಶ್ಚಂದ್ರನ ಹಂಗುಗಿತ್ತಿಯಾಗಿ ಇಲ್ಲಿಗೆ ಬಂದಿರುವೆ ಎನ್ನುವ ಅವರ ಆತ್ಮವಿಶ್ವಾಸ, ಎಣೆಯಿಲ್ಲದ ಧೈರ್ಯ ಮಾತ್ರ ದೈತ್ಯಸ್ವರೂಪದ್ದು, ಬೆರಗುಗೊಳಿಸುವಂತಹದ್ದು. ಕೆಲವು ಸಮಾಜಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗಬಾರದೆನ್ನುವ ನಿಯಮವಿದೆ.

ಅವರು ಕೋಮಲೆಯರು, ಹೃದಯವಿದ್ರಾವಕ ಸಂಗತಿಗಳನ್ನು ತಡೆದುಕೊಳ್ಳಲಾರರು ಎಂಬ ನಂಬಿಕೆಗಳೇ ಇದರ ಹಿಂದಿವೆ. ಆದರೆ ಅದನ್ನು ನೀಲಮ್ಮನಂತಹವರು ಸುಳ್ಳುಮಾಡಿ ತೋರಿಸಿದ್ದಾರೆ. ಪುಣೆಯಲ್ಲಿ ಅಪರಕರ್ಮ ಮಾಡಿಸುವ ಹೆಂಗಸರ ಒಂದು ಸಮೂಹವೇ ಇದೆಯಂತೆ.

ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯ ಮುಕ್ತಿಧಾಮ ಚಿತಾಗಾರದ ಹೆಣಸುಡುವ ಕಾಯಕಕ್ಕೇ ತನ್ನನ್ನು ಅರ್ಪಿಸಿಕೊಂಡಿರುವ ಭಾಗ್ಯಮ್ಮ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾಳೆ.

ಇಂದು ಮಹಿಳೆಯರು ಅನೇಕ ಕ್ಷೇತ್ರದಲ್ಲಿ ದಾಂಗುಡಿ ಇಡುತ್ತಿರಬಹುದು. ತಮ್ಮ ಶಿಕ್ಷಣ, ಕೌಟುಂಬಿಕ, ಸಾಮಾಜಿಕ ವರ್ಚಸ್ಸುಗಳು ಅವರ ಈ ಸಾಧನೆಗಳಿಗೆ ಸಹಾಯಕವಾಗಿರಬಹುದು.

ಆದರೆ ಯಾವುದೇ ಹಿನ್ನೆಲೆಯಿಲ್ಲದ, ನೀಲಮ್ಮನಂತಹ ಒಬ್ಬ ಸಾಧಾರಣ ಗೃಹಿಣಿ ಸ್ಮಶಾನ ಹೊಕ್ಕು ಗುಣಿ ತೋಡಲು ಗುದ್ದಲಿ ಹಿಡಿದಿರುವುದು ಒಂದು ಅದ್ಭುತವೇ ಸರಿ.

ಮೈಸೂರಿಗೆ ಹೋದಾಗ ಅಣ್ಣ ಸೀತಾರಾಮನ ಜೊತೆ ನೀಲಮ್ಮನನ್ನು ನೋಡಲು ಹೋಗಿದ್ದೆ. ನಾವಿರುವ ಕಲ್ಯಾಣದ ನಮ್ಮ ಮನೆಯಿಂದ ಪೇಟೆಗೆ ಹೋಗುವಾಗಲೆಲ್ಲಾ ಸಿಗುವ ಸ್ಮಶಾನದ ಹೊರ ಗೇಟನ್ನು ನೋಡಲು ಸಹ ಧೈರ್ಯವಿಲ್ಲದೇ ಅದರ ಕಣ್ ತಪ್ಪಿಸುತ್ತಿದ್ದ ನಾನು ನೀಲಮ್ಮನನ್ನು ನೋಡಲು ತಯಾರಾದುದಕ್ಕೆ ಸೀತಾರಾಮ ನನ್ನೊಳಗೆ ತುಂಬಿದ ಧೈರ್ಯವೇ ಕಾರಣ. ಆದರೂ ರುದ್ರಭೂಮಿ ತಲುಪಿದಾಕ್ಷಣ ಅದರ ತಲೆಬಾಗಿಲು ನನ್ನನ್ನು ತಡೆಯಿತು. ಒಂದು ಕ್ಷಣ ಸ್ಮಶಾನದ ಹೊರಬಾಗಿಲಲ್ಲೇ ನಿಂತೆ. ‘ಬೇಕಾದರೆ ಅವರನ್ನು ಹೊರಗೇ ಕರೆಯುತ್ತೇನೆ, ಇಲ್ಲೇ ಅವರನ್ನು ಮಾತನಾಡಿಸು’ ಎಂದ ಸೀತಾರಾಮನ ಮಾತಿನಿಂದ ಹೇಗೆ ಧೈರ್ಯ ತುಂಬಿತೋ ‘ಇಲ್ಲ ನಾನೂ ಒಳಗೆ ಬರುತ್ತೇನೆ’ ಎಂದು ಸ್ಮಶಾನದ ಒಳನಡೆದೆ.

ನನ್ನ ಜಾತಿಯ ನಿಯಮಗಳನ್ನು ಮುರಿದೆನೇ? ಗೊತ್ತಿಲ್ಲ. ಆವರೆಗೆ ಸ್ಮಶಾನದ ಬಗೆಗೆ ನನ್ನೊಳಗೆ ಅಡಗಿ ಕೂತಿದ್ದ ಪೆಡಂಭೂತವನ್ನಂತೂ  ನೀಲಮ್ಮ ಒದ್ದು ಓಡಿಸಿದ್ದರು.

ಎಲ್ಲ ಹೆಣ್ಣುಮಕ್ಕಳೂ ತಮ್ಮ ಸಾಮಾಜಿಕ ಹಿಂಜರಿಕೆಯನ್ನು ಕಳೆದು ಕೊಳ್ಳಲು ಒಮ್ಮೆಯಾದರೂ ನೀಲಮ್ಮನನ್ನು, ಅವರು ವಾಸಿಸುವ ನಿಜದ ನೆಲವನ್ನು (ಅವರ “ಕರ್ಮಭೂಮಿ”ಯನ್ನು?) ನೋಡಲೇಬೇಕು. ನೀಲಮ್ಮನ ನಿಷ್ಕಾಮ ಕರ್ಮವನ್ನು ಅರಸಿಕೊಂಡು ನಾಡಿನಾದ್ಯಂತ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅನೇಕ ಪತ್ರಿಕೆಗಳು ಅವರ ಕತೆಯನ್ನು ಪ್ರಕಟಿಸಿವೆ. “ಬದುಕು ಜಟಕಾ ಬಂಡಿ”, “ಪಬ್ಲಿಕ್ ಹೀರೋ” ಮುಂತಾದ ದೃಶ್ಯ ಮಾಧ್ಯಮಗಳಲ್ಲಿ ಕೂಡ ಕಾಣಿಸಿಕೊಂಡು ಜನಮನ್ನಣೆ ಗಳಿಸಿದ್ದಾರೆ.

ಜಮಖಂಡಿಯಿಂದ ಹಿಡಿದು ಅರಸೀಕೆರೆ, ಬೆಂಗಳೂರು, ಚಾಮರಾಜನಗರ, ಅನೇಕ ಕಡೆಗಳಲ್ಲಿ ಅವರಿಗೆ ಸನ್ಮಾನಗಳು ನಡೆದಿವೆ. ಮೈಸೂರಿನಲ್ಲಿ ನಡೆದಿರುವ ಪುರಸ್ಕಾರಗಳಿಗಂತೂ ಲೆಕ್ಕವೇ ಇಲ್ಲ. ಮೈಸೂರಿನ ಶಿವಲಿಂಗಪ್ಪ ಆರ್ಟ್ ಗ್ಯಾಲರಿಯವರು ಅವರನ್ನು ‘ಶರಣೆ ನೀಲಾಂಬಿಕೆ’ ಎಂದು ಕರೆದಿದ್ದಾರೆ.

‘ಪತ್ನಿ ನೀಲಾಂಬಿಕೆ, ಪತಿ ಬಸವರಾಜು!’ ಹನ್ನೆರಡನೇ ಶತಮಾನದ ಕಾಯಕ ಜೀವಿಗಳ ಪ್ರತೀಕವಾಗಿದ್ದಾರೆ ನೀಲಮ್ಮ. ಜೆ.ಎಸ್‍ಎಸ್. ಮಠದ ಸ್ವಾಮಿಗಳಿಂದ ಕೂಡ ಆಕೆಗೆ ‘ಲೇಡಿ ಹರಿಶ್ಚಂದ್ರ’ ಎಂಬ ಬಿರುದು ದೊರೆತಿದೆ. ಇಂದು ಅವರ ಪರಿಚಯವಿಲ್ಲದ ಮಠಗಳೇ ಇಲ್ಲ.  ಆದರೆ ಇವು ಯಾವುವೂ ಅವರ ತಲೆಗೆ ಏರಿಲ್ಲ.

ಇದರಿಂದ ಹಣಕಾಸಿನ ಸಹಾಯವೂ ಅವರಿಗೆ ದೊರೆತಿದೆ.  ಆದರೂ ತಮ್ಮ ಜೋಪಡಿ ಬಿಟ್ಟು ಸ್ಮಶಾನದ ಆಚೆಗೆ ಬೆಚ್ಚಗಿನ ಸುಸಜ್ಜಿತ ಮನೆಯನ್ನು ಕಟ್ಟಿಕೊಂಡು ವಾಸಮಾಡಲು ಅವರಿಗೆ ಮನಸ್ಸಿಲ್ಲ, ಯಾವುದೋ ಮಠದವರು ಉಚಿತವಾಗಿ ಕೊಟ್ಟ ಸೈಟೊಂದರಲ್ಲಿ ಕಟ್ಟಿರುವ ಸಣ್ಣಮನೆಯಲ್ಲಿ ವಾಸ್ತವ್ಯ ಹೂಡಲೂ ಆಕೆ ತಯಾರಿಲ್ಲ. ಇದು ಬದುಕಿನ ಬಗೆಗೆ ನೀಲಮ್ಮನಿಗೆ ಇರುವ ನಿರ್ಮಮಕಾರವನ್ನು, ಮಾಗಿದ ದೃಷ್ಟಿಕೋನವನ್ನು ಬಯಲಾಗಿಸುತ್ತದೆ. ಇದಕ್ಕೆ ಬಹುಶಃ ಅವರ ಪ್ರಿಯವಾದ ಸ್ಮಶಾನದ ನೆಲೆಯೇ ಕಾರಣವಾಗಿರಬೇಕು.

‘ಪ್ರಾಣಿಗಾಗಲೀ ಪಕ್ಷಿಗಾಗಲೀ ಮರಣ ಅಂತೂ ತಪ್ಪೋದಿಲ್ಲ’ ಎನ್ನುವ ನೀಲಮ್ಮ ಈಗ ‘ರಾಜ ಉಳ್ಕಂಡ್ನಾ?..’ಎಂದು ಒಬ್ಬ ವೇದಾಂತಿಯಂತೆ ಮಾತನಾಡುತ್ತಾರೆ. ಅವರು ಲೆಕ್ಕವಿಲ್ಲದಷ್ಟು ಹೆಣಗಳನ್ನು ದಫನ್ ಮಾಡಲು ನೆರವಾಗಿದ್ದಾರೆ. ಆದರೆ ತಾನು ಮಾತ್ರ, ಸತ್ತನಂತರ ವೈದ್ಯಕೀಯ ವಿದ್ಯಾರ್ಥಿಗಳ ಪ್ರಯೋಗಗಳಿಗೆ ಬಳಕೆಯಾಗಬೇಕೆಂದು, ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿಗೆ ತನ್ನ ದೇಹದಾನದ ವಾಗ್ದಾನವಿತ್ತಿದ್ದಾರೆ.

ಸಾವು ಹಣ, ಕೀರ್ತಿ, ಜಾತಿ, ಅಧಿಕಾರವೆಂಬ ಎಲ್ಲ ರೀತಿಯ ಮದಗಳನ್ನೂ ಸಮತಟ್ಟು ಮಾಡಿಬಿಡುತ್ತದೆ. ಅದರ ಚೆನ್ನಾದ ಅರಿವು ನೀಲಮ್ಮನಿಗಲ್ಲದೆ ಇನ್ನಾರಿಗೆ ಇರಲು ಸಾಧ್ಯ?  ‘ಅಯ್ಯೋ ಕೋಟಿ ಕೋಟಿ ನುಂಗದೋರೆಲ್ಲಾ ಇಲ್ಲೇ ಮಲಗವ್ರೇ ನೋಡಿ’ ಎನ್ನುವ ನೀಲಮ್ಮ ಯಾರಿಗಾದರೂ ಒಬ್ಬ ಸಂತಳ ಹಾಗೆ ಕಂಡರೆ ಆಶ್ಚರ್ಯ ಪಡಬೇಕಿಲ್ಲ. ಒಬ್ಬ ಶಿವಶರಣೆಯಂತೆ ನನ್ನೆದುರಿಗೆ ನಿಂತ ನೀಲಮ್ಮ ನನ್ನ ಆ ಕ್ಷಣದ ಅರಿವಿನ ಸ್ಫೋಟಕ್ಕೆ ಕಾರಣವಾದರು.

ಸೀತಾರಾಮ ಮತ್ತು ನಾನು ಅವರೊಡನೆ ಕಳೆದ ಕ್ಷಣಗಳು, ಆಡಿದ ಮಾತುಗಳು ಅವಿಸ್ಮರಣೀಯವಾದವು. ಅವುಗಳನ್ನು ಕೆಳಕಂಡಂತೆ ದಾಖಲಿಸಿದ್ದೇನೆ.  ಹೇಳದೇ ಕೇಳದೇ ಭೇಟಿಯಿತ್ತ ನಮ್ಮನ್ನು ಆದರದಿಂದ ಬರಮಾಡಿಕೊಂಡ ನೀಲಮ್ಮ, ಇದ್ದ ಎರಡು ಕುರ್ಚಿಗಳಲ್ಲಿ ನಮ್ಮನ್ನು ಕೂರಿಸಿ ತಾವು ಕೆಳಗೇ ಕುಳಿತರು.

ಸ್ಮಶಾನದ ತುಂಬಾ ಗೋರಿಕಲ್ಲುಗಳು. ಅವುಗಳ ಮೇಲೆ ಅಜರಾಮರವಾಗಿ ಕೆತ್ತಿರುವ ‘ಭೂತ’ ವಿವರಗಳು. ಹರಿದು ಚೆಲ್ಲಿದ ಹೂಹಾರ ತುರಾಯಿಗಳು. ಮಣ್ಣಲ್ಲಿ ಹೊರಳಾಡುವ ಬೇಗಡೆಗಳು. ದೊಡ್ಡ ದೊಡ್ಡ ಹಸಿರು ಮರಗಳು. ಯಾವುದೋ ಕೀಟಗಳ ಜೀರ್..ಜೀರ್..ಸದ್ದುಗಳು.

ಎಷ್ಟು ದಿವಸಗಳಿಂದ ಗುಂಡಿ ಅಗೆಯುವ ಕೆಲಸ ಮಾಡ್ತಿದ್ದೀರಾ? ನಾನು 2005 ರಿಂದ ಮಾಡತಿದೀನಿ. ನಾವು 91 ರಲ್ಲಿ ಇಲ್ಲಿಗೆ ಬಂದೋ. ನಮ್ಮೆಜಮಾನ್ರು ಪೂಜೆ, ಸಂಸ್ಕಾರ ಮಾಡ್ತಿದ್ರು. ಗುಂಡಿ ತೋಡತಿರ್ಲಿಲ್ಲ. ಅವ್ರು 2005ರಲ್ಲಿ ತೀರಿಕೊಂಡ್ರು. ನನಗೆ ಪೂಜೆ ಬರೋದಿಲ್ಲ ಗುಂಡಿ ತೋಡ್ತೀನಿ ಅಷ್ಟೇಯಾ.

ಸಾಮಾನ್ಯವಾಗಿ ಈ ಅಗೆಯೋ ಕೆಲ್ಸ ಗಂಡಸರ ಕೆಲ್ಸಾ ಅಲ್ವಾ? ಹೆಂಗಸರಿಗೆ ಇದು ಕಷ್ಟ ಅಲ್ವಾ?ಈಗ ಹೆಂಗಸ್ರಿಗೆ ಯಾವುದೂ ಕಷ್ಟಾ ಇಲ್ಲ. ಆಟೋ ಓಡಿಸೋಲ್ವಾ? ಏರೋಪ್ಲೇನ್ ಓಡಿಸೋಲ್ವಾ?  ಹೆಂಗಸರು ಸ್ಮಶಾನಕ್ಕೆ ಹೋಗಬಾರದು ಅಂತಾರಲ್ಲಾ?  ಅಂತಾರೆ ನಿಜ. ಆದ್ರೆ ಕೊನೆಗೇ ನಾವೂ, ಎಲ್ರೂ  ಅಲ್ಲಿಗೇ ಹೋಗ್ಬೇಕು ಅಲ್ವ್ರಾ?  ಬದುಕಿರೋವಾಗ? ಅದ್ಕೇ ಬದ್ಕಿರೋವಾಗ ಅಭ್ಯಾಸ ಮಾಡ್ಕಬೇಕು. ಶಾಕ್ ಆಗೋದಿಲ್ಲ. ಸತ್ತಮೇಲೇನು? ಯಾರೋ ಒತ್ಕೊಂಡು ಓಗ್ತಾರೆ, ಬಿಸಾಕ್ತಾರೆ.

ನಿಮಗೆ ಭಯ ಏನೂ ಆಗೋಲ್ವಾ? ಇಲ್ಲಿ ಇಷ್ಟು ಪ್ರೇತಾತ್ಮಗಳು ಇವೆ! ದೆವ್ವ ಇದೆ ಅಂತ ನಿಮಗೆ ಅನ್ನಿಸುತ್ತಾ? ಭಯ ಆಗಿದ್ರೆ ನಾನು ಇಲ್ಲಿ ಇರ್ತಿದ್ನೇ? ಬದುಕಬೇಕು ಅಂತ ಬಂದೆ. ಸ್ಮಶಾನ ಆದ್ರೇನು ಕಾಡಾದ್ರೇನು? ದೆವ್ವಗಳ ಜೊತೆ ಬೇಕಾದ್ರೂ ಬದುಕ್ತೀನಿ. (ಬದಿಯಲ್ಲೇ ಇರುವ ತೆಂಗಿನ ಗಿಡವೊಂದನ್ನು ತೋರಿಸುತ್ತಾ) ನಮ್ಮೆಜಮಾನ್ರು ಇಲ್ಲೇ ಮನಗವ್ರೆ. ಅವ್ರು ಒಳಗವ್ರೆ ನಾನು ಒರಕ್ಕಿದ್ದೀನಿ ಅಷ್ಟೇಯಾ. ಬಯ ಯಾಕೆ ಇನ್ನು? ದೆವ್ವ ಇದೆ ಅಂತ ನನಗೆ ಅನ್ನಿಸೋಲ್ಲ.

ನಾವೇ ದೊಡ್ಡು ದೆವ್ವಗಳು, ಪ್ರೇತಗಳು. ನಾವೇ ಎಲ್ಲಾ ತಿನ್ಕೋತೀವಿ, ಅವು ಏನೂ ತಿನ್ನೋಲ್ಲ ನಮ್ಮಂಗೆ. (ನಗು)  ನೀವು ಯಾಕೆ ಬಂದಿರಿ ಇಲ್ಲಿಗೆ? ನಾವು ಯಾಕೆ ಬಂದೆವು ಅಂತ ಇನ್ನೂ ನಂಗೆ ಅರ್ತಾ ಆಗಿಲ್ಲ. ಬಹುಶಃ ನಾನು ಹರಿಶ್ಚಂದ್ರನ ಆಸ್ತಿ ಇಟ್ಕಂಡಿರಬೇಕು (ನಗುತ್ತಾರೆ).

ಬಾಳ ವರ್ಷದ ಹಿಂದೆ ಆಗಿನ್ನೂ ನಾನು ಬಾಣಂತಿ ಮೂರು ತಿಂಗಳೂ ಆಗಿರ್ನಿಲ್ಲ. ಯಾರದೋ ಸಂಸ್ಕಾರಕ್ಕೆ ಇಲ್ಲಿಗೆ ಬಂದಿದ್ದೋ. ನಮ್ಮೆಜಮಾನ್ರ ಕಿವಿಯಾಗೆ ಮೆಲ್ಲಗೆ “ಎಲ್ಲಾ ಓದ್ರ್ರು, ನಾವೂ ಹೋಗಾಮಾ ನಡೀರಿ” ಎಂದೆ. ಅದು ಮೇಲಿರೋವ್ನಿಗೆ ಕೇಳ್ಸಿರಬೇಕು. (ಓಗೋದ್ ಇನ್ನೆಲ್ಗೆ? ಇಲ್ಗೆ ಬನ್ನಿ ಅಂತ ಕರಸ್ಕಂಡಬಿಟ್ಟ) ಆಗ ಪೂಜೆ ಮಾಡಿಸ್ತಿದ್ದ ಬುದ್ಯೋರು ‘ಬಸವರಾಜ ನೀನೂ ಬಂದುಬಿಡು ನನ್ನ ಸಹಾಯಕ್ಕೆ ಅಂದ್ರು’ ಮೂರೇ ತಿಂಗಳು ನೋಡಿ, ದೀಪಾವಳಿಗೆ ಅಂಗದ್ರು, ಶಿವರಾತ್ರೇನ ಇಲ್ಲೇ ಮಾಡಿದ್ವೀ. ನೀವೇನು ವಿರೋಧ ವ್ಯಕ್ತಪಡಿಸಲಿಲ್ಲವಾ ಇಲ್ಲಿಗೆ ಬರೋದಕ್ಕೆ? ನಿಮ್ಮ ತಾಯಿ ತಂದೆಯರಿಗೆ ಇದರಿಂದ ಏನು ಅನ್ನಿಸಿತು?  ಇಲ್ಲ ನಾನೇನು ವಿರೋಧ ಮಾಡ್ಲಿಲ್ಲ.

ನಮ್ಮ ಅಪ್ಪ ಅಮ್ಮ ಇಲ್ಲಿಗೆ ಬಂದಿದ್ರು. ನಾವು ಇಲ್ಲಿ ವಾಸ ಮಾಡದು ನೋಡಿ ಅವರಿಗೆ ಏನು ಬೇಜಾರು ಆಗ್ಲಿಲ್ಲ. ಯಾರೊ ಒಬ್ಳು ಕೇಳಿದ್ಲು ‘ಏನೇ ನಿಂಗೆ ಬೇರೆಲ್ಲೂ ಜಾಗ ಸಿಗಲಿಲ್ಲವಾ?’ ಅಂತ. ಅದ್ಕೇ ‘ನನ್ನ ಸೌಕರ್ಯಕ್ಕೆ ನಾನ ಬಂದಿದೀನವ್ವ, ಬೇರೆಯವರ ಸೌಕರ್ಯಕ್ಕಲ್ಲ’, ಅಂತ ಅಂದ್ಬುಟ್ಟೆ.

ಅನ್ನೋವ್ರೇನು ಆರಸ್ತಾರಾ? ತೀರಸ್ತಾರ? ನಮ್ಮಣ್ಣ, ತಮ್ಮ ನನ್ನ ತವರು ಮನೆಯವ್ರೆಲ್ಲಾ ಅತ್ರಾ ಇದ್ದಾರಲ್ಲಾ? ಬೇರೆವ್ರನ್ನ್ ಕಟ್ಗಂಡು ಏನ್ ಮಾಡ್ಬೇಕು? ನನ್ ದುಡಿಮೆ ಏನು ಅವಮರ್ಯಾದೇದಲ್ಲ. ನನಗೆ ಯಾರೂ ಕರೆದು ಕೆಲ್ಸ ಕೊಡಲಿಲ್ಲ, ಮನೆ ಕೊಡಲಿಲ್ಲ.

ಕಾರ್ಪೋರೇಷನ್ ಅವರು ನನಗೆ ಈ ಮನೆ ಕಟ್ಟಿಸಿಕೊಟ್ಟಿದ್ದಾರೆ.  ಗುಂಡಿ ತೋಡಿದರೆ ಸಿಗುವ ಮಜೂರಿಯೇ ನನ್ನ ವರಮಾನ. ಸುಳ್ಳು ಹೇಳೋರು ಇಲ್ಲಿ ಜಾಸ್ತಿ ದಿನ ಬಾಳ್ವೇ ಮಾಡಾಕಾಗಲ್ಲ. ನಾನು ಇಲ್ಲಿ 91ನೆ ಇಸವಿಯಿಂದ ಇದ್ದೀನಿ. “ಧರ್ಮವೇ ಜಯ ಕರ್ಮವೇ ಲಯ”.

ನಿಮ್ಮ ಸ್ವಭಾವದಲ್ಲೇ ಅಷ್ಟೊಂದು ಧೈರ್ಯ ಇದೆಯೇನೋ. ಬೇರೆ ಹೆಣ್ಮಗಳಾಗಿದ್ರೆ ಹೋಗಿ ಹೋಗಿ ಸ್ಮಶಾನದಲ್ಲಿ ಮನೆ ಮಾಡ್ತಾರ? ಬರೋಲ್ಲ ಅಂತಿದ್ರು.  ನಾನಾದ್ರೂ ಹಾಗೇ ಅಂತಿದ್ದೆ. ನಿಮ್ಮ ಸೊಸೆ ಕೂಡ ಒಪ್ಪಿಕೊಂಡು ಬಂದಿದ್ದಾಳೆ. ಮಕ್ಕಳು ಮೊಮ್ಮಕ್ಕಳು ಎಲ್ಲಾ ಇಲ್ಲೇ ಸಂಸಾರ ಮಾಡ್ತಿದ್ದೀರ? ನಿಮ್ಮ ಎದೆಗಾರಿಕೆಗೆ ಒಂದು ದೊಡ್ಡ ಸಲಾಮ್.

ಮೊದ್ಲು ಮೊದ್ಲು ಮಕ್ಕಳಿಗೆ ಹೆಣ್ಣು ಕೊಡೋಕೆ ಹಿಂದೇಟು ಹಾಕ್ತಿದ್ರು. ಈಗ ನೋಡಿ ಒಳಗೆ ನನ್ನ ಸೊಸೆ ತಾಯೀನೂ ಬಂದವ್ಳೆ. ಈಗ ಎಲ್ಲರಿಗೂ ಗೊತ್ತಾಗಿದೆ. ಯಾರೂ ಅಂಗೆ ಕೇವಲವಾಗಿ ಮಾತಾಡೋದಿಲ್ಲ. ನಾನೇನು ಜಾಸ್ತಿ ಕಲಿತವಳಲ್ಲ. ಇದೇ ಬಸವಣ್ಣನ ದೇವಸ್ಥಾನ. ಅವನೇ ನನಗೆ ಧೈರ್ಯ ಕೊಟ್ಟಿದ್ದಾನೆ. ಅವನು ಕೊಟ್ಟ ಅನುಭವದಿಂದಾನೇ ಎಲ್ಲಾ ಕಲ್ತಿದ್ದೀನಿ. ಗುಂಡಿ ಮೊದ್ಲೇ ತೋಡಿ ಇಡುತ್ತೀರಾ? ಹೇಗೆ?ಇಲ್ಲ ಮೊದ್ಲೇ ಗುಂಡಿ ತೋಡೋಕಾಗಲ್ಲ.

ದಪ್ಪಗಿರೋರು, ಸಣ್ಣಗಿರೋರು ಬೇರೆ ಬೇರೆ ಸೈಜಿನೋರು ಇರ್ತಾರಲ್ಲಾ? ಅವರ್ಗೆ ತಕ್ಕನಂಗೆ ವಡೀಬೇಕು ಅಲ್ವ್ರಾ? ಯಾವ ಸೈಜು ವಡೀಬೇಕಂತ, ಬಂದವರು ಹೇಳ್ತಾರೆ. ಹಂಗೆ ವಡೀತೀನಿ. ಒಂದೊಂದ್ ಸಲ ನನ್ನೆಷ್ಟೆತ್ತರ ವಡದ್ರೆ ಸಾಕಾ ಅಂತ ಕೇಳ್ತೀನಿ… ಆಗ ನಾನೇ ಗುಂಡಿ ಒಳಗೆ ಕುಂತು ನೋಡಿ, ಗುಂಡಿ ಎಷ್ಟು ಆಳ ಬೇಕು ಅಂತ ಅಂದಾಜು ಮಾಡ್ಕಂಡು ವಡೀತೀನಿ.  ನೀವೇ ಗುಂಡಿ ಒಳಗೆ ಕೂತ್ಕೊಂಡು ನೋಡ್ತೀರಾ?!!!ಹ್ಞೂ.. ಕೂತ್ರೆ ನಾನೇನು ಸತ್ತೋಯ್ತೀನಾ? ಹೂಳೋ ಆಳಿನ ಭುಜದೆತ್ತರ ಗುಂಡಿ ವಡೆದು  ಅದರೊಳಗೆ ಇನ್ನೊಂದು ಗುಂಡಿ ವಡೀಬೇಕು.

ನಮ್ಮ ಲಿಂಗಾಯ್ತರಲ್ಲಿ ಕೂರ್ಸೋದು ಅಲ್ಲ್ಲುವರಾ. ಅದ್ಕೇ. ಒಳಗುಂಡಿಯೊಳಗೆ ಮುಕ್ಕಾಲು ದೇಹ ತೂರೋಹಂಗೆ ವಡೀತೀನಿ. ಒಂದೊಂದಿನ ನಾಕು ನಾಕು ಗುಂಡಿ ತೋಡಿದ್ದೀನಿ. ಈಗ ಆಗೋದಿಲ್ಲ. ದಿನಕ್ಕೆ ಒಂದೇ ಗುಂಡಿ ವಡೆಯೋದು. ಇನ್ನೂ ಜಾಸ್ತಿ ಹೆಣಗೋಳು ಬಂದ್ರೆ ಅವರೇ ಕರ್ಕಂಬತ್ತಾರೆ ಗುಂಡಿ ತೋಡೋಕೆ ಆಳಗೋಳ್ನಾ.. ಮೊದ್ಲೆಲ್ಲಾ ಮನೇ ಕೆಲ್ಸಾನೂ ಮಾಡ್ಕಂಡು ಗುಂಡಿ ತೋಡೋ ಕೆಲಸಾನೂ ಮಾಡ್ತಿದ್ದೆ. ಒಂದು ಗುಂಡಿ ತೋಡೋಕೆ, ಕಮ್ಮೀ ಅಂದ್ರ್ರೂ ಮೂರು ನಾಕು ಗಂಟೆ ಬೇಕಾಗ್ತದೆ. ಈಗ ಆಗೋದಿಲ್ಲ.

ಆತ್ಮಹತ್ಯೆ ಮಾಡ್ಕೊಂಡವರೂ ಬರುತ್ತಾರಲ್ವಾ ಆಗ ನಿಮಗೆ ಏನು ಅನ್ನಿಸುತ್ತೆ? ನೇಣ ಹಾಕ್ಕಂಡೋವು, ಸುಟ್ಕೊಂಡೋವು, ವಿಷಕುಡಿದೋವು, ಬಾವಿಗೆ ಹಾರ್ಕೊಂಡೋವು ಎಲ್ಲಾ ಬತ್ತವೆ. ಸಣ್ಣ ವಯಸ್ನವೂ ಇರ್ತಾವೆ…. ‘ಮಕ್ಕಳ್ನಾ ವಡದು ಬೆಳಸು, ನುಗ್ಗೇನೆ ನುರಿದು ಬೆಳಸು’ ಅಂತಾ ಗಾದೇನೇ ಇಲ್ವ್ರಾ? ಮಕ್ಕಳ್ನಾ ಹೊಡೀದೆ ತುಂಬಾ ಮೆತ್ತಗೆ ಬೆಳಸದ್ರೆ ಬದುಕಿನಾಗೇ ಏನೂ ತಡ್ಕೋಳ್ಳೋಕೆ ಆಗಾದಿಲ್ಲ- ಈ ಬಾಳೆ ಕಂದಿನಹಂಗೆ ನಾಜೂಕು. ಹಂಗೆ ಎಷ್ಟೋ ಮಕ್ಕಳು ಸತ್ತಿದ್ದನ್ನು ನಾನು ಕಣ್ಣಾರೆ ನೋಡಿದ್ದೀನಿ. ಆಗ ಹಂಗ ಸತ್ತವ್ರನ್ನ ಕಂಡ್ರೆ ಅಸಯ್ಯ ಆಯ್ತದೆ. ಪಾಪ ..ಆ ಅಣ್ಣ, ತಮ್ಮ, ತಾಯಿ, ತಂದೆ ಎಲ್ಲಾ ಏನು ಮಾಡ್ಬೇಕು ಏಳ್ರೀ? ವಯಸ್ಸಾಗಿ ಸತ್ರೆ ಏನೂ ಅನ್ನಿಸೋಲ್ಲ ಸಹಜ ಅನ್ನಿಸ್ತದೆ. ಗುಂಡಿ ಒಳಗೆ ದುಡ್ಡು ಒಡವೆ ಏನಾದ್ರೂ ಇಡ್ತಾರಾ, ನೀಲಮ್ಮ?

ಅಯ್ಯಯ್ಯೋ ಸದ್ಯ! ಹೆಣದ ಮೂಗುಬೊಟ್ಟು ತೆಗೆಯೋಕೆ ಆಗ್ಲ್ಲಿಲ್ಲ ಅಂದ್ರೆ ಕಟಿಂಗ್ ಪ್ಲೈಯರ್ ಕೇಳ್ಕೊಂಡು ನನ್ನ ಅತ್ರ ಬರ್ತಾರೆ (ಜೋರಾಗಿ ನಗುತ್ತಾಳೆ). ಇನ್ನ ದುಡ್ಡು ಒಡವೆ ಇಡೋದಾ..? ಆದ್ರೆ ಈಗೆಲ್ಲಾ ಮನೇಲೆ ಕಳದು ತರ್ತಾರೆ, ಬುಡಿ. ಹಂಗೆ ಗುಂಡಿ ಒಳಗೆ ಹಾಕೋದು ಒಂತರಾ ವೇಸ್ಟ್ ಅಲ್ಲವ್ರಾ?  ಲಿಂಗೈಕ್ಯ ಆದ್ರೂ ಅಂತ ಗುಂಡಿಗೆ ತೋರಣಕಟ್ಟಿ ಗೃಹಪ್ರವೇಶದ ತರಹ ಮಾಡ್ತಾರೆ ಅಂತ ಕೇಳಿದ್ದೀನಿ ಹೌದಾ?

ನಮ್ಮ ಲಿಂಗಾಯ್ತರಲ್ಲಿ ಸತ್ತರೆ ಮೈಲಿಗೆ ಇಲ್ಲ. ಸಾವು ಅಂದ್ರೆ ನಮಗೆ ಸಂಬ್ರಮ. (ಮರಣವೇ ಮಹಾನವಮಿ). ಮನೇಲಿ ಹೆಣ ಇರೋಹಂಗೇನೇಯ ಪಾಯಸ ಮತ್ತೆ ಹಬ್ಬದ ಅಡಿಗೆ ಮಾಡಿ, ಬುದ್ಯೋರು ಮತ್ತೆಲ್ರೂ ಬಂದು ಜನಕ್ಕೆ ಬಡಿಸಿ, ಎಲ್ಲಾ ಉಂಡಮೇಲೇ ನಾವು ಹೆಣ ಎತ್ತೋದು. ಸ್ಮಶಾನಕ್ಕೆ ಓಗಿ ಬಂದ್ರೆ ಸ್ನಾನ ಮಾಡ್ಬೇಕು ಅಂತೇನೂ ಇಲ್ಲ. ದೇಹ ಮೇಲೆ ತೊಳದ್ರೆ ಏನು ಪ್ರಯೋಜ್ನಾ? ಏನು ಕರಳು ತಗದು ತೊಳೀತೀರಾ? ಮಾದಪ್ಪ ಮಾಡದ್ನಲ್ಲಾ ಅಂಗೇ? ಆತ್ಮ ಶುದ್ದಿ ಇದ್ರೆ ಆಯ್ತು. ನಾವು ಎಲ್ಲಿ ಕುಂತ್‍ಬಂದ್ರೇನು? ನಿಂತ್ ಬಂದ್ರೇನು?ಆದ್ರೆ ನಾನು ಮಾತ್ರ ಗುಂಡಿ ತೋಡಿದ ಮೇಲೇನೇ ಸ್ನಾನ ಮಾಡ್ತೀನಿ. ಮೈಲಿಗೆ ಅಂತಲ್ಲಾ, ಮಣ್ಣು, ಧೂಳು, ಬೆವರು ಆಗಿರ್ತದಲ್ಲಾ ಅದಕ್ಕೇ..ಆಯಾಸನೂ ಕಳೀತದೆ.

ಒಂದು ಗುಂಡಿ ತೋಡೋಕ್ಕೆ ಎಷ್ಟು ತೊಗೋತೀರಾ?ಒಂದು ಗುಂಡಿಗೆ 800, 900 ಹಿಂಗೆ ತಗಾತೀನಿ. ಸಣ್ಣಮಕ್ಕಳು, ಆಗತಾನೇ ಹುಟ್ಟಿ ಸತ್ತಿರೋವು, ಅಬಾರ್ಷನ್ ಆದವು ಬಂದ್ರೆ ಅವಕ್ಕೆ ತಗಾಳಾದಿಲ್ಲ. ಅದು ಪುಣ್ಯದ ಕೆಲಸ ಅಲ್ವ್ರಾ? ಅವರೇ ಬಲವಂತ ಮಾಡಿ ಕೊಡೋಕೆ ಬತ್ತಾರೆ. ಅವರ ಕರ್ಮಾನೂ ಕಳೀಬೇಕಲ್ಲ. ಅದ್ಕೆ ಒಂದು ರೂಪಾಯಿ ಈಸ್ಕೋತಿದ್ದೆ. ಈಗ ಒಂದು ರುಪಾಯಿಗೆ ಏನು ಬತ್ತದೆ? 10 ರೂಪಾಯಿ ಈಸ್ಕೋತೀನಿ. ಈಸ್ಕಂಡು, ಬಿಸ್ಕೀಟ್ ಪಾಕೀಟ್ ತಂದು ಇದಾವಲ್ಲ ಇವು (ಬೆಕ್ಕು ನಾಯಿಗಳನ್ನು ತೋರಿಸುತ್ತಾ) ಇವಕ್ಕೆ ಹಾಕ್ತೀನಿ. ಇವು ನಾನು ಸಾಕೀರೋವು. ಮಕ್ಕಳನ್ನಾದ್ರೂ ಬುಟ್ಟ್ ಇರ್ತೀನಿ, ಆದ್ರೆ ಬೆಕ್ಕು ನಾಯಿಗಳನ್ನ ಬುಟ್ ಇರಾಕಾಗಾದಿಲ್ಲ.

ಸತ್ತವರ ಮನೆವ್ರೆಲ್ಲಾ ಬಂದು ಇಲ್ಲಿ ಅತ್ತು ರಂಪ ಮಾಡೋವಾಗ ನೀವು ಭಾವುಕರಾಗ್ತೀರಾ? ಈಗ ನಾನು ಅಳೋಲ್ಲ. ಬದಲಾಗಿ ಅಳೋವ್ರನ್ನು ನೋಡಿದ್ದರೆ ಇವ್ರಿಗೇನು ಬ್ರಮೇನಾ? ಅನ್ನಿಸ್ತದೆ.

ಅತ್ತರೇನು ಅವರು ಎದ್ದು ಬರ್ತಾರಾ? ಅಳೋವಾಗ ನಾಕು ಜನಾ ಇಡಕೋತಾರೆ ಅಷ್ಟೇ.  ಆಮೇಲೆ ಸಾಯಂಕಾಲ ನಾವೇನು ತಿನ್ನೋದು ಬುಟ್ಟ್ ಬುಡ್ತೀವಾ? ನನ್ನ ಗಂಡ ಸತ್ತಾಗ ನನಗೆ ದುಃಖ ಆಯ್ತು ನಿಜ. ಆದ್ರೆ, ಅಳಲಿಲ್ಲ. ನಮ್ಮೆಜಮಾನ್ರನ್ನ ಆಸ್ಪತ್ರೆಗೆ ಕರ್ಕೊಂಡು ಹೋಗಾಕಿಲ್ಲ ಅಷ್ಟರಲ್ಲೇ ಪ್ರಾಣ ಹೋಯ್ತು-ಹಾರ್ಟ್‍ಅಟ್ಯಾಕ್ ಆಗಿ.  ನಾನೊಬ್ಳೇ ಇದ್ದೆ. ಮಗಾನೂ ದೂರ ಇದ್ದ. ಅಳ್ತಾ ಕೂತ್ಕಂಡ್ರೆ ಆಯ್ತದಾ? ಆಸ್ಪತ್ರೆಯಿಂದ ಬಾಡಿ ತಗಾಂಬರ್ಬೇಕು, ಇಲ್ಲಿ ಎಲ್ಲಾ ವ್ಯವಸ್ಥೆ ಮಾಡ್ಬೇಕು..ಇನ್ನೂ ನನ್ ಕರ್ತವ್ಯಗೋಳೆಲ್ಲಾ ಇದ್ದುವಲ್ಲಾ?

ನಮ್ಮೆಜಮಾನ್ರು ಓದಾಗ ನನಗೆ ಜೀವನ ಏನೂ ಅಂತ ಗೊತ್ತಿರಲಿಲ್ಲಾ ಬೆಳಿಗ್ಗೆ  ಓದ್ರೆ ರಾತ್ರ್ರಿ ಬರೋರು. ಆಗೆಲ್ಲಾ ಗಂಡನ ಕೈಲಿ ಜಗಳ ಆಡ್ತಿದ್ದೆ. ಅವರೂ ಚಾಡಿಮಾತು ಕೇಳ್ಕೊಂಡು ನನಗೆ ಮೊದ್ಲು ಮೊದ್ಲು ವಡೀತಿದ್ರು.  ಆಮೇಲೆ ಸ್ಮಶಾನಕ್ಕೆ ಬಂದಮೇಲೆ ವಡಿಯೋದು ಬುಟ್ಬುಟ್ರು. ಇಲ್ಲಿಗೆ ಬಂದಮೇಲೆ ಅವರಿಗೂ ಅನ್ನಿಸಿರಬೇಕು.

ರಾಜಕಾರಣಿಗಳನ್ನೆಲ್ಲಾ ಒಂದುಸಲ ಇಲ್ಲಿಗೆ ಕರ್ಕೊಂಡುಬಂದು ತೋರಿಸಬೇಕು. ಅಯ್ಯೋ ಕೋಟಿಗಟ್ಟಲೆ ನುಂಗದೋರೆಲ್ಲಾ ಇಲ್ಲೇ ಮನಗವ್ರೇ ತಗಾಳಿ. ನಾನೇ ಅದೀಕಾರ ನಡೆಸ್ಬೇಕೂ ಅಂತಾ ಯಾಕೆ ಸಾಯ್ತಾರೋ? ಅವ್ರು ಓಟಿಗೆ ಕೊಡೋ ಒಂದು ಸೀರೆ ಎಷ್ಟು ದಿನ ಉಟ್ಗೋತೀರಾ? ದುಡ್ಡ ಎಷ್ಟು ದಿನಾ ತಿಂತೀರಾ? ನಮ್ಮ ಓಟು ನಾವು ಆಕಬೇಕು, ಅದು ನಮ್ಮ ಹಕ್ಕು. ಆರೋಗ್ಯ ಒಂದು ಚೆನ್ನಾಗಿ ಮಡಿಕ್ಕಂಡ್ರೆ ಅದೇ ಕೋಟಿ ಇದ್ದಂಗೆ. ಅದೇ ಇಲ್ಲಾಂದ್ರೆ ಕೋಟಿ ಇಟ್ಕಂಡ್ರೂ ಏನ್ ಸುಕಾ? ಬೇರೆ ಕಡೆ ಮನೆ ಕಟ್ಟಿಸಿಕೊಂಡು ಹೋಗಬೇಕು ಅಂತ ನಿಮಗೆ ಅನ್ನಿಸಲಿಲ್ಲವಾ? ಒಂದು ಮನೆ ಇದೆ. ಮಠದವರು ಒಂದು ಫ್ರೀ ಜಾಗ ಕೊಟ್ಟರು. ಅಲ್ಲಿ ಒಂದು ಸಣ್ಣ ಮನೆ ಕಟ್ಕೊಂಡಿದೀವಿ. ಆದರೆ ಇಲ್ಲಿರೋದೇ ಸರಿ. ಇಷ್ಟು ಗಟ್ಟಿ ನೆಲ ಇದ್ಯೆಲಾ ? ಅಗೆಯುವ ಮುಂಚೆ ನೀರು ಹಾಕ್ತೀರಾ?ಇಲ್ಲ ಅಂಗೇ ಅಗೀತೀನಿ.

ನೀರು ಹಾಕಿದ್ರೆ ಜಾರ್ತದೆ. ಅಗೆಯೋಕ್ಕಾಗಲ್ಲಾ. ಕೊಚ್ಚೆ ಬೇರೆ. ಮಳೆಗಾಲ್ದಲ್ಲಿ ಅಗೆಯೋದು ಸುಲಭ ಆದ್ರೆ ಕೊಚ್ಚೆ ಆಗ್ತದೆ. ಬೇಸಿಗೆಯಲ್ಲಿ ಅಗಿಯೋದು ಕಷ್ಟ ಆದ್ರೆ ಕ್ಲೀನ್ ಅಗಿ ಇರ್ತದೆ. ಗುಂಡಿ ತೋಡೋವಾಗ ಬರೀ ಕಾಫಿ ಅತ್ವಾ ಟೀ ಕುಡೀತೀನಿ. ಆಮೇಲೆ ಮೈತೊಳಕಂಡು ಏನಾದ್ರೂ ತಿನ್ನೋದು. ತಿಂದುಬಿಟ್ರೆ ಕೆಲ್ಸಾ ಮಾಡಕ್ಕಗಲ್ಲ ನೋಡ್ರೀ.

ನೀವು ಟಿ.ವಿ ನೋಡ್ತೀರಾ? ಅದರಲ್ಲಿ ಏನು ನೋಡ್ತೀರಾ? ಸೀರಿಯಲ್, ಜ್ಯೋತಿಷ್ಯ, ಪೂಜೆ?ಮೊದ್ಲು ಬೇಜಾರಾದಾಗೆಲ್ಲಾ ಸೀರಿಯಲ್ ನೋಡ್ತಿದ್ದೆ. ಈಗ ಸೀರಿಯಲ್‍ಗಳಲ್ಲಿ ಅವರು  ಆಡೋದು ನೋಡಿದ್ರೆ “ಯೇ, ಥೂ!” ಅನ್ನಿಸ್ತದೆ. ನಮ್ಮದೇ ಐತಲ್ಲಾ ಒಂದು ದೊಡ್ಡ ಸೀರಿಯಲ್..(ಐದು ತಿಂಗಳ ಮಗುವನ್ನು ತೋರಿಸುತ್ತಾ)..ಅದನ್ನೇ ನೋಡುದ್ರೆ ಬೇಕಾದಷ್ಟು ಆಯ್ತದೆ. ಇನ್ನು ಪೂಜೆ ಪುನಸ್ಕಾರ ನೋಡೋರು ಬೇರೆ ಕೆಲ್ಸ ಕಾರ್ಯ ಇಲ್ಲದೇ ಇರೋರು. ನಮ್ಮಂತವರಿಗಲ್ಲ ಅದು ಬಿಡ್ರಿ.

ಅವರಿಗೆ ಮನೇಲಿ ಜನಾ ಇರ್ತಾರೆ. ಅದ್ಕೇ ರೇಷ್ಮೆ ಸೀರೆ ಉಟ್ಗಂಡು ತಟ್ಟೆ ತುಂಬಾ ಹಣ್ಣು ಮಡೀಕ್ಕಂಡು ..ಪೂಜೆ ಮಾಡ್ತಾರೆ. ಆಯಪ್ಪಂಗೂ ಅದ್ಕೇಂತ್ಲೇ ದುಡ್ಡ ಕೊಡ್ತಾರೆ. ಅದನ್ನು ನೋಡ್ತಾ ನಾನು ಕೂತ್ಕಂಡ್ರೆ, ಇಲ್ಲಿ ಗುಂಡಿ ಅಗ್ಯಾವ್ರೂ ಯಾರು? ದುಡ್ಡು ಕೊಡೋರು ಯಾರು?ದೇವರ ಭಕ್ತಿ ಇಲ್ಲಾಂತ ಅಲ್ಲ. ಅದು ನಮಗೆ ಕೊಟ್ಟಿರೋ ವರ.

ದೇವರಿಲ್ಲದೇ ನಾವು ಏನೂ ಮಾಡಕ್ಕಾಗಲ್ಲ. ದೇವ್ರಿಲ್ಲದಿದ್ರೇ ಏನು? ಅಂತ ಅನ್ನೋ ಹಂಗಿಲ್ಲ. ಅವನೇ ನಮಗೆ ಶಕ್ತಿ ಕೊಡ್ತಾನೆ. ನಾನೂ ಗಂಡ ಸತ್ತ ಹೊಸತರಲ್ಲಿ ನೇಣು ಹಾಕ್ಕೋಳಕ್ಕೆ ಹೋಗಿದ್ದೆ. ಕೊಟ್ಟಿಗೆ ಒಳಗೆ ದನ ಕರ ಕಟ್ಟಿದವಳಿಗೆ ಫ್ಯಾನಿಗೆ ಸೀರೆ ಕಟ್ಟೋಕೆ ಆಗ್ಲಿಲ್ಲ. ಗಂಟೇ ನಿಲ್ಲಲಿಲ್ಲ. ಅವನ ಇಚ್ಚೆ ಬೇರೆ ಇರ್ಬೋದು. ನಾನು ಉಳ್ಕಂಡು ಬಿಟ್ಟೆ. ನನ್ನ ಗಂಡ ಮಾಡಿದ ಸಾಲ ಅದು ಗಂಡನ ಋಣ ಅಲ್ಲ, ನನ್ನ ಋಣ, ಅಂತ ಆವೊತ್ತೇ ನಿರ್ಧಾರ ಮಾಡ್ದೆ- ಬದುಕಬೇಕು. ಅವನು ಕರೆಯೋತನಕ ಸಾಯಬಾರದು ಅಂತ.. ಗೇದು ಎಲ್ಲಾ ಸಾಲ ತೀರಿಸಿದೆ.

ಒಡವೆ ಸೀರೆ ಹಾಕ್ಕೋಳ್ತೀರಾ? ನಿಮಗೆ ಇಷ್ಟಾನಾ? ಗಂಡ ಇದ್ದಾಗ ಅವಕ್ಕೊಂದು ಬೆಲೆ, ಈಗ ಏನು? ಆದ್ರೂ ನಿಮ್ಮ ಖುಷಿಗೆ ಹಾಕ್ಕೋಬೇಕು ಅಂತ ಅನ್ನಿಸೋಲ್ವಾ?ಹಾಕ್ಕೋತೀನಿ ಅಲ್ಪ ಸ್ವಲ್ಪ. ಗುಂಡಿ ತೋಡೋಕೆ ಹೆಂಗೆ ಹೋಗ್ಬೇಕೋ ಹಂಗೆ ಹೋಗ್ತೀನಿ. ಸನ್ಮಾನ, ಮದುವೆಗಳಿಗೆ ಹೆಂಗ್ ಹೋಗ್ಬೇಕೋ ಹಂಗ್ ಹೋಗ್ತೀನಿ. ಬಟ್ಟೆ ಬೇಕು. ಅವು ಸುಮಾರಾಗಿ ಚೆನ್ನಾಗಿದ್ರೆ ಸಾಕು. ಯಾವುದೋ ಒಂದು ಬ್ಲೌಸು, ಸೀರೆ.  ಆಳಿಗೂ ಸರಿ. ಅರಸಂಗೂ ಸರಿ.

ಹೂಳೋದು ಸರೀನೋ? ಸುಡೋದು ಸರೀನೋ? ಏನು ಅನ್ನಿಸುತ್ತೆ ನಿಮಗೆ?ಅಳೋಗಂಟ ಅತ್ತಬುಟ್ಟು, ಸದ್ಯ ಸಾಗ್ಸುದ್ರೆಸಾಕು ಅನ್ಸುತ್ತೆ. ಯಾವುದಾದ್ರೂ ಸರಿ ವಾಸನೆ ಬರೋಕ್ ಮುಂಚೆ ಏನಾದ್ರೂ ಮಾಡ್ಬೇಕು. ಸುಡೋದೆ ಸರಿ ಅನ್ಸುತ್ತೆ ನೋಡಿ ಜಾಗಾನೇ ಎಲ್ಲಿದೆ ಇಲ್ಲಿ?

‍ಲೇಖಕರು Avadhi GK

March 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shyamala Madhav

    ಎಂತಹ ಜ್ಞಾನಿ, ನೀಲಮ್ಮ! ಇಷ್ಟೊಳ್ಳೆಯ ಸಂದರ್ಶನ, ಲೇಖನ ಕೊಟ್ಟುದಕ್ಕೆ ತುಂಬಾ ಥಾಂಕ್ಸ್ , ಗಿರಿಜಾ..

    ಪ್ರತಿಕ್ರಿಯೆ
  2. Vijayavaman

    ನನಗೆ ಏನು ಹೇಳಬೇಕು ಅಂತಾನೇ ಗೊತ್ತಾ ಗ್ತಿಲ್ಲ. ಈಕೆ ಒಬ್ಬ ಶಿವಶರಣೆ ಇರಬೇಕು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: