ಅವರು ತಾಯಿಯಂತೆ ತುಂಬ ನೆನಪಾಗುತ್ತಾರೆ..

 

ಇಂದು ವೈದ್ಯರ ದಿನಾಚರಣೆ 

lakshman geetha

ಲಕ್ಷ್ಮಣ್

ಮಧ್ಯರಾತ್ರಿ ಸಣ್ಣಗೆ ಶುರುವಾದ ಹೊಟ್ಟೆ ನೋವು, ಬೆಳಕು ಹರಿಯುವ ಗಳಿಗೆಯಾದರೂ ಕಡಿಮೆಯಾಗುವ ಲಕ್ಷಣಗಳಿರಲಿಲ್ಲ. ತಿಂಗಳಿನ ಕೊನೆಯ ದಿನಗಳನ್ನು ನಾವು ವಿದ್ಯಾರ್ಥಿ ಜೀವನದಲ್ಲಿ “ತುರ್ತುಪರಿಸ್ಥಿತಿಯ” ದಿನಗಳೆಂದೇ ಕರೆಯುತಿದ್ದೆವು.

ಜೋಬುಗಳು ಖಾಲಿಯಾಗುತ್ತಿದ್ದರಿಂದ ಹೀಗೆ ಗೆಳೆಯರ ರೂಮುಗಳಲ್ಲಿ ಊಟ ತಿಂಡಿಗಾಗಿ ಸ್ನೇಹಿತರ ರೂಮುಗಳಲ್ಲಿ ಮುಕ್ಕಾಮು ಹೂಡುತ್ತಿದ್ದೆವು. ಡಿಗ್ರಿ ಓದುವಾಗ ಹಾಸ್ಟೆಲ್ ಸೌಲಭ್ಯ ಇರಲಿಲ್ಲವಾದುದರಿಂದ ಧಾರವಾಡದ ಸಪ್ತಾಪೂರ, ಜಯನಗರ, ಶ್ರೀನಗರ ಹೀಗೆ ಅನುಕೂಲವಿದ್ದಲ್ಲಿ ಕಾಲೇಜಿಗ ಹತ್ತಿರವಾಗುವಂತೆ ಅಲ್ಲಲ್ಲಿ ಚದುರಿದಂತೆ ಗೆಳೆಯರ ರೂಮುಗಳಿದ್ದವು.
ಇಂತಹುದೇ ಒಂದು ತುರ್ತುಪರಿಸ್ಥಿತಿಯ ದಿನದ ಒಂದು ರಾತ್ರಿ, ಶ್ರೀನಗರದ ಗೆಳೆಯನ ರೂಮಿನಲ್ಲಿ ವಾಸ್ತವ್ಯವಿದ್ದೆ. ಮಧ್ಯರಾತ್ರಿ ತನಕ ಓದು, ಹರಟೆ, ಹಾಡು…..ದುರ್ಭಿಕ್ಷೆಯ ಕಾಲದಲ್ಲೂ ಹೊಟ್ಟೆ ಹುಣ್ಣಾಗುವಂತಹ ನಗು. ಬಿಡಿ ಆ ನಗೆ ನಗಲಾರೆವು ಈಗ. ಸರಿದ ಕಾಲದೊಂದಿಗೆ ನಗೆಗಳೂ ತಮ್ಮ ವೇಷ ಬದಲಿಸಿದ್ದು ನಮಗೂ ಗೊತ್ತಾಗುವುದಿಲ್ಲ.

doctorಅಂತಹ ಒಂದು ಸಂತಸದ ಗಳಿಗೆಯಲ್ಲಿ ಸಣ್ಣಗೆ ಶುರುವಾದ ಹೊಟ್ಟೆ ನೋವು ಸಮಯ ಸರಿದಂತೆಲ್ಲಾ ಹೆಚ್ಚಾಗುತ್ತಲೇ ಹೋಯಿತು. ಯಾವಾಗ ಬೆಳಗಾಗುವುದೆಂದು ಕಾಯ್ದಿದ್ದೇ ಬಂತು. ಉಹುಂ! ಪಕ್ಕದಲ್ಲಿ ಮಲಗಿದ್ದ ಸ್ನೇಹಿತ ಗೊರಕೆ ಹೊಡೆಯುತಿದ್ದ. ಅವನಿಗೇಕೆ ತೊಂದರೆ ಕೊಡವುದೆಂದು ಅವನಿಗೆ ಹೇಳದಯೇ ಆ ರೂಮಿನಿಂದ ಸಪ್ತಾಪುರದ ನನ್ನ ಒಂಟಿ ರೂಮಿಗೆ ಹೊರಟು ಬಿದ್ದೆ. ಧಾರವಾಡದ ನಿರ್ಜನ ಬೀದಿಗಳು ಈಗ ತಾನೇ ಕಣ್ಣುಜ್ಜಿಕೊಳ್ಳುತ್ತಿದ್ದವು. ಮಾತ್ರೆ ತೆಗೆದುಕೊಳ್ಳುವ ಅಂದರೆ ಬೆಳಿಗ್ಗೆ ಯಾವ ಅಂಗಡಿ ತೆರದಿರುತ್ತೆ.

ಇನ್ನು ಡಾಕ್ಟರ್ ದವಾಖಾನಿಗಿ ಬರುವುದೇ ಹತ್ತರ ನಂತರ ಪಕ್ಕದಲ್ಲಿಯ ನರ್ಸಿಂಗ್ ಹೋಮ, ಹೆಸರು ನೆನಪಿಸಿಕೊಂಡೇ ಗಾಬರಿಯಾಯಿತು. ಹೀಗೆ ಯೋಚಿಸುತ್ತ ದಾರಿ ಸವೆಸುತ್ತ ಸಿಟಿ ಬಸ್ಸು ಹತ್ತಿ ಸಪ್ತಾಪುರದ ಸ್ಟಾಪಿನಲ್ಲಿ ನೋಯುವ ಹೊಟ್ಟೆ ಹಿಡಿದುಕೊಂಡು ಅಲ್ಲಿಂದ ಅರ್ಧ ಕಿ.ಮಿ. ದೂರದ ಮಿಚಿಗನ್ ಕಂಪೌಂಡಿನ ರೂಮಿಗೆ ಬಂದಿದ್ದೆ. ಬಾಗಿಲು ತೆಗೆಯಲು ನೋಡಿದೆ ಬೀಗವೆಲ್ಲಿ?

ಆ ನೋವಿನ ಗಳಿಗೆಯಲ್ಲಿ ಶ್ರೀನಗರದ ರೂಮಿನಲ್ಲೇ ಬಿಟ್ಟು ಬಂದಿದ್ದೆ. ವಾಪಸ್ಸು ಹೋಗುವಷ್ಟು ತಾಳ್ಮೆ, ಶಕ್ತಿ ನನ್ನಲ್ಲಿ ಇರಲಿಲ್ಲ. ಡೂಪ್ಲಿಕೇಟ್ ಕೀಗೆ ಓನರನ್ನು ಕೇಳುವಷ್ಟು ಧೈರ್ಯವಿರಲಿಲ್ಲ. ಹೇಗೋ ಹರಸಾಹಸಪಟ್ಟು ಬೀಗ ಒಡೆದು ಸ್ವಲ್ಪ ಹೊತ್ತು ಸುಧಾರಿಸಿಕೊಂಡೆ. ನೋವು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ.

ಅಮ್ಮನ ಮನೆ ಔಷಧಿ ನೆನಪಾಯಿತು. ನಾವು ಚಿಕ್ಕವರಿದ್ದಾಗ ಉದರಶೂಲೆ ಎಂದಾಗಲೆಲ್ಲ ಸ್ವಲ್ಪ ಅಜವಾನ ತಿನ್ನಿಸಿ ಮೇಲೆ ಒಂದು ಲೋಟ ಬಿಸಿನೀರು ಕುಡಿದು ಆಟದಂಗಳಕ್ಕೆ ಬಿದ್ದರೆ ಅದೆಲ್ಲಿಯ ಉದರ ಶೂಲೆ? ಸಂಕೋಚವನ್ನು ಬಿಗಿಮುಷ್ಟಿಯಲ್ಲಿ ಹಿಡಿದುಕೊಂಡೇ ಓನರಮ್ಮನ್ನಿಗೆ ಬಿಸಿನೀರು ಕೇಳಿದೆ

ಬಿಳಿಚಿದ ನನ್ನ ಮುಖ ನೋಡಿ ಅವರಿಗೂ ಗಾಬರಿಯಾಯಿತು ಅದಾಗಲೇ ಎರಡು ಸಲ ವಾಂತಿಯಿಂದಾಗಿ ದೇಹ ನಿರ್ಜಲೀಕರಣಗೊಂಡು ತುಟಿ ಬಾಯಿ ಒಣಗಿ ದೇಹ ನಿಶ್ಯಕ್ತಗೊಂಡಿತ್ತು. ಅವರು ಯಾವ ಯೋಚನೆಯನ್ನು ಮಾಡದೇ ನನ್ನ ಕರೆದುಕೊಂಡು ಹೋಗಿದ್ದು ರಾಮನಗೌಡರ ನರ್ಸಿಂಗ್ ಹೋಮ್ ಗೆ.

ಧಾರವಾಡದ ರಾಮನಗೌಡರ ಸರ್ ಹೆಸರಾಂತ ಸರ್ಜನರು, ಸಜ್ಜನರು, ಬಡವರು, ರೋಗಿಗಳೆಡೆಗೆ ಅಪಾರ ಅನುಕಂಪವುಳ್ಳವರು. ಹೊಟ್ಟೆ ಮೇಲೆ ಕೈಯಿಟ್ಟು ಪರೀಕ್ಷಿಸಿದ ತಕ್ಷಣ ಇದು ಅಪೆಂಡಿಸೈಟಿಸ್ ಎಂದು ರೋಗ ನಿದಾನ ಮಾಡಿದರು. ಬರಸಿಡಿಲಿನ ಹೊಡೆತಕ್ಕೆ ಈ ಬಡವನ ಗುಡಿಸಲೇ ಬೇಕಿತ್ತಾ? ಈಗಾಗಲೇ ತುಂಬ ತಡವಾಗಿದೆ ಇನ್ನೂ ತಡ ಮಾಡಿದರೆ ಸೋಂಕು ಎಲ್ಲೆಡೆ ಪಸರಿಸಿ ಜೀವಕ್ಕೇ ಅಪಾಯವೆಂದು ತಿಳಿಸಿದಾಗ ನನಗೆ ಏನೂ ತೋಚದಂತಾಯಿತು. “ಏನಾದರೂ ಮಾಡಿ ಸರ್ ನನ್ನ ಹೊಟ್ಟೆ ನೋವು ಕಡಿಮೆ ಮಾಡಿ ಸರ್ ಎಂದು ದೈನ್ಯವಾಗಿ ಮೊರೆಯಿಟ್ಟೆ. ಗುರುಗಳು ಒಂದು ದೈವನಗೆ ನಕ್ಕು ಬೆನ್ನಮೇಲೆ ಪ್ರೀತಿಯ ಏಟು ಬಿಟ್ಟು, ನನ್ನನ್ನು ವಾರ್ಡಿಗೆ ಶಿಪ್ಟ್ ಮಾಡಿದರು.

ಮೇಲ್ನೋಟಕ್ಕೆ ಸರಳವಾದ ಸಂಗತಿಯೆಂದು ಭಾವಿಸಿದರೂ ಇಪ್ಪತ್ತು ವರುಷದ ಹಿಂದೆ ಯಾರ ಬೆಂಬಲವೂ ಇಲ್ಲದೇ ಊರಿನಿಂದ ಸುಮಾರು ಇನ್ನೂರು ಕಿ.ಮಿ. ದೂರದಲ್ಲಿ ಯಾವುದೋ ಒಂದು ಕಗ್ಗಾಡಿನ ಹಳ್ಳಿಯಿಂದ ಬಂದು, ತಂದೆ-ತಾಯಿಯವರಿಂದ, ಬಂಧು ಬಳಗದಿಂದ ದೂರವಿದ್ದು ಹೊಟ್ಟೆ ಬಟ್ಟೆಗೆ ಕಷ್ಟವಿದ್ದ ಕಾಲದಲ್ಲಿ ಆರೋಗ್ಯದ ಈ ಅನಿರೀಕ್ಷಿತ ಆಪತ್ತಿದೆಯೆಲ್ಲ ಅದನ್ನು ಅನುಭವಿಸಿದವರು ಮಾತ್ರ ವಿವರಿಸಬಲ್ಲರು.

ಅದೂ ಸಂವಹನ ಕಷ್ಟವಿದ್ದ ಕಾಲದಲ್ಲಿ ಆಪರೇಷನ್ ಅಂದರೆ ಸುಮ್ಮನೆ ಮಾತಾ? ಮುಂಗಡ ಹಣ ಕಟ್ಟಬೇಕು, ಅನುಮತಿ ಪತ್ರಕ್ಕೆ ಸಹಿ ಹಾಕಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ವಾರ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು. ಅಷ್ಟರಲ್ಲಿಯೇ ನನ್ನ ಸ್ನೇಹಿತರೊಬ್ಬರು ನನ್ನ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ನಮ್ಮ ತಂದೆಯವರು ಆಪರೇಷನ್ ಗೆ ಮೌಖಿಕ ಅನುಮತಿಯನ್ನು ಕೊಟ್ಟಿದ್ದರು. ಆದರೆ ಕಾನೂನು?  ಅದು ಲಿಖಿತ ದಾಖಲೆ ಮತ್ತು ಪುರಾವೆ ಕೇಳುತ್ತದೆ. ನಾಳೆಯೇನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ?

ಅಪ್ಪ ಹೇಳಿದ ತಕ್ಷಣ ಹೊರಟಿದ್ದರೂ ಅವರು ತಲುಪುವುದು ನಾಳೆ ಬೆಳಿಗ್ಗೆಯೇ. ಬರುವುದೆಂದರೆ ಖಾಲಿ ಕೈಲಿ ಬರಲಾಗುತ್ತದೆಯೇ?  ದುಡ್ಡು ಹೊಂದಿಸಬೇಕು.

ಆದರೆ ಆಸ್ಪತ್ರೆಯ ಬೆಡ್ಡಿನ ಮೇಲೆ ಸಾವು ಮತ್ತು ಬದುಕಿನ ಎರಡೇ ಗೆರೆಯಲ್ಲಿ ಉಸಿರಾಡುತಿದ್ದ ನನ್ನ ಕಾಯಿಲೆಗೆ ಅಷ್ಟು ತಾಳ್ಮೆಯಿರಲಿಲ್ಲ. ತಕ್ಷಣ ಆಪರೇಷನ್ ಮಾಡಿಸಲೇಬೇಕಿತ್ತು. ಒಂದು ರೂಪಾಯಿ ಅಡ್ವಾನ್ಸ್ ದುಡ್ಡು ಕೇಳದೇ ನನ್ನ ಸ್ನೇಹಿತರಿಂದ ಅನುಮತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು, ತುಂಬ ರಿಸ್ಕೀ ಪರಿಸ್ಥಿತಿಯಲ್ಲಿ ಆಪರೇಷನ್ ಮಾಡಿ, ನನಗೆ ಪುನರ್ಜನ್ಮ ನೀಡಿದ ಧನ್ವಂತರಿ ಡಾ.ರಾಮನಗೌಡರ ಸರ್.

ನೀವು ಏನೇ ಹೇಳಿ ಈ ಧಾರವಾಡ ಶಹರಿಗೆ ತಾಯ್ತನವೆಂಬುದು ಇದರ ರಕ್ತದಲ್ಲೇ ಇದೆ. ಊರು ಬಿಟ್ಟು ಬಂದ ನಮ್ಮಂತಹ ಅಲೆಮಾರಿಗಳಿಗೆ ಅಕ್ಕರೆಯ ಮಡಿಲು ಯಾವೊತ್ತೂ ಸಲುಹಿದೆ. ಹೀಗಾಗಿ ಇಲ್ಲಿ ಓದಿದವರೆದೆಯಲ್ಲೊಂದು ಸುಪ್ತ ಶಾಮಲೆಯ ಗುಪ್ತ ಗಾಮಿನಿಯ ಹರಿವು ಇದ್ದೇ ಇದೆ.

ಈಗ ಈ ಮಹಾನಗರದಲ್ಲಿ ಫೈವ್ ಸ್ಟಾರ್ ಹೋಟೇಲಿನಂತಹ ಆಸ್ಪತ್ರೆಗಳಲ್ಲಿ ರೋಗಿಯನ್ನು ಮುಟ್ಟಿಯೂ ನೋಡದೆ ಕೇವಲ ರಿಪೋರ್ಟ್ ಗಳಿಂದ ರೋಗಿಯ, ರೋಗ ನಿದಾನ ಮಾಡುವ ಸೂಟು ಬೂಟು ಸ್ಪೆಷಲಿಸ್ಟ ಡಾಕ್ಟರ್ ಗಳನ್ನು ನೋಡಿದಾಗ ಕೇವಲ ಹತ್ತು ರೂಪಾಯಿ ಫೀಸು ಪಡೆದು ಹಗಲಿರುಳು ಸೇವೆ ಮಾಡುವ ವೈದ್ಯ ರಾಮನಗೌಡರ ಸರ ನನಗೆ ತಾಯಿಯಂತೆ ತುಂಬ ನೆನಪಾಗುತ್ತಾರೆ.

‍ಲೇಖಕರು admin

July 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: