ಅಲ್ಲಿದ್ದ ಅರ್ಚಕನಿಗೆ ಇನ್ನೂರು ರೂಪಾಯಿ ಪೀಕಬೇಕಾಯಿತು..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 28

ಜೋಳಿಗೆ ಪವಾಡ

avadhi-column-rahul bw-edited2

ಬೆಳಗ್ಗೆ ಬೇಗನೆ ಎದ್ದು ರವಿಮಾಸ್ಟರ್‍ಗೆ ನನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟು ಅವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ಹೊರಟೆ. ಚಿಕ್ಕಜಾಜೂರಿಂದ ಕೋಟೆಯಾಳ್ ಮುಖಾಂತರ ಎಂಟು ಮೈಲುಗಳ ನಡಿಗೆಯನ್ನು ಬೆಳಗಿನ ಪರಿಸರವನ್ನು ಸವೆಯುತ್ತಾ ನಡೆದೆ. ಸುತ್ತಮುತ್ತ ಹೇರಳವಾಗಿ ತೋಟವಿದ್ದ ಕಾರಣ, ಹಲವಾರು ತರಹದ ಪಕ್ಷಿಗಳು ಸ್ವಚ್ಛಂದವಾಗಿ ಹಾರಾಡುತ್ತಿದ್ದವು. ಎಂತಹ ಬೇಜಾರಾಗಿದ್ದರೂ ಅವುಗಳ ಚಿಲಿಪಿಲಿ ಸದ್ದು ಕೇಳಿದರೆ ಸಾಕು ಮನಸ್ಸು ತಿಳಿಯಾಗುತ್ತದೆ. ಕೆಲವು ಕ್ಷಣ ಅವುಗಳ ಆಟಗಳನ್ನು ನೋಡುತ್ತಾ ನಿಂತು ಮೈಮರೆತೆ. ಗಿಣಿ, ಗುಬ್ಬಚ್ಚಿ, ಪಾರಿವಾಳ ಇತ್ಯಾದಿ ಪಕ್ಷಿ ಸಂಕುಲದ ಸ್ವರ್ಗವೇ ಅಲ್ಲಿ ಸೃಷ್ಠಿಯಾಗಿತ್ತು.

ಹಾಗೇ ಮುಂದೆ ಸಾಗಿ ಬತ್ತಿದ ದೊಡ್ಡ ಕೆರೆ ದಾಟಿದರೇ ಶಿವಪುರದ ಪ್ರೌಢಶಾಲೆ. ಶಾಲೆಯ ಆವರಣ ಹತ್ತಾರು ಮರಗಳ ಹಸಿರಿನಿಂದ ಕಂಗೊಳಿಸುತ್ತಿತ್ತು. ಖುಷಿಯಿಂದಲೇ ಭೇಟಿ ಕೊಟ್ಟ ನನಗೆ ಮುಖ್ಯೋಪಾಧ್ಯಾಯರ ಅನುಪಸ್ಥಿತಿಯಲ್ಲೇ ನನಗೆ ಅನುವುಮಾಡಿಕೊಟ್ಟರು. ಉಪನ್ಯಾಸ ಶುರುಮಾಡಿದ ಸ್ವಲ್ಟ avadhi- column- rahul- low res- editedಸಮಯದಲ್ಲೆ ಮಕ್ಕಳ ಗದ್ದಲ ಶುರುವಾಯಿತು. ಸುತ್ತ ನೋಡಿದರೆ ಶಿಕ್ಷಕರ ಪತ್ತೆಯೇ ಇಲ್ಲ. ಶಿಕ್ಷಕ ತರಬೇತಿಗೆಂದು ಬಂದಿದ್ದ ವಿದ್ಯಾರ್ಥಿಗಳಾದರೂ ಏನು ಮಾಡಬೇಕು. ನನಗೂ ರೋಸಿ ಹೋಗಿ ನನ್ನ ಉಪನ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಮಕ್ಕಳಿಗೆ ನಮಸ್ಕರಿಸಿ ಹೊರಡಲು ಸಿದ್ಧನಾದೆ. ಅತಿಥಿಗಳು ಬಂದಾಗ ಶಾಲೆಯ ಮಾನ ಉಳಿಸುವಂತಹ ನಡುವಳಿಕೆ ಕಾಪಾಡಿರಿ ಎಂದು ನೀತಿ ಪಾಠವನ್ನು ಹೇಳಿ ಅಲ್ಲಿಂದ ಕಾಲ್ಕಿತ್ತೆ.

ಸುತ್ತ ನೋಡಿದರೆ ತೋಟ ಹೊಲಗಳಿಗೆಲ್ಲಾ ಸಂಪೂರ್ಣ ಅಂತರ್ಜಲದ ನೀರೇ ಮೂಲ. ವಾಣಿಜ್ಯ ಬೆಳೆಗಳನ್ನು ಬೆಳೆದು ಮೆರೆಯುತ್ತಿರುವ ಜನರ ಆಡಂಬರ ತುಂಬಾ ವರ್ಷಗಳು ಇರಲಾರದು. ಇನ್ನೆಷ್ಟು ದಿನದಲ್ಲಿ ಬತ್ತಿಹೋಗಿ ಬರಡಾಗುತ್ತದೋ ನೋಡಬೇಕು. ಅದೇ ಬೇಜಾರಿನಲ್ಲಿ ಎರಡು ಮೈಲು ನಡೆದು ಮಲ್ಲಾಡಿಹಳ್ಳಿ ತಲುಪಿದೆ.

ಅನಾಥ ಸೇವಾಶ್ರಮ ಎಂಬ ಫಲಕ ಕಂಡ ತಕ್ಷಣ ತುಸು ಸಮಾಧಾನವಾಯಿತು. ವಿಚಾರಿಸಿಕೊಂಡು ಕಾರ್ಯಾಲಯಕ್ಕೆ ಹೋಗಿ ನನ್ನ ವಿಷಯ ಹೇಳಿದೆ. ಅಲ್ಲಿಯ ಮುಖ್ಯಸ್ಥರು ನನ್ನ ಪೂರ್ವ ವಿಚಾರವನ್ನೆಲ್ಲಾ ಕೇಳಿ ತಿಳಿದುಕೊಂಡು ನನ್ನ ಪಾಸ್‍ಪೋರ್ಟ್‍ನ್ನು ಪರಿಶೀಲಿಸಿ, ನನ್ನಿಂದ ಒಂದು ವಿನಂತಿ ಪತ್ರ ಬರೆಸಿಕೊಂಡು ಕೆಳಗಿನ ಪ್ರಶ್ನೆ ಮುಂದಿಟ್ಟರು.

“ಸರೀ, ನೀವು ಪಾದಯಾತ್ರೆ ಮಾಡಲು, ಸರ್ಕಾರದ ವತಿಯಿಂದ ಏನಾದರೂ ಅನುಮತಿ ಪಡೆದಿದ್ದೀರ?” ಎಂದು ಕೇಳಿದರು. ನನಗೆ ಆ ಪ್ರಶ್ನೆ ಆಶ್ಚರ್ಯ ತಂದಿತು. “ನಾನು ನನ್ನ ದೇಶದಲ್ಲಿ ನಡೆದುಕೊಂಡು ಓಡಾಡುವುದಕ್ಕೆ ಯಾವ ಪುಣ್ಯಾತ್ಮನ ಅನುಮತಿ ಪಡೆಯಬೇಕು?” ಎಂದೆ. ಆ ಮಾತನ್ನು ಅಲ್ಲಿಗೇ ನಿಲ್ಲಿಸಿ, ನನ್ನ ಪತ್ರದಲ್ಲಿ ಬರೆದಿದ್ದನ್ನು ಓದಿ, ನಾನು ಅಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ವಾಸ್ತವ್ಯ ಮಾಡುವುನೆಂದು ತಿಳಿದ ತಕ್ಷಣ ಬಾಡಿಗೆಯ ವಿಚಾರಕ್ಕೆ ಬಂದರು. ನಾನು ಸರಿಯೆಂದು ಒಪ್ಪಿದೆ. ಅವರಿಗೇನು ಅನಿಸಿತೋ ಏನೋ.

ಮತ್ತೆ ನನ್ನ ಈ ಕೆಲಸದ ವಿಚಾರದ ಬಗ್ಗೆ ಮತ್ತೊಮ್ಮೆ ವಿಚಾರಿಸಿದ ನಂತರ ಅವರು ಬಾಡಿಗೆಯ ವಿಚಾರ ಎತ್ತಿದ್ದು ತಪ್ಪು ಎನಿಸಿರಬೇಕು. ಒಬ್ಬ ಹುಡುಗನ್ನನ್ನು ಕರೆದು ನನಗೆ ಒಂದು ಕೋಣೆ ಕೊಡುವಂತೆ ಹೇಳಿದರು. ಕೊಠಡಿ ಸಿಕ್ಕ ತಕ್ಷಣ, ಹೋಗಿ ಅಲ್ಲಿಯ ಮಂಚದ ಮೇಲೆ ಬಿದ್ದುಕೊಂಡು ಒಂದೆರಡು ಗಂಟೆ ನಿದ್ರೆ ಮಾಡಿದೆ. ಆಯುರ್ವೇದದ ಆಸ್ಪತ್ರೆಯ ಪಕ್ಕದಲ್ಲಿರುವ ಮೆಸ್‍ಗೆ ಹೋಗಿ ಚಪಾತಿ ಊಟ ಮಾಡಿದ್ದಾಯಿತು. ಹಾಗೇ ಸುತ್ತಾಡುತ್ತಾ, ಧ್ಯಾನ ಮಂದಿರವನ್ನು ತಲುಪಿದೆ. ಅಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಮುಟಾ ಊರಿನ ಅರ್ಚಕರೊಬ್ಬರ ಪರಿಚಯವಾಯಿತು. ಸುಮಾರು ಮೂವತ್ತೈದು ಆಸುಪಾಸಿನಲ್ಲಿದ್ದ ಅವರ ಹೆಸರು ವಿನಾಯಕ ಎಂದು. ಅವರಿಗೆ ನಾ ಆ ಊರಿಗೆ ಬಂದ ಕಾರಣ ತಿಳಿಸಿದೆ.

ಅದು ರಾಘವೇಂದ್ರ ಸ್ವಾಮೀಜಿಯವರ ಮತ್ತು ಗುರುದಾಸ್‍ಜೀಯವರ ಪುಣ್ಯ ಸಮಾಧಿ ಸ್ಥಳ. ಮಂಗಳಾರತಿ, ತೀರ್ಥ ಪಡೆದು ಆ ಮಹಾನುಭಾವರ ಬಗ್ಗೆ ವಿಚಾರಿಸಿದೆ. ವಿನಾಯಕ ಕಥೆಯನ್ನು ಚುಟುಕಾಗಿ ಹೇಳಿ, ರಾಘವೇಂದ್ರ ಸ್ವಾಮೀಜಿಯರೇ ಬರೆದಿರುವ ತಮ್ಮ ಆತ್ಮಚರಿತ್ರೆ ‘ಜೋಳಿಗೆ ಪವಾಡ’ ವನ್ನು ತಂದು ಅದರಲ್ಲಿದ್ದ ಚಿತ್ರಗಳನ್ನು ತೋರಿಸುತ್ತಾ ವಿವರಿಸಲು ಶುರುಮಾಡಿದರು.

ರಾಘವೇಂದ್ರ ಸ್ವಾಮೀಜಿಯವರು ಮಹಾ ಯೋಗಿಗಳು. ಧ್ಯಾನ, ಯೋಗ, ವ್ಯಾಯಾಮ ಮತ್ತು ಆಯುರ್ವೇದದಲ್ಲಿ ಸಿದ್ಧಹಸ್ತರು. ಜೋಳಿಗೆ ಹಿಡಿದು ಈ ಊರಿಗೆ ಬಂದು ನೆಲೆಸಿ, ಊರಿನಲ್ಲಿ ಅಂದು ತಲೆದೋರಿದ್ದ ಮಹಾ ಮಾರಿಗೆ ಚಿಕಿತ್ಸೆಕೊಟ್ಟು ಜನರ ಪ್ರಾಣ ಕಾಪಾಡಿದರು. ನಂತರ ಜನರ ಮನಗೆದ್ದು ಊರಿನವರಲ್ಲಿ ಒಬ್ಬರಾದರು. ಆನಂತರ ನಡೆದೆದ್ದೆಲ್ಲಾ ಈಗ ಇತಿಹಾಸ. ಪ್ರೌಢಶಾಲೆ, ಕಾಲೇಜು, ಕೈಗಾರಿಕಾ ತರಬೇತಿ, ಆಯುರ್ವೇದ ಕಾಲೇಜು, ಆಯುರ್ವೇದ ಆಸ್ಪತ್ರೆ, ವಸತಿ ನಿಲಯಗಳು, ವ್ಯಾಸಪೀಠ, ಧ್ಯಾನಮಂದಿರ, ಯೋಗಮಂದಿರ, ಗಿಡಮೂಲಿಕೆಗಳ ವನಗಳನ್ನು ನಿರ್ಮಿಸಿದ್ದಾರೆ.

ಹಾಗೆಯೇ ಅವರು ಸರ್ವಧರ್ಮದವರನ್ನೂ ಒಟ್ಟಾಗಿ ಕರೆದೊಯ್ದು, ಎಲ್ಲಾ ವರ್ಗದವರಿಗೂ ದೇವಾಲಯ ಮತ್ತು ಮಸೀದಿಯನ್ನು ಕಟ್ಟಿಸಿಕೊಟ್ಟಿದ್ದಾರೆ. ಅವರ ಸಮಾಧಿ ಮಂದಿರದಲ್ಲೂ ಸರ್ವಧರ್ಮಚಕ್ರವನ್ನು ಕಾಣಬಹುದು. ಅವರು ಅಧ್ಯಾತ್ಮಿಕ ಗುರುಗಳಷ್ಟೇ ಅಲ್ಲ, ಮಹಾನ್ ದೇಶಭಕ್ತರು ಮತ್ತು ಸ್ವಾತಂತ್ರ್ಯ ಹೋರಾಟಗಾರರು. ಅವರನ್ನು ಪ್ರೀತಿಯಿಂದ “ತಿರುಕ” ಎಂದೂ ಕರೆಯುವುದುಂಟು. ಗುರುದಾಸ್‍ಜೀರವರು ರಾಘವೇದ್ರ ಸ್ವಾಮೀಜಿಯವರ ಪಟ್ಟ ಶಿಷ್ಯರಾಗಿ, ಕೊನೆಗೆ ಅವರಿಬ್ಬರದೂ ಬಿಡಿಸಲಾರದ ಸಂಬಂಧವಾಗಿ ಉಳಿಯಿತು.

ಇಷ್ಟೆಲ್ಲಾ ಕೇಳಿದ ಮೇಲೆ ನನ್ನ ಮನಸ್ಸು ತಡೆಯಬೇಕಲ್ಲ. ಅರ್ಚಕರನ್ನು ವಿನಂತಿಸಿಕೊಂಡು ಒಂದೆರಡು ದಿನದ ಮಟ್ಟಿಗೆ ‘ಜೋಳಿಗೆ ಪವಾಡ’ ಪುಸ್ತಕವನ್ನು ಪಡೆದಿದ್ದಾಯಿತು. ಅಷ್ಟರಲ್ಲೇ ನನ್ನ ಮತ್ತು ವಿನಾಯಕರವರ ಮಧ್ಯೆ ಸ್ನೇಹ ಬೆಳೆದುಬಿಟ್ಟಿತ್ತು. ಸಂಜೆ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಚಹಾ, ಬಿಸ್ಕಟ್ ನೀಡಿ ಉಪಚರಿಸಿದರು. ಹಾಗೇ ನಾಳೆ ಅಂದರೆ ಭಾನುವಾರ ಮಧ್ಯಾಹ್ನದ ಊಟಕ್ಕೆ ಅವರ ಮನೆಗೆ ಬರುವಂತೆ ಆಹ್ವಾನಿಸಿದರು. ಇದಲ್ಲವೇ ನಿಜವಾದ ಮಾನವೀಯತೆ ಮತ್ತು ಅತಿಥಿ ಸತ್ಕಾರ ಎಂದರೆ.

ನಂತರ ಅವರ ಜೊತೆ ಹೋಗಿ ಊರಿನ ಒಳಗಿದ್ದ ಗುಡಿಗಳ ದರ್ಶನ ಪಡೆದೆ. ರಾತ್ರಿ ಮೆಸ್‍ನಲ್ಲಿ ಊಟ ಮುಗಿಸಿ ನನಗೆ ಕೊಟ್ಟಿದ್ದ ಕೊಠಡಿಗೆ ಬಂದು ಬಟ್ಟೆ ಒಗೆದು ಒಣಗಲು ಇಟ್ಟು, “ಜೋಳಿಗೆ ಪವಾಡ” ಪುಸ್ತಕವನ್ನು ಓದಲು ಶುರುಮಾಡಿದೆ. ರಾತ್ರಿ ಎಷ್ಟು ಹೊತ್ತಿಗೆ ಮಲಗಿದೆನೋ ಆ ದೇವರೇ ಬಲ್ಲ. ಆ ಪುಸ್ತಕ ನನ್ನನ್ನು ಅಷ್ಟು ಸಳೆದಿತ್ತು.

Ecology concept: Isolated footprint shaped tree with projected shadow. Clipping path included to easily get rid of the shadow or to multiply it over your own background in an editing software. Some of my environment related images here: [url=/file_closeup.php?id=12252015][img]/file_thumbview_approve.php?size=1&id=12252015[/img][/url] [url=/file_closeup.php?id=12680118][img]/file_thumbview_approve.php?size=1&id=12680118[/img][/url] [url=/file_closeup.php?id=12680146][img]/file_thumbview_approve.php?size=1&id=12680146[/img][/url] [url=/file_closeup.php?id=12680149][img]/file_thumbview_approve.php?size=1&id=12680149[/img][/url] [url=/file_closeup.php?id=12252009][img]/file_thumbview_approve.php?size=1&id=12252009[/img][/url] [url=/file_closeup.php?id=12485221][img]/file_thumbview_approve.php?size=1&id=12485221[/img][/url] [url=/file_closeup.php?id=13050964][img]/file_thumbview_approve.php?size=1&id=13050964[/img][/url] [url=/file_closeup.php?id=12474208][img]/file_thumbview_approve.php?size=1&id=12474208[/img][/url] [url=/file_closeup.php?id=12913019][img]/file_thumbview_approve.php?size=1&id=12913019[/img][/url] [url=/file_closeup.php?id=12252003][img]/file_thumbview_approve.php?size=1&id=12252003[/img][/url] [url=/file_closeup.php?id=12952162][img]/file_thumbview_approve.php?size=1&id=12952162[/img][/url] [url=/file_closeup.php?id=13076425][img]/file_thumbview_approve.php?size=1&id=13076425[/img][/url] [url=/file_closeup.php?id=12952183][img]/file_thumbview_approve.php?size=1&id=12952183[/img][/url]

ಬೆಳಗ್ಗೆ ಬೇಗ ಎದ್ದು ವ್ಯಾಯಾಮ, ಸ್ನಾನ ಮುಗಿಸಿ, “ಜೋಳಿಗೆ ಪವಾಡ” ಓದಲು ಶುರುಮಾಡಿದೆ. ಅದು ಯಾಕೋ ನನ್ನ ಈ ಪ್ರಯಾಣವನ್ನೇ ಹೋಲುತ್ತಿತ್ತು. ತಿಂಡಿ ತಿನ್ನಲು ಮೆಸ್‍ಗೆ ಹೋದಾಗ ಹತ್ತು ಗಂಟೆಯಾಗಿತ್ತು. ತಿಂಡಿ ಖಾಲಿಯಾಗಿದೆ ಎಂದು ಹೇಳಿದರು. ಸರಿ ಎಂದು ಧ್ಯಾನಮಂದಿರಕ್ಕೆ ಹೋಗಿ ವಿನಾಯಕರವರನ್ನು ಮಾತನಾಡಿಸಿಕೊಂಡು ಬಂದು ಮೈದಾನದ ಸುತ್ತ ಬೆಳೆದಿದ್ದ ಮರಗಳ ಕೆಳಗೆ ಒಂದು ಕಟ್ಟೆಯ ಮೇಲೆ ಕುಳಿತು ಪುಸ್ತಕವನ್ನು ಓದುತ್ತಾ ಕುಳಿತೆ. ರಾಘವೇಂದ್ರ ಸ್ವಾಮೀಜಿಯವರ ಜೀವನ ಕಥೆಯೇ ಒಂದು ಅದ್ಭುತ ಚಿತ್ರಣ. ಪುಸ್ತಕದಲ್ಲೇ ಮೈ ಮರೆತು ಹೋಗಿದ್ದಾಗ, ನಿನ್ನೆ ನನಗೆ ಪರಿಚಯವಾಗಿದ್ದ ಅರ್ಚಕರ ಮಗಳು ಕೃತಿಕಾಳ ಮುದ್ದಿನ ಧ್ವನಿ “ಮಾಮ ಮಾಮ” ಎಂದು ಕರೆಯಿತು.

“ಓಹ್! ಕೃತಿಕಾ ಪುಟ್ಟಿ, ಏನ್ ಮಾಡ್ತಾ ಇದಿಯಾ?” ಎಂದು ಕೇಳಿದೆ.

“ಅಪ್ಪ ಕರೀತಾ ಇದೇ ಬಾ” ಎಂದು ಅವಳ ತೊದಲು ಧ್ವನಿಯಲ್ಲಿ ಕರೆದಳು.

ಸರಿಯೆಂದು ಅವಳನ್ನು ಕರೆದುಕೊಂಡು ಧ್ಯಾನ ಮಂದಿರಕ್ಕೆ ಹೊರಟೆ. ಅರ್ಚಕರನ್ನು ಕೇಳಿದರೆ ಅವರು ಕರೆದೇ ಇಲ್ಲವೆಂದು, ಅವಳೇ ಮಾಮ ಎಲ್ಲಿ ಎಂದು ಕೇಳುತ್ತಿದ್ದಳು ಎಂದರು. ಅವಳ ತುಂಟುತನ ನನಗೆ ನಗು ತರಿಸಿತು. ಅವಳ ಜೊತೆ ಸ್ವಲ್ಪ ಹೊತ್ತು ಆಟವಾಡಿ, ಓದಲು ಕುಳಿತೆ. ಆದರೆ ಅವಳು ಬಿಡಬೇಕಲ್ಲ. ಹೊರಗಡೆ ಭರ್ಜರಿ ಮಳೆಯ ಜೊತೆಗೆ ಮಳೆಯಿಂದ ಗೂಡು ಸೇರಿಕೊಳ್ಳಲು ತವಕಿಸುವ ಹಕ್ಕಿಗಳ ಕಲರವ ಶುರುವಾಯಿತು. ಧ್ಯಾನಮಂದಿರದ ಮೇಲ್ಚಾವಣಿಯಲ್ಲಿ ಪಾರಿವಾಳಗಳ ಚಟುವಟಿಕೆಗಳನ್ನು ನೋಡಿ ಮನಸ್ಸಿಗೆ ಹಿತವೆನಿಸಿತು.

ಮೈದಾನದಲ್ಲಿ ಶಾಲೆಯ ಮಕ್ಕಳು ಮಳೆಯನ್ನು ಲೆಕ್ಕಿಸದೆ ಲಗೋರಿಯನ್ನು ಆಡುತ್ತಿದ್ದರು. ಪುಸ್ತಕವನ್ನು ನನ್ನ ಬ್ಯಾಗಿನಲ್ಲಿಟ್ಟು, ಹೋಗಿ ಅವರನ್ನು ಕಾಡಿ ಬೇಡಿ ಅವರ ಜೊತೆಯಲ್ಲಿ ಲಗೋರಿ ಆಟವಾಡಿದೆ. ಅರ್ಧ ಗಂಟೆಯ ಆಟದಲ್ಲಿ ನಾವೆಲ್ಲರೂ ಮಳೆಯಲ್ಲಿ ತೋಯ್ದು ಹೋದೆವು. ನನಗೆ ಒಂದು ಚಿಂತೆ ಶುರುವಾಯಿತು. ಈ ತೋಯ್ದ ಬಟ್ಟೆಯಲ್ಲಿ ಹೇಗೆ ನನ್ನ ಕೊಠಡಿ ಸೇರುವುದು ಎಂದು. ಕಾರ್ಯಾಲಯದಲ್ಲಿ ಯಾರಾದರು ನನ್ನನ್ನು ನೋಡಿದರೆ ಸುಮ್ಮನೆ ಬಿಟ್ಟಾರೆಯೇ? ಮಳೆನಿಂತ ನಂತರ, ದೇವರ ಮೇಲೆ ಭಾರ ಹಾಕಿ ಕಾರ್ಯಾಲಯದ ಕಡೆಗೆ ಹೋದೆ.

ವಸತಿ ನಿಲಯದ ವಿಧ್ಯಾರ್ಥಿನಿಯರೆಲ್ಲರಿಗೂ ನೆನ್ನೆಯಿಂದಲೇ ನಾನು ಅಡ್ಡಾಡುತ್ತಿರುವುದನ್ನು ನೋಡಿ ಏನೋ ಒಂದು ತರಹದ ಕುತೂಹಲ. ನಾನು ಉಳಿದು ಕೊಂಡಿದ್ದ ಕೊಠಡಿ ಬೇರೆ ಅವರ ವಸತಿನಿಲಯದ ಪಕ್ಕದಲ್ಲೇ ಇದೆ. ನಿನ್ನೆ ಅರ್ಚಕರ ಮನೆಯಲ್ಲಿ ಚಹಾ ಕುಡಿಯುತ್ತಿದ್ದಾಗ, ಮಳೆಯಲ್ಲಿ ನೆನೆದು ಓಡಾಡುತ್ತಿದ್ದಾಗ, ಧ್ಯಾನ ಮಂದಿರದಲ್ಲಿ ಕುಳಿತು ಪುಸ್ತಕ ಓದುತ್ತಿದ್ದಾಗಲೆಲ್ಲಾ ನನ್ನನ್ನು ಮಾತನಾಡಿಸಲೆಂದು ಹತ್ತಿರ ಬಂದು ನಾಚಿಕೊಂಡು ವಾಪಸ್ಸು ಹೋದ ಸೂಕ್ಷ್ಮಗಳೆಲ್ಲಾ ನನಗೆ ಗೊತ್ತಾಗುತ್ತಿತ್ತು. ಎಲ್ಲರ ಕಣ್ಣು ತಪ್ಪಿಸಿ ನನ್ನ ಕೊಠಡಿಗೆ ಹೋದೆ. ನೆನೆದ ಬಟ್ಟೆಯ ಹಿಂಡಿ ಒಣಗಲು ಇಟ್ಟು, ಬೇರೆ ಬಟ್ಟೆ ಧರಿಸಿ ಮತ್ತೆ ಧ್ಯಾನ ಮಂದಿರಕ್ಕೆ ಬಂದೆ. ಬೆಳಗ್ಗೆ ತಿಂಡಿ ಬೇರೆ ತಿಂದಿರಲಿಲ್ಲ. ಹೊಟ್ಟೆ ಚುರುಗುಟ್ಟುತಿತ್ತು. ಧ್ಯಾನಮಂದಿರದಲ್ಲಿ ಕಾಯುತ್ತಿದ್ದಾಗ ಕೃತಿಕ ನನ್ನನ್ನು ನೋಡಿ “ಮಾಮ” ಎಂದು ಓಡಿ ಬಂದು ತಬ್ಬಿಕೊಂಡಳು.

“ಮಾಮಾ, ನಿನ್ಗೆ ಜ್ವರ ಬಂದಿದೆಯಾ?” ಎಂದು ಕೇಳಿದಳು.

ಆಶ್ಚರ್ಯದಿಂದ “ಇಲ್ಲ ಪುಟ್ಟಿ. ಯಾಕೆ ಜ್ವರ ಬರಬೇಕಾ?” ಎಂದು ಕೇಳಿದೆ.

“ನೀನು ಮಳೆಯಲ್ಲಿ ಆಟ ಆಡಿದೆ ಅಲ್ವಾ. ಅದಕ್ಕೆ ನಿನಗೆ ಜ್ವರ, ಕೆಮ್ಮು ಬರುತ್ತೆ” ಎಂದಳು.

“ಎಲಾ ಚೂಟಿ ಮರಿಯೇ. ಜ್ವರ ಬಂದಿದೆಯಾ ನೋಡು?” ಎಂದು ಹಣೆಯನ್ನು ಮುಂದಕ್ಕೆ ಸರಿಸಿದೆ.

ಅವಳು ಹಣೆಯನ್ನು ಮುಟ್ಟಿ “ಹೂಂ ಜ್ವರ ಬಂದಿದೆ” ಎಂದು ಹೇಳಿ ನನಗೆ ಚುಚ್ಚುಮದ್ದು ಕೊಡುವಂತೆ ಅಣಕು ಮಾಡಿದಳು.

“ನಂಗೆ ಹೊಟ್ಟೆ ಹಸಿವಾಗ್ತಾ ಇದೆ ಪುಟ್ಟಿ” ಎಂದೆ.

“ಹೌದಾ. ಸರಿ ತಡೀ ಉಪ್ಪಿಟ್ಟು ತರ್ತೀನಿ” ಎಂದು ಒಳಗೆ ಹೋದಳು. ನನಗೆ ಖುಷಿಯೋ ಖುಷಿ. ಎಲ್ಲೋ ಮನೆಯಿಂದ ಉಪ್ಪಿಟ್ಟು ತಂದಿರಬೇಕು ಎಂದು ಕಾದು ಕುಳಿತೆ.

“ಉಪ್ಪಿಟ್ಟು ತಕೋ ಮಾಮ” ಎಂದು ನನ್ನ ಕೈಯ ಮೇಲೆ ತಾನು ತಂದಿದ್ದ ಮರಳನ್ನು ಹಾಕಿದಳು. ನನಗೆ ನಗುವಿನ ಜೊತೆ ನಿರಾಸೆ ಮೂಡಿತು.

ನಾನು ಕೂಡ ತಿಂದಂತೆ ನಾಟಕವಾಡಿ “ಚೆನ್ನಾಗಿದೆ ಉಪ್ಪಿಟ್ಟು. ನೀನೆ ಮಾಡಿದ್ದ?” ಎಂದು ಕೇಳಿದೆ.

“ಹೂಂ. ನಾನೇ ಮಾಡಿದ್ದು. ಅಲ್ಲಿ ನೋಡು ನನ್ನ ಅಡಿಗೆ ಮನೆ” ಎಂದು ತನ್ನ ಆಟದ ಸಾಮಾನು ಸರಂಜಾಮುಗಳನ್ನೆಲ್ಲಾ ತೋರಿಸಿದಳು. ಅಲ್ಲಿಂದ ಶುರುವಾಯಿತು ನೋಡಿ. ಅನ್ನ ಸಾಂಬಾರ್ ಮಾಡಿ ತಂದಳು. ಇಡ್ಲಿ, ವಡೆ, ಪಾಯಸ, ಚಿತ್ರಾನ್ನ, ಕೇಸರಿಬಾತ್, ದೋಸೆ ಎಂದು ಒಂದೇ ಸಮನೆ ಅಡುಗೆ ಮಾಡಿ ತರುತ್ತಿದ್ದಳು. ನನ್ನ ಪಕ್ಕ ಅವಳು ಕೊಟ್ಟ ಒಂದು ಚಿಕ್ಕ ಮರಳಿನ ಗುಡ್ಡೆ ಮಾಡಿದೆ. ನನಗೆ ಹೊಟ್ಟೆ ಹಸಿಯುತ್ತಿರುವುದಕ್ಕೂ, ಇವಳು ತಿಂಡಿಗಳ ಆಸೆ ತೋರಿಸುತ್ತಿರುವುದಕ್ಕೂ ಬಹಳ ನಿರಾಸೆಗೊಳಗಾಗಿದೆ. ಅರ್ಚಕರೇ ನನ್ನ ಸ್ಥಿತಿ ನೋಡಿ ಮರುಕಗೊಂಡು ತಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋದರು.

ಅರ್ಚಕರಾದರೂ ನನ್ನ ಕುಲ-ಗೋತ್ರವನ್ನು ವಿಚಾರಿಸದೆಯೇ ತಮ್ಮ ಮನೆಯ ಬಚ್ಚಲು ಕೋಣೆಗೆ ಕರೆದು ಕೈಕಾಲು ಮುಖ ತೊಳೆಯಲು ಅನುವು ಮಾಡಿಕೊಟ್ಟದ್ದು ಅವರ ಜಾತ್ಯಾತೀತ ಮನೋಭಾವವನ್ನು ಎದ್ದು ತೋರಿಸಿತು. ಈ ಪಯಣದಲ್ಲಿ ನನಗೆ ಅಚ್ಚರಿ ತಂದ ವಿಷಯವೆಂದರೆ, ನಾನು ಯಾವುದೇ ಮನೆಯಲ್ಲಿ ಉಳಿಯಲಿ, ಯಾರ ಸಂಗಡವೇ ಬೆರೆಯಲಿ ಎಲ್ಲೂ ಕೂಡ ನನ್ನ ಜಾತಿಯನ್ನಾಗಲೀ, ನನ್ನ ಧರ್ಮದ ಪೂರ್ವಾಪರತೆಯನ್ನಾಗಲೀ ಯಾರೂ ಕೆಣಕಿದ್ದೇ ಇಲ್ಲ. ಎಲ್ಲರೂ ಬಹಳ ಮುಕ್ತ ಮನಸ್ಸಿನಿಂದ ನನ್ನನ್ನು ಒಪ್ಪಿಕೊಂಡು ತಮ್ಮ ಮನೆಯ ಹುಡುಗನಂತೆಯೇ ಪ್ರೀತಿಯಿಂದ ಸತ್ಕರಿಸಿದ್ದಾರೆ.

ಬ್ರಾಹ್ಮಣರ ಮನೆ ಊಟ ಎಂದರೆ ಕೇಳಬೇಕೆ? ಅನ್ನ, ಸಾಂಬಾರ್, ಕೋಸಂಬರಿ, ಎರಡು ತರಹದ ಹುಳಿ, ಉಪ್ಪಿನಕಾಯಿ, ಹಪ್ಪಳ. ಅರ್ಚಕರು ಮತ್ತು ಅವರ ಮಡದಿ ಒತ್ತಾಯ ಮಾಡಿ ಭರ್ಜರಿ ಊಟ ಮಾಡಿಸಿದರು. ಊಟವಾಗಿ ಬಾಳೆಹಣ್ಣು ತಿಂದು ಸಂತೃಪ್ತಿಯಾದ ಮೇಲೆ, ಕಣ್ಣು ಮುಚ್ಚಿ ನನಗೆ ಇಷ್ಟು ಅಕ್ಕರೆಯಿಂದ ಉಪಚರಿಸಿದ ಅರ್ಚಕರ ಮನೆಗೆ ಒಳ್ಳೆಯದಾಗಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದೆ. ವಸತಿ ನಿಲಯದ ವಿದ್ಯಾರ್ಥಿನಿಯರು ಆಗಲೂ ಕೂಡ ಕೃತಿಕಾಳನ್ನು ಮಾತನಾಡಿಸುವ ನೆಪವೊಡ್ಡಿ ಅರ್ಚಕರ ಮನೆಗೆ ಬಂದು ಇಣುಕುತ್ತಿದ್ದರು. ಹೊರಗೆ ಬಂದು ಅಲ್ಲಿದ್ದ ಹುಡುಗಿಯರನ್ನು ಕರೆದು ಪರಿಚಯ ಮಾಡಿಕೊಂಡ ನಂತರ ನನ್ನ ಈ ಪ್ರವಾಸದ ಘಟನೆಗಳನ್ನು ಬಿಚ್ಚಿಟ್ಟು ಅವರ ಕುತೂಹಲವನ್ನು ದೂರ ಮಾಡಿದೆ.

ಅರ್ಚಕರ ಮನೆಯಲ್ಲಿ ಗಡತ್ತಾಗಿ ಊಟ ಮಾಡಿದ ಮೇಲೆ ಕೇಳಬೇಕೆ? ಸಂಜೆಯ ತನಕ ಭರ್ಜರಿ ನಿದ್ರೆಯಾಯಿತು. ಎದ್ದು ಮುಖತೊಳೆದು ಧ್ಯಾನ ಮಂದಿರಕ್ಕೆ ಹೋದೆ. ಕೃತಿಕಾ ಅವಳ ಅಪ್ಪನ ಜೊತೆಯೇ ಇದ್ದಳು. ಸ್ವಲ್ಪ ಹೊತ್ತು ಅವಳ ಜೊತೆ ಆಟವಾಡಿ, ನಂತರ ಅವಳ ಕಣ್ಣು ತಪ್ಪಿಸಿ ಊರು ಸುತ್ತಲು ಹೊರಟೆ. ಹಾಗೇ ಯೋಗ ಮಂದಿರದ ಕಡೆಗೆ ಹೊರಟು, ದಾರಿಯಲ್ಲಿ ನನ್ನ ಕಣ್ಣಿಗೆ ಬಿದ್ದ ಚಂದ್ರೋಣ ವನಕ್ಕೆ ನುಗ್ಗಿದೆ. ಪಾಳು ಬಿದ್ದಿದ್ದ ವನದ ಕಾರಂಜಿಯಲ್ಲಿ ಒಂದು ಸುಂದರ ಆಂಜನೇಯಸ್ವಾಮಿ ಮೂರ್ತಿ ಇತ್ತು. ಎಷ್ಟು ವಿಶಾಲ ಜಾಗವಿದ್ದರೂ, ಹೀಗೆ ಪಾಳು ಬೀಳಿಸಿದ್ದಾರಲ್ಲಾ ಎಂದು ನೋವಾಯಿತು.

footಅಲ್ಲಿಯೇ ಪಕ್ಕದಲ್ಲಿ ಪುಟ್ಟ ಮನೆಗಳ ಸಾಲು. ಅಲ್ಲಿ ಹೋಗಿ ಒಬ್ಬರನ್ನು ಹಿಡಿದು ಮಾತನಾಡಿಸಿದೆ. ಗುರುವಿಲ್ಲದ ಆಶ್ರಮ, ರಾಜನಿಲ್ಲದ ಆಸ್ಥಾನದಂತೆ. ಇದೇ ವನದ ತರಹ ಸಿದ್ಧವನ, ಮಧುವನ ಇತ್ಯಾದಿ ವನಗಳನ್ನು ಸ್ವಾಮೀಜಿ ಇದ್ದಾಗ ಚೆನ್ನಾಗಿ ನಿರ್ವಹಣೆ ನಡೆಯುತ್ತಿತ್ತು. ಈಗಿನ ಕಥೆ ಕೇಳಬೇಡಿ ಎಂದು ನಿವೇದಿಸಿಕೊಂಡರು. ಇವರೊಬ್ಬರೇ ಅಲ್ಲ ನಿನ್ನೆಯಿಂದ ಹತ್ತು ಮಂದಿಯನ್ನಾದರೂ ಮಾತನಾಡಿಸಿದ್ದೇನೆ, ಎಲ್ಲರದೂ ಇದೇ ಅಭಿಪ್ರಾಯ. ಸಾಲು ಮನೆಗಳ ಬಗ್ಗೆ ವಿಚಾರಿಸಿದಾಗ, ಅಲ್ಲಿ ಹಿಂದೆ ವೃದ್ಧಾಶ್ರಮವಿತ್ತೆಂದೂ, ಸ್ವಾಮೀಜಿಯವರು ಕಾಲವಾದ ನಂತರ ಆ ವೃದ್ಧರೆಲ್ಲಾ ಜಾಗ ಖಾಲಿ ಮಾಡಿದರೆಂದು ತಿಳಿಯಿತು. ಆಶ್ರಮ ಒಡೆತನದಲ್ಲಿ ನೂರಾರು ಎಕರೆ ತೆಂಗು, ಅಡಿಕೆ ಹೊಲಗಳಿದ್ದು ಅದರ ನಿರ್ವಹಣೆ ಸಹಾ ಸರಿಯಾಗಿಲ್ಲವೆಂದೂ ಹೇಳಿದರು.

ಮೊದಲು ಪ್ರವಾಸಿಗರಿಗೆ, ರೋಗಿಗಳ ಸಂಬಂಧಿಕರಿಗೆ ಇದ್ದ ವಸತಿ ಕೊಠಡಿಗಳು ಈಗ ವಿದ್ಯಾರ್ಥಿ ವಸತಿನಿಲಯಗಳಾಗಿ ಪರಿವರ್ತಿಸಿದ್ದಾರೆಂದು ತಿಳಿಯಿತು. ಹಾಗೆ ಸುತ್ತಾಡಿಕೊಂಡು ವ್ಯಾಸಮಠವನ್ನು ತಲುಪಿ ಗರಡಿ ಮನೆ ಕೀಲಿಕೈಯನ್ನು ಪಡೆದು ಒಳಗೆ ಹೋಗಿ ದೀಪ ಹಚ್ಚೋಣವೆಂದರೆ ಯಾವ ದೀಪವೂ ಕೆಲಸಮಾಡುತ್ತಿಲ್ಲ. ಇದ್ದ ಸಂಜೆಯ ಬೆಳಕಿನಲ್ಲೇ ಹೋಗಿ ಗೋಡೆಯ ಮೇಲೆ ನೇತಾಗಿದ್ದ ಭಾವಚಿತ್ರಗಳನ್ನು, ವ್ಯಾಯಾಮ ಸಲಕರಣೆಗಳನ್ನು ನೋಡಿ, ನೂರಾರು ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಾಗಿದ್ದ ಕುಸ್ತಿ ಅಖಾಡದ ಮಣ್ಣನ್ನು ಮುಟ್ಟಿ ನಮಸ್ಕರಿಸಿ, ಸ್ವಲ್ಪ ಮಣ್ಣನ್ನು ತೆಗೆದು ಹಣೆಗೆ ಬಳೆದುಕೊಂಡೆ.

ಗರಡಿ ಮನೆಯು ಧೂಳು ಹಿಡಿಯುತ್ತಿರುವುದನ್ನು ನೋಡಿ ನನ್ನ ಕಣ್ಣುಗಳು ನೀರಾದವು. ಸ್ವಾಮೀಜಿಯವರ ಸಾಧನೆಗಳು ಎತ್ತಿಹಿಡಿದು, ಪಾಲಿಸಿಕೊಂಡು ಒಂದು ಅಧ್ಯಾತ್ಮಿಕ, ಯೋಗ, ಆಯುರ್ವೇದ ಕ್ಷೇತ್ರವಾಗಬೇಕಿದ್ದ ಊರು, ಕೇವಲ ಒಂದು ವ್ಯವಹಾರಿಕ ಶೈಕ್ಷಣಿಕ ಕ್ಷೇತ್ರವಾಗಿ ಬದಲಾವಣೆಗೊಳ್ಳುತ್ತಿರುವುದು, ಹಳೆಯ ಭಕ್ತರಿಗೆ ನುಂಗಲಾರದ ತುತ್ತಾಗಿರುವುದಂತೂ ಸತ್ಯ.

ಅದೇ ಬೇಜಾರಿನಲ್ಲಿ ಧ್ಯಾನಮಂದಿರಕ್ಕೆ ವಾಪಸ್ಸು ಬಂದರೆ, ತನ್ನನ್ನು ಬಿಟ್ಟು ನಾನು ಓಡಾಡಿಕೊಂಡು ಬಂದೆನೆಂದು ಕೃತಿಕ ಚಂಡಿಹಿಡಿದು, ಅತ್ತೂ ಕರೆದು ಕೋಪಿಸಿಕೊಂಡು ಮುದ್ದಾಗಿ ಕುಳಿತಿದ್ದಳು. ಎಷ್ಟು ಕರೆದರೂ ನನ್ನ ಹತ್ತಿರ ಮಾತನಾಡುತ್ತಿರಲಿಲ್ಲ. ಸ್ವಲ್ಪ ಹೊತ್ತು ಸಮಾಧಾನ ಪಡಿಸಿ ಅವಳನ್ನು ಕರೆದುಕೊಂಡು ಹೋಗಿ ತಿಂಡಿ, ತಿನಿಸುಗಳನ್ನು ಕೊಡಿಸಿ, ಮಾವ ಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಅವಳ ಕೈಗೆ ಐನೂರು ರೂಪಾಯಿ ಕೊಟ್ಟು ಅವಳ ಮನೆಗೆ ಬಿಟ್ಟು ಬಂದೆ. ಅರ್ಚರಿಗೆ ಮಧ್ಯಾಹ್ನದ ಊಟಕ್ಕೆ ಸಿಹಿ ಮಾಡದಿದ್ದುದು ಬೇಜಾರಾಯಿತೋ ಏನೋ, ಮಡದಿಯ ಕೈಯಲ್ಲಿ ಕೇಸರಿಬಾತ್ ಮಾಡಿಸಿ, ಜೊತೆಗೆ ಖಾರದ ಬೂಂದಿ, ಚಹಾ ಕೊಟ್ಟು ಸತ್ಕರಿಸಿದರು. ಅಲ್ಲಿಂದ ಮೆಸ್‍ಗೆ ಹೋಗಿ ಊಟ ಮುಗಿಸಿ, ನನ್ನ ಕೊಠಡಿಗೆ ಬಂದು “ಜೋಳಿಗೆ ಪವಾಡ” ಓದಲು ಕುಳಿತೆ. ಅಪ್ಪ ಅಮ್ಮ ಪೂಜಾಳ ನೆನಪು ಕಾಡಿತು. ಅರ್ಚಕರ ಫೋನನ್ನು ಪಡೆದು ಅವರೆಲ್ಲರ ಜೊತೆ ಮನಸ್ಪೂರ್ತಿ ಮಾತನಾಡಿದೆ.

ಬೆಳಗಿನ ಪ್ರಾರ್ಥನೆಯ ಸಮಯಕ್ಕೆ, ಶಾಲೆಗೆ ಹೋದೆ. ಹನ್ನೆರಡು ಗಂಟೆಗೆ ಅನುವು ಮಾಡಿಕೊಡುವುದಾಗಿ ತಿಳಿಸಿದರು. ಅಲ್ಲೇ ಶಾಲೆಯ ಕಾರ್ಯಾಲಯದಲ್ಲಿ ಪುಸ್ತಕ ಓದುತ್ತಾ ಕುಳಿತೆ. ಕೆಲವು ಶಿಕ್ಷಕರು ಆಗಾಗ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರೇ ವಿನಹಃ, ಬಂದ ಅತಿಥಿಗೆ ಟೀ, ನೀರು ವಿಚಾರಿಸಿಕೊಳ್ಳಬೇಕೆಂಬ ವಿನಯಬೇಡವೇ? ಬೆಳಗಿನ ತಿಂಡಿ ಮಾಡಿದಿದ್ದ ಕಾರಣ ನನಗೆ ಹೊಟ್ಟೆ ಹಸಿವು ತಡೆಯಲಾರದೆ ತಲೆನೋವು ಶುರುವಾಯಿತು. ನನ್ನನ್ನು ಬಹಳವಾಗಿ ಸೆಳೆದಿದ್ದ “ಜೋಳಿಗೆ ಪವಾಡ” ಪುಸ್ತಕವನ್ನು ಅರ್ಚಕರಿಗೆ ವಾಪಸ್ಸು ಕೊಡಬೇಕೆಂಬುದೇ ನನ್ನ ಚಿಂತೆಯಾಗಿತ್ತು.

ಹನ್ನೆರಡಕ್ಕೆ ಸರಿಯಾಗಿ ಯೋಗ ಮಂದಿರದಲ್ಲಿ ಸುಮಾರು ಐನೂರು ವಿದ್ಯಾರ್ಥಿಗಳು, ಹತ್ತಾರು ಶಿಕ್ಷಕರನ್ನು ಸೇರಿಸಿ ಸ್ವಾಗತ ಭಾಷಣ ಹಾಗೂ ಪ್ರಾರ್ಥನೆಗಳಿಂದ ಶುರುಮಾಡಿದರು. ಹುಡುಗರೆಲ್ಲಾ ಖಾಕಿ ಚಡ್ಡಿ, ಬಿಳಿ ಅಂಗಿ ಹಾಗೂ ಬಿಳಿ ಗಾಂಧಿ ಟೋಪಿ ಧರಿಸಿದ್ದರು. ಹುಡುಗಿಯರು ನೀಲಿ ಲಂಗದ ಜೊತೆ ಬಿಳಿ ಅಂಗಿ ಧರಿಸಿದ್ದರು. ದೇಶ ಭಕ್ತಿಯನ್ನು ಮಕ್ಕಳಲ್ಲಿ ಬಿತ್ತಬೇಕೆಂಬ ಸ್ವಾಮೀಜಿಯವರ ಆ ಕಾಲದ ಆಲೋಚನೆ ಬಹಳ ಅಚ್ಚರಿಯನ್ನುಂಟು ಮಾಡಿತು. ಆದರೆ ನಾನು ಉಪನ್ಯಾಸ ಕೊಟ್ಟ ಮೇಲೆ ಗೊತ್ತಾಗಿದ್ದು, ಶಾಲೆಯ ಶಿಕ್ಷಣ ಕ್ರಮದಲ್ಲಿ ಸ್ವಾಮೀಜಿಯವರ ತತ್ವ ಸಿದ್ಧಾಂತಗಳು ನಾಶವಾಗಿ ಬರೀ ಸಮವಸ್ತ್ರ ಮಾತ್ರ ಉಳಿದುಕೊಂಡಿದೆ ಎಂದು. ಅವರು ಬಯಸಿದ್ದ ಶಿಸ್ತು ಇಲ್ಲವಾಗಿತ್ತು.

ಉಪನ್ಯಾಸದ ಉದ್ದಕ್ಕೂ ವಿದ್ಯಾರ್ಥಿಗಳು ಮಾಡುವ ಗಲಾಟೆಯನ್ನು ನಿಲ್ಲಿಸುವುದೇ ಒಂದು ದೊಡ್ಡ ಕೆಲಸವಾಗಿತ್ತು. ಐನೂರು ವಿದ್ಯಾರ್ಥಿಗಳಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಹೇಳಲು ಹಾಗೂ ನಾಟಕ ಮಾಡಲು ಸಿಕ್ಕಿದ್ದು ಬೆರಳಣಿಕೆಯಷ್ಟು ಮಾತ್ರ. “ಜೋಳಿಗೆ ಪವಾಡ” ಪುಸ್ತಕ ಬಗ್ಗೆ ಎರಡು ಮಾತುಗಳನ್ನಾಡಿ, ಗುರುಗಳ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಅವರು ಹಾಕಿಕೊಟ್ಟಿರುವ ದಾರಿಯಲ್ಲೇ ನಡೆಯಬೇಕು ಎಂದು ವಿನಂತಿಸಿ ನನ್ನ ಮಾತನ್ನು ಮುಗಿಸಿದೆ. ನನಗೆ ಅಚ್ಚರಿಯನ್ನುಂಟು ಮಾಡಿದ ವಿಷಯವೇನೆಂದರೆ ಯಾವ ಪುಸ್ತಕವನ್ನು ಅರ್ಚಕರಿಗೆ ಹಿಂತಿರುಗಿಸಬೇಕಲ್ಲಾ ಎಂದು ವ್ಯಥೆ ಪಡುತ್ತಿದ್ದೆನೋ, ಶಾಲೆಯವರು ನನಗೆ “ಜೋಳಿಗೆ ಪವಾಡ” ಪುಸ್ತಕವನ್ನೇ ನೀಡಿ ಅಭಿನಂದಿಸಬೇಕೇ? ಉಪನ್ಯಾಸದ ನಂತರ ಶಿಕ್ಷಕರೊಬ್ಬರು ನನಗೆ ಊಟ ಮಾಡಿಸಿ, ಬೀಳ್ಕೊಟ್ಟರು. ವಾಪಸ್ಸು ನನ್ನ ಕೋಣೆಗೆ ಹೋಗಿ, ನನ್ನ ವಸ್ತುಗಳನ್ನು ಬ್ಯಾಗಿಗೆ ತುಂಬಿಕೊಂಡು, ಅಲ್ಲಿದ್ದ ಹುಡುಗನಿಗೆ ಕೀಲಿ ಕೈ ಕೊಟ್ಟು ವಂದಿಸಿದೆ. ಅರ್ಚಕರ ಮನೆಗೆ ಹೋಗಿ ಅವರಿಂದ ಪಡೆದಿದ್ದ ಜೋಳಿಗೆ ಪವಾಡ ಪುಸ್ತಕವನ್ನು ಹಿಂದಿರುಗಿಸಿ, ಮೈಸೂರಿಗೆ ಬರುವಂತೆ ಆಮಂತ್ರಣ ಕೊಟ್ಟು ಮುನ್ನಡೆದೆ.

ಅಲ್ಲಿಂದ ಮೂರು ಮೈಲುಗಳ ದೂರದಲ್ಲಿದ್ದ ದುಮ್ಮಿ ಊರಿನ ಕಡೆಗೆ ನಡೆಯಲು ಶುರುಮಾಡಿದೆ. ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು, ಈಗ ಒಮ್ಮೆಲೆ ಬಿಸಿಲಿನ ಬೇಗೆ ಕಾಣಿಸಿಕೊಂಡಿತ್ತು. ಬಿಸಿಲ ಬೇಗೆಯ ಜೊತೆ ನನ್ನಲ್ಲೂ ಕೂಡ, ಅಹಂಕಾರ ಬೆಳೆಯತೊಡಗಿತ್ತು. ಅದು ನನ್ನನ್ನೇ ಸುಡಲು ಶುರುಮಾಡಿತ್ತು. ಅಷ್ಟರಲ್ಲೇ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಹೇಳಿದ ಮಾತು ನೆನಪಿಗೆ ಬಂತು.

“ರಾಹುಲ್, ನೀನು ಮಾಡುತ್ತಿರುವ ಕೆಲಸ ಎಷ್ಟೋ ಮಂದಿ ಮಾಡಿ ಹೊರಟು ಹೋಗಿದ್ದಾರೆ. ಸಮಾಜ ಬದಲಾಯಿತೇ? ನೀನು ಮಾಡುತ್ತಿರುವ ಕೆಲಸ ಬಹಳ ಒಳ್ಳೆ ಕೆಲಸವೇ. ಆದರೆ ಮುಂದೇನು? ನಿನಗೆ ತಿಳಿಯದು. ಎಲ್ಲರನ್ನೂ ಗೌರವದಿಂದ ಕಾಣಲು ಕಲಿ. ನಿನ್ನಲ್ಲಿ ಅನೇಕ ಕಲೆಗಳಿವೆ – ಇದು ಅಹಂಕಾರ ಪಡಬೇಕಾದ ವಿಷಯವಲ್ಲ. ಇದು ದೈವಸುಗ್ರಹವೆಂದು ತಿಳಿ. ಹೊಗಳಿಕೆ, ಕೀರ್ತಿ ಇವೆಲ್ಲ ಬಂದಷ್ಟು ನಾವು ಸರಳವಾಗಬೇಕು. ವಜ್ರಕ್ಕೆ ಸಾಣೆ ಹಿಡಿದಷ್ಟೂ ಅದರ ಹೊಳಪು ಹೆಚ್ಚುತ್ತದೆ” ಎಂದು ಹೇಳಿದ್ದ ಮಾತುಗಳು ನನ್ನ ಕಿವಿಗಳಲ್ಲಿ ಗುನುಗುತ್ತಿದ್ದವು. ಆ ಯೋಚನೆಯಲ್ಲಿ ನಡೆದಿದ್ದೇ ಗೊತ್ತಾಗಲಿಲ್ಲ.

ಒಂದು ದೊಡ್ಡ ಗುಡ್ಡದ ಮಗ್ಗುಲಲ್ಲೆ ಇರುವ ದುಮ್ಮಿಯ ಶಾಲೆಯನ್ನು ತಲುಪಿದೆ. ಶಾಲೆಯಲ್ಲಿ ಆಗಲೇ ಒಂದು ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿತ್ತು. ಅಯ್ಯೋ ಇಷ್ಟು ದೂರ ನಡೆದಿದ್ದು ವ್ಯರ್ಥವಾಯಿತಲ್ಲಾ ಎಂದುಕೊಳ್ಳುವಷ್ಟರಲ್ಲಿ, ಒಬ್ಬ ಶಿಕ್ಷಕ ಬಂದು ಮಾತನಾಡಿಸಿದ. ನನ್ನ ವಿಷಯ ತಿಳಿಸಿದೆ. ಅವರು ಮುಖ್ಯೋಪಾಧ್ಯಾಯರ ಹತ್ತಿರ ಮಾತಾಡಿ, ನಡೆಯುತ್ತಿದ್ದ ಕಾರ್ಯಕ್ರಮದಲ್ಲೇ ಮಾತನಾಡಲು ಅವಕಾಶಮಾಡಿಕೊಟ್ಟರು. ಉಪನ್ಯಾಸ ಚೆನ್ನಾಗೇ ಆಯಿತು. ಕೊನೆಯಲ್ಲಿ ನನಗೆ ಶಾಲು ಹೊದಿಸಿ, ಹಣ್ಣು ಹಂಪಲಿನ, ಜೊತೆ ರಾಘವೇಂದ್ರ ಸ್ವಾಮೀಜಿಯವರ ಒಂದು ಕಿರುಪುಸ್ತಕವನ್ನು ನೀಡಿ ಗೌರವಿಸಿದರು. ಉಪನ್ಯಾಸದಲ್ಲಿ ಉತ್ತಮವಾಗಿ ಭಾಗವಹಿಸಿದ ವಿದ್ಯಾರ್ಥಿನಿಯನ್ನು ಕರೆದು, ನನಗೆ ಕೊಟ್ಟ ಶಾಲನ್ನು ಹೊದಿಸಿ ಅಭಿನಂದಿಸಿ ಮುಂದುವರಿದೆ.

ಅಲ್ಲಿಂದ ಎಂಟತ್ತು ಮೈಲು ನಡೆದು ರಾಮಗಿರಿ ತಲುಪುವಾಗ ಕತ್ತಲಾಗಿತ್ತ್ತು. ಗ್ರಾ.ಪಂ, ಸರ್ಕಾರಿ ವಸತಿ ನಿಲಯಗಳನ್ನೆಲ್ಲಾ ಸುತ್ತಿದರೂ ವಾಸ್ತವ್ಯದ ವ್ಯವಸ್ಥೆ ಆಗಲಿಲ್ಲ. ಯೋಚನೆ ಮಾಡುತ್ತಿದ್ದಾಗ ಮಲ್ಲಾಡಳ್ಳಿ ಶಾಲೆಯ ಮಕ್ಕಳು ನನ್ನನ್ನು ಗುರುತಿಸಿ ಮಾತನಾಡಿಸಿದರು. ಅವರಿಗೆಲ್ಲಾ ಬೇಕರಿಯಲ್ಲಿ ತಿನಿಸು ತೆಗೆದುಕೊಟ್ಟು, ಒಂದು ಪೆಟ್ಟಿಗೆ ಅಂಗಡಿಯವನ ಹತ್ತಿರ ಹೋಗಿ ವಿಚಾರಿಸಿದೆ. ಬೇಕಾದರೆ ಗುಡ್ಡದ ಮೇಲಿರುವ ದೇವಸ್ಥಾನದಲ್ಲಿ ವ್ಯವಸ್ಥೆ ಮಾಡುವುದಾಗಿ ಹೇಳಿದ. ಅದು ನನಗೇಕೋ ಸಮಂಜಸವೆನಿಸಲಿಲ್ಲ. ಅಲ್ಲೇ ಇದ್ದ ಒಬ್ಬ ಯುವಕ ನಾನು ಐದಾರು ಮೈಲು ದೂರದಿಂದ ನಡೆದುಕೊಂಡು ಬರುತ್ತಿದ್ದುದನ್ನು ಗಮನಿಸಿ, ನನ್ನ ವಿಷಯ ಕೇಳಿ ತಿಳಿದುಕೊಂಡ ಮೇಲೆ ನನ್ನನ್ನು ಕರೆದುಕೊಂಡು ಹೋಗಿ ಪಕ್ಕದ ಊರಾದ ರಂಗಾಪುರದ ಒಂದು ಆಶ್ರಮಕ್ಕೆ ಬಿಟ್ಟ. ಅಲ್ಲಿ ನನಗೆ ರಾತ್ರಿಯ ಊಟ, ವಸತಿ ವ್ಯವಸ್ಥೆಯಾಯಿತು. ಆದರೆ ಅಲ್ಲಿದ್ದ ಅರ್ಚಕನಿಗೆ ಮಾತ್ರ ಇನ್ನೂರು ರೂಪಾಯಿ ಪೀಕಬೇಕಾಯಿತು.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 256 ಮೈಲುಗಳು]

 

‍ಲೇಖಕರು admin

July 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: