ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 30

ಮರಳಿ ಗೂಡಿಗೆ

ಕೋಣೆ ಸ್ಥಿತಿಗೆ ಮತ್ತು ರಾತ್ರಿಯೆಲ್ಲಾ ತಿಗಣೆ ಕಾಟದಿಂದ ನನಗೆ ನಿದ್ರೆ ಸರಿಯಾಗಿ ಆಗಲಿಲ್ಲ. ಬೆಳಗ್ಗೆ ಎದ್ದು ವ್ಯವಸ್ಥಾಪಕನನ್ನು ಕರೆದು ಗದರಿ ಸ್ನಾನದ ಕೋಣೆಯನ್ನು ಸ್ವಚ್ಛಮಾಡಿಸಿದೆ. ಸ್ನಾನ ಮುಗಿಸಿ, ರಸ್ತೆ ಬದಿಯ ಹೋಟೆಲ್‍ನಲ್ಲಿ ತಿಂಡಿ ತಿಂದು ಸರ್ಕಾರಿ ಪ್ರೌಢಶಾಲೆಯ ಆವರಣವನ್ನು ಹೊಕ್ಕಿದೆ.

12813919_10153924252234827_7909970336744968238_nಶಾಲೆಯ ಮುಖ್ಯೋಪಾಧ್ಯಾಯರ ಅನುಮತಿ ದೊರಕಿ, ಹತ್ತನೆಯ ತರಗತಿ ಮಕ್ಕಳನ್ನು ಒಟ್ಟು ಮಾಡಿಸಿ ನನ್ನ ಉಪನ್ಯಾಸಕ್ಕೆ ಅನುವುಮಾಡಿಕೊಟ್ಟರು. ಉಪನ್ಯಾಸ ಮುಗಿಸುವಷ್ಟರಲ್ಲಿ ಮಳೆ ಶುರುವಾಯಿತು. ಮಳೆಯಲ್ಲೇ ನಡೆದು ಮತ್ತೆರಡು ಖಾಸಗಿ ಶಾಲೆಗಳಲ್ಲಿ ಹೋಗಿ ವಿಚಾರಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ತಯಾರಿಯಲ್ಲಿ ತೊಡಗಿದ್ದ ಅವರು ನನಗೆ ಅನುಮತಿ ಕೊಡಲಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಬಸ್ಸು ನಿಲ್ದಾಣಕ್ಕೆ ಬಂದು, ಬೀರೂರಿಗೆ ಬಸ್ ಹಿಡಿದು ಹೊರಟೆ.

ಜಡಿ ಮಳೆ ಸುರಿಯುತ್ತಿತ್ತು. ಬೀರೂರಿನ ರಸ್ತೆ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿತ್ತು. ಹಾಗಾಗಿ ಬಸ್‍ನಲ್ಲಿ ಹೊರಟ್ಟಿದ್ದೇ ಒಳ್ಳೇ ನಿರ್ಧಾರ ಎನಿಸಿತು. ಬಸ್ ಇಳಿದು ನೇರ ಕೆ.ಎಲ್.ಕೆ ಸರ್ಕಾರಿ ಪ್ರೌಢಶಾಲೆಗೆ ಹೋಗಿ ನನ್ನ ಉಪನ್ಯಾಸದ ಬಗ್ಗೆ ಹೇಳಿದೆ. ಮೊದಲು ಕೆಲವು ಕಾರಣಗಳನ್ನು ಹೇಳಿ ನಿರಾಕರಿಸುವ ಸೂಚನೆ ಕೊಟ್ಟರೂ, ಕೆಲವು ಶಿಕ್ಷಕರ ಒತ್ತಾಯದ ಮೇರೆಗೆ ಮುಖ್ಯಸ್ಥರಿಂದ 3:30ಗೆ ಅನುವು ಮಾಡಿಕೊಡುವುದಾಗಿ ಭರವಸೆಕೊಟ್ಟರು.

ಮಧ್ಯಾಹ್ನ ಊಟದ ಸಮಯವಾದ್ದರಿಂದ, ಶಾಲೆಯಲ್ಲೇ ಊಟ ಮುಗಿಸಿ, ಇತರೆ ಶಾಲೆಗಳತ್ತ ನನ್ನ ಹೆಜ್ಜೆ ಹಾಕಿದೆ. ಊರಿನ ಅಕ್ಕಮಹಾದೇವಿ ಪ್ರೌಢಶಾಲೆ, ಎಸ್.ಜೆ.ಎಮ್, ಎ.ಎಮ್.ಆರ್ ಹಾಗೂ ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆಗೆ ಹೋಗಿ ವಿಚಾರಿಸಿದರೂ, ಅಲ್ಲೂ ಅದೇ ಕಥೆ. ವಿದ್ಯಾರ್ಥಿಗಳೆಲ್ಲರೂ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಿದ್ಧತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರಿಂದ ಅಲ್ಲೂ ಕೂಡ ನಾನು ಅವಕಾಶವಂಚಿತನಾದೆ.

11170354_10153201101069827_4084290081923638423_n

ಮತ್ತೆ ಕೆ.ಎಲ್.ಕೆ ಶಾಲೆಗೆ ವಾಪಸ್ಸು ಬಂದೆ. ಶಿಕ್ಷಕರೆಲ್ಲರೂ ಬಹಳ ಆತ್ಮೀಯವಾಗಿ ಮಾತನಾಡಿಸಿ ನನ್ನ ವಿಷಯ ತಿಳಿದುಕೊಂಡರು. ರಮೇಶ್ ಎನ್ನುವ ಶಿಕ್ಷಕರು ಆ ರಾತ್ರಿ ಕಡೂರಿನಲ್ಲಿರುವ ತಮ್ಮ ಮನೆಯಲ್ಲೇ ವಾಸ್ತವ್ಯ ಮಾಡುವಂತೆ ವಿನಂತಿಸಿದರು. ಉಪನ್ಯಾಸವನ್ನು ನನಗೆ ಕೊಟ್ಟ ಸಮಯದಲ್ಲೇ ಅಚ್ಚುಕಟ್ಟಾಗಿ ನಡೆಸಿಕೊಟ್ಟೆ. ಇನ್ನೂ ಸಮಯ ಕೊಡಬೇಕಾಗಿತ್ತು ಎಂದು ಶಿಕ್ಷಕರು ಬೇಸರ ಮಾಡಿಕೊಂಡರು.

ದೇಶದ 69ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪೂರ್ವ ತಯಾರಿ ಕಾರ್ಯಕ್ರಮಗಳು ನಡೆಯುತ್ತಿದ್ದರಿಂದ ಶಾಲೆಗಳು ನನಗೆ ಅವಕಾಶ ಕೊಡಲು ನಿರಾಕರಿಸುತ್ತಿದ್ದವು. ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವತಯಾರಿ ಕೆಲಸಗಳು, ಕ್ರೀಡಾಕೂಟಗಳಿಗಾಗಿ ಸಾಕಷ್ಟು ತರಗತಿಗಳ ಸಮಯ ವ್ಯಯಿಸಿದ್ದರಿಂದ ಮುಂದಿನ ವಾರವೂ ಅವಕಾಶ ಸಿಗುವುದು ಕಷ್ಟವಾಗಬಹುದು ಎಂದು ಹಲವಾರು ಶಿಕ್ಷಕರು ಸಲಹೆ ಕೊಟ್ಟರು.

ನಾನು ಈ ಪ್ರವಾಸದಲ್ಲಿ ಏನು ಅನುಭವ ಪಡೆಯಬೇಕೆಂದಿದ್ದೆನೋ, ಅದನ್ನು ಈಗಾಗಲೇ ಪಡೆದಿದ್ದಾಗಿತ್ತು. ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಇನ್ನು ಮುಂದಿನ ಪ್ರಯಾಣ ಬರೀ ಯಾಂತ್ರಿಕವಾಗಿ ನಡೆದು, ಶಾಲೆಗಳಲ್ಲಿ ಉಪನ್ಯಾಸಕೊಡುವುದು ಸಪ್ಪೆ ಎನಿಸ ತೊಡಗಿತ್ತು. ನಾನು ಬರುವ ಶನಿವಾರ ಮತ್ತು ಭಾನುವಾರ ಅರಸಿಕೆರೆಯಲ್ಲಿ ವಾಸ್ತವ್ಯ ಮಾಡಬಹುದೆಂಬ ಸುಳಿವು ತಿಳಿದಿದ್ದ ಅಪ್ಪ ಮತ್ತು ಪೂಜಾ, ಮೈಸೂರಿನಿಂದ ಅರಸಿಕೆರೆಗೆ ಪ್ರಯಾಣ ಬೆಳೆಸಿ ನನ್ನನ್ನು ನೋಡಿಕೊಂಡು ಹೋಗುವುದಾಗಿ ಹೇಳುತ್ತಿದ್ದುದು ನನಗೆ ತಲೆನೋವಾಗಿ ಪರಿಣಮಿಸಿತು.

429773_10150559049744827_579543833_nಏಳು ತಿಂಗಳ ಗರ್ಭಿಣಿಯಾದ ಪೂಜಾ ಅಷ್ಟು ದೂರ ಪ್ರಯಾಣ ಬೆಳೆಸುವುದು ನನಗೆ ಇಷ್ಟವಿರಲಿಲ್ಲ. ಎಷ್ಟು ಹೇಳಿದರೂ ಅವಳು ತನ್ನ ಪಟ್ಟು ಸಡಿಲಿಸಲಿಲ್ಲ. ಈ ಪ್ರಯಾಣದಲ್ಲಿ ನನ್ನ ದೇಹವನ್ನೂ ಕೂಡ ಅಗತ್ಯಕ್ಕಿಂತ ಹೆಚ್ಚಾಗೇ ದಂಡಿಸಿದ್ದೆ. ಬೆನ್ನಿನ ಬೇನೆ ಮತ್ತು ಕಾಲು ನೋವು ಕಾಡುತ್ತಿತ್ತು. ದೇಹವು ತನ್ನ ಸೋಲೊಪ್ಪಿಕೊಳ್ಳುವ ಮುಂಚೆಯೇ ನಾನು ಅದಕ್ಕೆ ಅವಶ್ಯವಿದ್ದ ವಿಶ್ರಾಂತಿಯನ್ನು ಕೊಡಬೇಕೆಂದಿದ್ದೆ. ಇವೆಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಉಪನ್ಯಾಸದ ನಂತರ ಐದು ನಿಮಿಷ ಕುಳಿತು ಸೂಕ್ಷ್ಮವಾಗಿ ಯೋಚನೆ ಮಾಡಿ, ಬೀರೂರಿನಲ್ಲೇ ನನ್ನ ಈ ಪ್ರಯಾಣಕ್ಕೆ ಅಂತ್ಯ ಹಾಡಿ ಮೈಸೂರಿಗೆ ಹಿಂತಿರುಗುವುದು ಸೂಕ್ತವೆಂಬ ನಿರ್ಧಾಕ್ಕೆ ಬಂದೆ.

ಸಂಜೆ 6:10ಕ್ಕೆ ಬೀರೂರಿನಿಂದ ಮೈಸೂರಿಗೆ ಹೊರಡುತ್ತ್ತಿದ್ದ ರೈಲನ್ನು ಹಿಡಿದೆ. ವಾರದ ಮಧ್ಯದ ದಿನವಾದ್ದರಿಂದ ಪ್ರಯಾಣಿಕರ ಸಂಖ್ಯೆ ಕೂಡ ತೀರ ಕಡೆಮೆಯಿತ್ತು. “ಜೋಳಿಗೆ ಪವಾಡ” ಪುಸ್ತಕವನ್ನು ಓದುತ್ತಿದ್ದಾಗ, ಒಂದು ಕುಟುಂಬ ಬಂದು ನಮ್ಮ ಬೋಗಿಯಲ್ಲೇ ಕುಳಿತರು. ಅವರನ್ನು ಎಲ್ಲೋ ನೋಡಿದ ನೆನಪು. ಅವರು ಮೈಸೂರಿನ ನಮ್ಮ ಮನೆಯಿಂದ ಎರಡನೆಯ ಮನೆಯಲ್ಲೇ ವಾಸವಾಗಿದ್ದವರು. ಅವರು ಅಲ್ಲಿದಷ್ಟೂ ದಿನ ನಾನು ಅವರನ್ನು ಮಾತನಾಡಿಸಿಯೇ ಇರಲಿಲ್ಲ. ಆದರೆ ಈಗ ತಕ್ಷಣ ಆ ಹುಡುಗನನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡೆ. ಗ

ಣೇಶ್ ಎಂದು ಅವನ ಹೆಸರು. ಪದವಿ ಮುಗಿಸಿ ಉದ್ಯೋಗ ಪರೀಕ್ಷೆಗಳಿಗೆ ತಯಾರಾಗುತ್ತಿದ್ದವನೆಂದು ಹೇಳಿದ. ನಮ್ಮ ಮಾತಿನ ಲಹರಿ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿ ನಮ್ಮ ರೈಲು ಮೈಸೂರು ಮುಟ್ಟುವವರೆಗೂ ಮುಂದುವರಿಯಿತು. ರೈಲು ಮೈಸೂರಿನ ರೈಲ್ವೆ ನಿಲ್ದಾಣ ತಲುಪಿದಾಗ ರಾತ್ರಿ 10:10ರ ಸಮಯ. ಗಣೇಶನಿಗೆ ನಾನು ಮತ್ತೆ ಭೇಟಿ ಮಾಡುತ್ತೇನೆಂದು ಭರವಸೆಯಿತ್ತು, ನನ್ನ ಮನೆಯ ಹಾದಿಯನ್ನು ಹಿಡಿದೆ.

405742_10150559049204827_845227977_nತುಂತುರು ಮಳೆಯ ಮಧ್ಯೆ ಹಸಿರು ಮತ್ತು ಪಾರಂಪರಿಕ ಕಟ್ಟಡಗಳು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದವು. ಏಳೆಂಟು ಮೈಲುಗಳ ಪ್ರಯಾಣವನ್ನು ನಡಿಗೆಯಲ್ಲೇ ಕ್ರಮಿಸಿ ರಾತ್ರಿ 11:40ರ ಸಮಯಕ್ಕೆ ಮನೆಯ ಗೇಟನ್ನು ತೆಗೆದು, ನನ್ನಲ್ಲಿದ್ದ ಕೀಲಿಕೈಯಿಂದ ಮನೆಯ ಮುಖ್ಯದ್ವಾರವನ್ನು ತೆರೆದು ಒಳಗೆ ಹೋದೆ. ಮೊದಲು ಅಪ್ಪ ನೋಡಿ ಖುಷಿ ಪಟ್ಟು, ಅಲ್ಲೇ ಟಿವಿ ನೋಡುತ್ತಿದ್ದ ಪೂಜಾಳಿಗೆ ಹೇಳಿದರು. ಸುಮಾರು ಹತ್ತು ಕಿಲೋ ತೂಕ ಇಳಿಸಿಕೊಂಡು ನಿಶ್ಯಕ್ತನಂತೆ ಕಾಣುತ್ತಿದ್ದ ನನ್ನ ಚಹರೆಯ ಮೇಲೆ ಎರಡು ತಿಂಗಳಿಂದ ದಟ್ಟಾರಣ್ಯದಂತೆ ಬೆಳೆದ ಗಡ್ಡ ರಾರಾಜಿಸುತ್ತಿತ್ತು.

ಯಾವುದೇ ಮುನ್ಸೂಚನೆ ಕೊಡದೆ ಬಂದ ನನ್ನನ್ನು ನೋಡಿ ಯಾರದೂ ಮಾತಿಲ್ಲ. ಪೂಜಾ ನನ್ನನ್ನು ಓಡಿ ಬಂದು ಅಪ್ಪಿಕೊಂಡಳು. ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನಿಗೆ ಹಜಾರದಲ್ಲಿ ಏನು ನಡೆಯುತ್ತಿದೆ ಎಂಬ ಪರಿವೇ ಇಲ್ಲ. ಅಪ್ಪ ನಾನು ಬಂದಿರುವೆನೆಂದು ಅಮ್ಮನಿಗೆ ಹೇಳಿದರೂ ಅವರು ನಂಬಲಿಲ್ಲ. ಹೊರಗೆ ಬಂದು ನೋಡಿ, ನಾನು ವಾಪಸ್ಸು ಮನೆಗೆ ಬಂದಿರುವುದನ್ನು ಖಾತರಿ ಪಡಿಸಿಕೊಂಡ ಮೇಲೂ ಅವರಲ್ಲಿ ಯಾವ ಭಾವನೆ ಮೂಡಬೇಕೆಂಬ ಗೊಂದಲದಲ್ಲಿದ್ದರು.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 272 ಮೈಲುಗಳು]

403624_10150559049969827_122752302_n

 

‍ಲೇಖಕರು admin

July 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಸುಮಿತ್ರಾ

    ಈ ಅಂಕಣವನ್ನು ಬಹಳ ಆಸಕ್ತಿಯಿಂದ ಓದಿದೆ..ಉಪಯುಕ್ತ ಕೆಲಸ ಮಾಡುತ್ತಿರುವ ರಾಹುಲ್ ಅವರಿಗೆ ಶುಭಾಶಯಗಳು. ಪ್ರಕಟಿಸಿದ ಅವಧಿಗೆ ಧನ್ಯವಾದಗಳು

    ಪ್ರತಿಕ್ರಿಯೆ
    • ರಾದ

      ಸುಮಿತ್ರ ಮ್ಯಾಡಮ್, ನಿಮಗೆ ಹೇಗೆ ಧನ್ಯವಾದ ಸಲ್ಲಿಸಬೇಕೋ ನನಗೆ ಗೊತ್ತಾಗುತ್ತಿಲ್ಲ. ತಮ್ಮಂತಹ ಹಿರಿಯರು ಯುವ ಲೇಖಕರಿಗೆ ಕೊಡುತ್ತಿರುವ ಉತೇಜನಕ್ಕೆ ನಾನು ಅಭಾರಿಯಾಗಿರುತ್ತೇನೆ. ದೊಡ್ಡ ಹೆಮ್ಮರವು ತನ್ನ ನೆರಳಿನಲ್ಲಿ ಚಿಗುರೊಡೆಯುತ್ತಿರುವ ಸಸಿಗೆ ತನ್ನ ಮುದುರೆಲೆಗಳನ್ನು ಉದುರಿಸಿ ಸಸಿಯು ಬೆಳೆಯಲು ಪ್ರೋತ್ಸಾಹಿಸಿದಂತೆ.
      ಈ ಪ್ರಯಾಣದ ಕೊನೆಯ ತನಕ ನಮ್ಮ ಜೊತೆ ಹೆಜ್ಜೆ ಹಾಕಿದ ತಮಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

      ಪ್ರತಿಕ್ರಿಯೆ
  2. Anonymous

    Very interesting journey rahul…nimma jothe nanu prayana madidha anubhava aaythu…ashtu sundaravagedhe nimma baraha…neevu aaydhukonda prakruthiya bagegina iswarth seve…adhu makkala jothe….nimma anubava…manushya enu nereksheade hegu badhukaballa antha..badhukabahudhu antha thorisekottedheera…excellent..nimma prakruthi prema kalagi hege erali..excellent…

    ಪ್ರತಿಕ್ರಿಯೆ
    • ರಾದ

      ಧನ್ಯವಾದಗಳು. ಅಂಕಣದ ಒಳಗೆ ಒಂದು ರೀತಿಯ ಪ್ರಯಾಣವಾದರೆ, ಅಂಕಣ ಹೊರಗೆ ಅವಧಿಯಲ್ಲಿ ಮತ್ತೊಂದು ಅತ್ಯದ್ಭುತ ಪ್ರಯಾಣ ಮಾಡಿದಂತೆ ಭಾಸವಾಗುತ್ತಿದೆ.
      ಈ ಪ್ರಯಾಣದ ಕೊನೆಯ ತನಕ ನಮ್ಮ ಜೊತೆ ಹೆಜ್ಜೆ ಹಾಕಿದ ತಮಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

      ಪ್ರತಿಕ್ರಿಯೆ
  3. Vihi wadawadagi

    Rada sir dhanyavadagalu nimma baraha nimma payana yashasvi aagive tumba preeti inda odide heege saagali nimma payana

    ಪ್ರತಿಕ್ರಿಯೆ
    • ರಾದ

      ಪ್ರೀತಿಯಿಂದ ಓದಿದ ತಮಗೆ ಪ್ರೀತಿ ಪೂರ್ವಕ ವಂದನೆಗಳು. ಇದು ಬರೀ ನನ್ನ ಪ್ರಯಾಣವಾಗಿರಲಿಲ್ಲ. ನಮ್ಮೆಲ್ಲರೊಳಗೂ ಮೂಡುತ್ತಿರುವ ಭಾವನೆಗಳಿಗೆ, ತುಡಿಯುತ್ತಿರುವ ಆಸೆಗಳಿಗೆ ಈ ಪ್ರಯಾಣ ಕನ್ನಡಿ ಹಿಡಿದಂತಿದೆ.
      ಹೀಗೇ ಸಾಗಲಿ ನಮ್ಮಿಬ್ಬರ ಪಯಣ. 🙂

      ಪ್ರತಿಕ್ರಿಯೆ
  4. Nagabhushan

    ಈ ಅಂಕಣವನ್ನು ಬಹಳ ಆಸಕ್ತಿಯಿಂದ ಓದಿದೆ. ಒಂದು ಒಳ್ಳೆಯ ಅನುಭವ ನೀಡಿದೆ. .

    ಪ್ರತಿಕ್ರಿಯೆ
    • ರಾದ

      ಈ ಪ್ರಯಾಣದ ಕೊನೆಯ ತನಕ ನಮ್ಮ ಜೊತೆ ಹೆಜ್ಜೆ ಹಾಕಿದ ತಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: