ಮಧ್ಯದಲ್ಲೇ ಬಸ್ ಏರಿ ತಮ್ಮ ಊರಿಗೆ ವಾಪಸ್ ಹೋಗಲಿಲ್ಲ

ಇದು ‘ಹೊಸ ರೀತಿಯ ಒಂದು ಪಯಣ’ ಎಂಬ ಟ್ಯಾಗ್ ಲೈನ್ ಹೊತ್ತೇ ಆರಂಭವಾದದ್ದು ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಪ್ರವಾಸ ಕಥನ. ಏಕೆಂದರೆ ಇದು ಪ್ರವಾಸ ಕಥನವಾಗಿರಲಿಲ್ಲ ಬದಲಿಗೆ ಬದುಕು ಕಲಿತ ಕಥನವಾಗಿತ್ತು.

ಇರಲಿ ಸತತವಾಗಿ ಒಂದು ತಿಂಗಳು ‘ಅವಧಿ’ಯಲ್ಲಿ ಬೆಳಕು ಕಂಡ ಈ ಸರಣಿ ಮುಕ್ತಾಯಗೊಂಡಿದೆ.

ಆ ಬಗ್ಗೆ ‘ಅವಧಿ’ಗೆ ಆದ ಅನುಭವ ಹಾಗೂ ರಾಹುಲ್ ದಯಾಳುವಿಗೆ ಆದ ಅನುಭವ ಇಲ್ಲಿದೆ

ಈ ಪ್ರವಾಸ ಕಥನವನ್ನು ಈಗಲೂ ಓದಬಹುದು : ಇಲ್ಲಿ ಕ್ಲಿಕ್ಕಿಸಿ 

footprint 

ನಾರಿ ಹಳ್ಳದ ದಂಡೆಯಲ್ಲಿ…

ಒಂದು ರೀತಿ ನನಗೆ ಇನ್ನೊಂದು ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಲು ಕಾರಣವಾದ ಕೃತಿ

ಇದನ್ನು ಬರೆದವರು ಚಂದ್ರಕಾಂತ ವಡ್ಡು

ಗೆಳೆಯ ಚಿತ್ರಶೇಖರ ಕಂಠಿ ಕಾರಣದಿಂದಾಗಿ ಒಂದು ದಿನ ವಡ್ಡು ಅವರ ಕೈಕುಲುಕುವ ಅವಕಾಶವೂ ಸಿಕ್ಕಿತು

ಕಲಬುರ್ಗಿಯ ನಮ್ಮ ಮನೆಯಲ್ಲೇ

ವಡ್ಡು ಅವರ ಪತ್ರಿಕಾ ಕನಸುಗಳ ಜೊತೆ ಒಂದೆರಡು ಹೆಜ್ಜೆ ನಾನೂ ಹಾಕಿದ್ದೇನೆ

ಅವರ ಹೆಸರು ಮುಂದುಮಾಡಿಕೊಂಡೇ ರಾಹುಲ್ ದಯಾಳು ನನಗೆ ಫೋನ್ ಮಾಡಿದ್ದು

ಆ ವಿಸಿಟಿಂಗ್ ಕಾರ್ಡ್ ಸರಿಯಾಗಿಯೇ ಕೆಲಸ ಮಾಡಿತ್ತು

rahul dayalu map

ಆ ನಂತರವೇ ನನ್ನ-ಅವಧಿಯ-ದಯಾಳುವಿನ ಪಯಣ ಆರಂಭವಾಗಿದ್ದು

ಈ ಕಥನವೇ ಒಂದು ಭಿನ್ನ ನಡಿಗೆ

ಈ ಹೆಜ್ಜೆ ಹಾಕುವ ಮುನ್ನ ಮತ್ತು ನಂತರದ ರಾಹುಲ್ ಒಂದೇ ಅಲ್ಲ ಎಂದು ಅವರೇ ಬಣ್ಣಿಸಿಕೊಂಡಿದ್ದಾರೆ

ಈ ಎರಡು ತುದಿಗಳ ನಡುವೆ ತುಯ್ದಾಡಿದ ಅವರ ಕುಟುಂಬ ಅವರ ಹೊಯ್ದಾಟ ಬೇಡವೆಂದರೂ ಒಳಗೆ ಶಾಲ್ಮಲಿಯಂತೆ ಹರಿದಿದೆ

ಈ ಪ್ರವಾಸದಲ್ಲಿ ಒಬ್ಬ ತುಂಟನಿದ್ದಾನೆ, ಅಪಕ್ವ ಮನಸ್ಸಿನ ಹುಡುಗನಿದ್ದಾನೆ, ಪಾಠ ಕಲಿತ ಪ್ರೌಢನಿದ್ದಾನೆ

ಕಳ್ಳ ಕೃಷ್ಣನೂ ಇದ್ದಾನೆ

rahul dayalu

ಒಂದು ತಿಂಗಳು ಓದುತ್ತಾರಾ ಎನ್ನುವ ಆತಂಕ ನನಗೂ ಇತ್ತು

ಆದರೆ ಕಥನ ಆರಂಭದಿಂದ ಕೊನೆಯವರೆಗೂ ದಯಾಳುವಿನ ಜೊತೆ ನಮ್ಮ ಓದುಗರೂ ಹೆಜ್ಜೆ ಹಾಕಿದರು

ಮಧ್ಯದಲ್ಲೇ ಬಸ್ ಏರಿ ತಮ್ಮ ಊರಿಗೆ ವಾಪಸ್ ಹೋಗಲಿಲ್ಲ

ಕೊನೆಯ ಕಂತಿನವರೆಗೂ ಹೆಜ್ಜೆ ಹಾಕಿದರು

avadhi-column-rahul bw-edited2

ಇಡೀ ಕಥನದಲ್ಲಿ ಒಂದು ಮುಗ್ದತನವಿದೆ. ಆ ಮುಗ್ದತೆಯೇ ಎಲ್ಲರನ್ನೂ ಹಿಡಿದಿಟ್ಟಿದ್ದು ಕೂಡಾ

ಯಾಕೆಂದರೆ ಯಾವ ಮಾರ್ಕೆಟ್ ನಲ್ಲಿ ಸಿಗುತ್ತದೆ ಅದು..??

ರಾಹುಲ್ ಬರವಣಿಗೆಯ ನಡಿಗೆಯೂ ಸರಾಗವಾಗಿ ಎನ್ನುತ್ತಾ..

-ಜಿ ಎನ್ ಮೋಹನ್ 

man footprint step icon abstract vector logo color

ಪ್ರವಾಸ ಕೈಗೊಂಡ ವ್ಯಕ್ತಿಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿ ಕೆಲವೊಂದು ಪ್ರವಾಸಗಳಿಗೆ ಇರುತ್ತದೆ.

ನಾನು ಕೈಗೊಂಡ ನಲವತ್ತು ದಿನಗಳ ಕಾಲ್ನಡಿಗೆಯ ಪ್ರಯಾಣಕ್ಕೂಅಂತಹದೇ ಶಕ್ತಿಯಿತ್ತು.

ಅದರಲ್ಲೂ ಒಬ್ಬ ತಿರುಕನಂತೆ ದೂರದ ಊರು ಕೇರಿಗಳನ್ನು ಸುತ್ತಿ, ಕಂಡು ಕೇಳರಿಯದವರನ್ನು ಅವಲಂಬಿಸಿ ಜೀವನ ಸಾಗಿಸಿಕೊಂಡು ಮಾಡುವ ಪ್ರಯಾಣದ ಅನುಭವಗಳು ಅತ್ಯದ್ಭುತವಾಗಿರುತ್ತವೆ.

footprints-vector-293781ಈ ನಿಟ್ಟಿನಲ್ಲಿ ಪ್ರಕೃತಿಯ ಉಳಿವು ಮತ್ತು ಸ್ವಚ್ಛತೆಯ ಉದ್ದೇಶದೊಂದಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗೊಂಡ ಸುಮಾರು 500 ಮೈಲುಗಳ ಕಾಲ್ನಡಿಗೆಯ ನನ್ನ ಪ್ರವಾಸವೇ ಸಾಕ್ಷಿ.

ಪ್ರಯಾಣ ಕೈಗೊಳ್ಳುವ ಹಿಂದಿನ ನನ್ನ ಜೀವನಕ್ಕೂ, ಪ್ರಯಾಣದ ನಂತರದ ಜೀವನಕ್ಕೂಅಜಗಜಾಂತರವಿರುವಂತೆ ಭಾಸವಾಗುತ್ತಿದೆ. ಕೆಲವೇ ತಿಂಗಳ ಹಿಂದೆ ಬದುಕಿನ ಅಲೆಗಳ ಮೇಲೆ ವ್ಯಾಮೋಹವೆಂಬ ದೋಣಿಯಲ್ಲಿ ಡೋಲಾಯಮಾನವಾಗಿ ಸಾಗುತ್ತಿದ್ದ ಮನಸ್ಸು, ಕಾಣದ ಕಡಲಿಗೆ ಹಂಬಲಿಸಿ ಒಮ್ಮೆಲೆ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ನಿಸ್ವಾರ್ಥದ ತಿಳಿ ನೀರಿನ ಮೇಲೆ ಸಾವಧಾನವಾಗಿ ತನ್ನ ನಾವಿಕನು ಸೂಚಿಸಿದ ದಿಕ್ಕಿಗೆ ಚಲಿಸುತ್ತಾ ಸಾಗುತ್ತಿರುವಂತೆ ಭಾಸವಾಗುತ್ತಿದೆ.

ಪ್ರಯಾಣದಲ್ಲಿ ದಿನಚರಿಯಂತೆ ಬರೆದುಕೊಂಡಿದ್ದ ಬರಹವು ಒಂದು’ಕಾಣದ ಕಡಲಿಗೆ…’ ಪುಸ್ತಕವಾಗಿ ರೂಪುಗೊಂಡಿದ್ದು ನನಗೆ ಈಗಲೂ ಅಚ್ಚರಿಯನ್ನುಂಟು ಮಾಡುತ್ತದೆ.

ಕನ್ನಡದಲ್ಲಿ ಬರವಣಿಗೆ ನಿಲ್ಲಿಸಿ ಹಲವಾರು ವರ್ಷಗಳೇ ಕಳೆದಿದ್ದವು. ನನ್ನ ಸಂತೋಷಕ್ಕೆಂದು ಆಂಗ್ಲ ಭಾಷೆಯಲ್ಲಿ ಹಲವಾರು ಕಿರು ಲೇಖನಗಳನ್ನು ಬರೆದು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದ ನನಗೆ, ಶುರುವಿನಲ್ಲಿ ಕನ್ನಡಕ್ಕೆ ಒಗ್ಗಿಕೊಳ್ಳಲು ತ್ರಾಸವೇ ಆಯಿತು. ಸಾಹಿತ್ಯ ಕ್ಷೇತ್ರದ ಸಂಪರ್ಕಕೊರತೆಯಿಂದಾಗಿ ಮೂಡಿದ್ದ ನಿರಾಸೆಯನ್ನು ಮತ್ತು ನನ್ನ ಬರವಣಿಗೆಯ ಬಗ್ಗೆ ನನ್ನಲ್ಲಿದ್ದ ಸಂಶಯಗಳನ್ನು ಚಂದ್ರಕಾಂತ್ ವಡ್ಡು  ಮತ್ತು ರಹಮತ್ ತರೀಕೆರೆಯವರು ಪ್ರೋತ್ಸಾಹ ಮತ್ತು ಅಗತ್ಯ ಮಾರ್ಗದರ್ಶನ ನೀಡಿ ದೂರ ಮಾಡಿದರು.

ಮೊದಲು ಅಂತರ್ಜಾಲದಲ್ಲಿ ಪುಸ್ತಕದ ಅಧ್ಯಾಯಗಳನ್ನು ಅಂಕಣದ ರೂಪದಲ್ಲಿ ಹೊರತರುವ ಯೋಚನೆಯಲ್ಲಿದ್ದ ನನಗೆ, ಜಿ.ಎನ್. ಮೋಹನ್ ಅವರ ಸಂಪರ್ಕ ದೊರಕಿಸಿಕೊಟ್ಟಿದ್ದು ಚಂದ್ರಕಾಂತ್ ವಡ್ಡುರವರು.

footprints-in-heart-tattoo

ಕೆಲವು ದಿನಗಳು ‘ಅವಧಿ’ಯಲ್ಲಿ ದಿನವೂ ಪ್ರಕಟಿಸುತ್ತಿದ್ದ ಲೇಖನಗಳನ್ನು ಓದಿದೆ. ಅವಧಿಯು ಯುವ ಲೇಖಕರಿಗೆ ಹೆಚ್ಚು ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವುದನ್ನು ಗಮನಿಸಿದೆ. ಮೋಹನ್ ಅವರ ಜೊತೆ ಮಾತನಾಡಿ’ಅವಧಿ’ಯಲ್ಲಿ ಪ್ರಕಟಿಸುವ ನನ್ನ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಅವರು ಕೂಡಲೇ ಒಪ್ಪಿ’ಕಾಣದ ಕಡಲಿಗೆ…’ ಯನ್ನು ‘ಅವಧಿ’ಯಲ್ಲಿ ಪ್ರಕಟಿಸಲು ಅನುವು ಮಾಡಿಕೊಟ್ಟರು.

ಅದಕ್ಕೆ ಅಗತ್ಯವಿದ್ದ ಪ್ರಚಾರವನ್ನು ‘ಅವಧಿ’ ತಂಡವೇ ಕೈಗೊಂಡಿತು. ಜೂನ್ 13ರಂದು ‘ಬನ್ನಿ ರೆಕ್ಕೆಗಳ ಬಿಚ್ಚೋಣ..’ ದಿಂದ ಶುರುವಾದ ಅಂಕಣ, ಸತತ ಒಂದು ತಿಂಗಳು ಪ್ರಕಟಗೊಂಡು ಓದುಗರ ಮೆಚ್ಚುಗೆಗೆ ಪಾತ್ರವಾಯಿತು.

ಅಂಕಣದಲ್ಲಿ ಮೂಡುತ್ತಿದ್ದ ಅನೇಕ ರೀತಿಯ ಭಾವನೆಗಳೊಂದಿಗೆ ತಮ್ಮನ್ನು ಜೋಡಿಸಿಕೊಂಡಿದ್ದ ಓದುಗರು ದಿನವೂ ಅಂಕಣಕ್ಕಾಗಿ ಕಾಯುತ್ತಿದ್ದರೆ, ನನಗೋ ಆ ದಿನದ ಅಂಕಣಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬರಬಹುದೆಂಬ ದಿಗಿಲು. ಓದುಗರಿಂದ ಮೂಡಿದ ಪ್ರಶಂಸೆ, ಟೀಕೆಗಳನ್ನು ಸವಿದು ಎಲ್ಲರಿಗೂ ಧನ್ಯವಾದಗಳೊಂದಿಗೆ ಉತ್ತರಿಸುತಿದ್ದೆ. ಕೆಲವರಂತೂ ನನ್ನ ದೂರವಾಣಿಗೇ ಕರೆ ಮಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ನನ್ನಿಂದ ಉತ್ತರ ಪಡೆಯುತ್ತಿದ್ದರು.

budgerigar-footprints

ಒಂದು ತಿಂಗಳು ಕಳೆದಿದ್ದೇ ತಿಳಿಯದು. ‘ಅಂಕಣ ಇಷ್ಟು ಬೇಗೆ ಮುಗಿಯಿತೇ? ಅಯ್ಯೋ ಅಂಕಣವು ಇನ್ನಷ್ಟು ದಿನ ಪ್ರಕಟಗೊಳ್ಳಬಾರದೇ?’ ಎಂಬುದು ಎಲ್ಲರ ಪ್ರಶ್ನೆ.

ಈ ಒಂದು ಅದ್ಭುತ ಅನುಭವನ್ನು ಸವಿಯಲು ನನಗೆ ಮತ್ತು ಓದುಗರಿಗೆ ಅವಕಾಶ ಮಾಡಿಕೊಟ್ಟು, ‘ಕಾಣದ ಕಡಲಿಗೆ…’ ಅಂಕಣವು ಚೆಂದವಾಗಿ ಮೂಡಿಬರಲು ಕಾರಣರಾದ ಜಿ.ಎನ್.ಮೋಹನ್ ಅವರಿಗೂ ಮತ್ತು ‘ಅವಧಿ’ ತಂಡಕ್ಕೂ ನಾನು ಅಭಾರಿಯಾಗಿರುತ್ತೇನೆ. ಹಾಗೆಯೇ ಮತ್ತಷ್ಟು ಲೇಖನಗಳೊಂದಿಗೆ ನನ್ನ ಮತ್ತು ‘ಅವಧಿ’ಯ ಸಂಬಂಧ ಮುಂದುವರಿದು ಗಟ್ಟಿಯಾಗಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಕನ್ನಡ ಬರಹಗಾರರಿಗೆ ‘ಅವಧಿ’ಯಂತಹ ತೆರೆದ ವೇದಿಕೆಯನ್ನು ಸೃಷ್ಠಿಸಿ, ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವ ‘ಅವಧಿ’ಯ ಇಡೀ ತಂಡಕ್ಕೆ ನನ್ನ ಶುಭಾಷಯಗಳು.

ತಮ್ಮ ವಿಶ್ವಾಸಿ,
ರಾದ

foot key chain

‍ಲೇಖಕರು Admin

July 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Vihi wadawadagi

    Nijavaglu nimma article bega mugile bardittu anisutte nanu Dina belagadare saaku Mohan sir yavag haktare anta kaykond kurtidde modlella Edda kudle paper odi amel Avadhi kade bartidde ivag modlu Avadhi nanatra ulidella iga nimma Kate kuda mugitu rada avare munde heege barita iri odalu namage innu aase ide shubhavagali

    ಪ್ರತಿಕ್ರಿಯೆ
    • ರಾದ

      ಧನ್ಯವಾದಗಳು ವಿಹಿರವರೇ. ನಿಮ್ಮ ಈ ಮುದ್ದು ಅಭಿಮಾನಕ್ಕೆ ನನಗೆ ಏನೇಳಬೇಕೋ ಗೊತ್ತಾಗುತ್ತಿಲ್ಲ. ನನಗೂ ಇವೆಲ್ಲ ಹೊಸ ಅನುಭವಗಳು. ನನಗೂ ನಿಮ್ಮ ರೀತಿಯೇ ಅನಿಸುತ್ತಿದೆ. ‘ಕಾಣದ ಕಡಲಿಗೆ’ ಇಷ್ಟು ಬೇಗ ಮುಗಿಯಬಾರದಿತ್ತು ಎಂದು. ದಿನ ಬೆಳಕಾದರೆ ತಾವು ಅಂಕಣದ ಪ್ರಕಟನೆಗೆ ಕಾಯುತ್ತಿದ್ದರೆ, ದಿನದ ಅಂತ್ಯದಲ್ಲಿ ನನಗೆ ನಿಮ್ಮೆಲ್ಲರ ಅಭಿಪ್ರಾಯಗಳನ್ನು ಓದುವ ತವಕ.
      ನಿಜ. ನನಗೂ ಬರವಣಿಗೆಯ ಗೀಳು ನಿಂತಿಲ್ಲ. ಓದಲು ನೀವಿರುವಾಗ, ಬರೆಯದಿರಲು ನನಗೇನು ದಾಡಿ?
      ಈ ಪ್ರಯಾಣದ ಕೊನೆಯ ತನಕ ನಮ್ಮ ಜೊತೆ ಹೆಜ್ಜೆ ಹಾಕಿದ ತಮಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮತ್ತೆ ಸಿಗೋಣ.

      ಪ್ರತಿಕ್ರಿಯೆ
  2. Dr. Prabhakar M. Nimbargi

    The story-telling of the travel and experiences gathered has been really absorbing. It made us to wait for the next issue. A new world is unfolded in every step. We need not emphasize the troubles RADA has undergone, rather to say he has acted as a radar to every happening on his travel itinerary, which I believe was unplanned. Well told.

    ಪ್ರತಿಕ್ರಿಯೆ
    • ರಾದ

      Thank you Dr. Prabhakar sir. Am glad you liked ‘Kaanada Kadalige..’. Troubles i was undergone can be ignored compared to tremendous life changing experiences journey showered on me. As you rightly said, a new world is unfolded in every step.

      Thanks for following this journey and your support. Will be back with new write-ups.

      ಪ್ರತಿಕ್ರಿಯೆ
  3. Shama, Nandibetta

    Rahul,

    ನಿಮ್ಮ ಅಷ್ಟೂ ಹೆಜ್ಜೆಗಳ ಜತೆ ಓದಿನ ಹೆಜ್ಜೆ ಹಾಕಿದ್ದೇನೆ. ಪ್ರತಿಯೊಂದಕ್ಕೂ ಕಾಮೆಂಟ್ ಮಾಡದಿದ್ದರೂ ಎಲ್ಲವೂ ನನ್ನನ್ನು ಹಿಡಿದಿಟ್ಟಿವೆ. ಸ್ವಭಾವತಃ ಅಲೆಮಾರಿ ಪ್ರವೃತ್ತಿಯ ನನಗೆ ಎರಡು ಪುಟ್ಟ ಕಿನ್ನರಿಗಳನ್ನು ಬಿಟ್ಟು ಅಲೆದಾಡುವದು ಆಗದ ಮಾತಾದರೂ ನನ್ನ ಕನಸುಗಳನ್ನು ಹೀಗೆ ಯಾರಾದರೂ ಬದುಕಿದಾಗ ಏನೋ ಅನೂಹ್ಯವಾದ ಖುಷಿ ಸಿಗುತ್ತದೆ ಮತ್ತು ನನ್ನ ಕನಸುಗಳನ್ನ ಜೀವಂತವಾಗಿಟ್ಟುಕೊಳ್ಳುವುದೂ ಸಾಧ್ಯವಾಗುತ್ತದೆ.

    ನಿಮ್ಮ ಬರವಣಿಗೆಯಲ್ಲಿ ನಂಗೆ ಕಂಡಿದ್ದು ಸರಳತೆ. ಯಾವುದನ್ನೂ ತೋರುಗಾಣಿಕೆಗೆ ಬಿಂಬಿಸದೇ ಇದ್ದದ್ದು ಇದ್ದ ಹಾಗೆ ಹೇಳುವ ನೇರವಂತಿಕೆ, ಯಾರನ್ನೂ ಅನವಶ್ಯಕ ಹೊಗಳದೇ, ಎಷ್ಟು ಬೇಕೋ ಅಷ್ಟೇ ಟೀಕಿಸಿ, (ವಿಮರ್ಶಿಸಿ), ಅನುಭವಕ್ಕೆ ದಕ್ಕಿದ್ದರ ಜತೆಗೆ ಕಂಡುಕೊಂಡ ಅನುಭಾವಗಳನ್ನೂ ಬೆರೆಸಿ ಓದುಗನಿಗೆ ಕೊಟ್ಟಿದ್ದು ಆಪ್ತವೆನಿಸಿತು. ಶಬ್ದಗಳ ಆಡಂಬರವಿಲ್ಲ, ಏನೋ ಸಮಾಜ ಸೇವೆ ಮಾಡುತ್ತಿರುವೆನೆಂಬ ಅಹಂಕಾರವಿಲ್ಲ, ದಿಟ್ಟತನವಿದೆಯೆಂದು ಅದರ ಅನವಶ್ಯಕ ಬಳಕೆಯಿಲ್ಲ, ವಿನೀತತೆ ಎಲ್ಲೂ ದೌರ್ಬಲ್ಯವಾಗಿ ಕಾಣಿಸಿಲ್ಲ. ಸಂತನಂತೆ ಎಲ್ಲ ಬಿಟ್ಟು ಹೊರಟರೂ ಕೊಂಡಿ ಕಳಚಿಕೊಳ್ಳುವುದು ಆಗದ ಸಾಮನ್ಯ ಮನುಷ್ಯನಿಗೆ ಇರುವ ಅಷ್ಟೂ ತಲ್ಲಣಗಳು, ಆಸೆಗಳು, ಪ್ರೀತಿ, ವ್ಯಾಮೋಹದ ಕವಲುಗಳು, ರುಚಿಗೆ ತಕ್ಕಷ್ಟು ತುಂಟತನಗಳು ನಿಮ್ಮ ಬರವಣಿಗೆಯ ಸಮರಸ ಕಾಯ್ದುಕೊಂಡಿರುವುದರಲ್ಲಿ ಅನುಮಾನವೇ ಇಲ್ಲ.

    ಯಾವುದೋ ಉದ್ದೇಶ ಇಟ್ಟುಕೊಂಡು ಹೊರಟ ಪಯಣವಾದರೂ ಬರಬರುತ್ತಾ ಯಾವುದಕ್ಕೂ ಅಂಟಿಕೊಳ್ಳದೇ ಬದುಕು ನಡೆಸಿದಂತೆ ಹಾದಿ ಸವೆಸುವಾಗ ಉದ್ದೇಶ ನೆರವೇರಿತಾ ಎಂಬುದನ್ನು ಅಳತೆ ಮಾಡುತ್ತ ಕೂತರೆ ಬಹಳಷ್ಟು ಸಲ ಕಾಡುವುದು ನಿರಾಸೆಯೇ. ಅದಾವುದೂ ಇಲ್ಲದಾಗ ನಡಿಗೆ ತನ್ನ ಗಮ್ಯವನ್ನು ತಾನೇ ಕಂಡುಕೊಳ್ಳುತ್ತದೆ, ಕಂಡುಕೊಳ್ಳಬೇಕು ಕೂಡಾ. ನದಿಯೊಂದು ತನ್ನ ಪಾತ್ರವನ್ನು ತಾನೇ ಕಂಡುಕೊಂಡು ಹರಿದು ಕಡಲ ಸೇರುವ ಹಾಗೇ. ನಿಮ್ಮ ಪಯಣ ಕೂಡ ಅದೇ ಥರ ತನ್ನ ದಡದ ಮೇಲಿನ ಎಲ್ಲರಿಗೂ ಎಲ್ಲಕ್ಕೂ ನೀರುಣಿಸಿ ಸಾಗುವ ನದಿಯಂತೆ ಭಾಸವಾಯಿತು. ಹೀಗೆ ಅಲೆಯುತ್ತ against all the odds, ಜ್ಞಾನವನ್ನೇ ಆದರೂ ಹಂಚಿಕೊಳ್ಳುವುದು ಸುಲಭವಲ್ಲ. ಅದನ್ನು ಸಾಧಿಸಿದ್ದೀರಿ. ಶಾಲೆಗಳ ಸ್ಥಿತಿಗತಿಗಳಿಗೆ ಅನವಶ್ಯಕವಾಗಿ ಸರ್ಕಾರವನ್ನು ಹೊಗಳುವುದು/ತೆಗಳುವುದು ಎರಡೂ ಪ್ರಯೋಜನವಿಲ್ಲ. ಊರ ಮಂದಿ, ಜತೆಗೆ ಶಿಕ್ಷಕ ವೃಂದ ಮನಸ್ಸು ಮಾಡಿದರೆ ಎಂಥ ಮಗುವಲ್ಲೂ ಒಳ್ಳೆಯದನ್ನು ಬಿತ್ತಿ ಬೆಳೆಯಬಹುದು ಎನ್ನುವುದೇ ಕೊನೆಯ ಸತ್ಯ. ಸಮಸ್ಯೆಗಳ ಪರಿಹಾರದ ಮಾತನಾಡುತ್ತ ಇಂಥ ಸತ್ಯಗಳನ್ನು ಅನಾವರಣಗೊಳಿಸಿದ್ದೀರಿ. ಈ ಇಡೀ ಕಥಾನಕವನ್ನು ಎಲ್ಲ ಶಾಲೆಗಳಿಗೂ ಕಳುಹಿಸಿದರೆ ಹೊಗಳಿಸಿಕೊಂಡವರು ಇನ್ನೂ ಹೆಚ್ಚು ಜವಾಬ್ದಾರಿಯಿಂದ, ತೆಗಳಿಸಿಕೊಂಡವರೂ ಇನ್ನಾದರೂ ಒಳ್ಳೆಯದು ಮಾಡಬೇಕೆಂಬ ಭಾವದಿಂದ ಕೆಲಸ ಮಾಡಬಹುದಾ ಅನ್ನೋ ಸಣ್ಣ ಆಸೆಯ ಭಾವವೊಂದು ನನ್ನೊಳಗೆ ಸುಳಿದದ್ದು ಹೌದು. ಬಹಳಷ್ಟು ಸಾರ್ತಿ ಇಂಥ ಕಥಾನಕಗಳು ಆತ್ಮರತಿಯಲ್ಲಿ ಕೊನೆಗೊಳ್ಳುವುದೇ ಹೆಚ್ಚು. ನೀವು ಆ ಅಪಾಯವನ್ನು ಗೆದ್ದಿದ್ದೀರಿ. Hats off to you.

    ಅಂದ ಹಾಗೆ ಎರಡು ಕಂದಮ್ಮಗಳ ಅಮ್ಮನಾಗಿ ಬಸುರಿ ತಲ್ಲಣಗಳನ್ನ, ಆ ಸಮಯದಲ್ಲಿ ಸಾಂಗತ್ಯದ ಆಸೆ, ಅವಶ್ಯಕತೆ ಕೆಲವೊಮ್ಮೆ ಅನಿವಾರ್ಯತೆಗಳನ್ನು ಬಲ್ಲೆ. ನಿಮ್ಮ ಕನಸುಗಳಿಗೆ ಪೂಜಾ ಒತ್ತಾಸೆಯಾಗಿ ನಿಂತಿಲ್ಲವೇನೋ ಎಂಬ ಭಾವ ನಿಮ್ಮನ್ನು ಚೂರು ಕಾಡಿದ್ದರೂ ಇಷ್ಟು ಮಟ್ಟಿಗೆ ಬಿಟ್ಟು ಕೊಟ್ಟಿದ್ದು ತಳ್ಳಿ ಹಾಕುವ ಹಾಗಿಲ್ಲ. ನಿಮ್ಮ ಯಶಸ್ಸಿಗೆ ಆಕೆಯ ಪ್ರೀತಿ, ತಾಳ್ಮೆ ಕೂಡ ಕಾರಣವೇ ಎಂದುಕೊಂಡಿದ್ದೇನೆ. ಅಂಥ ಹುಡುಗಿ ಪೂಜಾಗೆ, ಕಂದನಿಗೆ ನನ್ನ ನಲ್ಮೆ. ಕಾಣದ ಕಡಲಿಗೆ ಹಂಬಲಿದ ಮನ ಕಂಡ ಕನಸಿಗೂ ಹಂಬಲಿಸುತ್ತದೆ. ನಿಮ್ಮ ಕಂದ ಅಂಥ ಕನಸಿನ ಮೂಟೆಯಾಗಲಿ. ನಿಮಗಿಂತ ಹೆಚ್ಚು ಸುತ್ತಿಲಿ, ಬೆಳೆಯಲಿ.

    ಹೀಗೇ ಅಲೆಯುತ್ತಿರಿ, ಮತ್ತು ಬರೆಯುತ್ತಿರಿ. ನಾವು ಓದುತ್ತಿರುತ್ತೇವೆ ಮತ್ತು ಯಾವತ್ತೋ ಒಮ್ಮೆ ತಟ್ಟನೇ ಚಪ್ಪಲಿ ಮೆಟ್ಟಿಕೊಂಡು ಹೊರಡುತ್ತೇವೆ. ಅಂಥ ಪಯಣದಲ್ಲಿ ಯಾವತ್ತಾದರೂ ಭೇಟಿಯಾಗೋಣ.

    ಪ್ರತಿಕ್ರಿಯೆ
    • ರಾದ

      ಪ್ರೀತಿಯ ಶಮ,
      ಕಾಣದ ಕಡಲಿಗೆ..ಯ ಹೆಜ್ಜೆಗಳ ಜೊತೆ ತಮ್ಮ ಹೆಜ್ಜೆ ಜೋಡಿಸಿದ ತಮಗೆ ಧನ್ಯವಾದಗಳು. ಅಂಕಣ ಶುರುವಾದಾಗಿನಿಂದ ಹಲವು ಹೆಜ್ಜೆಗಳು ಸವೆಯುವವರೆಗೂ, ಬಿಡಿಬಡಿಯಾಗಿದ್ದ ನನ್ನ ಬರವಣಿಗೆಯು ಅವಧಿಯ ಪ್ರಬುದ್ಧ ಓದುಗರಿಗೆ ಇಷ್ಟವಾಗುತ್ತದೆಯೋ? ಇಲ್ಲವೋ? ಎಂಬ ಅಳುಕಿತ್ತು. ನಿಮಗೆಲ್ಲಾ ಹಿಡಿಸಿದ ಬರವಣಿಗೆಯಲ್ಲಿನ ಸರಳತೆಯೇ ಅದರ ದೌರ್ಬಲ್ಯವೇನೋ ಎಂಬ ಭಯ ಕಾಡುತ್ತಿತ್ತು. ಕಾಣದ ಕಡಲಿಗೆ..ಯನ್ನು ಓದಿ ಅಪಹಾಸ್ಯ ಮಾಡಿದವರೂ ಉಂಟು. ಇರಲಿ. ನನ್ನ ಅಳುಕು, ಭಯಗಳನ್ನೆಲ್ಲಾ ಮೀರಿ ಓದುಗರಿಗೆ ಇಷ್ಟವಾಗಿರೋದು, ಬರವಣಿಗೆಯನ್ನು ಮುಂದುವರಿಸುವ ನನ್ನ ಆಸೆಗೆ ನೂರಾನೆಯ ಬಲ ಬಂದಂತಾಗಿದೆ.
      ಓದುಗರ ಅಲೆದಾಡುವ ಕನಸನ್ನು ಸ್ವಲ್ಪಮಟ್ಟಿಗಾದರೂ ‘ಕಾಣದ ಕಡಲಿಗೆ..’ ಈಡೇರಿಸಿರುವುದು ನನ್ನ ಪ್ರವಾಸಕ್ಕೆ ಸಂದ ಜಯವೇ ಸರಿ.
      “ಬಹಳಷ್ಟು ಸಾರ್ತಿ ಇಂಥ ಕಥಾನಕಗಳು ಆತ್ಮರತಿಯಲ್ಲಿ ಕೊನೆಗೊಳ್ಳುವುದೇ ಹೆಚ್ಚು. ನೀವು ಆ ಅಪಾಯವನ್ನು ಗೆದ್ದಿದ್ದೀರಿ. Hats off to you”
      ಹೌದು. ಅಪಾಯವನ್ನು ಗೆಲ್ಲಿಸಿದ್ದು ನನ್ನ ದಿಟ್ಟ ನಿರ್ಧಾರವಲ್ಲ. ನನ್ನನ್ನು ಬೆಂಬಿಡದೆ ಕಾಡಿ, ಸೆಳೆದುಕೊಂಡ ನನ್ನ ಕುಟುಂಬದವರ ನಿಷ್ಕಲ್ಮಷವಾದ ಅದಮ್ಯ ಪ್ರೀತಿ. ನಮಗೆಲ್ಲಾ ಹೊಸ ಜನ್ಮವನ್ನು ನೀಡಲು ಲೋಕದಲ್ಲಿ ಕಾಲಿಡಲು ಹವಣಿಸುತ್ತಿದ್ದ ಕಂದಮ್ಮಳನ್ನು ನೋಡುವ ನನ್ನ ಇಚ್ಛೆ.
      ನನ್ನ ಪ್ರಯಾಣಕ್ಕಿಂತ ಹೆಚ್ಚು ಕಷ್ಟಕರವಾದ, ಕ್ಲಿಷ್ಟಕರವಾದ ಬಯಸದೇ ಬಂದ ನೋವುಗಳನ್ನು ನುಂಗಿ, ಬೆಂದು ಸಾಗಿದ ನನ್ನ ಕುಟುಂಬದವರ ಪ್ರಯಾಣವನ್ನು ನೆನೆದರೆ ಈಗಲೂ ನನ್ನ ಮೈರೋಮಗಳು ನಿಮಿರಿದಂತಾಗಿ, ಕಣ್ಣಿನ ರೆಪ್ಪೆಗಳಂಚಿನಲ್ಲಿ ನೀರು ಚಿಮ್ಮುತ್ತದೆ. ಕೊನೆಗೂ ಎಲ್ಲವೂ ಸುಖಾಂತ್ಯ ಕಂಡಿದ್ದು ನಿಟ್ಟುಸಿರು ಬಿಡುವಂತಾಗಿದೆ.
      ಅಲೆಯುವುದು ನನ್ನ ಹುಟ್ಟು ಗುಣ. ನನ್ನನ್ನು ‘ಅಲೆಮಾರಿ’ ಎನ್ನುತ್ತಿದ್ದ ಸ್ನೇಹಿತರು ಈಗ ‘ಅಲೆಮಾರಿ ಕವಿ’ ಎನ್ನುತ್ತಿದ್ದಾರೆ. ಅವರು ಕೊಟ್ಟ ಈ ಕಿರು ಬಿರುದಿಗೆ ನ್ಯಾಯ ಕೊಡಬೇಕಾದರೆ, ನನ್ನ ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗಲೇ ಬೇಕಲ್ಲವೇ? ಈ ಅಲೆಮಾರಿಯ ಪ್ರಯಾಣವು ಮತ್ತೆ ನಮ್ಮೆಲ್ಲರನ್ನೂ ಭೇಟಿ ಮಾಡಿಸಲಿ ಎನ್ನುವುದೇ ನನ್ನ ಆಶಯ.
      ತಮ್ಮ ವಿಶ್ವಾಸಿ,
      ರಾದ

      ಪ್ರತಿಕ್ರಿಯೆ
  4. Adwaith

    Dear sir,
    I have read since from 1st episode. Thanks for sharing your experience and all the best for your future

    ಪ್ರತಿಕ್ರಿಯೆ
    • ರಾದ

      Thank you very much Adwaith. Thanks for being a wonderful reader of ‘Kaanada Kadalige…’. Will catch you with next writeups soon. Take care.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: