ಡಮರುಗ ಸದ್ದಿಗೆ ನಾಲ್ಕು ಹೆಜ್ಜೆ ಕುಣಿಯಬೇಕು ಎಂದೆನಿಸಿತು..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 29

    ರಾಮಗಿರಿಯ ವಿಸ್ಮಯ ನೋಟ     

avadhi-column-rahul bw-edited2                                                                      

ಸೊಳ್ಳೆಕಾಟದ ನಿದ್ರೆಯಿಂದ ಎಚ್ಚರವಾಗಿ ಬೆಳಿಗಿನ ವ್ಯಾಯಾಮ ಇತರೆ ಕಾರ್ಯಗಳು ಮುಗಿಸಿ, ತಿಂಡಿಗೆ ಕಾಯದೆ ಆಶ್ರಮದಿಂದ ಹೊರಟೆ. ರಂಗಾಪುರದ ರಂಗನಾಥಸ್ವಾಮಿ ದೇವಾಲಯ ಹಾಗೂ ದೇವಾಲಯದ ಮರದ ರಥವನ್ನು ನೋಡಿಕೊಂಡು ಮುಂದೆ ಹೊರಟೆ. ರಾಮಗಿರಿಯಲ್ಲಿ ನಿನ್ನೆ ಕಂಡಿದ್ದ ಬೆಟ್ಟವನ್ನು ಹತ್ತಲು ಮನಸ್ಸು ಹವಣಿಸುತ್ತಿತ್ತು.

ರಂಗಾಪುರದಿಂದ ನೇರ ರಾಮಗಿರಿಯ ಒಂದು ಹೋಟೆಲ್‍ಗೆ ನಡೆದು ಹೊಟ್ಟೆ ತುಂಬ ಇಡ್ಲಿ ಪೂರಿ, ಬಜ್ಜಿ ತಿಂದಿದ್ದಾಯಿತು. ಕರಿಸಿದ್ದೇಶ್ವರ ಬೆಟ್ಟ ಅಥವಾ ಮೇಲುದುರ್ಗಾ ಎಂದು ಕರೆಯುವ ಗುಡ್ಡದ ಕಡೆಗೆ ನಡೆದು ಗುಡ್ಡದ ಪಾದದಲ್ಲೇ ಸಿಕ್ಕ ಅರ್ಚಕರ ಮನೆಯಲ್ಲಿ ನನ್ನ ಬ್ಯಾಗ್ ಮತ್ತು ಪಾದರಕ್ಷೆಗಳನ್ನು ಇಟ್ಟು, ಗುಡ್ಡ ಹತ್ತಲು ಶುರುಮಾಡಿದೆ. 20-30 ಮೆಟ್ಟಿಲುಗಳಿಗೊಂದು ಪುಟ್ಟ ಗುಡಿಗಳು ಸಿಗುತ್ತಿದ್ದವು. ಅವೆಲ್ಲವನ್ನು ದಾಟಿ ಮೇಲೆ ತಲುಪಿದರೆ ದೊಡ್ಡ ಕರಿಸಿದ್ದೇಶ್ವರ ಗುಡಿ. ಪಕ್ಕದಲ್ಲೇ ಚಿಕ್ಕ ವೀರಭದ್ರೇಶ್ವರ ಗುಡಿ ಇತ್ತು.

avadhi- column- rahul- low res- editedಸುತ್ತ ಕಣ್ಣು ಹಾಯಿಸಿದರೆ ಪರಿಸರದ ನೋಟವು ನನಗೆ ಸ್ವರ್ಗ ತೋರಿಸಿತು. ಒಂದು ಕಡೆ ದೊಡ್ಡ ಕೆರೆ, ಮತ್ತೊಂದು ಕಡೆ ಹಾದು ಹೋಗುವ ರೈಲ್ವೆ ಹಳಿಗಳು. ಇನ್ನೊಂದು ಕಡೆ ತಿರುಗಿದರೆ ವಿನಾಶದ ಹಾದಿ ಹಿಡಿಯುತ್ತಿರುವ ಗುಡ್ಡಗಳು. ಇವೆಲ್ಲದರ ಸುತ್ತ ಅಚ್ಚ ಹಸಿರಿನ ಹೊಲಗಳ ಹಾಸು. ಗುಡಿಯ ಪಕ್ಕದ ದೊಡ್ಡ ಬಂಡೆಗಳ ಮೇಲೆ ಒಂದು ಕಲ್ಯಾಣಿಯ ಬಾವಿ, ಇನ್ನೂ ಒಂದು 40 ಅಡಿ ಬಂಡೆಯ ಮೇಲೆ, ಒಂದು ಸಣ್ಣ ಗುಡಿ ಕಾಣಿಸಿತು.

ಅಲ್ಲಿಗೆ ಹೋಗುವ ಆಸೆ ಚಿಗುರೊಡೆಯಿತು. ಧೈರ್ಯ ಮಾಡಿ ಒಂದು ಇಳಿಜಾರಿನ ಬಂಡೆಯನ್ನು ಹತ್ತಲು ಶುರುಮಾಡಿದೆ. ನಾಲ್ಕು ಹೆಜ್ಜೆ ಹತ್ತುವುದಕ್ಕು ಮುಂಚಯೇ ಭಯದಿಂದ ನನ್ನ ಕೈಕಾಲುಗಳು ನಡುಗುವುದಕ್ಕೆ ಶುರುವಾಯಿತು. ಆ ಯೋಚನೆಯನ್ನು ಅಲ್ಲಿಯೇ ಬಿಟ್ಟು ಹಿಂತಿರುಗೋಣವೆಂದುಕೊಂಡರೆ ಮನಸ್ಸು ಒಪ್ಪಲಿಲ್ಲ. ಅಲ್ಲೇ ಒಂದು ನಾಯಿ, ಅದೇ ಬಂಡೆಯನ್ನು ಹತ್ತಿ ಮೇಲಿನ ಗುಡಿ ಸೇರಿ ನನ್ನನ್ನು ಅಣುಕಿಸುತ್ತಿತ್ತು. ನನ್ನ ಧೈರ್ಯವಂತಿಕೆಯನ್ನು ಚುಚ್ಚಿದಂತಾಯಿತು. ನಾಯಿ ಹೋದ ದಾರಿಯಲ್ಲೇ ನಾನೂ ಕೂಡ ಜೋಪಾನವಾಗಿ ಏರಲು ಶುರುಮಾಡಿದೆ.

ಮೇಲಿನ ಗುಡಿ ತಲುಪಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಪಕ್ಕದಲ್ಲೇ ಕಾಣಿಸಿದ ಬಂಡೆಯ ಮೇಲೆ ಧ್ಯಾನ ಮಾಡುತ್ತಾ ಕುಳಿತು ಬಿಟ್ಟೆ. ಎಷ್ಟು ಹೊತ್ತು ಕುಳಿತೆನೋ ಕಾಣೆ. ಕಣ್ಣು ತೆರೆದು ನೋಡಿದರೆ, ನಾಯಿ ತನ್ನ ನಾಲಿಗೆಯನ್ನು ಹೊರಚಾಚಿ ನನ್ನನ್ನು ನೋಡುತ್ತಾ ಕುಳಿತಿತ್ತು. ಕೆಳಗೆ ದೇವಾಲಯದಲ್ಲಿ ಮಹಾಮಂಗಳಾರತಿಯ ಮತ್ತು ಡಮರುಗಗಳ ಸದ್ದು ಕೇಳಿಸಿತು. ಕೆಳಗೆ ಹೋಗಿ ಡಮರುಗ ತಮಟೆ ಸದ್ದಿಗೆ ನಾಲ್ಕು ಹೆಜ್ಜೆ ಹಾಕಿ ಕುಣಿಯಬೇಕು ಎಂದೆನಿಸಿತು. ಇನ್ನೂ ಆರತಿ ಪೂಜೆಗಳು ನಡೆಯುತ್ತಿತ್ತು. ಆದರೆ ನಾನು ಅಲ್ಲಿ ನಿಲ್ಲದೆ, ಗುಡ್ಡವನ್ನು ಇಳಿದು ಬಾಪೂಜಿ ಸರ್ಕಾರಿ ಶಾಲೆಯ ಆವರಣವನ್ನು ತಲುಪಿದೆ.

ಶಾಲೆಯ ಮುಖ್ಯಸ್ಥರಿಂದ ಉಪನ್ಯಾಸಕ್ಕೆ ಅನುಮತಿ ದೊರೆಯಿತು. ಆದರೆ ಶಾಲೆಯ ವಾತಾವರಣ ಮತ್ತು ಮಕ್ಕಳನ್ನು ನೋಡಿದರೆ ನನ್ನ ಉಪನ್ಯಾಸವನ್ನು ಕೇಳುತ್ತಾರೋ ಎಂಬ ಸಂಶಯ ಮೂಡಿತು. ಆದರೆ ನನ್ನ ಸಂಶಯವನ್ನು ದೂರ ಮಾಡಿ ಶಾಲೆಯ ಮಕ್ಕಳು ಒಳ್ಳೆಯ ರೀತಿಯಲ್ಲಿ ಉಪನ್ಯಾಸವನ್ನು ಕೇಳಿ ತಿಳಿದುಕೊಂಡರು. ಅಲ್ಲಿಂದ ಹೊರಟು ಊರಿನ ಹೊರಗಿದ್ದ ಕರೀಸಿದ್ದೇಶ್ವರ ಶಾಲೆಯನ್ನು ತಲುಪಿದೆ.

ಮುಖ್ಯೋಪಾಧ್ಯಾಯರ ಅನುಪಸ್ಥಿತಿಯಲ್ಲಿ ನನ್ನ ವಿಷಯ ತಿಳಿದು ಶಾಲೆಯ ಯುವಶಿಕ್ಷಕರಿಬ್ಬರು ಬಹಳ ಲವಲವಿಕೆಯಿಂದ ಓಡಾಡಿ ಶಾಲೆಯ ಮಕ್ಕಳನ್ನು ಎರಡು ಮರದ ನೆರಳಿನಲ್ಲಿ ಕುಳಿಸಿ ನನ್ನ ಉಪನ್ಯಾಸಕ್ಕೆ ಅನುವುಮಾಡಿಕೊಟ್ಟರು. ನನ್ನ ಉಪನ್ಯಾಸದಿಂದ ಪ್ರೇರಣೆಗೊಂಡು ತಕ್ಷಣವೇ ಶಾಲೆಯ ಆವರಣದಲ್ಲಿ ಒಂದು ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಪ್ಲಾಸ್ಟಿಕ್ ಪೇಪರ್ ತ್ಯಾಜ್ಯ ಅಂದರೆ ‘ಶತ್ರು ಕಸ’ ವೆಂದೂ, ಮರಗಿಡಗಳಿಂದ ಉದುರುವ ಎಲೆ, ಕಡ್ಡಿಯಿಂದ ಕೂಡಿದ ಇತರ ನೈಸರ್ಗಿಕ ತ್ಯಾಜ್ಯವನ್ನು ‘ಮಿತ್ರ ಕಸ’ ವೆಂದೂ ತಿಳುವಳಿಕೆ ಹೇಳಿ ಕೆಂಚಾಪುರದ ಕಡೆಗೆ ನನ್ನ ನಡಿಗೆ ಬೆಳೆಸಿದೆ. ಶಾಲೆಯ ವಿದ್ಯಾರ್ಥಿಗಳು ತುಸು ದೂರದ ತನಕ ನನ್ನ ಜೊತೆ ಹೆಜ್ಜೆ ಹಾಕಿ ಬೀಳ್ಕೊಟ್ಟರು.

ಕೆಂಚಾಪುರವನ್ನು ತಲುಪಿದಾಗ ಊಟದ ಸಮಯವಾಗಿತ್ತು. ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲೇ ನನ್ನ ಊಟ ನೆರವೇರಿತು. ಊಟದ ನಂತರ ವಿದ್ಯಾರ್ಥಿನೀಯರೇ ಜಾಸ್ತಿಯಿದ್ದದ್ದರಿಂದ, ಉಪನ್ಯಾಸವೂ ಸುಸೂತ್ರವಾಗಿ ನೆರವೇರಿತು. ಆ ನಂತರ ಮುಂದಿನ ಶಾಲೆಯ ಬಗ್ಗೆ ವಿಚಾರಿಸಿದಾಗ ಕೆಂಚಾಪುರವೇ ಚಿತ್ರದುರ್ಗ ಜಿಲ್ಲೆಯ ಗಡಿ ಊರಾಗಿದ್ದು ಅಲ್ಲಿಂದ ಸುಮಾರು ಇಪ್ಪತ್ತು ಮೈಲುಗಳ ದೂರವಿದ್ದ ಚಿಕ್ಕಮಗಳೂರು ಜಿಲ್ಲೆಯ ಶಿವನಿ ಎಂಬ ಊರಿನ ತನಕ ಯಾವುದೇ ಪ್ರೌಢಶಾಲೆ ಸಿಗುವುದಿಲ್ಲ ಎಂದು ಹೇಳಿದರು.

ಅಷ್ಟು ದೂರ ಸುಮ್ಮನೆ ವ್ಯರ್ಥವಾಗಿ ನಡೆಯುವುದು ನನಗೆ ಸರಿಯೆನಿಸಲಿಲ್ಲ. ಸುಮಾರು 3:30ಕ್ಕೆ ಕೆಂಚಾಪುರದಿಂದ ಶಿವನಿಗೆ ಹೋಗುತ್ತಿದ್ದ ಬಸ್ಸನ್ನು ಹಿಡಿದು ಶಿವನಿ ತಲುಪಿದೆ. ಒಂದು ತಿಂಗಳಲ್ಲಿ ನಾನು ಏರಿದ ಮೊದಲ ಬಸ್ಸು ಇದು. ಅಲ್ಲಿಂದ ಚಿಕ್ಕಮಗಳೂರು-ಶಿವಮೊಗ್ಗದ ಮಲೆನಾಡಿನ ವಾತಾವರಣ ಶುರುವಾಯಿತು. ಹೆಜ್ಜೆ ಹೆಜ್ಜೆಗೂ ಮೋಡ, ಮಳೆ, ಗುಡ್ಡ, ಬೆಟ್ಟಗಳ ಸಾಲು. ಶಿವನಿಯ ಶಾಲೆಯ ಆವರಣದಲ್ಲಿ ಹೋಗಿ ನೋಡಿದರೆ, ಆ ಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್ಲರೂ ಸಂಪೂರ್ಣವಾಗಿ ಮುಳುಗಿ ಹೋಗಿದ್ದರು.

bae739620bd882cbc953efb8997c7a43ಆವರಣದ ತುಂಬೆಲ್ಲಾ ನಾಲ್ಕೈದು ಊರಿನ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರೇ ತುಂಬಿದ್ದರು. ಹುಡುಗಿಯರನ್ನು ನೋಡಲು ಬಹಳ ಸ್ಟೈಲಾಗಿ ಬಂದಿದ್ದ ಗ್ರಾಮಗಳ ಪುಡಾರಿಗಳು ಅಲ್ಲಲ್ಲಿ ಕಂಡರು. ಕ್ರೀಡೆಗಳನ್ನು ಆಡಿಸಲು ಹೆಣಗಾಡುತ್ತಿದ್ದ ಕ್ರೀಡಾ ಶಿಕ್ಷಕರ ಪಾಡು ಹೇಳತೀರದು. ಕೆಲವು ಸಮಯ ನಾನು ಕೂಡ ಕೋಕೋ, ಕಬ್ಬಡಿ, ವಾಲಿಬಾಲ್ ಮತ್ತು ಓಟದ ಸ್ಪರ್ಧೆಗಳನ್ನು ನೋಡಿ ಖುಷಿಪಟ್ಟೆ. ಅಲ್ಲೇ ಸಿಕ್ಕ ಶಿಕ್ಷಕರನ್ನು ಹಿಡಿದು ವಿಚಾರಿಸಿದಾಗ ಗೊತ್ತಾಯಿತು ಎಲ್ಲರೂ ಕ್ರೀಡಾಕೂಟದಲ್ಲಿ ಭಾಗಿಯಾಗಿರುವುದರಿಂದ ಅಜ್ಜಂಪುರದ ತನಕ ನನಗೆ ಇನ್ನೆರಡು ದಿನ ಯಾವ ಶಾಲೆಗಳು ಸಿಗುವುದಿಲ್ಲ ಎಂದು.

ಸರಿ, ಇನ್ನೇನು ಮಾಡುವುದು. ಕೆಲಹೊತ್ತು ಆಟಗಳನ್ನು ವೀಕ್ಷಿಸಿ, ಒಂದು ಬಸ್ಸು ಹಿಡಿದುಕೊಂಡು ಅಜ್ಜಂಪುರ ತಲುಪಿದೆ. ಕೆಂಚಾಪುರ-ಶಿವನಿ-ಅಜ್ಜಂಪುರದ ರಸ್ತೆಯ ಕಥೆಯಂತೂ ಹೇಳತೀರದು. ಮೂವತ್ತು ಮೈಲುಗಳ ಪಯಣ, ನನ್ನ ಬೆನ್ನಿಗೆ ಉರಿಕಟ್ಟಿದಷ್ಟು ನೋವು ತಂದಿತು.

ಅಜ್ಜಂಪುರ ತಲುಪಿ ಶಿವಾನಂದಾಶ್ರಮದ ಕಡೆಗೆ ಹೊರಟೆ. ಶಿವಾನಂದಾಶ್ರಮ ಒಂದು ಹಾಳು ಬಿದ್ದ ಕೊಂಪೆಯಷ್ಡೆ. ಕೊಳೆತು ನಾರುತ್ತಿದ್ದ ಕಲ್ಯಾಣಿ. ದುರಸ್ತಿ ಕಾಣದೆ ವರ್ಷಾನುಗಟ್ಟಲೆ ಕಳೆದಿರುವ ಕಟ್ಟಡದ ಸಮುಚ್ಚಯ. ಕುಡಿಯಲು ಹಾಗೂ ಸ್ನಾನಕ್ಕೆ ನೀರಿನ ಕೊರತೆ. ವಾಪಸ್ಸು ಬಂದು ಗ್ರಾ.ಪಂ ಪ್ರವಾಸಿ ಮಂದಿರದಲ್ಲಿ ವಿಚಾರಿಸಿದೆ. ಒಂದು ಕೋಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ, ಮತ್ತೊಂದರಲ್ಲಿ ಶಾಲೆಯ ಶಿಕ್ಷಕರು ಕಾಯಂ ಆಗಿ ಉಳಿದುಕೊಂಡಿದ್ದಾರೆಂದು ತಿಳಿಯಿತು. ಇನ್ನು ಪ್ರವಾಸಿಗರಿಗೆ ಅಲ್ಲಿ ನೆಲೆ ಎಲ್ಲಿಂದ ಸಿಗಬೇಕು. ಹಾಗೇ ವಿಚಾರಿಸಿಕೊಂಡು ಊರಿನಲ್ಲಿದ್ದ ಒಂದೇ ಒಂದು ಲಾಡ್ಜ್ ನಲ್ಲಿ ಕೋಣೆಗೆ 250 ರೂಪಾಯಿ ಮಾತನಾಡಿ ಗಿಟ್ಟಿಸಿಕೊಂಡು, ಆಯಾಸಗೊಂಡಿದ್ದ ದೇಹಕ್ಕೆ ವಿಶ್ರಾಂತಿ ಕೊಟ್ಟೆ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 265 ಮೈಲುಗಳು]

 

‍ಲೇಖಕರು admin

July 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Pradeep K S

    Ramagiri is very nice place… I have seen this many time in my train journey. I m feeling like visiting it once.

    ಪ್ರತಿಕ್ರಿಯೆ
    • ರಾದ

      ಹೌದು ಪದ್ದಿ. ರಾಮಗಿರಿ ಒಮ್ಮೆ ಬೇಟಿ ಕೊಡಲು ಯೋಗ್ಯವಾದ ಪ್ರೇಕ್ಷಣೀಯ ಸ್ಥಳ. ನಾವಿಬ್ಬರೇ ಒಮ್ಮೆ ಬೇಟಿ ಕೊಡೋಣ. ಏನಂತೀಯ?
      ಇಲ್ಲಿಯ ತನಕ ನೀನು ಅಂಕಣವನ್ನು ಓದಿ ಮೆಚ್ಚಿ, ಹರಿಬಿಡುತ್ತಿರುವ ಪ್ರಶಂಸೆ, ಟೀಕೆ-ಟಿಪ್ಪಣಿಗಳನ್ನು ಕೊಟ್ಟ ರೀತಿಗೆ ನಾನು ಮಾರುಹೋಗಿದ್ದೇನೆ. ನನ್ನ ಎಲ್ಲಾ ಕೆಲಸಗಳಿಗೂ, ಕನಸುಗಳಿಗೂ ನೀನು ಕೊಟ್ಟ ಉತ್ತೇಜನಕ್ಕೆ ನಾನು ಅಭಾರಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: