ಚಿಕ್ ಚಿಕ್ ಸಂಗತಿ: Stripes on 500 rupee note

ಜಿ ಎನ್ ಮೋಹನ್ 

ಮೊನ್ನೆ ಹೋಗಿ ಎ ಟಿ ಎಂ ನ ಬಾಯಿಗೆ ನನ್ನ ಕಾರ್ಡ್ ತುರುಕಿದೆ
ನಿನಗೇ ಕಾಯುತ್ತಾ ಕುಳಿತಿದ್ದೆ ಎನ್ನುವಂತೆ ಆ ಎ ಟಿ ಎಂ ನೋಟುಗಳನ್ನು ಹೊರಕ್ಕೆ ಎಸೆಯಿತು.
ಎಣಿಸುತ್ತಾ ಇದ್ದೆ
ಯಾಕೋ ಬೆರಳು ಚಕ್ ಎಂದು ನಿಂತಿತು. ಏನೋ ವ್ಯತ್ಯಾಸ ಇದೆ ಎನ್ನುವುದನ್ನು ನನ್ನ ಮೂಗಿರಲಿ ಬೆರಳೂ ಗುರುತಿಸುವುದನ್ನು ಕಲಿತಿದೆ
ಮತ್ತೆ ಎ ಟಿ ಎಂ ಕೋಣೆ ಹೊಕ್ಕೆ. ಎಲ್ಲಾ ನೋಟುಗಳನ್ನೂ ಒಂದೊಂದೇ ನೋಡುತ್ತಾ ಹೋದೆ

braille1ಹೌದು ಅಲ್ಲಿ ವ್ಯತ್ಯಾಸ ಇತ್ತು
೫೦೦ ರ ನೋಟುಗಳ ಪೈಕಿ ಒಂದಿಷ್ಟು ನೋಟು ಪಕ್ಕದಲ್ಲಿ ಗೀಟುಗಳನ್ನು ಎಳೆದುಕೊಂಡು ಕುಳಿತಿತ್ತು
ಕೆಲವಕ್ಕೆ ಆ ಗೀಟು ಇರಲಿಲ್ಲ. ಪೇಪರ್ ನಲ್ಲಿ ಈಗ ಎ ಟಿ ಎಂ ನಲ್ಲೂ ಖೋಟಾ ನೋಟುಗಳಿರುತ್ತದೆ ಅಂತ ಓದಿದ್ದವನಿಗೆ ಗೊಂದಲ ಶುರುವಾಯ್ತು
ಕೆಲವರು ಅದೇನೋ ಆಕಾಶಕ್ಕೆ ನೋಟಿಡಿದು ಇದು ಸಾಚಾ, ಇದು ಖೋಟಾ ಅನ್ನುತ್ತಾರೆ ನನಗೋ ಆ ಬ್ರಹ್ಮ ವಿದ್ಯೆ ಇದುವರೆಗೂ ಬಂದಿಲ್ಲ
ಈ ಥರಾ ಆದಾಗಲೆಲ್ಲ ಆಕಾಶ ನೋಡುತ್ತಾ ಇರೋದು ಬಿಟ್ಟು ಇನ್ನೇನೂ ಗೊತ್ತಿಲ್ಲ

ಸರಿ ಮನೆಗೆ ಬಂದವನೇ ಗೂಗಲ್ ಮೊರೆ ಹೊಕ್ಕೆ
stripes on 500 rupee note ಅಂತ ಟೈಪಿಸಿ ಎಂಟರ್ ಒತ್ತಿದೆ

ಒಂದು ಕ್ಷಣ ಕಣ್ಣಿಗೆ ಕತ್ತಲು ಕವಿದಂತಾಯಿತು
ಹೌದು ಕತ್ತಲು. ಆ ಕತ್ತಲಿನಲ್ಲೇ ನಾನು ಲೋಕ ಕಾಣುತ್ತದಾ ಎಂದು ಹುಡುಕಲು ಶುರು ಮಾಡಿದೆ

ಆ ಹಕ್ಕಿ ಕೂಗು ಕೇಳುತ್ತಿದೆ ಆದರೆ ಕಾಣುತ್ತಿಲ್ಲ, ಆ ಬಸ್ ನ ಹೊಗೆ ಮೂಗಿಗೆ ಬಡಿಯುತ್ತಿದೆ ಆದರೆ ಕಾಣಿಸುತ್ತಿಲ್ಲ
ಆಕೆಯ ನಡಿಗೆಯ ಮೃದು ಸದ್ದೂ ಅನುಭವವಾಗುತ್ತಿದೆ ಆದರೆ ಆಕೆ ಕಾಣುತ್ತಿಲ್ಲ
ಕೈನಲ್ಲಿ ಹೌದು ನೋಟುಗಳಿವೆ, ಆದರೆ ಅದು ಎಷ್ಟರದ್ದು ಎಂದು ಗೊತ್ತಾಗುತ್ತಿಲ್ಲ

ಹಾಗೆ ಗೊತ್ತಾಗುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಆರ್ ಬಿ ಐ ನಿರ್ಧರಿಸಿದ್ದು; ಕಣ್ಣು ಕಾಣದವರಿಗೂ ನೋಟು ಎಷ್ಟರದ್ದು ಎಂದು ಗೊತ್ತಾಗಬೇಕು
ಆಗ ೫೦೦ ಹಾಗೂ ೧೦೦೦ ರೂಪಾಯಿಗಳ ನೋಟಿನ ಮೇಲೆ ಆರ್ ಬಿ ಐ ಮುಟ್ಟಿದರೆ ಗೊತ್ತಾಗುವ ಐದು ಹಾಗೂ ಆರು ಗೆರೆಗಳನ್ನು ಎಳೆಯಿತು
ಒಂದು ಪುಟ್ಟ ಕೆಲಸ ಆದರೆ ಎಷ್ಟು ದೊಡ್ಡ ನಿಟ್ಟುಸಿರು

ತಕ್ಷಣ ನನಗೆ ನನ್ನ ಬಾಲ್ಯದಲ್ಲೇ ಕುಮಾರವ್ಯಾಸ ಭಾರತವನ್ನು ಕಿವಿಯ ಮೂಲಕ ಮೆದುಳಿಗೆ ತಲುಪಿಸಿದ, ಇನ್ನೊಬ್ಬರ ಹೆಗಲ ಸಹಾಯವಿಲ್ಲದೆ ಒಂದು ಹೆಜ್ಜೆ ಮುಂದಿಡಲೂ ಆಗದಿದ್ದ ‘ಕುಲ್ದು ರಾಮಣ್ಣ’ ನೆನಪಾದರು
ನನ್ನ ಬಾಲ್ಯಕ್ಕೆ ಕಥೆಗಳ ರಾಶಿಯನ್ನೇ ಸುರಿದ, ಇದ್ದಕ್ಕಿದ್ದಂತೆ ಒಂದು ದಿನ ಕುರುಡರಾಗಿ ಹೋದ ರಾಮಯ್ಯನವರು ನೆನಪಾದರು

ಒಂದು ದಿನ ಜೋಶ್ ನಲ್ಲಿದ್ದೆ. ಭಾನುವಾರ ಗೆಳತಿಯ ಜೊತೆ ಸುತ್ತಾಟಕ್ಕೆ ರೆಕ್ಕೆ ಕಟ್ಟುತ್ತಿದ್ದೆ
ಗೆಳೆಯ ಪ್ರವೀಣ್ ಭಾರ್ಗವ್ ಫೋನ್ ಮಾಡಿದ ಬನ್ನೇರು ಘಟ್ಟಕ್ಕೆ ಬಾರೋ ಅಂತ
ಆಹಾ.. ಎಂದುಕೊಂಡು ಅಲ್ಲಿಗೆ ತಲುಪಿಕೊಂಡದ್ದಾಯಿತು
ಅಲ್ಲಿ ಕಾಲಿಟ್ಟವನು ಒಂದು ಕ್ಷಣ ಹಾಗೇ ನಿಂತೆ

braille2ಅಲ್ಲಿದ್ದದ್ದು ಕತ್ತಲ ನಂಬಿ ಬದುಕುತ್ತಿದ್ದವರ ಲೋಕ .. ಪ್ರವೀಣ್ ಅವರಿಗೆ ಪ್ರಕೃತಿ ಶಿಬಿರ ನಡೆಸುತ್ತಿದ್ದ
ಅದಕ್ಕೆ ನಾನು ಶಾಕ್ ಆದದ್ದು- ಕಣ್ಣೇ ಇಲ್ಲದವರಿಗೆ ಹಸಿರ ಲೋಕವನ್ನು ಕಾಣಿಸುತ್ತಿದ್ದ

ಒಂದು ನವಿಲು. ಅದನ್ನು ಎದೆಗೊತ್ತಿಕೊಂಡ ಒಬ್ಬನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯಲು ಆರಂಭಿಸಿತು.
ಯಾಕೋ ಎಂದೆ – ನವಿಲಿನ ಬಿಸಿ ನನ್ನ ಎದೆಯ ಬಿಸಿಯ ಜೊತೆ ಮಾತನಾಡುತ್ತಿದೆ ಎಂದ
ಅಷ್ಟಕ್ಕೇ ನಿಲ್ಲಿಸಲಿಲ್ಲ- ಇಷ್ಟು ದಿನದ ಬದುಕಿನಲ್ಲಿ ನನಗೆ ಇಷ್ಟು ಬೆಚ್ಚನೆ ಅನುಭವ ನೀಡಿದವರು ಇನ್ನೊಬ್ಬರಿಲ್ಲ ಎಂದ

ಇನ್ನೊಬ್ಬ ಹುಲಿಯ ಹೆಜ್ಜೆ ಗುರುತುಗಳನ್ನು ಹುಡುಕುತ್ತಿದ್ದ. ಅದರ ತೂಕ ಎಷ್ಟು ಎನ್ನುವುದನ್ನು ಅದು ಹೆಜ್ಜೆ ಊರಿದ ರೀತಿಯಲ್ಲೇ ಕಂಡುಕೊಂಡುಬಿಟ್ಟಿದ್ದ
ಇನ್ನೂ ಒಬ್ಬನ ಎದೆ ಲಬ್ ಡಬ್ ಬಡಿದುಕೊಳ್ಳುತ್ತಿತ್ತು ಎಲ್ಲರಿಗೂ ಕೇಳುವಂತೆ. ಆತನ ಮುಖವಂತೂ ಬೆರಗಿನ ತವರು ಮನೆಯಾಗಿ ಹೋಗಿತ್ತು
ಆತ ಮೊದಲ ಬಾರಿಗೆ ಜಂಪ್ ಮಾಡಿದ್ದ. ಸಾರ್ ನಾನು ನೆಲದಲ್ಲಿ ಮಾತ್ರ ಓಡಾಡಬೇಕು, ಎತ್ತರ ಎನ್ನುವುದೇ ನನಗೆ ಗೊತ್ತಿರಲಿಲ್ಲ ಎಂದ ಅವನ ದನಿ ಆಗತಾನೆ ವಸಂತಕ್ಕೆ ಕಾಲಿಡುತ್ತಿದ್ದ ತರುಣನಂತಿತ್ತು
ಪ್ರವೀಣ್ ಅವನಿಗೆ ಮೊದಲ ಬಾರಿಗೆ ಜಿಗಿಯುವುದರ ಆಟ ಆಡಿಸಿದ್ದ

500 noteಆ ಅನಂತರ ನಾನು ಕೀನೋ ಥಿಯೇಟರ್ ಬಳಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದೆ
ಕೀನೋ ಥಿಯೇಟರ್ನಿಂದ ರೈಲ್ವೆ ಹಳಿಗಳ ಬಳಿ ಇರುವ ಸ್ಲಮ್ ಗೆ ಹೋಗುವ ದಾರಿಯಿದೆ. ಅಲ್ಲಿ ಎಡಕ್ಕೆ ಇರುವ ಕಟ್ಟಡ ನನ್ನದಾಗಿ ಹೋಗಿತ್ತು.

ಏಕೆಂದರೆ ಅಲ್ಲಿ ಕುವೆಂಪು ಕೃತಿಗಳನ್ನು ಬ್ರೇಲ್ ಲಿಪಿಗೆ ಅಳವಡಿಸುತ್ತಿದ್ದರು
ಹಗಲೂ ರಾತ್ರಿ ಕುವೆಂಪು ಅಕ್ಷರಗಳ ಬದಲು ಚುಕ್ಕಿಗಳಾಗಿ ಬದಲಾಗುತ್ತಿದ್ದರು.
ಕುವೆಂಪು ಕಂಡ ಆ ಮಲೆನಾಡು, ಗುತ್ತಿ ಐತ ಪಿಂಚಲು, ಹುಲಿಕಲ್ ನೆತ್ತಿ, ಜಲಗಾರ ಹೀಗೆ ..
ಎಲ್ಲರೂ ಕತ್ತಲನ್ನೇ ತಮ್ಮೆದುರು ಹರಡಿಕೊಂಡಿದ್ದವರ ಲೋಕದಲ್ಲಿ ನಡೆಯಲಾರಂಭಿಸಿದ್ದರು

ನಾನು ಅವರ ಜೊತೆ ಹೆಜ್ಜೆ ಹಾಕುತ್ತಾ, ಅವರ ಲೈಬ್ರರಿಯಲ್ಲಿರುವ ಕಾದಂಬರಿ ಯಾವುದು, ಕಥೆ ಯಾವುದು ಎನ್ನುವುದನ್ನು ಗೊತ್ತು ಮಾಡಿಕೊಳ್ಳುತ್ತಾ..
ಅವರ ‘ವೈಟ್ ಕೇನ್’ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದೆ.

ಐದು ಗೆರೆ, ಐದೇ ಐದು ಗೆರೆ ನನ್ನ ಲೋಕವನ್ನು ಅಲುಗಾಡಿಸಿಬಿಟ್ಟಿತ್ತು

‍ಲೇಖಕರು Admin

July 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. shama nandibetta

    My Goodness. Only you can write like this sir. Ellindellige bhavaloka jigiyuthe. Estu kathegalu manasina pettigeya olage !! Wah

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: