ಚಿಕ್ ಚಿಕ್ ಸಂಗತಿ: ನಿಮ್ಮ ತುಟಿಗಳಲ್ಲಿ..

ಅಮ್ಮ ಮನೆಗೆ ಬೇಕಾದ ತಿಂಗಳ ದಿನಸಿಯ ಪಟ್ಟಿ ಬರೆಸುತ್ತಿದ್ದರು
ಅಕ್ಕಿ 25 ಕೆ ಜಿ
ರಾಗಿ 5 ಕೆ ಜಿ
ಗೋದಿ ಹಿಟ್ಟು 5 ಕೆ ಜಿ

ಎಲ್ಲಾ ದಾಟಿಕೊಂಡು..
ಧನಿಯ 1 ಕೆ ಜಿ
ಕಡಲೆಬೇಳೆ 1 ಕೆ ಜಿ
ಹೆಸರುಕಾಳು 1 ಕೆ ಜಿ

ಎಲ್ಲಾ ಮುಗಿಸಿ ಅಮ್ಮ ‘ಒಣ ಮೆಣಸಿನಕಾಯಿ’ ಬರಿ ಅಂದರು
ಬರೆದೆ
ಗುಂಟೂರು ಮೆಣಸಿನಕಾಯಿ ಅರ್ಧ ಕೆ ಜಿ
ಬ್ಯಾಡಗಿ ಮೆಣಸಿನಕಾಯಿ ಅರ್ಧ ಕೆ ಜಿ
ಅಂತ ಡಿಕ್ಟೇಟ್ ಮಾಡಲು ಶುರು ಮಾಡಿದರು

ಪಟ್ಟಿ ಬರೆಯುತ್ತಾ ಇದ್ದ ನಾನು ‘ಎಲ್ಲಾ ದಿನಸಿಗೂ ಒಂದೇ ವೆರೈಟಿ ಮೆಣಸಿನಕಾಯಿಗೇಕೆ ಎರಡು?’ ಎಂದೆ

ಅಮ್ಮ ‘ಗುಂಟೂರು ಮೆಣಸಿನಕಾಯಿ ಖಾರ ಕೊಡುತ್ತೆ

ಬ್ಯಾಡಗಿ ಮೆಣಸಿನಕಾಯಿ ಬಣ್ಣ ಕೊಡುತ್ತೆ’ ಅಂದರು

 

ಪಟ್ಟಿ ಬರೆಯುತ್ತಿದ್ದ ನನ್ನ ಕೈ ಅಲ್ಲಿಯೇ ನಿಂತಿತು

ನೆನಪುಗಳ ಸರಮಾಲೆ

ಅದು ನಾನು  ಮಂಗಳೂರಿನಲ್ಲಿದ್ದ ಕಾಲ

ಹೌದು, ಮಂಗಳೂರಿನಿಂದ ಹೊರಟು ನಾನು ಇಡೀ ಕರ್ನಾಟಕ ಸುತ್ತುತ್ತಾ ಹಾವೇರಿಗೆ ತಲುಪಿಕೊಂಡಿದ್ದೆ.
ಚುನಾವಣೆ ಘೋಷಣೆಯಾಗಿತ್ತು. ಎಲ್ಲೆಡೆ ಯುದ್ಧೋನ್ಮಾದ .
ನಾನು ಪ್ರತೀ ಜಿಲ್ಲೆಗೂ ಹೋಗಿ ಅಲ್ಲಿನ ಉದ್ಯಮ, ರೈತರನ್ನು ಗಮನದಲ್ಲಿಟ್ಟುಕೊಂಡು ಅವರ ಬದುಕಿಗೆ ಚುನಾವಣೆ ಏನು ಮಾಡಿದೆ ಎಂಬುದಕ್ಕೆ ಉತ್ತರ ಹುಡುಕುತ್ತಿದ್ದೆ

ಹಾಗೆ ಹಾವೇರಿಗೆ ಬಂದ ನಾನು ಮೊದಲು ಹೆಜ್ಜೆ ಇಟ್ಟಿದ್ದೇ – ಬ್ಯಾಡಗಿಗೆ
ಬ್ಯಾಡಗಿ ಎಂದರೆ ಸಾಕು ಮೆಣಸಿನಕಾಯಿ ಎಂದು ನಿದ್ದೆಯಲ್ಲಿ ಅಲುಗಾಡಿಸಿದರೂ ಸಹಾ ಹೇಳಬಹುದು

ಬ್ಯಾಡಗಿಗೂ ಮೆಣಸಿನಕಾಯಿಗೂ ಅಷ್ಟು ನಂಟು

ಇಡೀ ನನ್ನ ಟೀಮ್ ಬ್ಯಾಡಗಿಯ ದಿಕ್ಕಿನತ್ತ ಮುಖ ಮಾಡಿತು
ಅಲ್ಲಿಯವರೆಗೂ ನನಗೆ ಇದ್ದದ್ದು ಸಮುದ್ರದ ಕಲ್ಪನೆ ಮಾತ್ರ.
ಇನ್ನೂ ಮಾರು ದೂರ ಇರುವಾಗಲೇ ಸಮುದ್ರ ಬಿಚ್ಚಿಕೊಂಡು ಎಂತಹವರನ್ನೂ ಬೆರಗಾಗಿಸುತ್ತದೆ
‘ಓ ಸಮುದ್ರಾ..’ ಎಂದು ಎಷ್ಟು ಉದ್ಘಾರಗಳನ್ನು ನಾನು ಕೇಳಿಲ್ಲ!.

ನನಗೂ ಈಗ ಹಾಗೇ ಆಗಿ ಹೋಯಿತು
ಬ್ಯಾಡಗಿಯ ಬರಡು ನೆಲದಲ್ಲಿ ಸಮುದ್ರ!
ಆದರೆ ಒಂದೇ ವ್ಯತ್ಯಾಸ.. ನಾನು ನೋಡುತ್ತಿದ್ದ ಸಮುದ್ರದ ಬಣ್ಣ ಮಾತ್ರ ಬೇರೆ
ಕೆಂಪು, ಎಲ್ಲೆಲ್ಲೂ ಕೆಂಪು
ಅದು ಮೆಣಸಿನಕಾಯಿಯ ಸಮುದ್ರ,

ಹಾಗೆ ಇಡೀ ಊರಿಗೆ ಊರೇ ಕೆಂಪು ಬಣ್ಣ ಬಳಿದುಕೊಂಡದ್ದನ್ನು ನೋಡಿದ್ದು ನನ್ನ ಜೀವಮಾನದಲ್ಲಿ ಇದೇ ಮೊದಲು.
ಊರಿನ ಎಲ್ಲೆಡೆಯೂ ಮೆಣಸಿನಕಾಯಿಯನ್ನು ಒಣಗಿಹಾಕಿದ್ದರು
ನಾನು ಊರಿನ ಒಳಗೆ ಹೆಜ್ಜೆ ಇಡುತ್ತಾ ಹೋದಂತೆ ಊರಿಗೆ ಊರೇ ಮೆಣಸಿನಕಾಯಿಯನ್ನು ಮಾತ್ರವೇ ಉಸಿರಾಡುತ್ತಿದ್ದುದನ್ನು ಕಂಡೆ
ಹೆಂಗಸರು ಆ ವಿಶಾಲ ಮೆಣಸಿನಕಾಯಿ ಸಮುದ್ರದಲ್ಲಿ ಚುಕ್ಕಿಗಳೇನೋ ಎಂಬಂತೆ ಕಾಣುತ್ತಿದ್ದರು
ಎರಡೂ ಕೈನಲ್ಲಿ ಪಟಪಟನೆ ತೊಟ್ಟು ಬಿಡಿಸುತ್ತಾ ಇದ್ದರು.
ಇನ್ನೊಂದೆಡೆ ಮೆಣಸಿನಕಾಯಿ ಹೊಲದಲ್ಲಿ ಮೆಣಸಿನಕಾಯಿ ಕೀಳುತ್ತಿದ್ದರು, ಇನ್ನೊಂದೆಡೆ ದಲಾಲಿಗಳ ಅಬ್ಬರ
ಮೆಣಸಿನಕಾಯಿ ಹೊತ್ತ ಟ್ರಾಕ್ಟರ್ ಗಳು, ಮೆಣಸಿನಕಾಯಿ ಮೂಟೆ ಹೊರುತ್ತಿದ್ದವರು..

ಆ ಘಾಟಿನ ಲೋಕದಲ್ಲಿ ಉಸಿರುಬಿಡಲು ಕಷ್ಟಪಡುತ್ತಾ ನಾನು ಒಂದೊಂದೇ ಹೆಜ್ಜೆ ಇಡುತ್ತಿದ್ದೆ.
ಊರಲ್ಲಿ ಹತ್ತಾರು ರೀತಿಯ ಕೆಲಸ ಮಾಡುತ್ತಿದ್ದವರನ್ನು ಮಾತನಾಡಿಸುತ್ತಾ ಹೋದೆ
ಹೀಗೆ ಬಂದ ಮೆಣಸಿನಕಾಯಿ ಹಾಗೆ ಖಾಲಿ ಆಗುತ್ತಿತ್ತು
ಅರೆ! ಬ್ಯಾಡಗಿ ಎಂದರೆ ಎಂತ ಡಿಮ್ಯಾಂಡ್ ಎಂಬ ಕೋಡು ಮೂಡಿತು
‘ನಿಮ್ಮ ವಹಿವಾಟು ನೋಡಿದರೆ ಇಡೀ ದೇಶದ ಎಲ್ಲರೂ ಬ್ಯಾಡಗಿ ಮೆಣಸಿನಕಾಯಿಯನ್ನೇ ತಿನ್ನುತ್ತಿರಬೇಕು’ ಎಂದೆ
ನನ್ನ ಜೊತೆ ಮಾತನಾಡುತ್ತಿದ್ದವರು ನನ್ನ ನೋಡಿ ನಕ್ಕರು

ನಾನೋ ಒಂದು ಕ್ಷಣ ಏನೂ ಅರ್ಥ ಆಗದೆ ಅವರ ಮುಖವನ್ನೇ ನೋಡಿದೆ

ಅವರು ‘ಬ್ಯಾಡಗಿ ಮೆಣಸಿನಕಾಯಿ ತಿನ್ನೋದಕ್ಕೆ ಎಲ್ಲಿ ಉಳಿಯುತ್ತೆ ಸಾರ್..’ ಎಂದರು
‘ಅಂದರೆ..’ ಎಂದೆ
ಇದೆಲ್ಲಾ ಹೋಗೋದು ನೋಡಿ ಅಲ್ಲಿಗೆ..ಎಂದು ಕೈ ಮಾಡಿದರು
ನಾನು ಆ ಕಡೆ ನೋಡಿದರೆ ದೂರದಲ್ಲಿ ಕಾರ್ಖಾನೆಯ ಚಿಮಣಿಗಳು ಕಾಣಿಸಿದವು
ಅರ್ಥವಾಗದೆ ಮತ್ತೆ ಅವರತ್ತ ನೋಡಿದೆ
ಅವರು ಅದು ಬಣ್ಣದ ಕಾರ್ಖಾನೆ ಸಾರ್
ಬ್ಯಾಡಗಿ ಮೆಣಸಿನಕಾಯಿ ಈಗ ತಿನ್ನೋಕಲ್ಲ ಬಣ್ಣಕ್ಕೆ ಬಳಸ್ತಾರೆ
ಬ್ಯಾಡಗಿ ಮೆಣಸಿನಕಾಯಿಯಿಂದ ತೆಗೆದ ಬಣ್ಣ ಇದೆಯಲ್ಲಾ ಅದು ಲಿಪ್ ಸ್ಟಿಕ್ ಗೆ ಫಸ್ಟ್ ಕ್ಲಾಸ್ ಅಂದರು

ಎಲ್ಲಿನ ಮೆಣಸಿನಕಾಯಿ ಎಲ್ಲಿಯ ಲಿಪ್ ಸ್ಟಿಕ್ ಎಂದು ನಾನು ಕಣ್ಣೂ ಬಾಯಿ ಬಿಟ್ಟೆ
ನಾನಂದುಕೊಂಡಂತೆ ಇಡೀ ದೇಶ ಬ್ಯಾಡಗಿ ಮೆಣಸಿನಕಾಯಿ ತಿನ್ನುತ್ತಿರಲಿಲ್ಲ, ಬದಲಿಗೆ ಇಡೀ ಜಗತ್ತೇ ಅದನ್ನು ತುಟಿಗೆ ಬಳಿದುಕೊಳ್ಳುತ್ತಿತ್ತು

ಅಲ್ಲಿಂದ ನನ್ನ ಪಯಣದ ಧಿಕ್ಕೇ ಬದಲಾಯ್ತು
ನಾನು ಕಾಣುತ್ತಿದ್ದ ಚಿಮಣಿಗಳ ಕಡೆ ಹೊರಳಿದೆ
ಕಂಡ ಕಂಡವರ ಬೆನ್ನು ಬಿದ್ದೆ, ಕಾರ್ಖಾನೆಗಳ ಬಾಗಿಲು ಬಡಿದೆ

ಬ್ಯಾಡಗಿ ಮೆಣಸಿನಕಾಯಿ ಘಾಟು ಕಡಿಮೆ, ಬಣ್ಣ ಜಾಸ್ತಿ
ಯಾವಾಗ ಇದು ಗೊತ್ತಾಯಿತೋ ಬಹುರಾಷ್ಟ್ರೀಯ ಕಂಪನಿಗಳಿಗೆ ಬ್ಯಾಡಗಿ ಎನ್ನುವುದು ಪ್ರಿಯವಾಗಿ ಹೋಯಿತು
ಮೊದಲು ಮೆಣಸಿನಕಾಯಿಯನ್ನೇ ತರಿಸಿಕೊಳ್ಳುತ್ತಿದ್ದರು ಅದು ಬ್ಯಾಡಗಿಯಿಂದ ಮುಂಬೈಗೆ ಹಾರಿ, ಅಲ್ಲಿ ಬಣ್ಣವಾಗಿ ಬದಲಾಗುತ್ತಿತ್ತು
ಆಮೇಲೆ ಈ ಕಷ್ಟ ಯಾಕೆ ಅಂತ ಬಹುರಾಷ್ಟ್ರೀಯ ಕಂಪನಿಗಳು ತಾವೇ ಬ್ಯಾಡಗಿ ಹೆದ್ದಾರಿಗೆ ಬಂದು ಮನೆ ಮಾಡಿದವು

ತೊಟ್ಟು ಬಿಡಿಸಿದ ಮೆಣಸಿನಕಾಯಿ ತಂಪಾಗಿಟ್ಟಷ್ಟೂ ಹೆಚ್ಚು ಬಣ್ಣ ಬಿಡುತ್ತದೆ
ಇದು ಗೊತ್ತಾದ ತಕ್ಷಣ ಕೋಲ್ಡ್ ಸ್ಟೋರೇಜ್ ಗಳು ಬ್ಯಾಡಗಿಗೆ ಎಂಟ್ರಿ ಕೊಟ್ಟವು
ಮೆಣಸಿನಕಾಯಿ ಹಿಂಡಿ ‘ಓಲಿಯೋರೆಸಿನ್’ ಎನ್ನುವ ಬಣ್ಣ ತೆಗೆಯುತ್ತಾರೆ
ಒಂದು ಟನ್ ಮೆಣಸಿನಕಾಯಿ ಹಿಂಡಿದರೆ 50 ಲೀಟರ್ ಬಣ್ಣ ಸಿದ್ಧ

ಅಲ್ಲಿಂದ ನನ್ನ ದಿಕ್ಕು ಮತ್ತೆ ಬ್ಯಾಡಗಿಯತ್ತ
12 ಲಕ್ಷ ಟನ್ ಬ್ಯಾಡಗಿ ಮೆಣಸಿನಕಾಯಿ ಫಸಲು ಬಂದಿದೆ
ಬಹುರಾಷ್ಟ್ರೀಯ ಕಂಪನಿಗಳು ಎಲ್ಲೆಲ್ಲಿಂದಲೋ ಬಂದು ಬೀಡು ಬಿಟ್ಟಿವೆ
ನಾನು ಆ ಕೆಂಪು ಸಮುದ್ರದೊಳಗೆ ಹೆಜ್ಜೆ ಹಾಕುತ್ತಾ ಅಲ್ಲಿ ಮೂಗು ಬಾಯಿ ಕಟ್ಟಿಕೊಂಡು
ಚಕಚಕನೆ ರೋಬೋಟ್ ಗಿಂದ ವೇಗವಾಗಿ ತೊಟ್ಟು ಮುರಿಯುತ್ತಿದ್ದ ಹೆಂಗಸಿನ ಬಳಿ ಕುಳಿತೆ

ಬದುಕು ಹೇಗಿದೆ ತಾಯಿ ಎಂದೆ
ಅಷ್ಟೇ, ಆಕೆಯ ಕಣ್ಣಲ್ಲಿ ನೀರು ಸುರಿಯಲಾರಂಭಿಸಿತು
ಘಾಟಿನ ಕಾರಣಕ್ಕೆ ಅಸ್ತಮಾ, ಹಲವರಿಗೆ ಕ್ಯಾನ್ಸರ್
ಖಾರದಲ್ಲಿ ಕೈ ಆಡೀ ಆಡೀ ಕೈ ಸ್ಪರ್ಶ ಜ್ಞಾನವನ್ನೇ ಕಳೆದುಕೊಂಡಿದೆ

ಹಾಗೆಯೇ ಜಗತ್ತಿನಾದ್ಯಂತ ಅದನ್ನು ತಿಂದರೂ, ಹಚ್ಚಿಕೊಂಡರೂ ಅವರ ಬದುಕಿಗೆ ಮಾತ್ರ ಬಣ್ಣ ಬಂದಿಲ್ಲ
ಕತ್ತಲು ಒಂದಿಂಚೂ ಜರುಗಿಲ್ಲ

ಅಮೆರಿಕಾದ ಸಿ ಎನ್ ಎನ್ ಚಾನಲ್ ಗೆ ಈ ಕಥೆಯನ್ನು ಹೊತ್ತೊಯ್ದೆ
ತೆರೆಯ ಮೇಲೆ ಮೆಣಸಿನಕಾಯಿ ಕಥೆ ಬಿಚ್ಚುತ್ತಾ ಹೋದಂತೆ ಎಲ್ಲರೂ ನಿಟ್ಟುಸಿರಾದರು
ಜಗತ್ತನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ಅಮೆರಿಕಾದ ಕಂಪನಿಗಳಿಗೆ ಸಿ ಎನ್ ಎನ್ ಆದರೂ ಪಾಠ ಹೇಳಲಿ ಎನ್ನುವ ಆಸೆ ನನ್ನದು

ಈ ಮಧ್ಯೆ ಮಂಗಳೂರಿನ ಮನೆಯ ಬಾಗಿಲು ಬಡಿದ ಸದ್ದಾಯ್ತು
ತೆರೆದರೆ ಸಿದ್ಧಾರ್ಥ ವರದರಾಜನ್
‘ಹಿಂದೂ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿರುವ ಸಿದ್ಧಾರ್ಥ್ ಆಗ ‘ಟೈಮ್ಸ್ ಆಫ್ ಇಂಡಿಯಾ’ದ ದೆಹಲಿ ಸ್ಥಾನಿಕ ಸಂಪಾದಕ
ನನಗೋ ಅಚ್ಚರಿ
ಅವರು ಒಳಗೆ ಕಾಲಿಟ್ಟ ತಕ್ಷಣ ಮೆಣಸಿನಕಾಯಿ ಎಂದರು
ನನಗೆ ಅರ್ಥವಾಗಿ ಹೋಯ್ತು
ನನ್ನ ಬ್ಯಾಡಗಿ ವರದಿ ನೋಡಿದ್ದ ಸಿದ್ಧಾರ್ಥ್ ವರದರಾಜನ್ ಅವರು ದೆಹಲಿಯಿಂದ ಆ ಕಥೆಯ ಬೆನ್ನತ್ತಿ ಬಂದಿದ್ದರು
ವಿವರ ಕೊಟ್ಟ ತಕ್ಷಣ ಅವರೂ ಬ್ಯಾಡಗಿಯತ್ತ ಮುಖ ಮಾಡಿದರು

ಈಗ ನಾನು ಯಾರು ಲಿಪ್ ಸ್ಟಿಕ್ ಹಾಕಿದ್ದರೂ ಅವರ ತುಟಿ ನೋಡುತ್ತೇನೆ
ಅಲ್ಲಿ ಬಣ್ಣದ ಬದಲು ಕದಡಿ ಹೋಗುತ್ತಿರುವ ಬದುಕು ಕಾಣುತ್ತದೆ

‍ಲೇಖಕರು avadhi

May 18, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಸುಧಾ ಚಿದಾನಂದಗೌಡ

    informative n intimate write up.

    ಯಾವುದೇ ಉದ್ಯಮದಲ್ಲಾದರೂ ಹೆಚ್ಚು ದುಡಿಯುವವಳು
    ಮತ್ತು
    ಹೆಚ್ಚು ಬಳಲುವವಳು ಮಹಿಳೆಯೇ.
    ಆದಾಯ ಮಾತ್ರ ಅಷ್ಟಕ್ಕಷ್ಟೇ.
    ಗಂಡ ಅಥವಾ ಮಗ ಕುಡುಕನೋ ಕೆಡುಕನೋ ಆಗಿದ್ದರೆ ಆ ಅಲ್ಪದಾಯವೂ ಅವಳ ಕೈಗೆ ದಕ್ಕುವುದಿಲ್ಲ.
    ಸೂಕ್ಷ್ಮ ಒಳನೋಟದ ಸಮಗ್ರ ಬರಹ.
    ಧನ್ಯವಾದ ಸರ್.

    ಪ್ರತಿಕ್ರಿಯೆ
  2. Anonymous

    ಪ್ರಿಯ ಮೋಹನ್:
    ಮೆಣಸಿನಕಾಯಿಗೂ ಲಿಪ್‍ಸ್ಟಿಕ್‍ಗೂ ಇರುವ ಸಂಬಂಧ ಖಂಡಿತಾ ನನಗೆ ಗೊತ್ತಿರಲಿಲ್ಲ; ಇದುವರೆಗೂ ಅದನ್ನು ಬೆಳೆಯುವವರು ಅದೃಷ್ಟವಂತರು ಎಂದುಕೊಂಡಿದ್ದೆ; ಅದರ ಹಿಂದೆ ಇರುವ ಈ ಭೀಕರ ಸತ್ಯ ಗೊತ್ತಿರಲಿಲ್ಲ. ಎಂತೆಂತಹ ವೈವಿಧ್ಯಪೂರ್ಣ, ನಂಬಲಾಗದಂತಹ ಅನುಭವಗಳು ನಿಮ್ಮದು! ಈ ’ಖಾರ’ದ ಸತ್ಯವನ್ನು ನಮಗೆ ತೋರಿಸಿದುದಕ್ಕೆ –Thank you Mohan. ಹೀಗೇ ನಮ್ಮ ಕಣ್ಣು ತೆರೆಸುತ್ತಿರಿ.
    ರಾಮಚಂದ್ರನ್

    ಪ್ರತಿಕ್ರಿಯೆ
  3. ಮಮತ

    ಮಾಹಿತಿಯನ್ನಾಗಿಯಷ್ಟೇ ಅಲ್ಲ ಬದುಕಿನ ಕತೆಯನ್ನಾಗಿ ನೋಡಿ ದಂಗಾದೆ. ಈ ಬಗ್ಗೆ ಗೊತ್ತಿರಲಿಲ್ಲ . ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್ .
    ಮೆಣಸಿನಕಾಯಿ ಬೆಲೆ ಗಗನಕ್ಕೇರಿದ್ದು ಇದಕ್ಕೇ ಇರಬಹುದು ಜತೆಗೆ ಇನ್ನೂ ಏನೇನು / ಯಾವ ಬಗೆಯ ಒಳಕಥೆಗಳಿವೆಯೋ !

    ಪ್ರತಿಕ್ರಿಯೆ
  4. Sumithra.lc

    Naavu. Byadagi ಮೆಣಸಿನ ಕಾಯನ್ನೆ ಅಡಿಗೆಗೆ ಬಳಸುವುದು…ನನಗೆ ನೆನಪಿರುವ ಕಾಲದಿಂದಲೂ……..ಆ ಲಿಪ್ಸ್ಟಿಕ್ ೯೦೦ ರೂ…ಮತ್ತು ಅದಕ್ಕಿಂತ ಹೆಚ್ಚು….ನಿಮ್ಮ ಬರಹ ಮನಕಲಕಿತು…ಮಿರ್ಚ್ ಮಸಾಲ ಸಿನೆಮಾ ನೆನಪಾಯ್ತು

    ಪ್ರತಿಕ್ರಿಯೆ
  5. ಅಮರದೀಪ್. ಪಿ.ಎಸ್.

    ಬ್ಯಾಡಗಿ ಮೆಣಸಿನಕಾಯಿ ಹಿಂದಿನ ಬಣ್ಣದ ಕತೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್..

    ಪ್ರತಿಕ್ರಿಯೆ
  6. s.p.vijayalakshmi

    sundara baraha… chooru ee bagge kelidde, ishtu vistruthavaagi gotthiralilla… khaaravillade ( menasinakaayi thappalla) mahileyarannu kaadisuva , naralisuva ee prasthutha sangathi gotthiralilla. kalakuva baraha..

    ಪ್ರತಿಕ್ರಿಯೆ
  7. Dr virupaksha

    Indian agricultural field modernisation limited only to use of MNC ‘s pesticides ,seeds and fertilisers .Modernisation with use of processing units ,protective gear can many times limit the suffering by avoiding contact with irritants of agricultural products .and these things doesn’t cost much also .our people should become more science oriented than tradition oriented .it’s our duty to protect our health not profit oriented MNC ‘s

    ಪ್ರತಿಕ್ರಿಯೆ
  8. Krishna Prasad

    ಸರ್,ಸ್ವಾತಂತ್ರ ಪೂರ್ವದಲ್ಲಿ ಜರ್ಮನಿಗೆ ಬಣ್ಣಕ್ಕಾಗಿ ಬ್ಯಾಡಗಿ ಮೆಣಸಿನಕಾಯಿ ರಫ್ತು ಆಗುತ್ತಿದ್ದನ್ನು ಕೇಳಿದ್ದೆ. ಈಗಲೂ ಅದು ಚಾಲ್ತಿಯಲ್ಲಿರುವ ಬಗ್ಗೆ ಗೊತ್ತಿರಲಿಲ್ಲ. ಮಾಹಿತಿ ಹೆಕ್ಕಿ ತಂದದ್ದಕ್ಕೆ ಥ್ಯಾಂಕ್ಸ
    – ಕೃಷ್ಣ ಪ್ರಸಾದ್,ಸಹಜ ಸಮೃದ್ದ

    ಪ್ರತಿಕ್ರಿಯೆ
  9. Shama Nandibetta

    ಒಂದು ಮುಷ್ಟಿ ಮೆಣಸಿನಕಾಯಿ ಹಾಗೇ ತಿಂದಿದ್ದರೂ ಆಗದಷ್ಟು ಸಂಕಟ ಆಯ್ತು. ನಿಮ್ಮ ಇಂಥ ಎಲ್ಲ ಬರಹಗಳಲ್ಲೂ ಅಷ್ಟೇ, ಮಾಹಿತಿ, ನಿರೂಪಣೆ, ಭಾಷಾ ಪ್ರೌಢಿಮೆ ಎಲ್ಲಕ್ಕಿಂತ ಹೆಚ್ಚು ತಟ್ಟುವುದು ಅದರ ಹಿಂದಿನ ನೋವನ್ನ ಜಗತ್ತಿಗೆ ತೆರೆದಿಡುವ

    “ಹಾಗೆಯೇ ಜಗತ್ತಿನಾದ್ಯಂತ ಅದನ್ನು ತಿಂದರೂ, ಹಚ್ಚಿಕೊಂಡರೂ ಅವರ ಬದುಕಿಗೆ ಮಾತ್ರ ಬಣ್ಣ ಬಂದಿಲ್ಲ
    ಕತ್ತಲು ಒಂದಿಂಚೂ ಜರುಗಿಲ್ಲ”

    “ಈಗ ನಾನು ಯಾರು ಲಿಪ್ ಸ್ಟಿಕ್ ಹಾಕಿದ್ದರೂ ಅವರ ತುಟಿ ನೋಡುತ್ತೇನೆ
    ಅಲ್ಲಿ ಬಣ್ಣದ ಬದಲು ಕದಡಿ ಹೋಗುತ್ತಿರುವ ಬದುಕು ಕಾಣುತ್ತದೆ” ಇಂಥ ಸಾಲುಗಳು!

    ಅಂದ ಹಾಗೆ ಯಾರದೋ ಬದುಕಿನ ಬಣ್ಣ ಕದಡುವ ಲಿಪ್ ಸ್ಟಿಕ್ ನಾನು ಬಳಸುವುದಿಲ್ಲ ಅನ್ನೋ ಖುಷಿಯನ್ನೂ ನನಗೆ ಕೊಟ್ಟಿತು ಬರಹ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: