ಹಗರಣವಾಗುವ ಹಾದಿಯಲ್ಲಿ “ಅಮಾನ್ಯ ಚೆಕ್”ಗಳ ಬಿಸಿನೆಸ್!

ಹಿಂದೆಲ್ಲ ನಮಗೆ ಪಾವತಿಯಾದ ಪರವೂರಿನ ಚೆಕ್ ಒಂದನ್ನು ಬ್ಯಾಂಕಿನಲ್ಲಿ ನಮ್ಮ ಅಕೌಂಟಿಗೆ ಹಾಕಿದರೆ, ಅದು ನಮ್ಮ ಬ್ಯಾಂಕಿನ ಮೂಲಕ, ಆ ಚೆಕ್ ಯಾವ ಬ್ಯಾಂಕಿನ ಯಾವ ಶಾಖೆಯದೋ, ಅಲ್ಲಿಗೆ ಅಂಚೆಯ ಮೂಲಕ ಹೋಗಬೇಕಿತ್ತು. ಅಲ್ಲಿನ ಅಧಿಕಾರಿಗಳು ಆ ಚೆಕ್ ಎಲ್ಲ ರೀತಿಗಳಲ್ಲಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಆ ಖಾತೆಯಲ್ಲಿ ಹಣವಿದ್ದರೆ ಆ ಚೆಕ್ಕನ್ನು ಮಾನ್ಯ ಮಾಡುತ್ತಿದ್ದರು ಮತ್ತು ನಮ್ಮ ಖಾತೆಗೆ ಹಣ ಪಾವತಿ ಆಗುತ್ತಿತ್ತು. ಅಲ್ಲಿ ಹಣವಿಲ್ಲ ಅಥವಾ ಚೆಕ್ ಸರಿಯಾಗಿಲ್ಲ ಎಂದಾದರೆ, ಚೆಕ್ ಅಮಾನ್ಯಗೊಂಡು ನಮಗೆ ವಾಪಸ್ ಬರಬೇಕಿತ್ತು.

ಹೀಗೆ ಚೆಕ್ ಒಂದು ಅಮಾನ್ಯಗೊಂಡಾಗ, ಚೆಕ್ ಕೊಟ್ಟ ಮತ್ತು ಪಡೆದ ಇಬ್ಬರಿಗೂ ಬ್ಯಾಂಕುಗಳು ದಂಡ ವಿಧಿಸುವುದು ಪದ್ಧತಿ. ಇದು ಬಹುತೇಕ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿರುವ ವ್ಯವಹಾರ. ಇಲ್ಲಿ ಚೆಕ್ ಅಂಚೆಯ ಮೂಲಕ ಹೋಗಿ ಬರುವ ಕಾರಣದಿಂದಾಗಿ ಹಣ ನಮ್ಮ ಖಾತೆ ತಲುಪಲು ಸುಮಾರು 15-20 ದಿನಗಳೂ ತಗಲುವುದಿತ್ತು.

ಕಳೆದ ಒಂದೆರಡು ವರ್ಷಗಳಿಂದ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಈ ಸವಲತ್ತನ್ನು ಡಿಜಿಟಲ್ ಆಗಿ ಬದಲಾಯಿಸಿದೆ ಮತ್ತು ಕೇಂದ್ರೀಕರಣಗೊಳಿಸಿದೆ. ಈ ಹೊಸ ವ್ಯವಸ್ಥೆಯಲ್ಲಿ ನಾವು ಬ್ಯಾಂಕಿಗೆ ಕಲೆಕ್ಷನ್ನಿಗೆಂದು ಹಾಕಿದ ಚೆಕ್ ಸ್ಕ್ಯಾನ್ ಬಿಂಬದ ರೂಪದಲ್ಲಿ ತನ್ನ ಪಯಣ ನಡೆಸುತ್ತದೆ. ಮತ್ತು ಬ್ಯಾಂಕಿನ ಸೆಂಟ್ರಲ್ ಹಬ್ ಒಂದರಲ್ಲಿ ಚೆಕ್ ನ ಪರಿಶೀಲನೆ, ಮಾನ್ಯಗೊಳಿಸುವ ಪ್ರಕ್ರಿಯೆ ನಡೆಯುತ್ತದೆ. ಅಂದರೆ ನಮಗೆ ಚೆಕ್ ರೂಪದಲ್ಲಿ ಪಾವತಿ ಮಾಡಿದವರ ಬ್ಯಾಂಕ್ ಶಾಖೆಗಾಗಲೀ, ನಮ್ಮ ಖಾತೆ ಇರುವ ಬ್ಯಾಂಕ್ ಶಾಖೆಗಾಗಲೀ ಈ ಚೆಕ್ ಮೇಲೆ ಯಾವುದೇ ನಿಯಂತ್ರಣ ಈಗ ಉಳಿದಿಲ್ಲ. ಇದರಿಂದಾಗಿರುವ ಏಕೈಕ ಲಾಭ ಎಂದರೆ, ಚೆಕ್ ಹಣ ನಮ್ಮ ಖಾತೆಗೆ 2-3 ದಿನಗಳೊಳಗೇ ಬಂದು ಮುಟ್ಟುತ್ತಿದೆ.

ಇದೆಲ್ಲ ಸಮರ್ಥವಾಗಿ ನಡೆದರೆ, ಯಾರದೂ ತಕರಾರಿರುವುದಿಲ್ಲ. ಆದರೆ ಇತ್ತೀಚೆಗೆ, ಅದರಲ್ಲೂ ನೋಟು ರದ್ಧತಿ ಪ್ರಹಸನ-ಬ್ಯಾಂಕುಗಳ ಶುಲ್ಕಗಳಲ್ಲಿ ಬದಲಾವಣೆಯ ಯುಗ ಅರಂಭವಾದ ಮೇಲೆ ಒಂದು ಹೊಸ ಬೆಳವಣಿಗೆ ಕಾಣಿಸಿಕೊಂಡಿದೆ (ಅದೂ ವಿಶೇಷವಾಗಿ ಖಾಸಗಿ ಬ್ಯಾಂಕುಗಳಲ್ಲಿ!). ಅದೇನೆಂದರೆ, ಖಾತೆದಾರರ ಸಹಿ ಸ್ಪೆಸಿಮನ್ ಸಹಿಯೊಂದಿಗೆ ಮ್ಯಾಚ್ ಆಗುತ್ತಿಲ್ಲ ಎಂಬ ರೀತಿಯ ಕ್ಷುಲ್ಲಕ ಕಾರಣಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಚೆಕ್ಕುಗಳು ಅಮಾನ್ಯಗೊಳ್ಳತೊಡಗಿವೆ.

ಹೀಗೆ ಯಾವುದೇ ಕಾರಣಕ್ಕೆ ಚೆಕ್ ಅಮಾನ್ಯಗೊಂಡರೂ, ಚೆಕ್ ಕೊಟ್ಟ-ಪಡೆದ ಎರಡೂ ಬ್ಯಾಂಕುಗಳು ತಮ್ಮ ತಮ್ಮ ಖಾತೆದಾರರಿಗೆ 200-500ರೂ.ಗಳ ತನಕವೂ ದಂಡನಾ ಶುಲ್ಕ ವಿಧಿಸುತ್ತವೆ. ಒಂದು ರೀತಿಯಿಂದ ನೋಡಿದರೆ, ಇದು ಬ್ಯಾಂಕುಗಳಿಗೆ ಈಗ ಅನಾವ್ರಷ್ಟಿ ಕಾಲದ ವ್ಯಾಪಾರ! ಪ್ರತೀ ಬ್ಯಾಂಕ್ ದಿನಕ್ಕೊಂದಿಷ್ಟು ಸಂಖ್ಯೆಯಲ್ಲಿ ಚೆಕ್ ಗಳನ್ನು ಕ್ಷುಲ್ಲಕ ಕಾರಣ ನೀಡಿ ಅಮಾನ್ಯಗೊಳಿಸಿದರೆ, ಅವರ ಕಿಸೆಗೆ ಬೀಳುವ ದುಡ್ಡಿನ ಪ್ರಮಾಣ ಊಹಿಸಲು ಸಾಧ್ಯವಿಲ್ಲ.

ಸ್ವತಃ ಸರಕಾರವೇ ತನ್ನ ಬೆನ್ನಿಗೆ ನಿಂತಿರುವಾಗ ಪ್ರತೀ ಬ್ಯಾಂಕ್ ಲೇವಾದೇವಿಗೂ ಚಾರ್ಜು, ಪ್ರತೀ ಎಟಿಎಂ ವ್ಯವಹಾರಕ್ಕೂ ಚಾರ್ಜು… ಎಲ್ಲ ಈಗೆ ತಮಾಷೆ ಆರಂಭಿಸಿರುವಂತೆ ಬ್ಯಾಂಕಿನೆದುರು ಹಾದು ಹೋದದ್ದಕ್ಕೂ ಚಾರ್ಜು ಮಾಡುತ್ತಿರುವ ಬ್ಯಾಂಕುಗಳು ತಮ್ಮ ನೋಟು ರದ್ಧತಿಯೋತ್ತರ ಶುಲ್ಕ ಲಾಭಗಳ ಬಗ್ಗೆ ಒಂದು ಶ್ವೇತಪತ್ರ ಹೊರಡಿಸಿದರೆ, ಅದು 2G, 3G, ಕಲ್ಲಿದ್ದಲು ಹಗರಣಗಳಿಗಿಂತ ಕಡಿಮೆ ಗಾತ್ರದ ಹಗರಣ ಅಲ್ಲ!

ತಮಾಷೆಗೆ ಸಣ್ಣದೊಂದು ಲೆಕ್ಕಾಚಾರ ನೋಡಿ. ದಿನಕ್ಕೆ ಲಕ್ಷಾಂತರ ಚೆಕ್ಕುಗಳ ವಹಿವಾಟು ನಡೆಯುತ್ತಿರುವಾಗ ಬರೀ 5000 ಚೆಕ್ಕುಗಳು ಕ್ಷುಲ್ಲಕ ಕಾರಣಗಳಿಗೆ ಅಮಾನ್ಯವಾದರೂ  ಸಂಬಂಧಿತ 2 ಬ್ಯಾಂಕುಗಳಿಗೆ ತಲಾ 200 ರೂಗಳಂತೆ 2೦ಲಕ್ಷ ರೂಪಾಯಿಗಳ ಲಾಭ!

ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಬ್ಯಾಂಕುವಾರು ಅಂಕಿ ಸಂಖ್ಯೆಗಳು ಲಭ್ಯವಿಲ್ಲ. ಆದರೆ, ಸ್ವತಃ ನನಗೆ ಕಳೆದ ಆರು ತಿಂಗಳಿನಲ್ಲಿ 10ಕ್ಕಿಂತ ಮಿಕ್ಕಿ ಸಂಖ್ಯೆಯಲ್ಲಿ ಇಂತಹ ಅನುಭವ ಆಗಿದೆ. ಕಳೆದ 15 ವರ್ಷಗಳಲ್ಲಿ ಒಂದೇ ಒಂದು ಚೆಕ್ ಅಮಾನ್ಯಗೊಂಡ ಹಿನ್ನೆಲೆ ಇಲ್ಲದ ವ್ಯವಹಾರವೊಂದರಲ್ಲಿ, ಈಗ ಇಷ್ಟೊಂದು ಚೆಕ್ ಗಳ “ಸಹಿ ಮ್ಯಾಚ್ ಆಗುತ್ತಿಲ್ಲ” ಎಂಬ ಕ್ಷುಲ್ಲಕ ಕಾರಣದ ಅಮಾನ್ಯತೆಯ ಸುದ್ದಿಗಳು ಎಲ್ಲೆಡೆಯಿಂದ ಕೇಳಿಬರುತ್ತಿರುವುದು ಹಲವು ಸಂಶಯಗಳನ್ನು ಹುಟ್ಟಿಸುತ್ತಿದೆ.

ಜೊತೆಗೆ, ರಿಸರ್ವ್ ಬ್ಯಾಂಕು, ಚೆಕ್ ಅಮಾನ್ಯಕ್ಕೆ ಸಂಬಂಧಿಸಿದ ಕೆಲವು ನೀತಿಗಳನ್ನೂ ಸಡಿಲಗೊಳಿಸುತ್ತಿದೆ (ಅಮಾನ್ಯ ಚೆಕ್ ನೀಡಿದವರಿಗೆ ಬ್ಯಾಂಕುಗಳು ಚೆಕ್ ಪುಸ್ತಕ ಒದಗಿಸಬಾರದು ಎಂಬ ನೀತಿ ಕೆಲವು ತಿಂಗಳ ಹಿಂದೆ ಸಡಿಲಾಗಿದೆ!)

ಹಿಂದೆಲ್ಲ ಬ್ಯಾಂಕ್ ಶಾಖೆಗಳಲ್ಲಿ ಮ್ಯಾನೇಜರ್ ಗಳಿಗೆ ಗ್ರಾಹಕರ ಹಿನ್ನೆಲೆ ಗೊತ್ತಿರುತ್ತಿದ್ದುದರಿಂದ, ಒಂದು ವೇಳೆ ನಿಜಕ್ಕೂ ಸಹಿ ಮ್ಯಾಚ್ ಆಗುತ್ತಿಲ್ಲದ ಪ್ರಕರಣಗಳಲ್ಲೂ, ಬ್ಯಾಂಕಿನ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಹರಿಸಲಾಗುತ್ತಿತ್ತು. ಆಗ ಕೆಲವೊಮ್ಮೆ ಬಲಾಢ್ಯ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಅವಕಾಶ ಬ್ಯಾಂಕುಗಳಿಗಿತ್ತೆಂಬುದನ್ನು ಬಿಟ್ಟರೆ ಬೇರೆ ಗಂಭೀರ ಅಪಾಯಗಳೇನಿರಲಿಲ್ಲ. ಆದರೆ ಈಗ, ಖಾಸಗಿ ಬ್ಯಾಂಕುಗಳು-ಕಾರ್ಪೋರೇಟುಗಳಿಗೆ ಕಾಸು ಗೋರಿಕೊಳ್ಳಲು ಸರಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ.

ವಿಶ್ವಾಸದ ತಳಪಾಯದ ಮೇಲೆ ನಡೆಯುವ ಬ್ಯಾಂಕಿಂಗಿನಂತಹ “ಸೇವೆಗಳು” ಈ ಪರಿ “ವ್ಯವಹಾರ” ಆಗುತ್ತಿರುವುದು ಖಂಡಿತಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ.

‍ಲೇಖಕರು avadhi

May 18, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. ರಘುನಾಥ

    ಆರಬಿಐನಿಂದಮರಳಿಬರಲುಕಾರಣವೇನುಕೇಳಿದರೆಗೊತ್ತಿಲ್ಲವೆಂದುತಲೆಯಾಡಿಸುವಬ್ಯಾಂಕಮೇನೇಜರುಶುಲ್ಕವಸೂಲಿಮಾಡುವುದನ್ನುಬಿಡುವುದಿಲ್ಲಇದರಿಂದಾಗಿಅನಾವಶ್ಯಕವಾಗಿನನ್ನದಲ್ಲದತಪ್ಪಿಗೆದಂಡತೆರಬೇಕಾಯಿತುಕೆನರಾಬ್ಯಾಂಕನಲ್ಲಿನೀವುಹೇಳಿದಂತೆವ್ಯವಸ್ತಿತಸುಲಿಗೆಯೇಸರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: