'ಅವಧೇಶ್ವರಿ' ಎಂಬ ಸುಂದರ ಜರ್ನಿ

ಸಂಯುಕ್ತ ಪುಲಿಗಳ್ 

ಓದಬೇಕು…..ಓದ….ಬೇಕು….ಎಂಬುದನ್ನು ನಿರ್ಧರಿಸುವಷ್ಟರಲ್ಲಿ ಹತ್ತುಬಾರಿಯಾದರೂ “ಅವಧೇಶ್ವರಿ”ಯ ಬಗ್ಗೆ ಕಂಡು ಕೇಳಿದ್ದೆ. “ರಾಜಕೀಯ”ವೆಂದರೆ ಕಹಿಯೇ ಎಂಬ ಅನುಭವಕ್ಕೆ ತುತ್ತಾಗಿ, ’ವೇದಕಾಲೀನ ರಾಜಕೀಯ ಕಾದಂಬರಿ’ ಎಂಬ ವಿವರಣೆಯನ್ನು ನೋಡಿಯೇ ಪುಸ್ತಕವನ್ನು ಪಕ್ಕಕ್ಕಿಟ್ಟಿದ್ದೆ. ಸ್ನೇಹಿತರು “ಅವಧೇಶ್ವರಿಯನ್ನು ಓದಿದ್ದೀರಾ?” ಎಂದು ಕೇಳಿದ ಮೇಲೆ ನಿಧಾನಿಸಿ ಪ್ರಾರಂಭಿಸಿದ ಓದು ಕೊನೆಯ ಪುಟದವರೆಗೂ ನಿಲ್ಲಲೇ ಇಲ್ಲ.
ಇಟ್ ಈಸ್ ಎ ಜರ್ನಿ. ಯಾವುದೋ ಒಂದು ಕಾಲಘಟ್ಟಕ್ಕೆ ನಮ್ಮನ್ನೊಯ್ದು ವಿವಿಧ ಬಗೆಯ ಒಗರು, ಒಗಟು, ಒನಪುಗಳಲ್ಲಿ ನಮ್ಮನ್ನದ್ದಿ ತೇಲಿಸಿ ಮುಳುಗಿಸುವ ಕಾದಂಬರಿ ಅವಧೇಶ್ವರಿ.
avadheshvariಅವಧೇಶ್ವರಿ ೧೯೮೭ರಲ್ಲಿ ಮೊದಲು ಪ್ರಕಟವಾದದ್ದು. ೧೯೮೮ರಲ್ಲಿ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಈ ಕೃತಿಯನ್ನು ವೇದಕಾಲೀನ ರಾಜಕೀಯ ಕಾದಂಬರಿ ಎಂದು ಲೇಖಕ ಶಂಕರ ಮೊಕಾಶಿ ಪುಣೇಕರ್ ಅವರು ಕರೆದಿದ್ದಾರೆ.
ಪುರುಕುತ್ಸ, ಪುರುಕುತ್ಸಾನಿ, ತ್ರಸದಸ್ಯು, ವೃಶಜಾನ, ಶಂಬರಾಸುರ ಮುಂತಾದ ಪಾತ್ರಗಳು ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಲೇಖಕರು ಉಲ್ಲೇಖಿಸುತ್ತಾರೆ. ಯಗ್ನ-ಯಾಗಾದಿಗಳು, ಋಷಿಗಳು, ರಾಜರು ಮುಂತಾದ ವಿವರಣೆಗಳಿಂದ ವೇದಕಾಲದ ವಾತಾವರಣವನ್ನು ತೋರಿಸಲೆತ್ನಿಸಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದಂತೆ, ಪುರುಕುತ್ಸನ ಖಿನ್ನತೆ, ಪುರುಕುತ್ಸಾನಿಯ ಚಾಣಾಕ್ಷತೆ, ತಾರ್ಕ್ಷ್ಯನ ದಕ್ಷತೆ, ತ್ರಸದಸ್ಯುವಿನ ತಿಳಿಯದ ಅಸ್ಮಿತೆ ಇವೆಲ್ಲವೂ ನಮಗೆ ಒಂದು ವಿಭಿನ್ನ ಮಾಯಾಲೋಕದ ಪರಿಚಯವನ್ನೇ ಮಾಡಿಕೊಡುತ್ತದೆ.
“ಶ್ರೀರಾಮನ ಅಯೋಧ್ಯೆ ಕುಗ್ರಾಮವಾಯಿತು” ಎಂಬ ಸೂಚನೆಯಿಂದಲೇ ಕಥೆ ಪ್ರಾರಂಭವಾಗುತ್ತದೆ. ಪುರುಕುತ್ಸ ಮಹಾರಾಜನ ಆಳ್ವಿಕೆಯಲ್ಲಿ ರಾಜ್ಯವು ನಲುಗುತ್ತಿತ್ತು. ಪುರುಕುತ್ಸ ಲೋಲುಪ, ಸುಖಭೋಗದಲ್ಲೇ ತನ್ನ ರಾಜ್ಯಭಾರವೆಲ್ಲವನ್ನೂ ಮುಳುಗಿಸಿಬಿಟ್ಟಿದ್ದ. ಸೂರ್ಯವಂಶದ ಪದ್ಧತಿಯಂತೆ ಪುರುಕುತ್ಸನ ವಿವಾಹ ತಂಗಿ ನರ್ಮದಾ ಪುರುಕುತ್ಸಾನಿಯೊಂದಿಗೆ ಬಾಲ್ಯದಲ್ಲೇ ಜರುಗಿಹೋಗಿತ್ತು. ರಾಜ್ಯಭಾರವು ಹೊರಗಿನವರಿಗೆ ಹೋಗಬಾರದೆಂಬ ವ್ಯವಸ್ಥೆ ಇದಾಗಿತ್ತು. ಆದರೆ ಪುರುಕುತ್ಸನಿಗೆ ತನ್ನ ತಂಗಿಯನ್ನು ಹೆಂಡತಿ ಎಂದು ಭಾವಿಸಲು ಕೊನೆಯವರೆಗೂ ಸಾಧ್ಯವೇ ಆಗಲಿಲ್ಲ.
ಒಬ್ಬ ಸಮರ್ಥ ರಾಣಿಯಾಗಲು ಅಗತ್ಯವಾದ ಧೈರ್ಯ, ಚಾಣಾಕ್ಷತನ, ಜ್ಞಾನ, ರಾಜ್ಯಪ್ರಜ್ಞೆ, ಪ್ರೀತಿ, ವಿಶ್ವಾಸ ಎಲ್ಲವೂ ಪುರುಕುತ್ಸಾನಿಯಲ್ಲಿ ಮೈಗೂಡಿ ಪುರುಕುತ್ಸನ ಆಳ್ವಿಕೆಯಲ್ಲಿ ಹಾದಿತಪ್ಪುತ್ತಿದ್ದ ರಾಜ್ಯವನ್ನು ಒಂದು ಸ್ಥಿಮಿತಕ್ಕೆ ತರುತ್ತಾಳೆ. ಆದರೆ ದಾಂಪತ್ಯ, ಸಖ್ಯದ ಸುಖವೊಂದು ಮಾತ್ರ ಅವಳಿಗೆ ನಿಲುಕದಾದದ್ದಾಗುತ್ತದೆ. ಈ ರೀತಿಯಾಗಿಯೇ ರಾಜಮನೆತನದ ಈ ವಿಶೇಷ ಪದ್ಧತಿಯು ನಂದಿಹೋಗುತ್ತದೆ ಎಂದು ಕಥೆ ಹೇಳುತ್ತದೆ.
ರಾಣಿ ಪುರುಕುತ್ಸಾನಿಯು ಈ ಕಥೆಯುದ್ದಕ್ಕೂ ನಮ್ಮ ಗಮನ ಸೆಳೆಯುತ್ತಾಳೆ. ಪತಿಯ ಭೋಗಜೀವನವನ್ನು ತಿಳಿದರೂ ಅದಕ್ಕೆ ಭಂಗಬಾರದಂತೆ, ಅದಕ್ಕೆ ಸಹಾಯಕವಾಗುವಂತೆಯೇ ಉಪಾಯ ಮಾಡಿ ರಾಜ್ಯವನ್ನು ಕಾಯುತ್ತಾಳೆ. ತನ್ನ ನಂತರದ ರಾಜ್ಯಭಾರಕ್ಕಾಗಿ ಮಗನನ್ನು ಪಡೆಯಲು ನಿಯೋಗ ಪದ್ಧತಿಗೆ ಒಪ್ಪುತ್ತಾಳೆ. ಈ ಎಲ್ಲ ನಿರ್ಣಯಗಳನ್ನೂ ಎಷ್ಟು ಚಾಣಾಕ್ಷತೆಯಿಂದ ಮಾಡುತ್ತಾಳೆ ಎಂಬುದನ್ನು ಪುಣೇಕರರು ಆಕರ್ಷಕವಾಗಿ ಚಿತ್ರಿಸಿದ್ದಾರೆ. ನಿಯೋಗದ ಘಟನೆಯನ್ನು ಕಟ್ಟಿಕೊಟ್ಟಿರುವ ರೀತಿಯನ್ನು ಓದಿಯೇ ಸವಿಯಬೇಕು.
ಸಮರ್ಥ ಕ್ಷತ್ರಿಯೆ ಎನಿಸಿಕೊಂಡ, ನಿಯೋಗವನ್ನು ರಾಜಕೀಯವಾಗಿ ಅಷ್ಟೇ ಒಪ್ಪಿಕೊಂಡ ಪುರುಕುತ್ಸಾನಿಯೂ ಸಹ ಆ ಕ್ಷಣಕ್ಕೆ ಒಬ್ಬ ಸಾಧಾರಣ ಹೆಣ್ಣಾಗಿ ಸಂವೇದನೆಗೆ ಒಳಪಟ್ಟು ಪ್ರತಿಕ್ರಿಯಿಸುತ್ತಾಳೆ. ಮೊದಲಿಗೆ ಕಾಲಿಗೆರಗಿ ರಾಣಿ ಎಂದು ಭಕ್ತಿ ತೋರಿದ ಸಿಂಹಭಟ್ಟನೆಂಬ ಮಧ್ಯವಯಸ್ಸಿನ ಬ್ರಾಹ್ಮಣನೂ ಕ್ಷಣಗಳಲ್ಲೇ ಕಾಮಪ್ರಚೋದಿತ ಗಂಡಾಗಿ ಉನ್ಮತ್ತನಾಗುತ್ತಾನೆ. ಮುಖ್ಯವಾಗಿ ಅವರಿಬ್ಬರಿಗೂ ಈ ವಿಚಾರ ತಿಳಿದರೂ ಅದನ್ನು ಹೊರತೋರಗೊಡದಂತೆ ನಿಭಾಯಿಸುತ್ತಾರೆ. ಇಂತಹ ಅತಿಸೂಕ್ಷ್ಮ ವಿವರಗಳನ್ನು ಹೆಚ್ಚು ವಿವರಿಸದೆಯೇ ಚಿತ್ರಿಸಿರುವ ಭಾಷಾಕೌಶಲವನ್ನು ಇಲ್ಲಿ ಕಾಣಬಹುದಾಗಿದೆ.
ನಂತರದ ಕಥೆಯಾದ ಸಿಂಹಭಟ್ಟನ ಹುಚ್ಚು, ಕಾಮಾತಿರೇಕ ಇವೆಲ್ಲವೂ ಉತ್ಪ್ರೇಕ್ಷೆ ಅಥವಾ ಅನಗತ್ಯವಾದ ವಿವರವೆನಿಸುತ್ತದೆ. ಲೀಲಾಜಾಲವಾದ ಕಥೆಯ ನಡುವೆ ಕಾಣಿಸಿಕೊಳ್ಳುವ ಬಿಕ್ಕಳಿಕೆಯಂತೆ ತೋರಗೊಂಡರೂ ಹೆಚ್ಚು ತೊಡಕಿಗೆ ಆಸ್ಪದವಿಲ್ಲ. ಪುರುಕುತ್ಸಾನಿ, ಚತುರ್ವೇದ ಪಾರಂಗತನಾದ ಬ್ರಾಹ್ಮಣ ಸಿಂಹಭಟ್ಟನಿಂದ ನಿಯೋಗದಲ್ಲಿ ಪುತ್ರನನ್ನು ಪಡೆಯುತ್ತಾಳೆ. ಆ ಮಗುವೇ ತ್ರಸದಸ್ಯು. ತಾರ್ಕ್ಷನ ಸಹಾಯದಿಂದ ಆ ಮಗನನ್ನು ಒಬ್ಬ ಸಮರ್ಥ ರಾಜನಾಗಿಸಲು ಸಫಲಳಾದರೂ ಸಮಾಜದಿಂದ ಅವನ ಮಾನಸಿಕ ಬಳಲಿಕೆಯನ್ನು ಕಾಪಾಡಲು ಸಾಧ್ಯವಾಗುವುದಿಲ್ಲ.
ಸಮಾಜ, ರಾಜಕೀಯ, ಧರ್ಮ ಎಂಬಂತಹ ಚೌಕಟ್ಟುಗಳಿಗೆ ಮಣಿದು ಅದರ ಕಾರಣಕರ್ತರಾಗಿ ಅಥವಾ ಬಲಿಯಾಗಿ, ಕಥೆಯ ಎಲ್ಲಾ ಮುಖ್ಯ ಪಾತ್ರಗಳೂ, ವಿವಿಧ ರೀತಿಯ ಮಾನಸಿಕ ತೊಳಲಾಟದಲ್ಲಿ ಸಿಲುಕುವ ರೀತಿಯನ್ನು ವಿಭಿನ್ನವಾಗಿ, ವಿಕ್ಷಿಪ್ತವಾಗಿ ಚಿತ್ರಿಸಿದ್ದಾರೆ. ಆ ವಿಕ್ಷಿಪ್ತತೆಯೂ ಕಥೆಯ ವಾತಾವರಣಕ್ಕೆ ಪೂರಕವಾದ ಹೊದಿಕೆಯ ಹೊಲಿಗೆಯಾಗಿ ಬೆಸೆದಿರುವಲ್ಲಿ ಪುಣೇಕರರ ಸಾಮರ್ಥ್ಯವನ್ನು ಗುರುತಿಸಬಹುದು.
ಪುರುಕುತ್ಸನು ತನ್ನ ಖಿನ್ನತೆಗೆ ತಾನೇ ಬಲಿಯಾದರೆ, ಪುರುಕುತ್ಸಾನಿ ತನ್ನ ಖಿನ್ನತೆಯಿಂದ ವಿಮುಖವಾಗಿ ಸೃಜನಶೀಲಳಾಗುತ್ತಾಳೆ. ಈ ವಿಚಾರವು ಒಂದು ಸಹಜ ಪ್ರಕ್ರಿಯೆ ಎಂಬಂತೆಯೇ ಚಿತ್ರಿಸಿರುವ ಪುಣೇಕರರ ಹೆಣ್ಣು ಮನಸ್ಸು ಮೆಚ್ಚುಗೆಯಾದ ವಿಚಾರ. ಇನ್ನು ತ್ರಸದಸ್ಯುವಿನ ಖಿನ್ನತೆಯು ಓದುಗರನ್ನು ಗಾಢವಾಗಿಯೇ ಸೆಳೆಯುತ್ತದೆ. ತ್ರಸದಸ್ಯುವಿನ ಜನ್ಮ ರಹಸ್ಯವು ಹಂತ ಹಂತವಾಗಿ ಬಯಲಾಗುತ್ತಾ ಹೋದಂತೆ, ಲೇಖಕರೇ ಹೇಳಿರುವಂತೆ, “ಹ್ಯಾಮ್ಲೆಟ್ಟಿನಂತೆ ತೀವ್ರ ಐಡೆಂಟಿಟಿ ಕ್ರೈಸಿಸ್ ಗೆ ಬಲಿಯಾಗುತ್ತಾನೆ”.
ರಾಜನಲ್ಲದ, ಕ್ಷತ್ರಿಯನಲ್ಲದ ಬ್ರಾಹ್ಮಣನ ಮಗ ಎಂದು ಹೀಗಳೆಯುವ ವೃಶನಿಗೆ ತ್ರಸದಸ್ಯು ಸಾಂಕೇತಿಕವಾದ ಎರಡು ಸೀಲುಗಳಲ್ಲಿ ಉತ್ತರಕೊಟ್ಟಿರುತ್ತಾನೆ. “ಒಂದು, ದೊಡ್ಡ ಆನೆಯೊಂದು ದೀನ ಮುಖದಿಂದ ಎರಡು ಚೇಳುಗಳ ಕುಟುಕು ಸಹಿಸುತ್ತಿದೆ. ಇನ್ನೊಂದು, ಕಾಡುಮಿಕವು ಎರಡು ನಕ್ಷತ್ರಗಳಲ್ಲಿ ಕಣ್ಣು ಸಿಕ್ಕಿಸಿ ಬೀಸುಗಾಲಿನಿಂದ ನಡೆಯುತ್ತಿದೆ. ಬೆನ್ನಟ್ಟಿದ ಎರಡು ಚೇಳುಗಳು ಹಿಂದೆ ಬಿದ್ದಿವೆ. ಒಬ್ಬ ಹುಡುಗ ಮಧ್ಯೆ ನಿಂತಿದ್ದಾನೆ. ಎರಡರ ಮೇಲೂ ಲಿಪಿ ಇಲ್ಲ. “ವೃಶಜಾನ” ಹೆಸರಿನಿಂದ ಶ್ಲೇಷೆ ಮಾಡೀ, ಅವನನ್ನು “ವೃಶ್ಚಿಕ”ವೆಂದು ವ್ಯಂಗ್ಯಾರ್ಥ ಬರುವಂತೆ ಮೂಕಚಿತ್ರ ತೋರಿಸಿದ್ದಾನೆ. ಇದನ್ನು ವೇದಕಾಲದ ಶ್ರೇಷ್ಠ ವ್ಯಂಗ್ಯಚಿತ್ರವೆಂದು ಅರ್ಥೈಸಬಹುದು” ಎಂದು ತಮ್ಮ ಮುನ್ನುಡಿಯಲ್ಲಿ ಪುಣೇಕರರೇ ಉಲ್ಲೇಖಿಸಿದ್ದಾರೆ.
shankara mokashi punekarಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಅದ್ಭುತವಾಗಿ ಚಿತ್ರಿತವಾಗಿದೆ. ಪುರುಕುತ್ಸಾನಿ, ತ್ರಸದಸ್ಯು, ಸಿಂಹಭಟ್ಟ, ಭೀಮಭಟ್ಟ, ತಾರ್ಕ್ಷ್ಯ, ವೃಶಜಾನ, ಋಷಭ ಮುನಿ, ವಾಮದೇವ, ಕಾಲಿಯಾ, ಯಾದವೀದೇವಿ, ದುರ್ಗಸಿಂಹ ಮೊದಲಾದ ಪಾತ್ರಗಳು ಓದಿನ ಕುತೂಹಲ, ಬಿಗಿತವನ್ನು ಕಾಪಿಟ್ಟುಕೊಂಡು ಅಂತ್ಯದವರೆಗೂ ಸಾಗುತ್ತದೆ. ಜೀವನದ ಬಗೆಗಿನ ತಾತ್ವಿಕ ಪ್ರಶ್ನೆಗಳು, ಜಿಜ್ಞಾಸೆಗಳನ್ನು ಬಿಂಬಿಸುವಲ್ಲಿ ಲೇಖಕರ ಒಳನೋಟ ಗಮನಾರ್ಹವಾದದ್ದು.
ಯಾದವೀದೇವಿ, ಋಷಭಮುನಿಗಳ ಸಂಭಾಷಣೆ ನನಗೆ ತುಂಬ ಗಮನ ಸೆಳೆದ ಅಂಶ. “ನೀನು ಕೇಳಿದ ಪ್ರಶ್ನೆಗಳು ಬದುಕಿನ ಮೂಲ ಪ್ರಶ್ನೆಗಳು. ಕ್ಷಣಕ್ಷಣಕ್ಕೆ ಮನುಷ್ಯನಿಗೆ ಎದುರಾಗುತ್ತವೆ. ಅವುಗಳಿಗೆ ಉತ್ತರಗಳಿಲ್ಲ. ಆದರೆ ಉತ್ತರ ಕೊಡದಿದ್ದರೆ ಮನಸ್ಸಿಗೆ ಸಮಾಧಾನವಾಗದು. ಅದಕ್ಕಾಗಿ ನನ್ನಂಥ ಕೀರ್ತನಕಾರರು ಏನಾದರೊಂದು ಉತ್ತರ ಹುಡುಕಿ ಇಟ್ಟಿದ್ದೇವೆ. ಪ್ರಾರಬ್ಧ, ಸಂಚಿತ, ಪೂರ್ವಜನ್ಮದ ಪಾಪ – ಹೀಗೆ ಕತೆಗಳನ್ನು ಹುಟ್ಟಿಸುತ್ತೇವೆ. ಇವು ಕಂತೆಗಳಲ್ಲ; ಸತ್ಯಗಳೂ ಅಲ್ಲ. ನಿನ್ನ ಪಾಲಿಗೆ ಈ ಜೀವನ ಬಂದಿದೆ; ಅದನ್ನು ಎಷ್ಟು ಚೆನ್ನಾಗಿ ಬಳಸುತ್ತೀ, ಅದರ ಮೇಲೆ ನಿನ್ನದೇ ಕಲ್ಯಾಣ ನಿಂತಿದೆ; ನೀನು ಜ್ಞಾನಿಯಾಗಿದ್ದರೆ ಅದರ ಉದ್ದೇಶ ತಿಳಿದು ಸನ್ಮಾರ್ಗದಿಂದ ನಿನ್ನ ವರ್ತಮಾನವನ್ನು ರೂಪಿಸಿಕೊಳ್ಳುತ್ತಿ; ನೀನು ಜ್ಞಾನಿಯಲ್ಲದಿದ್ದರೂ ಇಂಥ ಕಾಲ್ಪನಿಕ ಭೀತಿಗಳ ಜಾಲ ಒಡ್ಡಿ ಧರ್ಮವು ನಿನ್ನನ್ನು ಸನ್ಮಾರ್ಗಕ್ಕೆ ಎಳೆಯುತ್ತದೆ” ಎನ್ನುತ್ತಾರೆ ಋಷಭ ಮುನಿಗಳು.
ಬದುಕಿನ ಕೌತುಕಮಯ ಪ್ರಶ್ನೆಗಳಿಗೆ “ಏನಾದರೊಂದು ಉತ್ತರ”ವನ್ನು ನಾವು ಹುಡುಕಿಕೊಳ್ಳುತ್ತಲೇ ಬಂದಿದ್ದೇವೆ. ಬಹುಶಃ ಅದರಿಂದಲೇ ಬದುಕಿದ್ದೇವೆ ಎಂಬ ಸೂಕ್ಷ್ಮ ಗ್ರಹಿಕೆಯನ್ನು ಲೇಖಕರು ಇಲ್ಲಿ ಬಿಂಬಿಸುತ್ತಾರೆ. ಇಂತಹ ತಾತ್ವಿಕ ಹೊಳಹುಗಳು ಕಥೆಯುದ್ದಕ್ಕೂ ಕಂಡು ಬರುತ್ತದೆ. ತಾರ್ಕ್ಷ್ಯ ಮತ್ತು ತ್ರಸದಸ್ಯುವಿನ ಮಾತುಕಥೆ, ಪುರುಕುತ್ಸಾನಿ ಮತ್ತು ತಾರ್ಕ್ಷ್ಯನ ಸಂಭಾಷಣೆ ಇವೆಲ್ಲವೂ ಇದೇ ರೀತಿಯ ನಿದರ್ಶನಗಳಾಗಿವೆ.
ಒಂದು ಕಾಲಘಟ್ಟದ ರಾಜಕೀಯ – ಸಾಮಾಜಿಕ ಕಥೆಯಾದ ಅವಧೇಶ್ವರಿಯು ಕಾಲಾತೀತವಾಗಿ, ಪ್ರತಿ ಓದುಗನಿಗೂ ತಮ್ಮದೇ ಕಥೆ, ತಮ್ಮದೇ ಪಾತ್ರ ಎನಿಸುವಷ್ಟು ಹತ್ತಿರವಾಗುತ್ತದೆ ಎಂಬುದು ಕಾದಂಬರಿಯ ವಿಶೇಷತೆ. ಲೇಖಕರು ಈ ಕಥೆಯನ್ನು ವೇದಕಾಲೀನ ಘಟನೆಗಳಿಗೆ ಹೋಲಿಸಿದರೂ, ಅದಕ್ಕೆ ಸಾಕಷ್ಟು ಆಧಾರ ಗ್ರಂಥಗಳನ್ನು ಉಲ್ಲೇಖಿಸಿದ್ದರೂ “ಈ ಯತ್ನವನ್ನು ಕಾದಂಬರಿಯಾಗಿಯೇ ಓದಬೇಕು, ಸಂಶೋಧನೆಯೆಂದಲ್ಲ – ಎಂದು ಬೇಡುತ್ತೇನೆ” ಎಂದು ಮುನ್ನುಡಿಯಲ್ಲಿ ತಿಳಿಸುತ್ತಾರೆ. ಆದರೆ ಇದು ಒಂದು ಕಥೆಯೇ ಸಂಶೋಧನೆಯೇ ಎಂದು ತರ್ಕಿಸುವ ಮುನ್ನವೇ “ಅವಧೇಶ್ವರಿ” ನಮ್ಮನ್ನು ಸಂಪೂರ್ಣವಾಗಿ ಸೆಳೆದುಕೊಂಡು ಆ ಕಾಲಘಟ್ಟದ ಎಲ್ಲ ಪಾತ್ರಗಳ ನಡುವೆ ನಿಲ್ಲಿಸಿ ಘಟನೆಗಳ ಭಾಗವಾಗಿಸಿಬಿಡುತ್ತದೆ ಎಂಬುದಂತೂ ತರ್ಕಾತೀತವಾದ ವಿಷಯ.

‍ಲೇಖಕರು Avadhi

July 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. kvtirumalesh

    ಪ್ರಿಯ ಸಂಯುಕ್ತ ಅವರೇ
    ನಾನು `ಅವಧೇಶ್ವರಿ’ಯನ್ನು ಓದಿಲ್ಲ, ಆದರೆ ಅದರ ಕುರಿತು ಕೇಳಿದ್ದೇನೆ. ಶಂಕರ ಮೊಕಾಶಿ ಪುಣೇಕರ್ ಕನ್ನಡದ ಒಬ್ಬ ಉತ್ತಮ ಲೇಖಕರು ಎಂದೂ ಕೇಳಿ ಗೊತ್ತು. ಒಂದೆರಡು ಬಾರಿ ಅವರನ್ನು ಕಾಣುವ ಅವಕಾಶವೂ ನನಗೆ ಒದಗಿತ್ತು. ಬಹಳ ಹಾಸ್ಯದ ವ್ಯಕ್ತಿ. ಆದರೆ ಅಷ್ಟೇ ಜಿಗುಟು.
    ನಿಮಗೆ ಗೊತ್ತಿರಲಾರದು ಎಂಬುದಕ್ಕೆ ಹೇಳುತ್ತಿದ್ದೇನೆ. ಮೊಕಾಶಿಯವರು ನವ್ಯ ಸಾಹಿತ್ಯವನ್ನು, ಅದು ಕನ್ನಡದಲ್ಲಿ ಬಂದ ಕಾಲದಲ್ಲಿ, ಬಹಳ ವಿರೋಧಿಸಿದವರು. ನವ್ಯಸಾಹಿತ್ಯ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಎಂಬ ಭಾವನೆಯನ್ನು ಇಟ್ಟುಕೊಂಡವರು ಅವರು. ಗೇಲಿ ಮಾಡುತ್ತಿದ್ದರು. (ಆದರೆ ತಾವು ಸ್ವತಃ ತಮ್ಮ ಇಂಗ್ಲಿಷ್ ಕವಿತೆಗಳ ಸಂಕಲನವೊಂದನ್ನು ಹೊರತಂದು ಇಂಡೋ ಆಂಗ್ಲಿಯನ್ ಪೋಯೆಟ್ ಅನಿಸಿಸಿಕೊಂಡವರು.) ಅವರ ಈ ಪ್ರತಿಕ್ರಿಯೆ ಸೈದ್ಧಾಂತಿಕಕ್ಕಿಂತ ಹೆಚ್ಚು ವೈಯಕ್ತಿಕವಾಗಿತ್ತು ಎಂದು ನನ್ನ ಭಾವನೆ.
    ಎರಡನೆಯದಾಗಿ, ೧೯೭೫ರಲ್ಲಿ ಇಂದಿರಾಗಾಂಧಿ ಎಮರ್ಜೆನ್ಸಿ ಘೋಷಿಸಿದಾಗ ಅದು ತಮ್ಮದೇ ಕಾರ್ಯಕ್ರಮ ಎಂಬಷ್ಟು ಬದ್ಧತೆಯಿಂದ ಮತ್ತು ಭಾವತೀವ್ರತೆಯಿಂದ ಅದನ್ನು ಬೆಂಬಲಿಸಲು ತೊಡಗಿದರು ನಮ್ಮ ಮೊಕಾಶಿ. ಇದು ನಮ್ಮಲ್ಲಿ ಹಲವು ಲೇಖಕರಿಗೆ ನೋವುಂಟುಮಾಡಿತು. ಒಬ್ಬ ಲೇಖಕನಿಗೆ ನಾಗರಿಕ ಸ್ವಾತಂತ್ಫ್ರ್ಯವೆನ್ನುವುದು ಜೀವಕ್ಕಿಂತ ಹೆಚ್ಚಿನದು. ಅದನ್ನೇ ಅದುಮಿದ ಎಮರ್ಜೆನ್ಸಿಯನ್ನು ಒಬ್ಬ ಲೇಖಕರೇ ಬೆಂಬಲಿಸುತ್ತಾರೆ ಎನ್ಫ್ನುವುದನ್ನು ನಂಬಲೂ ಕಷ್ಟವಾಗುತ್ತದೆ ಅಲ್ಲವೇ? ಆದರೆ ಮೊಕಾಶಿಯವರು ನಮ್ಮ ನಡುವೆ ಅದಕ್ಕೊಂದು ಉದಾಹರಣೆಯಾಗಿ ಇದ್ದವರು. ಇಂಥ ಬೇರೆಯವರೂ ಇದ್ದರು–ಉದಾಹರಣೆಗೆ ಖುಷ್ವಂತ್ ಸಿಂಗ್. (ಬಹುಶಃ ನೀವು ಪೋಸ್ಟ್ ಎಮರ್ಜೆನ್ಸಿ ತಲೆಮಾರಿನವರು ಇರಬಹುದು. ಆದ್ದರಿಂದ ಆ ಎಮೆರ್ಜೆನ್ಸಿ ಹೇಗಿತ್ತು ಎನ್ನುವುದು ನಿಮಗೆ ಗೊತ್ತಿರಲಾರದು.)
    ಮೊಕಾಶಿಯವರು ಇಂದಿರಾಗಾಂಧಿಯ ಭಕ್ತರೇ ಆಗಿಬಿಟ್ಟಿದ್ದರು; ಆಕೆಯ ಹೆಸರಿನಲ್ಲಿ ಅವರೊಂದು ಹಿಂದುಸ್ತಾನೀ ರಾಗವನ್ನು ಕೂಡ ಯೋಜಿಸಿದ್ದರು!
    ಮೊಕಾಶಿ ಎಂದಾಗ ನನಗಿದೆಲ್ಲವೂ ನೆನಪಾಗುತ್ತದೆ. ಅವರ `ಅವಧೇಶ್ವರಿ’ ಇಂದಿರಾಗಾಂಧಿಯನ್ನು ಸಮರ್ಥಿಸುವ ಕೃತಿ ಎಂದೂ ನಾನು ಕೇಳಿದ್ದೇನೆ: ಮಿಲ್ಟನ್ ದೇವರ ಕಾರ್ಯಗಳನ್ನು ಮನುಷ್ಯರಿಗೆ ತಿಳಿಯಪಡಿಸಲು `ಪ್ಯಾರಡೈಸ್ ಲಾಸ್ಟ್’ ಬರೆದಂತೆ! ಆದರೆ ಎಮರ್ಜೆನ್ಸಿ ಕಾಲದ ಇಂದಿರಾಗಾಂಧಿ ಮಾತ್ರ ದೈವೀಶಕ್ತಿಯಾಗಿರಲಿಲ್ಲ, ಸೈತಾನೀ ಶಕ್ತಿಯಾಗಿದ್ದಳು.ಈ ಶಕ್ತಿಯ ಕರಾಳ ಕ್ರಿಯೆಗಳನ್ನು ಸಮರ್ಥಿಸಲು ಶಂಕರ ಮೊಕಾಶಿ ಒಂದು ಕಾದಂಬರಿಯನ್ನು ಬರೆಯಬೇಕಾಯಿತು!
    ಒಬ್ಬ ಲೇಖಕನೆಂದು ನನಗೆ ಮೊಕಾಶಿಯ ಬಗ್ಗೆ ಆದರವಿದೆ–ಆದರೆ ಅವರ ಕೆಲವು ನಡವಳಿಕೆಗಳ ಬಗ್ಗೆ ಇಲ್ಲ.
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
    • samyuktha

      ನಮಸ್ತೆ ಸರ್.
      ಓಹ್! ಈ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಈಗ ಅವಧೇಶ್ವರಿಯನ್ನು ಮತ್ತೊಮ್ಮೆ ಓದಬೇಕು ಎನಿಸುತ್ತಿದೆ. 🙂

      ಪ್ರತಿಕ್ರಿಯೆ
  2. M A Sriranga

    ಶ್ರೀ ತಿರುಮಲೇಶ್ ಅವರಿಗೆ —– ಇಂದಿರಾಗಾಂಧಿಯವರ ಭಕ್ತರಾಗಿದ್ದರಿಂದಲೇ ಮೊಕಾಶಿಯವರು ‘ಅವಧೇಶ್ವರಿ’ ಕಾದಂಬರಿಯನ್ನು ಬರೆದರು ಎಂಬುದನ್ನು ಯಾರು ತಮಗೆ ಹೇಳಿದರೋ ಕಾಣೆ. ಆ ಕಾದಂಬರಿ ಪ್ರಕಟವಾದ ಹೊಸತರಲ್ಲೇ ನಾನು ಕೊಂಡು ಓದಿದ್ದೆ. ಅದರ ಮುನ್ನುಡಿಯಲ್ಲಿ ಮೊಹೆಂಜದಾರೋ ಸೀಲ್ಸ್ ಗಳನ್ನು ಅಧ್ಯಯನ ಮಾಡಿ ತಾವು ಈ ಕಾದಂಬರಿಯನ್ನು ಬರೆದಿರುವೆ ಎಂದು ದೀರ್ಘವಾಗಿ ಮೊಕಾಶಿಯವರು ವಿವರಿಸಿದ್ದಾರೆ. ಮೊಹೆಂಜದಾರೋ ಸಮಯದಲ್ಲಿ ಇಂದಿರಾಗಾಂಧಿಯವರು ಇರಲಿಲ್ಲ ಎಂದು ತಾವು ಒಪ್ಪುತ್ತೀರಿ ಎಂದು ಭಾವಿಸುತ್ತೇನೆ! ಜತೆಗೆ ಮೊಕಾಶಿಯವರು ‘ಕೇವಲ ಇಂಗ್ಲಿಷ್ ಪ್ರಾಧ್ಯಾಪಕರಾಗಿರಲಿಲ್ಲ’. ಅವರ ಆಸಕ್ತಿಗಳೂ ವಿಭಿನ್ನವಾಗಿದ್ದವು. ನಾನು ತುರ್ತುಪರಿಸ್ಥಿತಿಯ ಸಮಯದಲ್ಲಿ ಕಾಲೇಜು ವಿಧ್ಯಾರ್ಥಿ ಆಗಿದ್ದೆ. ತುರ್ತುಪರಿಸ್ಥಿತಿಯನ್ನು ಕೇವಲ ಮೊಕಾಶಿ ಅವರು ಮಾತ್ರ ಬೆಂಬಲಿಸಿರಲಿಲ್ಲ ಎಂದು ತಾವೇ ಹೇಳಿದ್ದೀರಿ. ವಿನೋಬಾಭಾವೆಯವರು ಅದನ್ನು ‘ಅನುಶಾಸನ ಪರ್ವ’ಎಂದು ಸ್ವಾಗತಿಸಿದ್ದರು. ಮತ್ತು ಮರೆಯಬಾರದ ಸಂಗತಿ ಎಂದರೆ ತುರ್ತುಪರಿಸ್ಥಿತಿಯ ಅವಾಂತರಗಳು ಉತ್ತರಭಾರತದಲ್ಲಿ ಹೆಚ್ಚಾಗಿದ್ದವು. ದಕ್ಷಿಣದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಅಷ್ಟಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಆಗ ದೇವರಾಜ ಅರಸರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದದ್ದು. ಇಲ್ಲವಾದರೆ ಶಿವರಾಮಕಾರಂತರು,ಗೋಪಾಲಕೃಷ್ಣ ಅಡಿಗರು ಜೈಲಿನಲ್ಲಿ ಇರಬೇಕಾಗುತ್ತಿತ್ತು. ಇನ್ನು ನವ್ಯಸಾಹಿತ್ಯದ ಬಗ್ಗೆ ಮೊಕಾಶಿಯವರ ವಿರೋಧದ ಬಗ್ಗೆ. ನವ್ಯ ಸಾಹಿತ್ಯದ ಹುಟ್ಟಿಗೆ ಕಾರಣ ಅಡಿಗರ ‘ವೈಯಕ್ತಿಕ ಸಾಹಿತ್ಯಿಕ ಸಮಸ್ಯೆ’ಯೋ ಅಥವಾ ಆ ಕಾಲದ ಅನಿವಾರ್ಯ ಸಾಹಿತ್ಯಿಕ ಸಮಸ್ಯೆಯಾಗಿತ್ತೋ ಎಂಬ ಚರ್ಚೆ ‘ಉತ್ತರವಿಲ್ಲದ ಪ್ರಶ್ನೆ’ ಎಂದು ನನ್ನ ಭಾವನೆ. ಒಂದಂತೂ ನಿಜ ನವ್ಯಸಾಹಿತ್ಯ ಒಂದು ಪೀಳಿಗೆಯ ಓದುವ ಹವ್ಯಾಸವನ್ನೇ ಮುರಿಯಿತು. ಆಗ ಆದ ನಷ್ಟ ಈಗ ಸ್ವಲ್ಪ ಸ್ವಲ್ಪ ತುಂಬಿಕೊಳ್ಳುತ್ತಿದ್ದೆ.

    ಪ್ರತಿಕ್ರಿಯೆ
  3. ಪು.ಸೂ.ಲಕ್ಷ್ಮೀನಾರಾಯಣ ರಾವ್

    ಚೆನ್ನಾಗಿ ಸಾರಾಂಶಿಸಿದ್ದೀರಿ. ಇದೊಂದು ಪರಿಚಯಾತ್ಮಕ ಲೇಖನ ಅಂತ ನನಗೆ ಅನ್ನಿಸುತ್ತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: