ವಿನತೆ ಶರ್ಮ
ಆಲದ ಬಿಳಲಿನ ಹಾಡು
ಹಾಡು ಚಿಗುರು ಬೇರಾಗಿ
ಸೀಳು ಕಂದಕದಲ್ಲಿ
ಹಿಮಾಲಯವಾಗುವ

ಲಕ್ಷಣ ತೋರಿ
ಧೂಮಕೇತುವ ಮೀರಿ
ನೆಲಕ್ಕೆ ಚಿಮ್ಮುವ ಕಾಜಾಣದಂತೆ.
ಕಾದ ಮರುಭೂಮಿಯ,
ಹಲ್ಲಿಯ ತಾಳ್ಮೆ
ಇದೆ ಹಾಡುಗಳಿಗೆ,
ಹದ ಮಾಡಿದ ಬಿಲ್ಲ
ಒಡೆಯ ಇಡುವ
ಗುರಿ ಇಲ್ಲ.
ಸುರಿಸುರಿದು ಹರಿವ ಲಾವಾರಸದ
ಬಣ್ಣಕ್ಕೆ ಜೊತೆಯಾಗುವೆ
ಬಾ ಎಂದ ಬೆಂಕಿ ಕೆನ್ನಾಲಿಗೆ
ಬಿಡದೆ ನೆಕ್ಕಿದ ಹೆಣ ಹೇಳಿದ
ಉದ್ದ ಜಡೆಯ ಕತೆಗಳಂತೆ.
ಅರ್ಥವಿದೆಯೇ ಅಲ್ಲಿ, ಅರ್ಥವಾಯಿತೇ?
ಕೇಳುವ ತೊಗಲು ಬೊಂಬೆಗಳಿಗೆ
ಬಲು ಮೋಜು.
ತಮ್ಮ ಕತೆಗೆ
ಯಾರದ್ದದು ದನಿ – ಸಿಡುಕಾಟ!
ಅವರ ಹಾಡುಗಳ ಒಡೆತನ,
ಅವರದ್ದೇ ನಿಜ.
ಉಜ್ಜುವ ಮರಳಿನ ಸುಯ್
ದನಿಗೆ ಇರುವ ರಾಗ ತಾಳ,
ಬುವಿಯೊಳಗೆ ಹರಿವ ನದಿಯಂತೆ.
ಸುಮ್ಮನೆ ಕೂತ ಬಂಡೆಯ ಹೃದಯ,
ಹೊಸಮಳೆ ಬಿದ್ದ ಮಣ್ಣಿನ ಆರ್ದ್ರತೆ
ಬಟಾಬಯಲಿನಲ್ಲಿ ಉಕ್ಕುವ
ನೀರಿನ ಬುಗ್ಗೆಗಳ ಜೀವತಂತು.
ಹಾಡುಗಳು
ಹೇಳಿಕೊಳ್ಳದೇ
ಹರಡುವ
ಆಲದ ಬಿಳಲುಗಳು.






0 Comments