ಫ್ಲಾಟ್ ಫಾರಂ ತಯಾರಿಲ್ಲದೆ ನುಗ್ಗಿದ ರೈಲಿದು…GST!

ನೋಟು ರದ್ಧತಿ “ ಕ್ರಾಂತಿ” ನಡೆದ ಪರಿಯನ್ನು ಯಶಸ್ವೀ ಮಾಡೆಲ್ ಎಂದು ಪರಿಗಣಿಸುವುದಿದ್ದಲ್ಲಿ, ಜುಲೈ ಒಂದರ GST ತೆರಿಗೆ ಪದ್ಧತಿ ಚಾಲನೆ ಕೂಡ ಅದೇ ಮಾಡೆಲ್ಲನ್ನು ಅನುಸರಿಸಿದ “ಕ್ರಾಂತಿ” ಎಂದು ಹೇಳಬೇಕಾಗುತ್ತದೆ. ದೂರದ್ರಷ್ಟಿಯಾಗಲೀ, ಎಚ್ಚರವಾಗಲೀ ಇಲ್ಲದ ಅಧಿಕಾರಿ ಗಢಣ ರಾಜಕೀಯ ಒತ್ತಡಗಳಿಗೆ ಮಣಿದು, ಅವರು ನಂಬಿದ “ದೇವರುಗಳ ಮೇಲೆ ಭಾರಹಾಕಿ” ಜಾರಿಗೆ ತರುವ ಇಂತಹ “ಎಮರ್ಜನ್ಸಿ ಸುಧಾರಣೆಗಳು” ಕೊನೆಗೆ “ಸುಧಾರಣೆ” ಅನ್ನಿಸದಿದ್ದರೂ “ಎಮರ್ಜನ್ಸಿ”ಯನ್ನಂತೂ ಹುಟ್ಟು ಹಾಕುತ್ತಿವೆ.

GST ತಯಾರಿ (!) ಯನ್ನು ಕಂಡು ದಿಗಿಲುಬಿದ್ದಿದ್ದ ಬಿಜೆಪಿಯ ಏಕೈಕ ಕ್ರುಸೇಡರ್ ಸುಬ್ರಹ್ಮಣ್ಯ ಸ್ವಾಮಿಯವರೇ ಸ್ವತಃ ಮೊನ್ನೆ ಈ GST ಮೋದಿಯವರ ‘ವಾಟರ್ ಲೂ’ ಆದೀತೆಂದು ಅಭಿಪ್ರಾಯಪಟ್ಟದ್ದು ಸುಮ್ಮನೆ ಅಲ್ಲ.

ನೋಟು ರದ್ಧತಿ ಆದ ತಿಂಗಳೊಪ್ಪತ್ತಿನೊಳಗೇ ರಿಸರ್ವ್ ಬ್ಯಾಂಕು ನೂರಾರು ತಿದ್ದುಪಡಿ ಪ್ರಕಟಣೆಗಳನ್ನು ದಿನಕ್ಕೆರಡು-ಮೂರರ ಲೆಕ್ಕದಲ್ಲಿ ಹೊರಡಿಸುತ್ತ ಬಂದದ್ದನ್ನು ನಾವೀಗ ಮರೆತಾಗಿದೆ. GSTಯಲ್ಲಿ ಕೂಡ ಅದೇ ಮಾದರಿ ಮುಂದುವರಿದಿದ್ದು, ಅದು ಚಾಲ್ತಿಗೆ ಬರುವ ಮುನ್ನಾದಿನ ಸಂಜೆ ರಸಗೊಬ್ಬರಗಳ GST ಸ್ಲಾಬ್ ಬದಲಿಸಿದ್ದನ್ನು ನೆನಪಿಸಿಕೊಳ್ಳಿ.

ಇಂತಹ ನೂರಾರು ದ್ವಂಧ್ವಗಳನ್ನು GST ತೆರಿಗೆ ದರಪಟ್ಟಿಯಲ್ಲಿ ಲೆಕ್ಕಪತ್ರ ಪರಿಣತರು ಗುರುತಿಸಿದ್ದು, ಇದು ಹಲವೆಡೆ ಕಾನೂನು ಜಟಾಪಟಿಗಳಿಗೆ-ದಾವೆಗಳ ಸರಮಾಲೆಗೆ ಕಾರಣ ಆಗುವ ನಿರೀಕ್ಷೆ ಇದೆ.

ನಾನಿಲ್ಲಿ ತಂತ್ರಜ್ನಾನಕ್ಕೆ ಸಂಬಂಧಿಸಿದಂತೆ GST ನಿರ್ಮಾಪಕರು ತಮ್ಮ ಕಾಲಿಗೆ ತಾವೇ ಎಲ್ಲೆಲ್ಲಿ ಗುಂಡು ಹಾರಿಸಿಕೊಂಡಿದ್ದಾರೆಂಬುದನ್ನು ವಿವರಿಸಲು ಪ್ರಯತ್ನಿಸಿದ್ದೇನೆ.

ತಾಂತ್ರಿಕ ತಯಾರಿ ಏನೇನೂ ಸಾಲದು:

ಲೋಕಸಭೆಯಲ್ಲಿ ಸಂಸದ ಜಯದೇವ್ ಗಲ್ಲಾ ಎಂಬವರು 5-4-2017ರಂದು ಒಂದು ಪ್ರಶ್ನೆ (ನಂ: 5064)ಯನ್ನು ಮಾಹಿತಿ ಮತ್ತು ತಂತ್ರಜ್ನಾನ ಸಚಿವರಿಗೆ ಕೇಳಿದರು. ಆಧಾರ್ ನಂಬರಿಗೆ ಆಧಾರ ಆಗಿರುವ UIDAIಗಿರುವ ದೈನಿಕ ಅಥೆಂಟಿಕೇಶನ್ ಸಾಮರ್ಥ್ಯ ಎಷ್ಟು ಎಂಬ ಪ್ರಶ್ನೆಗೆ ಆ ಇಲಾಖೆಯ ರಾಜ್ಯ ಸಚಿವ ಪಿ.ಪಿ. ಚೌಧರಿ ಅವರು ಕೊಟ್ಟ ಉತ್ತರ ದಿನಕ್ಕೆ 10 ಕೋಟಿ ಪ್ರಮಾಣಕ್ಕೆ ಏರಿಸಲು ತಯಾರಿಗಳು ನಡೆದಿವೆ ಎಂದು!

ಅಂದಾಜು 125 ಕೋಟಿ ಜನಸಂಖ್ಯೆ ಇರುವ ದೇಶ “ಡಿಜಿಟಲ್ ಇಂಡಿಯಾ” ಆಗಲು ಆಗಿರುವ ತಯಾರಿ ಕೇಳಿದರೆ ಭಯವಾಗುತ್ತದೆ. ಇಂತಹದೆಲ್ಲ ನಡೆಯಬೇಕಾದರೆ ಎರಡು ಮೂಲಭೂತ ಅಂಶಗಳಲ್ಲಿ ಪೂರ್ಣಪ್ರಮಾಣದ ತಯಾರಿ ಅತ್ಯಗತ್ಯ. ಒಂದು ಆಧಾರ್ ಇರುವ ಸರ್ವರ್ ನ ಸಾಮರ್ಥ್ಯ ಮತ್ತೊಂದು ದೇಶದ ಇಂಟರ್ನೆಟ್ ಸಂಪರ್ಕ ಸಾಮರ್ಥ್ಯ ಹಾಗೂ ವ್ಯಾಪ್ತಿ. ಇವೆರಡೂ ತಯಾರಿಲ್ಲದಾಗ, ಪರಿಸ್ಥಿತಿ ಹದಗೆಡದೇ ಬೇರೆ ದಾರಿ ಇಲ್ಲ. ಮೊನ್ನೆ GSTಗೆ ಭರದ ತಯಾರಿಗಳಾಗುತ್ತಿರುವಾಗಲೇ ಈ ಹುಳುಕು ಹೊರಬೀಳತೊಡಗಿದೆ. GST ನೋಂದಣಿ ಮಾಡಿಕೊಳ್ಳ ಬಯಸುವ ಅಂಗಡಿ-ವ್ಯವಹಾರಗಳ ಮಾಲಕರಿಗೆ ಆಧಾರ್ ವೆರಿಫಿಕೇಷನ್ ಪ್ರಕ್ರಿಯೆ ತೀರಾ ಕಳಪೆಯಾಗಿ ನಡೆದ ಬಗ್ಗೆ ಮಾಹಿತಿ ಸಿಗುತ್ತಿದೆ. PINಸಂಖ್ಯೆ ಗೆ ಕಾಯುವುದು, PIN ಬರುವ ಹೊತ್ತಿಗೆ ಸರ್ವರ್ ಸುರಕ್ಷತಾ ಕಾರಣಗಳಿಗಾಗಿ TIMEOUT ಆಗಿರುವುದು, validation failure… ಹೀಗೆ ಹಲ್ಲು-ಕಡಲೆ ಒಟ್ಟೊಟ್ಟಿಗೇ ಸಿಕ್ಕು, GST ನೋಂದಣಿ ಸುಸೂತ್ರ ಆದದ್ದು ತೀರಾ ಕಷ್ಟಕ್ಕೆ.

ಈಗ ಸುಪ್ರೀಂ ಕೋರ್ಟ್ ಮಾರ್ಚ್ ತಿಂಗಳಲ್ಲಿ ಎಲ್ಲ ಮೊಬೈಲ್ ಬಳಕೆದಾರರಿಗೆ ಆಧಾರ್ ವೆರಿಫಿಕೇಶನ್ ಕಡ್ಡಾಯ ಎಂದಿದೆ. ಡಿಜಿಟಲ್ ಪಾವತಿ ವ್ಯವಸ್ಥೆ – ಕಂಪನಿ ವ್ಯವಹಾರಗಳು – ಬೇರೆ ಶಾಸನಾತ್ಮಕ ಕಂಪ್ಲಯನ್ಸ್ ಗಳ ಹೆಸರಿನಲ್ಲಿ ಆಧಾರ್ ಸರ್ವರ್ ಹೊರಬೇಕಾಗಿರುವ ದೈನಿಕ ಹೊರೆ ಎಷ್ಟು, ದೇಶದ ಈಗಿನ ದೈನಂದಿನ ಬೇಡಿಕೆ ಎಷ್ಟು, ಭವಿಷ್ಯದ ಬೇಡಿಕೆ ಎಷ್ಟು ಮತ್ತು ಸರ್ವರ್ ಸಾಮರ್ಥ್ಯ ಎಷ್ಟು ಎಂಬುದನ್ನು ಆ ನಿಲೇಕಣಿಯ ಭಗವಂತನೇ ಬಲ್ಲ!

ಆಧಾರ್ ಕಥೆ ಹಾಗಾದರೆ, ಇನ್ನು ಸರ್ಕಾರದ ಕಾಸಿನ ಚೀಲಗಳದು ಇನ್ನೊಂದೇ ವ್ಯಥೆ. ಕೇಂದ್ರ ಹಣಕಾಸು ಇಲಾಖೆಯ, ವಾಣಿಜ್ಯ ಮತ್ತು ಕಂಪನಿ ವ್ಯವಹಾರಗಳ ಇಲಾಖೆಗಳ ಹೆಚ್ಚಿನ ಚಟುವಟಿಕೆಗಳು ಆನ್ ಲೈನ್ ಆಗಿಯೇ ನಡೆಯುತ್ತವೆ ಆದಾಯ ತೆರಿಗೆ, GST, ಕಂಪನಿ ವ್ಯವಹಾರಗಳ ಕಂಪ್ಲಯನ್ಸ್… ಹೀಗೆ. ತಮಾಷೆ ಎಂದರೆ, ಇವು ಒಂದೊಂದು ಒಂದೊಂದು ವಿಧದ ಸಾಫ್ಟ್ ವೇರ್, ಪ್ರೋಗ್ರಾಂ, ವರ್ಷನ್ ಗಳನ್ನು ಬಳಸುತ್ತವೆ. ಅದರಲ್ಲಿ ಸ್ಟಾಂಡರ್ಡೈಸೇಷನ್ ಸುಳಿವೇ ಇಲ್ಲ. ಉದಾಹರಣೆಗೆ ಆದಾಯ ತೆರಿಗೆ ಇಲಾಖೆ ಬಳಸುವ ಜಾವಾ ಸಾಫ್ಟ್ ವೇರ್ ವರ್ಷನ್ ಮತ್ತು ಕಂಪನಿ ವ್ಯವಹಾರಗಳ ಇಲಾಖೆ ಬಳಸುವ ಸಾಫ್ಟ್ ವೇರ್ ವರ್ಷನ್ ಗಳಿಗೆ ತಾಳಿತಂತಿ ಇಲ್ಲ. ಒಬ್ಬರಿಗೆ ಇನ್ನೂ ಇಂಟರ್ನೆಟ್ ಎಕ್ಸ್ ಪ್ಲೋರರ್ ಬ್ರೌಸಿಂಗ್ ಬೇಕಿದ್ದರೆ ಇನ್ನೊಬ್ಬರಿಗೆ ಕ್ರೋಂ ಬೇಕು… ಇವೆಲ್ಲ ಸ್ಟಾಂಡರ್ಡೈಸ್ ಆಗಿಲ್ಲ. ಇದರಿಂದಾಗಿ ತೆರಿಗೆ ಪಾವತಿದಾರರು, ಅವರ ಅಕೌಂಟಂಟ್ ಸಮುದಾಯದವರು ಕೊಂಕಣಸುತ್ತಿ ಮೈಲಾರ ತಲುಪಬೇಕಾಗುತ್ತಿದೆ.

ಹೇಗಿರಬೇಕಿತ್ತು?

ಸಾಮಾನ್ಯವಾಗಿ ಒಂದು ಸಣ್ಣ ಕಂಪನಿ ಕೂಡ ತನ್ನ ಆಡಳಿತ ವ್ಯವಸ್ಥೆಯನ್ನು ಬದಲಿಸುವ ಮೊದಲು ಭದ್ರವಾದ ತಳಹದಿ ನಿರ್ಮಿಸಿ, ಹೊಸ ವ್ಯವಸ್ಥೆಯ ಕುರಿತು ಅದರ ಬಳಕೆದಾರರಿಗೆ ಒಂದಾರು ತಿಂಗಳು ಪರಿಪೂರ್ಣ ತರಬೇತಿ ನೀಡುತ್ತದೆ. ಹಿಂದೆ ಮನಮೋಹನ್ ಸಿಂಗ್ ಸರಕಾರದ ಕಾಲದಲ್ಲಿ ವಾಣಿಜ್ಯ ತೆರಿಗೆಯು VAT ವ್ಯವಸ್ಥೆಗೆ ಬದಲಾದಾಗ ಕೆಲವು ತಿಂಗಳು ಟ್ರಯಲ್ ರನ್ ಕೊಟ್ಟ ಚರಿತ್ರೆ ಇದೆ. ಆದರೆ, ಅದನ್ನೇನೂ ಮಾಡದೆ GST ಜಾರಿಗೆ ತರಲಾಗಿದೆ. GST ಆಕ್ಟ್ ಅಥವಾ ರೂಲ್ಸ್ ಎರಡೂ ಸಿದ್ಧವಿಲ್ಲದೆ ತರಬೇತಿಯ ಹೆಸರಲ್ಲಿ ಆರು ತಿಂಗಳು ನಾಮ್ ಕೇ ವಾಸ್ತೆ ಹೈಪಾಥೆಸಿಸ್ ವಿವರಿಸಲಾಯಿತೇ ಹೊರತು ವಾಸ್ತವ ಕಾರ್ಯವ್ಯವಸ್ಥೆಯನ್ನು ಪರಿಚಯಿಸಲಿಲ್ಲ. ಇದು ಒಂಥರಾ ಎಂಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿಯ ಎದುರು ರೋಗಿಯನ್ನು ಮಲಗಿಸಿ, ಹೊಟ್ಟೆ ಕೊಯ್ದು ಹಾಕ್ತಾ ಹಾಕ್ತಾ ಸರ್ಜರಿ ಹೇಗೆಂದು ಕಲಿ ಎಂದಂತಾಗಿದೆ.

GST  ವರದಿಗಳನ್ನು ಸಲ್ಲಿಸುವಾಗ ಸಂಭವಿಸಬಹುದಾದ ತಪ್ಪುಗಳಿಗೆ, ಈಗಾಗಲೇ ನಿಯಮಗಳ ಪಟ್ಟಿಯಲ್ಲಿರುವ ದ್ವಂಧ್ವಗಳಿಂದಾಗಬಹುದಾದ ವ್ಯವಹಾರ ಮತ್ತು ಸಮಯದ ನಷ್ಟಗಳಿಗೆ, ದಾವೆ-ಗದ್ದಲಗಳಿಗೆ ಪರಿಹಾರ ಏನೆಂಬುದು ಎಲ್ಲೂ ಸ್ಪಷ್ಟವಿಲ್ಲ. ಕೇಳೋಣ ಎಂದರೆ ಕಾಲ್ ಸೆಂಟರ್ ಗಳಲ್ಲಿ ಕಾಲ್ ಎತ್ತುವುದಿಲ್ಲ. ಇ ಮೇಲ್ ಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿಬಿಟ್ಟಿವೆ. ಮಾಧ್ಯಮಗಳಲ್ಲಿ ಮಾತ್ರ ಹೊರೆ ಹೇರಿದ್ದೂ ಸಾಧನೆ ಎಂಬಂತೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ! ಪ್ರತೀ ಜಿಲ್ಲಾ ಮಟ್ಟದಲ್ಲಿ ಇದಕ್ಕಾಗಿ ಹೆಲ್ಪ್ ಡೆಸ್ಕ್ ಗಳನ್ನು ಸರಕಾರ ರೂಪಿಸಬಹುದಿತ್ತು; ಜನರನ್ನಲ್ಲದಿದ್ದರೂ ಅಕೌಂಟಂಟ್ ಗಳು, ಅಧಿಕಾರಿಗಳನ್ನು, ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು.

ಸರ್ಕಾರಕ್ಕೆ ನಿಜಕ್ಕೂ ತನ್ನೆಲ್ಲ ಆರ್ಥಿಕ ಸುಧಾರಣೆಗಳು ಸುಸೂತ್ರ ನಡೆಯಬೇಕೆಂಬ ಮನಸ್ಸಿದ್ದರೆ, ವಿಶಾಲವಾದ ಮತ್ತು ಸಮರ್ಥವಾದ ತಳಹದಿಯ ಸರ್ವರ್ ಫ್ಲಾಟ್ ಫಾರಂ ನಿರ್ಮಿಸಿ, ಅದರ ಸುರಕ್ಷತೆ, ಸಾಫ್ಟ್ ವೇರ್, ಬ್ರೌಸರ್ ಇತ್ಯಾದಿಗಳನ್ನೆಲ್ಲ ಸ್ಟಾಂಡರ್ಡೈಸ್ ಮಾಡಿ, GST/PAN/AADHAR ಎಲ್ಲ ಮಾಹಿತಿಗಳೂ ಒಂದೇ ಕಡೆ ಒಂದು ದ್ರಷ್ಟಿಕೋನಕ್ಕೆ ಲಭ್ಯವಾಗುವಂತೆ ಏರ್ಪಡಿಸಿಕೊಂಡ ಬಳಿಕ ಈ ಎಲ್ಲ ಸರ್ಕಸ್ಸುಗಳಿಗೆ ಹೊರಡಬಹುದಿತ್ತು.

ಆದರೆ ಏನೋ ಗಡಿಬಿಡಿಗೆ ಬಿದ್ದವರಂತೆ ವ್ಯವಹರಿಸುತ್ತಿರುವ ಕೇಂದ್ರ ಸರ್ಕಾರ “ಅವ್ಯವಸ್ಥೆಯೇ ವ್ಯವಸ್ಥೆ” ಎಂದು ಹುಂಬತನ ತೋರಿಸುತ್ತಿದೆ.

‍ಲೇಖಕರು avadhi

July 3, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Shekar Bhat

    Even after so many years of planning and efforts, if the platform is still being built, it is better to start the train, Let there be some accidents. Let us learn from them and learn a lesson.

    ಪ್ರತಿಕ್ರಿಯೆ
  2. Ramesh H Adiga

    Do you mean to say whatever is existing is the best? And it should remain so???

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: