ಮುಂಬೈ ಮಳೆಗಾಲ – ಆಲಾರೇ ಪಾಉಸ್ ಆಲಾ!

ರಾಜೀವ ನಾರಾಯಣ ನಾಯಕ

ಆಗ ಮಳೆಗಾಲವೆಂದರೆ ಮಳೆಗಾಲವೇ! ಧೋ ಎಂದು ಸುರಿವ ಮಳೆಯ ವೈಭವವನ್ನು ನೋಡಿಯೇ ದೊಡ್ಡಾದವರು ನಾವು. ಉತ್ತರ ಕನ್ನಡ ಜಿಲ್ಲೆಯ  ಹುಟ್ಟಿದೂರು ವಾಸರೆಯಲ್ಲಿರುವಾಗ ಕಾಡು, ಬೆಟ್ಟ, ಗುಡ್ಡಸಾಲುಗಳಲ್ಲಿ ಬೀಳುವ ಜಡಿಮಳೆಯ ಜನ್ನತ್ ಕಂಡವರು. ಹೈಸ್ಕೂಲಿಗೆ ಹೋಗಲು ಅಂಕೋಲೆಯ ಅಜ್ಜಿಮನೆಯಲ್ಲುಳಿದಾಗ ಚೌಕದಳ್ಳಿಯ ವಿಶಾಲ ಬಯಲಲ್ಲಿ, ಮುಗಿಲಿನಿಂದ ಪರದೆಯಿಳಿಸುತ್ತಾ ಬರುವ ಮಳೆಯಲ್ಲಿ ವಿಸ್ಮಯಗೊಂಡವರು.

ಮಾಯದಂಥ ಆ ಮಳೆಯ ಆರ್ದ್ರ ನೆನಪುಗಳಿಂದಾಗಿ ನನಗೆ ಮುಂಬೈ ಮಳೆ ಬಗ್ಗೆ ಪ್ರಾರಂಭದಲ್ಲಿ ಒಂಥರ ಅನಾಸಕ್ತಿ, ಅನಾದರ ಇತ್ತು. ಅಷ್ಟೇ ಅಲ್ಲ, ಸಣ್ಣ ಮಳೆಗೂ ರಸ್ತೆಗಳು ಹೊಂಡ ಬೀಳುವ, ಟ್ರಾಫಿಕ್ ಜ್ಯಾಮ್ ಉಂಟಾಗುವ ಮತ್ತು ರೇಲ್ವೇ ಹಳಿಗಳು ಮುಳುಗುವ ತಾಪತ್ರಯಕ್ಕೆ ಮಳೆಯಂಥ ಮಳೆಯನ್ನು ಶಪಿಸುವ ಮಟ್ಟಕ್ಕೂ ತಲುಪಿದ್ದೆ! ಆದರೆ ಅಂಥ ಗೊಣಗಾಟದಲ್ಲೇ ಮುಂಬೈನ ಕೆಲವು ಪ್ರದೇಶಗಳಲ್ಲಿ ಅಚಾನಕ್ಕಾಗಿ ಅಡ್ಡಾಡುವ ಪ್ರಸಂಗಗಳು ಬಂದಾಗ, ನಿಧಾನವಾಗಿ ಮುಂಬೈಮಳೆಯ ಗಮ್ಮತ್ತು

ಗೊತ್ತಾಯ್ತು! ಮರಿನ್ ಡ್ರೈವ್, ಗೇಟ್ ವೇ, ನರಿಮನ್ ಪಾಯಿಂಟುಗಳಂಥ ಪ್ರದೇಶಗಳಲ್ಲಿ ಮುಂಬೈ ಬಾರೀಶ್‌ನ ಅಸಲಿಯತ್ ಕಂಡುಕೊಂಡೆ. ಮಳೆಹನಿಗಳು ಕಾಂಕ್ರೀಟು ಕಾಡಿನಲ್ಲಿ ಕೂಡ ಜೀವ ಜಿನುಗಿಸಬಲ್ಲವು ಎನ್ನುವ ಅರಿವಾಗಿದೆ. ಈಗಂತೂ ಪ್ರತಿ ಮಳೆಗಾಲದಲ್ಲೂ  ಕೆಲವು ಜಾಗಗಳಿಗೆ ಕಡ್ಡಾಯವಾಗಿ ಭೇಟಿ ನೀಡುತ್ತೇನೆ.  ದಕ್ಷಿಣ ಮುಂಬೈನ ಹೃದಯಭಾಗವಾದ ಓವಲ್ ಗ್ರೌಂಡ್‌ನ್ನು ಪ್ರತಿ ಮಳೆಗಾಲದಲ್ಲೂ ಒಮ್ಮೆಯಾದರೂ ನೆನೆಯುತ್ತಾ ಪ್ರದಕ್ಷಿಣೆಗೈಯುವ ಹರಕೆ ಕೂಡ ಹೊತ್ತಿದ್ದೇನೆ!

ಎಪ್ರಿಲ್-ಮೇ ತಿಂಗಳ ಬಿರುಬಿಸಿಲ ತಾಪಕ್ಕೆ ಬೆಂದುಹೋಗುವ ಮುಂಬೈಯಿಗರು ಮಳೆಗಾಲದ ಕಿರಿಕಿರಿಗಳ ಅರಿವಿದ್ದರೂ ಬಾರೀಶ್ ಬೇಗ ಬರಲಿ ಎಂದು ಬೇಚೈನಿಯಿಂದ ಕಾದಿರುತ್ತಾರೆ. ಲೋಕಲ್ ಟ್ರೇನುಗಳ ಗಚ್ಚಾಗಿಚ್ಚಿಯಲ್ಲಿ, ಬಿಲ್ಡಿಂಗುಗಳ ಧಗೆಯಲ್ಲಿ ಹೈರಾಣಾಗುದ ಜೀವಗಳಿಗೆ ಮಳೆಧಾರೆಯೇ ಮೋಕ್ಷದ ದಾರಿಯಾಗುತ್ತದೆ! ಪಹಿಲಾ ಬಾರೀಶ್ ಬಿದ್ದೊಡನೆ ಬಡೇ ಚೋಟೆ ಲಡ್ಕಾ ಲಡ್ಕೀ ಎಂಬ ಭೇದವಿಲ್ಲದೇ ಬಿಲ್ಡಿಂಗಿನಿಂದ ಹೊರಬಂದು ಸಾಮೂಹಿಕ ಜಲಾಭಿಷೇಕ ಮಾಡಿಸಿಕೊಳ್ಳುತ್ತಾರೆ. ಮುಂಗಾರು ಕಾಲಿಡುತ್ತಿದ್ದಂತೆಯೇ ಮುಂಬೈನ ಚೌಪಾಟಿ, ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್, ವರ್ಲಿ ಸೀ ಫೇಸ್, ಗೇಟವೇಗಳಲ್ಲಿ ವರ್ಷೋತ್ಸವವೇ ಶುರುವಾಗುತ್ತದೆ.

ಮುಗಿಲು ಮತ್ತು ಕಡಲು ಒಂದಾಗುವಲ್ಲಿ ಎದ್ದೇಳುವ ಕಪ್ಪು ಮೋಡಗಳು ಆರ್ಭಟದಿಂದ ರಂಗಪ್ರವೇಶಿಸುವ ರಕ್ಕಸ ಪಾತ್ರಗಳಂತೆ ಕಾಣುತ್ತವೆ. ರಭಸದಲ್ಲಿ ಬೀಸುವ ಗಾಳಿಗೆ ಮಳೆಧಾರೆ ಮತ್ತು ಕಡಲ ತೆರೆಗಳು ಕಿನಾರೆಯತ್ತ ಧಾವಿಸುವ ನೋಟ ಅದ್ಭುತ!  ದಡದುದ್ದಕ್ಕೂ ಒಣ ದರ್ಪದಿಂದ ನಿಂತಿರುವ ಗಗನಚುಂಬಿ ಇಮಾರತುಗಳು ಮಳೆಯ ಹೊಡೆತದಲ್ಲಿ ಮಿಂದು ಕೊಂಚ ವಿನೀತಭಾವದಲ್ಲಿ ಅದ್ದಿಕೊಳ್ಳುತ್ತವೆ. ಮುಂಬಯಿಯ ಲ್ಯಾಂಡ್ ಮಾರ್ಕ್ ಗೇಟ್ ವೇ ಆಫ್ ಇಂಡಿಯ ಉಕ್ಕುವ ಸಮುದ್ರದಲ್ಲಿ ತೇಲುವ ದೋಣಿಯಂತೆ ಕಾಣುವುದು. ಮೈಲಿಗಟ್ಟಲೆ ಉದ್ದದ ಸಮುದ್ರ ತೀರದಲ್ಲಿ ನಿಂತಿರುವ ದೀಪಕಂಬಗಳ ಬೆಳಕು ಮಳೆಯಲ್ಲಿ ಚದುರುವ ರಾತ್ರಿದೃಶ್ಯ ಮೋಹಕವಾಗಿರುತ್ತದೆ.

ವರ್ಲಿ ಸೀಫೇಸಿನಲ್ಲಿ ಸಮುದ್ರ ದಂಡೆಗುಂಟ ತಡೆಗೋಡೆಗೆ ಚಾಚಿರುವ ಸಿಮೆಂಟಿನ ಚತುಷ್ಪದಿಗಳಿಗೆ ಅಪ್ಪಳಿಸಿ ಸಿಡಿಯುವ ತೆರೆಗಳಲ್ಲಿ ಮೀಯಲು ಬರುವ ದೊಡ್ಡ ದಂಡೇ ಇರುತ್ತದೆ. ಮನ್ಸೂನ್ ಪ್ರಾರಂಭದಲ್ಲಿ ಉಕ್ಕೇರುವ ಸಮುದ್ರವು  ದಡಗಳಲ್ಲಿ ನೆಗೆಯುವ ರೋಮಾಂಚನವನ್ನು ಹೆಚ್ಚಿಸಿಕೊಳ್ಳಲು ಕೈಯಲ್ಲಿ ಬಿಯರ್ ಬಾಟಲ್/ ಕ್ಯಾನ್ ಹಿಡಿದು ಬರುವ ಪಡ್ಡೆಗಳೂ ಇರುತ್ತಾರೆ. ಇನ್ನು ಕೆಲವರು ಅಂಥ ಮಳೆಯಲ್ಲೂ ಐಸ್ ಕ್ರೀಮ್ ನೆಕ್ಕುತ್ತಾ ಥಂಡ್ ಅನ್ನು “ಎಂಜಾಯ್” ಮಾಡುತ್ತಾರೆ!  ಸಣ್ಣ ಮಳೆಯಲ್ಲಿ ದಡದುದ್ದಕ್ಕೂ ಕೊಡೆಯ ಮರೆಯಲ್ಲಿ ಪ್ರಣಯದ ನಶೆಯಲ್ಲಿರುವ ಪ್ರೇಮಿಗಳಿಗೂ, ವಿರಹದುರಿಯಲ್ಲಿ ಅಕೇಲೇ ಕೂತಿರುವ ಭಗ್ನಪ್ರೇಮಿಗಳಿಗೂ ಸಮುದ್ರರಾಜನು ತಾರತಮ್ಯಗಯ್ಯದೇ ಸಿಂಚನಗೈಯುವನು!

ಮುಂಬೈನ ಇಂಥ ರೋಮ್ಯಾಂಟಿಕ್ ಬಾರೀಶ್ ತರುವ ಪರೆಶಾನಿಗಳೂ ಬೇಕಾದಷ್ಟಿವೆ.  ಸಮುದ್ರದಲ್ಲಿ ಭರತ ಇರುವಾಗ ಸತತ ಮಳೆಯಾದರೆ ನೀರು ಹರಿದು ಹೋಗಲು ಸಮಯ ಹಿಡಿಯುವುದರಿಂದ ರೇಲ್ವೇ ಹಳಿಗಳು ಮುಳುಗಿ ಲೋಕಲ್ ಟ್ರೇನ್ ಓಡಾಟ ಅಸ್ತವ್ಯಸ್ತಗೊಳ್ಳುತ್ತದೆ. ಆಗ ಮುಂಬಯಿಗರ ಗೋಳಾಟ ಹೇಳತೀರದು. 2005 ಜುಲೈ 26 ರ ಪ್ರಳಯ ಸ್ವರೂಪಿ ಮಳೆಯಲ್ಲಿ ಮುಂಬೈ ಮುಳುಗಿದ ಕರಾಳ ನೆನಪಿನ ಛತ್ರಿಯೊಂದು ಸದಾ ತಲೆಮೇಲೆ ತೂಗುತ್ತಿರುತ್ತದೆ. (ಮೋಡಗಳ ಮಾಹಾಸ್ಪೋಟಕ್ಕೆ ಲಕ್ಷಾಂತರ ಜನರು ನಲುಗಿದ ಆ ಸಂದರ್ಭವು ಮುಂಬಯಿಗರ ಮಾನವೀಯ ಮುಖವನ್ನು ತೋರಿದ ಇತಿಹಾಸವೂ ಆಗಿದೆ ಎಂಬ ಮಾತು ಬೇರೆ). ಮುಂಬಯಿಯ ಅಷ್ಟೇನು ಉತ್ತಮ ದರ್ಜೆಯದಲ್ಲದ ಒಳಚರಂಡಿ ವ್ಯವಸ್ಥೆ, ತೆರೆದ ನಾಲಾಗಳಿಂದಾಗಿ ಮಳೆಗಾಲದಲ್ಲಿ ಬೀಮಾರಿಗಳು ಹೆಚ್ಚಾಗುವ ಆತಂಕವಿದ್ದೇ ಇರುತ್ತದೆ.

 

ಇನ್ನು ಜೋಪಡಪಟ್ಟಿಗಳ ಜಿಂದಗಿ ಕೇಳುವುದೇ ಬೇಡ. ಮುಂಬಯಿಯ ಜೋಪಡಪಟ್ಟಿ ಮತ್ತು ಸ್ಲಮ್ ಏರಿಯಾಗಳು ಸಾಮಾನ್ಯವಾಗಿ ತಗ್ಗಿನಲ್ಲಿರುವುದರಿಂದ ಮಳೆ ಆಗಾಗ ಸಾಮೂಹಿಕ ಗೃಹಪ್ರವೇಶ ಮಾಡುತ್ತದೆ. ಸಾವಿರಾರು ಜನರ ಬದುಕು ಅತಂತ್ರವಾಗುತ್ತದೆ. ಜೋಪಡಿಯೊಳಗಿನ ಮಳೆನೀರನ್ನು ಬಕೆಟ್ಟಿನಲ್ಲಿ ತುಂಬಿ ಹೊರಚೆಲ್ಲುವ ದೃಶ್ಯ ಮನಮಿಡಿಯುತ್ತದೆ. ಇಷ್ಟಾಗಿಯೂ ಮಳೆಗಾಲವನ್ನು ಇಷ್ಟಪಡುವ ಜೋಪಡಪಟ್ಟಿಗರಿದ್ದಾರೆ ಎಂದರೆ ನಂಬುತ್ತೀರಾ? ಅದಕ್ಕೆ ಕಾರಣವಿಷ್ಟೇ; ಮಹಾನಗರಪಾಲಿಕೆಯವರು ಮಳೆಗಾಲದಲ್ಲಿ ಅನಧಿಕೃತ ಜೋಪಡಿ ಕೆಡಹುವ ಕಾರ್ಯಕ್ಕೆ ಅಧಿಕೃತ ರಜಾ ಘೋಷಿಸಿರುತ್ತಾರೆ! ಅಷ್ಟರಮಟ್ಟಿಗೆ ಅವರಿಗೆ ಮಳೆಗಾಲದಲ್ಲಿ ಸುಕೂನ್ ಸಿಗುತ್ತದೆ!

ಮುಂಬೈನ ಇತ್ತೀಚಿನ ಆಕರ್ಷಣೆಯಾದ ಬಾಂದ್ರಾ-ವರ್ಲಿ ಸೀಲಿಂಕ್ ಸೇತುವೆಯು ಮುಂಬೈ ಮಳೆದರ್ಶನಕ್ಕೆ ಹೇಳಿ ಮಾಡಿಸಿದ ಜಾಗ. ಸಾಗರದೊಳಗೇ ನಿರ್ಮಿಸಿರುವ ಸೇತುವೆಯ ಮೇಲೆ ಸಾಗುವಾಗ ಎರಚುವ ತೆರೆಗಳು ರೋಮಾಂಚನ ಉಂಟುಮಾಡುತ್ತವೆ. ಸೇತುವೆಯ ಆ  ತುದಿಗಿರುವ ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ಮಳೆಯ ಇನ್ನೊಂದು ಸ್ವರೂಪವನ್ನೇ ತೋರಿಸುತ್ತದೆ. ಅಲ್ಲೇ ಸಮುದ್ರದೆದುರು ನೆಲೆ ನಿಂತಿದ್ದ ನಮ್ಮ ಚಿತ್ತಾಲರು ಕಥೆ ಬರೆಯುವಾಗ ಮಳೆರಾಯನು ಎಂಥ ಪಾತ್ರ ವಹಿಸಿದ್ದನೋ! ಅವರ ಬಾಲ್ಕನಿಗೆ ಸಿಡಿದ ಮುಂಬೈ ಮಳೆನೀರು ಹನೇಹಳ್ಳಿಯ ಮಳೆಗಾಳಿಯನ್ನು ನೆನಪಿಸಿ ಅವರ ಪ್ರಸಿದ್ಧ ಕಥೆ “ಆಟ”ಕ್ಕೆ ನಿಗೂಢ ಆವರಣ ಚಿತ್ರಿಸಲು ಸ್ಪೂರ್ತಿಯಾಗಿರಬಹುದೇ?

ಜೂನ್ ಮುಗಿಯುತ್ತಾ ಬಂದರೂ ಮುಂಬೈಗೆ ಮನ್ಸೂನ್ ಸರಿಯಾಗಿ ಕಾಲಿಟ್ಟಿರಲಿಲ್ಲ. ಕಳೆದ ವಾರದಿಂದ ವರುಣನು ಮುಂಬಯಿಗರ ಮೇಲೆ  ಅನುಗ್ರಹಿಸಿದ್ದಾನೆ. ಮೋಡಗಳು ದಟ್ಟವಾಗುತ್ತಿದ್ದು ಸಖತ್ತು ಮಳೆ ಕೂಡ ಬೀಳುತ್ತಿದೆ. ಫುಟಪಾತಿನಲ್ಲಿಯ ಗರಂಗರಂ ಮಸಾಲಾ ಚಹ ಮತ್ತು ಖಾಂದಾ ಭಜ್ಜಿಯ ಖುಶಬೂ ಮಳೆಹನಿಗಳಲ್ಲಿ ಸೇರಿಕೊಂಡಿದೆ. ಖುಶ್ ಆಗಿರುವ ಮುಂಬಯಿಗರ ದಿಲ್ “ಆಲಾರೇ ಪಾಉಸ್ ಆಲಾ” ಎನ್ನದಿರುವುದೇ?

‍ಲೇಖಕರು avadhi

July 7, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ahalya Ballal

    “ದಡದುದ್ದಕ್ಕೂ ಒಣ ದರ್ಪದಿಂದ ನಿಂತಿರುವ ಗಗನಚುಂಬಿ ಇಮಾರತುಗಳು ಮಳೆಯ ಹೊಡೆತದಲ್ಲಿ ಮಿಂದು ಕೊಂಚ ವಿನೀತಭಾವದಲ್ಲಿ ಅದ್ದಿಕೊಳ್ಳುತ್ತವೆ.”

    ಉಳಿದ ಹೊತ್ತಿನಲ್ಲಿ ಇನ್ನಿಲ್ಲದಂತೆ ಭಾಂಗಡಿ ಮಾಡಿದರೂ, ಟೀಚರ್ ಜೋರು ಮಾಡಿದಾಗ ಕಂಯ್ ಕುಂಯ್ ಎನ್ನದೆ ವಿನಮ್ರತೆ ತೋರಿಸುವ ಶಾಲಾ ಮಕ್ಕಳು. 🙂 🙂

    ನುಡಿ ಸಿಂಚನ ಇಷ್ಟವಾಯ್ತು.

    ಪ್ರತಿಕ್ರಿಯೆ
    • ರಾಜೀವ

      ಥ್ಯಾಂಕ್ಯೂ… “ನುಡಿ ಸಿಂಚನ” ಆಹಾ!

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: