ಅರಿವು ಎಚ್ಚರಗಳ ನಡುವಿನ ಬೆರಗು: ಜನಶತ್ರು

ಸತೀಶ್‌ ಕುಲಕರ್ಣಿ

ಕೇವಲ ಐದೇ ಐದು ಪಾತ್ರಗಳು ಯಾವ ವೈಭವದ ರಂಗ ಪರಿಕರವಾಗಲಿ ವಸ್ತ್ರಾಲಂಕಾರವಾಗಲಿ ಇರಲಿಲ್ಲ. ಆದರೆ ಸರಿಯಾಗಿ ಒಂದು ಗಂಟೆಯ ಕಾಲ ನಿಶಬ್ಧವಾಗಿ ಉಸಿರು ಬಿಗಿ ಹಿಡಿದು ನೋಡುವ ನಾಟಕ ಜನಶತ್ರು ಇಲ್ಲಿಯ ಪುಟ್ಟದಾದ ಹಂಚಿನಮನಿ ಆರ್ಟಗ್ಯಾಲರಿಯಲ್ಲಿ ನೋಡುಗರಿಗೆ ದಟ್ಟ ಪ್ರಭಾವ ಬೀರುವಲ್ಲಿ ಯಶಸ್ವಿಯಾಯಿತು.

ಹೆನ್ರಿ ಇಬ್ಸನ್ ಅವರ ಜನತೆಯ ಶತ್ರು (An enemy of the people) ಎಂಬ ನಾಟಕ ಆಧಾರಿತ ಜನಶತ್ರು ನೋಡುಗನ ಮನಸ್ಸು ಮತ್ತು ಸಂವೇದನೆಗಳನ್ನು ಹುರಿಗೊಳಿಸಿತು. ನಿತ್ಯ ನಾವೆಲ್ಲ ಓದುವ ರೈತಾತ್ಮಹತ್ಯೆಯ ನಂತರ ಹುಟ್ಟುವ ನೋವು ಸಂಕಟ ತಲ್ಲಣಗಳಿಗೆ ಒಂದು ಪ್ರತಿರೋಧದ ದನಿ ಎತ್ತುವ ಶಕ್ತಿಯುತ ನಾಟಕ.

ಹತ್ತಿ ಬೆಳೆಯುವ ರೈತನೊಬ್ಬ, ಅನಾರೋಗ್ಯದಿಂದ ಬಳಲುವ ತನ್ನ ಹೆಂಡತಿಯ ಚಿಕಿತ್ಸೆಗಾಗಿ ಸಾಲ ಮಾಡುತ್ತಾನೆ. ಹಳೆಯ ಸಾಲ ತೀರಿಸಿದ ಕಾರಣ ಬ್ಯಾಂಕು ಸಾಲ ನೀಡಲು ನಿರಾಕರಿಸಿದಾಗ ಅನಿವಾರ್ಯವಾಗಿ ಮೀಟರ್ ಬಡ್ಡಿ ಲೇವಾದೇವಿ ಮಾಡುವ ದಲ್ಲಾಳಿ ಬಳಿ ಸಾಲ ಪಡೆಯುತ್ತಾನೆ. ಆದರೆ ಬೆಳೆದ ಹತ್ತಿಗೆ ಹುಳ ತಗುಲಿ ನಾಶವಾದಾಗ ಅನಿವಾರ್ಯವಾಗಿ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಕಥೆ ಈ ರೀತ ಆರಂಭವಾಗಿ ಆನಂತರ ರೈತನ ಹೆಂಡತಿ ಗಂಡನ ಸಾಲ ಮರುಪಾವತಿಸಲಾಗದೆ ದಲ್ಲಾಳಿ ಬ್ಯಾಂಕುಗಳ ಕಾಟದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾಳೆ. ತನ್ನಂತೆ ನೋವುಂಡ ವಿಧವಾ ರೈತ ಹೆಂಡತಿಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಾಳೆ. ಇವಳ ಹೋರಾಟಕ್ಕೆ ಪ್ರತಿಯಾಗಿ ಪೊಲೀಸ, ಶಾಸಕ, ದಲ್ಲಾಳಿ ಎಲ್ಲರೂ ಒಗ್ಗೂಡಿ ಹೋರಾಟವನ್ನು ಬಗ್ಗು ಬಡೆಯುವ ಪ್ರಯತ್ನ ಮಾಡುತ್ತಾರೆ. ರೈತ ಮಹಿಳೆಯರೆಲ್ಲರೂ ಒಂದುಗೂಡಿದರೂ ಅವಳು ಕರೆದ ಸಭೆಗೆ ಯಾರೂ ಬರದಂತೆ ನೋಡಿಕೊಳ್ಳುತ್ತಾರೆ.

ಕಥಾನಾಯಕಿ ಅಂತಿಮವಾಗಿ ಒಬ್ಬಂಟಿಯಾದರೂ ಸರಿ ಸಾಮಾಜಿಕ ಜಾಲ ತಾಣಗಳ ಮೂಲಕ ದನಿ ಎತ್ತುತ್ತಾಳೆ. ಇಷ್ಟೆಲ್ಲವುಗಳ ನಡುವೆ ಇವಳಿಗೆ ಸಾಥ್ ನೀಡುವ ಏಕೈಕ ವ್ಯಕ್ತಿ ಒಬ್ಬ ಪ್ರಜ್ಞಾವಂತ ಪತ್ರಕರ್ತ ಮಾತ್ರ.

ಎದೆ ತಟ್ಟುವ ಚುರುಕು ಸಂಭಾಷಣೆ, ಪಕ್ವ ಭಾವಾಭಿನಯ, ಸಂಭಾಷಣೆಗಳ ನಡುವಿನ ಮೌನ ಬಳಸುವಿಕೆ ಇಡೀ ಪ್ರೇಕ್ಷಕ ಸಮುದಾಯವನ್ನು ಡವಗುಟ್ಟುವಂತೆ ಉಸಿರು ಬಿಗಿ ಹಿಡಿಸಿತ್ತು. ನಾಟಕದ ಕಥಾ ನಾಯಕಿ ರೈತನ ಹೆಂಡತಿ ಕೊನೆಯಲ್ಲಿ ‘ಹುಸಿ ಹುತ್ತುಗಳ ನಡುವೆ, ಪೊಳ್ಳು ಮಾತುಗಳ ಬಹುಮತದ ಈ ವ್ಯವಸ್ಥೆಯಲ್ಲಿ, ಅಮಾಯಕ ಜನರ ಸತ್ಯಧ್ವನಿ ಸಾಯಬಾರದು. ಸತ್ಯಕ್ಕಾಗಿ ಒಂಟಿಯಾದರೂ ಸರಿಯೇ ನಾವೆಲ್ಲ ದನಿ ಎತ್ತಬೇಕು’ ಎಂದು ಹೇಳುವ ಮಾತು ಇಂದಿನ ವ್ಯವಸ್ಥೆಗೆ ಚಾಟಿಯಾಗಿತ್ತು. ಅಂತರಾಳವನ್ನು ಶುದ್ಧಗೊಳಿಸಿ ಹೋರಾಟಕ್ಕೆ ಪ್ರೇರೇಪಿಸುವಂತ್ತಿತ್ತು.

ನಾಟಕದ ಕೇಂದ್ರವಾದ ರೈತನ ಹೆಂಡಿಯಾಗಿ ಶಿಲ್ಪಾ ಎಸ್., ದಲ್ಲಾಳಿ ನಾಗರಾಜ ಕಾಸಂಬಿ. ಶಾಸಕ ಜಗದೀಶ ಕಟ್ಟಿಮನಿ, ರೈತ ಮತ್ತು ಪತ್ರಕರ್ತನಾಗಿ ಗಣೇಶ ಹೆಗ್ಗೋಡ ಮತ್ತು ನಿಶಾಂತ ಮುತ್ತಣ್ಣ ಸರಿಸಾಟಿಯಾಗಿ ನಾಟದ ಪಾತ್ರಗಳಿಗೆ ಜೀವ ತುಂಬಿದರು.

ಸುರೇಂದ್ರನಾಥ ರಚಿಸಿ ನಿರ್ದೇಶಿಸಿದ ನಾಟಕದ ಹಿನ್ನೆಲೆಯಲ್ಲಿ ಡಾ. ಶ್ರೀಪಾದ ಭಟ್, ಪ್ರಭು ಗುರಪ್ಪನವರ, ನಾಗರಾಜ ಧಾರೇಶ್ವರ, ಶಿವಮೂರ್ತಿ ಹುಣಸಿಕಟ್ಟಿ, ಹರೀಷ ಗುರಪ್ಪನವರ, ಕಲಾವಿದ ಕರಿಯಪ್ಪ ಹಂಚಿನಮನಿ ಕೈಜೊಡಿಸಿದ್ದರು.

ಇಬ್ಸನನ Enemy of the people ನಾಟಕದ ಕೊನೆಯ ಮಾತು He is the strongest man in the world, who stands alone and most alone ಎಂಬುದನ್ನು ಇಡೀ ನಾಟಕದಲ್ಲಿ ಗೊತ್ತಿಲ್ಲದಂತೆ ಅನುರಣಿಸಿತು.

‍ಲೇಖಕರು Admin

December 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: