ಶ್ರೀನಿವಾಸ ಪ್ರಭು ಅಂಕಣ- ದೆಹಲಿಯಲ್ಲಿ ನನ್ನನ್ನು ಕಲಕಿದ ಆ ಅನುಭವ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

31

ಪರಮೋತ್ಸಾಹದಿಂದ ನಾವು ದೆಹಲಿ ತಲುಪುವ ವೇಳೆಗಾಗಲೇ ಬಾಬುಕೋಡಿ ವೆಂಕಟರಮಣ ಕಾರಂತರು ರಾಷ್ಟ್ರೀಯ ನಾಟಕಶಾಲೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಮತ್ತೊಬ್ಬ ಕನ್ನಡದ ವಿದ್ಯಾರ್ಥಿ ಬೇರೊಂದು ಸ್ಕಾಲರ್ ಶಿಪ್ ಗಳಿಸಿಕೊಂಡು ನಮ್ಮ ತರಗತಿಗೆ ದಾಖಲಾಗಿದ್ದ—ಅವನೇ ಎಸ್. ಸುರೇಂದ್ರನಾಥ್ ಅಲಿಯಾಸ್ ಸೂರಿ. ಅಲ್ಲಿಗೆ ನಮ್ಮ ತರಗತಿಯ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕಕ್ಕೇರಿತು.

ದೆಹಲಿಗೆ ಬಂದವರೇ ಸ್ಕಾಲರ್ ಶಿಪ್ ಹಣವನ್ನು ತೆಗೆದುಕೊಂಡು ಶಾಲೆಯ ಫೀಸ್, ಹಾಸ್ಟೆಲ್ ಬಾಡಿಗೆ, ಮೆಸ್ ನಲ್ಲಿ ಉಳಿಸಿಕೊಂಡಿದ್ದ ಬಾಕಿ.. ಎಲ್ಲವನ್ನೂ ಚುಕ್ತಾ ಮಾಡಿದೆವು. ಅಷ್ಟಾದ ಮೇಲೂ ಕೊಂಚ ಹಣ ಕೈಗಾವಲಿಗೆ ಉಳಿದಿತ್ತು. ಸಂಜೆ ಬೆಂಗಾಲಿ ಮಾರ್ಕೆಟ್ ಗೆ ಹೋಗಿ ನಥ್ಥು ಸ್ವೀಟ್ ಸೆಂಟರ್ ನಲ್ಲಿ ಕುಳಿತು ಸೇಡು ತೀರಿಸಿಕೊಳ್ಳುವವರಂತೆ ರಸಮಲೈ—ಪಾಪಡಿ ಚಾಟ್ ತಿಂದು ಒಂದು ಬಗೆಯ ವಿಜಯೋತ್ಸಾಹದಿಂದ ಹೊಸ ಬದುಕಿಗೆ-ಹೊಸ ಸವಾಲುಗಳಿಗೆ ಎದೆಯೊಡ್ಡಲು ಸನ್ನದ್ಧರಾದೆವು.

ಅದುವರೆಗೆ ರಾಷ್ಟ್ರೀಯ ನಾಟಕಶಾಲೆಯ ಹಾಗೂ ಶಾಲೆಯ ವೃತ್ತಿಪರ ತಂಡವಾದ ರೆಪರ್ಟರಿಯ ಅನೇಕ ನಾಟಕಗಳು ತಮ್ಮ ಅದ್ಭುತ ರಂಗವಿನ್ಯಾಸ—ಆಯಾ ಕೃತಿಯ ಕಾಲಕ್ಕನುಗುಣವಾದ ಸನ್ನಿವೇಶದ ಕೌಶಲಪೂರ್ಣ ನಿರ್ಮಿತಿ ಹಾಗೂ ಪ್ರತಿಭಾವಂತ ಕಲಾವಿದರ ಅಸಾಧಾರಣ ಅಭಿನಯಗಳಿಂದಾಗಿ ರಾಷ್ಟ್ರಮಟ್ಟದ ಖ್ಯಾತಿಯನ್ನು ಗಳಿಸಿದ್ದವೆಂಬುದರಲ್ಲಿ ಎರಡು ಮಾತಿಲ್ಲ. ಶಾಲೆಯ ನಾಟಕ ಪ್ರಸ್ತುತಿಗಳ ಭವ್ಯಾತಿಭವ್ಯ ರಂಗ ಸಜ್ಜಿಕೆಗಳ ಅದ್ದೂರಿತನವಂತೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.

ಕಾರಂತರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಷ್ಟ್ರೀಯ ನಾಟಕ ಶಾಲೆಗೆ ‘ಭಾರತೀಯ ರಂಗಭೂಮಿ’ಯ ಅಸ್ಮಿತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದರು. ರಾಷ್ಟ್ರೀಯ ನಾಟಕಶಾಲೆ ಜಗತ್ತಿನ ಇತರ ಭಾಷೆಗಳ ಶ್ರೇಷ್ಠ ರಂಗ ಕೃತಿಗಳ—ಪ್ರಮುಖ ತಾತ್ವಿಕ ರಂಗಧೋರಣೆಗಳ ಪರಿಚಯವನ್ನು ಮಾಡಿಕೊಡುವುದರ ಜತೆಗೇ ಭಾರತೀಯ ರಂಗಭೂಮಿಯ (ಜಾನಪದ—ವೃತ್ತಿರಂಗಗಳೂ ಸೇರಿದಂತೆ) ಹರಹು—ವೈಶಾಲ್ಯ—ವೈವಿಧ್ಯಗಳ ಅಧ್ಯಯನವನ್ನೂ ನಡೆಸಬೇಕು ಎನ್ನುವುದು ಕಾರಂತರ ಮಹದಾಶಯವಾಗಿತ್ತು. ಹಾಗಾಗಿಯೇ ನಮ್ಮ ಮೂರು ವರ್ಷಗಳ ಕಲಿಕೆಯ ಅವಧಿಯಲ್ಲಿ ಗ್ರೀಕ್ ರಂಗಭೂಮಿ, ಭರತನ ನಾಟ್ಯಶಾಸ್ತ್ರ-ಸಂಸ್ಕೃತ ನಾಟಕಗಳು, ಶೇಕ್ಸ್ ಪಿಯರನ ಗ್ಲೋಬ್ ಥಿಯೇಟರ್, ಬ್ರೆಕ್ಟ್ ನ ಎಪಿಕ್ ಥಿಯೇಟರ್, ನಮ್ಮ ಯಕ್ಷಗಾನ-ಮಾಚ್ -ಜಾತ್ರಾ-ತಮಾಷಾ ಮೊದಲಾದ ಜನಪದ ರಂಗ ಪ್ರಕಾರಗಳು… ಇನ್ನೂ ಮುಂತಾದ ಅನೇಕ ಸಂಗತಿಗಳನ್ನು ಪಠ್ಯ—ಪ್ರಸ್ತುತಿಗಳೆರಡೂ ದೃಷ್ಟಿಯಿಂದ ಅಭ್ಯಸಿಸುವ ಅಪೂರ್ವ ಅವಕಾಶ ದೊರೆಯಿತು.

ಅದುವರೆಗೆ ನಾಟಕಶಾಲೆಯಲ್ಲಿ ಅಭಿನಯ—ನಿರ್ದೇಶನ—ರಂಗ ತಾಂತ್ರಿಕತೆಗಳ ಕುರಿತಾದ ವಿಶೇಷ ಹಾಗೂ ಪ್ರತ್ಯೇಕ ಅಧ್ಯಯನಕ್ಕೆ ಅವಕಾಶವಿತ್ತು. ಆದರೆ ಒಬ್ಬ ರಂಗಕರ್ಮಿ ರಂಗಭೂಮಿಯ ಎಲ್ಲ ವಿಭಾಗಗಳಲ್ಲೂ ಪರಿಣತಿಯನ್ನು ಸಾಧಿಸಬೇಕು, ಸಮಗ್ರ ರಂಗಭೂಮಿಯ ಅಧ್ಯಯನದಲ್ಲಿ-ಅಭ್ಯಾಸದಲ್ಲಿ ತೊಡಗಬೇಕು ಎಂಬ ದೃಷ್ಟಿಕೋನವನ್ನು ಹೊಂದಿದ್ದ ಕಾರಂತರು ಮೊದಲಿದ್ದ ‘specialization’ ಪಠ್ಯಕ್ರಮವನ್ನು ರದ್ದು ಮಾಡಿ ಮೂರೂ ವರ್ಷಗಳು ಎಲ್ಲಾ ವಿದ್ಯಾರ್ಥಿಗಳೂ ಎಲ್ಲಾ ವಿಭಾಗಗಳಲ್ಲೂ ಸಕ್ರಿಯವಾಗಿ ತೊಡಗಬೇಕು ಎನ್ನುವಂತಹ ಪಠ್ಯ ವ್ಯವಸ್ಥೆಯನ್ನು ಜಾರಿಗೊಳಿಸಿದರು.

ಅಭಿನಯವನ್ನೇ ಪ್ರಧಾನವಾಗಿ ಆರಿಸಿಕೊಂಡು ವೃತ್ತಿಪರ ನಟ—ನಟಿಯರಾಗುವ ಆಶಯವನ್ನಿರಿಸಿಕೊಂಡಿದ್ದ ಅನೇಕ ವಿದ್ಯಾರ್ಥಿಗಳಿಗೆ ಇದರಿಂದ ಭಾರೀ ನಿರಾಸೆಯಾಗಿ, ಕಾರಂತರ ಅಧಿಕಾರಾವಧಿಯ ಪ್ರಾರಂಭದ ದಿನಗಳಲ್ಲೇ ಸಣ್ಣದಾಗಿ ಅಸಮಾಧಾನದ ಹೊಗೆಯಾಡತೊಡಗಿತು.

ದಕ್ಷಿಣ ಭಾರತದ ಕರ್ನಾಟಕದವರೊಬ್ಬರು ನಿರ್ದೇಶಕರಾಗಿ ಬಂದದ್ದೇ ಕೆಲವರಿಗೆ ಇರುಸುಮುರುಸಾಗಿತ್ತು ಎಂಬುದೂ ಸಹಾ ರಹಸ್ಯದ ಸಂಗತಿಯೇನಾಗಿರಲಿಲ್ಲ. ಏನೇ ಆದರೂ ನನಗಂತೂ ವೈಯಕ್ತಿಕವಾಗಿ ಈ ಹೊಸ ಪಠ್ಯಕ್ರಮದಿಂದ ಯಾವ ಬೇಸರವೂ ಆಗಲಿಲ್ಲ. ಹಳೆಯ ಪಠ್ಯಕ್ರಮವೇ ಇದ್ದರೂ ನಾನು ಆಗ ಅಭಿನಯವನ್ನೇನೂ ಪ್ರಧಾನ ವಿಷಯವಾಗಿ ಆರಿಸಿಕೊಳ್ಳುತ್ತಿರಲಿಲ್ಲ!ಹಾಗಾಗಿ ನನಗೆ ಹೆಚ್ಚಿನ ವ್ಯತ್ಯಾಸವೇನೂ ಕಾಣದೆ ನನ್ನ ಪಾಡಿಗೆ ನನ್ನ ಅಧ್ಯಯನದಲ್ಲಿ ನಾನು ತೊಡಗಿಕೊಂಡೆ. ಇರಲಿ.

ನಮ್ಮ ಶಾಲೆಯ ಲೈಬ್ರರಿಯಲ್ಲಿ ಅಪರೂಪದ ಪುಸ್ತಕಗಳ ದೊಡ್ಡ ಭಂಡಾರವೇ ಇತ್ತು.ಅಲ್ಲೇ ಕುಳಿತು ಓದಿದ ಒಂದು ನಾಟಕ ನನಗೆ ತುಂಬಾ ಇಷ್ಟವಾಗಿ ಅದನ್ನು ಕನ್ನಡಕ್ಕೆ ಅಳವಡಿಸಿಕೊಳ್ಳಲು ಆರಂಭಿಸಿಯೇಬಿಟ್ಟೆ. ಅದೇ- ‘Journey to the Mountains Beyond’ ಅನ್ನುವ ನಾಟಕ. ‘ನಾಯಾರಮಾ’ ಅನ್ನುವ ಜಪಾನಿ ಕಾದಂಬರಿಯನ್ನು ಗೇಬ್ರಿಯಲ್ ಕಸಿನ್ ಎಂಬ ನಾಟಕಕಾರ ಫ್ರೆಂಚ್ ನಾಟಕವಾಗಿ ರೂಪಾಂತರಿಸಿದ್ದ. ಅದರ ಇಂಗ್ಲೀಷ್ ಅನುವಾದವನ್ನು ನಾನು ಕನ್ನಡಕ್ಕೆ ‘ಅಂತಿಮಯಾತ್ರೆ’ ಎಂಬುದಾಗಿ ರೂಪಾಂತರಿಸಿದ್ದೆ.

ವಾರ್ಷಿಕ ರಜೆಗೆಂದು ಬೆಂಗಳೂರಿಗೆ ಬಂದೊಡನೆ ‘ಅಂತಿಮ ಯಾತ್ರೆ’ ನಾಟಕದ ತಾಲೀಮು ಆರಂಭಿಸಿದೆ. ಈ ನಾಟಕದ ಒಂದು ವೈಶಿಷ್ಟ್ಯವೆಂದರೆ ಇದರಲ್ಲಿನ ಪ್ರಮುಖ ಪಾತ್ರಗಳಿಗೆಲ್ಲಾ ಒಂದು ‘ಒಳಮನಸ್ಸು’ ಇರುತ್ತದೆ. ವ್ಯಕ್ತಿಯ ಹೊರ ನಡಾವಳಿ ಹಾಗೂ ಅವರ ಅಂತರಂಗಗಳ ನಡುವಣ ಕಂದಕವನ್ನು ತೋರಲು ಈ ತಂತ್ರವನ್ನು ಬಳಕೆ ಮಾಡಲಾಗಿತ್ತು. ಮೂಲನಾಟಕದಲ್ಲಿ ಒಳಮನಸ್ಸನ್ನು ಮುದ್ರಿತ ಹಿನ್ನೆಲೆ ಧ್ವನಿಯ ಮೂಲಕ ಸಾದರಪಡಿಸಲಾಗಿತ್ತಂತೆ.

ಒಂದು ರೀತಿಯಲ್ಲಿ ರೂಢಗತ ಸ್ವಗತಗಳಿಗೆ ಪರ್ಯಾಯದಂತೆ ಭಾಸವಾದ ಈ ತಂತ್ರವನ್ನು ಇನ್ನಷ್ಟು ಸಶಕ್ತವಾಗಿ ರಂಗ ಪ್ರಸ್ತುತಿಯಲ್ಲಿ ಬಳಸಿಕೊಳ್ಳಬಹುದೆಂದು ನನಗೆ ತೋರಿತು. ಹಾಗಾಗಿ ಆ ‘ಒಳಮನಸ್ಸು’ಗಳನ್ನು ಸಜೀವ ಪಾತ್ರಗಳಾಗಿಯೇ ರಂಗದ ಮೇಲೆ ತರುವ ಪ್ರಯತ್ನ ಮಾಡಿದೆ. ಆ ಪಾತ್ರಗಳಿಗೆ ಕೊಂಚ ಶೈಲೀಕೃತ (stylized) ಅಭಿನಯ ಮಾದರಿಯನ್ನು ಅಳವಡಿಸಿ ರಂಗಪ್ರಸ್ತುತಿಯನ್ನು ಅಣಿಗೊಳಿಸಿದೆ. ಈ ಶೈಲೀಕೃತ ಅಭಿನಯ ಶೈಲಿಯ ತರಬೇತಿಯನ್ನು ನಮ್ಮ ಕಲಾವಿದರಿಗೆ ನೀಡಿದವರು, ಅದೇ ಸಮಯಕ್ಕೆ ಬೆಂಗಳೂರಿಗೆ ಬಂದಿದ್ದ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ- ಯುವರಾಜ್ ಶರ್ಮಾ ಅನ್ನುವ ನನ್ನ ಆತ್ಮೀಯ ಗೆಳೆಯರು. ಈ ರೀತಿಯ ಪಾತ್ರಸೃಷ್ಟಿ-ವಿಭಿನ್ನ ಶೈಲಿಯ ಅಭಿನಯ ಪ್ರೇಕ್ಷಕರಿಗೆ ಹೊಸ ಬಗೆಯ ಅನುಭವವನ್ನೇ ನೀಡಿತು.

‘ಅಂತಿಮಯಾತ್ರೆ’ ನಾಟಕದ ಕ್ರಿಯೆ ಜರುಗುವುದು ಒಂದು ಹಳ್ಳಿಯಲ್ಲಿ. ಹಿಂದುಳಿದ ದೇಶಗಳ ಹಳ್ಳಿಗಳನ್ನು ಕಾಡುವ ಬಡತನ-ಸಂಕಟಗಳ ದುರ್ಭರತೆಯ ಒಂದು ದಾರುಣ ಚಿತ್ರವನ್ನು ನಾಟಕ ತೆರೆದಿಡುತ್ತಾ ಹೋಗುತ್ತದೆ. ಒಂದು ಹಳ್ಳಿಯಲ್ಲಿ ಹತ್ತಾರು ಕುಟುಂಬಗಳು.. ಅನ್ನದಂಥ ಮೂಲಭೂತ ಅಗತ್ಯದ ಪೂರೈಕೆಯೇ ಅಲ್ಲಿನ ದೊಡ್ಡ ಸಮಸ್ಯೆ. ಅಲ್ಲೊಂದು ರೂಢಗತ ನಂಬಿಕೆ: ಹಲ್ಲುಗಳುದುರಿ ವಯಸ್ಸಾದ ಮೇಲೆ ಹಳ್ಳಿಗೆ ಹೊಂದಿಕೊಂಡಂತಿದ್ದ ಪರ್ವತಕ್ಕೆ ಯಾತ್ರೆ ಹೊರಟುಬಿಡಬೇಕು; ಅಲ್ಲಿ ಅವರಿಗೆ ಸುಖ—ಶಾಂತಿ—ಸಮೃದ್ಧಿ ಎಲ್ಲವೂ ದೊರೆಯುತ್ತದೆ! ಈ ಜನಜನಿತ ನಂಬಿಕೆಯ ಉದ್ದೇಶವಾದರೂ ತಿನ್ನುವ ಬಾಯಿಗಳ ಸಂಖ್ಯೆಯನ್ನು ಇಳಿಸುವುದಷ್ಟೇ ಹೊರತು ಬೇರೇನಲ್ಲ.

ಕಥೆಯ ಕೇಂದ್ರಪಾತ್ರ ಮಾಯಿಗೆ ಯಾತ್ರೆ ಹೊರಡುವ ಬಯಕೆ; ಆದರೆ ವಯಸ್ಸಾದರೂ ಆಕೆಯ ಹಲ್ಲುಗಳಿನ್ನೂ ಗಟ್ಟಿಯಾಗಿಯೇ ಉಳಿದಿವೆ! ಹಲ್ಲುಗಳುದುರದೆ ಯಾತ್ರೆ ಹೊರಡುವಂತಿಲ್ಲ! ಮಾಯಿ ರಾತ್ರಿಯ ಹೊತ್ತು ಬಲವಂತವಾಗಿಯೇ ಕಲ್ಲಿನಿಂದ ಜಜ್ಜಿ ಜಜ್ಜಿ ತನ್ನ ಗಟ್ಟಿ ಹಲ್ಲುಗಳನ್ನು ಕಳೆದುಕೊಳ್ಳಲು ಯತ್ನಿಸುತ್ತಾಳೆ! ಎಷ್ಟೆಷ್ಟೋ ಪ್ರಯತ್ನದ ನಂತರ ಕೊನೆಗೂ ಅವಳ ಅಂತಿಮಯಾತ್ರೆಯ ಗಳಿಗೆ ಸಮೀಪಿಸುತ್ತದೆ.. ಮಗ ಮಾಚ ಒಲ್ಲದ ಮನಸ್ಸಿನಿಂದ ಪರ್ವತದ ಒಂದು ನಿಶ್ಚಿತ ಜಾಗಕ್ಕೆ ಅವಳನ್ನು ಬಿಟ್ಟುಬರಲು ಹೋಗುತ್ತಾನೆ.. ಅಲ್ಲಿ ಹಾದಿಯ ಗುಂಟ ಅವನಿಗೆದುರಾಗುವುದು ಗತಿಸಿದವರ ಎಲುಬಿನ ರಾಶಿ! ಸುಖ ಸಮೃದ್ಧಿಯ ಅಂತಿಮ ಯಾತ್ರೆಯ ನಿಜವಾದ ಸ್ವರೂಪದ ಅರಿವಾದ ಮಾಚನ ಹಳಹಳಿಕೆಯೊಂದಿಗೆ ನಾಟಕ ಮುಗಿಯುತ್ತದೆ.

ಮಾಯಿಯ ಪಾತ್ರದಲ್ಲಿ ಬಿ. ಜಯಶ್ರೀ ಅವರು ಅಸಾಧಾರಣವಾಗಿ ಅಭಿನಯಿಸಿದ್ದರು. ಮಾಯಿಯ ಒಳಮನವಾಗಿ ನಳಿನಿ ಅಕ್ಕ ಕೂಡಾ ಚೇತೋಹಾರಿ ಅಭಿನಯ ನೀಡಿದ್ದಳು. ಇತರ ಪಾತ್ರಗಳಲ್ಲಿ ಕೃಷ್ಣಮೂರ್ತಿ ಹೊಳ್ಳ, ಪದ್ಮಶ್ರೀ, ಸುಜಾತಾ ಬೆಳವಾಡಿ, ರಿಚರ್ಡ್ ಜಿ ಲೂಯಿಸ್, ಅಬ್ಬೂರು ಜಯತೀರ್ಥ ಅವರುಗಳೂ ಸಹಾ ಗಮನಾರ್ಹ ಅಭಿನಯ ನೀಡಿದ್ದರು. ಮಾಯಿ ತಾನೇ ತನ್ನ ಹಲ್ಲುಗಳನ್ನು ಮುರಿದುಕೊಳ್ಳುವ ದೃಶ್ಯದಲ್ಲಂತೂ ಜಯಶ್ರೀ ಅವರ ಅಭಿನಯ ಎದೆ ಝಲ್ಲೆನ್ನಿಸುವಂತಿತ್ತು. ನಾಟಕ ಕೊಂಚ ದೀರ್ಘವಾಯಿತೆಂದು ಕೆಲವರು ಗೊಣಗಿದರೂ ಒಟ್ಟಾರೆ ಮನಸ್ಸನ್ನು ಕಲಕಿದ, ವಿಶಿಷ್ಟ ಅನುಭವ ನೀಡಿದ ನಾಟಕ ಎಂಬ ಪ್ರಶಂಸೆಯೂ ದೊರೆತು ರಜೆಯ ದಿನಗಳು ಸಾರ್ಥಕವಾಗಿ ಕಳೆದವೆಂಬ ಖುಷಿಯಲ್ಲಿ ದೆಹಲಿಗೆ ಮರಳಿದೆ.

ದೆಹಲಿಯಲ್ಲಿ ನನ್ನನ್ನು ತಲ್ಲಣಗೊಳಿಸಿದ, ಗಾಢವಾಗಿ ಕಲಕಿದ ಅನುಭವವೊಂದನ್ನು ನಿಮ್ಮೊಂದಿಗೆ ಈಗ ಹಂಚಿಕೊಳ್ಳುತ್ತೇನೆ.

ಒಂದು ದಿನ ನನ್ನ ಒಬ್ಬ ಹಿರಿಯ ವಿದ್ಯಾರ್ಥಿ-ಪ್ರದೀಪ—ನನ್ನ ಬಳಿ ಬಂದು, “ನಿನ್ನಿಂದ ನನಗೊಂದು ಸಹಾಯವಾಗಬೇಕು.. ನೀನು ನನ್ನ ಜೊತೆ ಬರಬೇಕು” ಎಂದ. ಮುಂದಿನ ಅವನ ಮಾತುಗಳನ್ನು ಕೇಳಿ ನಾನು ನಡುಗಿಯೇ ಹೋದೆ. ಅವನೇ ಸಿದ್ಧಪಡಿಸುತ್ತಿದ್ದ ಒಂದು ನಾಟಕದಲ್ಲಿ ಅವನು ಒಬ್ಬ pimp – ತಲೆಹಿಡುಕನ ಪಾತ್ರವನ್ನು ನಿರ್ವಹಿಸಬೇಕಿತ್ತಂತೆ. ಒಮ್ಮೆ ದೆಹಲಿಯ ರೆಡ್ ಲೈಟ್ ಏರಿಯಾಗೆ ಹೋಗಿ ಅಂತಹ ಒಂದಿಬ್ಬರು ವ್ಯಕ್ತಿಗಳನ್ನು ಭೇಟಿಯಾಗಿ ಅವರ ವೇಷ ಭೂಷಣ-ಮಾತಿನ ಧಾಟಿ-ಶರೀರ ಭಾಷೆ (body language).. ಎಲ್ಲವನ್ನೂ ಅಭ್ಯಸಿಸಬೇಕೆನ್ನುವುದು ಅವನ ಇರಾದೆ! ಅವನು ಹಿಂದೆ ನೋಡಿದ್ದ ಒಂದು ಮರಾಠಿ ನಾಟಕದಲ್ಲಿ ಒಬ್ಬ ಶ್ರೇಷ್ಠ ನಟ-ನೀಲು ಫುಳೆ ಎಂದು ಹೇಳಿದ್ದ ನೆನಪು-ಅಂಥದೊಂದು ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದನಂತೆ; ಆತನೂ ಅಂಥಲ್ಲಿಗೇ ಹೋಗಿ ಅಂಥವರನ್ನು ಭೇಟಿಯಾಗಿ ಆ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದನಂತೆ.

ಹೀಗೆ ಸಿದ್ಧಪಾತ್ರಗಳ ಅಧ್ಯಯನಕ್ಕೆಂದು ನಾವು ಸಂಬಂಧಪಟ್ಟ ಸ್ಥಳಗಳಿಗೆ ಹೋಗುವುದು ನಮ್ಮ ವೃತ್ತಿ ಬದುಕಿನಲ್ಲಿ ಹೊಸದೇನಲ್ಲ. ಜೈಲು,ಮಾನಸಿಕ ಅಸ್ವಸ್ಥರ ಆಸ್ಪತ್ರೆ,ರೈಲ್ವೇ ಸ್ಟೇಷನ್, ಪೋಲೀಸ್ ಸ್ಟೇಷನ್, ತರಕಾರಿ ಮಾರ್ಕೆಟ್… ಹೀಗೆ ಹಲವು ಹತ್ತು ಸ್ಥಳಗಳಲ್ಲಿ ಪಾತ್ರಗಳ ನಡಾವಳಿ ವೀಕ್ಷಣೆಗಾಗಿಯೇ ಅಲೆದು ತಿರುಗಿರುವುದುಂಟು. ಆದರೆ ಪ್ರದೀಪನ ಈ ಆಶಯ ಸ್ವಲ್ಪ ಅತಿಯಾಯಿತೇನೋ ಅನ್ನಿಸಿ ನನಗೆ ಗಾಬರಿ ಹುಟ್ಟಿಸಿಬಿಟ್ಟಿತು. “ನಾನು ಅಂಥ ಪಾತ್ರ ನಿರ್ವಹಿಸುತ್ತಲೂ ಇಲ್ಲ.. ಅಂಥ ಅಧ್ಯಯನದ ಅಗತ್ಯವೂ ಈಗಂತೂ ಇಲ್ಲ.. ನಾನು ಖಂಡಿತ ಬರಲಾರೆ” ಎಂದು ನಿಷ್ಠುರವಾಗಿಯೇ ಹೇಳಿಬಿಟ್ಟೆ. ಅಷ್ಟಕ್ಕೇ ಸುಮ್ಮನಾಗುವ ಪೈಕಿಯವನಲ್ಲದ ಪ್ರದೀಪ ನನ್ನ ತಲೆ ತಿನ್ನತೊಡಗಿದ: “ಕಲಾವಿದನಿಗೆ ಅನುಭವವೇ ಮೂಲದ್ರವ್ಯ.. ಯಾವ ಅನುಭವವೂ ವ್ಯರ್ಥವಲ್ಲ.. ಇಂದಲ್ಲ ನಾಳೆ ನಿನ್ನ ಸುಪ್ತ ಸ್ಮೃತಿಕೋಶದಿಂದ ಜಿಗಿದೆದ್ದು ಇಂಥ ಅನುಭವದ ನೆನಪು ನಿನಗೆ ನೆರವಾಗುತ್ತದೆ.. ಇಷ್ಟಕ್ಕೂ ನೀನು ಸುಮ್ಮನೆ ನನ್ನ ಜತೆಗಿದ್ದರೆ ಸಾಕು.. ನಾನೇ ಅವರೊಟ್ಟಿಗೆ ಮಾತಾಡುತ್ತೇನೆ. ದಯವಿಟ್ಟು ನನ್ನ ಜೊತೆ ಬಾ..” ಎಂದೆಲ್ಲಾ ಅಂಗಲಾಚತೊಡಗಿದ.

ಅದಕ್ಕೂ ನಾನು ಜಗ್ಗದಿದ್ದಾಗ, “ನಾವು ಆ ಜಾಗದಲ್ಲಿ ಹೆಚ್ಚು ಸಮಯ ಇರುವ ಪ್ರಮೇಯವೇ ಇಲ್ಲ.. ನಮಗೆ ಬೇಕಾದ ಒಬ್ಬ ವ್ಯಕ್ತಿ ಸಿಕ್ಕಿದೊಡನೆ ನಾವು ಅವನನ್ನು ಆಚೆ ಕರೆತಂದು ಬಿಡೋಣ.. ಅವನಿಗೊಂದಿಷ್ಟು ಹಣ ನೀಡಿ ಅವನೊಂದಿಗೆ ಮಾತಾಡುತ್ತಾ ನಾನು ಅವನನ್ನು ಅಭ್ಯಸಿಸುತ್ತೇನೆ.. ನೀನು ಸುಮ್ಮನೆ ಜತೆಗಿದ್ದರೆ ಸಾಕು.. ದಯವಿಟ್ಟು ನನ್ನ ಜೊತೆ ಬಾ” ಎಂದು ಮತ್ತೆ ಪೀಡಿಸತೊಡಗಿದ ಪ್ರದೀಪ. ಒಂದು ದುರ್ಬಲ ಕ್ಷಣದಲ್ಲಿ ಅವನ ಒತ್ತಾಯಕ್ಕೆ ಸೋತು “ಆಯಿತು.. ನಡಿ” ಎಂದು ಅವನ ಜೊತೆ ಹೊರಟೇಬಿಟ್ಟೆ. ‘ಇಂಥ ಜಾಗವನ್ನು ದೂರದಿಂದಾದರೂ ನೋಡುವ ಈ ಒಂದು ವಿಶಿಷ್ಟ ಅನುಭವವೂ ಆಗಿಯೇಬಿಡಲಿ’ ಎಂಬೊಂದು ಅನಿಸಿಕೆಯೂ ಮನದಾಳದಲ್ಲಿ ಹುದುಗಿತ್ತೇನೋ…

ನಮ್ಮ ಹಾಸ್ಟೆಲ್ ನಿಂದ 3—4 ಕಿ. ಮೀ. ದೂರದಲ್ಲೇ ಇದ್ದ ಆ ಜಾಗ—ಈಗ ಹೆಸರು ಮರೆತಿದ್ದೇನೆ—ಸಾಕಷ್ಟು ಪ್ರಸಿದ್ಧವಾದದ್ದೇ. ದೆಹಲಿಯಲ್ಲಿ ಆಗ ಬಹಳ ಚಾಲ್ತಿಯಲ್ಲಿದ್ದ ಪಟ್ ಪಟಿ ಏರಿ ಕುಳಿತು ಆ ಜಾಗದ ಹೆಸರು ಹೇಳಿದರೆ, ಆ ಚಾಲಕನ ಮುಖದಲ್ಲಿ ಒಂದು ಹುಸಿನಗು ಮೂಡಿ ನನಗೆ ತೀರಾ ಮುಜುಗರವಾಗಿಹೋಯಿತು. ನಮ್ಮ ಜಾಗ ತಲುಪಿದ ಮೇಲೆ ಪಟ್ ಪಟಿಯಿಂದ ಕೆಳಗಿಳಿದು ನೋಡಿದರೆ ಅಲ್ಲಿ ಇದ್ದದ್ದು ಎರಡು ಮೂರು ಹಳೆಯ ಮನೆಗಳು.. ಎರಡು-ಮೂರು ಅಂತಸ್ತಿನವು. ಗಿಜಿಗಿಜಿಗುಟ್ಟುತ್ತಿದ್ದ ವಾತಾವರಣ… ಬೀಡಿ ಸಿಗರೇಟು ತಂಬಾಕು ಸಾರಾಯಿಗಳೆಲ್ಲವೂ ಮಿಳಿತಗೊಂಡ ಒಂದು ಗಬ್ಬು ವಾಸನೆ.. ಜತೆಗೆ ನಾರುತ್ತಿದ್ದ ಮೈಗಳು.. ವಾಕರಿಕೆ ಬರುವಂತಾಯಿತು. ಕೈಕಾಲುಗಳು ನಡುಗುತ್ತಿದ್ದವು.. ಎದೆ ನಗಾರಿಯಾಗಿತ್ತು.. ಹಣೆಯ ಮೇಲೆ ಬೆವರುಸಾಲು ಹನಿಗಟ್ಟಿತ್ತು.. ಪ್ರದೀಪನ ಸ್ಥಿತಿಯೂ ನನ್ನದಕ್ಕಿಂತ ಭಿನ್ನವೇನೂ ಆಗಿರಲಿಲ್ಲ. ನಾವಿನ್ನೂ ಆ ಮನೆಗಳ ಪ್ರವೇಶ ದ್ವಾರವನ್ನೂ ತಲುಪಿಲ್ಲ.. ಅಷ್ಟರಲ್ಲೇ ಯಾರೋ ಒಂದಿಬ್ಬರು, “ಇಧರ್ ಕ್ಯಾ ಸೋಚ್ ರಹಾ ಹೈ… ಅಂದರ್ ಘುಸೋ..” ಎನ್ನುತ್ತಾ ಆ ಗುಂಪಿನ ನಡುವೆ ನಮ್ಮನ್ನು ಅಕ್ಷರಶಃ ಒಳಗೆ ತಳ್ಳಿಕೊಂಡೇ ಹೋಗಿಬಿಟ್ಟರು. ಆ ತಳ್ಳಾಟದಲ್ಲಿ ನಾನೊಂದು ಬದಿಗೆ ಪ್ರದೀಪನೊಂದು ಬದಿಗೆ ಆಗಿ ಅವನು ಮರೆಯೇ ಆಗಿಹೋದ.

ಆ ಗದ್ದಲ.. ತಳ್ಳಾಟಗಳು ನನ್ನನ್ನು ಮೊದಲ ಮಹಡಿಗೆ ತಂದು ನಿಲ್ಲಿಸಿದ್ದವು. ಅಲ್ಲಿ ಒಂದಷ್ಟು ಹೆಣ್ಣುಮಕ್ಕಳು ವಿಪರೀತವೆನ್ನಿಸುವಷ್ಟು ಮೇಕಪ್ ಮಾಡಿಕೊಂಡು ಅತ್ಯಂತ ಕೃತಕ ಹಾವಭಾವಗಳೊಂದಿಗೆ ಕೈಸನ್ನೆ ಕಣ್ಸನ್ನೆ ಮಾಡುತ್ತಾ ಗಿರಾಕಿಗಳನ್ನು ಸೆಳೆಯುವ ಯತ್ನ ಮಾಡುತ್ತಿದ್ದರು. “ಆಜಾ ರಾಜಾ.. ಹಮೇ ಭೀ ದೇಖೋ.. ಹಮ್ ಭೀ ಕಿಸೀಸೇ ಕಮ್ ನಹೀ.. ಓಯ್ ಪ್ಯಾರೇ.. ಇಧರ್ ಆನಾ” ಇತ್ಯಾದಿ ಪದಪುಂಜಗಳು ಯಾಂತ್ರಿಕವಾಗಿ ಅವರ ತುಟಿಗಳಿಂದ ಹೊರಗುರುಳುತ್ತಿದ್ದವು. ಬೆವೆತು ನಡುಗುತ್ತಿದ್ದ ನನ್ನನ್ನು ನೋಡಿ, “ಪೆಹಲೀ ಬಾರ್ ಆಯೇ ಹೋ ಕ್ಯಾ ಲಲ್ಲಾ?.. ಚಿಂತಾ ಮತ್ ಕರೋ.. ಹಮ್ ಹೈ” ಎಂದು ಕಿಸಕ್ಕನೆ ನಕ್ಕು ಛೇಡಿಸುತ್ತಿದ್ದರು.

ಆ ಆವರಣಕ್ಕೆ ಹೊಂದಿಕೊಂಡಂತೆಯೇ ಇದ್ದ ಪುಟ್ಟ ಕೋಣೆಯೊಂದರಲ್ಲಿ ಒಬ್ಬ ಹಾಡುಗಾರ ಗಜ಼ಲ್ ಗಳನ್ನು ಹಾಡುತ್ತಾ ಕುಳಿತಿದ್ದ. ಅವನ ಜತೆಗಿಬ್ಬರು ಪಕ್ಕವಾದ್ಯದವರು. ನಾನು ಮೆಲ್ಲಗೆ ಆ ಗುಂಪಿನ ನಡುವಿನಿಂದ ನುಸುಳಿಕೊಂಡು ಹೋಗಿ ಆ ಹಾಡುಗಾರನ ಮುಂದೆ ಕುಳಿತುಬಿಟ್ಟೆ. ಹಾಗೊಬ್ಬ ಕೇಳುಗ ಅವನಿಗೆ ದೊರೆತದ್ದು ಅದೇ ಮೊದಲಿರಬೇಕು, ಆ ಹಾಡುಗಾರ ನನ್ನನ್ನೇ ವಿಚಿತ್ರವಾಗಿ ದಿಟ್ಟಿಸಿದ. ನಾನು ಪೆಚ್ಚುಪೆಚ್ಚಾಗಿ ನಕ್ಕೆ. ಆತ ಕೊಂಚ ಉತ್ಸಾಹದಿಂದಲೇ ಹಾಡತೊಡಗಿದ. ನಾನು ಕುಳಿತಲ್ಲಿಂದಲೇ ಹೊರ ಆವರಣದ ಚಟುವಟಿಕೆಗಳನ್ನು ಗಮನಿಸುತ್ತಿದ್ದೆ. ಗಂಡನ್ನು ಸೆಳೆಯಲು ಯತ್ನಿಸುತ್ತಿದ್ದ ಆ ಯಾವ ಹೆಣ್ಣುಮಗಳ ಮುಖದಲ್ಲೂ ಜೀವಕಳೆಯೇ ಇರಲಿಲ್ಲ. ಯಾಂತ್ರಿಕ ಹಾವಭಾವ-ವಯ್ಯಾರಗಳು.. ನಿಸ್ತೇಜ ನಗು.. ಉರು ಹೊಡೆದಂತೆ ಒಪ್ಪಿಸುತ್ತಿದ್ದ ನಿರ್ಭಾವುಕ ಪದಪುಂಜಗಳು.. ಕೀಲಿಕೊಟ್ಟ ಗೊಂಬೆಯಂತೆ ಬದಲಾಗುತ್ತಿದ್ದ ಮುಖಭಾವ… ತುಂಬಾ ಸಂಕಟವಾಗಿ ಹೊಟ್ಟೆ ತೊಳಸತೊಡಗಿತು. ಆ ಹೆಣ್ಣುಮಕ್ಕಳು ತಮ್ಮ ಜೀತದಾಳುಗಳೇನೋ ಎಂಬಂತೆ ಅವರೊಡನೆ ಒರಟೊರಟಾಗಿ—ಮೃಗೀಯವಾಗಿ—ಹೊಲಸಾಗಿ ವರ್ತಿಸುತ್ತಿದ್ದ ಒಂದಷ್ಟು ಪುರುಷರು.. ಹಿನ್ನೆಲೆಯಲ್ಲಿ ಚಿತ್ರವಿಚಿತ್ರ ಸದ್ದುಗಳು.. ನರಳಾಟ ಚೀತ್ಕಾರಗಳು.. ದೂರದಿಂದ ತೇಲಿಬರುತ್ತಿದ್ದ ಮಕ್ಕಳ ಆಕ್ರಂದನ… ಛೇ!!ಸುಖವನ್ನರಸಿಕೊಂಡುಬಂದು ಇಂಥ ನರಕಕ್ಕೆ ಕಾಲಿರಿಸುವುದೇ? ಹೆಣ್ಣಿನ ಅಸಹಾಯಕತೆಯನ್ನು ಹೀಗೆ ತನ್ನ ಬಂಡವಾಳ ಮಾಡಿಕೊಳ್ಳುವಷ್ಟು ಭಂಡತನವೇ? ಪ್ರೀತಿ—ಪ್ರೇಮ—ಶೃಂಗಾರಗಳ ಲವಲೇಶವೂ ಇಲ್ಲದ ಈ ಕೂಪದಲ್ಲಿ ಯಾವ ಸುಖವಾದರೂ ಯಾರಿಗಾದರೂ ಹೇಗೆ ದಕ್ಕೀತು?… ಹೀಗೆ ನೂರು ಚಿಂತೆಗಳಲ್ಲಿ ಮುಳುಗಿ ಹೋಗಿದ್ದ ನನಗೆ ಅನ್ನಿಸಿದ್ದಿಷ್ಟು: ನಾನು ನರಕವನ್ನಂತೂ ಕಂಡಿಲ್ಲ.. ಒಂದು ವೇಳೆ ಅಂಥದೊಂದಿದ್ದರೂ ಅದು ಇದಕ್ಕಿಂತ ಘೋರವಾಗಿರಲು ಸಾಧ್ಯವೇ ಇಲ್ಲ! ಹಣೆಯ ಮೇಲಿನಿಂದ ಇಳಿಯುತ್ತಿದ್ದ ಬೆವರೊರೆಸಿಕೊಳ್ಳಲು ಕರವಸ್ತ್ರಕ್ಕಾಗಿ ಕಿಸೆಗೆ ಕೈಹಾಕಿದೆ. ಪಾಪ, ಗಜ಼ಲ್ ಹಾಡುತ್ತಿದ್ದವ ನಾನು ಭಕ್ಷೀಸ್ ಕೊಡಲು ದುಡ್ಡು ತೆಗೆಯುತ್ತಿದ್ದೇನೆಂದು ಭ್ರಮಿಸಿ ಮತ್ತೂ ಉತ್ಸಾಹದಿಂದ ಹಾಡತೊಡಗಿದ.

ನನ್ನ ಕಿಸೆಯಿಂದ ಹೊರಬಂದ ಕರವಸ್ತ್ರವನ್ನು ಕಂಡು ಅವನಿಗೆ ಉರಿದುಹೋಯಿತು. ಹಾಡನ್ನು ಅರ್ಧಕ್ಕೇ ನಿಲ್ಲಿಸಿ, “ಸಾಲಾ ಇಧರ್ ಗಾನಾ ಸುನನೇಕೇಲಿಯೇ ಆಯಾ ಹೈಕ್ಯಾ? ಚಲ್ ಫೂಟ್..” ಎಂದು ಕೆಟ್ಟದಾಗಿ ಗದರತೊಡಗಿದ. ಮತ್ತೊಮ್ಮೆ ಸುತ್ತ ಕಣ್ಣು ಹಾಯಿಸಿದೆ… ಎಲ್ಲೂ ಪ್ರದೀಪನ ಸುಳಿವಿಲ್ಲ. ಇದ್ದಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು ಅಲ್ಲಿಂದ ಎದ್ದು ಸುತ್ತ ಇದ್ದವರನ್ನೆಲ್ಲಾ ತಳ್ಳಿಕೊಂಡು ಧಡಧಡ ಮೆಟ್ಟಲಿಳಿದುಕೊಂಡು ಬಂದೆ. ಒಂದೇ ಕ್ಷಣ ಮತ್ತೊಮ್ಮೆ ಪ್ರದೀಪನಿಗಾಗಿ ಸುತ್ತ ಕಣ್ಣು ಹಾಯಿಸಿ ನಿರಾಶನಾಗಿ ಅಲ್ಲಿಂದ ಓಡತೊಡಗಿದೆ. ಸುಮಾರು ಎರಡು ಕಿ. ಮೀ. ದೂರ ಓಡಿದ್ದಿರಬಹುದು.. ಹಾದಿಯಲ್ಲಿ ರಸ್ತೆ ಬದಿಗಿದ್ದ ಕಲ್ಲು ಬೆಂಚೊಂದರ ಮೇಲೆ ಕುಳಿತು ತುಸು ಹೊತ್ತು ದಣಿವಾರಿಸಿಕೊಂಡು ಹಾಸ್ಟೆಲ್ ನತ್ತ ಹೆಜ್ಜೆ ಹಾಕಿದೆ.

ಹಾಸ್ಟೆಲ್ ತಲುಪಿದಾಗ ರಾತ್ರಿ ಹನ್ನೊಂದರ ಆಜುಬಾಜು. ಪ್ರದೀಪ 12 ರ ಸುಮಾರಿಗೆ ಬಂದ. ಅವನದೂ ನನ್ನದೇ ಸ್ಥಿತಿ—ಅದೇ ಅನುಭವ. ಯಾರೋ ಒಬ್ಬನನ್ನು ಹಿಡಿದು ನನಗೆ ನಿನ್ನ ಸಂದರ್ಶನ ಬೇಕು ಎಂದು ಪೆದ್ದು ಪೆದ್ದಾಗಿ ಕೇಳಿ ಅವನಿಂದ ಛೀಮಾರಿ ಹಾಕಿಸಿಕೊಂಡು ಹೊಡೆಸಿಕೊಂಡು ಬಂದಿದ್ದ ಪ್ರದೀಪ. ಆದರೂ “ಹೋದ ಕೆಲಸ ತೀರಾ ಹಣ್ಣು ಎಂದಾಗದಿದ್ದರೂ ದೂರದಿಂದಲೇ ಒಂದಿಬ್ಬರನ್ನು ಗಮನಿಸಲು ಸಾಧ್ಯವಾಗಿ ತೀರಾ ಮೋಸವೇನೂ ಆಗಲಿಲ್ಲ” ಎಂದು ಸಮಾಧಾನ ಮಾಡಿಕೊಂಡ ಪ್ರದೀಪ. ನನ್ನ ಪಾಲಿಗೆ ಅಂಥ ಸಮಾಧಾನವೂ ದಕ್ಕದೆ, ಈ ‘ಕೆಂಪುದೀಪ ಯಾತ್ರೆ’ ಬಹುಕಾಲ ನನ್ನನ್ನು ಕಾಡಿದ ಪ್ರಸಂಗವಾಗಿಬಿಟ್ಟಿತು. ನನ್ನ ಜನ್ಮದಲ್ಲಿ ಇನ್ನೆಂದೂ ಯಾವುದೇ ಕಾರಣಕ್ಕೂಇಂಥ ನರಕಕ್ಕೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಬಿಟ್ಟೆ. ಈಗಲೂ ಆಗೊಮ್ಮೆ ಈಗೊಮ್ಮೆ ಆ ಹೆಣ್ಣುಮಕ್ಕಳ ನೋವಿನ ನರಳು ದನಿ ಕಿವಿಗಪ್ಪಳಿಸಿದಂತಾಗಿ ಮನಸ್ಸು ಮುದುಡಿ ಹೋಗುತ್ತದೆ….

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: